Thursday, 12th December 2024

ಕಾಮವರ್ಧಕವೋ ? ಇಲ್ಲ ಜೀವಹಾರಕವೋ ?

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಕಾಮವರ್ಧಕ ಎಂಬ ಹೆಸರು ಬರಲು ಕಾರಣ ಮ್ಯಾಂಡ್ರೇಕ್ ಬೇರುಗಳಲ್ಲ! ಅದರ ಹಣ್ಣುಗಳು!! ಮ್ಯಾಂಡ್ರೇಕ್ ಹಣ್ಣುಗಳು ಸುವಾಸನೆಯಿಂದ ಕೂಡಿರುತ್ತವೆ. ಮ್ಯಾಂಡ್ರೇಕ್ ಹಣ್ಣಿನ ಸುವಾಸನೆಯಲ್ಲಿ 55 ವಾಸನಾ ದ್ರವ್ಯಗಳನ್ನು ಪತ್ತೆ ಹಚ್ಚಿರುವರು

ಮಾನವನ ಇತಿಹಾಸದಲ್ಲಿ ಸಾವಿರಾರು ವರ್ಷಗಳವರೆಗೆ ಕಾಮವರ್ಧಕ, ಸಂತಾನಫಲ ದಾಯಕ, ಅದ್ಭುತ ಮಾಂತ್ರಿಕ ಶಕ್ತಿಗಳ ಆಗರ ಎಂದು ಅತ್ಯಂತ ಜನಪ್ರಿಯವಾಗಿದ್ದ ಹಾಗೂ ಬಹುಬೇಡಿಕೆಯಲ್ಲಿದ್ದ ಒಂದು ಸಸ್ಯವು ಇಂದು ಹೇಳಹೆಸರಿಲ್ಲದಂತೆ ಜನಮಾನಸದಿಂದ ಕಣ್ಮರೆಯಾಗಿದೆ. ಅದುವೇ ಮ್ಯಾಂಡ್ರೇಕ್ ಅಥವ ಮ್ಯಾಂಡ್ರಗೋರ!

ಮ್ಯಾಂಡ್ರೇಕ್ ‘ಸೋಲನೇಸಿ ವಂಶಕ್ಕೆ ಸೇರಿದ ಸಸ್ಯ. ಸೋಲನೇಸಿ ವಂಶದ ಸಸ್ಯಗಳಲ್ಲಿ ಬದನೆ, ಟೊಮಾಟೊ, ಆಲೂಗಡ್ಡೆ, ದಪ್ಪ ಮೆಣಸಿನಕಾಯಿ ಮತ್ತು ತಂಬಾಕು ನಮಗೆ ಪರಿಚಿತವಾಗಿರುವಂತಹವು. ಇಂತಹ ಬಹು ಉಪಯುಕ್ತ ಹಾಗೂ ಜನಪ್ರಿಯ ಸಸ್ಯಗಳ ವಂಶದಲ್ಲಿ ಮಹಾನ್ ವಿಷವನ್ನು ಮೈಗೂಡಿಸಿ ಕೊಂಡಿರುವ ಮ್ಯಾಂಡ್ರ ಗೋರವು ಹುಟ್ಟಿದೆಯೆಂದರೆ, ಅದು ತುಸು ಆಶ್ಚರ್ಯವನ್ನು ಉಂಟುಮಾಡುತ್ತದೆ.

ಮ್ಯಾಂಡ್ರೇಕ್ ಮೂಲತಃ ಮೆಡಿಟೇರೇನಿಯನ್ ಪ್ರದೇಶದ ವಾಸಿ. ಇದರಲ್ಲಿ 90 ಕುಲಗಳಿದ್ದು, 3000 ಕ್ಕೂ ಹೆಚ್ಚು ಪ್ರಭೇದಗಳಿವೆ. ಇದು ಒಂದು ಪುಟ್ಟ ಸಸ್ಯ. 5-40 ಸೆಂ.ಮೀ. ಉದ್ದದ ಅಂಡಾಕೃತಿಯ ಎಲೆಗಳು ಒಂದು ಕೇಂದ್ರದಲ್ಲಿ ಹುಟ್ಟಿ ಎಲ್ಲೆಡೆ ವ್ಯಾಪಿಸುತ್ತವೆ. ಎಲೆಗಳ ಕೇಂದ್ರದಿಂದ ಘಂಟಾಕೃತಿಯ ಬಿಳಿಯಿಂದ ಹಿಡಿದು ನೇರಳೆ ಬಣ್ಣದ ಹೂವುಗಳು. ಸಣ್ಣ ಟೊಮಾಟೊ ಗಾತ್ರದ ಕೆಂಪು-ಕಿತ್ತಳೆಯ ಬಣ್ಣದ ಹಣ್ಣುಗಳು. ಮನುಷ್ಯನ ಒಡಲಿನ ಹಾಗೆ ಕಂಡು ಬರುವ ಬೇರು, ಕವಲೊಡೆದು ಮನುಷ್ಯನ ಕಾಲುಗಳನ್ನು ಹೋಲುತ್ತವೆ.

