ಅವಲೋಕನ
ಚಂದ್ರಶೇಖರ ಬೇರಿಕೆ
ಕೆಲವು ದಿನಗಳ ಹಿಂದೆ ಕನಕಪುರ ರಸ್ತೆಯ ಡಿ ಮಾರ್ಟ್ ಮಾಲ್‌ಗೆ ಅಗತ್ಯ ವಸ್ತುಗಳ ಖರೀದಿಗೆಂದು ಹೋಗಿದ್ದೆ. ಹಾಗೇ ಮಾರ್ಟ್ ನ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವ ಸಂದರ್ಭದಲ್ಲಿ ನನಗಿಂತ ಮುಂದೆ ಸುಮಾರು 65 ರಿಂದ 70 ವರ್ಷ ಪ್ರಾಯದ ವ್ಯಕ್ತಿಯನ್ನು ತಪಾಸಣೆ ಮಾಡಿದ್ದ ಭದ್ರತಾ ಸಿಬ್ಬಂದಿ ಆ ಹಿರಿಯ ವ್ಯಕ್ತಿ ನೇತು ಹಾಕಿಕೊಂಡಿದ್ದ ಬ್ಯಾಗ್‌ನ್ನು ಕೌಂಟರ್‌ನಲ್ಲಿ ಒಪ್ಪಿಸಿ ಟೋಕನ್ ಪಡೆದು ಮುಂದಕ್ಕೆ ಹೋಗುವಂತೆ ಸೂಚಿಸಿದ.
ಅಷ್ಟಕ್ಕೇ ತಕರಾರು ತೆಗೆದ ಆ ಹಿರಿಯ ವ್ಯಕ್ತಿ ‘ನಾನು ನಿವೃತ್ತ ಕಮಾಂಡರ್, ನನ್ನನ್ನು ಒಳಗೆ ಹೋಗಲು ಬಿಡಿ’ ಎಂದು ಹಿಂದಿ ಯಲ್ಲಿ ಗದರಿದರು. ಅದಕ್ಕೆ ನಯವಾಗಿಯೇ ಉತ್ತರಿಸಿದ ಭದ್ರತಾ ತಪಾಸಣಾ ಸಿಬ್ಬಂದಿ, ‘ನೀವು ಕೌಂಟರ್‌ನಲ್ಲಿ ಈ ಬಗ್ಗೆ
ಮಾತಾಡಿಕೊಂಡು ಬನ್ನಿ’ ಎಂದು ಸೂಚಿಸಿದ. ಅದಕ್ಕೆ ಮತ್ತೆ ಸಿಟ್ಟಾದ ಆ ಹಿರಿಯ ವ್ಯಕ್ತಿ, ‘ನಾನು ನಿವೃತ್ತ ಕಮಾಂಡರ್,
ನನ್ನನ್ನು ಪ್ರಶ್ನಿಸುವಂತಿಲ್ಲ, ನಿನ್ನ ಮ್ಯಾನೇಜರ್‌ನನ್ನು ಇಲ್ಲಿಗೆ ಕರೆಸು’ ಎಂದು ವರಾತ ತೆಗೆದು ತನ್ನ ಗುರುತಿನ ಚೀಟಿಗಾಗಿ
ತಡಕಾಡಿದರು. ಆ ವ್ಯಕ್ತಿಯ ಕಟ್ಟು ಮಸ್ತಾದ ನೀಳ ಕಾಯವನ್ನು ನೋಡಿದಾಗ ಅವರು ಪರಿಚಯಿಸಿಕೊಂಡಂತೆ ಸೈನ್ಯ ದಲ್ಲಿದ್ದವರು ಎಂಬುದನ್ನು ಪುಷ್ಟೀಕರಿಸುತ್ತಿತ್ತು.
