Sunday, 15th December 2024

ಮಕ್ಕಳನ್ನು ಮಣ್ಣಲ್ಲಿ ಸುಮ್ನೆ ಆಡಲು ಬಿಡಿ

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಈ ಫೋಬಿಯಾ ಇತ್ತು. ಕೀಟಾಣು, ಬ್ಯಾಕ್ಟೀರಿಯಾ, ವೈರಸ್ ಹೀಗೆ ಸೂಕ್ಷ್ಮಾಣು ಜೀವಿಗಳ ಬಗೆಗಿನ ಹೆದರಿಕೆ ಅದು. ಹೆದರಿಕೆಗಿಂತ ‘ಫೋಬಿಯಾ’ ಹೆಚ್ಚಿಗೆ ಸರಿಹೊಂದುವ ಶಬ್ದ. ಟ್ರಂಪ್ ಎಲ್ಲಿಯೇ ಹೋದರೂ – ಅಲ್ಲಿ
ಯಾರೋ ಕೆಮ್ಮಿದರೆ, ಸೀನಿದರೆ ಆಗಿ ಬರುತ್ತಿರಲಿಲ್ಲ.

ಯಾರಾದರೂ ಆತನಿದ್ದ ರೂಮಲ್ಲಿ ಕೆಮ್ಮಿಬಿಟ್ಟರೆ ಆತನ ಸೆಕ್ಯುರಿಟಿಯವರಿಗೆ ಕಣ್ಸನ್ನೆ ಮಾಡಿ ಅವರನ್ನು ಹೊರಗೆ ಹಾಕುವಂತೆ ನೋಡಿ ಕೊಳ್ಳುತ್ತಿದ್ದ. ಟ್ರಂಪ್ ಅಪ್ಪಿ ತಪ್ಪಿ ಕೂಡ ಬೇರೆಯವರ ಮೊಬೈಲ್ ಅಥವಾ ಇನ್ಯಾವುದೇ ವಸ್ತುವನ್ನು ಮುಟ್ಟುತ್ತಿರಲಿಲ್ಲ. ಆತ ರಾಷ್ಟ್ರ ನಾಯಕರ ಕೈಕುಲುಕಲು ಹಿಂದೆ ಮುಂದೆ ನೋಡುತ್ತಿದ್ದ. ಹಾಗೊಮ್ಮೆ ಕೈ ಕುಲುಕಿದರೆ ಆ ಮೀಟಿಂಗ್ ಮುಗಿದಾಕ್ಷಣ ಆತನ ದಿಕ್ಪಾಲಕರು ಹ್ಯಾಂಡ್ ಸ್ಯಾನಿಟೈಝೆರ್ ತಯಾರಿಡ ಬೇಕಿತ್ತು. ದಿನಕ್ಕೆ ಹತ್ತಿಪ್ಪತ್ತು ಬಾರಿ ಕೈ ತೊಳೆಯುತ್ತಿದ್ದ.

