ಯೋಗ ಕ್ಷೇಮ
ಶಾಲಿನಿ ರಜನೀಶ್
‘ವಿಮೆ’ ಎಂಬುದು ಬಹಳಷ್ಟು ಮಂದಿ ಕೇಳಿರುವ ಪದ; ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಮಂದಿಯೇ ಹೆಚ್ಚು. ನಮಗೇನೂ ಆಗುವುದಿಲ್ಲ ಎಂಬ ಭಾವನೆ ಒಂದೆಡೆಯಾದರೆ, ಆದಾಗ ನೋಡಿಕೊಳ್ಳೋಣ ಎಂಬುದು ಇನ್ನೊಂದೆಡೆ. ಹಠಾತ್ತಾಗಿ ಅಪಘಾತ, ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆಗೆ ಸೇರಿದಾಗ, ಹಣ ಹೊಂದಿಸಲು ಕುಟುಂಬದವ ರಿಂದಾಗುವ ಪರದಾಟ ಹೇಳಲಸಾಧ್ಯ.
ಬೆಳೆನಾಶ, ವಾಹನ ಜಖಂ ಆದಾಗಲೂ ಕೆಲವರಲ್ಲಿ ತಕ್ಷಣಕ್ಕೆ ಹಣವಿರುವುದಿಲ್ಲ. ಅದರಲ್ಲೂ, ಬಡ ಕುಟುಂಬಗಳಿಗೆ ಇಂಥ ಪರಿಸ್ಥಿತಿ ಬಂದಾಗ ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು. ಇಂದು ಯಾರಿಗೆ, ಯಾವಾಗ ಏನಾಗುತ್ತದೆ ಎಂಬ ಗ್ಯಾರಂಟಿ ಯನ್ನು ಯಾರೂ ಕೊಡಲಾಗುವುದಿಲ್ಲ. ರಸ್ತೆಯಲ್ಲಿ ಹೋಗುವಾಗ ಅಪಘಾತ ವಾಗಬಹುದು, ಹಠಾತ್ತಾಗಿ ಆರೋಗ್ಯ ಕೆಡಬಹುದು ಅಥವಾ ಮರಣಿಸಬಹುದು.
ಇವೆಲ್ಲವೂ ಕುಟುಂಬದವರ ಕಣ್ಣೀರಿಗೆ ಕಾರಣವಾಗುವುದಲ್ಲದೆ, ಎಷ್ಟೋ ಬಾರಿ ಅವರನ್ನು ಸಾಲಕ್ಕೆ ದೂಡುತ್ತದೆ ಮಾತ್ರವಲ್ಲ, ಸಾಲ ಹಿಂದಿರುಗಿಸಲಾಗದೆ ಅವರು ನಲುಗುವಂತಾಗುತ್ತದೆ. ಅಪಾಯ ತಗ್ಗಿಸುವಿಕೆ ಮತ್ತು ರಕ್ಷಣೆಗಾಗಿರುವ ಪ್ರಮುಖ ಸಾಧನವಾಗಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ವಿಮೆ ಯಾವಾಗಲೂ ಮುಂಚೂಣಿ ಯಲ್ಲಿದೆ. ಈಗಂತೂ ಹಲವು ಖಾಸಗಿ ಮತ್ತು ಸಾರ್ವಜನಿಕ ವಿಮಾ ಕಂಪನಿಗಳು ಭಾರತದಲ್ಲಿ ತಲೆಯೆತ್ತಿವೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ರಾಷ್ಟ್ರದಲ್ಲಿ ವಿಮಾ ಉದ್ಯಮದ ಕ್ರಮಬದ್ಧ ಬೆಳವಣಿಗೆಯನ್ನು ನಿಯಂತ್ರಿಸಲು, ಉತ್ತೇಜಿಸಲು ಮತ್ತು ಖಚಿತಪಡಿಸಿಕೊಳ್ಳಲು ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ೪ ವಿಧದ ವಿಮೆಗಳಿವೆ.