ಆ ಹೊತ್ತಿಗಾಗಲೇ ಮಾರ್ಟ್‌ನ ಪ್ರವೇಶ ದ್ವಾರದಲ್ಲಿ ಗ್ರಾಹಕರ ಸರತಿ ಸಾಲು ಉದ್ದವಾಗಿ ಬೆಳೆದಿತ್ತು. ಆ ಹಿರಿಯ ವ್ಯಕ್ತಿಯನ್ನು ಪಕ್ಕಕ್ಕೆ ಸರಿಯುವಂತೆ ವಿನಂತಿಸಿ ತಪಾಸಣೆ ಮಾಡಿಸಿಕೊಂಡು ಅಲ್ಲಿದ್ದವರೆಲ್ಲಾ ಮುಂದಕ್ಕೆ ಸರಿದೆವು. ನಾನು ಮಾರ್ಟ್‌ನ ಒಳಗಡೆ ಹೋಗಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುವಷ್ಟರಲ್ಲಿ ಆ ಹಿರಿಯ ವ್ಯಕ್ತಿ ಅದೇ ಬ್ಯಾಗ್‌ನೊಂದಿಗೆ ಮತ್ತೆ ನನ್ನ ಮುಂದೆ ಪ್ರತ್ಯಕ್ಷ ರಾದರು.
ಬಹುಶಃ ಮ್ಯಾನೇಜರ್ ಜೊತೆಯೂ ಗಲಾಟೆ ಮಾಡಿಕೊಂಡು ಆ ಮ್ಯಾನೇಜರ್ ವಿಧಿಯಿಲ್ಲದೇ ಮಾರ್ಟ್ ನ ಒಳಗಡೆಗೆ ಪ್ರವೇಶ ನೀಡಿರಬಹುದು ಎಂಬ ತೀರ್ಮಾನಕ್ಕೆ ಬರುವಂತಾಯಿತು. ಆ ವ್ಯಕ್ತಿ ಪರಿಚಯಿಸಿಕೊಂಡಂತೆ ನಿವೃತ್ತ ಕಮಾಂಡರ್ ಆಗಿದ್ದರೆ ಅವರ ವರ್ತನೆ ಸಮರ್ಥನೀಯವಲ್ಲ. ಮಿಗಿಲಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯಾವುದೇ ವ್ಯಕ್ತಿಯಿಂದ ಇಂತಹ ವರ್ತನೆಯನ್ನು ಯಾರೂ ನಿರೀಕ್ಷಿಸುವುದಿಲ್ಲ. ಏಕೆಂದರೆ ಸೈನ್ಯದಲ್ಲಿ ಸೇವೆ ಸಲ್ಲಿಸುವ ಎಲ್ಲರನ್ನೂ ಅಪಾರವಾಗಿ ಪ್ರೀತಿಸುವುದು ಮತ್ತು ಗೌರವಿ ಸುವುದನ್ನು ಬಹುತೇಕ ಭಾರತೀಯರು ಪಾಲಿಸಿಕೊಂಡು ಬಂದಿದ್ದಾರೆ. ಆದ್ದರಿಂದ ಈ ವ್ಯಕ್ತಿಯ ನಡವಳಿಕೆ ಸೈನ್ಯದ ಶಿಸ್ತು ಮತ್ತು ಘನತೆಗೆ ಧಕ್ಕೆ ಉಂಟು ಮಾಡುವಂಥದ್ದಾಗಿತ್ತು. ಎಷ್ಟೋ ಜನ ನಿವೃತ್ತ ಸೈನಿಕರು ಖಾಸಗಿ ಸಂಸ್ಥೆಯ ಮೂಲಕ ಭದ್ರತಾ ಸಿಬ್ಬಂದಿ ಗಳಾಗಿ ದುಡಿಯುತ್ತಿರುವ ಪ್ರಸಂಗಗಳಿವೆ. ಯಾವುದೇ ಸೈನಿಕ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಒಂದು ಹುಲ್ಲು
ಕಡ್ಡಿ ಮಿಸುಕಾಡಿದರೂ ಎಚ್ಚರಿಕೆವಹಿಸಿ ಕರ್ತವ್ಯ ಪ್ರಜ್ಞೆ ಮೆರೆಯುವ ಪ್ರವೃತ್ತಿಯನ್ನು ಬೆಳೆಸಿಕೊಂಡವರು.
