ಅಭಿಮತ
ಸಂದೀಪ್ ಶರ್ಮಾ ಮೂಟೇರಿ
ಜೂನ್ ೧೯ರಂದು ರಾಷ್ಟ್ರೀಯ ಓದುವ ದಿನವೆಂದು ದೇಶಾದ್ಯಂತ ಆಚರಿಸಲಾಗುತ್ತದೆ. ಓದುವ ಹವ್ಯಾಸವನ್ನು ಹೆಚ್ಚಿಸುವ ಕಾರ್ಯ ಗ್ರಂಥಾಲಯದ್ದೇ ಪ್ರಮುಖ ಕೊಡುಗೆ ಎಂದರೆ ತಪ್ಪಾಗಲಾರದು, ಆದಾಗ್ಯೂ ಇಂದು ಗ್ರಂಥಾಲಯವು ನಿರ್ಲಕ್ಷಕ್ಕೆ ಒಳಗಾಗುತ್ತಿರುವುದು ಖೇದದ ಸಂಗತಿ.
ಕಾರ್ಲ್ ಟಿ. ರೋವನ್ ಹೇಳುತ್ತಾನೆ, ‘ಜನರ ವಿಮೋಚನೆಗೆ ಯುದ್ಧಗಳಿಗಿಂತಲೂ ಕಲಿಕೆಯೇ ಹೆಚ್ಚು ಪ್ರಾಮುಖ್ಯ, ಅದಕ್ಕೆ ಪೂರಕವಾಗಿರುವುದು ಗ್ರಂಥಾ ಲಯ, ಗ್ರಂಥಾಲಯಗಳು ಕಲಿಕೆಯ ಮಂದಿರಗಳು’. ಎಸ್.ಎಲ್.ಭೈರಪ್ಪ, ಕೆ.ಎಸ್ .ನಾರಾಯಣಚಾರ್ಯರು ಸೇರಿದಂತೆ ವಿಶ್ವದ ಅನೇಕ ಮೇಧಾವಿಗಳು ರೂಪುಗೊಳ್ಳುವ ಹಿಂದೆ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿತ್ತು. ಮೇಧಾವಿಗಳನ್ನು ರೂಪಿಸುವ ಪ್ರಯೋಗಶಾಲೆಗಳಾಗಿದ್ದವು. ಈಗ ಅಂಥದೊಂದು ಕಲ್ಪನೆಯೂ ಸಾಧ್ಯವಿಲ್ಲ. ಕಾರ್ಲ್ ದೃಷ್ಟಿಕೋನದಲ್ಲಿ ಇಂದಿನ ನಮ್ಮ ಗ್ರಂಥಾಲಯಗಳನ್ನು ನೋಡಿದರೆ- ಅವು ಮಂದಿರಗಳಾಗಿಯೂ ಕಾಣಿಸುತ್ತಿಲ್ಲ, ವಿಮೋಚನೆಯ ಕೇಂದ್ರಗಳಾಗಿಯೂ ಉಳಿದಿಲ್ಲ.