ಅವೆಂದರೆ, ಜೀವವಿಮೆ, ಸಾಮಾನ್ಯವಿಮೆ, ಆರೋಗ್ಯ ವಿಮೆ ಮತ್ತು ಮರುವಿಮೆ. ಭಾರತದಲ್ಲಿನ ಜೀವವಿಮಾ ಕಂಪನಿಗಳಲ್ಲಿ ಲೈಫ್
ಇನ್ಶೂರೆನ್ಸ್ ಕಾರ್ಪೊರೇಷನ್ ಆ- ಇಂಡಿಯಾ (ಎಲ್‌ಐಸಿ) ಎಲ್ಲರಿಗೂ ಪರಿಚಿತ ಹೆಸರು. ಇದು ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿಯಾಗಿದ್ದು, ಉಳಿದ ೨೩ ಜೀವವಿಮಾ ಕಂಪನಿಗಳು ಖಾಸಗಿ ವಲಯದ್ದಾಗಿವೆ. ಸಾಮಾನ್ಯವಾಗಿ ವಿಮಾದಾರರು ಪ್ರೀಮಿಯಂ ಪಾವತಿಸಿದ ನಿರ್ದಿಷ್ಟ ಅವಧಿಯಲ್ಲಿ ಮರಣ ಹೊಂದಿದಾಗ ಅಥವಾ ಪೂರ್ವ ನಿರ್ಧಾರಿತ ಅವಧಿಯ ನಂತರ ಫಲಾನುಭವಿಗಳಿಗೆ ಒಪ್ಪಂದದ ಮೇಲೆ ನೀಡುವ ಹಣದ ಪಾವತಿಯಾಗುತ್ತದೆ.
ಸಾಮಾನ್ಯ ವಿಮೆ ಕಂಪನಿಗಳಲ್ಲಿ ನ್ಯಾಷನಲ್ ಇನ್ಶೂರೆನ್ಸ್, ನ್ಯೂ ಇಂಡಿಯಾ ಅಶ್ಯೂರೆನ್ಸ್ ಸೇರಿದಂತೆ ಸಾರ್ವಜನಿಕ ವಲಯದ ೪ ಕಂಪನಿಗಳಿದ್ದರೆ, ಎಚ್‌ಡಿಎಫ್ ಸಿ, ಎಸ್‌ಬಿಐ, ಐಸಿಐಸಿಐ ಸೇರಿದಂತೆ ೨೧ ಖಾಸಗಿ ಕಂಪನಿಗಳಿವೆ. ಇವು ಆರೋಗ್ಯ ಸೇರಿದಂತೆ, ಮನೆ, ವಾಹನ, ನೆರೆ, ಅಪಘಾತ, ಬೆಂಕಿ ಅವಘಡ ಹೀಗೆ ಹಲವು ವಿಧದ ವಿಮೆಗಳನ್ನು ಒಳಗೊಂಡಿವೆ. ಆರೋಗ್ಯ ವಿಮೆಯನ್ನು ಪ್ರಮುಖವಾಗಿಟ್ಟು ಕೊಂಡಿರುವ ೫ ಕಂಪನಿಗಳಿವೆ. ಮರುವಿಮೆ ಕಂಪನಿಗಳಲ್ಲಿ ಸಾರ್ವಜನಿಕ ವಲಯದ ೧, ಖಾಸಗಿ ವಲಯದ ೧೦ ಕಂಪನಿಗಳಿವೆ. ಇವು ವಿಮಾ ಕಂಪನಿಗಳಿಗೆ ವಿಮೆ ಮಾಡುತ್ತವೆ.
