Sunday, 15th December 2024

ಕರೋನಾ ಕಾಲದ ಸುಳ್ಳಿನ ಸರದಾರರು

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಸತ್ಯ ಹೊಸಿಲು ದಾಟೋದ್ರೊಳಗೆ ಸುಳ್ಳು ಊರೆಲ್ಲ ಸುತ್ತಿ ಬಂದಿರುತ್ತೆ. ಈ ಗಾದೆ ಕೋವಿಡ್ ಕಾಲದಲ್ಲಿ ಯಾಕೊ ತುಂಬ ನಿಜ ಅನ್ನಿಸತೊಡಗಿದೆ. ಏಕೆಂದರೆ ಕರೋನಾ ವೈರಸ್ ಬಗ್ಗೆ ಬರುತ್ತಿರುವ ಸುದ್ದಿಗಳಲ್ಲಿ ಯಾವುದು ಸರಿ, ಯಾವುದು ಸುಳ್ಳು ಎಂಬುದೇ ಅರ್ಥವಾಗುತ್ತಿಲ್ಲ.

ಸುಮ್ಮನೇ ಈ ಉದಾಹರಣೆ ನೋಡಿ. ಈಚೆಗೆ ಒಂದು ಸುದ್ದಿ ಎಲ್ಲೆಡೆ ಹರಿದಾಡತೊಡಗಿತ್ತು. ಅದನ್ನು ಎಲ್ಲರೂ ಫಾರ್ವರ್ಡ್ ಮಾಡಿದ್ದೇ ಮಾಡಿದ್ದು. ಇಷ್ಟಕ್ಕೂ ಏನದು ಅಂಥಾ ಸುದ್ದಿ ಎಂದಿರಾ? ಲಸಿಕೆ ತೆಗೆದುಕೊಂಡವರೆಲ್ಲ ಎರಡು ವರ್ಷಗಳಲ್ಲಿ ಸತ್ತು ಹೋಗುತ್ತಾರಂತೆ – ಇದು ಆ ಸುದ್ದಿ. ಇದನ್ನು ಜನ ಯಾಕೆ ನಂಬಿದರು, ಯಾಕೆ ಅಷ್ಟೊಂದು ಆತಂಕಿತರಾದರು ಎಂದರೆ, ಇದನ್ನು ಒಬ್ಬ ನೊಬೆಲ್ ಪುರಸ್ಕೃತ ವೈರಾಣು ತಜ್ಞ ಹೇಳಿದ್ದಾರೆ ಎಂದು ಪ್ರಚಾರ ಮಾಡಲಾಗಿತ್ತು. ಈ ಮಾತನ್ನು ಹೇಳಿದ್ದು ಲುಕ್
ಮಾಂಟೆಗ್ನೀರ್ ಎಂಬ, ಫ್ರೆಂಚ್ ವೈರಾಣು ರೋಗ ತಜ್ಞ.

ಇವರು ನೊಬೆಲ್ ಪ್ರಶಸ್ತಿ ಪಡೆದವರು. ‘ಲಸಿಕೆ ಪಡೆದವರು ಎರಡು ವರ್ಷಗಳಲ್ಲೇ ಮೃತಪಡುತ್ತಾರೆ ಎಂದು ಸಂದರ್ಶನ ವೊಂದರಲ್ಲಿ ಅವರು ಹೇಳಿದ್ದಾರೆ’ ಎಂದು ವರದಿಯಾಗಿತ್ತು. ಸೋಂಕು ಉಲ್ಬಣ ಗೊಂಡಿರುವ ಈ ದಿನಗಳಲ್ಲಿ ಲಸಿಕೆ ಕೊಡುವುದು
ಮೂರ್ಖತನ. ‘ವೈರಸ್ ಉತ್ಪಾದಿಸುವ ಆಂಟಿ ಬಾಡಿಗಳಿಂದ ಸೋಂಕು ಇನ್ನಷ್ಟು ಹೆಚ್ಚುತ್ತದೆ’ ಎಂದು ಆ ವಿಜ್ಞಾನಿ ಸಂದರ್ಶನ ವೊಂದರಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

