Sunday, 15th December 2024

ಏಕ ದೇಶ, ಏಕ ಚುನಾವಣೆ ಐಡಿಯಾ ತಿರಸ್ಕರಿಸೋಣ

ಅಭಿವ್ಯಕ್ತಿ

ಅಸಾದುದ್ದೀನ್‌ ಓವೈಸಿ, ಸಂಸದ, ಎಐಎಂಐಎಂ, ಹೈದರಾಬಾದ್‌

ರಾಜ್ಯ ಸರಕಾರಗಳು ಯಾವತ್ತೂ ಕೇಂದ್ರ ಸರಕಾರದ ಬಯಕೆಗೆ ತಕ್ಕಂತೆ ಕೆಲಸ ಮಾಡಬೇಕಿಲ್ಲ, ಬದಲಿಗೆ ಅವು ರಾಜ್ಯ ಶಾಸನ ಸಭೆಯ ಅವಧಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಶಾಸನಸಭೆಯು ಸರಕಾರವೊಂದನ್ನು ಅಸ್ತಿತ್ವಕ್ಕೆ ತರಲು ವಿಫಲವಾದರೆ ಅದಕ್ಕೆ ಸಂವಿಧಾನದಲ್ಲಿ ಬಹಳ ಸರಳವಾದ ಪರಿಹಾರ ಹೇಳಲಾಗಿದೆ – ಮರು ಚುನಾವಣೆ. ಆದರೆ, ಏಕ ದೇಶ ಏಕ ಚುನಾವಣೆ ವ್ಯವಸ್ಥೆ ಜಾರಿಗೆ ತಂದರೆ ಯಾವುದೇ ರಾಜಕೀಯ ಪಕ್ಷ ಸರಕಾರ ರಚಿಸಲು ವಿಫಲವಾದ ಪಕ್ಷದಲ್ಲಿ ಮುಂದಿನ ಐದು ವರ್ಷಗಳ ಕಾಲ ಮತದಾರರು ಕಾಯುತ್ತಾ ಕುಳಿತುಕೊಳ್ಳಬೇಕೇ? ಅಥವಾ, ಅವಧಿಗೆ ಮುನ್ನ ಸರಕಾರ ಪತನವಾದರೆ ಮತ್ತೆ ಚುನಾವಣೆ ನಡೆಯುವುದು ಯಾವಾಗ ಎಂದು ಪ್ರಜೆಗಳು ಕತ್ತು ಉದ್ದ ಮಾಡಿಕೊಂಡು ನೋಡುತ್ತಿರಬೇಕೇ?

ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಏಕ ದೇಶ, ಏಕ ಚುನಾವಣೆ’ ಕರೆಯನ್ನು ಮತ್ತೊಮ್ಮೆ ಮೊಳಗಿಸಿದ್ದಾರೆ. ದೇಶದಲ್ಲಿ ಒಂದೇ ಸಲ ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂಬುದು ಕೇವಲ ಒಂದು ಚಿಂತನೆಯಾಗಿ ಉಳಿಯಬಾರದು ಎಂದೂ ಹೇಳಿದ್ದಾರೆ. ಈ ವಿಷಯದಲ್ಲಿ ಚಿಂತನ – ಮಂಥನ ನಡೆಸುವುದು ಪ್ರಧಾನಿಯ ದೃಷ್ಟಿಕೋನಕ್ಕೆ ಸರಿಹೊಂದಲಾರದು ಬಿಡಿ.

ಆದ್ದರಿಂದಲೇ ಅವರು ಏಕ ದೇಶ, ಏಕ ಚುನಾವಣೆ ಯೆಂಬುದು ದೇಶಕ್ಕೆ ಬಹಳ ಅಗತ್ಯವಿರುವ ವ್ಯವಸ್ಥೆಯೆಂದು ತಾವೇ ಘೋಷಿಸಿಬಿಟ್ಟಿದ್ದಾರೆ. ಅದಕ್ಕೆ ಯಾವ ಆಧಾರವೂ ಇಲ್ಲ, ಅಂಕಿಅಂಶಗಳೂ ಇಲ್ಲ. ದೇಶಕ್ಕೆ ಏಕೆ ಇದು ಅತ್ಯಗತ್ಯ ಎಂಬುದು ಯಾರಿಗೂ ಗೊತ್ತಿಲ್ಲ. ಇಷ್ಟಕ್ಕೂ ಇಂತಹದ್ದೊಂದು ಕಸರತ್ತಿಗೆ ಯಾವ ತಾರ್ಕಿಕ ತಳಹದಿಯೂ ಇದ್ದಂತೆ ತೋರುತ್ತಿಲ್ಲ.
ಪ್ರಧಾನಿ ಇದಕ್ಕೆ ಎರಡು ಸಮರ್ಥನೆ ನೀಡುತ್ತಾರೆ.