ಔಪಚಾರಿಕ ವಲಯದಲ್ಲ ಕೆಲಸ ಮಾಡುವ ಉದ್ಯೋಗಿಗಳು ಆರೋಗ್ಯ ವಿಮೆಗೆ ಪ್ರವೇಶವನ್ನು ಹೊಂದಿದ್ದಾರೆ. ೧೯೪೮ರ ಉದ್ಯೋಗಿ ರಾಜ್ಯ ವಿಮಾ ಕಾಯಿದೆಯು ಇದಕ್ಕೆ ಪ್ರವೇಶವನ್ನು ಅನುಮತಿಸುತ್ತದೆ. ಆದರೆ ಅವರು ಆ ಉದ್ಯೋಗ ಬಿಟ್ಟಾಗ ಆ ವಿಮಾಸೌಕರ್ಯ ಸ್ಥಗಿತವಾಗುತ್ತದೆ. ಹೆಚ್ಚಿನ ಉದ್ಯೋಗಿಗಳು ಇಂಥ ವಿಮೆಯನ್ನು ಅವಲಂಬಿಸಿದ್ದಾರೆಯೇ ಹೊರತು ಅವರದ್ದೇ
ಆದ ವೈಯಕ್ತಿಕ ವಿಮೆಯನ್ನು ಹೊಂದಿರುವುದಿಲ್ಲ. ಸಂಪನ್ನ ವ್ಯಕ್ತಿಗಳು ತಮ್ಮ ಜೀವಕ್ಕೆ, ಆರೋಗ್ಯಕ್ಕೆ, ಮನೆ, ವಾಹನ, ಬೆಳೆ
ಹೀಗೆ ಹಲವು ಉದ್ದೇಶಗಳಿಗೆ ವಿಮೆಯನ್ನು ಮಾಡಿರುತ್ತಾರೆ.
ಆದರೆ ಈ ವಿಮಾ ಕಂಪನಿಗಳಿಗೆ ವಾರ್ಷಿಕವಾಗಿ ಭರಿಸುವ ಪ್ರೀಮಿಯಂ ಮೊತ್ತ ದೊಡ್ಡದಾಗಿರುವುದರಿಂದ, ಹೆಚ್ಚಿನ ಬಡ ಕುಟುಂಬಗಳಿಗೆ ಈ ಖಾಸಗಿ ವಿಮಾ ಸೌಕರ್ಯವನ್ನು ಬಳಸಲು ಕಷ್ಟವಾಗುತ್ತದೆ. ಹಾಗಾಗಿ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ ಪ್ರಸ್ತುತ ಕರ್ನಾಟಕದಲ್ಲಿ ಶೇ. ೫೬ ಮಂದಿ ಮಾತ್ರ ವಿಮೆಯನ್ನು ಹೊಂದಿದ್ದಾರೆ ಎಂಬುದು ಇದಕ್ಕೆ ಸಾಕ್ಷಿ.
ವಿಶ್ವಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಅಗತ್ಯ
ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಕಾರಣ, ಅವರು ತಮ್ಮ ಜೇಬಿನಿಂದ ಆರೋಗ್ಯ ರಕ್ಷಣೆಗಾಗಿ ಹೆಚ್ಚು ಹಣ ವ್ಯಯಿಸುವುದು ಅವರ ಕುಟುಂಬಗಳನ್ನು ಇನ್ನಷ್ಟು ಬಡತನಕ್ಕೆ ತಳ್ಳುತ್ತದೆ. ಎನ್‌ಎಸ್‌ಎಸ್‌ಒ ಸಮೀಕ್ಷೆಗಳ ಆಧಾರದ ಮೇಲೆ ‘ಬ್ರೂಕಿಂಗ್ಸ್ ಇಂಡಿಯಾ’ ನಡೆಸಿರುವ ವಿಶ್ಲೇಷಣೆಯು, ‘ಆರೋಗ್ಯ ರಕ್ಷಣೆಯ ವೆಚ್ಚದಿಂದಾಗಿ ಪ್ರತಿವರ್ಷ ಭಾರತದ ಜನಸಂಖ್ಯೆಯ ಶೇ.೭ಕ್ಕಿಂತ ಹೆಚ್ಚು ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ’ ಎಂದು ತೋರಿಸುತ್ತದೆ. ಆದ್ದರಿಂದ, ಬಡವರ ಆರೋಗ್ಯ ಖರ್ಚನ್ನು ಕಡಿಮೆ ಮಾಡಲು ಮತ್ತು ಅಪಘಾತದಂಥ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೆರವಾಗಲು ಸರಕಾರವು ಹಲವು ವಿಮೆಗಳನ್ನು ಪರಿಚಯಿಸಿದೆ.