ಟ್ವಿಟರ್ ಬಳಕೆದಾರನೊಬ್ಬ ಈ ವಿಡಿಯೊವನ್ನು ಶೇರ್ ಮಾಡಿದ್ದ. ಲಸಿಕೆ ಪಡೆದ ಎಲ್ಲರೂ ಎರಡು ವರ್ಷಗಳೊಳಗಾಗಿ ಸಾವಿ ಗೀಡಾಗುತ್ತಾರೆ’ ಎಂಬ ವಕ್ಕಣೆ ಅದಾಗಿತ್ತು. ‘ಯಾವುದೇ ಚಾನ್ಸ್ ಇಲ್ಲ. ಎರಡು ವರ್ಷ ಗಳೊಳಗೆ ಸಾವು ಖಚಿತ’ ಎಂದು ಅವರು ದೃಢ ಸ್ವರದಲ್ಲಿ ಹೇಳಿದ ಬಗ್ಗೆ ವರದಿಯಾಗಿತ್ತು. ಆದರೆ ಅನಂತರ ಈ ವರದಿಯ ಸತ್ಯಾಸತ್ಯವನ್ನು ಪರೀಕ್ಷಿಸಿದಾಗ ಅವರು ಈ ಮಾತನ್ನು ಹೇಳಿಯೇ ಇರಲಿಲ್ಲ ಎಂಬುದು ಖಚಿತ ಪಟ್ಟಿತ್ತು. ಕೆಲವು ಪ್ರಕರಣಗಳಲ್ಲಿ ಆಂಟಿಬಾಡಿಗಳು ವೈರಸ್‌ಗೆ ನೆರವಾಗುವು ದುಂಟು. ಆಗ ಸಮಸ್ಯೆ ಯಾಗಲೂ ಬಹುದು ಎಂದು ಅವರು ಹೇಳಿರುವುದು ನಿಜ.

ಆದರೆ ಎರಡು ವರ್ಷಗಳಲ್ಲಿ ಸಾಯುತ್ತಾರೆ ಎಂದು ಎಲ್ಲೂ ಹೇಳಿಯೇ ಇಲ್ಲ. ಹಾಗೆಂದು ಇದು ಖಚಿತ ಪಡುವ ವೇಳೆಗೆ ಸುಳ್ಳು ವಿಡಿಯೊ ಎಲ್ಲ ಕಡೆ ಹರಿದಾಡಿಬಿಟ್ಟಿತ್ತು. ಅಸಂಖ್ಯಾತ ವೆಬ್‌ಸೈಟ್‌ಗಳು ಇದನ್ನು ಪ್ರಕಟಿಸಿದವು. ಅವುಗಳಿಂದ ಅನಾಮತ್ತಾಗಿ
ಎತ್ತಿಕೊಂಡು ವಾಟ್ಸ್ ಆಪ್, ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ತಡವಿಲ್ಲದೆ ಹಾಕಲಾಗಿತ್ತು. ಲಸಿಕೆ ಹಾಕಿಸಿಕೊಂಡವರು,
‘ಇನ್ನೇನು ಗತಿ’ ಎಂದು ಹೌಹಾರಿದರು.

ಲಸಿಕೆ ವಿರೋಧಿಗಳು, ನಾವು ಮೊದಲೇ ಹೇಳಿರಲಿಲ್ಲವೆ ’ ಎಂದು ರಾಗ ತೆಗೆದರು. ಒಲ್ಲದ ಮನಸ್ಸಿನಿಂದಲೋ, ಒತ್ತಾಯಕ್ಕೋ, ವರಾತಕ್ಕೋ ಲಸಿಕೆ ಹಾಕಿಸಿಕೊಳ್ಳಲು ಮುಂದಾದವರೂ ಕೂಡ ಆ ಯೋಚನೆ, ಆಲೋಚನೆ ಯನ್ನು ಕೈಬಿಟ್ಟರು. ಲಸಿಕೆ ಹಾಕಿಸಿ ಕೊಳ್ಳುವುದರ ವಿರುದ್ಧ ಒಂದು ರೀತಿ ಯುದ್ಧ ಸಾರಿದ್ದ ಕೆಲವರಿಗೆ ಈ ಫೇಕ್ ವಿಡಿಯೊ ಬ್ರಹ್ಮಾಸದಂತೆ ಸಿಕ್ಕಿತ್ತು. ಸಾಧ್ಯವಿರು ವಷ್ಟು ಇದನ್ನು ಫಾರ್ವರ್ಡ್ ಮತ್ತು ವೈರಲ್ ಮಾಡಿದರು. ಕೊನೆಗೆ ಇದು ಸುಳ್ಳು ಎಂದು ಗೊತ್ತಾಗುವ ಹೊತ್ತಿಗೆ ಸಾಕಷ್ಟು ಹಾನಿ ಉಂಟಾಗಿತ್ತು. ಈ ಒಂದು ಪೋಸ್ಟ್ ಎಷ್ಟು ಪರಿಣಾಮ ಬೀರಿದೆ ಎಂದರೆ ಇಂದಿಗೂ ಕೆಲವರು ಲಸಿಕೆ ಹಾಕಿಸಿಕೊಳ್ಳಲು ತಯಾರಿಲ್ಲ.