ಆತನಿಗಿದ್ದದ್ದು ಜರ್ಮೋಫೋಬಿಯಾ. ಇನ್ನೊಬ್ಬರು ನಮ್ಮೂರಿನಲ್ಲಿದ್ದರು. ಅವರು ಮನೆಗೆ ಬಂದರೆ ಅಂಗಳದ ತುದಿಯಲ್ಲಿದ್ದ ನಲ್ಲಿಯ ನೀರು ಬಿಟ್ಟು ಏನಿಲ್ಲವೆಂದರೆ ಹದಿನೈದು ನಿಮಿಷ ಕಾಲನ್ನು ಕಲ್ಲಿಗೆ ತಿಕ್ಕಿ ತಿಕ್ಕಿ ತೊಳೆಯುತ್ತಿದ್ದರು. ಅವರು ಮನೆಗೆ ಬರುತ್ತಿದ್ದಾರೆ ಎಂದರೆ ನೀರಿನ ಟ್ಯಾಂಕಿ ತುಂಬಿಕೊಂಡಿದೆಯೇ ಎಂದು ಕೇಳಿ ನಾವೆಲ್ಲ ನಗುತ್ತಿದ್ದೆವು. ಅವರು ಹಾಗೆ ಅಂಗಳದಿಂದ ಕಾಲು ತೊಳೆದು ಬರುವಾಗ ಮಣ್ಣನ್ನೇ ನಾದರೂ ಮೆಟ್ಟಿದೆನೆಂದು ಅನಿಸಿ ಬಿಟ್ಟರೆ ಮುಗಿಯಿತು. ಮತ್ತೊಂದರ್ಧ ನೀರಿನ ಟ್ಯಾಂಕಿ. ಅವರಿಗಿದ್ದದ್ದು ಒಸಿಡಿ ಅಥವಾ ಜರ್ಮೋಫೋ ಬಿಯಾ ; ಅಥವಾ ಎರಡೂ ಇತ್ತೆನಿಸುತ್ತದೆ. ಮೊದಮೊದಲು ಅವರನ್ನು ಕಂಡು ನಮಗೆ ನಗು ಬರುತ್ತಿದ್ದರೆ ಆಮೇಲೆ ಪಾಪವೆನ್ನಿಸುತ್ತಿತ್ತು.

ಹಳ್ಳಿಯಲ್ಲಿ ಬೆಳೆದ ನಮಗೆ ಮಣ್ಣಲ್ಲಿ ಆಡುವುದು ತೀರಾ ಸಹಜವೆನ್ನಿಸುವಂಥದ್ದು. ಹಾಗೆ ನೋಡಿದರೆ ಇಡೀ ಮನೆಯಲ್ಲಿ ನಾಲ್ಕು ಆಟಿಕೆ ಸಾಮಾನುಗಳಿದ್ದರೆ ಹೆಚ್ಚು – ಆಟವೆಂದರೆ ಮಣ್ಣಲ್ಲಿ, ಮನೆಯಿಂದಾಚೆ. ಬೇಸಿಗೆ ರಜೆಯಲ್ಲಿ ಪೇಟೆಯಲ್ಲಿದ್ದ ಸಂಬಂಧಿಕರು ಮನೆಗೆ – ಊರಿಗೆ ಬಂದರೆ ಆ ಮಕ್ಕಳ ಅಮ್ಮಂದಿರು ನಮ್ಮನ್ನೆಲ್ಲ ಬೇರೆ ರೀತಿಯಲ್ಲಿ ನೋಡುತ್ತಿದ್ದರು. ಅವರ ಮಕ್ಕಳನ್ನಂತೂ ಮಣ್ಣಲ್ಲಿ ಆಡಲು ಸುತರಾಂ
ಬಿಡುತ್ತಿರಲಿಲ್ಲ. ಅಥವಾ ಸ್ವಲ್ಪ ‘ಕ್ಲೀನ್ ಇರೋ ಮಣ್ಣಲ್ಲಿ’ ಆಡಬೇಕು ಎಂದೆಲ್ಲ ಹೇಳುತ್ತಿದ್ದರು. ಈ ಕ್ಲೀನ್ ಇರುವ ಮಣ್ಣು ಏನೆಂಬುದು ಇಂದಿಗೂ ನನಗೆ ಬಗೆಹರಿದಿಲ್ಲ ಬಿಡಿ. ಹೀಗೆ ಪೇಟೆಯಿಂದ ಬಂದ ಮಕ್ಕಳು ಸಾಮಾನ್ಯವಾಗಿ ಮಣ್ಣಲ್ಲಿ, ಮಳೆಯಲ್ಲಿ ಆಡಿದ ಮಾರನೆಯ ದಿನವೇ ಜ್ವರ ಬರುತ್ತಿತ್ತು.

