ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ಕ್ಯಾಮೆರಾಮನ್ ಕದ್ದು ಚಿತ್ರಿಸಿಕೊಂಡು ಬಂದು ತೋರಿಸುವಂತಿರುತ್ತದೆ ವರನಟ ಡಾ.ರಾಜ್ ಅವರ ಅಭಿನಯ. ಅಂಥ ಮಹಾಕಲಾವಿದನಿಗೆ ನಮ್ಮ ದೇಶದಲ್ಲಿ ಅಭಿನಯಕ್ಕೆ ಶ್ರೇಷ್ಠನಟ ಪ್ರಶಸ್ತಿ ದೊರಕದೇ ಇರುವುದು ವಿಪರ್ಯಾಸ.
1971ರಲ್ಲಿ ತಮಿಳಿನ ಎಂಜಿಆರ್‌ಗೆ ಈ ಪ್ರಶಸ್ತಿ ನೀಡಲಾಗಿದೆಯೆಂದರೆ ರಾಜ ಕುಮಾರ್ ಅವರು ಅಭಿನಯಿಸಿರುವ 200 ಚಿತ್ರ
ಗಳಿಗೂ ಶ್ರೇಷ್ಠನಟ ರಾಷ್ಟ್ರೀಯ ಪ್ರಶಸ್ತಿ ನೀಡಲೇಬೇಕಾಗುತ್ತದೆ. ಇರಲಿ, ರಾಜಣ್ಣನವರ ಕಲಾ ಸಾಮರ್ಥ್ಯ ಎಲ್ಲಾ ಪ್ರಶಸ್ತಿಗಳನ್ನು ಮೀರಿದ್ದು. ಇಂಥ ಶ್ರೇಷ್ಠನಟ ರಾಷ್ಟ್ರೀಯ ಪ್ರಶಸ್ತಿ ಪ್ರಥಮವಾಗಿ ಕನ್ನಡ ನಟರಿಗೆ ದೊರಕಿದ್ದು ಮೂಡುಬಿದ್ರೆ ವೆಂಕಟರಾವ್
ವಾಸುದೇವರಾವ್ ಅವರಿಗೆ ಬಿ.ವಿ. ಕಾರಂತರ ಚೋಮನದುಡಿ ಚಲನಚಿತ್ರದಲ್ಲಿನ ಅಭಿನಯಕ್ಕೆ.
ಎರಡನೇಯದಾಗಿ ಗಿರೀಶ್ ಕಾಸರವಳ್ಳಿಯವರ ತಬರನ ಕಥೆ (1986) ಚಿತ್ರದಲ್ಲಿನ ಚಾರುಹಾಸನ್ (ಕಮಲಹಾಸನ್‌ನ ಅಣ್ಣ) ಅವರಿಗೆ. ಅಲ್ಲಿಗೆ ಮುಗಿದಿತ್ತು ಕನ್ನಡಿಗರ ಕೋಟ. ನಂತರ 2004ರಲ್ಲಿ ತಾರಾ ಅನುರಾಧ (ಹಸೀನಾ) ಅವರಿಗೆ ಮತ್ತು
ಉಮಾಶ್ರೀಯವರಿಗೆ (ಗುಲಾಬಿಟಾಕೀಸ್ 2007) ನಟನೆಗೆ ಶ್ರೇಷ್ಠನಟಿ ಪ್ರಶಸ್ತಿಯನ್ನು ನೀಡಲಾಯಿತು. ಆನಂತರ ಕನ್ನಡ ನಾಡಿಗೆ ಈ ಪ್ರಶಸ್ತಿಯನ್ನು ತಂದದ್ದು ವಿಜಯಕುಮಾರ್ ಬಸವರಾಜಯ್ಯ ಅರ್ಥಾತ್ ಸಂಚಾರಿ ವಿಜಯ್ ಎಂಬ ಉದಯೋನ್ಮಕ ನಟ.