ಸುಮಾರು ಒಂದು ಮೀಟರ್ ಉದ್ದ ಬೆಳೆಯಬಹುದು. ಬೇರಿನ ಮಾನವ ಹೋಲಿಕೆಯ ಕಾರಣ ಈ ಸಸ್ಯವನ್ನು ಮ್ಯಾನ್=ಮನುಷ್ಯ + ಡ್ರೇಕ್ =  ಡ್ರಾಗನ್ = ಮ್ಯಾಂಡ್ರೇಕ್ ಎಂದು ಕರೆದರು. ಈ ಸಸ್ಯಕ್ಕೆ ಸೆಟನ್ಸ್ ಆಪಲ್, ಡೆವಿಲ್ಸ್ ಆಪಲ್, ಲವ್ ಆಪಲ್, ಶೈತಾನ ಪಂಡು, ದೈಯ್ಯಂ ಪಂಡು, ಪ್ರೇಮಪಂಡು, ಲಕ್ಷ್ಮಣ ಫಲ, ಪುತ್ರದ, ರಕ್ತಬಿಂದು ಮುಂತಾದ ಹೆಸರುಗಳಿವೆ.  ಮ್ಯಾಂಡ್ರೇಕ್ ಸಸ್ಯದ ಮೊದಲ ಉಲ್ಲೇಖವು ಈಬರ್ಸ್ ಪ್ಯಾಪಿರಸ್ (ಕ್ರಿ. ಪೂ .1550) ದಾಖಲೆ ಯಲ್ಲಿದೆ. ಅಲ್ಲಿರುವ 700 ಔಷಧಗಳ ತಯಾರಿಕೆಯಲ್ಲಿ ಮ್ಯಾಂಡ್ರೇಕನ್ನು ಬಳಸುವ ಬಗ್ಗೆ ಉಲ್ಲೇಖವಿದೆ.

ಕಾರ್ಥೀಜಿಯನ್ ಸೇನಾನಿ ಹ್ಯಾನಿ ಬಾಲ್ ಯುದ್ಧವೊಂದನ್ನು ಮ್ಯಾಂಡ್ರೇಕ್ ನೆರವಿನಿಂದ ಗೆದ್ದ. ಯುದ್ಧವು ನಡೆಯುವಾಗ, ಹ್ಯಾನಿಬಾಲ್ ಇದ್ದಕ್ಕಿದ್ದ ಹಾಗೆ ರಣರಂಗದಿಂದ ಹಿಂದೆ ಸರಿದ. ಅದಕ್ಕೆ ಮೊದಲು ಒಂದು ಬೃಹತ್ ಔತಣ ಕೂಟದ ತಯಾರಿಯನ್ನು ಮಾಡಿ, ಸಾಕಷ್ಟು ಮದ್ಯದ ಪೀಪಾಯಿ ಗಳನ್ನಿಟ್ಟ. ಶತ್ರುಗಳು ಬಂದರು. ಔತಣವು ಸಿದ್ಧವಿತ್ತು. ಚೆನ್ನಾಗಿ ತಿಂದರು ಹಾಗೂ ಕುಡಿದರು. ಹ್ಯಾನಿಬಾಲ್ ಮದ್ಯದಲ್ಲಿ ಮ್ಯಾಂಡ್ರೇಕ್ ಬೆರೆಸಿದ್ದ. ಎಲ್ಲರೂ ಗಡದ್ದು ನಿದ್ರಿಸಲಾರಂಭಿಸಿದರು. ಯುದ್ಧರಂಗಕ್ಕೆ ಮತ್ತೆ ಮರಳಿದ ಹ್ಯಾನಿಬಾಲ್ ಎಲ್ಲರನ್ನೂ ಕೊಂದ. ರೋಮ್ ಚಕ್ರವರ್ತಿ ನೀರೋವಿನ ವೈದ್ಯ ಪೆಡಾನಿಯಸ್ ಡಯಾಸ್ಕೋರಿಡೆಸ್ (40-90) ತನ್ನ ಪ್ರಖ್ಯಾತ ವೈದ್ಯಕೀಯ ಕೃತಿ ಡೀ ಮೆಟೀರಿಯ ಮೆಡಿಕದಲ್ಲಿ ಮ್ಯಾಂಡ್ರಗೋರವನ್ನು ವೈನ್‌ನಲ್ಲಿ ಕುದಿಸಿ, ನಿದ್ರಾಕಾರಕವಾಗಿ ಹಾಗೂ ಶಸಚಿಕಿತ್ಸೆಗಳನ್ನು ಮಾಡುವ ಮೊದಲು ಅರಿವಳಿಕೆಯಾಗಿ ನೀಡುತ್ತಿದ್ದ.