ಮೇಲಿನದು ಒಂದು ಥರವಾದರೆ ಮತ್ತೊಂದು ಪ್ರಕರಣದಲ್ಲಿ ಒಂದು ಸಾರ್ವಜನಿಕ ಸಂಪರ್ಕ ಸಂಸ್ಥೆಯೇ ಇಂಥ ಕೆಲಸಕ್ಕೆ ಇಳಿದ ಪ್ರಕರಣ ಬೆಳಕಿಗೆ ಬಂದಿದೆ. ಫೈಜರ್ ಕಂಪನಿಯ ಲಸಿಕೆ ಬಿಡುಗಡೆ ಯಾಗಿದೆ. ಇದರ ಜತೆಗೆ ಇನ್ನು ಹಲವಾರು ಕಂಪನಿಗಳ ಲಸಿಕೆ ಗಳು ಬಳಕೆಯಲ್ಲಿವೆ. ಆದರೆ ಬ್ರಿಟನ್ ಮೂಲದ ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದು ಜರ್ಮನಿ, ಫ್ರಾನ್ಸ್‌ನ ಕೆಲವು
ಪ್ರಭಾವಿ ಯು ಟ್ಯೂಬ್ ಚಾನೆಲ್‌ಗಳ ಬೆನ್ನುಬಿದ್ದಿದ್ದವು.

ಅವರ ಅಜೆಂಡಾ ಏನೆಂದರೆ, -ಜರ್ ಕಂಪನಿಯ ಲಸಿಕೆ ಅನಾಹುತಕಾರಿಯಾಗಿದೆ ಎಂದು ಈ ಯುಟ್ಯೂಬರ್ ಗಳು ತಮ್ಮ ಹಿಂಬಾಲಕರಿಗೆ ತಿಳಿಸಬೇಕು. ಇದಕ್ಕೆ ಪ್ರತಿಯಾಗಿ ಕೈತುಂಬ ಹಣ ಕೊಡುವುದಾಗಿ ಆಮಿಷ ಒಡ್ಡಲಾಗಿತ್ತು. ಆದರೆ ಈ ಯುಟ್ಯೂಬರ್ ಮತ್ತು ಬ್ಲಾಗರ್‌ಗಳು ಸಂಶಯಗೊಂಡು ತನಿಖೆ ನಡೆಸಿದಾಗ ಇದೆಲ್ಲ ರಷ್ಯಾದ ಕೈವಾಡದತ್ತ ಬೊಟ್ಟು ಮಾಡುತ್ತಿತ್ತು. ರಷ್ಯ ಕೂಡ ಸ್ಪುಟ್ನಿಕ್ ಲಸಿಕೆ ಉತ್ಪಾದಿಸಿದೆ. ಹೀಗಾಗಿ ಇತರ ಲಸಿಕೆಗಳು ಚೆನ್ನಾಗಿಲ್ಲ ಎಂದು ಬಿಂಬಿಸಿಕೊಳ್ಳಲು
ಅವೆಲ್ಲ ಶತಪ್ರಯತ್ನ ನಡೆಸಿದ್ದವು. ಆದರೆ ಇದರಿಂದ ಫೈಜರ್ ಕಂಪನಿಯ ವಿಶ್ವಾಸಾರ್ಹತೆಗೆ ಧಕ್ಕೆ ಆಗಿದ್ದು ನಿಜ.

ಅಲ್ಲದೆ ಹೀಗಾದಾಗ ಈ ಮಾತನ್ನು ನಂಬಿ ಆ ಕಂಪನಿಯ ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂದೇಟು ಹಾಕುವವರೆಷ್ಟೊ.
೫ಜಿ ತಂತ್ರಜ್ಞಾನದಿಂದ ಕೋವಿಡ್ ಹರಡುವಿಕೆ ಜಾಸ್ತಿ ಆಗುತ್ತದೆ ಎಂಬ ಸುದ್ದಿ ಈಗ ಹೊಸದಾಗಿ ಹರಿದಾಡುತ್ತಿರುವ ಸುದ್ದಿ. ವಿಶ್ವದ ಅನೇಕ ದೇಶಗಳಲ್ಲಿ ಈಗ ೫ಜಿ ತಂತ್ರಜ್ಞಾನವನ್ನು ಬಳಕೆಗೆ ಬಿಡಲಾಗುತ್ತಿದೆ. ಈ ಹೊತ್ತಿನಲ್ಲಿಯೇ ಬ್ರಿಟನ್ ಮತ್ತಿತರ ಕಡೆ 5ಜಿ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾದರೆ ಈ ಸುದ್ದಿಗೆ ಏನು ಆಧಾರ? 2011ರಲ್ಲಿ ಪ್ರಕಟವಾದ ಒಂದು
ಸಂಶೋಧನಾ ವರದಿಯಲ್ಲಿ, ಬ್ಯಾಕ್ಟೀರಿಯಾಗಳು ವಿದ್ಯುತ್ ಕಾಂತೀಯ ತರಂಗಗಳ ಮೂಲಕ ಪ್ರಸಾರವಾಗಬಲ್ಲವು ಎಂದು ತಿಳಿಸಲಾಗುತ್ತಿತ್ತು.