ಅವು ನಮ್ಮ ಈಗಿನ ಬಹುತೇಕ ಗ್ರಂಥಾಲಯಗಳಿಗೂ ರದ್ದಿ ಅಂಗಡಿಗಳಿಗೂ ಹೆಚ್ಚೇನೂ ವ್ಯತ್ಯಾಸ ಕಾಣುವುದಿಲ್ಲ ಎನ್ನುವುದು ಬೀಸುಹೇಳಿಕೆಯಾದರೂ ಉತ್ಪ್ರೇಕ್ಷೆಯಲ್ಲ ಎನ್ನುವುದನ್ನು ಗ್ರಂಥಾಲಯಗಳ ಜೊತೆ ಒಡನಾಟ ಇಟ್ಟುಕೊಂಡಿರುವ ವಾಚಕರು ಮತ್ತು ಅನೇಕ ಓದುಗರು ಬಲ್ಲರು. ನಮ್ಮ ನಡುವಿನ ಗ್ರಂಥಾಲಯಗಳು ಇರುವುದಾದರೂ ಹೇಗೆ? ಕನ್ನಡದ ಯಾವ ಹೆಸರಾಂತ ಲೇಖಕರನ್ನಾದರೂ ಅಲ್ಲಿ ನೋಡಲು ಸಾಧ್ಯವೇ? ಕನ್ನಡದ ಎಲ್ಲ ಪ್ರಮುಖ ಸಾಹಿತಿಗಳ ಪುಸ್ತಕಗಳು ದೊರೆಯುವ ಗ್ರಂಥಾಲಯ ನಮ್ಮಲ್ಲಿ ಎಲ್ಲಿದೆ? ಯಾವುದಾದರೂ ಗ್ರಂಥಾಲಯ ಲೇಖಕರ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿರುವ ಉದಾಹರಣೆ ಇದೆಯೇ? ಮೈಸೂರಿನ ಕೇಂದ್ರ ಗ್ರಂಥಾಲಯಕ್ಕೆ ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಪುತಿನ, ಬಿಎಂಶ್ರೀ ಮುಂತಾದ ಹಿರಿಯ ಸಾಹಿತಿಗಳು ಭೇಟಿ ಕೊಡುತ್ತಿದ್ದುದ್ದು ಹಾಗೂ ಜೆ.ಆರ್. ರಾಮಮೂರ್ತಿ ಅವರ ಕಾಲದಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಸಾಂಸ್ಕೃತಿಕ ಕೇಂದ್ರದಂತೆ ರೂಪುಗೊಂಡಿದ್ದುದ್ದು- ಇಂಥ ಸಂಗತಿಗಳೆಲ್ಲ ಕೇವಲ ಈಗ ಓದಿ ಸಂಭ್ರಮಿಸುವ ಅವಕಾಶವಾಗಿಯಷ್ಟೆ ನಮಗೆ ಉಳಿದಿರುವುದು.
ಒಂದು ಮಾದರಿ ಗ್ರಂಥಾಲಯ ಹೇಗಿರಬೇಕು? ಗ್ರಂಥಾಲಯಗಳು ಓದುಗರು ಹಾಗೂ ಲೇಖಕರ ನಡುವಣ ಭೇಟಿಯ ತಾಣಗಳಾಗಬೇಕು. ಲೇಖಕರ ಕೃತಿಗಳ ಬಗ್ಗೆ ಅಲ್ಲಿ ಆರೋಗ್ಯಕರ ಚರ್ಚೆಗಳು ನಡೆಯಬೇಕು. ವಿಶೇಷ ದಿನಗಳಲ್ಲಿ, ಸಾಹಿತ್ಯ ಹಬ್ಬಗಳಂದು ಅನುಗುಣವಾಗಿ ಪುಸ್ತಕಗಳ ಪ್ರದರ್ಶನ ನಡೆಯಬೇಕು. ಓದುಗನೊಬ್ಬ ತನ್ನ ಸಂದೇಹಗಳನ್ನು ಹಂಚಿಕೊಂಡಾಗ ಅದಕ್ಕೆ ಸಂಬಂಧಿಸಿದ ಕೃತಿಗಳನ್ನು ಒದಗಿಸುವ ಮಟ್ಟಿಗೆ ಗ್ರಂಥಪಾಲಕ ಪರಿಣತನಾಗಿರಬೇಕು.
ಒಂದು ಊರಿನ ಜೀವಂತಿಕೆಯನ್ನು, ಸಾಂಸ್ಕೃತಿಕ ಹಿರಿಮೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಅಲ್ಲಿನ ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕ ಗ್ರಂಥಾಲಯ ಮುಖ್ಯವಾದುದು.