ಭದ್ರತಾ ತಪಾಸಣೆಯ ಅನಿವಾರ್ಯತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ಅರಿವು ಮತ್ತು ಅನುಭವ ಹೊಂದಿರುವ ವ್ಯಕ್ತಿ ಭದ್ರತಾ ತಪಾಸಣೆಯ ಸಿಬ್ಬಂದಿಯ ಜೊತೆ ಈ ರೀತಿಯ ವರ್ತನೆ ತೋರುವುದೆಂದರೆ ಭದ್ರತೆಯನ್ನೇ ಧ್ಯೇಯವಾಗಿಸಿ ಕೊಂಡಿರುವ ಸೈನ್ಯದ
ಸೇವಾ ಮೌಲ್ಯಗಳಿಗೆ ಅಪಮಾನ ಮಾಡಿದಂತಾಗುವುದಿಲ್ಲವೇ. ಸಮಾಜದಲ್ಲಿ ಉಪದೇಶ ಮಾಡುವವರಿಗೆ ಕೊರತೆಯಿಲ್ಲ. ಆದರೆ ಉಪದೇಶಗಳು ಇತರರಿಗಾಗಿ ಇರುತ್ತದೆಯೇ ಹೊರತು ತಾನು ಅಳವಡಿಸಿಕೊಳ್ಳುವುದಕ್ಕಲ್ಲ.
ಸ್ಥಾನಮಾನಗಳು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದಕ್ಕಾಗಿಯೇ ಇರುವುದು ಎಂಬುದಾಗಿ ಕೆಲವರು ಭಾವಿಸಿದಂತಿದೆ. ಸಾಮಾನ್ಯ ವಾಗಿ ನಾವು ಬ್ಯಾಂಕ್‌ಗಳಲ್ಲಿ, ಸರಕಾರಿ ಕಚರಿಗಳಲ್ಲಿ, ಆಸ್ಪತ್ರೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಸ್ಥಾನಮಾನದ ಮೇಲೆ ಪ್ರಾಶಸ್ತ್ಯಗಳನ್ನು ನೀಡುವ ಕೆಟ್ಟ ಸಂಪ್ರದಾಯವನ್ನು ನೋಡುತ್ತಿರುತ್ತೇವೆ. ಕೆಲವರಿಗೆ ತನ್ನ ಸ್ಥಾನಮಾನವನ್ನು ಪ್ರದರ್ಶಿಸಿ
ಕೊಳ್ಳುವುದೇ ಹೆಮ್ಮೆ ಮತ್ತು ಪ್ರತಿಷ್ಠೆ ಎನಿಸಿಕೊಳ್ಳುತ್ತದೆ. ವಿಮಾನ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳಲ್ಲಿ, ಮೆಟ್ರೊ ಸ್ಟೇಷನ್ ಗಳಲ್ಲಿ ಮತ್ತು ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಸ್ಥಾನಮಾನಗಳ ಹೆಸರಿನಲ್ಲಿ ಕೆಲವರು ತೋರುವ ಉದ್ಧಟತನ ಮತ್ತು ಅಸಹಕಾರಗಳು ವ್ಯವಸ್ಥೆಯ ವಿಡಂಬನೆಯೇ ಸರಿ.
ಭಾರತ ಮತ್ತು ಪಾಕಿಸ್ತಾನ ನಡುವಿನ 1965 ರ ಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯುಸೇನೆಯ ಸ್ಕಾಡ್ರರ್ಗ್‌ನ ಲೀಡರ್ ಕೆ.ಸಿ. ಕಾರಿಯಪ್ಪ ಅವರು ಕರ್ತವ್ಯದಲ್ಲಿದ್ದಾಗ ಪಾಕಿಸ್ತಾನ ಸೇನೆಯು ಅವರನ್ನು ಸೆರೆ ಹಿಡಿಯಿತು. ವಿಚಾರಣೆ ವೇಳೆ ಕೆ.ಸಿ. ಕಾರಿಯಪ್ಪ ಅವರು ತಮ್ಮ ಹೆಸರು, ಶ್ರೇಣಿ ಮತ್ತು ಘಟಕ ಸಂಖ್ಯೆಯನ್ನು ಮಾತ್ರ ಬಹಿರಂಗಪಡಿಸಿದರು. ಆದರೆ ಆತ ಭಾರತದ
ನಿವೃತ್ತ ಜನರಲ್ ಕೆ.ಎಂ. ಕಾರಿಯಪ್ಪನವರ ಮಗನೆಂದು ಅರಿತ ಪಾಕಿಸ್ತಾನದ ಮಿಲಿಟರಿ ನಾಯಕ ಜನರಲ್ ಅಯೂಬ್ ಖಾನ್ ತಮ್ಮ ವಶದಲ್ಲಿದ್ದ ಕೆ.ಸಿ.ಕಾರಿಯಪ್ಪ ಅವರನ್ನು ಬಿಡುಗಡೆ ಮಾಡಲು ಮುಂದಾದರು. ಆದರೆ ಈ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಜನರಲ್ ಕೆ.ಎಂ.ಕಾರಿಯಪ್ಪರವರು ಈ ಪ್ರಸ್ತಾಪವನ್ನು ನಿರಾಕರಿಸಿದರು.