೨೦೨೧ರ ರಸ್ತೆ ಅಪಘಾತ ವರದಿಯ ಪ್ರಕಾರ, ಭಾರತದಲ್ಲಿ ಒಟ್ಟು ೪.೧೨ ಲಕ್ಷ ರಸ್ತೆ ಅಪಘಾತಗಳಾಗಿದ್ದು ೧.೫೩ ಲಕ್ಷ ಮಂದಿ
ಸಾವನ್ನಪ್ಪಿದ್ದಾರೆ. ಅಂತೆಯೇ ಕರ್ನಾಟಕದಲ್ಲಿ ಒಟ್ಟು ೩೪,೬೪೭ ರಸ್ತೆ ಅಪಘಾತಗಳಾಗಿದ್ದು ೧೦,೦೩೮ ಮಂದಿ ಸಾವನ್ನಪ್ಪಿದ್ದಾರೆ.
ಈ ಅಂಕಿ-ಅಂಶಗಳು ರಸ್ತೆ ಅಪಘಾತದ ಗಂಭೀರತೆಗೆ ಸಾಕ್ಷಿಯಾಗಿವೆ. ಇದನ್ನು ತಪ್ಪಿಸಲು ಸರಕಾರಗಳು ರೂಪಿಸಿರುವ ಕೆಲವೊಂದು ವಿಮೆಗಳನ್ನಾದರೂ ನಾವು ತಿಳಿದುಕೊಳ್ಳಲೇಬೇಕು ಮಾತ್ರವಲ್ಲ, ಉಳಿದವರಿಗೂ ಇದರ ಬಗ್ಗೆ ಅರಿವು ಮೂಡಿಸುವ
ತುರ್ತು ಕೆಲಸವಾಗಬೇಕಿದೆ.
ಲಭ್ಯವಿರುವ ಕೆಲವು ಯೋಜನೆಗಳ ಪೈಕಿ ಅತ್ಯುತ್ತಮ ಯೋಜನೆಗಳ ವಿವರ ಕೆಳಕಂಡಂತಿದೆ:
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ: ಈ ಯೋಜನೆಯು ಭಾರತ ಸರಕಾರದ ರಾಷ್ಟ್ರೀಯ ಕಡಿಮೆ ಆದಾಯ ಗಳಿಸುವವರಿಗೆ ಆರೋಗ್ಯ ವಿಮಾ ರಕ್ಷಣೆಗೆ ಉಚಿತ ಪ್ರವೇಶವನ್ನು ದೊರಕಿಸುವ ಗುರಿಯನ್ನು ಹೊಂದಿದೆ. ಈ ವಿಮೆಯ ಪ್ರಯೋಜನಗಳೆಂದರೆ, ಬಿಪಿಎಲ್ ಕುಟುಂಬದ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಒಂದು ವರ್ಷಕ್ಕೆ ಸಂಪೂರ್ಣವಾಗಿ ೫ ಲಕ್ಷ ರುಪಾಯಿ ಮಿತಿಯ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಎಪಿಎಲ್ ಕಾರ್ಡುದಾರರು ೫ ಲಕ್ಷ ರುಪಾಯಿಯಲ್ಲಿ ಶೇ. ೩೦ರಷ್ಟು ಅಂದರೆ ೧.೫೦ ಲಕ್ಷ ರುಪಾಯಿವರೆಗೆ ವಾರ್ಷಿಕ ವಿಮಾಸೌಲಭ್ಯ ಪಡೆಯಬಹುದು.