ಅವರೆಲ್ಲ ತುಂಬಾ ನಾಜೂಕು ಎನ್ನುವುದಕ್ಕಿಂತ ಅವರ ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುತ್ತಿತ್ತು. ಆಗೆಲ್ಲ ಈ ರೀತಿಯ ನಾಜೂಕುತನವೇ ನಮ್ಮ ಆಂತರ್ಯದಂದು ಮೇಲು-ಕೀಳಿನ ಪ್ರಶ್ನೆಯನ್ನು ಹುಟ್ಟಿ ಹಾಕುತ್ತಿತ್ತು ಕೂಡ. ನಮ್ಮ ದೇಹ ಹಾಗೆಯೇ. ಬೇಕಾ ದಷ್ಟೇ ಗಟ್ಟಿಯಾಗುವ ಅಭ್ಯಾಸವಿದೆ ಇದಕ್ಕೆ. ಹಾಗಂತ ಇಲ್ಲಿ ರೋಗ ತಂದುಕೊಂಡೇ ಗಟ್ಟಿಯಾಗಬೇಕು ಎನ್ನುವ ವಾದವಲ್ಲ. ಟಿವಿ ಹಚ್ಚಿದರೆ ಕೊಳಕು, ಕೀಟಾಣುವಿನಿಂದ ರೋಗ ಬರುತ್ತದೆ ಎಂದು ಹೆದರಿಸುವ ಹತ್ತಾರು ಜಾಹೀರಾತುಗಳನ್ನು ನಿರಂತರವಾಗಿ ನೋಡಿ ಕೊಂಡೇ ಬಂದಿದ್ದೇವೆ.

ಮನೆಯಲ್ಲಿ, ಶಾಲೆಯಲ್ಲಿ ಎಂದರಲ್ಲಿ ಸ್ವಚ್ಛತೆಯನ್ನು ಕಲಿತುಕೊಳ್ಳಿ ಎನ್ನುವವರೇ ಎಲ್ಲ. ಆದರೆ, ಅತಿಯಾದ ಸ್ವಚ್ಛತೆಯಿಂದಾಗಿ ಆಗುವ ಯಡವಟ್ಟುಗಳು ಈಗೀಗ ನಮ್ಮೆದುರಿಗೆ ದೊಡ್ಡ ಪ್ರಮಾಣದಲ್ಲಿ ಬರುತ್ತಿವೆ. ಹಾಗಂತ ಇದೇನು ಇತ್ತೀಚಿನದಲ್ಲ. 1800ರಲ್ಲೇ ಯೂರೋಪಿ ನಲ್ಲಿ ಅಂದಿನ ವಿಜ್ಞಾನಿಗಳು ಇದನ್ನು ಗುರುತಿಸಿದ್ದರು. ಅಲ್ಲಿನ ಕೃಷಿಕರಿಗೆ ಪೇಟೆಯಲ್ಲಿರುವವರಿಗಿಂತ ಕಡಿಮೆ ರೋಗ, ಅಲರ್ಜಿ ಗಳಿರು ತ್ತಿದ್ದವು. ಆದರೆ, ಇದೆಲ್ಲ ದೊಡ್ಡ ಪ್ರಮಾಣದಲ್ಲಿ ಸುದ್ದಿಗೆ ಬಂದದ್ದು 1989ರಲ್ಲಿ ಡೇವಿಡ್ ಸ್ಟ್ರಾಚೆನ್ ಎನ್ನುವ ಬ್ರಿಟಿಷ್ ವಿಜ್ಞಾನಿ ‘ಹೈಜೀನ್ ಹೈಪೋಥೀಸಿಸ್’ – ವಾದವನ್ನು ಮುಂದಿಟ್ಟಾಗ. ಆತನ ವಾದ ಇಂದಿಗೂ ಪ್ರಸ್ತುತ.