ಬಾಗ್ದಾದಿನ ಅಲ್-ರಾಜ಼ಿ ಅಲ್-ಮುರ್ಖಿದ್ ಬಗ್ಗೆ ಪ್ರಸ್ತಾಪಿಸಿದ್ದಾನೆ. ಇದು ಅಪೀಮು, ಗಾಂಜಾ, ಹೆನ್ಬೇನ್ ಮತ್ತು ಮ್ಯಾಂಡ್ರೇಕ್‌ಗಳ ಮಿಶ್ರಣ. ರೋಗಿಗೆ ಇದನ್ನು ನೀಡಿದ ಮೇಲೆ ವೈದ್ಯರು ನೆಮ್ಮದಿಯಿಂದ ಶಸಚಿಕಿತ್ಸೆಯನ್ನು ಮಾಡಬಹುದಿತ್ತು. ಅರೇಬಿಯದ ವೈದ್ಯ ಇಬ್ನ್ ಸಿನಾ ಅಥವ ಅವಿಸೆನ್ನ (980-1037). ಅಂದಿನ ಕಾಲಕ್ಕೆ ಪ್ರಮಾಣಬದ್ಧವಾದ ಅರಿವಳಿಕೆಯನ್ನು ರೂಪಿಸಿದ. ಅದುವೇ ನಿದ್ರಾಜನಕ ಸ್ಪಂಜು (ಸ್ಪಾಂಜಿಯ ಸಾಮ್ನಿ-ರಮ್). ಅಪೀಮು, ಮ್ಯಾಂಡ್ರಗೋರ, ಹೆಮ್ಲಾಕ್, ಬ್ಲಾಕ್ ಬೆರ್ರಿ ಮುಂತಾದವುಗಳ ಸಾರವನ್ನು ತೆಗೆದು ಮಿಶ್ರಣ ಮಾಡಿದ. ಆ ಮಿಶ್ರಣದಲ್ಲಿ ಸ್ಪಂಜನ್ನು ನೆನೆಯಿಸಿದ. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ.

ನಂತರ ಅವನ್ನು ಜೋಪಾನವಾಗಿ ಎತ್ತಿಟ್ಟ. ಶಸಚಿಕಿತ್ಸೆಯನ್ನು ಮಾಡುವ ವೇಳೆ, ಒಂದು ಸ್ಪಂಜನ್ನು ನೀರಿನಲ್ಲಿ ಮುಳುಗಿಸುತ್ತಿದ್ದ. ಅದನ್ನು ತೆಗೆದು ರೋಗಿಯ ಮೂಗಿನ ಬಳಿ ಇಡುತ್ತಿದ್ದ. ಆಗ ರೋಗಿ ಸದ್ದಿಲ್ಲದ ಹಾಗೆ ನಿದ್ರೆಗೆ ಜಾರುತ್ತಿದ್ದ. ಶಸವೈದ್ಯರು ತಮ್ಮ ಚಿಕಿತ್ಸೆಯನ್ನು ಆರಂಭಿಸುತ್ತಿದ್ದರು. ಈ ವಿಧಾನವು, ಈಥರನ್ನು ಅರಿವಳಿಕೆಯಾಗಿ ಬಳಸುವವರಿಗೆ, ಅಂದರೆ ಸುಮಾರು ೮೦೦ ವರ್ಷಗಳ ಕಾಲ ಯೂರೋಪ್ ಮತ್ತು ಅರಬ್ ದೇಶಗಳಲ್ಲಿ ಅರಿವಳಿಕೆಯಾಗಿ ರಾರಾಜಿಸಿತು.

