ಅಶ್ವತ್ಥಕಟ್ಟೆ
ranjith.hoskere@gmail.com
ಕರ್ನಾಟಕದಲ್ಲೀಗ ಚುನಾವಣೆಯ ಕಾವು ಮುಗಿದು, ಭಾರಿ ಗೆಲುವಿನ ಉತ್ಸಾಹದಲ್ಲಿ ಕಾಂಗ್ರೆಸ್‌ಯಿದ್ದರೆ ಸೋತು ಸುಣ್ಣವಾಗಿ ರುವ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿ ಕೂತು ಎಡವಿದ್ದು ಎಲ್ಲಿ ಎನ್ನುವ ಆಲೋಚನೆಯಲ್ಲಿದೆ. 12 ಹಾಲಿ ಸಚಿವರೂ ಸೇರಿದಂತೆ 38 ಸ್ಥಾನಗಳನ್ನು ಕಳೆದುಕೊಂಡು ದೊಡ್ಡ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿರುವ ಬಿಜೆಪಿಯಲ್ಲೀಗ ‘ಆತ್ಮ ವಿಮರ್ಶೆ’ ಪರ್ವ ಆರಂಭವಾಗಿದೆ. ಗೆಲುವಿಗೆ ನೂರಾರು ಅಪ್ಪಂದಿರು ಸಿಗುತ್ತಾರೆ. ಆದರೆ ಸೋಲಿನ ಹೊಣೆಗಾರಿಕೆಯನ್ನು ಹೋರಲು ಯಾರೊ ಬ್ಬರೂ ಇರುವುದಿಲ್ಲ. ಇದೀಗ ಬಿಜೆಪಿಯಲ್ಲಿಯೂ ಅದೇ ಕೆಲಸ ವಾಗುತ್ತಿದೆ. ಸೋಲಿನ ಹೊಣೆಯನ್ನು ನೈತಿಕವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಸವರಾಜ ಬೊಮ್ಮಾಯಿ ಹೊತ್ತಿದ್ದರೂ, ಈ ಸೋಲು ಕೇವಲ ರಾಜ್ಯ ನಾಯಕರಿಂದ ಮಾತ್ರವಾಗಿಲ್ಲ ಎನ್ನುವುದು ಸ್ಪಷ್ಟ.
ಈ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ನಾಯಕರಗಿಂತ ಹೆಚ್ಚಾಗಿ ದೆಹಲಿ ಕೇಂದ್ರ ಕಚೇರಿಯಿಂದಲೇ ಎಲ್ಲ ತೀರ್ಮಾನಗಳು ಆಗುತ್ತಿದ್ದವು. ಯಾವ ಟ್ವೀಟ್ ಯಾರ ಮಾಡಬೇಕು ಎನ್ನುವುದರಿಂದ ಹಿಡಿದು ಯಾರಿಗೆ ಟಿಕೆಟ್ ಎನ್ನುವ ತನಕ ದೆಹಲಿ ನಾಯಕರೇ ತೀರ್ಮಾನಿಸು ತ್ತಿದ್ದರು ಎಂದರೆ ಅಚ್ಚರಿಯಾಗಬಹುದು. ಆದರೆ ಅದೇ ಸತ್ಯ.