ಮನೆಯಲ್ಲಿ ಹಿರಿಯ ಮಗುವಿಗೆ, ಅಥವಾ ಒಂದೇ ಮಗುವಿದ್ದರೆ ಅದಕ್ಕೆ ರೋಗನಿರೋಧಕ ಶಕ್ತಿ ಕಡಿಮೆ. ಅಣ್ಣ ಅಥವಾ ಅಕ್ಕನಿರುವ
ಮಗುವಿಗೆ ಜಾಸ್ತಿ. ಇದು ಇಂದಿಗೂ ಸತ್ಯ. 1950ರ ನಂತರದಲ್ಲಿ ಅಮೆರಿಕದಲ್ಲಿ, ಯುರೋಪ್‌ನಲ್ಲಿ ಅಲರ್ಜಿ ಮತ್ತು ಇತರ ನೂರೆಂಟು ರೋಗಗಳ ಪ್ರಮಾಣ ಮಕ್ಕಳಲ್ಲಿ ಸುಮಾರು 300 ಪಟ್ಟು ಹೆಚ್ಚಿರುವುದಕ್ಕೆ ಕೂಡ ಈ ವಾದ ಉತ್ತರವಾಗಿ ನಿಲ್ಲುತ್ತದೆ. ಇದಕ್ಕೆ ಕಾರಣ ಪಾಶ್ಚಾತ್ಯ ಜಗತ್ತು ಈ ಐವತ್ತರವತ್ತು ವರ್ಷ ಅತ್ಯಂತ ಚೊಕ್ಕವಾಗಿ ಬದುಕಲು ಶುರುಮಾಡಿದ್ದು, ತಂದೆ-ತಾಯಂದಿರಿಗೆ ಧೂಳಿನ, ಮಣ್ಣಿನ, ಮಣ್ಣಿನಲ್ಲಿರುವ ಸೂಕ್ಶ್ಮಾಣು ಜೀವಿಗಳ ಮೇಲಿನ ಹೆದರಿಕೆ ಹೆಚ್ಚಿದ್ದರಿಂದ. ಈ ಹೆದರಿಕೆ ಡಿಸ್‌ಇನೆಕ್ಟಂಟ್, ಸೋಪು ಮೊದಲಾದವನ್ನು
ತಯಾರಿಸುವ ಕಂಪನಿಗಳಿಗೆ ಎಷ್ಟು ಅವಶ್ಯಕ ಎನ್ನುವುದು ನಿಮಗೆ ತಿಳಿದದ್ದೇ ಇದೆ.

ಒಟ್ಟಾರೆ ಈ ಎಲ್ಲ ಕಾರಣಕ್ಕೆ ಮಣ್ಣನ್ನು ಇಂದು ತೀರಾ ವಿಲನ್ ಮಾಡಿಕೊಂಡುಬಿಟ್ಟಿದ್ದೇವೆ. ನಮ್ಮ ಕರುಳಿನಲ್ಲಿ ಟ್ರಿಲಿಯನ್ ಲೆಕ್ಕದಲ್ಲಿ ಬದುಕುವ ಸೂಕ್ಷ್ಮಾಣುಗಳು (ಮೈಕ್ರೋಬ) ಆರೋಗ್ಯಕ್ಕೆ ಎಷ್ಟು ಅವಶ್ಯಕ ಎನ್ನುವುದು ಗೊತ್ತಿರುವ ವಿಚಾರ. ಈ ಸೂಕ್ಷ್ಮಾಣುಗಳಲ್ಲಿ ವ್ಯತ್ಯಾಸವಾದರೆ ರೋಗ ಪಕ್ಕಾ – ಅವೆಲ್ಲ ಒಂದು ಸಂಖ್ಯೆಯಲ್ಲಿ ಸತ್ತರೆ ಆ ವ್ಯಕ್ತಿ ಬದುಕಿರಲು ಸಾಧ್ಯವೇ ಇಲ್ಲ. ಅಂತೆಯೇ ಈಗ ಮನುಷ್ಯನ ಚರ್ಮದ ಮೇಲಿನ ಈ ಸೂಕ್ಷ್ಮಾಣು ಜೀವಿಗಳ ಬಗ್ಗೆ ಎಲ್ಲಿಲ್ಲದ ರಿಸರ್ಚ್‌ಗಳು ನಡೆಯುತ್ತಿವೆ.

