ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
vbhat@me.com
ಮದುವೆಯ ನಂತರ, ತವರಿನಲ್ಲಿ ಕಲಿತದ್ದನ್ನೆಲ್ಲ ಗಂಡನಮನೆಯಲ್ಲಿ ಪ್ರಯೋಗಿಸಲು ಹೋಗಬಾರದು. ತವರಿನಲ್ಲಿ ಕಲಿತದ್ದೇ ಶ್ರೇಷ್ಠ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು. ತವರಿನಲ್ಲಿ ಕಲಿತದ್ದು ಉಪಯೋಗಕ್ಕೆ ಬಾರದಿದ್ದರೆ, ಅದನ್ನು ಮರೆಯಲು ಸಿದ್ಧರಿರಬೇಕು. ಇಲ್ಲ ದಿದ್ದರೆ ಸಂಘರ್ಷ ಕಟ್ಟಿಟ್ಟಬುತ್ತಿ.
ನಾನು ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಹತ್ತು ವರ್ಷ ಪ್ರಧಾನ ಸಂಪಾದಕನಾಗಿ ಕೆಲಸ ಮಾಡಿದೆ. ಐದು ವರ್ಷ ವಿಜಯ ಸಂಕೇಶ್ವರರ ಆಡಳಿತ ಮತ್ತು ಇನ್ನುಳಿದ ಐದು ವರ್ಷ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕಾ ಸಮೂಹದ ಆಡಳಿತ. ಇವೆರಡೂ ಒಂದ ಕ್ಕೊಂದು ತದ್ವಿರುದ್ಧ. ಸಂಕೇಶ್ವರರ ಕಾರ್ಯ ಶೈಲಿ (style of functioning)ಗೂ, ‘ಟೈಮ್ ಆಫ್ ಇಂಡಿಯಾ’ ಕಾರ್ಯಶೈಲಿಗೂ ಅಜಗಜಾಂತರ. ಐದು ವರ್ಷ ಸಂಕೇಶ್ವ ರರ ಜತೆ ಕೆಲಸ ಮಾಡಿದ ನನಗೆ ಅಲ್ಲಿ ಕಲಿತ ಯಾವ ಪಟ್ಟುಗಳೂ ಕೆಲಸಕ್ಕೆ ಬರುವು ದಿಲ್ಲ ಎಂಬುದು ಬಹಳ ಬೇಗ ಮನವರಿಕೆಯಾಯಿತು.
‘ಟೈಮ್ ಆಫ್ ಇಂಡಿಯಾ’ ಆಡಳಿತದಲ್ಲಿ ಮುಂದುವರಿಯಬೇಕೆಂದರೆ ಸಂಕೇಶ್ವರರ ಜತೆಯಲ್ಲಿ ಕಲಿತದ್ದನ್ನೆಲ್ಲ ಮರೆಯಬೇಕು (unlearning) ಎಂಬುದು ಅನುಭವಕ್ಕೆ ಬಂದಿತು. ಹಾಗಂತ ನನ್ನ ಹುದ್ದೆಯಲ್ಲಾಗಲಿ, ಕೆಲಸದಲ್ಲಾಗಲಿ, ಜವಾಬ್ದಾರಿಯಲ್ಲಾಗಲಿ ಸ್ವಲ್ಪವೂ ಬದಲಾವಣೆ ಆಗಿರಲಿಲ್ಲ. ಬದಲಾಗಿದ್ದು ಮ್ಯಾನೇಜಮೆಂಟ್ ಮಾತ್ರ! ಹಾಗಂತ ಸಂಕೇಶ್ವರರ ಹತ್ತಿರ ಕಲಿತದ್ದು ಮಣ್ಣಂಗಟ್ಟೆ ಅಲ್ಲ. ಅವರೂ ಅನುಭವಿ ಉದ್ಯಮಿ. ಉದ್ಯಮ ಬಯಸುವ ಎಲ್ಲ ಕಸರತ್ತು ಗಳನ್ನು ಬಲ್ಲವರು. ಇಡೀ ದೇಶದಲ್ಲಿಯೇ ಬಹು ದೊಡ್ಡ ಲಾಜಿಸ್ಟಿಕ್ ಉದ್ಯಮವನ್ನು ಮುನ್ನಡೆಸುತ್ತಿರುವವರು.