ಹಾಗೇ ನೋಡಿದರೆ, ಬಿಜೆಪಿ ಮತ್ತೊಮ್ಮೆ ಸ್ವಾತಂತ್ರ್ಯವಾಗಿ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸ ಪಕ್ಷದ ವರಿಷ್ಠರಿಗೆ
ಬಿಟ್ಟರೆ ಸ್ವತಃ ಬಸವರಾಜ ಬೊಮ್ಮಾಯಿ ಅವರಿಗೂ ಇರಲಿಲ್ಲ. ಚುನಾವಣಾ ಮೂಡ್ ನೋಡಿದರೆ, ಕರ್ನಾಟಕದಲ್ಲಿ ಮತ್ತೊಂದು ಅತಂತ್ರ ಸ್ಥಿತಿ ಎನ್ನುವುದೇ ಬಹುತೇಕರ ತೀರ್ಮಾನವಾಗಿತ್ತು. ಕೇವಲ ಬಿಜೆಪಿ ನಾಯಕರಲ್ಲ, ಸ್ವತಃ ಕಾಂಗ್ರೆಸಿಗರು ಅತಂತ್ರ ಇಲ್ಲವೇ, ಸರಳ ಬಹುಮತದ ಸರಕಾರದ ಲೆಕ್ಕಾಚಾರದಲ್ಲಿದ್ದರು. ಆದರೆ ಬಿಜೆಪಿಯ ಎಡವಟ್ಟು ಹಾಗೂ ಕಾಂಗ್ರೆಸ್‌ನ ಗ್ಯಾರಂಟಿ ಗಳ ಫಲವಾಗಿ ಯಾರೂ ಊಹಿಸದ ಫಲಿತಾಂಶವನ್ನು ಕಾಂಗ್ರೆಸ್‌ಗೆ ರಾಜ್ಯದ ಜನ ‘ದಯ ಪಾಲಿಸಿದರು’.
135 ಸೀಟುಗಳೊಂದಿಗೆ ಅಧಿಕಾರಕ್ಕೆ ಕಾಂಗ್ರೆಸ್ ಏರಿದರೆ, ಕಳೆದ ಬಾರಿಗೆ ಹೋಲಿಸಿದರೆ 38 ಸೀಟುಗಳನ್ನು ಕಳೆದುಕೊಂಡು ಬಿಜೆಪಿ 66ಕ್ಕೆ ಕುಸಿದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕಳೆದೊಂದು ವರ್ಷದಿಂದ ಕರ್ನಾಟಕದಲ್ಲಿ ದ್ದರು, ಚುನಾವಣೆಗೆ ೧೦ ದಿನಗಳಿರುವಾಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಬ್ಬರ ರೋಡ್ ಶೋಗಳಲ್ಲಿ ಭಾಗವಹಿಸಿದ್ದ ಜನರನ್ನು ಕಂಡು, ಕೊನೆ ಕ್ಷಣದಲ್ಲಿ ಗುಜರಾತ್ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ಬಿಜೆಪಿ ಪರ ‘ವೇವ್’ ಏಳಬಹುದು ಎನ್ನುವ ಲೆಕ್ಕಾಚಾರ ವನ್ನು ಅನೇಕರು ಹಾಕಿಕೊಂಡಿದ್ದರು.
ರಾಜ್ಯದ ಮತದಾರ ಮೋದಿ, ಶಾ, ಯೋಗಿ ರೋಡ್ ಶೋ ಅನ್ನು ‘ಎಂಜಾಯ್’ ಮಾಡಿದನೇ ಹೊರತು, ಅದು ‘ಮತ’ವಾಗಿ ಪರಿವರ್ತನೆಯಾಗಿಲ್ಲ ಎನ್ನುವುದು ಸ್ಪಷ್ಟ. ಇಲ್ಲಿ ಇನ್ನೊಂದು ಗಮನಿಸಬೇಕಿರುವ ಅಂಶವೇನೆಂದರೆ, ಈ ಚುನಾವಣೆಯಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತಗಳು ಎಲ್ಲಿಯೂ ಡೈವರ್ಟ್ ಆಗಿಲ್ಲ. 2018ರ ಚುನಾವಣೆಗೆ ಹೋಲಿಸಿದರೆ, 2018ರಲ್ಲಿ ಶೇ.36.35ಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 36 ಪರ್ಸೆಂಟ್‌ಗೆ ಇಳಿದಿದೆ. ಅಂತರ ಕೇವಲ ಶೇ.0.35ರಷ್ಟು ಮತಗಳು ಮಾತ್ರ
ಬಿಜೆಪಿಯಿಂದ ಹೊರಹೋಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಗಿರುವ ಹೆಚ್ಚುವರಿ ಮತದಾನದಲ್ಲಿ
ಷೇರನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿಲ್ಲ. ಮತದಾನ ಹೆಚ್ಚಾದಷ್ಟು ಬಿಜೆಪ ಲಾಭ ಎನ್ನುವ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ, ಹೆಚ್ಚುವರಿ ಮತದಾನದ ಲಾಭವನ್ನು ಪಡೆದಿದ್ದು ಕಾಂಗ್ರೆಸ್. ಕಳೆದ ಚುನಾವಣೆಗಿಂತ ಶೇ.4.74
ರಷ್ಟು ಹೆಚ್ಚುವರಿ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದರರ್ಥ, ಈ ಬಾರಿ ಹೊಸ ಮತದಾರರು, ಮೊದಲ ಬಾರಿಗೆ ಮತದಾನ ಮಾಡಲು ಮುಂದಾದವರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿಲ್ಲ ಎನ್ನುವುದು ಸ್ಪಷ್ಟ.
