Sunday, 15th December 2024

ಮಲೇರಿಯ ರೋಗಜನಕ ಪತ್ತೆಹಚ್ಚಿದ ಲ್ಯಾವೆರನ್‌

ಹಿಂದಿರುಗಿ ನೋಡಿದಾಗ

ಮಲೇರಿಯಕ್ಕೆ ಕಾರಣ ಪ್ಲಾಸ್ಮೋಡಿಯಂ ಎಂಬ ಆದಿಜೀವಿ. ಇದು ತನ್ನ ಜೀವನಚಕ್ರವನ್ನು ಸೊಳ್ಳೆ ಮತ್ತು ಮನುಷ್ಯರಲ್ಲಿ ಪೂರೈಸುತ್ತದೆ. ಲೈಂಗಿಕ ವರ್ಧನೆಯು ಸೊಳ್ಳೆಗಳಲ್ಲಿ ನಡೆದರೆ, ಅಲೈಂಗಿಕ ವರ್ಧನೆಯು ಮನುಷ್ಯರ ಒಡಲಿನಲ್ಲಿ ನಡೆಯುತ್ತದೆ. ಈ ಎರಡು ಘಟ್ಟಗಳಲ್ಲಿ ಸುಮಾರು ೧೦ಕ್ಕಿಂತಲೂ ಹೆಚ್ಚಿನ ಹಂತಗಳು ಇವೆಯಾದರೂ, ಮುಖ್ಯ ಮೂರು ಘಟ್ಟಗಳನ್ನು ತಿಳಿದುಕೊಳ್ಳುವುದು ಸೂಕ್ತ.

-ಸೊಳ್ಳೆಯು ಮನುಷ್ಯನ ರಕ್ತ ಹೀರುವಾಗ, ರಕ್ತದ ಜತೆಯಲ್ಲಿ ಪ್ಲಾಸ್ಮೋಡಿಯಮ್ಮಿನ ಸ್ತ್ರೀ-ಲಿಂಗಾಣು (ಮ್ಯಾಕ್ರೋಗ್ಯಾಮಿಟೋಸೈಟ್) ಹಾಗೂ ಪುಂ-ಲಿಂಗಾಣುಗಳು (ಮೈಕ್ರೋಗ್ಯಾಮಿಟೋಸೈಟ್) ಸೊಳ್ಳೆಯ ಒಡಲನ್ನು ಸೇರುತ್ತವೆ. ಸೊಳ್ಳೆಯ ಕರುಳಿನಲ್ಲಿ ಸ್ತ್ರೀ-ಪುಂ ಲಿಂಗಾಣುಗಳ  ಮಿಲನವಾಗು ತ್ತವೆ. ೧೫-೧೮ ದಿನಗಳಾದ ನಂತರ ಎಳೆಜೀವಿಗಳು (ಸ್ಪೋರೋಜ಼ೋವನ್ಸ್) ರೂಪುಗೊಳ್ಳು ತ್ತವೆ.

-ಎಳೆಜೀವಿಗಳು ಸೊಳ್ಳೆಯ ಜೊಲ್ಲುಗ್ರಂಥಿಗಳಲ್ಲಿ ಬೀಡು ಬಿಡುತ್ತವೆ. ಸೊಳ್ಳೆಯು ಆರೋಗ್ಯ ವಂತರನ್ನು ಕಚ್ಚಿದಾಗ, ಅದರ ಜೊಲ್ಲಿನೊಡನೆ ಆರೋಗ್ಯ ವಂತರ ಶರೀರವನ್ನು ಸೇರುತ್ತದೆ. ರಕ್ತಪ್ರವಾಹದ ಮೂಲಕ ಯಕೃತ್ತನ್ನು ಸೇರುತ್ತವೆ. ವರ್ಧಿಸುತ್ತವೆ. ಸ್ಫೋಟವಾಗುತ್ತವೆ. ಮಧ್ಯಮ ಜೀವಿ ಗಳು (ಮೀರೋಜ಼ೂಯಿಟ್ಸ್) ಹೊರಬರುತ್ತವೆ.