ಮೊದಲನೆಯದು, ಮೇಲಿಂದ ಮೇಲೆ ಚುನಾವಣೆ ನಡೆಸುವುದು ದೇಶಕ್ಕೆ ಆರ್ಥಿಕವಾಗಿ ಹೊರೆ ಯಾಗುತ್ತದೆ. ಹೀಗಾಗಿ ಒಂದೇ ಸಲ ಎಲ್ಲಾ ಚುನಾವಣೆಗಳನ್ನೂ ನಡೆಸಿದರೆ ಹಣ ಉಳಿತಾಯ ವಾಗುತ್ತದೆ. ಎರಡನೆಯದು, ಪದೇ ಪದೆ ಚುನಾವಣೆಗಳನ್ನು ನಡೆಸುವು ದರಿಂದ ದೇಶದಲ್ಲಿ ನಿರಂತರವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅದರಿಂದ ಸರಕಾರಗಳು ಅಭಿವೃದ್ಧಿ ಕಾರ್ಯಗಳನ್ನು ತಡೆರಹಿತವಾಗಿ ಕೈಗೊಳ್ಳಲು ಆಗುವುದಿಲ್ಲ.

ಈ ಸಮರ್ಥನೆಗಳಿಗೆ ಯಾವ ಆಧಾರವಾಗಲೀ, ಅಧ್ಯಯನದಿಂದ ದೊರಕಿದ ಅಂಕಿಅಂಶಗಳ ಸಮರ್ಥನೆಯಾಗಲೀ ಇಲ್ಲ. ಇದಕ್ಕಿಂತ ಹೆಚ್ಚಾಗಿ ಪ್ರಧಾನಿ ಹೇಳುತ್ತಿರುವುದರ ಹಿಂದಿರುವ ಇನ್ನೂ ಹೆಚ್ಚಿನ ಮಹತ್ವದ ಸಂಗತಿಯೊಂದನ್ನು ನಾವು ಗಮನಿಸ ಬೇಕು. ಅವರ ಪ್ರಕಾರ ಸಾಂವಿಧಾನಿಕ ಮೌಲ್ಯಗಳು ಹಾಗೂ ಪ್ರಜಾಸತಾತ್ಮಕ ವಿಚಾರಗಳು ಹಣ ಹಾಗೂ ಆಡಳಿತಾತ್ಮಕ ಅನುಕೂಲದ ಮೇಲೆ ನಿಂತಿವೆ.

ಹಾಗಿದ್ದರೆ, ದೇಶದಲ್ಲಿ ಕೋರ್ಟ್‌ಗಳಿಗೆ ಕಟ್ಟಡ ಕಟ್ಟುವುದು ಅಥವಾ ಜಡ್ಜ್‌ಗಳಿಗೆ ಸಂಬಳ ನೀಡುವುದು ಬಹಳ ದುಬಾರಿಯ ಬಾಬ್ತು ಎಂದು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನೇ ಬಿಟ್ಟು ಬಿಡೋಣವೇ? ಜನರ ಜೀವ ಉಳಿಸಲು ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಲೆಂದು ಸಂವಿಧಾನಬದ್ಧವಾಗಿ ಇರುವ ಪೊಲೀಸ್ ಇಲಾಖೆಯಿಂದ ಬೊಕ್ಕಸಕ್ಕೆ ಬಹಳ ಹೊರೆಯಾಗುತ್ತಿದೆ, ಹೀಗಾಗಿ ಪೊಲೀಸರನ್ನು ನೇಮಕ ಮಾಡಿಕೊಳ್ಳುವುದು, ಅವರಿಗೆ ತರಬೇತಿ ನೀಡುವುದನ್ನು ನಿಲ್ಲಿಸಿಬಿಡೋಣವೇ? ಸಾಂವಿಧಾನಿಕ ಜವಾಬ್ದಾರಿಗಳು ಯಾವತ್ತೂ ಹಣದ ಟ್ಯಾಗ್ ನೊಂದಿಗೆ ಬರುವುದಿಲ್ಲ.

