ಗುಣಗಾನ
ಜೆ.ಸಿ.ಜಾಧವ
ಒಂದು ದೇಶದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಬೇಕಾದರೆ, ಅಲ್ಲಿನ ಆರ್ಥಿಕ ನೀತಿಗಳು ಮತ್ತು ಸರಕಾರಿ ಸ್ವಾಮ್ಯದ ಆರ್ಥಿಕ ಸಂಸ್ಥೆಗಳು ಬಲಿಷ್ಠ ವಾಗಿರಬೇಕು. ಅಂದಾಗ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯ. ಈಗ ನಮ್ಮ ದೇಶವು ವಿಶ್ವದ ಆರ್ಥಿಕತೆಯಲ್ಲಿ ಗಮನಾರ್ಹ ಸ್ಥಾನವನ್ನು ದಕ್ಕಿಸಿಕೊಂಡಿರು ವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈ ಮೊದಲು ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಪ್ರತಿನಿಧಿಗಳಷ್ಟೇ ಜೀವವಿಮೆಯ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದರು. ಯಾವುದೇ ಮಾಧ್ಯಮಗಳಿಂದಾಗಲೀ ಅಥವಾ ದೇಶದ ಉನ್ನತೆ ಹುದ್ದೆಗಳಲ್ಲಿ ಇರುವವರಿಂದಾಗಲೀ ಎಲ್‌ಐಸಿ ಬಗ್ಗೆ ಮಾತುಗಳು ಕೇಳಿಬರುತ್ತಿರಲಿಲ್ಲ. ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಎಲ್ ಐಸಿ, ಜೀವವಿಮೆಯ ಜತೆಗೆ ದೇಶದ ಅಭಿವೃದ್ಧಿ ಕಾರ್ಯಗಳಿಗೂ ನಿರಂತರ ಹಣಕಾಸು ನೆರವು ಒದಗಿಸುತ್ತ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವುದು ಬಹುತೇಕರಿಗೆ ಗೊತ್ತಿರದ ಸಂಗತಿ.
ಇತ್ತೀಚಿನ ಬದಲಾದ ಆರ್ಥಿಕತೆಯಲ್ಲಿ ಎಲ್‌ಐಸಿಯಲ್ಲಿ ದೇಶದ ಜನರ ವಿಶ್ವಾಸ ಹೆಚ್ಚಿದೆ. ಸಾಮಾನ್ಯವಾಗಿ ಕೇಂದ್ರದ ವಿತ್ತ ಸಚಿವರು ಎಲ್‌ಐಸಿ ಕಚೇರಿಗೆ ಭೇಟಿ ನೀಡಿದಾಗ ಅಥವಾ ಅದರ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಸಂಸ್ಥೆಯ ಕಾರ್ಯವನ್ನು ಪ್ರಶಂಸಿಸುತ್ತಿದ್ದರು. ಇದು ಬಿಟ್ಟರೆ ಬೇರಾವುದೇ ವೇದಿಕೆಗಳಲ್ಲಿ ಎಲ್‌ಐಸಿ ಬಗ್ಗೆ ಚರ್ಚೆಯಾಗುತ್ತಿದ್ದುದು ವಿರಳವೇ. ಆದರೆ ದೇಶದ ಉನ್ನತ ಹುದ್ದೆಯಲ್ಲಿರುವ ಪ್ರಧಾನ ಮಂತ್ರಿಗಳು, ಪ್ರಜಾ ಪ್ರಭುತ್ವದ ದೇಗುಲವೆನಿಸಿರುವ ಸಂಸತ್ತಿನಲ್ಲಿ ಎರಡು ಸಲ (ಕಳೆದ ವರ್ಷದ ಆಗಸ್ಟ್‌ನಲ್ಲಿ ಮತ್ತು ಈ ವರ್ಷದ ಫೆಬ್ರವರಿಯಲ್ಲಿ) ಎಲ್‌ಐಸಿಯ ಕಾರ್ಯ ವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ‘ಇಂಡಿಯಾ ಟುಡೇ ಕಾನ್‌ಕ್ಲೇವ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಮತ್ತೊಮ್ಮೆ ಎಲ್‌ಐಸಿ ಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಿದೆ. ಇದು ಎಲ್‌ಐಸಿಯ ವಿಶ್ವಾಸಾರ್ಹತೆಗೆ ದಕ್ಕಿದ ಮತ್ತೊಂದು ಗರಿ ಎನ್ನಲಡ್ಡಿಯಿಲ್ಲ.