‘ವಶಪಡಿಸಿಕೊಂಡ ಭಾರತೀಯ ಸೈನಿಕರೆಲ್ಲರೂ ನನ್ನ ಪುತ್ರರು ಮತ್ತು ಅವರೆಲ್ಲರನ್ನೂ ಪಾಕಿಸ್ತಾನ ಚೆನ್ನಾಗಿ ನೋಡಿಕೊಳ್ಳ ಬೇಕು’ ಎಂದು ಅವರು ಅಯೂಬ್ ಖಾನ್‌ಗೆ ತಿಳಿಸಿದರು. ಇದು ಜನರಲ್ ಕೆ.ಎಂ.ಕಾರಿಯಪ್ಪರವರು ತನ್ನ ಸ್ಥಾನಮಾನವನ್ನು ತನ್ನ ಹಿತಾಸಕ್ತಿಗಾಗಿ ದುರುಪಯೋಗಪಡಿಸಿಕೊಂಡಿಲ್ಲ ಎಂಬುದಕ್ಕೆ ಉದಾಹರಣೆಯಾದರೆ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಯಾವುದೋ ಕಾರ್ಯಕ್ರಮದ ನಿಮಿತ್ತ ಒಂದು ಪಂಚತಾರಾ ಹೋಟೆಲ್‌ಗೆ ಪ್ರವೇಶಿಸುತ್ತಿದ್ದಾಗ ಭದ್ರತಾ ಪರಿಶೀಲನೆಗಾಗಿ ನಿಯೋಜನೆಗೊಂಡಿದ್ದ ಕಾವಲುಗಾರ ವಾಡಿಕೆಯಂತೆ ಪರಿಕ್ಕರ್ ಅವರನ್ನು ತಡೆದು ನಿಲ್ಲಿಸಿದ.
ಅವರು ಈ ರಾಜ್ಯದ ಮುಖ್ಯಮಂತ್ರಿ ಎಂಬುದು ಅದಾಗಲೇ ಆ ಕಾವಲುಗಾರನ ಗಮನಕ್ಕೆ ಬಂದು ಆ ಬಡ ಕಾವಲುಗಾರ ತನ್ನ ತಪ್ಪಿನಿಂದಾಗಿ ತಾನು ಕೆಲಸ ಕಳೆದುಕೊಳ್ಳುತ್ತೇನೆಂಬ ಚಿಂತೆಯಲ್ಲಿದ್ದ. ಆದರೆ ಮನೋಹರ್ ಪರಿಕ್ಕರ್ ಅವರು ಆ ಕಾವಲುಗಾರ ನಿಗೆ ಯಾವುದೇ ಸಮಸ್ಯೆಯಾಗದಂತೆ ಸಂಬಂಧಪಟ್ಟವರಿಗೆ ಸೂಚಿಸಿದರಂತೆ. ಇದು ಶಿಸ್ತು ಮತ್ತು ಉನ್ನತ ತತ್ತ್ವಗಳ ಪಾಲನೆಗೆ ನಿದರ್ಶನ.