ಸಾಮಾನ್ಯವಾಗಿ ಪ್ರಶಸ್ತಿ ಗಳಿಸುವ ಚಿತ್ರಗಳೆಲ್ಲ ಪ್ರೇಕ್ಷರಿಗಾಗಿ ನಿರ್ಮಾಣವಾಗದೆ ಕೇವಲ ಪ್ರಶಸ್ತಿಗಾಗಿ ನಿರ್ಮಾಣವಾಗುವುದೇ ಹೆಚ್ಚು.
ಹೀಗೆ ನಿರ್ಮಾಣ ವಾದ ಚಿತ್ರವೇ ನಾನು ಅವನಲ್ಲ..ಅವಳು ಎಂಬ ಚಿತ್ರ. ವಿಜಯ್ ಅವರು ಈ ಚಿತ್ರದ ಹಿಂದೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಐದನೇ ಚಿತ್ರದಲ್ಲಿ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿದಾಗಲೇ ಸಂಚಾರಿ ವಿಜಯ್ ಎಂಬ ಅದ್ಭುತ ನಟನ ಪರಿಚಯವಾಗಿದ್ದು. ದುರದೃಷ್ಟವೆಂದರೆ ಅಂಥ ಪ್ರಶಸ್ತಿಯನ್ನು ಪಡೆದ ನಟನ ಬದುಕು ಇಷ್ಟುಬೇಗ ಇಂಥ ಆಘಾತಕಾರಿಯಾಗಿ ಅಂತ್ಯವಾಗಿರುವುದು ಅವರ ಕುಟುಂಬದ ಮತ್ತು ಕನ್ನಡ ಚಿತ್ರರಂಗದ ದುರ್ದೈವ.
ಆದರೆ ಸಂಚಾರಿ ವಿಜಯ್ ಅವರ ಸಾವಿಗೆ ಕಾರಣವಾದ ಆ ಒಂದು ರಸ್ತೆ ಅಪಘಾತ ಇಡೀ ಸಮಾಜಕ್ಕೆ ಒಂದು ಸಂದೇಶ ನೀಡಿ ದಂತಾಗಿದೆ. ಆ ಸಂದೇಶವನ್ನು ಸಮಾಜದಲ್ಲಿರುವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ. ಸರಕಾರ ವಿಧಿಸಿ ರುವ ಸಂಚಾರ ನಿಯಮಗಳು ನಿಜಕ್ಕೂ ಸಾರ್ವಜನಿಕರ ಹಿತರಕ್ಷಣೆ ಮತ್ತು ಜೀವ ರಕ್ಷಣೆಗೇ ಇರುವುದೆಂಬುದು ಈಗಲಾದರೂ ನಾವುಗಳೆಲ್ಲರೂ ಅರಿತು ಗಂಭೀರವಾಗಿ ನಡೆದುಕೊಳ್ಳಬೇಕಿದೆ. ಒಂದು ಆತುರ, ಒಂದು ನಿರ್ಲಕ್ಷ ರಸ್ತೆಯಲ್ಲಿ ನಮ್ಮ ಸಾವಿಗೆ ಕಾರಣವಾಗುತ್ತದೆಂಬುದು ಜನ ಈಗಲಾದರೂ ಮನಗಾಣಬೇಕಿದೆ.