ಹಾಗಾದರೆ, ಬಿಜೆಪಿ ಎಡವಿದ್ದು ಎನ್ನುವುದು ಬಹುಮುಖ್ಯವಾಗಿ ಕಾಡುತ್ತಿರುವ ಪ್ರಶ್ನೆ. ಕೆಲವರು ಭ್ರಷ್ಟಾಚಾರ ಆಡಳಿತ
ಎನ್ನುವ ಆರೋಪ ಮಾಡಿದರೆ, ಇನ್ನು ಕೆಲವರು ಅಸಮರ್ಥವಾಗಿದ್ದ ರಾಜ್ಯ ನಾಯಕತ್ವ ಎನ್ನುವ ಟೀಕೆ ಮಾಡುತ್ತಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಚುನಾವಣೆಗೆ ಮೊದಲೇ ನೀಡಿದ ಗ್ಯಾರಂಟಿಗಳಿಗೆ ಠಕ್ಕರ್ ಕೊಡಲು ಬಿಜೆಪಿಯ ಬಳಿ ಅಸಗಳನ್ನೇ ಸಿದ್ಧಪಡಿಸಿಕೊಳ್ಳಲಿಲ್ಲ. ಮತದಾನಕ್ಕೆ ನಾಲ್ಕು ದಿನ ಮೊದಲು ಪ್ರಣಾಳಿಕೆ ಬಿಡುಗಡೆ ಮಾಡಿದರು, ಅದು ಜನರನ್ನು ತಮ್ಮತ್ತ ಸೆಳೆಯುವುದಕ್ಕೆ ಸಾಧ್ಯವಾಗಲಿಲ್ಲ ಎನ್ನುವುದು ಮತ್ತೊಂದಿಷ್ಟು ಜನರ ಅಭಿಪ್ರಾಯ.
ಆದರೆ ಈ ಎಲ್ಲದರೊಂದಿಗೆ ಬಿಜೆಪಿಯ ಹಿನ್ನಡೆಗೆ ಮತ್ತೊಂದು ಕಾರಣವೆಂದರೆ, ಕಾಂಗ್ರೆಸ್ ವರ್ಷದ ಹಿಂದೆ ಚುನಾವಣಾ ಸಿದ್ಧತೆ ಆರಂಭಿಸಿಕೊಂಡರೆ ಬಿಜೆಪಿಯಲ್ಲಿ ‘ಮೋದಿ, ಶಾ ಬರುತ್ತಾರೆ. ಗೆಲ್ಲಿಸಿಕೊಂಡು ಹೋಗುತ್ತಾರೆ. ಅವರು ಹೇಳಿದಷ್ಟು ಮಾಡಿದರೆ ಸಾಕು’ ಎನ್ನುವ ಮನಸ್ಥಿತಿಗೆ ಬಹುತೇಕ ನಾಯಕರು ಬಂದರು. ಈ ರೀತಿಯ ನಡೆಯಿಂದ ರಾಜ್ಯದ ಜನರಿಗೆ ಕೊನೆಯವರೆಗೆ ರಾಜ್ಯ ಬಿಜೆಪಿ ನಾಯಕರವರೆಗೆ ‘ವಿಶ್ವಾಸ’ವೇ ಹುಟ್ಟಲಿಲ್ಲ.