-ರಕ್ತಪ್ರವಾಹದಲ್ಲಿ ಬೆರೆತು, ಕೆಂಪು ರಕ್ತ ಕಣಗಳನ್ನು ಹುಡುಕಿಕೊಂಡು ಹೋಗಿ, ಅವುಗಳ ಒಡಲಿನೊಳಗೆ ನುಗ್ಗುತ್ತವೆ. ವಽಸುತ್ತವೆ. ಕೆಂಪು ರಕ್ತ ಕಣಗಳನ್ನು ಸ್ಫೋಟಿಸುತ್ತವೆ. ಮತ್ತಷ್ಟು ಮಧ್ಯಮ ಜೀವಿಗಳು ಹೊರಬಂದು, ಉಳಿದ ಕೆಂಪುರಕ್ತ ಕಣಗಳನ್ನು ಹುಡುಕಿಕೊಂಡು ಹೋಗುತ್ತವೆ. ಕೆಲವು ಮಧ್ಯಮಜೀವಿಗಳು ಸ್ತ್ರೀ-ಪುಂ-ಲಿಂಗಾಣುಗಳಾಗಿ ಪರಿವರ್ತನೆಯಾಗಿ, ರಕ್ತಪ್ರವಾಹದ ಮೇಲ್ಪದರಲ್ಲಿ ತೇಲುತ್ತಿರುತ್ತವೆ.

ಸೊಳ್ಳೆಯು ರಕ್ತವನ್ನು ಹೀರುವಾಗ ಇವು ರಕ್ತದ ಜೊತೆಯಲ್ಲಿ ಸೊಳ್ಳೆಯ ಒಡಲನ್ನು ಪ್ರವೇಶಿಸುತ್ತವೆ. ಹೀಗೆ ಜೀವನಚಕ್ರವು ಮುಂದುವರೆಯುತ್ತದೆ.
ಇದು ಗೊತ್ತಾಗಲು ಶತಮಾನಕ್ಕಿಂತಲೂ ಹೆಚ್ಚು ಸಮಯ ಬೇಕಾಯಿತು. ಹಾಗೆ ಗೊತ್ತಾಗಿದ್ದೇ ವಿಶ್ವದ ವಾಣಿಜ್ಯ ಸ್ವರೂಪ, ಸೇನೆಗಳ ಖಂಡಾಂತರ ಸಾಗಣೆ ಹಾಗೂ ವಸಾಹತುಶಾಹಿಯ ಬೆಳವಣಿಗೆಯನ್ನು ನಿರ್ಧರಿಸಿತು ಎಂದರೆ ಆಶ್ಚರ್ಯವಾಗುತ್ತದೆ.

ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೋಕ್ರೇಟಸ್ (ಕ್ರಿ.ಪೂ.೪೬೦- ಕ್ರಿ.ಪೂ.೩೭೦) ಜೌಗುಪ್ರದೇಶದಲ್ಲಿ ಹುಟ್ಟಿ ಎಲ್ಲೆಡೆ ಹರಡುವ ವಿಷಗಾಳಿ ಮಿಯಾಸ್ಮದಿಂದ ಮಲೇರಿಯವು ಬರುತ್ತದೆ ಎಂದ. ಇದರ ಆಧಾರದ ಮೇಲೆ ಇಟಾಲಿಯನ್ನರು ಮಾಲ್ =ಕೆಟ್ಟ + ಏರಿಯ=ಗಾಳಿ = ಮಲೇರಿಯ ಎಂಬ ಹೆಸರನ್ನು
ಬಳಕೆಗೆ ತಂದರು. ಈ ವೇಳೆಗೆ ಲೂಯಿ ಪ್ಯಾಶ್ಚರ್ (೧೮೨೨-೧೮೯೫) ರೋಗಾಣು ಸಿದ್ಧಾಂತವನ್ನು (ಜರ್ಮ್ ಥಿಯರಿ) ಮಂಡಿಸಿ ಜನಪ್ರಿಯನಾಗಿದ್ದ. ನಮ್ಮ ಬರಿಗಣ್ಣಿಗೆ ಕಾಣದ, ರೋಗಜನಕಗಳೆಂಬ ಸೂಕ್ಷ್ಮಜೀವಿಗಳು, ನಾನಾ ಕಾಯಿಲೆಗಳನ್ನು ಉಂಟುಮಾಡುತ್ತವೆ ಎನ್ನುವುದು ಈ ಸಿದ್ಧಾಂತದ ತಿರುಳು. ಈ ಹಿನ್ನೆಲೆಯಲ್ಲಿ ಮಲೇರಿಯಕ್ಕೂ ಸೂಕ್ಷ್ಮಜೀವಿಯೇ ಕಾರಣವಾಗಿರಬಹುದು ಎಂಬ ಪರಿಕಲ್ಪನೆಗೆ ಇಂಬು ದೊರೆಯಿತು.