ಸಂಚಾರಿ ವಿಜಯ್ ಅವರ ದುರದೃಷ್ಟವೆಂದರೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದೇ ಇದ್ದದ್ದು, ಜತೆಗೆ
ಉಡಾಫೆ ಮತ್ತು ವೇಗವಾಗಿ ಚಾಲನೆ ಮಾಡುವಂಥ ಗೆಳೆಯನ ಹಿಂಬದಿಯಲ್ಲಿ ಮುಗ್ಧನಾಗಿ – ಅಮಾಯಕನಾಗಿ ಕುಳಿತು ಕೊಂಡಿದ್ದು. ಇದೇ ಅವರಬದುಕಿನ ಮಹಾಪ್ರಮಾದವಾಗಿ ಹೋಯಿತು. ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್
ಧರಿಸದೇ ತಲೆಗೆ ತೀವ್ರವಾದ ಪೆಟ್ಟಿನಿಂದ ಮೃತಪಟ್ಟಿರುವುದು ಪತ್ರಿಕೆಗಳನ್ನು ಓದುವವರಿಗೆ ಮಾತ್ರ ಗಮನಕ್ಕೆ ಬರುತ್ತದೆ. ಹೀಗೆ ತಮ್ಮ ರಕ್ಷಣೆಗೇ ಇರುವ ಕಟ್ಟುಪಾಡನ್ನು ನಿರ್ಲಕ್ಷಿಸಿ ಪ್ರತಿನಿತ್ಯ ನೂರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಹೆಲ್ಮೆಟ್ ಧರಿಸದೇ ಗಾಡಿ ಹತ್ತುವಾಗೆ ಇಂಥವರು ಚಿರಂಜೀವಿಗಳು ಮತ್ತು ಬಾಹುಬಲಿಗಳೆಂದೇ ಭಾವಿಸಿಕೊಂಡಿರುತ್ತಾರೆ. ಆದರೆ ಅಯ ತಪ್ಪಿ ತಲೆಗೆ ಸಣ್ಣ ಪೆಟ್ಟುಬಿದ್ದರೆ ಒಂದೂವರೆ ಕೆಜಿ ತೂಕದ ಹೂವಿನಂಥ ಮೆದುಳಿನ ಗತಿಯ ಬಗ್ಗೆ ಮುಂದೆಂದೂ
ತಿಳಿದುಕೊಳ್ಳುವುದಕ್ಕಾಗುವುದಿಲ್ಲ. ಆದರೂ ಯುವಕರು ಮಧ್ಯವಯಸ್ಕರ ನಿರ್ಲಕ್ಷ , ಬೇಜವಾಬ್ದಾರಿ ವರ್ತನೆ ರಸ್ತೆಯಲ್ಲಿ ಮುಂದುವರಿಯುತ್ತದೆ. ಆದರೆ ಈಗ ಸಂಚಾರಿ ವಿಜಯರಂಥ ನಟ ಹೀಗೆ ನಿರ್ಲಕ್ಷ್ಯ ಮತ್ತು ದುರದೃಷ್ಟದಿಂದ ಅಪಘಾತವಾಗಿ ಪ್ರಾಣತೆತ್ತಾಗಲೇ ಸಂಚಾರಿ ನಿಯಮಗಳ ಮೌಲ್ಯಗಳು ಅರಿವಿಗೆ ಬರುತ್ತದೆ.
ಕೇಂದ್ರ ಸರಕಾರದ ಸಾರಿಗೆ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ 2018ರಲ್ಲಿ ಬರಿಯ ದ್ವಿಚಕ್ರ ವಾಹನದ ಅಪಘಾತದಲ್ಲಿ ಚಾಲಕರು 28,250 ಮಂದಿ ಮೃತರಾಗಿದ್ದರೆ, ಹಿಂಬದಿಯಲ್ಲಿ ಕುಳಿತವರು 15,364 ಮಂದಿ ಸಾವಿಗೀಡಾಗಿದ್ದಾರೆ. ಇನ್ನು
2019ರಲ್ಲಿ ದ್ವಿಚಕ್ರವಾಹನ ಚಾಲಕರು 30,148 ಮಂದಿ ಮೃತಪಟ್ಟಿದ್ದರೆ, ಹಿಂಬದಿಯ ಸವಾರರು 14,518 ಮಂದಿ ಅಮಾ ಯಕರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಾರೆ 2019ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ ಶೇ 29.82ರಷ್ಟು
ಅಂದರೆ 44,666 ಮಂದಿ ಬರಿಯ ದ್ವಿಚಕ್ರವಾಹನ ಸವಾರರಾಗಿದ್ದಾರೆ.