ಮಾಂಡ್ರೇಕ್ ಕಾಮವರ್ಧಕ ಹಾಗೂ ಸಂತಾನ -ಲವನ್ನು ಕೊಡಬಲ್ಲದು ಎಂಬ ಪ್ರಸ್ತಾಪವು ಮೊದಲ ಬಾರಿಗೆ ಬೈಬಲ್ಲಿನಲ್ಲಿ (ಜೆನೆಸಿಸ್ 30:14-16) ಹಾಗೂ ಸಾಂಗ್ ಆ- ಸಾಂಗ್ಸ್ (7: 11-13) ನಲ್ಲಿ ಕಂಡುಬರುತ್ತದೆ. ಲಿಯಾ ಮತ್ತು ರಚೇಲ್ ಎಂಬ ಸೋದರಿಯರು. ಇವರನ್ನು ಜೇಕಬ್ ಮದುವೆಯಾದ. ಜೇಕಬನಿಗೆ ರಚೇಲನ ಕಂಡರೆ ಹೆಚ್ಚಿನ ಪ್ರೀತಿ. ಆದರೆ ರಚೇಲಳಿಗೆ ಮಕ್ಕಳಿಲ್ಲ. ಲಿಯಾಳಿಗೆ ನಾಲ್ಕು ಮಕ್ಕಳು. ಸದ್ಯಕ್ಕೆ ಆಕೆ ತಾತ್ಕಾಲಿಕ ಬಂಜೆ. ಒಂದು ದಿನ ಲಿಯಾ ತನ್ನ ಹಿರಿಯ ಮಗ ರೂಬೆನ್ ಜೊತೆಯಲ್ಲಿ ಗೋಽಯ ಹೊಲಕ್ಕೆ ಹೋದಾಗ, ಅವರಿಗೆ ಮ್ಯಾಂಡ್ರೇಕ್ ಸಸ್ಯವು ದೊರೆಯುತ್ತದೆ. ಅವರಿಬ್ಬರೂ ಸೇರಿ ಆ ಸಸ್ಯವನ್ನು ಬೇರು ಸಹಿತ ಕಿತ್ತು ಮನೆಗೆ ತಂದಾಗ, ರಚೇಲ್ ಮ್ಯಾಂಡ್ರೇಕ್ ಬೇರನ್ನು ತನಗೆ ಕೊಡುವಂತೆ ಕೇಳಿಕೊಳ್ಳುತ್ತಾಳೆ.

ಬದಲಿಗೆ ಆ ರಾತ್ರಿ ಆಕೆಯು ತನ್ನ ಗಂಡ ಜೇಕಬನೊಂದಿಗೆ ಕಳೆಯಬಹುದೆನ್ನುತ್ತಾಳೆ. ವಿಚಿತ್ರವೆಂದರೆ, ಮಾಂಡ್ರೇಕ್ ಬೇರನ್ನು ಸೇವಿಸಿದ ರಚೇಲ್ ಗರ್ಭವತಿಯಾಗುವುದಿಲ್ಲ. ಆದರೆ ತಾತ್ಕಾಲಿಕ ಬಂಜೆತನವನ್ನು ಅನುಭವಿಸುತ್ತಿದ್ದ ಲಿಯಾ ಗರ್ಭವತಿಯಾಗುತ್ತಾಳೆ. ಸಂತಾನವು ಭಗವಂತನ ಕೃಪೆಯಿಂದ ಆಗಬೇಕೆ ಹೊರತು ಗಿಡ ಮೂಲಿಕೆಗಳಿಂದಲ್ಲ ಎನ್ನುವ ಸಂದೇಶವನ್ನು ಬೈಬಲ್ ಸಾರುತ್ತದೆ. ಮ್ಯಾಂಡ್ರೇಕ್ ಕಾಮವರ್ಧಕ ಎಂದು ಸಾವಿರಾರು ವರ್ಷ ಗಳಿಂದ ಜನಪ್ರಿಯವಾಗಬೇಕಾದರೆ, ಅದಕ್ಕೆ ಕಾರಣ ವಿರಬೇಕಲ್ಲವೆ! ವಿಜ್ಞಾನಿಗಳು ಹುಡುಕಿದರು.