ಪ್ರಖ್ಯಾತ ಅಂಗರಚನ ವಿಜ್ಞಾನಿ ಜಿಯೋವನ್ನಿ ಮಾರಿಯ ಲ್ಯಾನ್ಸೀಸಿ (೧೬೫೪-೧೭೨೦) ಮೂವರು ಪೋಪ್‌ಗಳಿಗೆ ಖಾಸಗೀ ವೈದ್ಯನಾಗಿದ್ದ. ೧೭೧೬ ರಲ್ಲಿ ಮಲೇರಿಯದಿಂದ ಮೃತರಾದವರ ಶರೀರ ವಿಚ್ಛೇದನ ನಡೆಸಿದ. ಅಲ್ಲರ ನಿರ್ದಿಷ್ಟ ಭಾಗಗಳಲ್ಲಿ ಕಪ್ಪು ಬಣ್ಣದ ವಸ್ತುವೊಂದು ಸಂಗ್ರಹ ವಾಗಿತ್ತು. ಇದನ್ನು ಆಧರಿಸಿ ಬಹುಶಃ ಸೊಳ್ಳೆಗಳು ಮಲೇರಿಯ ಹರಡುತ್ತಿದ್ದು, ಜೌಗುಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದ. ೧೮೪೯ರಲ್ಲಿ ರುಡಾಲ್ ವಿರ್ಚೋ (೧೮೨೧-೧೯೦೨) ಇಂಥ ಕಪ್ಪು ಬಣ್ಣದ ವಸ್ತುವು ಅವರ ರಕ್ತದಿಂದ ರೂಪುಗೊಂಡಿದೆಯೆಂದ.

ಇಟಲಿಯ ಕೊರಾಡೊ ತೊಮಾಸಿ ಕ್ರೂಡೆಲ್ (೧೮೮೫) ಮತ್ತು ಜರ್ಮನಿಯ ಸೂಕ್ಷ್ಮಜೀವಿ ವಿಜ್ಞಾನಿ ಥಿಯೋಡರ್ ಎಡ್ವಿನ್ ಕ್ಲೆಬ್ಸ್ (೧೮೩೪-೧೯೧೩) ರೋಮಿನ ಪಾಂಟೈನ್ ಜೌಗು ಪ್ರದೇಶದಿಂದ ಒಂದು ಬ್ಯಾಕ್ಟೀರಿಯವನ್ನು ಪ್ರತ್ಯೇಕಿಸಿ, ಅದೇ ಮಲೇರಿಯಕ್ಕೆ ಕಾರಣವೆಂದು ಅದಕ್ಕೆ ‘ಬ್ಯಾಸಿಲಸ್ ಮಲೇರಿಯೆ’ ಎಂದು ನಾಮಕರಣ ಮಾಡಿದರು. ಅದನ್ನು ಮೊಲಗಳ ಶರೀರಕ್ಕೆ ಚುಚ್ಚಿದರು. ಮೊಲಗಳಲ್ಲಿ ಜ್ವರ ಕಂಡುಬಂದು, ಅವುಗಳ ಗುಲ್ಮವು
ಊದಿಕೊಂಡಿತು. ಈ ಅಧ್ಯಯನವನ್ನು ಚಾರ್ಲ್ಸ್ ಲೂಯಿ ಆಲೋನ್ಸ್ ಲ್ಯಾವೆರನ್ (೧೮೪೫-೧೯೨೨) ಎಂಬ ಫ್ರೆಂಚ್ ಮಿಲಿಟರಿ ವೈದ್ಯ ಗಮನಿಸಿದ. ಇದರಿಂದ ಪ್ರೇರಿತನಾಗಿ ತನ್ನದೇ ಆದ ಅಧ್ಯಯನ ಕೈಗೊಂಡು ಮಲೇರಿಯಕ್ಕೆ ಕಾರಣವಾದ ನಿಜ ರೋಗಕಾರಕವನ್ನು ಪತ್ತೆಹಚ್ಚಿದ.