ಲ್ ಬಹದ್ದೂರ್ ಶಾಸೀಜೀಯವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಮ್ಮ ಪತ್ನಿ ಲಲಿತಾ ಶಾಸ್ತ್ರಿ ಮತ್ತು ಮಕ್ಕಳ ಒತ್ತಾಸೆಯ ಮೇರೆಗೆ ಒಂದು ಸಾಮಾನ್ಯ ಕಾರು ಖರೀದಿಸಲು ನಿರ್ಧರಿಸಿದ್ದರಂತೆ. ಆದರೆ ಅವರ ಬಳಿ ಅವರು ಇಚ್ಛಿಸಿದ ಕಾರು ಖರೀದಿಗೆ ಅಗತ್ಯವಿರುವಷ್ಟು ಹಣವಿರಲಿಲ್ಲ. ಅದಕ್ಕಾಗಿ ಕೊರತೆಯಾದ ಹಣವನ್ನು ಬ್ಯಾಂಕ್‌ನಿಂದ ಸಾಲ ಪಡೆಯಲು ನಿರ್ಧರಿಸಿ ಅರ್ಜಿ ಹಾಕಿದ್ದರು. ತಕ್ಷಣ ಬ್ಯಾಂಕ್‌ನಿಂದ ಸಾಲ ಮಂಜೂರಾದ ವಿಷಯ ತಿಳಿದ ಶಾಸೀಜೀಯವರು ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸಿ ತರಾಟೆಗೆ ತೆಗೆದುಕೊಂಡು ‘ಪ್ರಧಾನಿ ಎಂದ ಮಾತ್ರಕ್ಕೆ ಒಂದೇ ದಿನದಲ್ಲಿ ಸಾಲ ಮಂಜೂರು ಮಾಡಿರುವಿರಲ್ಲ, ಒಬ್ಬ ಸಾಮಾನ್ಯ ಗ್ರಾಹಕ ಬಂದರೂ ಇಷ್ಟೇ ಶೀಘ್ರವಾಗಿ ಸಾಲ ಮಂಜೂರು ಮಾಡುತ್ತೀರಾ? ನನಗೊಬ್ಬನಿಗೆ ಈ ರೀತಿಯ ಸೇವೆ ನೀಡುವ ಬದಲು ನಿಮ್ಮ ಬ್ಯಾಂಕಿಗೆ ಬರುವ ಎಲ್ಲರಿಗೂ ಇದೇ ರೀತಿಯ ಸೇವೆ ನೀಡಿ’ ಎಂದು ತಾಕೀತು ಮಾಡಿದ್ದರಂತೆ.
ಹಾಗೆಯೇ ಒಂದು ದಿನ ತಮ್ಮ ಮಗ ಅನಿಲ್ ಶಾಸ್ತ್ರಿಯವರ ಅಂಕಪಟ್ಟಿ ತೆಗೆದುಕೊಳ್ಳಲು ಮಗನ ಶಾಲೆಗೆ ಬಂದು ಕಾರಿನಿಂದ ಇಳಿದು ಕಾರನ್ನು ಹೊರಗೆ ನಿಲ್ಲಿಸುವಂತೆ ತಮ್ಮ ಚಾಲಕನಿಗೆ ಸೂಚಿಸಿದರು. ಅಲ್ಲಿದ್ದ ಕಾವಲುಗಾರ ‘ನೀವು ಈ ದೇಶದ ಪ್ರಧಾನ ಮಂತ್ರಿಗಳು, ಕಾರು ಇಲ್ಲಿಯೇ ಇರಲಿ, ನೀವು ಹೋಗಿ ಬನ್ನಿ’ ಎಂದನಂತೆ. ಅದಕ್ಕೆ ಶಾಸ್ತ್ರಿಜೀಯವರು ‘ನಾನು ಇಲ್ಲಿಗೆ ಪ್ರಧಾನ ಮಂತ್ರಿಯಾಗಿ ಬಂದಿಲ್ಲ. ಅನಿಲ್ ಶಾಸ್ತ್ರಿಯ ತಂದೆಯಾಗಿ ಬಂದಿದ್ದೇನೆ. ಎಲ್ಲ ಪೋಷಕರಂತೆ ನಾನೂ ಒಬ್ಬ. ಹಾಗಾಗಿ ನೀವು ನನಗೆ ಯಾವುದೇ ವಿಶೇಷ ಮನ್ನಣೆ ನೀಡಬೇಕಾಗಿಲ್ಲ’ ಎಂದರಂತೆ.