ನಮ್ಮ ಬಹುತೇಕ ಚರ್ಮ ರೋಗಕ್ಕೆ ಈ ಅವಶ್ಯ ಸೂಕ್ಷ್ಮಾಣು ಜೀವಿಗಳ ಸಾವು, ಕೊರತೆಯೇ ಕಾರಣ ಎನ್ನುವುದು. ಇದರ ಕೊರತೆಯ ಅತಿ ಹೆಚ್ಚು ಅಡ್ಡಪರಿಣಾಮ ಕಾಣಿಸುತ್ತಿರುವುದು ಇಂದು ಅಮೆರಿಕ ಮತ್ತು ಜರ್ಮನಿಯಲ್ಲಿ. ಆ ಕಾರಣಕ್ಕೆ ಈ ರೀತಿಯ ಮೈಕ್ರೋಬ್ ಗಳನ್ನು ಚರ್ಮಕ್ಕೆ ಕೃತಕ ವಾಗಿ ಪ್ಯಾಚ್ ಮೂಲಕ ನೀಡುವ ಶುಶ್ರೂಷೆ ಈಗೀಗ ಎಡೆ ಜಾರಿಗೆ ಬಂದಿದೆ. ಇನ್ನು ಬಹುತೇಕ ಪಾಶ್ಚಾತ್ಯ ಬಾಲವಾಡಿ ಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಮಡ್ ಏರಿಯಾ – ಮಣ್ಣಿನ ಜಾಗವನ್ನು ಪ್ರತ್ಯೇಕವಾಗಿ ಮಾಡುವ ರೂಢಿ ಹಲವೆಡೆ ಜಾರಿಯಲ್ಲಿದೆ. ಮಡ್ ಏರಿಯಾ – ಇದು ಒಂದು ವಿಶೇಷ ಸೌಲಭ್ಯ.

ಎಂತಹ ಅವಸ್ಥೆ ನೋಡಿ. ಮಕ್ಕಳಿರುವಾಗ ರೋಗನಿರೋಧಕ ಶಕ್ತಿ ಗಟ್ಟಿಯಾಗುವುದು ತೀರಾ ಅವಶ್ಯಕ. ಅದಕ್ಕೆ ಮಕ್ಕಳು ಮಣ್ಣಿನಲ್ಲಿ ಆಡುವುದಕ್ಕಿಂತ ಸುಲಭದ ವಿಧಾನ ಇನ್ನೊಂದಿಲ್ಲ. ಹಾಗೆ ನೋಡಿದರೆ ದೊಡ್ಡವರಾದ ಮೇಲೆ ಅಲರ್ಜಿ, ಅಸ್ತಮಾ ಸಾಧ್ಯತೆಯನ್ನು ಕಡಿಮೆ
ಮಾಡುವ ಶಕ್ತಿ ಇದೆ ಮಣ್ಣಿನಾಟದಲ್ಲಿ. ಅದಲ್ಲದೇ ಚರ್ಮಕ್ಕೆ ಅವಶ್ಯಕವಿರುವ ಅದೆಷ್ಟೋ ಮೈಕ್ರೋಬ್‌ಗಳು ಮಣ್ಣಿನಲ್ಲಿರುತ್ತವೆ. ಅವೆಲ್ಲ ಮಣ್ಣಿನಿಂದ ಚರ್ಮಕ್ಕೆ ಬಂದುಳಿದು ಆರೋಗ್ಯ ಕಾಪಾಡುವಂಥವು. ಮಕ್ಕಳು ಮಣ್ಣಿನಾಟವಾಗುವಾಗ ಅದನ್ನು ತಿನ್ನುವುದು ಅಥವಾ ಸ್ವಲ್ಪ ಪ್ರಮಾಣದಲ್ಲಿ ಬಾಯಿಗೆ ಹೋಗುವುದು ಕೂಡ ಇದೆ.