ದೇಶದೆಡೆ ತಮ್ಮ ಕಚೇರಿಗಳನ್ನು ಹೊಂದಿದವರು. ಹುಬ್ಬಳ್ಳಿಯಿಂದ ಹೊರಟ ಟ್ರಕ್ಕು ಪಂಜಾಬಿನ ಲೂಧಿಯಾನ ಸಮೀಪವಿರುವ ಧೌಲಾ ಎಂಬ ಊರು ತಲುಪಲು ಎಷ್ಟು ದಿನ ಬೇಕು, ಎಷ್ಟು ಡೀಸೆಲ್ ಬೇಕು, ಅಲ್ಲಿ ತನಕ ಕ್ರಮಿಸುವಾಗ ಟೋಲ್ಗೆ ಎಷ್ಟು ಫೀಜು ಕೊಡಬೇಕು, ವಾಪಸ್ ಬರುವಾಗ ಟ್ರಕ್ಕು ಭರ್ತಿಯಾಗಿ ಬರಲು ಏನು ಮಾಡಬೇಕು… ಈ ಎಲ್ಲ ವಿವರಗಳೂ ಸಂಕೇಶ್ವರರ ಬೆರಳ ತುದಿಯಲ್ಲಿರುತ್ತವೆ.
ತಮ್ಮ ಸಂಸ್ಥೆಯಲ್ಲಿರುವ ಎಲ್ಲ ಇಪ್ಪತ್ತು ಸಾವಿರ ಡ್ರೈವರುಗಳು ಮತ್ತು ಕ್ಲೀನರುಗಳು ತಿಂಗಳಿಗೊಮ್ಮೆ ತಲೆಗೂದಲು ಕತ್ತರಿಸಿಕೊಳ್ಳಲು ಹೋದರೆ ಎಷ್ಟು ಮಾನವ ಸಮಯ ನಿರರ್ಥಕವಾಗುತ್ತದೆ ಎಂಬುದನ್ನು ಲೆಕ್ಕ ಹಾಕಿದ ಅವರು, ಹುಬ್ಬಳ್ಳಿಯ ವರೂರಿನಲ್ಲಿರುವ ತಮ್ಮ ಬೃಹತ್ ಟ್ರಕ್ಕು ನಿಲುಗಡೆ ತಾಣದ ಒಂದು ಮೂಲೆಯಲ್ಲಿ ಹತ್ತು ಕ್ಷೌರಿಕರನ್ನು ನೇಮಿಸಿದ್ದರು.
ಪ್ರಾಯಶಃ ಯಾವ ಸಂಸ್ಥೆಯೂ ಇದನ್ನು ಯೋಚಿಸಿರಲಿಕ್ಕಿಲ್ಲ. ಡ್ರೈವರನೊಬ್ಬ ಹಿಪ್ಪಿ ಥರ ಕೂದಲು ಬಿಟ್ಟರೆ, ಅದು ಅಯಾಚಿತವಾಗಿ ಕಣ್ಮುಂದೆ ಬಂದು, ಅಪಘಾತಕ್ಕೂ ಕಾರಣವಾಗಬಹುದು ಎಂಬುದು ಅವರ ಈ ಯೋಚನೆಯ ಒಂದು ಭಾಗವಾಗಿದ್ದಿರಲಿಕ್ಕೂ ಸಾಕು.
ಸಂಕೇಶ್ವರರು ಟ್ರಕ್ಕಿನ ಹಿಂಬದಿಯ ಟಯರ್ ನೋಡಿ, ಬ್ರೇಕ್ ಲೈನ್ ಸರಿ ಇದೆಯೋ ಇಲ್ಲವೋ ಎಂಬುದನ್ನು ಹೇಳಬಲ್ಲರು. ಹಿಂದಿನ ನಾಲ್ಕು ಟಯರುಗಳ ಪೈಕಿ ಒಂದು ಹೆಚ್ಚು ಸವೆದಿದ್ದರೆ, ತಕ್ಷಣ ಬ್ರೇಕ್ ಲೈನಿನಲ್ಲಿ ದೋಷವಿದೆ ಎಂದು ಹೇಳಬಲ್ಲರು. ಅವರದು ಟೈಮ್ ಟೆಸ್ಟೆಡ್ ವಿಧಾನ.