ಈಗ 5ಜಿ ತಂತ್ರಜ್ಞಾನ ಬರುತ್ತಿರುವುದರಿಮದ ಕರೋನಾ ಸೋಂಕು ಅದರ ಮೂಲಕ ಹರಡುತ್ತದೆ ಎಂಬ ಸುದ್ದಿಯನ್ನು
ಹಬ್ಬಿಸಲಾಗಿದೆ. ಮೊತ್ತಮೊದಲನೆಯ ದಾಗಿ ಇದು ಕೇವಲ ಒಂದು ವರದಿ. ಅದು ದೃಢಪಟ್ಟಿಲ್ಲ. ಜತೆಗೆ ಆ ಪೇಪರ್‌ನಲ್ಲೂ ಬ್ಯಾಕ್ಟೀರಿಯಾ ಗಳು ಹರಡಬಹುದು ಎಂದು ಹೇಳಲಾಗಿದೆ. ಆದರೆ ಕರೋನಾ ಸೋಂಕು ಹರಡುವುದು ವೈರಸ್‌ನಿಂದ. ಈಗ ೫ಜಿ ಸುದ್ದಿಯಲ್ಲಿದೆ ಅಲ್ವಾ. ಅದನ್ನೇ ಸುಳ್ಳುಸುದ್ದಿ ಹರಡುವ ಮಾಧ್ಯಮವಾಗಿ ಕೆಲವರು ಉಪಯೋಗಿಸಿಕೊಂಡಿದ್ದಾರೆ.

ಇವರ ಸಿದ್ಧಾಂತಕ್ಕೆ ಇರುವ ಇನ್ನೊಂದು ತಳಹದಿ ಏನು ಗೊತ್ತೆ? ಚೀನಾದ ವುಹಾನ್ ಪ್ರಾಂತ್ಯದಲ್ಲಿ gಜಿ ತಂತ್ರಜ್ಞಾನವನ್ನು
ಮೊದಲಿಗೆ ಅಳವಡಿಸಿಕೊಳ್ಳಲಾಯಿತು. ಕರೋನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಹಾಗೂ ಹರಡಿದ್ದು ಕೂಡ ಅಲ್ಲಿಯೇ. ಇದು ಕಾಕತಾಳೀಯವಾಗಿರಬಹುದು. ಆದರೆ ಕಿಡಿಗೇಡಿಗಳು ತಾಳೆ ಹಾಕಿಯೇ ಬಿಟ್ಟರು. ಕರೋನಾಗೂ 5ಜಿಗೂ ಸಂಬಂಧವಿದೆ ಎಂದು ತೀರ್ಪು ಕೊಟ್ಟಂತೆ ಹೇಳಿಬಿಟ್ಟರು.

ಅದೇ ರೀತಿ, ಕರೋನಾಗೂ ಮದ್ಯಪಾನಕ್ಕೂ ಅವಿನಾಭಾವ ಸಂಬಂಧ. ಅದರ ಬಗ್ಗೆ ಆಗಿರುವಷ್ಟು ಚರ್ಚೆ ಬಹುಶಃ ಬೇರೆ ಯಾವುದೇ ವಿಷಯದಲ್ಲಿ ಆಗಿರಲಿಕ್ಕಿಲ್ಲ. ಇದಕ್ಕೆ ಮುಖ್ಯಕಾರಣ ಇಷ್ಟೇ. ಸ್ಯಾನಿಟೈಸರ್‌ನಲ್ಲಿ ಆಲ್ಕೋಹಾಲ್ ಇರುತ್ತದೆ.
ಸ್ಯಾನಿಟೈಸರ್‌ನಿಂದ ಕರೋನಾ ವೈರಸ್ ಸಾಯಬಹುದಾದರೆ ಅದೇ ಎಥೆನಾಲ್ ಹೊಂದಿರುವ ಮದ್ಯ ಸೇವನೆಯಿಂದಲೂ ವೈರಸ್ ಸಾಯಬಹುದಲ್ಲವೆ? ಎಂಬ ತರ್ಕ. ಆ ಕಾರಣಕ್ಕಾಗಿಯೇ ಮದ್ಯಸೇವನೆಯಿಂದ ಕರೋನಾ ರಿಸ್ಕ್ ಕಡಿಮೆ ಯಾಗುತ್ತದೆ ಎಂಬ ವಾದ
ಕೆಲವರದು. ಆದರೆ, ಚರ್ಮದ ಮೇಲೆ ಎಥೆನಾಲ್ ಚೆನ್ನಾಗಿ ಕೆಲಸ ಮಾಡುವುದು ಹೌದಾದರೂ ದೇಹದ ಒಳಗೂ ಅದು ಅದೇ ರೀತಿಯ ಪರಿಣಾಮ ಬೀರಬೇಕೆಂದೇನೂ ಇಲ್ಲ.