ಇದಕ್ಕೆ ಸರಿಯಾಗಿರದ ರಸ್ತೆಗಳು, ಇನ್ನಿತರ ಕಾರಣಗಳೇನಾದರು ಇರಬಹುದು. ಆದರೆ ಒಂದೊಮ್ಮೆ ಹೆಲ್ಮೆಟ್ ಧರಿಸಿದ್ದರಂತೂ ಈ ಸಾವಿನ ಸಂಖ್ಯೆ ಶೇ.90ರಷ್ಟು ಕಡಿಮೆಯಾಗುತ್ತಿತ್ತು ಎಂಬುದರಲ್ಲಿ ಅನುಮಾನವಿಲ್ಲ. ನಮ್ಮ ಜನ ತಮಗೆ ಅನುಕೂಲವಾಗುತ್ತದೆ ಎಂದರೆ ಎಂಥ ಭ್ರಷ್ಟಾಚಾರ ವನ್ನೂ ಸಹಿಸಿಕೊಂಡು ಹೊಂದಾಣಿಕೆ ಮಾಡಿಕೊಂಡು ಬಿಡುತ್ತಾರೆ. ಆದರೆ ಜೀವ ಕಾಪಾಡುವ ಸಂಚಾರಿ ನಿಯಮಗಳನ್ನು ಪ್ರಜ್ಞಾ ಪೂರ್ವಕವಾಗಿ ಪಾಲಿಸದೆ ಉಡಾಫೆ ಮಾಡಿಕೊಂಡು ಸಾಗುತ್ತಾರೆ.
ಈಗ ನೋಡಿ ಸಂಚಾರಿ ವಿಜಯ್‌ರಂಥ ಮನೆಮಗನನ್ನು ವಿನಾ ಕಾರಣ ಕಳೆದುಕೊಂಡ ಅವರ ಕುಟುಂಬದವರ ಯಾತನೆ ವೇದನೆ ಏನೆಂಬುದು ಅವರ ಮನೆಯವರಿಗೇ ಗೊತ್ತು. ಮಾಧ್ಯಮಗಳಲ್ಲಿ ನೋಡಿದಂತೆ ಅಂದು ಸಂಚಾರಿ ವಿಜಯ್ ಅವರು ಅಪಘಾತ ವಾದ ರಸ್ತೆ ವೇಗವಾಗಿ ಚಾಲನೆ ಮಾಡಬಹುದಾದ ದೊಡ್ಡ ರಸ್ತೆಯೂ ಅಲ್ಲ. ಅಂಥ ರಸ್ತೆಯಲಿ ದ್ವಿಚಕ್ರ ವಾಹನ ಉರುಳಿಬಿದ್ದು
ವಿದ್ಯುತ್ ಕಂಬಕ್ಕೆ ಹೋಗಿ ಗುದಿಯುವಷ್ಟು ವೇಗವಾಗಿ ಚಲಿಸುವ ಅಗ್ಯವೇನಿತ್ತು ಎಂಬುದು ಪ್ರಶ್ನೆ.
ಇದರಿಂದಾಗಿ ವಿಜಯ್ ಅವರ ಬದುಕಿನ ಅಂತ್ಯಕ್ಕೆ ಕಾರಣವಾದ ಅಪಘಾತದಲ್ಲಿನ ಸಂಚಾರಿ ನಿಯಮದ ಉಲ್ಲಂಘನೆ ಮರೆಯಾಗಿ ಅವರ ಅಂಗಾಂಗಳ ದಾನವೇ ಮೇಲಾಗಿ ಸಾವಿನಲ್ಲೂ ಆದರ್ಶ ಮೆರೆದ ವ್ಯಕ್ತಿಯಾಗಿ ಮೆರೆದರು. ಆದರೆ ಗಂಭೀರವಾದ ವಿಚಾರ ವೆಂದರೆ ಸಂಚಾರಿ ನಿಯಮದಲ್ಲಿನ ಉಲ್ಲಂಘನೆಯಿಂದಾಗಿ ನಡೆದ ಈ ದುರಂತ ಸಾವು ಸಮಾಜಕ್ಕೆ ದೊಡ್ಡ ಸಂದೇಶ ಸಾರಿದೆ. ಅದನ್ನು ನಾವುಗಳು ಎತ್ತಿ ಹಿಡಿದು, ಆ ಮೂಲಕ ಇಂಥ ಸಾವುಗಳು ಯಾರಿಗೂ ಬರದಂತೆ ಸಾರ್ವಜನಿಕರು ಮತ್ತು ಸರಕಾರ ಎಚ್ಚೆತ್ತುಕೊಳ್ಳ ಬೇಕಿದೆ. ಅದಕ್ಕೆ ಸಂಚಾರಿ ವಿಜಯ್ ಅವರನ್ನೇ ಒಬ್ಬ ದೃಷ್ಟಾಂತ – ದುರಂತ ನಾಯಕನನ್ನಾಗಿ ಸರಕಾರ ಪರಿಗಣಿಸಿ ರಸ್ತೆ ಅಪಘಾತಗಳನ್ನು ಮತ್ತು ನಂತರದ ಸಾವು – ನೋವುಗಳನ್ನು ತಡೆಯುವ ಗಂಭೀರ ಕ್ರಮ ಗಳನ್ನು ವಿಧಿಸುವ ಕೆಲಸವಾಗ ಬೇಕಿದೆ.