ತಮ್ಮ ಅನುಭವದಲ್ಲಿ ಸಾಬೀತಾಗಿದ್ದನ್ನು ಅಥವಾ ಅನುಭವಕ್ಕೆ ದಕ್ಕಿದ್ದನ್ನು ಅವರು ಒಂದು ಪದ್ಧತಿಯಾಗಿ ಕಾರ್ಯರೂಪಕ್ಕೆ ತಂದವರು. ಮ್ಯಾನೇಜಮೆಂಟ್ ಕ್ಲಾಸುಗಳಲ್ಲಿ ಕಲಿಸುವ ಯಾವ ಪಾಠವನ್ನೂ ಅವರು ಕೇಳುವವರಲ್ಲ. ಅದು ಎಷ್ಟರಮಟ್ಟಿಗೆ ಕಾರ್ಯಸಾಧು, ಲಾಭ ದಾಯಕ ಎಂಬುದಷ್ಟೇ ಅವರಿಗೆ ಮುಖ್ಯ. ಅವರದ್ದು ಅನುಭವಜನ್ಯ ಮ್ಯಾನೇಜಮೆಂಟ್ ಪಾಠ. ಅವರ ಮುಂದೆ ಮ್ಯಾನೇಜ ಮೆಂಟ್ ಕ್ಲಾಸಿ ನಲ್ಲಿ ಹೇಳಿಕೊಡುವ ಥಿಯರಿಗಳನ್ನು ಹೇಳಲಾರಂಭಿಸಿದರೆ ಆಕಳಿಸುತ್ತಾರೆ. ಅಲ್ಲಿ ತನಕ ಪುಂಗಿದ್ದು ಸಾಕು, ಜಾಸ್ತಿ ಶಾಣ್ಯಾ ಆಗಬೇಡ ಎಂದು ಸೂಚ್ಯವಾಗಿ ಹೇಳುತ್ತಾರೆ. ಹಾಗಂತ ಅವರಿಗೆ ನಿಮ್ಮನ್ನು ಅಗೌರವಾಗಿ ಕಾಣಬೇಕು ಎಂಬುದು ಉದ್ದೇಶವಾಗಿರುವುದಿಲ್ಲ.
ಅವರ ಪಾಲಿಗೆ best practice ಯಾವುದು ಎಂದರೆ ಅದು time tested ಆಗಿರಬೇಕು. ಅದು ಬಿಟ್ಟು ಯಾರೋ ಬಂದು ಏನೋ ಹೇಳಿ ದರೆ ಅವರು ಕೇಳುವುದಿಲ್ಲ. ಬಹಳ ಬೇಗ ಸಾಗಹಾಕುತ್ತಾರೆ. ಇಂಥ ಸಂಕೇಶ್ವರರ ಹತ್ತಿರ, ನಾನು ‘ಸಾರ್, ನಮಗೆ ಹತ್ತು ಕಂಪ್ಯೂಟರ್ ಬೇಕು’ ಎಂದು ಹೇಳಿದರೆ, ‘ನಾಳೆಯೇ ವಿ.ಆರ್.ಎಲ್. ಬಸ್ಸಿನಲ್ಲಿ ಕಳಿಸಿಕೊಡುತ್ತೇನೆ’ ಎಂದು ಹೇಳುತ್ತಿದ್ದರು ಮತ್ತು ಮರುದಿನವೇ ಹತ್ತು ಕಂಪ್ಯೂಟರುಗಳು ಬರುತ್ತಿದ್ದವು. ಆದರೆ ಆ ಹತ್ತು ಕಂಪ್ಯೂಟರುಗಳನ್ನು ಇಡಲು ಜಾಗವಿದೆಯಾ, ಟೇಬಲ್ ಇವೆಯಾ, ವೈರಿಂಗ್ ಆಗಿವೆಯಾ ಎಂಬುದನ್ನು ಕೇಳಲು ಮರೆಯುತ್ತಿರಲಿಲ್ಲ.
ಸಂಕೇಶ್ವರರ ಮುಂದೆ ಯಾವ ಬೇಡಿಕೆ ಇಟ್ಟರೂ ಅವರು ಆಗುತ್ತದೆ ಮತ್ತು ಆಗುವುದಿಲ್ಲ ಎಂಬುದನ್ನು ಕ್ಷಣ ಮಾತ್ರದಲ್ಲಿ ಹೇಳುತ್ತಾರೆ.