ನಮ್ಮ ಸಂವಿಧಾನವು ಸಂಸದೀಯ ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತಿಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಇದೇ ನಮ್ಮ ದೇಶದ ಸಾಂವಿಧಾನಿಕ ತಳಹದಿ. ಸಂಸದೀಯ ಪ್ರಜಾಪ್ರಭುತ್ವದ ಅತ್ಯಂತ ಮುಖ್ಯ ಲಕ್ಷಣವೆಂದರೆ
ಇಲ್ಲಿ ಚುನಾಯಿತ ಶಾಸನ ಸಭೆಗಳಿಗೆ ನಿರ್ದಿಷ್ಟ ಅವಧಿ ನಿಗದಿಪಡಿಸಲಾಗಿದೆ. ಹಾಗೆ ಆ ಅವಧಿಯಲ್ಲಿ ಶಾಸನಸಭೆಯಲ್ಲಿ ಬಹುಮತ ಹೊಂದಿರುವ ಸರಕಾರಕ್ಕೆ ಮಾತ್ರ ಕಾನೂನಾತ್ಮಕ ಅಧಿಕಾರಗಳಿರುತ್ತವೆ.

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕಾಲಮಿತಿಯಲ್ಲಿ ನಡೆಯುವ ಚುನಾವಣೆಗಳಿಂದಲೇ ಸಂಸದೀಯ ಪ್ರಜಾಪ್ರಭುತ್ವ ಉಳಿದಿದೆ. ಹೀಗೆ ಚುನಾವಣೆ ನಡೆಸಲು ಎಷ್ಟು ಹಣ ಖರ್ಚಾಗುತ್ತದೆ, ಈ ವರ್ಷ ಎಷ್ಟು ರಾಜ್ಯಗಳಿಗೆ ಚುನಾವಣೆ
ನಡೆಸಬೇಕು, ಮುಂದಿನ ವರ್ಷ ಎಷ್ಟು ರಾಜ್ಯಗಳಿಗೆ ಚುನಾವಣೆ ನಡೆಸಬೇಕು ಎಂಬ ಚಿಂತೆಗಳಿಗೆಲ್ಲ ಇಲ್ಲಿ ಜಾಗವಿಲ್ಲ.

ಹಾಗೆಯೇ ಸಂವಿಧಾನದಲ್ಲಿ ಕೆಲ ವಿಷಯಗಳಲ್ಲಿ ಶಾಸನಗಳನ್ನು ರೂಪಿಸುವ ಮತ್ತು ಆಡಳಿತ ನಡೆಸುವ ಅಧಿಕಾರವನ್ನು ಕೇವಲ ರಾಜ್ಯಗಳಿಗೆ ನೀಡಲಾಗಿದೆ. ಅದರಲ್ಲಿ ಕೇಂದ್ರ ಸರಕಾರ ಮೂಗು ತೂರಿಸುವಂತಿಲ್ಲ. ರಾಜ್ಯ ಸರಕಾರಗಳು ಯಾವತ್ತೂ ಕೇಂದ್ರ ಸರಕಾರದ ಬಯಕೆಗೆ ತಕ್ಕಂತೆ ಕೆಲಸ ಮಾಡಬೇಕಿಲ್ಲ, ಬದಲಿಗೆ ಅವು ರಾಜ್ಯ ಶಾಸನಸಭೆಯ ಅವಧಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ರಾಜ್ಯ ಶಾಸನಸಭೆಯು ಸರಕಾರವೊಂದನ್ನು ಅಸ್ತಿತ್ವಕ್ಕೆ ತರಲು ವಿಫಲವಾದರೆ ಅದಕ್ಕೆ ಸಂವಿಧಾನ ದಲ್ಲಿ ಬಹಳ ಸರಳವಾದ ಪರಿಹಾರ ಹೇಳಲಾಗಿದೆ – ಮರು ಚುನಾವಣೆ.

