ಶ್ವೇತಪತ್ರ
shwethabc@gmail.com
45 ರಿಂದ 53 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಋತುಬಂಧ ಆಕೆಯಲ್ಲಿ ಜೈವಿಕ, ಶಾರೀರಿಕ ಕಾರ್ಯಗಳನ್ನು ಕುಂಠಿತ ಗೊಳಿಸುತ್ತದೆ. ಈ ಪ್ರಕ್ರಿಯೆಯು ಆಕೆಯಲ್ಲಿ ಮನೋಸಾಮಾಜಿಕ ಒತ್ತಡವಾಗಿ ಪರಸ್ಪರ ಸಂಬಂಧಗಳ ನಿಭಾಯಿಸುವಿಕೆಯಲ್ಲಿ ವ್ಯತ್ಯಯವನ್ನು ಉಂಟುಮಾಡುತ್ತದೆ.
ಋತುಚಕ್ರ, ಮದುವೆ, ಬಸಿರು, ಬಾಣಂತನ, ಋತುಬಂಧ ಬದುಕಿನ ಬೇರೆ ಬೇರೆ ಹಂತಗಳಲ್ಲಿನ ಹೆಣ್ಣಿನ ಸಂಭ್ರಮಗಳು. ಕೊನೆಯ ಹಂತದ ಮುಟ್ಟು ನಿಲ್ಲುವಿಕೆಯಲ್ಲಿ ಹೆಣ್ಣಿಗೆ ಸಂಭ್ರಮಕ್ಕಿಂತ ಸಂಕಟವೇ ಹೆಚ್ಚು. ನಿಜ ಹೇಳ ಬೇಕೆಂದರೆ ಋತುಬಂಧ ಮಾನಿನಿಯರ ಮನಸ್ಸಿನಲ್ಲಿ ಉಂಟಾಗುವ ‘ಎಮೋಷನಲ್ ರೋಲರ್ ಕೋಸ್ಟರ್’ ಇದ್ದ ಹಾಗೆ.
ಒಂದೊಮ್ಮೆ ಚಡಪಡಿಕೆ, ಮರುಗಳಿಗೆಯೆ ಸಿಟ್ಟು, ಕಾಡುವ ಆತಂಕ, ಸುಮ್ಮನೆ ಬೇಜಾರು, ದುಃಖ, ಯಾವುದರ ಮೇಲೂ ನಿಲ್ಲದ ಗಮನ, ಸದಾ ಸುಸ್ತು, ಮನಸ್ಸಿನ ಮೂಡ್ ನಲ್ಲಿ ಉತ್ಸಾಹವೇ ಇಲ್ಲದಿರುವಿಕೆ, ಜತೆಗೆ ಏರುಪೇರು, ಒಂದು ಸಲ ಇದ್ದ ಜ್ಞಾನ ಇನ್ನೊಂದು ಸಲ ಇಲ್ಲದಿರುವಿಕೆ, ಸುಖಾಸುಮ್ಮನೆ ಅಳು, ಎಲ್ಲರೂ ನನ್ನಿಂದ ದೂರವಾಗುತ್ತಿದ್ದಾರೆ ಎನ್ನುವ ಭಾವ- ಹೀಗೆ ಇನ್ನೂ ಹತ್ತಾರು ಮಾನಸಿಕ ಕುದಿತಗಳು. ಆದರೆ ನೆನಪಿರಲಿ ಮಾನಿನಿಯರೇ, ಇವೆಲ್ಲ ಮನಸ್ಸಿನ ತಾಕಲಾಟಗಳು, ತಳಮಳಗಳು ಪ್ರಕೃತಿಯಷ್ಟೇ ಸಹಜ Lets accept! and Lets Celebrate!!