ನೋಡೋಣ, ಮಾಡೋಣ, ಹತ್ತು ದಿನ ಸಮಯ ಕೊಡಿ, ಯೋಚಿಸಿ ಹೇಳುತ್ತೇನೆ ಎಂಬ ಮಾತುಗಳೆಲ್ಲ ಅವರ ಪದಕೋಶದಲ್ಲಿ ಇಲ್ಲವೇ ಇಲ್ಲ. ಸುಖಾಸುಮ್ಮನೆ ತಮ್ಮ ಸಮಯವನ್ನು ವ್ಯರ್ಥ ಮಾಡುವವರಲ್ಲ, ಬೇರೆಯವರ ಸಮಯವನ್ನೂ. ಇನ್ನು false promise.. ಉಹುಂ ಕೇಳಲೇಬೇಡಿ..
ನಾನು ‘ವಿಜಯ ಕರ್ನಾಟಕ’ದಲ್ಲಿದ್ದ ಮೊದಲ ಐದು ವರ್ಷ ಈ ವಾತಾವರಣದಲ್ಲಿ ಬೆಳೆದವನು ಮತ್ತು ನನ್ನ ಕಾರ್ಯಶೈಲಿ, ವಿಧಾನ, ಯೋಚನೆಗಳನ್ನು ಈ ರೀತಿ ರೂಪಿಸಿಕೊಂಡವನು. ನಿಜಕ್ಕೂ ಅವರ ಜತೆ ಕೆಲಸ ಮಾಡುವುದು ಒಂದು ರೋಚಕ ಅನುಭವವೇ. ಆಗ ಸಂಕೇಶ್ವರರಿಗೆ ಈಗಿನಂತೆ ಪತ್ರಿಕೋದ್ಯಮದ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಅವರು ತಮ್ಮ ದಲ್ಲದ ಹೊಸ ಉದ್ಯಮಕ್ಕೆ ಕೈಹಾಕಿದ ದಿನ ಗಳವು.
ಒಂದು ರೀತಿಯಲ್ಲಿ ಅವರಿಗೂ ಪತ್ರಿಕೋದ್ಯಮದ ಪಟ್ಟುಗಳು ಹೊಸತು. ಹಾಗೆಂದು ಆಗಲೂ ಅವರನ್ನು ಯಾಮಾರಿಸುವುದು ಸಾಧ್ಯವೇ ಇರಲಿಲ್ಲ. ಸಂಕೇಶ್ವರರ ವೇಗಕ್ಕೆ ತಕ್ಕಂತೆ ನನ್ನನ್ನು ರೂಪಿಸಿಕೊಳ್ಳುವುದು ಸವಾಲಾಗಿತ್ತು. ಅವರು ಒಂದು ಸಮಸ್ಯೆಯನ್ನು ಹತ್ತಾರು
ಕೋನಗಳಿಂದ ಯೋಚಿಸಿ, ತಮಗೆ ಏನೂ ಗೊತ್ತಿಲ್ಲದವರಂತೆ ನನ್ನ ಅಭಿಪ್ರಾಯ ಕೇಳುತ್ತಿದ್ದಾರೆ ಎಂಬುದನ್ನು ಬಹಳ ಬೇಗ ಅರ್ಥ
ಮಾಡಿಕೊಂಡೆ. ಅವರ ಜತೆ ಕೆಲ ಸಮಯ ಇದ್ದರೆ, ಅವರು ಜಗತ್ತಿನ ಯಾವ ಮ್ಯಾನೇಜಮೆಂಟ್ ಕ್ಲಾಸುಗಳಲ್ಲಿ ಹೇಳದ ಪಾಠವನ್ನು ತಮಗೆ ಗೊತ್ತಿಲ್ಲದೇ ಮಾಡುತ್ತಿರುತ್ತಾರೆ.
ಸಂಕೇಶ್ವರರ ಜತೆ ಐದು ವರ್ಷ ಕೆಲಸ ಮಾಡಿ ಅವರಿಂದ ಸೈ ಎನಿಸಿಕೊಂಡರೆ, ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು, ಚೆಂದವಾಗಿ ಬದುಕಬಹುದು. ಇದು ನನ್ನ ಅನುಭವ. ಇಂಥ ವಾತಾವರಣದಲ್ಲಿ ಕೆಲಸ ಮಾಡಿಕೊಂಡಿದ್ದ ನನಗೆ, ವಿಜಯ ಕರ್ನಾಟಕ’ ಏಕಾಏಕಿ ‘ಟೈಮ್ಸ್ ಆಫ್ ಇಂಡಿಯ’ ತೆಕ್ಕೆಗೆ ಹೋದಾಗ, ಸಣ್ಣ ಗಲಿಬಿಲಿಯಾಗಿದ್ದು ಸುಳ್ಳಲ್ಲ.