2017 ರಲ್ಲಿ ತುಮಕೂರು ರಸ್ತೆಯಲ್ಲಿ ಅರ್ಧ ದೇಹ ತುಂಡಾಗಿ ನರಳಿದರೂ ತನ್ನ ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಬದುಕಿದ ಹರೀಶ್ ಎಂಬ ಯುವಕನ ಹೆಸರಲ್ಲಿ ಅಂದಿನ ಸರಕಾರ ಹರೀಶ್ ಸಾಂತ್ವನ ಎಂಬ ಎಚ್ಚರಿಕೆಯ ನಡೆಯನ್ನು ಜಾರಿ ಗೊಳಿಸಿತು. ಆ ಮೂಲಕ ರಸ್ತೆಯಲ್ಲಿ ಯಾರೇ ಅಪಘಾತವಾಗಿ ನರಳುತ್ತಿದ್ದರೂ ಯಾವ ಅಳುಕಿಲ್ಲದೇ ಅವರಿಗೆ ಚಿಕಿತ್ಸೆ ಲಭಿಸು ವಂತೆ ನೆರವಾಗುವ ಸ್ವಾತಂತ್ರ್ಯವನ್ನು ಸಮಾಜಕ್ಕೆ ನೀಡಲಾಗಿತ್ತು.
ಹಾಗೆಯೇ ಈ ಸಂಚಾರಿ ನಿಯಮಗಳ ಪಾಲನೆಯಲ್ಲಿ ಬಿಗಿಯಾದ ಕ್ರಮಗಳನ್ನು ಅಳವಡಿಸುವ ‘ಸಂಚಾರಿ’ಗಳು ಹೆಲ್ಮೆಟ್ ಧರಿಸಿ; ಸಾವಿನ ವಿರುದ್ಧ ‘ವಿಜಯ’ ಸಾಧಿಸಿ ಸಲುವಾಗಿ ಸಂಚಾರಿ ವಿಜಯ ಎಂಬ ಯೋಜನೆಯನ್ನು ತಂದು ಸಾರ್ವಜನಿಕರು ರಸ್ತೆಯನ್ನು ಮತ್ತು ವಾಹನ ಚಾಲನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿ ಅಮಾಯಕರ ಸಾವು ನೋವು ಗಳನ್ನು ತಡೆದು ಆ
ಮೂಲಕ ಕುಟುಂಬಗಳನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ.