ಕಾಮವರ್ಧಕ ಎಂಬ ಹೆಸರು ಬರಲು ಕಾರಣ ಮ್ಯಾಂಡ್ರೇಕ್ ಬೇರುಗಳಲ್ಲ! ಅದರ ಹಣ್ಣುಗಳು!! ಮ್ಯಾಂಡ್ರೇಕ್ ಹಣ್ಣುಗಳು ಸುವಾಸನೆಯಿಂದ ಕೂಡಿ ರುತ್ತವೆ. ಮ್ಯಾಂಡ್ರೇಕ್ ಹಣ್ಣಿನ ಸುವಾಸನೆಯಲ್ಲಿ 55 ವಾಸನಾ ದ್ರವ್ಯಗಳನ್ನು ಪತ್ತೆ ಹಚ್ಚಿರುವರು. ಬಹುಶಃ ಈ ವಾಸನಾ ದ್ರವ್ಯಗಳಲ್ಲಿ ಯಾವುದು ಮಾನವನಲ್ಲಿ ಕಾಮವನ್ನು ಕೆರಳಿಸಬಲ್ಲದು ಎನ್ನುವುದರ ಬಗ್ಗೆ ಸಂಶೋಧನೆಯು ನಡೆಯಬೇಕಿದೆ. ಶೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಮ್ಯಾಂಡ್ರೇಕ್ ಪ್ರಸ್ತಾಪವನ್ನು ಪದೇ ಪದೇ ಮಾಡಿದ್ದಾನೆ. ನನಗೆ ಕುಡಿಯಲು ಮ್ಯಾಂಡ್ರಗೋರವನ್ನು ಕೊಡು/ನಿದ್ರೆಯಲ್ಲಿ ಈ ನಡುವಿನ ಸಮಯವನ್ನು ಕಳೆಯುವೆನು/ನನ್ನ ಆಂಟನಿ ದೂರ ಹೋಗಿದ್ದಾನೆ (ಆಂಟನಿ ಮತ್ತು ಕ್ಲಿಯೋಪಾತ್ರ ಆಕ್ಟ್ 1 ಸೀನ್ 5).