ಆದರೆ ಈ ಸುದ್ದಿ ಹರಡಿದ್ದೇ ಬಂತು, ಕುಡುಕರಿಗೆ ಅಷ್ಟೆ ಸಾಕಾಯಿತು. ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಂದು ಸುದ್ದಿಯೂ ಜೋರಾಗಿ
ಓಡಾಡುತ್ತಿತ್ತು. ಅದೆಂದರೆ, ಲಸಿಕೆ ಪಡೆದವರು ಎರಡನೇ ಡೋಸ್ ಪಡೆಯುವವರೆಗೆ ಮದ್ಯಪಾನ ಮಾಡುವಂತಿಲ್ಲ ಎಂಬ ಸುದ್ದಿ. ಇದು ಹೇಗೆ ಮತ್ತು ಏಕೆ ಹರಡಿತು ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಲಸಿಕೆ ಹಾಕಿಸಿಕೊಂಡರೆ ಕುಡಿಯಲು ಅಡ್ಡಿ ಮತ್ತು ತೊಂದರೆ ಆಗುತ್ತದೆ ಎಂದು ಕೆಲವರು ಆ ಸಹವಾಸವೇ ಬೇಡ ಎಂದು ಲಸಿಕೆ ತೆಗೆದುಕೊಳ್ಳಲಿಲ್ಲ.

ಈ ಕರೋನಾ ಸೋಂಕು ನಕಲಿ ವೈದ್ಯರು, ವಂಚಕರು, ವಿಕೃತ ಮತ್ತು ವಿಘ್ನ ಸಂತೋಷಿಗಳು, ಅರೆಜ್ಞಾನಿಗಳಿಗೆ ಒಂದು ರೀತಿ ಸುಗ್ಗಿಯಾಗಿ ಪರಿಣಮಿಸಿದೆ. ತಜ್ಞ ವೈದ್ಯರು, ಪರಿಣತರು ಪ್ರಾಸಂಗಿಕ ವಾಗಿ, ಸಾಂದರ್ಭಿಕವಾಗಿ ಅಥವಾ ಅನುಭವದ ಆಧಾರದಲ್ಲಿ ಏನಾದರೂ ಹೇಳಿದರೆ ಸಾಕು. ಅದನ್ನೇ ಎತ್ತಿಕೊಂಡು, ತಿರುಚಿ, ಬಣ್ಣಕಟ್ಟಿ ಹರಡುವ ಜಾಯಮಾನದವರಿಗೆ
ಈಗ ಹಬ್ಬ. ಮೊದಲನೆ ಅಲೆಯಿಂದ ಪಾರಾಗುವುದು ಹೇಗೆಂಬುದರ ಬಗ್ಗೆ ಎಲ್ಲರೂ ತಲೆಕೆಡಿಸಿಕೊಳ್ಳುತ್ತಿರುವಾಗಲೇ ಎರಡನೇ ಅಲೆ ಬರಲಿದ್ದು ಅದು ಇನ್ನೂ ಭಯಂಕವಾಗಿರಲಿದೆ ಎಂದು ಸುದ್ದಿ ಹಬ್ಬಿಸಲಾಗುತ್ತದೆ.

ಎರಡನೇ ಅಲೆಯಿಂದ ಈಗ ತತ್ತರಿಸುತ್ತಿರುವಾಗ ಮೂರನೇ ಅಲೆ ಬರುವುದಂತೆ ಎಂದು ಮತ್ತೆ ಹೆದರಿಸುವುದು ಶುರುವಾಗಿದೆ. ಇದು ಮಕ್ಕಳಿಗೆ ಮಾರಕವಾಗಲಿದೆ ಎಂದು ಬೇರೆ ಹೇಳಲಾಗುತ್ತಿದೆ. ಈಗಾಗಲೇ ತಿಳಿಸಿರುವಂತೆ ವೈದ್ಯರು, ತಜ್ಞರು ಪ್ರಾಸಂಗಿಕವಾಗಿ ಈ ಕುರಿತು ಏನೋ ಹೇಳಿರುತ್ತಾರೆ. ಆದರೆ ಅದನ್ನು ಲಂಬಿಸಿ, ಅತಿರಂಜಿತ ವಾಗಿ ತೇಲಿಬಿಡುವುದು ಒಂದು ಚಾಳಿ. ಇದನ್ನೇ
ನಂಬುವ ಜನರು ಮಕ್ಕಳನ್ನು ಹೊರಗೆ ಕಳಿಸುವುದಿಲ್ಲ. ಶಾಲೆ, ಕಾಲೇಜು ಬೇಡ ಎಂದು ಒತ್ತಾಯಿಸುತ್ತಾರೆ. ಪರೀಕ್ಷೆಗಳು ಬೇಡ ಎಂದು ವರಾತ ಶುರುವಿಟ್ಟುಕೊಳ್ಳುತ್ತಾರೆ.