ಇವೆಲ್ಲ ಕೂಡ ಕರುಳಿನಲ್ಲಿನ ಉತ್ತಮ ಬ್ಯಾಕ್ಟೀರಿಯಾ ಬೆಳೆಯಲು ಸಾಧ್ಯಮಾಡಿಕೊಡುವಂಥವು. ಇದರರ್ಥ ಮಣ್ಣು ತಿನ್ನಲು ಬಿಡಿ ಎನ್ನು ತ್ತಿಲ್ಲ. ಆದರೆ ಮಣ್ಣಿನ ರೂಪದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ನಮ್ಮ ದೇಹವನ್ನು ಸೇರುವ ಸಾಧ್ಯತೆ ಹೇಳಿದ್ದಷ್ಟೇ. ಇನ್ನೊಂದೆಂದರೆ ಮಣ್ಣಿನಲ್ಲಿ ಆಡುವುದು ಮಕ್ಕಳಿಗೆ ಈ ಜಗತ್ತಿನ ಪರಿಸರದ ಜತೆ ಸಂಽಸಲು ಇರುವ ಅತಿ ಸುಲಭದ ಮಾರ್ಗ. ನಾವು ತೀರಾ ಭಾವನಾ ತ್ಮಕವಾಗಿ ಮಣ್ಣು ಎನ್ನುವ ಶಬ್ದವನ್ನು ಬಳಸುವುದಿದೆ. ಈ ಭಾವ ಮಣ್ಣೇ ಆಡದಿದ್ದರೆ ಹುಟ್ಟುವುದು ಸಾಧ್ಯವಾಗುವುದಿಲ್ಲ. ಈ ಭಾವ ಹುಟ್ಟಲು ಕೂಡ ಒಂದು ವೈeನಿಕ ಕಾರಣ ಇದೆ.

ಮಣ್ಣನ್ನು ಮುಟ್ಟುವುದರಿಂದ, ಹಿಡಿಯುವುದರಿಂದ ಸೆರೋಟೋನಿನ್ ಬಿಡುಗಡೆಯಾಗುತ್ತದೆ. ಈ ಸೆರೋಟೋನಿನ್ ರಕ್ತದ ಪ್ಲೇಟ್ಲೆಟ್‌ಗಳಲ್ಲಿ
ಮತ್ತು ಸೆರಮ್ ನಲ್ಲಿರುವ ಒಂದು ಸಂಯುಕ್ತ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಮತ್ತು ನರಪ್ರೇಕ್ಷಕ (Neurotrans mitter)  ಆಗಿ ಕೆಲಸನಿರ್ವಹಿಸುತ್ತದೆ. ಇನ್ನೊಂದು ಸಂಯುಕ್ತ ಎಂಡೋರ್ಫಿನ್ – ಇದು ಮಾನಸಿಕ ಸಮತೋಲನಕ್ಕೆ, ಮತ್ತೊಂದಿಷ್ಟಕ್ಕೆ ಅವಶ್ಯಕ. ಅಲ್ಲದೇ ಮಣ್ಣಿಗೆ ಮೆದುಳಿನ ಹತ್ತಾರು ಗ್ರಹಿಕಾ ಶಕ್ತಿಯನ್ನು ವೃದ್ಧಿಸುವ ಶಕ್ತಿ ಕೂಡ ಇದೆ. ಇನ್ಯಾವುದೇ ಆಟದ ಸಾಮಾನಿಗೆ ಈ ಗ್ರಹಿಕಾಶಕ್ತಿಯನ್ನು ವೃದ್ಧಿಸುವ ತಾಕತ್ತಿರುವುದಿಲ್ಲ.