ಇದು ಪ್ರಧಾನ ಮಂತ್ರಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ ಸರಳತೆಗೆ ನಿದರ್ಶನಗಳು. ವಿಜ್ಞಾನಿಯೊಬ್ಬರು ಒಂದು ದಿನ ತಮ್ಮ ಮಕ್ಕಳನ್ನು ಒಂದು ಕಾರ್ಯಕ್ರಮಕ್ಕೆ ಕರೆದೊಯ್ಯಬೇಕಾಗಿದ್ದರಿಂದ ಕೆಲಸದಿಂದ ಬೇಗನೆ ಹೊರಡಲು ತಮ್ಮ ಮುಖ್ಯಸ್ಥ ನಿಂದ ಅನುಮತಿ ಪಡೆದಿದ್ದರು. ಆದರೆ ಕೆಲವು ಕಾರಣಗಳಿಂದಾಗಿ ಆ ವಿಜ್ಞಾನಿಗೆ ಸಮಯಕ್ಕೆ ಸರಿಯಾಗಿ ಹೊರಡಲು ಸಾಧ್ಯ ವಾಗಲಿಲ್ಲ. ಆ ವಿಜ್ಞಾನಿ ತನ್ನ ಮುಖ್ಯಸ್ಥನನ್ನು ಹುಡುಕಿದಾಗ ಅವರು ಅಲ್ಲಿ ಇರಲಿಲ್ಲ. ಆ ವಿಜ್ಞಾನಿ ರಾತ್ರಿ ಮನೆಗೆ ತಲುಪಿ ತನ್ನ ಮಕ್ಕಳು ಇಲ್ಲದಿರುವ ಬಗ್ಗೆ ತನ್ನ ಹೆಂಡತಿಯನ್ನು ವಿಚಾರಿಸಿದಾಗ ‘ನಿಮಗೆ ಗೊತ್ತಿಲ್ಲವೇ? ನಿಮ್ಮ ಮ್ಯಾನೇಜರ್ ಸಂಜೆ ಇಲ್ಲಿಗೆ ಬಂದು ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆದೊಯ್ದರು’ ಎಂದು ಉತ್ತರಿಸಿದಳು.
ಆ ವಿಜ್ಞಾನಿಯ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದವರು ಬೇರಾರೂ ಅಲ್ಲ, ಅವರು ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ. ರಾಷ್ಟ್ರಪತಿ ಭವನದಿಂದ ನಿರ್ಗಮಿಸುವ ಸಂದರ್ಭದಲ್ಲಿ ಕಲಾಂ ಒಂದು ಮಾತು ಹೇಳಿದ್ದರು. ‘ನಾನು ಸಾಮಾನ್ಯ ಮನುಷ್ಯನಾಗಿ ಜನಿಸಿದ್ದೇನೆ ಮತ್ತು ಸಾಮಾನ್ಯ ಜನರ ನಡುವೆ ಹಿಂತಿರುಗಲು ನನಗೆ ಸಂತೋಷವಾಗುತ್ತಿದೆ’. ಇದು ಕಲಾಂ ಅವರು ತಮ್ಮ ಸ್ಥಾನಮಾನದ ಅಮಲಿನಲ್ಲಿ ಅಧಿಕಾರ ನಡೆಸದೇ ಸರಳತೆಗೆ ಮಹತ್ವ ಕೊಟ್ಟಿರುವುದಕ್ಕೆ ನಿದರ್ಶನ ಗಳಷ್ಟೇ.