ವಯಸ್ಸಿಗೆ ಸಂಬಂಧಿಸಿದಂತೆ ಹೆಣ್ಣಿನ ದೇಹದಲ್ಲಿ ಉಂಟಾಗುವ ಪರಿವರ್ತನೆಯೇ ಋತುಬಂಧ ಅಥವಾ ಮುಟ್ಟು ನಿಲ್ಲುವಿಕೆ. ಈ ಹಂತದಲ್ಲಿ ಮಾನಿನಿಯರ ಮನಸ್ಸಿನಲ್ಲಿ ಒಂದು ರೀತಿಯ ಭಯ ಉಂಟಾಗುತ್ತದೆ. ಇನ್ನು ಮುಂದೆ ತಾನು ಸಂತಾನೋತ್ಪತ್ತಿ ಮಾಡಲು ಸಾಧ್ಯವಿಲ್ಲ ಎಂಬ ಈ ಭಯ ಹೆಣ್ತನವೇ ಕಳೆದುಹೋಯಿತು ಎನ್ನುವ ಭಾವವನ್ನು ಮನಸ್ಸಿಗೆ ಮೂಡಿಸುತ್ತದೆ ಏಕೆ ಗೊತ್ತೆ? ಹೆಣ್ಣು ತನ್ನ ಅರ್ಧದಷ್ಟು ವಯಸ್ಸನ್ನು ಋತುಚಕ್ರದಲ್ಲಿ ಕಳೆದಿರುತ್ತಾಳೆ.
ಇನ್ಟರ್ನ್, ಈ ಋತುಚಕ್ರ ಆಕೆಯಲ್ಲಿ ಫಲವತ್ತತೆಯ ಸಂಕೇತವೇ ಆಗಿರುತ್ತದೆ. ಯಾವಾಗ ಅದು ಇನ್ನು ಮುಂದೆ ತನ್ನ ಬದುಕಿನ ಭಾಗವಾಗಿರುವುದಿಲ್ಲ ಎನ್ನುವ ವಾಸ್ತವ ಅರಿವಿಗೆ ಬರತೊಡಗುತ್ತದೆಯೋ ಅದು ಒತ್ತಡವಾಗಿ ಬದಲಾಗುತ್ತ
ಹೋಗುತ್ತದೆ.
‘ಮೆನೋಪಾಸ್’ ಎಂಬುದು ಲ್ಯಾಟಿನ್ ಭಾಷೆಯ ಪದ. ಇಲ್ಲಿ ‘ಮೆನೋ’ ಎಂದರೆ ‘ತಿಂಗಳು’ ಎಂದರ್ಥ, ‘ಪಾಸ್’ ಎಂದರೆ ‘ನಿಲ್ಲುವಿಕೆ’. ಎರಡೂ ಜತೆಗೂಡಿದರೆ ಮುಟ್ಟು ನಿಲ್ಲುವಿಕೆ ಎಂದಾಗುತ್ತದೆ. ಇದು ಯಾವುದೋ ಕಾಯಿಲೆಯೋ ಅನಾರೋಗ್ಯ ವೋ ಅಲ್ಲ. ಮುಟ್ಟು ನಿಲ್ಲುವಿಕೆಗೂ ಲೈಂಗಿಕತೆಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತದೆ ಸಂಶೋಧನೆ. ಸಾಮಾನ್ಯವಾಗಿ ಹೆಣ್ಣಿನ ಮಧ್ಯವಯಸ್ಸಿನಲ್ಲಿ, ಅಂದರೆ 45 ರಿಂದ 53 ವರ್ಷ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಋತುಬಂಧ ಆಕೆಯಲ್ಲಿ ಜೈವಿಕ (Biological), ಶಾರೀರಿಕ (Physiological) ಕಾರ್ಯಗಳನ್ನು ಕುಂಠಿತಗೊಳಿಸುತ್ತದೆ. ಈ ಪ್ರಕ್ರಿಯೆಯು ಆಕೆಯಲ್ಲಿ ಮನೋಸಾಮಾಜಿಕ ಒತ್ತಡವಾಗಿ ಪರಸ್ಪರ ಸಂಬಂಧಗಳ ನಿಭಾಯಿಸುವಿಕೆಯಲ್ಲಿ ವ್ಯತ್ಯಯವನ್ನು ಉಂಟುಮಾಡುತ್ತದೆ.