೧೮೭೮. ಫ್ರೆಂಚ್ ಸೇನಾಧಿಕಾರಿಗಳು ಲ್ಯಾವೆರನ್ ಅನ್ನು ಆಫ್ರಿಕ ಖಂಡದಲ್ಲಿರುವ ಆಲ್ಜೀರಿಯ ದೇಶದ ಆಲ್ಜೆರೀಸ್ ನಗರಕ್ಕೆ ವರ್ಗಾವಣೆ ಮಾಡಿದರು. ಅಲ್ಲಿದ್ದ ಮಿಲಿಟರಿ ಆಸ್ಪತ್ರೆಯಲ್ಲಿ ಅಸಂಖ್ಯ ಮಲೇರಿಯ ರೋಗಿಗಳಿದ್ದರು. ಲ್ಯಾವೆರನ್ ಮತ್ತೆ ಮಲೇರಿಯದಿಂದ ಮೃತರ ದೇಹ ಕೊಯ್ದು ಅಧ್ಯಯನ ಮಾಡಿದ. ಮೃತರ ರಕ್ತ, ಗುಲ್ಮ ಮತ್ತು ಇತರ ಅಂಗಗಳಲ್ಲಿ ಕಪ್ಪುಬಣ್ಣದ ವಸ್ತುವನ್ನು ಆತನೂ ಗಮನಿಸಿದ. ಇದು ಹೇಗಾಯಿತು ಎಂಬುದನ್ನು ಕಂಡು
ಹಿಡಿಯಲು ಉಪಾಯ ಹೂಡಿದ. ಮಲೇರಿಯ ಪೀಡಿತರ ರಕ್ತ ಸಂಗ್ರಹಿಸಿ, ಅದನ್ನು ಸೂಕ್ಷ್ಮದರ್ಶಕದಡಿಯಲ್ಲಿ ಅಧ್ಯಯನ ಮಾಡಿದ.

ಮೊದಲು ಬಿಳಿಯ ರಕ್ತಕಣಗಳಲ್ಲೂ ನಂತರ ಕೆಂಪು ರಕ್ತಕಣಗಳಲ್ಲೂ, ಅರ್ಧಾಚಂದ್ರಾಕೃತಿಯ ಅಥವ ದುಂಡನೆಯ ಕಾಯಗಳು ಕಂಡುಬಂದವು. ಅವುಗಳ ಒಳಗೆ ಕಪ್ಪು ಬಣ್ಣದ ಹರಳಿನಂತಹ ರಚನೆಗಳಿದ್ದವು. ೧೮೮೦, ಲ್ಯಾವೆರನ್ ತನ್ನ ಅಧ್ಯಯನವನ್ನು ಮುಂದುವರಿಸಿದ. ರೋಗಿಗಳ ರಕ್ತದಲ್ಲಿ, ಕಪ್ಪು ಬಣ್ಣದ ವಸ್ತುವನ್ನೊಳಗೊಂಡ ದುಂಡನೆಯ ಕಾಯಗಳು, ಕಶಾಂಗಗಳಂತಹ (-ಜೆಲ್ಲ) ರಚನೆಗಳ ನೆರವಿನಿಂದ ಚಲಿಸುತ್ತಿದ್ದುದನ್ನು ಗಮನಿಸಿದ.
ಕೊನೆಗೆ ಮಲೇರಿಯವಿದ್ದ ೨೦೦ ರೋಗಿಗಳ ರಕ್ತವನ್ನು ಸಂಗ್ರಹಿಸಿ ಅಧ್ಯಯನ ಮಾಡಿದ. ಈ ಪೈಕಿ ೧೪೮ ರೋಗಿಗಳ ರಕ್ತದಲ್ಲಿ ಈ ದುಂಡನೆ ಕಾಯಗಳು ಕಂಡುಬಂದವು.