ಏಕೆಂದರೆ ಪ್ರತಿಯೊಬ್ಬರ ಜೀವವೂ ಅವರವರ ಮನೆಗೆ ಅಮೂಲ್ಯ ವಲ್ಲವೇ? ರಸ್ತೆಯಲ್ಲಿನ ಅಪಘಾತಗಳಿಗೆ ಚಾಲಕರ ನಿರ್ಲಕ್ಷ
ಉಡಾ- ಮಾತ್ರವಲ್ಲದೆ ರಸ್ತೆಗಳ ಗುಣಮಟ್ಟವನ್ನು ಮೊದಲು ಸುಸ್ಥಿತಿಯಲ್ಲಿಡುವಂಥ ಕೆಲಸಗಳು ಮೊದಲು ಆಗಬೇಕಿದೆ. ನಗರದೊಳಗಿನ ಬಹುತೇಕ ಅಪಘಾತಗಳು ಅಯೋಗ್ಯ ರಸ್ತೆಗಳಿಂದ ಹಳ್ಳಕೊಳ್ಳಗಳಿಂದಲೇ ಆಗುತ್ತಿರುವುದು ಸಾಮಾನ್ಯ. ರಸ್ತೆ ರಿಪೇರಿಗಳು, ವಿದ್ಯುತ್, ನೀರು ಸರಬರಾಜು, ಆಪ್ಟಿಕಲ್ ಫೈಬರ್ ಕೇಬಲ್‌ಗಳು ಹೀಗೆ ನಾನಾ ರೀತಿಯ ಕಾಮಗಾರಿಗಳಿಗಾಗಿ ರಸ್ತೆಗಳನ್ನು ಅಗೆದು ಕೆಲಸವಾದ ನಂತರ ಅದು ಮೊದಲಿದ್ದ ಸ್ಥಿತಿಯಲ್ಲಿರುವಂತೆ ಮಾಡದೆ ಬಿಟ್ಟು ಹೋಗುವುದೇ ಅಪಘಾತಗಳಿಗೆ ಮೊದಲ ಕಾರಣ.
ಇಷ್ಟು ಮಾತ್ರವಲ್ಲ, ನಗರಪ್ರದೇಶದಲ್ಲಿ ಬಂಗಲೆಗಳನ್ನು ಕಟ್ಟುವ ಮಾಲಿಕರು ನೀರಿಗಾಗಿ, ವಿದ್ಯುತ್‌ಗಾಗಿ, ಕೊಳಚೆ ನೀರಿನ
ಜೋಡಣೆಗಾಗಿ ಮೂರುನಾಲ್ಕು ಬಾರಿ ಸುಂದರವಾದ ರಸ್ತೆಗಳನ್ನು ಅಗೆದು ಅದನ್ನು ಸರಿಯಾಗಿ ಮುಚ್ಚದೆ ಬಿಟ್ಟುಬಿಡುತ್ತಾರೆ. ಕೆಲವರು ಎಂಥಾ ದುರುಳರೆಂದರೆ ಲಕ್ಷಾಂತರ ರುಪಾಯಿಗಳ ಖರ್ಚುಮಾಡಿ ಮನೆಯನ್ನು ಸುಂದರವಾಗಿಸಿ ಕೊಳ್ಳುತ್ತಾರೆ. ಆದರೆ ರಸ್ತೆಯನ್ನು (ರೋಡ್ ಕಟ್ಟಿಂಗ್) ಮೂರ್ನಾಲ್ಕು ಬಾರಿ ಅಗೆದು ಅದನ್ನು ಮತ್ತೆ ಕಾಂಕ್ರಿಟ್ ಹಾಕಿ ಮುಚ್ಚಲು ಕೇವಲ ಒಂದೆರಡು ಮೂಟೆ ಸಿಮೆಂಟು ಜಲ್ಲಿ ಮರಳಿಗಾಗಿ ಸಾವಿರ ರುಪಾಯಿಗಳ ಖರ್ಚು ಮಾಡದೇ, ಅದನ್ನು ಬಿಬಿಎಂಪಿಯವರು ಮಾಡಿಕೊಳ್ಳುತ್ತಾರೆ ನಮಗ್ಯಾಕೆ ಎಂದು ನಿರ್ಲಕ್ಷಿಸುತ್ತಾರೆ.