ಆದರೆ, ಏಕ ದೇಶ ಏಕ ಚುನಾವಣೆ ವ್ಯವಸ್ಥೆ ಜಾರಿಗೆ ತಂದರೆ ಯಾವುದೇ ರಾಜಕೀಯ ಪಕ್ಷ ಸರಕಾರ ರಚಿಸಲು ವಿಫಲವಾದ ಪಕ್ಷದಲ್ಲಿ ಮುಂದಿನ ಐದು ವರ್ಷಗಳ ಕಾಲ ಮತದಾರರು ಕಾಯುತ್ತಾ ಕುಳಿತುಕೊಳ್ಳಬೇಕೇ? ಅಥವಾ, ಅವಧಿಗೆ ಮುನ್ನ ಸರಕಾರ ಪತನವಾದರೆ ಮತ್ತೆ ಚುನಾವಣೆ ನಡೆಯುವುದು ಯಾವಾಗ ಎಂದು ಪ್ರಜೆಗಳು ಕತ್ತು ಉದ್ದ ಮಾಡಿಕೊಂಡು ನೋಡುತ್ತಿರಬೇಕೇ? ಇಡೀ ದೇಶಕ್ಕೆ ಒಂದೇ ಸಲ ಚುನಾವಣೆ ನಡೆಸುವುದು ಪ್ರಧಾನಿಯ ಕನಸು ಎಂಬ ಕಾರಣಕ್ಕೆ ಮತದಾರರನ್ನು ಕಾಯಿಸುವುದು
ನ್ಯಾಯವಲ್ಲ.

ಈ ಪ್ರಸ್ತಾವನೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಸೇರಿಸಬೇಕೆಂಬುದು ಪ್ರಧಾನಿಯ ಬಯಕೆ. ಆದರೆ, ಸ್ಥಳೀಯ ಸಂಸ್ಥೆಗಳು ರಾಜ್ಯ ಸರಕಾರಗಳು ರೂಪಿಸಿದ ಶಾಸನಗಳ ಮೇಲೆ ನಡೆಯುತ್ತವೆ. ಅವುಗಳಿಗೆ ಸಂಬಂಧಿಸಿದ ಕಾಯಿದೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿವೆ. ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನು ಹಾಗೂ ನಿಯಮಗಳನ್ನು ರೂಪಿಸುವ
ಅಧಿಕಾರವನ್ನು ಸಂವಿಧಾನವೇ ವಿಶೇಷವಾಗಿ ರಾಜ್ಯ ಸರಕಾರಗಳಿಗೆ ನೀಡಿದೆ. ಈ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸುತ್ತದೆ.

ಇದು ಕೇಂದ್ರ ಚುನಾವಣಾ ಆಯೋಗದ ಅಧೀನದಲ್ಲಿ ಬರುವುದಿಲ್ಲ. ಏಕೆ ಹೀಗೆ ಮಾಡಿದ್ದಾರೆ ಅಂದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಯೆಂಬುದು ಬಹಳ ಸಂಕೀರ್ಣ ವಾದ ಪ್ರಕ್ರಿಯೆ. ಅದಕ್ಕೆ ಪ್ರತ್ಯೇಕ ಆಡಳಿತಾತ್ಮಕ ಯಂತ್ರ ಹಾಗೂ ವಿಶೇಷ ನಿಗಾ ಬೇಕಾಗುತ್ತದೆ. ಇತಿಹಾಸದಿಂದಲೂ ನಾವು ಪಾಠ ಕಲಿಯುವುದಿದೆ.