ಕೆಂಪುರಕ್ತ ಕಣಗಳಲ್ಲಿ ಕಪ್ಪುಬಣ್ಣದ ವಸ್ತುವನ್ನು ಒಳಗೊಂಡಿದ್ದ ಕಾಯಗಳು ಬೆಳೆಯುತ್ತ ಬೆಳೆಯುತ್ತ ಒಂದು ಘಟ್ಟದಲ್ಲಿ ಕೆಂಪು ರಕ್ತ ಕಣಗಳನ್ನು ಸೋಟಿಸುತ್ತಿದ್ದವು. ಆಗ ಮಾತ್ರ ಜ್ವರವು ಥಟ್ಟನೆ ಏರುತ್ತಿತ್ತು! ಬಳಿಕ ಸಿಂಕೋನ ಮರದ ತೊಗಟೆಯಿಂದ ಪ್ರತ್ಯೇಕಿಸಿದ್ದ ಕ್ವಿನೈನ್ ಔಷಧವನ್ನು ಈ
ರೋಗಿಗಳಿಗೆ ನೀಡಿದ. ಕೂಡಲೇ ಕೆಂಪು ರಕ್ತ ಕಣಗಳಲ್ಲಿದ್ದ ಕಾಯಗಳು ಮಾಯವಾದವು! ವೈದ್ಯ ಇತಿಹಾಸದಲ್ಲಿ ಇದೊಂದು ‘ಯುರೇಕ’ ಘಳಿಗೆ. ಮನುಷ್ಯರ ದೇಹದಲ್ಲಿ ಆದಿಜೀವಿಗಳು ವಾಸಿಸುತ್ತವೆ ಎನ್ನುವ ವಿಚಾರವನ್ನು ಮೊದಲ ಬಾರಿಗೆ ಕಂಡುಕೊಂಡಿದ್ದ. ಮಲೇರಿಯಕ್ಕೆ ಈ ಜೀವಿಯೇ
ಕಾರಣವೆಂದು ಖಚಿತಪಡಿಸಿಕೊಂಡು ಅದಕ್ಕೆ ಆಸಿಲೇರಿಯ ಮಲೇರಿಯೆ (ಆಗ ಪ್ಲಾಸ್ಮೋಡಿಯಂ ಎಂಬ ಹೆಸರು ಬಳಕೆಗೆ ಬಂದಿರಲಿಲ್ಲ) ಎಂದು ನಾಮಕರಣ ಮಾಡಿದ.

ಡಿಸೆಂಬರ್ ೧೮೮೦. ಲ್ಯಾವೆರನ್ ತನ್ನ ಅಧ್ಯಯನವನ್ನು ಫ್ರೆಂಚ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ಮುಂದೆ ಮಂಡಿಸಿದ. ಅಂದಿನ ಸಭೆಯಲ್ಲಿ ಲೂಯಿ ಪ್ಯಾಶ್ಚರ್ ಮತ್ತು ರಾಬರ್ಟ್ ಕಾಚ್ ಮುಂತಾದ ಘಟಾನುಘಟಿ ವಿಜ್ಞಾನಿಗಳಿದ್ದರು. ಲ್ಯಾವೆರನ್ ವಾದವನ್ನು ಅವರು ಒಪ್ಪಲಿಲ್ಲ. ರಕ್ತಕಣ
ಗಳ ಲಯದಿಂದ ರೂಪುಗೊಳ್ಳುವ ಕಪ್ಪುವಸ್ತುವನ್ನು ಬಿಟ್ಟು ಮತ್ತೇನನ್ನೂ ನೀನು ಕಂಡುಹಿಡಿದಿಲ್ಲ ಎಂದುಬಿಟ್ಟರು. ಲ್ಯಾವೆರನ್ ಎದೆಗುಂದಲಿಲ್ಲ. ರೋಮ್‌ನ ಸ್ಯಾಂಟೊ ಸ್ಪಿರಿಟೋ ಆಸ್ಪತ್ರೆಯ ಮಲೇರಿಯ ರೋಗಿಗಳ ರಕ್ತ ಅಧ್ಯಯನ ಮಾಡಿ, ಆಲ್ಜೀರ್ಸ್ ನಗರದಲ್ಲಿ ಕಂಡು ಬಂದ ಫಲಿತಾಂಶವನ್ನೇ ಪುನರಾವರ್ತನೆಗೊಳಿಸಿದ. ಆದರೆ ಇಟಾಲಿಯನ್ ಮಲೇರಿಯ ತಜ್ಞರಾದ ಇಟೋರಿ ಮರ್ಚಿಯಾ-ವ (೧೮೪೭-೧೯೩೫)
ಮತ್ತು ಏಂಜೆಲೊ ಸೆಲ್ಲಿ (೧೮೫೭-೧೯೧೪) ಅವರು ಲ್ಯಾವೆರನ್‌ನ ನಡೆಸಿದ ಅಧ್ಯಯನ ನಂಬಲೇ ಇಲ್ಲ. ಅವರು ಮಲೇರಿಯಕ್ಕೆ ಬ್ಯಾಸಿಲಸ್ ಮಲೇರಿಯೆ ಎಂಬ ಬ್ಯಾಕ್ಟೀರಿಯವೇ ಕಾರಣ ಎಂಬ ಸಿದ್ಧಾಂತಕ್ಕೆ ಕಟ್ಟು ಬಿದ್ದಿದ್ದರು.