ಗಸಗಸೆಯ ಅಪೀಮಲ್ಲ, ಮ್ಯಾಂಡ್ರಗೋರವು ಅಲ್ಲ, ಜಗತ್ತಿನ ಎಲ್ಲ ನಿದ್ರಾಜನಕ ಔಷಧಗಳೆಲ್ಲ, ನಿನ್ನೆಯ ಆ ನಿದ್ರೆಯನ್ನು, ಸವಿ ನಿದ್ರೆಯನ್ನು ಮತ್ತೆ ಮರಳಿಸಲಾರವು (ಒಥೆಲೊ ಆಕ್ಟ್ 3, ಸೀನ್ 3) ವಾಕರಿಕೆ ಬರುವ ವಾಸನೆಯಿಂದ, ನೆಲದಿಂದ ಕಿತ್ತ ಮ್ಯಾಂಡ್ರೇಕಿನ ಚೀತ್ಕಾರದಿಂದ, ಆಲಿಸಿದ ಮರ್ತ್ಯರು ಮತಿಗೆಡುವರು, ಮರುಳರಂತೆ ಓಡುವರು (ರೋಮಿಯೋ-ಜೂಲಿಯೆಟ್ ಆಕ್ಟ್ 4, ಸೀನ್ 3) ಹೀಗೆ ಶೇಕ್ಸ್ ಪಿಯರ್ ತನ್ನ ಹಲವು ನಾಟಕದಲ್ಲಿ ಮಾಂಡ್ರೇ ಕಿನ ಜನಪ್ರಿಯತೆಯನ್ನು ವರ್ಣಿಸಿದ್ದಾನೆ. ಜೆಕೆ ರೋವ್ಲಿಂಗ್ ತನ್ನ ಹ್ಯಾರಿಪಾಟರ್ ಕಥಾನಕದ ಛೇಂಬರ್ ಆಫ್ ಸೀಕ್ರೆಟ್ಸ್ ಕೃತಿಯಲ್ಲಿ ಮ್ಯಾಂಡ್ರೇಕ್ ವರ್ಣನೆಯನ್ನು ಮಾಡಿದ್ದಾಳೆ. ಪ್ರೊ.ಸ್ಪ್ರೌಟ್, ಹ್ಯಾರಿಪಾಟರ್ ಹಾಗೂ ಅವನ ಸಹಪಾಠಿಗಳಿಗೆ ಪಾಠ ಮಾಡುತ್ತಾ, ಮ್ಯಾಂಡ್ರೇಕ್ ಬೇರನ್ನು ಕೀಳುವ ಮೊದಲು ಕಿವಿ ರಕ್ಷಕಗಳನ್ನು (ಇಯರ್ ಪ್ಲಗ್) ಹಾಕಿಕೊಳ್ಳಲೇಬೇಕು. ಅದು ಹೊರಡಿಸುವ ಚೀತ್ಕಾರವನ್ನು ಕೇಳಿದವರಿಗೆ ಸಾವು ಕಟ್ಟಿಟ್ಟ ಬುತ್ತಿ. ಆದರೆ ಎಳೇ ಸಸ್ಯದ ಚೀತ್ಕಾರವು ಜೀವ ತೆಗೆಯುವಷ್ಟು ಅಪಾಯಕಾರಿಯಲ್ಲ ಎಂದಾಗ, ಹ್ಯಾರಿ ಪಾಟರ್ ಕುಂಡದಿಂದ ಒಂದು ಎಳೇ ಮ್ಯಾಂಡ್ರೇಕ್ ಗಿಡವನ್ನು ಬೇರು ಸಮೇತ ಕೀಳಲು ಹೊರಟಾಗ ಎಲ್ಲರೂ ಕಿವಿಯನ್ನು ಮುಚ್ಚಿಕೊಳ್ಳುತ್ತಾರೆ.

ಬೇರನ್ನು ಕೀಳುತ್ತಿರುವಂತೆಯೇ ಅತ್ಯಂತ ಕುರೂಪಿ ಮಗುವೊಂದು ಹೊರಬಂದು ಸೂರು ಕಿತ್ತು ಹೋಗುವ ಹಾಗೆ ತಾರಕ ಸ್ಥಾಯಿಯಲ್ಲಿ ಚೀರಲಾರಂಭಿ
ಸುತ್ತದೆ. ಈ ಹಿನ್ನೆಲೆಯಲ್ಲಿ, ಮಧ್ಯಯುಗದ ಯೂರೋಪಿನ ಜನರು ಮ್ಯಾಂಡ್ರೇಕ್ ಬೇರನ್ನು ಸ್ವಯಂ ಕೀಳುತ್ತಿರಲಿಲ್ಲ. ಬದಲಿಗೆ ಮ್ಯಾಂಡ್ರೇಕ್ ಬೇರಿಗೆ ದಾರವನ್ನು ಕಟ್ಟಿ, ಆ ದಾರವನ್ನು ನಾಯಿಯ ಕೊರಳಿಗೆ ಕಟ್ಟಿ, ನಾಯಿಯಿಂದ ಬೇರನ್ನು ಎಳೆಯಿಸುತ್ತಿದ್ದರು. ಮ್ಯಾಂಡ್ರೇಕ್ ಬೇರನ್ನು ಮಾಟಗಾತಿಯರು ವಿಶೇಷವಾಗಿ ಬಳಸುತ್ತಿದ್ದರು. ಹಾಗೆಯೇ ಬೇರಿನ ತಾಯಿತವನ್ನು ಕೊರಳಿಗೆ ಕಟ್ಟಿಕೊ ಳ್ಳುತ್ತಿದ್ದರು.