‘ಗ್ರಂಥಾಲಯಗಳು ವಿಶ್ವವಿದ್ಯಾಲಯಗಳ ಮಿದುಳು’ ಎಂಬುದು ಆಗಿನ ಮೇಧಾವಿಗಳ ನಂಬಿಕೆಯಾಗಿತ್ತು. ಈಗಿನ ನಮ್ಮ ವಿಶ್ವವಿದ್ಯಾಲಯಗಳ ಬೌದ್ಧಿಕ ಜಡತೆಯ ಹಿನ್ನೆಲೆಯಲ್ಲಿ, ಅವುಗಳ ಮಿದುಳು ಪಾರ್ಶ್ವವಾಯು ಪೀಡಿತವಾಗಿರುವುದೂ ಒಂದು ಕಾರಣವಿರಬಹುದು. ಆದರೆ, ಎರಡನ್ನೂ ನಾವು ಬರಡು ಮಾಡಿದ್ದೇವೆ. ಖಾಸಗಿ ಶಾಲೆಗಳ ಎದುರು ಸರಕಾರಿ ಶಾಲೆಗಳು ಬರಡು ಹಸುಗಳಾಗಿ ಕಾಣಿಸುತ್ತಿದ್ದರೆ, ಗ್ರಂಥಾಲಯಗಳು ಪಳೆಯುಳಿಕೆಗಳ ರೂಪದಲ್ಲಿ ಗತಾಲ ಯಗಳಾಗಿ ಉಸಿರು ಹಿಡಿದುಕೊಂಡಿವೆ.
ಕಾಲದ ಜೊತೆಗೆ ಗ್ರಂಥಾಲಯಗಳು ಬದಲಾಗುವುದು ಹೇಗೆ? ಅದು, ಪುಸ್ತಕಗಳು ಸುಲಭ ಲಭ್ಯವಾಗಿ ದೊರೆಯುವ ಒಂದು ವ್ಯವಸ್ಥೆ ಆಗಿರಬಹುದು. ವಿದ್ಯಾರ್ಥಿವೃಂದವೇ ಆಗಿರಲಿ, ರೈತನೊಬ್ಬನಾಗಲಿ ಗ್ರಂಥಾಲಯಕ್ಕೆ ಬಂದು ತನಗೆ ಅಗತ್ಯವಾದ ಮಾಹಿತಿಯನ್ನು ಪಡೆಯುವಂತಿರಬೇಕು. ಜನಸಾಮಾನ್ಯರಿಗೆ ಲಭ್ಯವಿರುವ ಸರಕಾರದ ಸವಲತ್ತುಗಳ ಮಾಹಿತಿ ದೊರೆಯುವಂತಿರಬೇಕು. ಮಕ್ಕಳ ಮನೋವಿಕಾಸ-ಕಲಿಕೆಯ ರಂಜನೆಗೆ ಅಲ್ಲಿ ಅವಕಾಶವಿರಬೇಕು. ನಿಜವಾದ ಬದಲಾವಣೆ ಎಂದರೆ, ಗ್ರಂಥಾಲಯಗಳು ಪುಸ್ತಕಗಳಿಗೆ ಮಾತ್ರ ಸೀಮಿತ ಎನ್ನುವ ಪರಿಕಲ್ಪನೆಯನ್ನು ಮೀರುವುದು.
ರಾಜ್ಯದಲ್ಲಿ ಅಂದಾಜು ಒಟ್ಟು ಆರು ಸಾವಿರ ಗ್ರಾಮ ಪಂಚಾಯಿತಿಗಳಿರಬಹುದು.
ಪ್ರತಿಯೊಂದು ಪಂಚಾಯಿತಿಯೂ ಒಂದೊಂದು ಗ್ರಂಥಾಲಯ ಹೊಂದಿರುತ್ತದೆ. ಆದರೆ, ಅವುಗಳ ಸ್ಥಿತಿ ಅಧೋಗತಿ. ಓದುಗರಿಗೆ ಮೇಜು- ಕುರ್ಚಿಯನ್ನು ಒದಗಿಸಿದ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತು ಎಂದು ವ್ಯವಸ್ಥಾಪಕರ ವ್ಯವಸ್ಥೆ ಭಾವಿಸುತ್ತದೆ. ಓದುವ ಸಂದರ್ಭದಲ್ಲಿ ದೇಹಬಾಧೆ ಉಂಟಾದರೆ ಅದನ್ನು ತೀರಿಸಿಕೊಳ್ಳಲಿಕ್ಕೆ ಶೌಚಾಲಯಗಳ ವ್ಯವಸ್ಥೆ ನಮ್ಮ ಪ್ರಮುಖ ಗ್ರಂಥಾಲಯಗಳಲ್ಲಿಯೂ ಇಲ್ಲ, ಇದ್ದರೂ ಶುಚಿತ್ವವೇ ಇಲ್ಲ.