ಋತುಬಂಧದ ಲಕ್ಷಣಗಳು ಎಲ್ಲ ಮಹಿಳೆಯರಲ್ಲೂ ಒಂದೇ ತೆರನಾಗಿರುವುದಿಲ್ಲ. ಪ್ರತಿ ತಿಂಗಳ ಋತುಚಕ್ರದ ನೋವು ಹಾಗೂ ಒಂದು ತೆರನಾದ ಹೊರೆ ಇಳಿಯಿತು ಎನ್ನುವುದು ಸಹಜವಾಗಿ ಮೆನೋಪಾಸ್ ನಲ್ಲಿ ಮಾನಿನಿಯರ ಉತ್ತರವಾಗಿರುತ್ತದೆ. ಇದರ ಹೊರತಾಗಿ ಅನೇಕರಲ್ಲಿ ಮಾನಸಿಕ ಅಭದ್ರತೆ, ಸಡನ್ನಾಗಿ ವಯಸ್ಸಾಗಿ ಹೋಗುತ್ತಿದೆ ಎಂಬ ಭಾವ, ಲೈಂಗಿಕ ಬಯಕೆಗಳು ಇಳಿಮುಖವಾಗಿಬಿಡುತ್ತವೆ ಎನ್ನುವ ಯೋಚನೆಗಳು, ಮಾನಸಿಕವಾಗಿ ಆಕೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತ ಹೋಗುತ್ತವೆ. ಆಕೆಯ ಆತ್ಮವಿಶ್ವಾಸ, ಆತ್ಮಗೌರವ ಕುಂದತೊಡಗುತ್ತವೆ.
ಮನಸ್ಥಿತಿಯಲ್ಲಿ ಸಾಕಷ್ಟು ವ್ಯತ್ಯಯಗಳಾಗುತ್ತವೆ. ಒಂದೊಮ್ಮೆ ಖುಷಿ, ಹಿಂದೆಯೇ ದುಃಖ, ನೆಗೆಟಿವ್ ಮನೋಭಾವ, ವ್ಯಕ್ತಿತ್ವದಲ್ಲಿ ವ್ಯತ್ಯಾಸಗಳು, ಸಂಗಾತಿ ಜತೆಗಿನ, ಮಕ್ಕಳ ಸ್ನೇಹಿತರ ಕುಟುಂಬದವರ ಜತೆಗಿನ ಒಡನಾಟದಲ್ಲಿ ಕಿರಿಕಿರಿ, ಘರ್ಷಣೆಗಳು ತಲೆದೋರುತ್ತವೆ. ಇನ್ನೂ ಮುಖ್ಯವಾದದ್ದು, ಋತುಬಂಧ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ವಯಸ್ಸಾಗಿ ಹೋಯಿತೆಂಬ
ಭಾವನೆಯನ್ನು ಉಂಟುಮಾಡಿ ಒಂದು ಭಾವನಾತ್ಮಕ ಡಿಸ್ಟರ್ಬೆನ್ಸ್ ಆಗಿ ಆಕೆಯನ್ನು ಕಾಡತೊಡಗುತ್ತದೆ.
ಮೆನೋಪಾಸ್ ಮತ್ತು ಡಿಪ್ರೆಶನ್: ಋತುಬಂಧದ ವೇಳೆ ಶೇ. ೨೦ರಷ್ಟು ಮಹಿಳೆಯರು ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾರೆ- ಇದು ನಮಗಿರುವ ವೈಜ್ಞಾನಿಕ ಮಾಹಿತಿ. ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಮಟ್ಟ ಕಡಿಮೆಯಾಗುತ್ತ ಹೋದಂತೆ
ಯೋನಿಯೊಳಗೆ ಒಣಗುವಿಕೆ, ಋತುಚಕ್ರದ ಏರುಪೇರು, ನಿದ್ರೆಯಲ್ಲಿ ವ್ಯತ್ಯಾಸ ಹೀಗೆ ಶಾರೀರಿಕವಾಗಿ ವ್ಯತ್ಯಾಸ ಉಂಟಾಗಿ ಆಕೆಯಲ್ಲಿ ಡಿಪ್ರೆಶನ್- ವಿಪರೀತ ದುಃಖದ ಸ್ಥಿತಿಯನ್ನು, ಆತಂಕಗಳನ್ನು ಉಂಟುಮಾಡುತ್ತದೆ. ತಾಳ್ಮೆ ಕಳೆದುಕೊಳ್ಳುವಿಕೆ, ವಿಪರೀತ ಭಯ, ಚಡಪಡಿಕೆ, ಹೆಚ್ಚು ಬೆವರುವಿಕೆ ಕಾಣಬರುತ್ತದೆ. ಖಿನ್ನತೆ ಮತ್ತು ಆತಂಕ ಹೆಚ್ಚಾದಾಗ ತಲೆಗೂದಲನ್ನು ಕಿತ್ತುಕೊಳ್ಳುವವರೆಗೂ ಆಕೆಯ ಮನಸ್ಥಿತಿ ಹದಗೆಡುತ್ತದೆ.