ಕಾರಣ, ಇದೊಂದು ಕೌಟುಂಬಿಕ ವಿಮೆಯಾಗಿದೆ. ಒಂದು ಪಡಿತರ ಚೀಟಿಯಲ್ಲಿ ಇರುವ ಎಲ್ಲ ಸದಸ್ಯರಿಗೆ ವಿಮಾಸೌಲಭ್ಯದ ಪ್ರಯೋಜನ ಸಿಗಲಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಉಚಿತ ಆರೋಗ್ಯ ಸಹಾಯವಾಣಿ ೧೦೪ ಅಥವಾ ಟೋಲ್‌ಫ್ರೀ ಸಂಖ್ಯೆ ೧೮೦೦-೪೨೫-೮೩೩೦ಗೆ ಕರೆಮಾಡಿ. ಯೋಜನೆಯ ಬಗ್ಗೆ ಮಾಹಿತಿ ಪಡೆಯಲು eಠಿಠಿmo:// ಜ್ಟZಞZಟ್ಞಛಿ.hZZಠಿZhZ.ಜಟq.ಜ್ಞಿ ಅನ್ನು ಸಂಪರ್ಕಿಸಬಹುದು. ಈ ವಿಮೆಯನ್ನು ಪಡೆಯಲು ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆಗಳಿದ್ದರೆ ಸಾಕು. ಈ ಆರೋಗ್ಯ ವಿಮೆ ಕಾರ್ಡನ್ನು ಗ್ರಾಮ ಪಂಚಾಯಿತಿ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆ ಅಥವಾ
ಸರಕಾರಿ ಸ್ವಾಮ್ಯದ ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಸೇವಾಸಿಂಧು ಕೇಂದ್ರ ಇಲ್ಲಿ ಎಲ್ಲಿಯಾದರೂ ಪಡೆಯಬಹುದು.
ಕಾರ್ಡ್ ಮಾಡಿಸಿಕೊಳ್ಳಲು ಅರ್ಹ ದಾಖಲೆಯೊಂದಿಗೆ ಕುಟುಂಬದ ಪ್ರತಿ ಸದಸ್ಯರು ಹಾಜರಿರಬೇಕು. ಈ ಆರೋಗ್ಯ ವಿಮೆಗೆ
ಯಾವುದೇ ಹಣ ಕಟ್ಟಬೇಕಾಗಿಲ್ಲ. ಕಾರ್ಡ್ ಪ್ರತಿಯನ್ನು ಎ೪ ಗಾತ್ರದ ಬಿಳಿಹಾಳೆಯಲ್ಲಿ ಪಡೆಯಬೇಕಾದರೆ, ಕೇವಲ ೧೦ ರುಪಾಯಿ ಕೊಟ್ಟರೆ ಸಾಕು ಅಥವಾ ಅಆಅಓ ಕಾರ್ಡ್ ಬೇಕಾದಲ್ಲಿ ೩೫ ರುಪಾಯಿಗಳನ್ನು ನೀಡಬೇಕು. ಇದಕ್ಕಿಂತ ಹೆಚ್ಚಿನ ಶುಲ್ಕ ಕೇಳುತ್ತಿದ್ದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ದೂರು ನೀಡಬಹುದು ಅಥವಾ ಕರ್ನಾಟಕ ಒನ್ (ಡಿಡಿಡಿ.hZZಠಿZhZಟ್ಞಛಿ.ಜಟq.ಜ್ಞಿ) ಹಾಗೂ ಬೆಂಗಳೂರು ಒನ್ ಕೇಂದ್ರಗಳು, ಸೇವಾಸಿಂಧು ಕೇಂದ್ರಗಳ (eಠಿಠಿmo://oಛಿqZoಜ್ಞಿbe.hZZಠಿZhZ.ಜಟq. ಜ್ಞಿ) ಜಿಲ್ಲಾ ಕಾರ್ಯಕ್ರಮ ಸಂಯೋಜಕರಿಗೆ ದೂರು ನೀಡಬಹುದು.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ: ಇದು ಅಪಘಾತ ವಿಮಾ ಯೋಜನೆಯಾಗಿದ್ದು, ಅಪಘಾತದ ಕಾರಣದಿಂದ ಮರಣ ಅಥವಾ ಅಂಗವೈಕಲ್ಯಕ್ಕೆ ತುತ್ತಾದರೆ ೨ ಲಕ್ಷ ರು.ವರೆಗಿನ ರಕ್ಷಣೆಯನ್ನು ನೀಡುತ್ತದೆ. ಈ ವಿಮೆಯನ್ನು ಮಾಡಲು ಪ್ರತಿವರ್ಷಕ್ಕೆ ಕೇವಲ ೨೦ ರು. ಖರ್ಚುಮಾಡಿದರೆ ಆಯಿತು.