೧೮೮೪,ಲ್ಯಾವೆರನ್ ಪ್ಯಾರಿಸ್ಸಿನ ವ್ಯಾಲ್ ದಿ ಗ್ರೇಸ್ ಮಿಲಿಟರಿ ವೈದ್ಯಕೀಯ ವಿದ್ಯಾಲಯಕ್ಕೆ ಬಂದ. ಮತ್ತೆ ಅಧ್ಯಯನವನ್ನು ಪುನರಾವರ್ತಿಸಿ, ಸೂಕ್ಷ್ಮದರ್ಶಕದಡಿಯಲ್ಲಿ ಕಶಾಂಗಗಳಂತಹ ರಚನೆಗಳ ನೆರವಿನಿಂದ ಚಲಿಸುತ್ತಿದ್ದ ಕಾಯಗಳನ್ನು ಗುರುತಿಸಿ ಪ್ಯಾಶ್ಚರನನ್ನು ಆಹ್ವಾನಿಸಿದ. ಈ ಸಲ ಪ್ಯಾಶ್ಚರ್ ಚಲಿಸುತ್ತಿರುವ ದುಂಡುಕಾಯಗಳನ್ನು ತನ್ನ ಕಣ್ಣಾರೆ ಕಂಡ. ತಕ್ಷಣವೇ ಇದು ಮಲೇರಿಯ ಕಾರಕ ಜೀವಿಯೇ ಹೌದು ಎಂದು ಪ್ಯಾಶ್ಚರನಿಗೆ ಮನವರಿಕೆಯಾಯಿತು. ಮಾರ್ಚಿಯಾ -ವ ಮತ್ತು ಸೆಲ್ಲಿ ಬಂದರು. ನಂಬಲೇಬೇಕಾಯಿತು.

ಕೂಡಲೆ ಅವರೆಲ್ಲ ತಮ್ಮ ಅಭಿಪ್ರಾಯ ಬದಲಿಸಿಕೊಂಡರು. ಮರುವರ್ಷವೇ ಇಟಾಲಿಯನ್ ಜೀವವಿಜ್ಞಾನಿ ಮತ್ತು ರೋಗವಿಜ್ಞಾನಿ ಕ್ಯಾಮಿಲ್ಲೋ ಗಾಲ್ಜಿ (೧೮೪೩-೧೯೨೬) ಪ್ಲಾಸ್ಮೋಡಿಯದ ಎರಡು ಪ್ರಭೇದಗಳನ್ನು ಗುರುತಿಸಿದ. ಪ್ಲಾಸ್ಮೋಡಿಯಂ ಮಲೇರಿಯೆ ಮತ್ತು ಪ್ಲಾಸ್ಮೋಡಿಯಂ ವೈವಾಕ್ಸ್. ಪ್ಲಾ ಮಲೇರಿಯೆ ಇರುವ ರಕ್ತಕಣಗಳು ನಾಲ್ಕು ದಿನಗಳಿಗೊಮ್ಮೆ ಸೋಟಿಸಿದಾಗ ನಾಲ್ಕರ ಚಳಿಜ್ವರ ಬರುವುದನ್ನು (ಕ್ವಾರ್ಟನ್ ಫೀವರ್) ಹಾಗೂ ಪ್ಲಾ ಓವೇಲ್ ಇರುವ ರಕ್ತಕಣಗಳು ಮೂರು ದಿನಗಳಿಗೊಮ್ಮೆ ಸ್ಫೋಟಿಸಿದಾಗ ಮೂರರ ಚಳಿಜ್ವರ (ಟೆರ್ಷಿಯನ್ ಫೀವರ್) ಕಂಡುಬರುವುದನ್ನು ದಾಖಲಿಸಿ, ಲ್ಯಾವೆರನ್ ನಡೆಸಿದ ಸಂಶೋಧನೆಗೆ ಋಜುವಾತನ್ನು ಒದಗಿಸಿದ.