ಸಾಲದೆಂಬಂತೆ, ಮಕ್ಕಳು ಓದು ಮುಗಿಸಿ ಉದ್ಯೋಗದ ಕಾರಣಕ್ಕೋ, ಮದುವೆಯಾಗಿಯೋ ಬೇರೆ ಊರು ಸೇರಿ ತಂತಮ್ಮ ನೆಲೆಗಳನ್ನು ಕಂಡುಕೊಂಡಾಗ ಆಕೆಯನ್ನು ಮತ್ತಷ್ಟು ಒಂಟಿತನ, ದುಃಖ ಕಾಡುತ್ತವೆ. ಮನೋವೈಜ್ಞಾನಿಕ ಭಾಷೆಯಲ್ಲಿ ಇದನ್ನು
‘ಖಾಲಿ ಗೂಡಿನ ಸಿಂಡ್ರೋಮ್’ ಎನ್ನುತ್ತಾರೆ. ಇಲ್ಲಿ ಮನೆಯೂ ಖಾಲಿ, ಮಾನಿನಿಯ ಮನಸ್ಸು ಖಾಲಿ ಖಾಲಿ..
ಋತುಬಂಧದ ಕೋಪ: ‘ಕೋಪ’ ಎಂಬುದು ಸರ್ವೇಸಾಮಾನ್ಯವಾಗಿ ಋತುಬಂಧದ ವೇಳೆ ಎಲ್ಲರ ಮನೆಯ ಕಂಪ್ಲೇಂಟು ಹೌದು! ‘ನಮ್ಮಮ್ಮ ಎಲ್ಲದಕ್ಕೂ ಕಿರುಚಾಡುತ್ತಾಳೆ, ನನ್ನ ಹೆಂಡತಿ ಅಡುಗೆ ಮನೆಯ ಪಾತ್ರೆಗಳನ್ನೆಲ್ಲ ಕುಕ್ಕಾಡುತ್ತಾಳೆ,
ಎಲ್ಲದಕ್ಕೂ ಸಿಟ್ಟು ಸಿಡಿಮಿಡಿ. ತಾನೇ ಸಿಟ್ಟು ಮಾಡಿಕೊಂಡು ಕೂಗಾಡಿ ಕಿರುಚಾಡಿ ಅಳುತ್ತ ಕೂರುತ್ತಾಳೆ, ಮೊದಲು ಹೀಗಿರಲಿಲ್ಲ ಈಗ ಹೀಗಾಡುತ್ತಿzಳೆ’- ಅವಳ ಸುತ್ತಲಿನ ನಮ್ಮೆಲ್ಲರಿಗೂ ಹೀಗನ್ನಿಸುವುದು ಸಹಜವೇ.
ಇಲ್ಲಿ ನಮಗೆಲ್ಲ ಬೇಕಿರುವುದು ಒಂದಿಷ್ಟು ತಾಳ್ಮೆ, ಇನ್ನೊಂದಿಷ್ಟು ಸಹನೆ ಮತ್ತು ಸೂಕ್ಷ್ಮತೆ. ಈಸ್ಟ್ರೋಜನ್ ಹಾರ್ಮೋನು ಹೆಣ್ಣಿನ
ಸಂತಾನೋತ್ಪತ್ತಿಗೆ ಸಂಬಂಽಸಿದ ಕೆಲಸಗಳನ್ನು ನಿಯಂತ್ರಿಸುತ್ತದೆ. ಹೆಣ್ಣು ಋತುಬಂಧಕ್ಕೆ ಹತ್ತಿರವಾದಾಗ ಅಂಡಾಣುಗಳಲ್ಲಿ ಈಸ್ಟ್ರೋಜನ್ ಸ್ರವಿಸುವಿಕೆ ಕಡಿಮೆಯಾಗುತ್ತದೆ. ಈ ಈಸ್ಟ್ರೋಜನ್ ಮಿದುಳಿನಲ್ಲಿ ಸೆರಟೋನಿನ್ ಅಂಶ ಎಷ್ಟು ಉತ್ಪಾದನೆ ಯಾಗಬೇಕೆಂಬುದನ್ನು ನಿಯಂತ್ರಿಸುತ್ತದೆ. ಈ ಸೆರಟೋನಿನ್ನೇ ನಮ್ಮ ಮೂಡ್ಗಳನ್ನು ನಿಭಾಯಿಸುವುದು. ಯಾವಾಗ ಈಸ್ಟ್ರೋಜನ್ ಕಡಿಮೆಯಾಗತೊಡಗುತ್ತದೆಯೋ ಆಗ ಸೆರಟೋನಿನ್ ಕೂಡ ಮಿದುಳಿನಲ್ಲಿ ಕಡಿಮೆಗೊಳ್ಳುತ್ತದೆ. ಈ ಹಾರ್ಮೋನುಗಳ ವ್ಯತ್ಯಾಸ ಹೆಣ್ಣಿನ ಮಾನಸಿಕ ಅಸ್ಥಿರತೆಗೆ ಕಾರಣವಾಗುತ್ತದೆ.