ಇನ್ನು ಟಿಕೆಟ್ ಹಂಚಿಕೆ ವಿಷಯದಲ್ಲಿ ಮಾಡಿಕೊಂಡಿದ್ದ ಎಡವಟ್ಟುಗಳು ಬಿಜೆಪಿಗೆ ನೆಗೆಟಿವ್ ಆಗುವುದರೊಂದಿಗೆ ಕಾಂಗ್ರೆಸ್‌ಗೆ ಬಹುದೊಡ್ಡ ಪಾಸಿಟಿವ್ ಆಯಿತು. ಸುಲಭವಾಗಿ ಗೆದ್ದುಕೊಂಡು ಬರುವ ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ತಪ್ಪಿಸಿ, ಹೊಸಬವರಿಗೆ ಅವಕಾಶ ನೀಡಿದರು. ಆದರೆ ಇದೇ ಫಾರ್ಮುಲವನ್ನು 75 ವರ್ಷದ ದಾಟಿದ್ದ ತಿಪ್ಪಾರೆಡ್ಡಿಯವರ ಮೇಲಾಗಲಿ, ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗಾಗಲಿ, 73 ವರ್ಷ ದಾಟಿದ ಗೋವಿಂದ ಕಾರಜೋಳ ಅವರಿಗಾಗಲಿ ಅನ್ವಯ ಮಾಡಲಿಲ್ಲ.
ಆದ್ದರಿಂದ ಸುಲಭವಾಗಿ ಗೆಲ್ಲುವ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟರು. ಈ ಎಲ್ಲ ತೀರ್ಮಾನಗಳು ತಪ್ಪು ಎನ್ನುವ ಸ್ಪಷ್ಟ ಅರಿವು ರಾಜ್ಯ ಬಿಜೆಪಿ ನಾಯಕರಿತ್ತು. ಆದರೆ ಅದನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಮುಂದಾ ಗಲಿ, ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಎದುರಾಗಲಿ ಮಾತನಾಡುವ ‘ಶಕ್ತಿ’ ರಾಜ್ಯ ಬಿಜೆಪಿ ನಾಯಕರ ಬಳಿಯಿರಲಿಲ್ಲ.
ಕರ್ನಾಟಕ ಗುಜರಾತ್ ಅಲ್ಲ, ಇಲ್ಲಿಯ ರಾಜಕೀಯ ವ್ಯವಸ್ಥೆಯೇ ಬೇರೆ ಎನ್ನುವ ಮಾತನ್ನು ವರಿಷ್ಠರ ಮುಂದೆ ಹೇಳುವ ಧೈರ್ಯ ಬಿಜೆಪಿ ನಾಯಕರಿಗೆ ಕೊನೆಯವರೆಗೂ ಬರಲೇ ಇಲ್ಲ. ಯಡಿಯೂರಪ್ಪ ಅವರು ಈ ಮಾತನ್ನು ಹೇಳಬಹುದಾಗಿತ್ತು. ಆದರೆ ಅವರಿಗೆ ‘ಕೊಟ್ಟ ಕೆಲಸ ಮಾಡಿ ಸಾಕು’ ಎನ್ನುವ ರೀತಿಯಲ್ಲಿ ವರಿಷ್ಠರು ನಡೆದುಕೊಂಡಿದ್ದರಿಂದ ಅವರು ಆಗೋದೆಲ್ಲ ಆಗಲಿ ಎನ್ನುವ ಮನಸ್ಥಿತಿಯಲ್ಲಿ ಹಾಗೂ ಶಿಕಾರಿಪುರದಿಂದ ವಿಜಯೇಂದ್ರ ಗೆಲ್ಲಿಸಿಕೊಂಡು ಬಂದರೆ ಸಾಕು ಎನ್ನುವ ರೀತಿಯಲ್ಲಿದ್ದರು.