ಮತದಾರರಿಗೆ ನಿಧಾನವಾಗಿ ಮತದಾನದ ಹಕ್ಕು ನೀಡದೆ ಒಮ್ಮೆಲೇ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕನ್ನು ನೀಡಿರುವ
ಜಗತ್ತಿನ ಮೊದಲ ದೇಶ ನಮ್ಮದು. ಇದನ್ನು ನೀಡುವಾಗ ಸಂವಿಧಾನ ರಚನಾ ಸಮಿತಿಯಲ್ಲಿ ಅನೇಕ ಸದಸ್ಯರು ಅನುಮಾನ
ವ್ಯಕ್ತಪಡಿಸಿದ್ದರು. ಬಡವರು ಹಾಗೂ ಅನಕ್ಷರಸ್ಥರೇ ಹೆಚ್ಚಿರುವ, ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಮುನ್ನಡೆಸಿದ ಅನುಭವವಿಲ್ಲದ ದೇಶದಲ್ಲಿ ಹೀಗೆ ಏಕಾಏಕಿ ಎಲ್ಲರಿಗೂ ಮತದಾನದ ಹಕ್ಕು ನೀಡಿಬಿಟ್ಟರೆ ಏನಾಗಬಹುದು ಎಂದು ಅವರು ಚಿಂತಿತರಾಗಿದ್ದರು.
ಆದರೂ ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿದ ತಕ್ಷಣ ಮೊದಲ ಸಾರ್ವತ್ರಿಕ ಚುನಾವಣೆ ನಡೆಸಿತು.

ದೇಶದಲ್ಲಿ ಎಲ್ಲ ವಯಸ್ಕರೂ ಮತದಾನ ಮಾಡುವುದು ಬಹಳ ದುಬಾರಿ ಯಾಗುತ್ತದೆ ಅಥವಾ ಅದು ಕಷ್ಟ ಎಂಬ ಕಾರಣಕ್ಕೆ ಸಂವಿಧಾನದ ನಿರ್ಮಾತೃಗಳು ಕೆಲವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದರೆ ಏನಾಗುತ್ತಿತ್ತು? ಅದನ್ನು ಊಹಿಸಿಕೊಳ್ಳಲು
ಸಾಧ್ಯವೇ? ಮೇಲಾಗಿ ಆಗಷ್ಟೇ ದೇಶವು ವಿಭಜನೆಯ ನೋವಿನಲ್ಲಿತ್ತು. ಪಾಕಿಸ್ತಾನದ ಜತೆಗೆ ಯುದ್ಧ ನಡೆಸಿ ಗಾಯ ಮಾಡಿಕೊಂಡಿತ್ತು. ಹೀಗಾಗಿ ಎಲ್ಲರಿಗೂ ಮತದಾನದ ಹಕ್ಕು ನೀಡಿ ದೊಡ್ಡ ಕಸರತ್ತಿನ ಮೂಲಕ ಚುನಾವಣೆ ನಡೆಸುವುದರಿಂದ ಸಂವಿಧಾನ ರಚನಾಕಾರರು ತಪ್ಪಿಸಿಕೊಳ್ಳಬಹುದಿತ್ತು.

ಆದರೆ ಹಾಗೆ ಮಾಡಲಿಲ್ಲ. ನಂತರ ಕೂಡ ನಮ್ಮ ದೇಶ ಸಾಕಷ್ಟು ಆರ್ಥಿಕ ತೊಂದರೆ, ಯುದ್ಧ, ದಂಗೆ ಹಾಗೂ ಮತೀಯ
ಹಿಂಸಾಚಾರಗಳ ನಡುವೆಯೂ ಯಶಸ್ವಿಯಾಗಿ ಬೇರೆ ಬೇರೆ ಅವಧಿಯಲ್ಲಿ ಚುನಾವಣೆಗಳನ್ನು ನಡೆಸಿದೆ. ಆಗ ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಹಣಕಾಸಿನ ಸಮಸ್ಯೆ ಅಡ್ಡ ಬರಲಿಲ್ಲ ಅಂತಾದರೆ ಈಗಿನ ನವ ಭಾರತದಲ್ಲಿ ಅವುಗಳ ಬಗ್ಗೆ ಚಿಂತೆ ಮಾಡುವ ಅಗತ್ಯದೆಯೇ? ಪ್ರಧಾನಿ ಮೋದಿ ಪದೇ ಪದೇ ಚುನಾವಣಾ ನೀತಿ ಸಂಹಿತೆಗಳು ದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ
ಅಡ್ಡ ಬರುತ್ತವೆ ಎಂದು ಹೇಳುತ್ತಾರೆ. ಇದನ್ನಂತೂ ನಂಬಲು ಸಾಧ್ಯವೇ ಇಲ್ಲ.