ವಿಶೇಷವಾಗಿ ಋತುಚಕ್ರದ ಮೂಡ್ಸ್ವಿಂಗ್ಸ್ ಹಾಗೂ ಕೋಪ ಉಲ್ಬಣಗೊಳ್ಳುವುದೇ ಈ ಬದಲಾವಣೆಗಳಿಂದ. ಮಾನಿನಿಯ
ಮನಸ್ಸು ಹೀಗೆ ಆಘಾತಕ್ಕೊಳಗಾದಂತೆ ಆಕೆಯ ದೈಹಿಕ- ಮಾನಸಿಕ-ಸಾಮಾಜಿಕ-ಸಾಂಸ್ಕೃತಿಕ ಯೋಗಕ್ಷೇಮವೂ
ಒತ್ತಡ ಕ್ಕೊಳಗಾಗುತ್ತ ಹೋಗುತ್ತದೆ. ಋತುಬಂಧ ಕಾಯಿಲೆಯಲ್ಲ, ಅದು ಬದುಕಿನ ಒಂದು ಭಾಗ; ಅದನ್ನು ಸಮರ್ಥವಾಗಿ ಸದೃಢವಾಗಿ ನಿಭಾಯಿಸುವುದು ಹೇಗೆ? ನೆನಪಿರಲಿ ಋತುಬಂಧ/ಮುಟ್ಟು ನಿಲ್ಲುವಿಕೆ ಪ್ರಕೃತಿಯಷ್ಟೇ ಸಹಜ. ಏನೋ ಕಳೆದುಕೊಂಡೆನೆಂಬ ಭಾವ ಕಾಡದಿರಲಿ.
ಬದಲು ಹೊಸ ಸ್ವಾತಂತ್ರ್ಯವನ್ನು ಮನಸ್ಸು ಅಪ್ಪಲಿ. ನಿಮ್ಮ ದೇಹದ ಬಗೆಗಿನ ನಿಮ್ಮದೇ ಆಲೋಚನೆಗಳು ಪಾಸಿಟಿವ್ ಆಗಿರಲಿ. ನೀವು ಹೇಗಿದ್ದೀರೋ ಹಾಗೆಯೇ ನಿಮ್ಮನ್ನು ನೀವು ಒಪ್ಪಿಕೊಳ್ಳುವ ಮನಸ್ಥಿತಿ ನಿಮ್ಮದಾಗಲಿ. ‘ಸೂಪರ್ ಮಾಡೆಲ್ ಕಾನ್ಸೆಪ್ಟ್’ ಎಂಬುದೊಂದಿಲ್ಲ. ಚಿರಯೌವನದ ದೇಹ ಸಾಧ್ಯವಿರುವುದು ಜಾಹೀರಾತುಗಳಲ್ಲಿ ಮಾತ್ರ. ಆದ್ದರಿಂದ, ನಕಾರಾತ್ಮಕ ಆಲೋಚನೆಗಳ ಜಾಗವನ್ನು ಸಕಾರಾತ್ಮಕತೆಯು ಆವರಿಸಲಿ.
ದೈಹಿಕ ಆರೋಗ್ಯ ಆದ್ಯತೆಯಾಗಲಿ. ಯೋಗ-ವ್ಯಾಯಾಮ ಬದುಕಿನ ಭಾಗವಾಗಲಿ. ಧ್ಯಾನವು ಮನಸ್ಸನ್ನು ಔನ್ನತ್ಯಕ್ಕೇರಿಸುವ ಉಸಿರಾಟದ ಒಂದು ಆಧ್ಯಾತ್ಮಿಕ ಕ್ರಿಯೆ. ಹೆಚ್ಚು ಹೆಚ್ಚು ಧ್ಯಾನಸ್ಥರಾದಷ್ಟೂ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ನಿಮ್ಮಿಷ್ಟದ ಯಾವುದಾದರೂ ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ- ಚಿತ್ರಕಲೆ, ಎಂಬ್ರಾಯಿಡರಿ, ಟೇಲರಿಂಗ್, ಕ್ರಾಫ್ಟ್, ಅಡುಗೆ ಹೀಗೆ. ಸೃಜನಾತ್ಮಕ ಅಂಶಗಳು ಮನಸ್ಸಿಗೆ ಸಾಧನೆಯ ಪ್ರೇರಣೆಯನ್ನು ತುಂಬುತ್ತವೆ.