‘ನಾಳೆಯಿಂದ ನೀವು ಅವರಿಗೆ (ಟೈಮ್ಸ್ ಆಡಳಿತಕ್ಕೆ) ರಿಪೋರ್ಟ್ ಮಾಡಿಕೊಳ್ಳಿ’ ಎಂದು ಸಂಕೇಶ್ವರರು ಹೇಳಿದಾಗ, ನಾನು ತರಗಬರಗ ಆಗಿದ್ದೆ. ಫೋನ್ ಮಾಡಿದ ಮರುದಿನವೇ ನಮಗೆ ಬೇಕಾಗಿದ್ದು ನನ್ನ ಟೇಬಲ್ ಮೇಲಿರುವ ಸಂಕೇಶ್ವರರ ವಾತಾವರಣದಲ್ಲಿ ಬೆಳೆದ ನನಗೆ ಹೊಸ ಆಡಳಿತಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಟೈಮ್ಸ್ ಆಡಳಿತದಲ್ಲಿ ಹತ್ತು ಕಂಪ್ಯೂಟರ್ ಬೇಕಾದರೆ, ಹತ್ತು ಕಂಪ್ಯೂ ಟರ್ ಬೇಕಾಗಿವೆ ಎಂಬುದನ್ನು ಪುಷ್ಟೀಕರಿಸಲು ಕಂಪ್ಯೂಟರ್ ವಿಭಾಗದ ಮುಖ್ಯಸ್ಥನ ಶಿಫಾರಸು ಇಮೇಲ್ ಅಡಕವಾಗಿಟ್ಟುಕೊಂಡು, ಸಿಇಒ ಅವರಿಗೆ ಬರೆಯಬೇಕಿತ್ತು.
ಸಿಇಒ ಅವರು ಅದನ್ನು ದಿಲ್ಲಿಯಲ್ಲಿರುವ ಬ್ಯುಸಿನೆಸ್ ಮತ್ತು ಕಮರ್ಷಿಯಲ್ (ಬಿ ಅಂಡ್ ಸಿ) ವಿಭಾಗದ ಮುಖ್ಯಸ್ಥರಿಗೆ ನನ್ನ ಇಮೇಲ್ ಅನ್ನು ಫಾರ್ವರ್ಡ್ ಮಾಡಿ ಕಂಪ್ಯೂಟರನ್ನು ಕಳಿಸುವಂತೆ ಮನವಿಯನ್ನು ವರ್ಗಾಯಿಸಿದರು. ದಿಲ್ಲಿಯಲ್ಲಿರುವ ಬಿ ಅಂಡ್ ಸಿ ಮುಖ್ಯಸ್ಥರು ಬೆಂಗಳೂರಿನಲ್ಲಿರುವ ಅವರ ವಿಭಾಗದ ಮುಖ್ಯಸ್ಥನನ್ನು ಸಂಪರ್ಕಿಸಿ, ಸಂಪಾದಕರ ಕೋರಿಕೆಯನ್ನು ಪರಿಶೀಲಿಸುವಂತೆ ಹೇಳಿದರು. ಅವರು ನನ್ನನ್ನು ಸಂಪರ್ಕಿಸಿ ನನ್ನ ಕೋರಿಕೆಯನ್ನು ಸಮರ್ಥಿಸುವಂತೆ ಹೇಳಿದರು. ನಾನು ಅವರಿಗೆ ಮನವರಿಕೆ ಮಾಡಿಕೊಟ್ಟೆ.