ಇಲ್ಲೆಲ್ಲ ಕೆಲಸ ಮಾಡುವುದು ಭಯ, ಭೀತಿ ಅಷ್ಟೆ. ಜನರು ಏನು ಹೇಳಿದರೂ ಕೇಳುತ್ತಾರೆ, ನಂಬುತ್ತಾರೆ ಎಂಬ ವಿಶ್ವಾಸವೇ ಇವರಿಗೆ
ಬಂಡವಾಳ. ಕರೋನಾ ಚಿಕಿತ್ಸೆಯ ವಿಷಯವೂ ಇದಕ್ಕೆ ಹೊರತಲ್ಲ. ಹೇಳಿಕೇಳಿ ಇದು ಹೊಸ ವೈರಸ್. ಹಿಂದೆಂದೂ ಕಂಡು
ಕೇಳರಿಯದ್ದು. ಹೀಗಾಗಿ ಇದರ ಚಿಕಿತ್ಸಾ ವಿಧಾನ ಯಾರಿಗೂ ಸರಿಯಾಗಿ ಗೊತ್ತಿಲ್ಲ. ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಕೊಡುವುದೇ ಹೆಚ್ಚು. ಅದಕ್ಕಾಗಿಯೇ ಚಿಕಿತ್ಸಾ ವಿಧಾನವೂ ಆಗಾಗ ಬದಲಾಗುತ್ತದೆ. ಇಂದು ಇರುವುದು ನಾಳೆ ಇರುವುದಿಲ್ಲ. ಇಂದು ಸರಿಯಾಗಿರುವುದು ನಾಳೆ ತಪ್ಪು ಎನ್ನಲಾಗುತ್ತದೆ.

ಪ್ರಾರಂಭದಲ್ಲಿ ಕರೋನಾಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಇದು ನಿಜಕ್ಕೂ ರಾಮಬಾಣ ಎಂದು ನಂಬಿದ ಜನರು ಪ್ಲಾಸ್ಮಾ ಚಿಕಿತ್ಸೆಗೆ ಹಪಹಪಿಸ ತೊಡಗಿದರು. ಪ್ಲಾಸ್ಮಾ ದಾನಿಗಳಿಗಾಗಿ ಆಕಾಶ ಭೂಮಿ ಒಂದು ಮಾಡಿದರು. ಆದರೆ ಸರಕಾರವೇ ಇದೀಗ ಆ
ಚಿಕಿತ್ಸೆ ನಿಷ್ಪ್ರಯೋಜಕ ಎಂದು ತೀರ್ಮಾನಿಸಿ ಕೈಬಿಟ್ಟಿದೆ. ಅದಾದ ಬಳಿಕ ರೆಮ್‌ಡಿಸಿವಿರ್ ಬಳಕೆ ಹೆಚ್ಚಾದಂತೆ ಅದಕ್ಕೆ
ಹಾಹಾಕಾರ ಹೆಚ್ಚಾಯಿತು. ಕಾಳಸಂತೆಯಲ್ಲಿ ಅದರ ಮಾರಾಟ ಮೊದಲಾಯಿತು. ಒಂದಕ್ಕೆ ಹತ್ತುಪಟ್ಟು ಹಣ ಕೊಟ್ಟು ಅದನ್ನು ಪಡೆಯುವುದು ಆರಂಭವಾಯಿತು.

ಈಗಲೂ ಇದರ ಬಳಕೆ ಕುರಿತು ಸ್ಪಷ್ಟ ಕಲ್ಪನೆ ಇಲ್ಲ. ಕೆಲವರು ಕೊಡಬೇಕು ಅಂತಾರೆ, ಕೆಲವರು ಬೇಡ ಅಂತಾರೆ. ಆದರೆ ವೈದ್ಯರು ಹೇಳಿದಂತೆ ಕೇಳಲೇಬೆಕಲ್ಲ. ಈ ಕಾರಣಕ್ಕಾಗಿ ದುಬಾರಿ ಹಣ ಕೊಟ್ಟು ಈ ‘ಸಂಜೀವಿನಿ’ಯನ್ನು ಪಡೆಯಲು ಜನರು ಹರಸಾಹಸ
ಪಡುತ್ತಿದ್ದಾರೆ. ಈಗ ಕರೋನಾ ಜತೆಗೆ ಬ್ಲ್ಯಾಕ್ ಫಂಗಸ್ ಎಂಬ ಮತ್ತೊಂದು ಮಾರಿ ವಕ್ಕರಿಸಿದೆ. ಅದಕ್ಕೇನು ಚಿಕಿತ್ಸೆ, ಏನು
ಔಷಧ ಎಂಬುದರತ್ತ ಎಲ್ಲರ ಧಾವಂತ ಶುರುವಾಗಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದಾಗ, ಚಿಕಿತ್ಸಾ ವಿಧಾನದತ್ತಲೇ ಮತ್ತೆ ಗಮನ. ಕರೋನಾಗೆ ಸ್ಟಿರಾಯ್ಡ್ ಕೊಡಲಾಗುತ್ತಿತ್ತು. ಆದರೀಗ ತುಂಬಾ ಸ್ಟಿರಾಯ್ಡ್ ನೀಡಿದ್ದೇ ಬ್ಲ್ಯಾಕ್ ಫಂಗಸ್‌ಗೆ ಕಾರಣ ಎಂದು ಹೇಳಲಾಗುತ್ತಿದೆ.