ಆಧುನಿಕ ಜಗತ್ತಿನಲ್ಲಿ ವಿಕ್ಕ ಮತ್ತು ಅಡೋನಿಸಂ ಎನ್ನುವ ಮಾಟಗಾರರ ಗುಂಪುಗಳು ಇಂದಿಗೂ ಮ್ಯಾಂಡ್ರೇಕನ್ನು ತಮ್ಮ ವಿಧಿ ವಿಧಾನಗಳಲ್ಲಿ ಬಳಸುವು ದುಂಟು. ಮ್ಯಾಂಡ್ರಗೋರ ಒಂದು ಮಹಾನ್ ವಿಷಕರ ಸಸ್ಯ. ಇದಕ್ಕೆ ಕಾರಣ ಅದರಲ್ಲಿ ಇರುವ ಟ್ರೋಪೇನ್ ಆಲ್ಕಲಾಯ್ಡುಗಳು. ಈ ಅಪಾಯ ಕಾರಿಯಾದ ಆಲ್ಕಲಾಯ್ಡುಗಳು ವಿಶೇಷವಾಗಿ ಗಿಡದ ಎಲೆಗಳು ಹಾಗೂ ಬೇರಿನಲ್ಲಿ ಸಾಂದ್ರಗೊಂಡಿರುತ್ತವೆ. ಅವುಗಳಲ್ಲಿ ಹೊಯಾಸಮಿನ್, ಸ್ಕೊಪಾಲ ಮಿನ್, ಎಸ್ಕೋ ಪೈನ್, ಕಸ್ಕೋಹೈಗ್ರೇನ್ ಮುಖ್ಯವಾದವು. ಇವು ನಮ್ಮ ಶರೀರ ವ್ಯವಸ್ಥೆಯ ಪರಾನುವೇದನಾ ನರ ವ್ಯವಸ್ಥೆಯ (ಪ್ಯಾರಾ ಸಿಂಪ್ಯಾಥೆಟಿಕ್ ನರ್ವಸ್ ಸಿಸ್ಟಮ್) ಕೆಲಸ ಕಾರ್ಯಗಳನ್ನು ತಿರುಗಮುರುಗ ಮಾಡುವ ಕಾರಣ, ಅನೇಕ ವಿಷ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಎಲೆ ಅಥವ ಬೇರನ್ನು
ಸೇವಿಸಿದವರಿಗೆ ವಾಂತಿ ಮತ್ತು ಭೇದಿಯಾಗುತ್ತದೆ.

ದೃಷ್ಟಿ ಮಂಜಾಗುತ್ತದೆ. ಬಾಯಿ ಒಣಗುತ್ತದೆ. ಮೂತ್ರವನ್ನು ವಿಸರ್ಜಿಸಲು ಆಗುವುದಿಲ್ಲ. ತಲೆನೋವು ಹಾಗೂ ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಹೃದಯ ಗತಿಯು ತೀವ್ರವಾಗಿ, ಶರೀರ ಚಲನವಲನಗಳ ಮೇಲೆ ಹಿಡಿತ ತಪ್ಪುತ್ತದೆ. ಇಲ್ಲದ ಭ್ರಮೆಗಳು ತಲೆದೋರುತ್ತವೆ. ತೀವ್ರವಾಗಿ ಎಚ್ಚರವನ್ನು ತಪ್ಪಿಸುತ್ತದೆ. ಸಾವನ್ನು ತರುತ್ತದೆ. ಮ್ಯಾಂಡ್ರಗೋರದ 3000ಕ್ಕೂ ಹೆಚ್ಚು ಪ್ರಭೇದಗಳಲ್ಲಿ ಮ್ಯಾ.ಅಫಿನೇರಮ್ ಮತ್ತು ಮ್ಯಾ. ಟರ್ಕೋಮೇನಿ ಯಾಕಮ್ ಪ್ರಭೇದಗಳ ರಾಸಾಯನಿಕ ಅಧ್ಯಯನವನ್ನು ಮಾತ್ರ ಮಾಡಲಾಗಿದೆ. ಮ್ಯಾ.ಆಟಮ್ನಾಲಿಸ್ ಮತ್ತು ಮ್ಯಾ.ವೆರ್ನಾಲಿಸ್ ಪ್ರಭೇದಗಳ ಮೇಲ್ಮೈ ಅಧ್ಯಯನ ಮಾತ್ರ ನಡೆದಿದೆ. ಹಾಗಾಗಿ ಮ್ಯಾಂಡ್ರಗೋರ ಕುಲವು ಇನ್ನು ಯಾವ ಯಾವ ಅದ್ಭುತ ಔಷಧಗಳನ್ನು ಒಳಗೊಂಡಿದೆಯೋ ಎನ್ನುವುದನ್ನು ಕಾಲ ಮಾತ್ರ ತಿಳಿಸಬಲ್ಲುದು.