ಈ ಎಲ್ಲದರ ನಡುವೆ ಚುನಾವಣೆಯಲ್ಲಿ ಈ ಬಾರಿ ಬಹುದೊಡ್ಡ ಕೊರತೆಯಾಗಿ ಎದ್ದು ಕಾಣಿಸಿದ್ದು ‘ನಾಯಕತ್ವ’ದ ಸಮಸ್ಯೆ. ಕೇಂದ್ರ ನಾಯಕರು ಹೇಳಿದ್ದನ್ನು ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿದ್ದರು. ಆದರೆ ರಾಜ್ಯದ ಪರಿಸ್ಥಿತಿಯನ್ನು ಕೇಂದ್ರ ನಾಯಕರಿಗೆ ವಿವರಿಸಲು, ಅವರು ಹೇಳಿದ್ದನ್ನು ಮೀರಿ, ಕರ್ನಾಟಕದಲ್ಲಿ ಆಗಬೇಕಾದ, ಸಂಘಟನೆಯಲ್ಲಿ ಮಾಡಬೇಕಿರುವ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಕೆಲ ಯುವಕರು ಮುಂದಾದರೂ, ಅವರಿಗೆ ಅವಕಾಶ ನೀಡಲಿಲ್ಲ. ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ಬಿಜೆಪಿಯಲ್ಲಿ
ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರಂತ ನಾಯಕರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಕೇವಲ ಸಮೀಕ್ಷೆ, ವರದಿಗಳನ್ನು ಮುಂದಿಟ್ಟುಕೊಂಡು ಮುಂದಿಟ್ಟುಕೊಂಡು ಚುನಾವಣಾ ತಯಾರಿಯನ್ನು ವರಿಷ್ಠರು ಮಾಡಿಕೊಂಡರು. ಆದರೆ ಬಿಜೆಪಿಯ ‘ಕರ್ನಾಟಕದ ಫೇಸ್’ ಆಗಿ ತೋರಿಸುವಲ್ಲಿ ಎರಡನೇ ಹಂತದ ನಾಯಕರನ್ನೇ ಸಿದ್ಧಪಡಿಸಿಕೊಳ್ಳಲಿಲ್ಲ.
ಈ ಎಲ್ಲ ಕಾರಣಗಳೊಂದಿಗೆ ಇನ್ನು ಹತ್ತು ಹಲವು ಕಾರಣಗಳಿಂದ ಬಿಜೆಪಿ ಕರ್ನಾಟಕದಲ್ಲಿ ಸೋತಿದೆ. ಇದೀಗ ಎಲ್ಲೆಡೆ ಸೋಲಿನ ಪರಾಮರ್ಶೆ ಸಭೆಗಳು ಬಹುದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿವೆ. ನಾಯಕರುಗಳು ಸೋಲಿಗೆ ಹತ್ತಾರು ಕಾರಣಗಳನ್ನು ನೀಡಬಹುದು. ಆದರೆ ಈ ಮೇಲೆ ಹೇಳಿದ ನ್ಯೂನತೆಗಳನ್ನು ಈಗಲೇ ಸರಿಪಡಿಸಿಕೊಳ್ಳದಿದ್ದರೆ, ಇನ್ನೆಷ್ಟೇ ಪರಾಮರ್ಶೆ ಸಭೆ ನಡೆಸಿದರೂ, ಅದು ‘ಹೊಳೆಯಲ್ಲಿ ಹುಣಸೆ ತೊಳೆದಂತಾಗುತ್ತದೆ.’ ಆದ್ದರಿಂದ ಇನ್ನಾದರೂ ಬಿಜೆಪಿ ನಾಯಕರು ಎಚ್ಚೆತ್ತುಕೊಂಡು ಎರಡನೇ ಹಂತದ ನಾಯಕತ್ವವನ್ನು ಈಗಿನಿಂದಲೇ ಸಿದ್ಧಪಡಿಸಿಕೊಳ್ಳಬೇಕಿದೆ.