ನಂತರ ಅವರು ದಿಲ್ಲಿಯಲ್ಲಿರುವ ಬಿ ಅಂಡ್ ಸಿ ವಿಭಾಗದ ಮುಖ್ಯಸ್ಥರಿಗೆ ಇಮೇಲ್ ಮಾಡಿ ಕಂಪ್ಯೂಟರ್ ಕಳುಹಿಸಬಹುದು ಎಂದು ಶಿಫಾರಸು ಮಾಡಿದರು. ಅವರು ಬೆಂಗಳೂರಿನಲ್ಲಿರುವ ಸಿಇಒಗೆ ಮತ್ತೊಂದು ಇಮೇಲ್ ಕಳಿಸಿ, ತಾವು ಕಂಪ್ಯೂಟರುಗಳನ್ನು ಕಳಿಸುವು ದನ್ನು ದೃಢಪಡಿಸಿದರು. ಅವರು (ಸಿಇಒ) ಆ ಇಮೇಲ್ ಅನ್ನು ನನಗೆ ಫಾರ್ವರ್ಡ್ ಮಾಡಿದರು. ಅದಾಗಿ ಒಂದು ತಿಂಗಳ ನಂತರ ಕಂಪ್ಯೂಟರುಗಳು ಬಂದವು! ಈ ಇಡೀ ಪ್ರಕ್ರಿಯೆಗೆ ಸುಮಾರು 45 ದಿನಗಳು ಹಿಡಿದವು! ಒಂದು ಕ್ಷಣ ನಾನು ಸಾವರಿಸಿಕೊಂಡೆ.
ಗುಂಡು ಪಿನ್ನು, ಮೌಸ್ ಸೇರಿದಂತೆ ಸಣ್ಣ-ಪುಟ್ಟ ಸಂಗತಿಗಳಿಗೂ ಇಮೇಲ್ ಮಾಡುತ್ತ, ನಾಲ್ಕಾರು ಮುಖ್ಯಸ್ಥರನ್ನು ಸಂಪರ್ಕಿಸುತ್ತ ಕುಳಿತರೆ ನಾನು ಯಾವಾಗ ಪತ್ರಿಕೆಯನ್ನು ಹೊರತರುವುದು ಎಂದು ಯೋಚಿಸುತ್ತ ಕುಳಿತೆ. ಯಾಕೋ ಸಮಾಧಾನವಾಗಲಿಲ್ಲ, ನಾನು ಬೆಂಗಳೂರಿನ ಸಿಇಒ ಅವರಲ್ಲಿ ಹೋಗಿ, ‘ಒಂದು ಕಂಪ್ಯೂಟರ್ ಬೇಕು ಅಂದ್ರೆ ೪೫ ದಿನ ಕಾಯಬೇಕಾ? ಸಂಕೇಶ್ವರರು ಒಂದು ದಿನದಲ್ಲಿ ಕಳಿಸುತ್ತಿದ್ದರು. ಹೀಗಾದರೆ ಹೇಗೆ?’ ಎಂದು ಕೇಳಿದೆ.
ಅವರು ತಣ್ಣಗೆ, ‘ಇದು ಟೈಮ್ಸ್ ಆಫ್ ಇಂಡಿಯ ಮ್ಯಾನೇಜಮೆಂಟ್. ಇದು ವರ್ತಿಸುವುದೇ ಹೀಗೇ. ನಿಮಗೆ ಕಂಪ್ಯೂಟರ್ ಬೇಕಿದೆ ಅಂತ ನಲವತ್ತೈದು ದಿನಗಳ ಹಿಂದೆಯೇ ಬರೆದಿದ್ದರೆ, ನಾಳೆಯೇ ಸಿಗುತ್ತಿತ್ತು. ನಮ್ಮ ವ್ಯವಸ್ಥೆಯಲ್ಲಿ ಇದು ಅನಿವಾರ್ಯ. ಅಷ್ಟಕ್ಕೂ ನಿಮಗೆ ಗೊತ್ತಿರಲಿ, ಟೈಮ್ಸ್ ಆಫ್ ಇಂಡಿಯ ಸಂಸ್ಥೆಗೆ 183 ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿಯೇ ನಂಬರ್ ಒನ್ ಪತ್ರಿಕಾ ಸಂಸ್ಥೆ ಎಂಬ
ಅಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಯಾರೋ ಬಂದು ಹೊಸ ನಿಯಮವನ್ನು ಮಾಡುವುದಿಲ್ಲ. ಪ್ರತಿ ನಿಯಮವೂ ಕಾಲನ (Time tested) ಅವಶ್ಯಕತೆಯಿಂದ ರೂಪುಗೊಂಡಿದ್ದು.