ಕುಟುಂಬ ಸ್ನೇಹಿತರು ಹಾಗೂ ಸಮುದಾಯದ ಜತೆಗೆ ಕನೆಕ್ಟ್ ಆಗುತ್ತ ಬದುಕುವುದು, ಬದುಕಿನಲ್ಲಿ ಭರವಸೆ, ತುಂಬು ಪ್ರೀತಿ ಯನ್ನು ತುಂಬುತ್ತದೆ. ಈ ಸಮಯದಲ್ಲಿ ನಿದ್ರಾರಾಹಿತ್ಯ, ಬಿಸಿಹಬೆ ಬಡಿದಂತಾಗುವುದು ಸರ್ವೇಸಾಮಾನ್ಯ. ವ್ಯಾಯಾಮ
ಮತ್ತು ಶಿಸ್ತು ಇದಕ್ಕೆ ಪೂರಕಮದ್ದು ಎಂದಿದ್ದು ಈ ಕಾರಣಕ್ಕೇ. ಕೊನೆಯಲ್ಲಿ ಕುಟುಂಬದವರಿಗೊಂದಿಷ್ಟು ಕಿವಿಮಾತು ಹೇಳುವುದಾದರೆ, ಋತುಬಂಧದ ವೇಳೆ ಮಹಿಳೆಯರಿಗಾಗಿ ಒಂದಿಷ್ಟು ಸಮಯ ನೀಡಿ, ಅವರೊಂದಿಗೆ ಮಾತಾಡಿ, ಅವರಿಗೆ ಹೇಗನ್ನಿಸುತ್ತಿದೆ ಕೇಳಿ, ನಿಮ್ಮ ಭಾವನಾತ್ಮಕ ಮತ್ತು ನೈತಿಕ ಬೆಂಬಲವನ್ನು ಅವರಿಗೆ ನೀಡಿ.
ಅವರು ಕುಗ್ಗಿದಾಗ, ಕುಸಿದಾಗ ಅವರಂದಿಷ್ಟು ಸ್ಪೂರ್ತಿ ತುಂಬಿ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರನ್ನು ಪ್ರೇರೇಪಿಸಿ. ಕೈಹಿಡಿದು ವಾಕಿಂಗ್ಗೆ, ಸಿನಿಮಾಗೆ ಕರೆದುಕೊಂಡು ಹೋಗಿ. ಇದು ಅವರ ಮನಸ್ಸಿಗೆ ಮುದ
ನೀಡುತ್ತದೆ. ಋತುಬಂಧದ ಹಂತದಲ್ಲಿ ಮಾನಿನಿಯರಲ್ಲಿ ಲೈಂಗಿಕ ಆಸಕ್ತಿ ಕುಂದುತ್ತದೆ. ಆದ್ದರಿಂದ ಸಂಗಾತಿಯಾದವರು ಆಕೆಗೆ ಪ್ರೀತಿ ತುಂಬಬೇಕು, ಈ ಹಂತದಲ್ಲಿ ನಾನಿದ್ದೇನೆ ನಿನ್ನೊಂದಿಗೆ ಎಂಬ ಭರವಸೆ ನೀಡಿ ಅವರಲ್ಲಿ ಆಶಾಭಾವನೆ ಮೂಡಿಸಬೇಕು.
ಮೆನೋಪ್ಲಾಸ್ಟ್, ಋತುಬಂಧ, ಮುಟ್ಟುನಿಲ್ಲುವಿಕೆ ಪರ್ಫೆಕ್ಟ್ಲಿ ಸಹಜ ಪ್ರಕ್ರಿಯೆ, ಬದುಕಿನ ಹೊಸದೊಂದು ಆರಂಭಕ್ಕೆ ಇದೊಂದು ಮುನ್ನುಡಿ. ಅಪ್ಪಿಕೊಂಡು ಮುನ್ನಡೆಯಿರಿ! ಲೀವ್ ಲವ್ ಲಾಫ್.