ಚುನಾವಣೆ ನೀತಿ ಸಂಹಿತೆ ಇರುವಾಗ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಬೇಕು ಅಥವಾ ಸರಕಾರದ ಆಡಳಿತ ಯಂತ್ರ ತನ್ನ ದೈನಂದಿನ ಕೆಲಸಗಳನ್ನು ಮಾಡಬಾರದು ಎಂದು ಯಾವ ನಿಯಮವೂ ಇಲ್ಲ. ದೇಶ ಯಾವಾಗಲೂ ‘ಚುನಾವಣೆಯ ಮೋಡ್’ನಲ್ಲಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಗಮನ ನೀಡುವುದು ಕಷ್ಟವಾಗುತ್ತದೆ ಎಂದು ಇನ್ನೊಂದು ನೆಪವನ್ನೂ ಮೋದಿ ಹೇಳುತ್ತಾರೆ.

ವಾಸ್ತವ ಏನೆಂದರೆ, ಯಾವಾಗಲೂ ಚುನಾವಣೆಯ ಮೋಡ್‌ನಲ್ಲಿರುವುದು ದೇಶವಲ್ಲ, ಬದಲಿಗೆ ಪ್ರಧಾನಿ, ಕೇಂದ್ರ ಸಚಿವರು ಹಾಗೂ ಭಾರತೀಯ ಜನತಾ ಪಕ್ಷದ ಇನ್ನಿತರ ರಾಷ್ಟ್ರೀಯ ನಾಯಕರು ಸದಾ ಚುನಾವಣೆಯ ಚಿಂತೆಯಲ್ಲಿರುತ್ತಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತಾವೇ ಪ್ರಚಾರ ನಡೆಸಬೇಕು ಎಂಬ ಅವರ ಹಪಾಹಪಿಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ.

ಏಕ ದೇಶ ಏಕ ಚುನಾವಣೆ ಜಾರಿಗೆ ಬಂದರೆ ಪ್ರಾದೇಶಿಕ ಪಕ್ಷಗಳು ನಾಮಾವಶೇಷವಾಗುತ್ತವೆ. ಪ್ರವೀಣ್ ಚಕ್ರವರ್ತಿ ಈ ಕುರಿತು ಅಂಕಿಅಂಶ ಆಧರಿತ ವಿಶ್ಲೇಷಣೆಯೊಂದನ್ನು ನಡೆಸಿದ್ದಾರೆ. ಅದರ ಪ್ರಕಾರ, ೧೯೯೯ ಹಾಗೂ ೨೦೧೪ರ ನಡುವೆ ದೇಶದಲ್ಲಿ ಒಂದೇ ಬಾರಿಗೆ ಎಲ್ಲಾ ಚುನಾವಣೆಗಳು ನಡೆದಿದ್ದರೆ ಮತದಾರರು ಒಂದೇ ರಾಜಕೀಯ ಪಕ್ಷವನ್ನು ಆಯ್ಕೆ ಮಾಡುವ ಸಾಧ್ಯತೆ ಶೇ.೭೭ ಇತ್ತು. ಅಂದರೆ, ಏಕಕಾಲಕ್ಕೆ ಚುನಾವಣೆ ನಡೆಸುವ ವ್ಯವಸ್ಥೆ ಬಂದರೆ ದೊಡ್ಡ ಹಾಗೂ ರಾಷ್ಟ್ರೀಯ ಪಕ್ಷಗಳಿಗೆ ಲಾಭವಾಗುತ್ತದೆ ಮತ್ತು ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ನಷ್ಟವಾಗುತ್ತದೆ.