ಕರೋನಾ ಮೊದಮೊದಲು ಪ್ರಾರಂಭವಾದಾಗ ಮನೆಮದ್ದು ಹೇಳುವುದು ಮತ್ತು ಮಾಡುವುದು ಜೋರಾಗಿತ್ತು. ಕೋವಿಡ್ ಸೋಂಕು ತಗುಲಿದ ಕೂಡಲೆ ಆಸ್ಪತ್ರೆಗೆ ಧಾವಿಸಬೇಡಿ. ಅಲ್ಲಿ ಜ್ವರಕ್ಕೆ ಕೊಡುವ ಮಾತ್ರೆಗಳನ್ನು ಮತ್ತು ವಿಟಮಿನ್ ಟ್ಯಾಬ್ಲೆಟ್‌ಗಳನ್ನು ಕೊಡುತ್ತಾರೆ. ಅದನ್ನು ಮನೆಯಲ್ಲೇ ಪಡೆಯಿರಿ ಎಂದು ಬೋಧಿಸುವವರೇ ಹೆಚ್ಚಾಗಿದ್ದರು. ಇದರ ಜತೆಗೆ
ಕಷಾಯ ಕುಡಿಯಿರಿ, ಬಿಸಿನೀರು ಸೇವಿಸಿರಿ. ಹಬೆ ತೆಗೆದುಕೊಳ್ಳಿ ಎಂದು ಹೇಳಿದ್ದೇ ಹೇಳಿದ್ದು. ಆ ಪ್ರಕಾರ ಮನೆಮನೆಯಲ್ಲೂ ಸ್ಟೀಮ್ ಇನ್‌ಹೇಲರ್‌ಗಳು ಪ್ರತ್ಯಕ್ಷವಾದವು. ಈ ಚಿಕಿತ್ಸೆ ಪಡೆಯುವುದು ಒಂದು ಫ್ಯಾಶನ್ ಅಥವಾ ಅವರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುವಂಥವರು ಎಂದು ಹೇಳಲಾಯಿತು. ಆದರೆ ಹೀಗೆ ಅವರಿವರ ಮಾತು ಕೇಳಿ ಮನೆಯಲ್ಲೇ ಉಳಿದ ಪರಿಣಾಮವಾಗಿ ರೋಗ ಉಲ್ಬಣಿಸಿ ಕೊನೆಗೆ ಆಸ್ಪತ್ರೆಗೆ ದೌಡಾಯಿಸಿದವರೆಷ್ಟೋ.

ಆ ಪೈಕಿ ಎಷ್ಟೋ ಮಂದಿ ಸಾವಿಗೀಡಾಗಿದ್ದೂ ಇದೆ. ಈಗ ಬಂದಿರುವ ಹೊಸ ಮಾಹಿತಿಯಂತೆ, ವಿಪರೀತವಾಗಿ ಸ್ಟೀಮ್ ಪಡೆದುದೂ ಬ್ಲ್ಯಾಕ್ ಫಂಗಸ್‌ಗೆ ಕಾರಣ ವಾಗುತ್ತದೆ ಎನ್ನುತ್ತಿದ್ದಾರೆ. ಅದು ನಿಜವೋ, ಇದು ನಿಜವೋ. ಯಾರಿಗೂ ಗೊತ್ತಿಲ್ಲ.
ಈ ಸುಳ್ಳುಸುದ್ದಿಗಳ ಮೆರವಣಿಗೆಯನ್ನು ಮುಕ್ತಾಯಗೊಳಿಸುವ ಮೊದಲು ಇನ್ನೊಂದು ಕೊನೆಯ ಉದಾಹರಣೆ. ಕನ್ನಡದ ಹೆಸರಾಂತ ಪೋಷಕ ನಟಿ ಬಿ.ಜಯಾ ಎಂಬುವವರು ಮೊನ್ನೆ ಮೊನ್ನೆ ತೀರಿಕೊಂಡರು.