ಲ್ಯಾವೆರನ್ ಸೈನ್ಯ ತ್ಯಜಿಸಿ, ಪ್ಯಾಶ್ಚರ್ ಸಂಸ್ಥೆ ಸೇರಿದ. ಆದಿಜೀವಿಗಳಿಂದ ಬರುವ ಸೋಂಕುರೋಗಗಳ ಅಧ್ಯಯನ ಮುಂದುವರಿಸಿದ. ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್, ಲ್ಯಾವೆರನ್ನನಿಗೆ ಮಲೇರಿಯ ಕಾರಕ ಕಂಡು ಹಿಡಿದುದಕ್ಕಾಗಿ ಬ್ರಿಯಾಂಟ್ ಪ್ರಶಸ್ತಿ ನೀಡಿ ಗೌರವಿಸಿತು. ೧೮೯೪, ಬುಡಾ
ಪೆಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಸ್ವಚ್ಛತೆ ಮತ್ತು ನೈರ್ಮಲ್ಯದ ಸಮಾವೇಶದಲ್ಲಿ ಲ್ಯಾವೆರನ್ ಭಾಷಣ ಮಾಡುತ್ತ, ಮಲೇರಿಯಕ್ಕೆ ಕಾರಣವಾದ ರೋಗಜನಕವನ್ನು ತಾನು ಪತ್ತೆಹಚ್ಚಿದ್ದರೂ, ಅದು ಮನುಷ್ಯನ ದೇಹವನ್ನು ಹೇಗೆ ಪ್ರವೇಶಿಸುತ್ತದೆ ಎನ್ನುವುದನ್ನು ಪತ್ತೆ ಹಚ್ಚಲು ಆಗಲಿಲ್ಲವೆಂದ. ಆದು ಗಾಳಿ, ನೀರು, ಮಣ್ಣಿನಲ್ಲಿ ಅದು ಇಲ್ಲವೆಂದ. ಸ್ಕಾಟ್ಲಂಡಿನ ವೈದ್ಯ ಪ್ಯಾಟ್ರಿಕ್ ಮ್ಯಾನ್ಸನ್ (೧೮೪೪-೧೯೨೨) ಆನೆಕಾಲು ರೋಗಕ್ಕೆ (ಎಲಿಫೆಂಟಿಯಾಸಿಸ್) ಕಾರಣವಾದ ವುಚೆರಿಯ ಬ್ಯಾಂಕ್ರಾ- ಎಂಬ ಹುಳುವು ಸೊಳ್ಳೆಯನ್ನು ಮಧ್ಯವರ್ತಿ ಯನ್ನಾಗಿ ಮಾಡಿಕೊಂಡು ಹರಡುವ ಬಗ್ಗೆ ಯಶಸ್ವೀ ಸಂಶೋಧನೆ ನಡೆಸಿದ್ದ.

ಲ್ಯಾವೆರನ್ ಈ ಸಂಶೋಧನೆಯನ್ನು ಪ್ರಸ್ತಾಪಿಸಿ, ಬಹುಶಃ ಮಲೇರಿಯ ಸಹ ಹೀಗೆ ಸೊಳ್ಳೆಗಳಿಂದ ಹರಡುತ್ತಿರಬಹುದು ಎಂದ. ಲ್ಯಾವೆರನ್ನನಿಗೆ ಮಲೇರಿಯ ಎನ್ನುವ ಹೆಸರು ಒಪ್ಪಿಗೆ ಯಾಗಲಿಲ್ಲ. ಏಕೆಂದರೆ ಮಲೇರಿಯ ಎನ್ನುವ ಹೆಸರು ಬರಲು ಕಾರಣ ಮಿಯಾಸ್ಮ ಸಿದ್ಧಾಂತ. ಆ ಸಿದ್ಧಾಂತವೇ
ಸುಳ್ಳು ಎಂದು ನಿರೂಪಿತವಾದ ಮೇಲೆ, ಅದರಿಂದ ಹುಟ್ಟಿದ ಶಬ್ದ ಮಲೇರಿಯವೂ ಸಹ ಅವೈಜ್ಞಾನಿಕ ಎಂದ. ಬದಲಿಗೆ ಪಾಲುಡಿಸ್ಮ್ ಎಂಬ ಹೆಸರನ್ನು ಸೂಚಿಸಿದ.