ಮಣ್ಣೆಂದರೆ ಒಂದು ಪ್ಯಾಕೇಜ್ – ಮಣ್ಣಿನ ಆಟವೆಂದರೆ ಅದು ಮೆದುಳಿಗೆ, ಮನಸ್ಸಿಗೆ, ಚರ್ಮಕ್ಕೆ ಹೀಗೆ – ಫುಲ್ ಮೀಲ್ಸ್. ಆ ಕಾರ ಣಕ್ಕಾಗಿಯೇ ಮಗು ಮಣ್ಣಿನಲ್ಲಿ ಆಡಲು ಬಿಟ್ಟಷ್ಟು ಖುಷಿಯನ್ನು ಇನ್ಯಾವುದೇ, ಅದೆಷ್ಟೇ ತುಟ್ಟಿಯ ಆಟಿಕೆ ಸಾಮಾನು ಕೊಟ್ಟಾಗ
ಅನುಭವಿಸುವುದಿಲ್ಲ. ಅದೇ ಕಾರಣಕ್ಕೆ ಮಣ್ಣಿನ ಆಟ ಯಾವುದೇ ಮಕ್ಕಳಿಗೆ ಬೇಸರ ತರುವುದಿಲ್ಲ. ಇದೊಂದು ಸ್ವಾಭಾವಿಕ ಬಯಕೆ.
ಬರೀ ಮಣ್ಣಿನಲ್ಲಿ ಆಡುವುದರಿಂದ ಮುಂದೆ ಬೆಳೆದಾಗ ಖಿನ್ನತೆ ತಡೆಯುವ ಸಾಧ್ಯತೆಯಿದೆ ಎಂದರೆ ಅದನ್ನೇಕೆ ಮಕ್ಕಳಿಂದ ಕಿತ್ತುಕೊಳ್ಳ ಬೇಕು? ಮಕ್ಕಳ ಮಾನಸಿಕ ಸಮತೋಲನಕ್ಕೆ, ಸೃಜನಶೀಲತೆಗೆ, ದೇಹ ಚಲನ (motor skill), ಸಂವೇದನೆ, ಕೌಶಲ್ಯ ಮತ್ತು ಸಮನ್ವಯ ಶಕ್ತಿಗೆ ಮಣ್ಣಿನ ಆಟ ಮುಖ್ಯವಾದಲ್ಲಿ ಅದನ್ನು ನಮಗರಿವಿಲ್ಲದಂತೆ ಅತ್ಯುತ್ತಮ ಪೋಷಕರಾಗುವ ಧಾವಂತದಲ್ಲಿ ಮಕ್ಕಳಿಂದ ಕಸಿಯುವುದು ಅಪರಾಧವಲ್ಲದೆ ಇನ್ನೇನ್ನು? ಮಣ್ಣಿನಲ್ಲಿ ಆಡಬೇಡ, ಮೇಲಿನಿಂದ ಹಾರಬೇಡ, ಹುಷಾರು ಅಲ್ಲಿ ಜಾರುತ್ತದೆ, ಹಾಗೆ ಓಡಿದರೆ ಬೀಳುತ್ತೀ – ಹೀಗೆ ನಾವೆಲ್ಲರೂ ಮಕ್ಕಳಿಗೆ ಹೇಳುತ್ತಲೇ ಇರುತ್ತೇವೆ.

ಕೆಲವು ಪೋಷಕರಂತೂ ಮಕ್ಕಳು ಆಡುತ್ತಿzರೆ ಎಂದರೆ ಇವರ ಹೃದಯ ಬಾಯಿಗೆ ಬಂದಿರುತ್ತದೆ. ಓವರ್ ಪ್ರೊಟೆಕ್ಟಿವ್. ಇದರಿಂದ
ಮಕ್ಕಳು ಚಿಕ್ಕದೊಂದು ಚಾಲೆಂಜ್ ಅನ್ನೂ ಎದುರಿಸದಂತಾಗಿ ಬಿಡುತ್ತಾರೆ. ನಮಗೆ ಬೆಳೆಯುವಾಗ ಇದ್ದ ಸ್ವಾತಂತ್ರ್ಯ ಇಂದಿನ ಮಕ್ಕಳಿಗೆ ನಾವೇ ಕೊಡುತ್ತಿಲ್ಲ. ಅದಲ್ಲದೆ – ಮೇಲಿಂದ ನಮ್ಮ ಗತ ವೈಭವ ಹಾಗಿತ್ತು, ಹೀಗಿತ್ತು ಎಂದು ಕಥೆ ಬೇರೆ ಹೊಡೆಯುತ್ತೇವೆ. ಅತಿ ರಕ್ಷಣೆ ಯನ್ನೇ ನಾವು ಪಾಲನೆ ಎಂದು ನಂಬಿ ಬಿಟ್ಟಿದ್ದೇವೆ. ಇದು ನಮಗರಿವಿಲ್ಲದಂತೆ ಆ ಮಗುವಿನ ಸ್ಪರ್ಧಾತ್ಮಕತೆಯನ್ನೇ ಬೆಳೆಯದಂತೆ ಮಾಡಿಬಿಡುತ್ತದೆ.