ಈಗ ನಾವು ಅನುಸರಿಸುತ್ತಿರುವ ನಿಯಮ ಸರಿಯಿದೆ. ಈಗ ನೀವು ಸಂಕೇಶ್ವರರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿಲ್ಲ ಅನ್ನುವುದನ್ನು ಮನ ದಟ್ಟು ಮಾಡಿಕೊಳ್ಳಿ. ಒಂದೊಂದು ಸಂಸ್ಥೆಗೆ ಅದರದ್ದೇ ಆದ ನೀತಿ-ನಿಯಮಗಳಿರುತ್ತವೆ. ಮತ್ತೊಮ್ಮೆ ಹೇಳ್ತೇನೆ, ನೀವು ಈಗ ಟೈಮ್ಸ್ ಅಧೀನದಲ್ಲಿರುವ ಸಂಪಾದಕ’ ಎಂದು ಒಂದು ಸಣ್ಣ ಬೌದ್ಧಿಕ್ ಕೊಟ್ಟರು. ನಾನು ಅವರ ಮಾತನ್ನು ಕೇಳಿಸಿಕೊಂಡ ಬಳಿಕ, ಒಂದು ನಿಮಿಷ ಮಾತು ಮರೆತವನಂತೆ ಸುಮ್ಮನಾಗಿಬಿಟ್ಟೆ. ಸಂಕೇಶ್ವರರ ಗರಡಿಯಲ್ಲಿ ಕಲಿತಿದ್ದನ್ನೆಲ್ಲ ಮರೆಯದಿದ್ದರೆ (unlearning) ಟೈಮ್ಸ್ ಸಂಸ್ಥೆಯಲ್ಲಿ ಉಳಿಗಾಲವಿಲ್ಲ ಎನಿಸಿ ಬಿಟ್ಟಿತು. ಕಾರಣ ಟೈಮ್ಸ್ (ಬೆನೆಟ್ ಮತ್ತು ಕೋಲ್ಮನ್) ಸಂಸ್ಥೆ ನಡೆದು ಬಂದಿರುವುದೇ ಹಾಗೆ.
ಇಂದು ಟೈಮ್ಸ್ ಅತ್ಯಂತ ಯಶಸ್ವಿ ಮತ್ತು ಲಾಭದಾಯಕ ಪತ್ರಿಕಾ ಸಂಸ್ಥೆ ಎನಿಸಿಕೊಂಡಿದೆ. ‘ಟೈಮ್ಸ್ ಮಾಡೆಲ್’ ಅನುಸರಿಸಿದರೆ ಮಾತ್ರ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಹುದು ಎಂದು ಅನಿಸಲಾರಂಭಿಸಿದೆ. ಇಂದು ಟೈಮ್ಸ್ ಸಂಸ್ಥೆ ಇಷ್ಟೊಂದು ಅಗಾಧವಾಗಿ ಬೆಳೆದಿದೆ. ಟೈಮ್ಸ್ ಆಫ್ ಇಂಡಿಯ ಬೆಂಗಳೂರು ಆವೃತ್ತಿ ಆರಂಭವಾಗಿ ನಾಲ್ಕೂವರೆ ದಶಕಗಳಾದರೂ, ಒಮ್ಮೆಯೂ
ಅದರ ಮಾಲೀಕರಾದ ಸಮೀರ್ ಜೈನ ಎಂ.ಜಿ. ರಸ್ತೆಯಲ್ಲಿರುವ ಆಫೀಸಿನೊಳಗೆ ಕಾಲಿಟ್ಟಿಲ್ಲ. ಅವರು ವರ್ಷದಲ್ಲಿ ಎರಡು-ಮೂರು ತಿಂಗಳು ಹೃಷಿಕೇಶದಲ್ಲಿ ಧ್ಯಾನ(?)ದಲ್ಲಿ ಕುಳಿತಿರುತ್ತಾರೆ.
ಆದರೂ ಪತ್ರಿಕೆ ಅದರ ಪಾಡಿಗೆ ನಡೆದುಕೊಂಡು ಹೋಗುತ್ತಿರುತ್ತದೆ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಹೆಚ್ಚು ಹೆಚ್ಚು ಲಾಭ ಗಳಿಸು ತ್ತಿದೆ. ಹಲವಾರು ಹೊಸ ಹೊಸ ಕ್ಷೇತ್ರಗಳಲ್ಲಿ ಬೆಳೆಯುತ್ತಿದೆ. ಟೈಮ್ಸ್ ಅಂದ್ರೆ ಬರೀ ಪತ್ರಿಕಾ ಸಂಸ್ಥೆಯಲ್ಲ. ಪತ್ರಿಕೆಯೂ ಆ ಪೈಕಿ ಮ್ಯಾಜಿಕ್ ಬ್ರಿಕ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನೂ ನಡೆಸುತ್ತಿದೆ. ಸಿಇಒ ನನಗೆ ಇಷ್ಟೆಲ್ಲ ಯಾಕೆ ಹೇಳುತ್ತಿದ್ದಾರೆ ಅನ್ನುವುದು ಗೊತ್ತಾ ಯಿತು. ಜೀವನ ಅಂದ್ರೆ ಬರೀ ಕಲಿಯುವುದು ಅಂತ ಭಾವಿಸಿದ್ದ ನನಗೆ, ಅಂದು ಅವರು ಮತ್ತೊಂದು ಕಟು ವಾಸ್ತವವನ್ನು ಹೇಳಿದ್ದರು.