ವರ್ಷಕ್ಕೆ ೨೦ ರು. ಭರಿಸುವುದು ಖಂಡಿತವಾಗಿಯೂ ಯಾರಿಗೂ ಕಷ್ಟವಲ್ಲ. ಯಾವುದೇ ಬ್ಯಾಂಕ್ ಖಾತೆ ಹೊಂದಿರುವ, ೧೮ರಿಂದ ೭೦ ವರ್ಷ ವಯಸ್ಸಿನ ಎಲ್ಲಾ ವೈಯಕ್ತಿಕ ಬ್ಯಾಂಕ್ ಖಾತೆದಾರರು ಈ ವಿಮೆಯಲ್ಲಿ ಒಳಪಡಲು ಅರ್ಹರಾಗಿರುತ್ತಾರೆ. ಒಂದು ವೇಳೆ ಒಬ್ಬ ವ್ಯಕ್ತಿಯು ಒಂದು ಅಥವಾ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ವ್ಯಕ್ತಿಯು ಒಂದು ಬ್ಯಾಂಕ್ ಖಾತೆಯ ಮೂಲಕ
ಮಾತ್ರ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಬ್ಯಾಂಕ್ ಖಾತೆಗೆ ಆಧಾರ್ ಪ್ರಾಥಮಿಕ ಕೆವೈಸಿ ಆಗಿರುತ್ತದೆ.
ಸಾಮಾನ್ಯವಾಗಿ ಜೂನ್ ೧ರಿಂದ ಮೇ ೩೧ರವರೆಗೆ ಒಂದು ವರ್ಷದ ಅವಧಿಗೆ ಈ ವಿಮಾ ಯೋಜನೆ ಇರುತ್ತದೆ. ಇದಕ್ಕಾಗಿ
ನಿಗದಿತ ನಮೂನೆಗಳಲ್ಲಿ ಗೊತ್ತುಪಡಿಸಿದ ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್ ಮೂಲಕ ಸೇರುವ/ ಪಾವತಿಸುವ ಆಯ್ಕೆಯನ್ನು ಪ್ರತಿವರ್ಷ ಮೇ ೩೧ರೊಳಗೆ ನೀಡಬೇಕಾಗುತದೆ. ವ್ಯಕ್ತಿಯು ಪೂರ್ಣ ವಾರ್ಷಿಕ ಪ್ರೀಮಿಯಂ ಪಾವತಿಯ ನಂತರ ಈ ಯೋಜನೆಯಲ್ಲಿ ಔಪಚಾರಿಕವಾಗಿ ಸೇರ್ಪಡೆಯಾಗುತ್ತಾನೆ/ಳೆ. ಈ ಯೋಜನೆಗೆ ತಡವಾಗಿ ಸೇರ್ಪಟ್ಟರೂ ಮೇ ೩೧ರವರೆಗೆ ಇದರ ಅವಧಿ ಇರುತ್ತದೆ ಮತ್ತು ಇದನ್ನು ಪ್ರತಿವರ್ಷ ನವೀಕರಿಸಬೇಕಾಗುತ್ತದೆ.