ರೋಡ್ ಕಟ್ಟಿಂಗ್ ಅನುಮತಿಗಾಗಿ ವಿನಂತಿ ಪತ್ರ ನೀಡಿದರೆ ಅದು ಗೃಹಪ್ರವೇಶ ದಿನ ಬರುವುದಾಗಿ ಭಾವಿಸುವ ಮಾಲಿಕರು
ಶೀಘ್ರ ಅನುಮತಿ ಪತ್ರಕ್ಕಾಗಿ ವಾರ್ಡ್ ಕಚೇರಿಯಲ್ಲಿ ಮೊದಲೇ ಲಂಚ ನೀಡಿರುತ್ತಾರೆ. ಹೀಗಾಗಿ ತಮ್ಮ ಮನೆ ಮೇಲೆದ್ದ ಮೇಲೆ ರಸ್ತೆಯನ್ನು ಬಿಬಿಎಂಪಿಯವರೇ ಡಾಂಬರು ಹಾಕಿ ಸರಿಮಾಡಿ ಸಾಯಲಿ ಎಂದು ತೀರ್ಮಾನಿಸುತ್ತಾರೆ. ಮುಂದೊಂದು ದಿನ ಇಂಥ
ರಸ್ತೆಯಲ್ಲಿ ಸಂಚಾರಿವಿಜಯ್ ಮತ್ತು ಸ್ನೇಹಿತ ಚಾಲಕನಂತೆ ರಾತ್ರಿಯಲ್ಲಿ ವೇಗವಾಗಿ ಸಂಚರಿಸಿ ರಸ್ತೆಯಲ್ಲಿ ಅಡ್ಡವಾಗಿರುವ ಹಳ್ಳದಲ್ಲಿ ನಿಯಂತ್ರಣ ತಪ್ಪಿ ಜಾರಿ ಬಿದ್ದು ತಲೆಯೊಡೆದುಕೊಳ್ಳುತ್ತಾರೆ.
ಅಲ್ಲಿಗೆ ಸರಕಾರದ ವ್ಯವಸ್ಥೆಯಲ್ಲಿನ ಒಂದು ಭ್ರಷ್ಟತನ, ವಾಹನ ಸಂಚಾರಿಗಳ ಒಂದು ಉಡಾಫೆ ಎರಡೂ ಸೇರಿ ಸಾವುಗಳು
ಸಂಭವಿಸಿ ಮನೆಹಾಳಾಗುತ್ತದೆ. ಇಲ್ಲಿ ದ್ವಿಚಕ್ರವಾಹನಗಳ ಅಪಘಾತ ಹೆಚ್ಚಾಗಲು ಪ್ರಮುಖ ಕಾರಣ, ನಮ್ಮ ಸಮಾಜದಲ್ಲಿ ಇನ್ನೂ
ಕಾಲೇಜೇ ಕಾಣದ ಮುದ್ದಿನ ಮಕ್ಕಳಿಗೆ ಯಮವೇಗವಾಗಿ ಚಲಿಸುವ ಲಕ್ಷಾಂತರ ರುಪಾಯಿಗಳ ದುಬಾರಿ ಬೈಕ್ ಗಳನ್ನು ಕೊಡಿಸಿಬಿಡುವುದು. ಇಂಥ ಬೈಕ್‌ಗಳ ಬ್ರಾಂಡ್ ಗಳು ಖ್ಯಾತಗೊಂಡಿರುವುದರಿಂದ ಯುವಕರು ವಿದ್ಯಾರ್ಥಿಗಳು ಇಂಥವಕ್ಕೇ ಹಾತೊರೆದು ಪೋಷಕರನ್ನು ಪೀಡಿಸಿ ಖರೀದಿಸುತ್ತಾರೆ.