ಆಗ ಭಾರತದಲ್ಲಿರುವ ಸುಂದರವಾದ ಬಹುಪಕ್ಷೀಯ ಚುನಾವಣಾ ವ್ಯವಸ್ಥೆ ನಾಶವಾಗಿ ಏಕಪಕ್ಷೀಯ ವ್ಯವಸ್ಥೆಗೆ ಹಾದಿ ಸುಗಮ ವಾಗುತ್ತದೆ. ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಪ್ರಾದೇಶಿಕ ಆಶೋತ್ತರಗಳನ್ನು ಕೇಳುವವರೇ ಇಲ್ಲವಾಗುತ್ತಾರೆ. ನಿರ್ಧಾರ ಕೈಗೊಳ್ಳುವವರು ರಾಷ್ಟ್ರೀಯ ಪಕ್ಷಗಳ ನಾಯಕರಾಗಿರುವುದರಿಂದ ತಳಮಟ್ಟದಲ್ಲಿ ಜನರ ಕೂಗಿಗೆ ಬೆಲೆ ಇಲ್ಲದಂತಾಗುತ್ತದೆ.
ಬಿಜೆಪಿ ಈಗಾಗಲೇ ಏಕ ದೇಶ ಏಕ ಚುನಾವಣೆಯ ಬಗ್ಗೆ ವೆಬಿನಾರ್‌ಗಳನ್ನು ನಡೆಸುವುದು ಹಾಗೂ ಜನಾಭಿಪ್ರಾಯ ಸಂಗ್ರಹ ಸಮೀಕ್ಷೆಗಳನ್ನು ನಡೆಸುವ ಮೂಲಕ ದೇಶದ ಜನರು ಈ ಚಿಂತನೆಯ ಪರ ಇದ್ದಾರೆ ಎಂದು ಕೃತಕವಾಗಿ ಬಿಂಬಿಸಲು ಎಲ್ಲಾ ಕಸರತ್ತುಗಳನ್ನೂ ಮಾಡುತ್ತಿದೆ.  ಭಾರತೀಯ ಕಾನೂನು ಆಯೋಗಕ್ಕೂ  ‘ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ನೀಲನಕ್ಷೆ ರೂಪಿಸಲು’ ಶಿಫಾರಸ್ಸು ಮಾಡಲಾಗಿದೆ.

ಗಮನಿಸಿ: ಏಕ ದೇಶ ಏಕ ಚುನಾವಣೆಯಿಂದ ಏನು ತೊಂದರೆಯಾಗಬಹುದು ಎಂಬ ಬಗ್ಗೆ ಅಧ್ಯಯನ ನಡೆಸಲು
ಆಯೋಗಕ್ಕೆ ಶಿಫಾರಸು ಮಾಡಿಲ್ಲ. ಬದಲಿಗೆ, ಏಕಕಾಲಕ್ಕೆ ಚುನಾವಣೆ ನಡೆಸುವುದು ಸಂವಿಧಾನಬದ್ಧವಾಗಿದೆ, ಅದರಿಂದ ದೇಶಕ್ಕೆ ಪ್ರಯೋಜನಗಳಿವೆ, ಅದಕ್ಕಿರುವ ಏಕೈಕ ಅಡ್ಡಿಯೆಂದರೆ ಸರಿಯಾದ ನೀಲನಕ್ಷೆ ಇಲ್ಲದಿರುವುದು ಎಂದು ಕೇಂದ್ರ ಸರಕಾರ
ಊಹಿಸಿಕೊಂಡುಬಿಟ್ಟಿದೆ.

ಭಾರತದ ವೈವಿಧ್ಯತೆಯೇ ಈ ದೇಶಕ್ಕಿರುವ ಅಪಾಯವೆಂಬಂತೆ ನೋಡುವ ಬಿಜೆಪಿಯ ದೃಷ್ಟಿಕೋನ ಖಂಡಿತವಾಗಿಯೂ ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಹುದೊಡ್ಡ ಹಾನಿ ಉಂಟುಮಾಡಲಿದೆ.
ಕಪೋಲಕಲ್ಪಿತ ಅನುಕೂಲ ಹಾಗೂ ದಕ್ಷತೆಗಳ ನೆಪವೊಡ್ಡಿ ಸಾಂವಿಧಾನಿಕ ಮೌಲ್ಯಗಳನ್ನು ಬಲಿ ಕೊಡುವುದು ಭಾರತದ ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ನೂಕುವುದು ನಿಶ್ಚಿತ.