ಈಗಾಗಲೇ ಸೋಲಿನ ಕಹಿ ಮರೆತು ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆ ಸಿದ್ಧತೆ ಆರಂಭಿಸಲು ಬಿಜೆಪಿ ಸಜ್ಜಾಗಿದೆ. ಆದರೆ ಲೋಕಸಭಾ ಚುನಾವಣೆಯಲ್ಲಿ ‘ಸಾಧನೆ’ ಮಾಡುವುದೇನು ಕಷ್ಟದ ವಿಷಯವಲ್ಲ ಎನ್ನುವುದು ಸ್ಪಷ್ಟ. ಲೋಕಸಭಾ ಚುನಾವಣೆ ಮೋದಿ ನಾಯಕತ್ವದ ಹೆಸರಿನಲ್ಲಿ ನಡೆಯುವುದರಿಂದ ಸುಲಭವಾಗಿ ಗೆಲುವು ಸಾಧಿಸಬಹುದು. ಆದ್ದರಿಂದ ಲೋಕಸಭಾ ಚುನಾವಣೆಗಿಂತ ಮುಂದಿನ ಐದು ವರ್ಷದ ಬಳಿಕ ಎದುರಾಗುವ ಚುನಾವಣೆ ಪಕ್ಷದ ರಾಜ್ಯ
ನಾಯಕತ್ವವನ್ನು ಸಿದ್ಧಪಡಿಸಿಕೊಳ್ಳಬೇಕು ಎನ್ನುವುದು ಬಿಜೆಪಿಯ ಮೂಲ ಉದ್ದೇಶವಾಗಿರಬೇಕು.
ಇಷ್ಟು ದಿನ ಎರಡನೇ ಹಂತ ನಾಯಕತ್ವವನ್ನು ಬೆಳೆಸುವ ಆಲೋಚನೆಯನ್ನೇ ಮಾಡದ ನಾಯಕರು, ಇನ್ನಾದರೂ ಯುವ
ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರತವಾಗ ಬೇಕಿದೆ. ಇದರೊಂದಿಗೆ ಮೋದಿ, ಅಮಿತ್ ಶಾ ಅವರನ್ನೇ ನೆಚ್ಚಿ ಕೊಂಡು ಕೂರುವ ಬದಲು, ರಾಜ್ಯದಲ್ಲಿ ರಾಜ್ಯ ನಾಯಕರ ಫೇಸ್ ಅನ್ನೇ ಉತ್ತಮಗೊಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆಗಳು ನಡೆಯಬೇಕಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಕೊಡುವ ರಾಜ್ಯವೇನಾದರೂ ಇದ್ದರೆ ಅದು ಕರ್ನಾಟಕದಲ್ಲಿಯೇ ಎನ್ನುವುದು ಸ್ಪಷ್ಟ. ಇನ್ನುಳಿದ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ನೆಪಮಾತ್ರಕ್ಕಿದ್ದು ಪ್ರಾದೇಶಿಕ ಪಕ್ಷಗಳೇ ಅಧಿಪತ್ಯ ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಈ ಬಾರಿ ಹೀನಾಯವಾಗಿ ಬಿಜೆಪಿ ಸೋಲನುಭವಿಸಿದ್ದರೂ, 2028 ವಿಧಾನ ಸಭಾ ಚುನಾವಣೆಗಾದರೂ ಈಗಾಗಿರುವ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲು ಬಿಜೆಪಿಗಿದು ಸೂಕ್ತ ಕಾಲ.