ಪ್ರಮುಖರು ನಿಧನರಾದಾಗ ಸುದ್ದಿಯಾಗುವುದು ಸಹಜ. ಆದರೆ ಯಾರೋ ಪುಣ್ಯಾತ್ಮರು ಆ ವಿಷಯದಲ್ಲಿ ಹರಿಬಿಟ್ಟ ವಿಡಿಯೊ ಭಾರಿ ಸಂಚಲನ ಮೂಡಿಸಿತು. ಈ ನಟಿಯ ಶವವನ್ನು ಅಂತ್ಯಕ್ರಿಯೆಗೆ ಕರೆದೊಯ್ಯಲಾಗಿತ್ತಲ್ಲ. ಆಗ ದಟ್ಟಣೆಯ ಕಾರಣಕ್ಕೋ ಅಥವಾ ಕರೋನಾ ನಿಯಮಗಳೋ ಏನೊ, ಅಂತೂ ಗೇಟಿನ ಹೊರಗಡೆ ಮಲಗಿಸಿ ಕಾಯಲಾಗುತ್ತಿತ್ತು. ಇದನ್ನು ನೋಡಿದವ ರೊಬ್ಬರಿಗೆ ಇಷ್ಟೇ ಸಾಕಾಯಿತು. ಅದರ ವಿಡಿಯೊ ಮಾಡಿದವರೇ, ‘ನೋಡಿ ಹಿರಿಯ ನಟಿಗೆ ಎಂಥ ಅಗೌರವ.

ಅವರ ಶವವನ್ನು ಅನಾಥವಾಗಿ ರಸ್ತೆಬದಿ ಮಲಗಿಸಲಾಗಿದೆ. ಚಿತ್ರೋದ್ಯಮದವರು ಯಾರೂ ಇಲ್ಲವೆ..’ ಇತ್ಯಾದಿಯಾಗಿ ಅದರಲ್ಲಿ ಪ್ರಲಾಪಿಸಲಾಗಿತ್ತು. ಆದರೆ ಅನಂತರ ಅವರ ಕುಟುಂಬದವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟರು. ನಾವು ಕುಟುಂಬದ 10-12 ಜನರು ಸ್ಮಶಾನಕ್ಕೆ ಬಂದಿದ್ದೆವು. ನಿಯಮಕ್ಕೆ ಅನುಗುಣವಾಗಿ ಶವವನ್ನು ಹೊರಗಡೆ ಇಟ್ಟುಕೊಂಡು ಕಾಯುತ್ತಿದ್ದುದು ನಿಜ.

ಆದರೆ ಅಷ್ಟರಲ್ಲೇ ಇವರಾರೋ ಬಂದು ವಿಡಿಯೊ ಮಾಡಿ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಹೇಳಿದರು. ಅಂದರೆ ಯಾರೋ ಮಾಡುವ ತಪ್ಪಿಗೆ ಇನ್ನಾರಿಗೋ ಕೆಟ್ಟ ಹೆಸರು, ಶಿಕ್ಷೆ. ಅಲ್ಲದೆ ಅವರೇ ಸಮಜಾಯಿಷಿ ಕೊಡಬೇಕು. ಇದು ಈ ಕರೋನಾ ಕಾಲದ ಸ್ವಯಂ ವೈದ್ಯರು ಮಾಡುವ, ಎಲ್ಲವನ್ನೂ ಫಾರ್ವರ್ಡ್ ಮಾಡುವುದರ ಕೆಟ್ಟ ಪರಿಣಾಮ. ಆದರೆ ಮೊದಲೇ ಹೇಳಿದಂತೆ, ಕಂಡಕಂಡದ್ದನ್ನು ಕಳಿಸುವವರಿಗೆ ಅದನ್ನು ಖಚಿತಪಡಿಸಿಕೊಳ್ಳಬೇಕೆಂಬ ವ್ಯವಧಾನ ಹೇಗೆ ಇರುವುದಿಲ್ಲವೋ, ನೋಡುವವ ರಿಗೂ ಅದನ್ನು ಒರೆಗೆ ಹಚ್ಚಬೇಕೆಂಬ ಭಾವನೆ ಬರುವುದಿಲ್ಲ. ಅವರೂ ಅದನ್ನು ಪಾರ್ವರ್ಡ್ ಮಾಡುತ್ತಾರೆ.

ಹೀಗೆ ಸತ್ಯ ಹೊಸಿಲು ದಾಟುವುದರೊಳಗಾಗಿ ಸುಳ್ಳು ಊರೆಲ್ಲ ಸುತ್ತಾಡಿ ಬಂದಿರುತ್ತದೆ. ಇದು ಕರೋನಾ ಕಾಲದ ಕಟು ಸತ್ಯ.

ನಾಡಿಶಾಸ್ತ್ರ
ಈಗ ಎಲ್ಲರೂ ಬಲ್ಲವರು, ವೈದ್ಯರು,
ತಮಗೆ ಎಲ್ಲ ಗೊತ್ತು ಎನ್ನುವವರು
ಕಂಡಕಂಡುದ ಕಳಿಸುವ ಚಾಳಿಯವರು
ಇದು ಸರಿಯಲ್ಲ ಎಂದು ತಿಳಿಯಲೊಲ್ಲರು