ಆದಾಗ್ಯೂ, ಅರ್ಜಿದಾರರು ದಾಖಲಾತಿ/ಸ್ವಯಂ-ಡೆಬಿಟ್ ಗಾಗಿ ಅನಿರ್ದಿಷ್ಟ/ದೀರ್ಘವಾದ ಆಯ್ಕೆಯನ್ನು ನೀಡಬಹುದು. ಹಿಂದಿನ ಅನುಭವದ ಆಧಾರದ ಮೇಲೆ ಪರಿಷ್ಕರಿಸಬಹುದಾದ ನಿಯಮಗಳೊಂದಿಗೆ ಯೋಜನೆಯು ಮುಂದುವರಿಕೆಗೆ ಒಳಪಟ್ಟಿರುತ್ತದೆ. ಯಾವುದೇ ಹಂತದಲ್ಲಿ ಯೋಜನೆಯಿಂದ ನಿರ್ಗಮಿಸುವ ವ್ಯಕ್ತಿಗಳು ಮುಂದಿನ ವರ್ಷಗಳಲ್ಲಿ ಮೇಲಿನ ವಿಧಾನದ ಮೂಲಕ ಯೋಜನೆಗೆ ಮರುಸೇರ್ಪಡೆಗೊಳ್ಳಬಹುದು. ಭಾಗವಹಿಸುವ ಚಂದಾದಾರರ ಪರವಾಗಿ ಭಾಗವಹಿಸುವ ಬ್ಯಾಂಕ್ ಮಾಸ್ಟರ್ ಪಾಲಿಸಿದಾರನಾಗಿರುತ್ತದೆ. ಈ ವಿಮಾ ಯೋಜನೆಯಲ್ಲಿ ನೋಂದಾಯಿತ ವ್ಯಕ್ತಿ ಆಕಸ್ಮಿಕ ಮರಣ ಹೊಂದಿದರೆ, ಯಾರ ಹೆಸರಿಗೆ ಆ ಹಣ ಹೋಗಬೇಕೆಂದು ಚಂದಾದಾರರು ಸೂಚಿಸಿರುತ್ತಾರೋ ಅವರಿಗೆ ೨ ಲಕ್ಷ ರು. ದೊರಕುತ್ತದೆ.
ಒಂದು ವೇಳೆ ವ್ಯಕ್ತಿಯ ಎರಡೂ ಕಣ್ಣುಗಳ ಸಂಪೂರ್ಣ ಮತ್ತು ಸರಿಪಡಿಸಲಾಗದ ನಷ್ಟ, ಇಲ್ಲವೇ ಎರಡೂ ಕೈಗಳು ಅಥವಾ
ಕಾಲುಗಳ ಶಾಶ್ವತ ಊನವಾಗಿದ್ದರೂ ೨ ಲಕ್ಷ ರು. ದೊರಕುತ್ತದೆ.
ಅಂತೆಯೇ ಒಂದು ಕಣ್ಣಿನ ಸಂಪೂರ್ಣ ಮತ್ತು ಸರಿಪಡಿಸಲಾಗದ ದೃಷ್ಟಿಹೀನತೆ ಉಂಟಾಗುವಿಕೆ ಅಥವಾ ಒಂದು ಕೈ ಅಥವಾ ಪಾದವು ಊನಗೊಂಡಿದ್ದರೆ ೧ ಲಕ್ಷ ರು. ದೊರಕುತ್ತದೆ. ಈ ವಿಮೆಗಳು ಕೇವಲ ಯೋಜನೆಗಳಲ್ಲ. ಸಾವಿರಾರು ಬಡಜನರ ಜೀವನಾಧಾರ ಎಂದರೂ ತಪ್ಪಿಲ್ಲ. ಹಾಗಾಗಿ, ವಿಮೆ ಏನು ಮಾಡಬಲ್ಲದು ಎಂದು ಅಲಕ್ಷ್ಯ ಮಾಡುವುದು ಸರಿಯಲ್ಲ. ಉಚಿತ ಅಥವಾ ಕನಿಷ್ಠ ಪ್ರೀಮಿಯಂನ ಸರಕಾರಿ ವಿಮಾ ಯೋಜನೆಗಳು ಎಲ್ಲರಿಗೂ ಪ್ರಯೋಜನಕಾರಿ.
ಅದರಲ್ಲೂ ಬಡವರಿಗೆ ಇವು ಆಪದ್ಬಾಂಧವರು. ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ, ಜೀವನವಿರಲಿ. ಅಂತೆಯೇ ನಿಮ್ಮನ್ನು ಮತ್ತು ನಿಮ್ಮ ಕುಟುಂಬಗಳನ್ನು ರಕ್ಷಿಸುವ ವಿಮೆ ಸದಾ ನಿಮ್ಮ ಕೈಯಲ್ಲಿರಲಿ.
Read E-Paper click here