ಅಸಲಿಗೆ ಇಂಥ ಯಮವೇಗದ ಬೈಕ್‌ಗಳು ನಮ್ಮ ಬೆಂಗಳೂರಿನಂಥ ನಗರ ಪ್ರದೇಶದ ರಸ್ತೆಗಳಲ್ಲಿ ಚಲಿಸಲು ಯೋಗ್ಯವೇ ಅಲ್ಲ. ಬರಿಯ ಶೋಕಿಗಾಗಿ ತೋರಿಕೆಗಾಗಿ ಇಂಥ ಬೈಕನ್ನು ಏರುವ ಯುವಕರು ಮೊದಲು ಸುರಕ್ಷತೆಗಾಗಿ ಇರುವ ಎರಡೂ ಕನ್ನಡಿಗಳನ್ನು ತೆಗೆದು ಬಿಸಾಡುತ್ತಾರೆ. ಅಗತ್ಯವಿಲ್ಲದಿದ್ದರೂ ಅತಿವೇಗ ವಾಗಿ ಚಲಿಸಿ ವಿಕೃತ ಆನಂದ ಪಡೆಯುತ್ತಾರೆ. ಹೀಗೆ ಅಗತ್ಯಕ್ಕಿಂತ ಹೆಚ್ಚು
ಸಂಪಾದನೆಯುಳ್ಳ ಪೋಷಕರೇ ಹೀಗೆ ಮಕ್ಕಳಿಗೆ ಪೈಶಾಚಿಕ ಬೈಕ್‌ಗಳನ್ನು ಕೊಡಿಸಿ, ಅಷ್ಟೇ ಪ್ರೀತಿಯಿಂದ ಚಾಲನಾ ಪರವಾನಗಿ ಯನ್ನೂ ಕೊಡಿಸದೇ ರಸ್ತೆಗೆ ಬಿಟ್ಟು ಮಕ್ಕಳ ಮತ್ತು ಅಮಾಯಕ ಮೂರನೇ ವ್ಯಕ್ತಿಯ ಸಾವಿಗೆ ಕಾರಣರಾಗುತ್ತಾರೆ.
ಸರಕಾರ ಸಂಚಾರಿ ನಿಯಮಗಳನ್ನು ಜಾರಿಗೆ ತರುವುದೊಂದೇ ದೊಡ್ಡದಲ್ಲ. ವಾಹನ ಚಲಿಸುವವರ ಮನೆಯಲ್ಲಿನ ಪೋಷಕರು, ಹೆಂಡತಿ ಮಕ್ಕಳೂ ತಮ್ಮವರಿಗೆ ಸುರಕ್ಷತೆಯ ಸಂಚಾರಿ ನಿಯಮಗಳ ಪಾಲನೆಯ ಕುರಿತು ದಂಬಾಲು ಬೀಳಬೇಕು, ಎಚ್ಚರಿಸಬೇಕು, ಆಗ್ರಹಿಸಬೇಕು. ವಾಹನ ಚಾಲಕರೂ ನಿರ್ಲಕ್ಷ ಬಿಟ್ಟು ಸುರಕ್ಷಿತ ಕ್ರಮಗಳೊಂದಿಗೆ ಬದುಕಿ ಬಾಳಬೇಕು. ಅದಕ್ಕಾಗಿ ಸಂಚಾರಿ ವಿಜತ್‌ರಂಥ ಮುಗ್ಧ, ಮುದ್ದಾದ ನಟನ ಸಾವು ನಮಗೆ ಎಚ್ಚರಿಕೆಯ ದುಷ್ಟಾಂತವಾಗಬೇಕೆಂದು ಕಾಯಬೇಕಿಲ್ಲ. ಏಕೆಂದರೆ
ರಾಷ್ಟ್ರಪ್ರಶಸ್ತಿ ಪಡೆದಿದ್ದರೂ ವಿಧಿಯು ಯಾವ ರಿಯಾಯಿತಿಯೂ ನೀಡುವುದಿಲ್ಲ.
ಕೊನೆಯದಾಗಿ ಈಗಲೂ ಅನಿಸುವುದೇನೆಂದರೆ ಶಂಕರನಾಗ್ ಅವರು ಅಂದು ತಮ್ಮ ಕಾರಿನ ವೇಗವನ್ನು ತಗ್ಗಿಸಿಕೊಂಡಿದ್ದರೆ, ಸಂಚಾರಿ ವಿಜಯ್ ತನ್ನ ಸ್ನೇಹಿತನ ಬೈಕ್ ಏರುವ ಮೊದಲು ಏ ಇರಪ್ಪ, ನಾನು ಹೆಲ್ಮೆಟ್ ಹಾಕಿಕೊಳ್ಳುತ್ತೇನೆ.. ಎಂದು ತೀರ್ಮಾನಿಸಿದ್ದರೆ, ಕನ್ನಡಕ್ಕೆ ಇಬ್ಬರು ಅದ್ಭುತ ಕಲಾವಿದರು ಏನೆ ಸಾಧನೆ ಮಾಡುತ್ತಿದ್ದರು.