ಮುಂದೆ ಅದೇ ಮಗು ಜೀವನದ ಎಲ್ಲ ಸ್ಪರ್ಧೆಗಳನ್ನು ಗೆಲ್ಲಬೇಕೆನ್ನುವ ಬಯಕೆ ಅದೇ ಪೋಷಕರದ್ದು. ತೋಡು ಹಾರದಂತೆ ಬೆಳೆಸಿ
ಹೊಳೆ ಹಾರು ಎನ್ನುವಂತೆ ಆ ಮಗು ಬೆಳೆದಾಗಿನ ಸ್ಥಿತಿ. ಅಷ್ಟು ಸಣ್ಣ ವಿಷಯ ಮುಂದೆ ಖಿನ್ನತೆ, ಆತ್ಮಹತ್ಯೆಯವರೆಗೆ ಹೋದರೆ ಅದರ ಹೆಜ್ಜೆಯಾಗುರುತು ಸಿಗುವುದಿಲ್ಲ. ಶಾಲಾ ಶಿಕ್ಷಣವೇ ಸರ್ವಸ್ವ, ಶ್ರೇಣಿ – ರಾಂಕ್ ಬರುವುದೇ ಎಲ್ಲ ಎಂದುಕೊಂಡ ಮಕ್ಕಳ ಜನರೇಷನ್ ಇಂದು ಕಾರ್ಪೊರೇಟ್ , ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಲಿಟ್ಟಾಗ ಒದ್ದಾಡುವುದು ನನ್ನ ಕಣ್ಣೆದುರಿಗೆ ದಿನಂಪ್ರತಿ ಕಾಣಿಸುತ್ತದೆ.

ಮಕ್ಕಳೆಂದರೆ ಪ್ರಣಾಳ ಜೀವಿಗಳಲ್ಲ. ಅತ್ಯತ್ತಮ ಆಹಾರ, ಸಮತೋಲನದ ಪೋಷಕಾಂಶ, ಉಶ್ಣತೆ, ಬೆಳಕು ಇವನ್ನೆಲ್ಲ ಕೊಟ್ಟು ಸಾಕಿ
ಬೆಳೆಸಲಿಕ್ಕೆ ಲೆಬೊರೇಟರಿಯಲ್ಲಿನ ಇಲಿಗಳೂ ಅಲ್ಲ. ಅವರನ್ನು ಸುಮ್ಮನೆ ಮಣ್ಣಿನಲ್ಲಿ ಆಡಲು ಬಿಟ್ಟು ಬಿಡಬೇಕು. ಈ ಮಾತನ್ನು ಅಕ್ಷರಶಃ ವಷ್ಟೇ ಅರ್ಥೈಸಬೇಡಿ. ಕಂಪ್ಯೂರ್ಟ, ಮೊಬೈಲ್ ವೆಲ್ಲ ಏನನ್ನೇ ಕಲಿಸಬಹುದು ಆದರೆ ಸ್ವಚ್ಛಂದತೆ, ಸ್ಕ್ರೀನ್ ಮತ್ತು ಪುಸ್ತಕದಾಚೆಗಿನ ಜಗತ್ತು ಮಾತ್ರ ಬದುಕು ಕಲಿಸಬಲ್ಲದು. ಬಾಕಿ ಹೇಳದಿರುವುದೆಲ್ಲವನ್ನು ನೀವೇ ಗ್ರಹಿಸಿಕೊಳ್ಳುತ್ತೀರಿ ಎನ್ನುವ ನಂಬಿಕೆಯೊಂದಿಗೆ ಈ ಲೇಖನವನ್ನು ಇಲ್ಲಿಗೇ ಮುಗಿಸುತ್ತಿದ್ದೇನೆ.