ಭದ್ರತೆ ವಿಷಯದಲ್ಲೂ ವಿನಾಯಿತಿ ಅಪೇಕ್ಷಿಸಿದರೆ ನಾವೇ ರೂಪಿಸಿಕೊಂಡ ನಿಯಮಗಳನ್ನು ಪಾಲಿಸುವವರು ಯಾರು? ಅಷ್ಟಕ್ಕೂ ಈ ಭದ್ರತಾ ತಪಾಸಣೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಒಂದು ಹಿನ್ನೆಲೆಯೂ ಇದೆ. ಡಿಸೆಂಬರ್ 13, 2001ರ ಸಂಸತ್ ಮೇಲಿನ ದಾಳಿ, ಸೆಪ್ಟೆಂಬರ್ 24, 2002ರ ಅಕ್ಷರಧಾಮ ದೇವಾಲಯದ ಮೇಲಿನ ದಾಳಿ, ನವೆಂಬರ್ 26, 2008ರ ಮುಂಬೈ ದಾಳಿ ಹಾಗೂ ಇನ್ನಿತರ ಭಯೋತ್ಪಾದಕ ದಾಳಿಯ ಬಳಿಕ ಸಾರ್ವಜನಿಕರ ಓಡಾಟ ಹೆಚ್ಚಿರುವ ಸ್ಥಳಗಳಲ್ಲಿ ಭದ್ರತಾ ತಪಾಸಣೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಮತ್ತು ಇದು ಸಾರ್ವಜನಿಕರ ಒಳಿತಿಗಾಗಿ ರೂಪಿಸಿಕೊಂಡಿರುವ ಒಂದು ವ್ಯವಸ್ಥೆ.
ಸ್ವಯಂ ಪ್ರೇರಿತರಾಗಿ ಭದ್ರತಾ ತಪಾಸಣೆಗೆ ಒಳಪಡುವ ಮತ್ತು ಸಹಕಾರ ನೀಡುವ ಮನೋಭಾವನೆಯನ್ನು ಪ್ರತಿಯೊಬ್ಬ ಪ್ರಜೆ ಯೂ ಬೆಳೆಸಿಕೊಳ್ಳಬೇಕೆ ಹೊರತು ಭದ್ರತಾ ತಪಾಸಣೆಯನ್ನು ಶಿಕ್ಷೆ ಎಂದು ಭಾವಿಸಬೇಕಾಗಿಲ್ಲ. ಕಾನೂನುಗಳು ಮತ್ತು ನಿಯಮ ಗಳು ಇರುವುದೇ ಅವುಗಳನ್ನು ಮುರಿಯುವುದಕ್ಕಾಗಿ ಎಂಬ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳಬಾರದು. ಪ್ರಮುಖ ಸ್ಥಳಗಳಲ್ಲಿ ವಿನಾಯಿತಿ ನಿಯಮಗಳನ್ನು ಅಳವಡಿಸಿಕೊಂಡರೆ ಅದು ಸಮಾಜ ಘಾತಕ ಶಕ್ತಿಗಳ ಕಾರ್ಯತಂತ್ರಕ್ಕೆ ಅನುಕೂಲ ವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಇಂತಹ ಕಟ್ಟುನಿಟ್ಟಿನ ಶಿಷ್ಟಾಚಾರಗಳಿಂದ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವುದನ್ನು ತಡೆಗಟ್ಟಬಹುದು.
ನಿಯಮಗಳ ಪಾಲನೆಯಿಂದ ಯಾವುದೇ ವ್ಯಕ್ತಿಯ ಘನತೆ ಕುಗ್ಗುವ ಬದಲಾಗಿ ಸಮಾಜಕ್ಕೆ ಮಾದರಿಯಾಗಿ ಗುರುತಿಸಲ್ಪಡುತ್ತಾರೆ. ವ್ಯಕ್ತಿತ್ವ ಎಂಬುದು ಒಬ್ಬ ವ್ಯಕ್ತಿಯ ಸಮಗ್ರತೆ, ನಡತೆ ಮತ್ತು ವಿಶಿಷ್ಟ ಗುಣಸ್ವಭಾವಗಳನ್ನು ಅವಲಂಬಿಸಿರುತ್ತದೆ. ಹಾಗೆಯೇ
ಉತ್ತಮ ನಡತೆ, ಒಳ್ಳೆಯ ಗುಣ, ಸಚ್ಚಾರಿತ್ರ್ಯಕ್ಕೆ ಎಲ್ಲಡೆಯೂ ಬೆಲೆಯಿರುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.