ದೇಶದ ‘ಫಾರ್ಚೂನ್-೫೦೦’ ಕಂಪನಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಎಲ್‌ಐಸಿ, ಈಗ್ಗೆ ಕೆಲವು ದಿನಗಳ ಹಿಂದೆ ಜಗತ್ತಿನ ನಂ.೧ ‘ವಿಮಾ ಬ್ರ್ಯಾಂಡ್’ ಎನಿಸಿಕೊಂಡಿದೆ. ಈ ಮೆಚ್ಚುಗೆಯು ಎಲ್‌ಐಸಿಯ ಸಮಸ್ತ ಬಳಗಕ್ಕೆ ಹರ್ಷವನ್ನು ತಂದಿರುವುದರ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿರು ವುದು ಸುಳ್ಳಲ್ಲ. ಎಲ್ ಐಸಿಯು ೧೯೫೬ರಿಂದಲೂ ಕೇಂದ್ರ ಸರಕಾರದ ಸ್ವಾಮ್ಯತ್ವದಲ್ಲಿ ದ್ದರೂ, ಈ ೬೮ ವರ್ಷಗಳ ಅವಧಿಯಲ್ಲಿ ಯಾವತ್ತೂ ಸರಕಾರದ ನೆರವನ್ನು ಬಯಸಿಲ್ಲ ಮತ್ತು ಪಡೆದಿಲ್ಲ. ಬದಲಾಗಿ ಪ್ರತಿವರ್ಷವೂ ಕೇಂದ್ರ ಸರಕಾರಕ್ಕೆ ಲಾಭಾಂಶದ ಶೇ.೫ರಷ್ಟು ಮೊತ್ತವನ್ನು, ಅಂದರೆ ಡಿವಿಡೆಂಡ್ ರೂಪದಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ನೀಡುತ್ತಾ ಬಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಲ್ಲದೆ ಬೇರೆ ಬೇರೆ ಆರ್ಥಿಕ ಸಂಸ್ಥೆಗಳಿಗೆ ಎಲ್‌ಐಸಿಯು ಹಣಕಾಸಿನ ನೆರವು ನೀಡಿ ಪುನಶ್ಚೇತನಗೊಳಿದ್ದೂ ಇದೆ.
೨೦೨೨ರ ವರ್ಷದಲ್ಲಿನ ಸಾರ್ವಜನಿಕ ಪ್ರಾರಂಭಿಕ ಷೇರು ವಿತರಣೆಯಲ್ಲಿ (ಐಪಿಒ) ಎಲ್ ಐಸಿಯ ಪಾಲು ಶೇ.೩೫ರಷ್ಟಿತ್ತು. ದೇಶದ ಮೂಲಭೂತ ಸೌಕರ್ಯಗಳಲ್ಲಿ ಲಕ್ಷಾಂತರ ಕೋಟಿ ರುಪಾಯಿಗಳಷ್ಟು ಹೂಡಿಕೆ ಮಾಡಿರುವ ಎಲ್‌ಐಸಿ, ಜನಸಾಮಾನ್ಯರಿಗೆ ಸಾಕಷ್ಟು ಉತ್ತಮ ಯೋಜನೆಗಳನ್ನು ನೀಡಿದೆ. ಮಾನವನ ಜೀವನಪರ್ಯಂತ ಆದಾಯ ನೀಡುವ ಯೋಜನೆಗಳು ಅವುಗಳಲ್ಲಿ ಅಡಕವಾಗಿದ್ದು, ಎಲ್‌ಐಸಿಯನ್ನು ಹೊರತುಪಡಿಸಿ ಜಗತ್ತಿನ ಬೇರಾವ ಸಂಸ್ಥೆಯಿಂದಲೂ ಇಂಥ ಪ್ರಯೋಜನ ಸಿಗುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.
ಎಲ್‌ಐಸಿಯ ‘ಜೀವನ್ ಅಕ್ಷಯ್’ ಮತ್ತು ‘ಶಾಂತಿ’ ಯೋಜನೆಗಳು ಜೀವನ ಪರ್ಯಂತ ಪಿಂಚಣಿ ನೀಡುತ್ತವೆ. ‘ಜೀವನ್ ಉಮಂಗ್’ ಮತ್ತು ‘ಜೀವನ್ ಉತ್ಸವ್’ ಯೋಜನೆಗಳು ವರ್ಷಂಪ್ರತಿ ಜೀವನಾಂಶ ನೀಡುವುದರ ಜತೆಗೆ, ವಿಮಾ ರಕ್ಷಣೆಯನ್ನೂ ಒದಗಿಸುತ್ತವೆ. ಮತ್ತೊಂ ದೆಡೆ, ‘ಜೀವನ್ ಆನಂದ್’ ಯೋಜನೆಯು ಆಜೀವಪರ್ಯಂತ ವಿಮೆ ಒದಗಿಸುತ್ತದೆ. ಹೀಗಾಗಿ, ‘ಎಲ್‌ಐಸಿ- ಜೀವನದ ಜತೆಗೂ, ಜೀವನದ ನಂತರವೂ’ ಎನ್ನುವ ಘೋಷವಾಕ್ಯವು ಅರ್ಥಪೂರ್ಣವಾಗಿದೆ. ೨೦೪೭ರ ವೇಳೆಗೆ ನಮ್ಮ ದೇಶದ ಎಲ್ಲಾ ಜನರಿಗೆ ಜೀವವಿಮೆಯ ರಕ್ಷಣೆ ಇರಬೇಕೆನ್ನುವುದು ಕೇಂದ್ರ ಸರಕಾರದ ಆಶಯ ಮತ್ತು ನಿರೀಕ್ಷೆ.
ಹೀಗೆ ಸಾರ್ವಜನಿಕರ ಏಳಿಗೆಗಾಗಿಯೇ ಇರುವ ಎಲ್‌ಐಸಿ ಎಂಬ ವೃಕ್ಷ ಇನ್ನಷ್ಟು ಬೆಳೆದು ಮಹಾವೃಕ್ಷವಾಗಲಿ ಎಂಬ ಹಾರೈಕೆ ಸಹೃದಯಿಗಳದ್ದು.
(ಲೇಖಕರು ಹವ್ಯಾಸಿ ಬರಹಗಾರರು)