ಕಾಫಿಯನ್ನೋ ತಂಪು ಪಾನೀಯವನ್ನೋ ಸೇವಿಸುತ್ತ ಪುಸ್ತಕ ಓದ ಬಯಸುವುದು ಭಾರತದ ಗ್ರಂಥಾಲಯಗಳಲ್ಲಿ ಸದ್ಯಕ್ಕಂತೂ ನಿರೀಕ್ಷಿಸುವಂತಿಲ್ಲ. ನಗರ ಪ್ರದೇಶಗಳಲ್ಲಿ ಕೆಲವೇ ಕೆಲವು ಗ್ರಂಥಾಲಯಗಳನ್ನು ಹೊರತುಪಡಿಸಿದರೆ ಉಳಿದೆಡೆಗಳಲ್ಲಿ ವಾಚಕ ಕಂಪ್ಯೂಟರ್ ಬಳಸಲಿಕ್ಕೆ ಅನುಕೂಲಗಳಿಲ್ಲ.
ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಿಕ್ಕೆ ಸರಕಾರ ಹಣಕಾಸಿನ ನೆಪ ಹೇಳುವಂತಿಲ್ಲ. ಗ್ರಂಥಾಲಯಗಳ ಹೆಸರಿನಲ್ಲಿ ಸರಕಾರ ತೆರಿಗೆ ಸಂಗ್ರಹಿಸುತ್ತದೆ. ಆದರೆ, ಆ ಹಣ ನೇರವಾಗಿ ಗ್ರಂಥಾಲಯ ಇಲಾಖೆಗೆ ಹೋಗುವುದಿಲ್ಲ.
ಸ್ಥಳೀಯ ಸಂಸ್ಥೆಗಳಿಗೆ ಹೋಗುತ್ತದೆ. ಗ್ರಂಥಾಲಯ ಹೆಸರಿನಲ್ಲಿ ಸಂಗ್ರಹಿಸಿರುವ ನೂರಾರು ಕೋಟಿ ರೂಪಾಯಿ ಈಗಲೂ ಸ್ಥಳೀಯ ಸಂಸ್ಥೆಗಳ ಬಳಿಯೇ ಇದೆ ಹಾಗೂ ಆ ಮೊತ್ತ ಬೇರೆ ಉದ್ದೇಶಗಳಿಗಾಗಿ ಬಳಕೆಯಾಗುತ್ತಿದೆ. ಈಗಲೂ ಓದುಗರನ್ನು ಗಮನದಲ್ಲಿಟ್ಟುಕೊಂಡ ಪ್ರಕಾಶಕರು ಗ್ರಂಥಾಲಯಗಳಿಂದ
ದೂರ ಉಳಿದಿದ್ದಾರೆ ಅಥವಾ ಅಲ್ಲಿನ ಲಂಚಗುಳಿತನಕ್ಕೆ ಹೇಸಿ ಅಂತರ ಕಾಪಾಡಿಕೊಂಡಿzರೆ. ಪರಿಸ್ಥಿತಿ ಹೀಗಿರುವಾಗ, ಗ್ರಂಥಾಲಯಗಳು ಓದುಗರನ್ನು ಕಳೆದುಕೊಳ್ಳುತ್ತಿವೆ ಎಂದು ಹಪಹಪಿಸುವುದಕ್ಕೆ ಅರ್ಥವಿಲ್ಲ. ಏಕೆಂದರೆ ಇಂದಿನ ವ್ಯವಸ್ಥೆಗೆ ಪ್ರಿಯವಾಗಿರುವುದು ಉದ್ಯಮವೇ ಹೊರತು, ಸಹೃದಯಿ
ಓದುಗನಲ್ಲ, ಓದುಗನೂ ಇಲ್ಲ.