ಫ್ರೆಂಚರು ಇಂದಿಗೂ ಮಲೇರಿಯವನ್ನು, ಪಾಲುಡಿಸ್ಮ್ ಎಂದೇ ಕರೆಯುವುದುಂಟು. ಆದರೆ ಜಗತ್ತಿನ ವಿಜ್ಞಾನಿಗಳು ಮಲೇರಿಯ ಎಂಬ ಹೆಸರೇ ಸರಿ ಎಂದು ಆ ಹೆಸರನ್ನೇ ಉಳಿಸಿಕೊಂಡಿದ್ದಾರೆ. ೧೯೦೭. ಮಲೇರಿಯಕ್ಕೆ ಕಾರಣವಾದ ಪ್ಲಾಸ್ಮೋಡಿಯಂ ಜೀವಿಯನ್ನು ಕಂಡು ಹಿಡಿದುಕ್ಕಾಗಿ ಲ್ಯಾವೆರನ್ನ ನಿಗೆ ಅಂಗಕ್ರಿಯಾ ಅಥವ ವೈದ್ಯಕೀಯ ನೊಬೆಲ್ ಪಾರಿತೋಷಕ ತು. ಲ್ಯಾವೆರನ್ ನೊಬೆಲ್ ಪಾರಿತೋಷಕದ ಜತೆಯಲ್ಲಿ ಬಂದ ಹಣವನ್ನು ಬಳಸಿಕೊಂಡು, ಪ್ಯಾಶ್ಚರ್ ಕೇಂದ್ರದಲ್ಲಿ ಉಷ್ಣವಲಯ ರೋಗಗಳ (ಟ್ರಾಪಿಕಲ್ ಡಿಸೀಸಸ್) ಒಂದು ಸಂಶೋಧನಾ ಘಟಕವನ್ನು ಆರಂಭಿಸಿದ.

ಲ್ಯಾವೆರನ್ ಇದರ ಜತೆಯಲ್ಲಿ ಮತ್ತೆರಡು ರೋಗಜನಕ ಆದಿಜೀವಿಗಳನ್ನು ಪತ್ತೆ ಹಚ್ಚಿದ. ಅವು ಲೀಷ್ಮೇನಿಯ ಬೇನೆಗೆ (ಲೀಷ್ಮೇನಿಯಾಸಿಸ್) ಕಾರಣ ವಾದ ಲೀಷ್ಮೇನಿಯ ಡೋನೋವನಿ ಎಂಬ ಆದಿಜೀವಿ ಹಾಗೂ ಆಫ್ರಿಕಾ ನಿದ್ರಾ ಬೇನೆಗೆ (ಸ್ಲೀಪಿಂಗ್ ಸಿಕ್ನೆಸ್ ಆಫ್ ಆಫ್ರಿಕ) ಕಾರಣವಾದ ಟ್ರಿಪನೋ ಸೋಮ ಗ್ಯಾಂಬಿಯನ್ಸ್‌ನನ್ನು ಕಂಡು ಹಿಡಿದ. ಟ್ರಿಪನೋಸೋಮವು ಮನುಷ್ಯರಲ್ಲಿ ಮಾತ್ರವಲ್ಲ, ದನಗಳಲ್ಲಿ, ಕುದುರೆಗಳಲ್ಲಿ, ಈಲ್, ಮೀನು ಗಳಲ್ಲಿಯೂ ನಿದ್ರಾರೋಗವನ್ನು ಉಂಟುಮಾಡುತ್ತದೆ. ಟ್ರಿಪನೋಸೋಮವು ತ್ಸೆ ತ್ಸೆ ನೊಣಗಳನ್ನು ಮಧ್ಯವರ್ತಿ ಜೀವಿಯನ್ನಾಗಿ ಬಳಸಿ ಕೊಳ್ಳುತ್ತದೆ.

ಈ ನಿದ್ರಾರೋಗಕ್ಕೆ ತುತ್ತಾದ ಮನುಷ್ಯನು, ಆಹಾರ, ವಿಹಾರಗಳನ್ನು ಮರೆತು ನಿದ್ರೆಯನ್ನು ಮಾಡುತ್ತಲೇ ಸಾವಿಗೆ ಶರಣಾಗುತ್ತಾನೆ. ಈ ರೋಗಕ್ಕೆ ತುತ್ತಾಗಿ ಊರಿಗೆ ಊರೇ ನಾಶವಾದ ಉದಾಹರಣೆಗಳು ಸಾಕಷ್ಟಿವೆ. ಇಂತಹ ಮಾರಕ ರೋಗವನ್ನು ಪತ್ತೆ ಹಚ್ಚಿದ ಚಾರ್ಲ್ಸ್ ಲೂಯಿ ಆಲೋನ್ಸ್ ಲ್ಯಾವೆರನ್ ನಿಜಕ್ಕೂ ಪ್ರಾತಃಸ್ಮರಣೀಯ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.