ವಿಶ್ವದ ಮಾದರಿ ಗ್ರಂಥಾಲಯಗಳು ಈಗ ಪುಸ್ತಕಾಲಯಗಳಾಗಿ ಮಾತ್ರ ಉಳಿದಿಲ್ಲ. ಮಾಹಿತಿ-ಜ್ಞಾನದ ಎಲ್ಲ ರೂಪಗಳನ್ನೂ ಅವು ಅಳವಡಿಸಿಕೊಂಡಿವೆ. ಸಿನಿಮಾಸಕ್ತನೊಬ್ಬ ಅತ್ಯುತ್ತಮ ಚಿತ್ರಗಳನ್ನು ನೋಡಲಿಕ್ಕೆ ಇ-ಲೈಬ್ರರಿಗಳು ಅವಕಾಶ ಕಲ್ಪಿಸುತ್ತವೆ. ಸಹೃದಯ ಬಯಸುವ ಎಲ್ಲ ರೂಪದ ಮಾಹಿತಿ ಯೂ (ಧ್ವನಿಮುದ್ರಿಕೆಗಳು, ಇ-ಪುಸ್ತಕಗಳು, ಭೂಪಟಗಳು, ವಿಡಿಯೊಗಳು) ಅಲ್ಲಿ ಲಭ್ಯವಿರುತ್ತದೆ. ಎಂದಿನಂತೆ ಪ್ರತಿವರ್ಷ ನವೆಂಬರ್ ೧೪ರಿಂದ ೨೧ರ ಅವಧಿಯನ್ನು ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ ಎಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಭಾಷಣವನ್ನು ನಡೆಸುವ ಮೂಲಕ ಗ್ರಂಥಾಲಯಗಳು ತಮ್ಮ ಅಸ್ತಿತ್ವ ಪ್ರಕಟಪಡಿಸುವ ಕೆಲಸ ಮಾಡುತ್ತವೆ. ಉಳಿದಂತೆ ವರ್ಷವಿಡೀ ಜಾಣ ಕುರುಡುವಿನಂತೆ ನಿದ್ದೆ ಮಾಡುತ್ತವೆ.
ಸರಕಾರಕ್ಕೆ ಉಳಿದಿರುವುದು ಎರಡು ಮಾರ್ಗಗಳು. ಒಂದು, ಇರುವ ಗ್ರಂಥಾಲಯಗಳನ್ನು ಈ ಕಾಲಕ್ಕೆ ತಕ್ಕಂತೆ ರೂಪಾಂತರಿಸುವುದು ಹಾಗು ಮತ್ತಷ್ಟು ಓದುಗರನ್ನು ಉತ್ತೇಜಿಸುವುದು. ಆ ಮೂಲಕ ಗ್ರಂಥಾಲಯಗಳನ್ನು ಜನಸ್ನೇಹಿಯಾಗಿಸುವುದು. ಎರಡನೆಯ ಮಾರ್ಗ- ಗ್ರಂಥಾಲಯ ಇಲಾಖೆಯನ್ನು, ಗ್ರಂಥಾಲಯಗಳನ್ನು ಮುಚ್ಚುವುದು. ಇದರಿಂದಾಗಿ ನಾಗರಿಕರ ಮೇಲಿನ ತೆರಿಗೆ ಹೊರೆ ಕೊಂಚ ಹಗುರ ಮಾಡಿಕೊಳ್ಳುವುದು. ಈಗಿರುವ ಗ್ರಂಥಾಲಯ ಗಳಿಂದ ಪುಸ್ತಕ ಸಂಸ್ಕೃತಿಯ ಬೆಳವಣಿಗೆಯಾಗಲೀ ಜನಸಾಮಾನ್ಯರಿಗೆ ಅನುಕೂಲವಾಗಲೀ ಇಲ್ಲದಿರುವುದರಿಂದ ಅವುಗಳನ್ನು ಮುಚ್ಚುವುದರಿಂದ ಯಾರಿಗೇನೂ ನಷ್ಟವಿಲ್ಲ.
(ಲೇಖಕರು: ಸಿವಿಲ್ ಎಂಜಿನಿಯರ್ ಹಾಗೂ ಹವ್ಯಾಸಿ
ಬರಹಗಾರ)