ಅದೇನೆಂದರೆ, ಕಲಿತರಷ್ಟೇ ಸಾಲದು, ಕಲಿತದ್ದನ್ನು ಮರೆಯುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು ಸಾಧ್ಯವಾದರೆ ಕಲಿತದ್ದನ್ನೆಲ್ಲ ಪ್ರಯೋಗಿಸಬಾರದು, ಯಾವಾಗ, ಎಲ್ಲಿ ಪ್ರಯೋಗಿಸಬೇಕು ಎಂಬುದನ್ನು ಅರಿಯ ಬೇಕು. ಹಾವು ಹಿಡಿಯುವುದಕ್ಕೆ ಬಳಸುವ ಮಂತ್ರ ದಿಂದ, ಚಿಟ್ಟೆಯನ್ನು ಹಿಡಿಯಲಾಗುವುದಿಲ್ಲ ಎಂಬುದು ಗೊತ್ತಿರಬೇಕು. ಸೈಕಲ್ ಸವಾರಿ ಕಲಿತರೆ, ಸ್ಕೂಟರ್ ಮತ್ತು ಬೈಕ್ ಓಡಿಸಬಹುದು. ಆದರೆ ರಿಕ್ಷಾ ಓಡಿಸಲು ಸೈಕಲ್ ಸವಾರಿ ಕಲಿಯಬೇಕಿಲ್ಲ, ಡ್ರೈವಿಂಗ್ ಬರಬೇಕಿಲ್ಲ ಎಂಬ ಸಾಮಾನ್ಯ ಸಂಗತಿ ತಿಳಿದಿರಬೇಕು.
ಮದುವೆಯ ನಂತರ, ತವರಿನಲ್ಲಿ ಕಲಿತದ್ದನ್ನೆಲ್ಲ ಗಂಡನಮನೆಯಲ್ಲಿ ಪ್ರಯೋಗಿಸಲು ಹೋಗಬಾರದು. ತವರಿನಲ್ಲಿ ಕಲಿತದ್ದೇ ಶ್ರೇಷ್ಠ ಎಂಬ
ಭಾವನೆಯನ್ನು ಇಟ್ಟುಕೊಳ್ಳಬಾರದು. ತವರಿನಲ್ಲಿ ಕಲಿತದ್ದು ಉಪಯೋಗಕ್ಕೆ ಬಾರದಿದ್ದರೆ, ಅದನ್ನು ಮರೆಯಲು ಸಿದ್ಧರಿರಬೇಕು. ಇಲ್ಲದಿ ದ್ದರೆ ಸಂಘರ್ಷ ಕಟ್ಟಿಟ್ಟಬುತ್ತಿ. ಯಾರು ಈ ಮನೋಭಾವವನು ಬೆಳೆಸಿಕೊಳ್ಳುತ್ತಾರೋ, ಅವರು ಗಂಡನ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುತ್ತಾರೆ. ತವರಿನಲ್ಲಿ ಕಲಿತ ಯಾವ ಸಂಗತಿ ಗಂಡನಮನೆಯಲ್ಲಿ ಉಪಯೋಗಕ್ಕೆ ಬರುತ್ತದೆ, ಅನುಷ್ಠಾನಯೋಗ್ಯ ಎಂಬುದು ಅವಳಿಗೆ ಗೊತ್ತಿರಬೇಕು. ಇಲ್ಲದಿದ್ದರೆ ಕಲಿತ ಉತ್ತಮ ಸಂಗತಿಗಳೇ ನೆಮ್ಮದಿಯನ್ನು ಹಾಳು ಮಾಡಬಹುದು.
ಹೀಗಾಗಿ ಕಲಿಯುವುದಷ್ಟೇ ಮುಖ್ಯವಲ್ಲ, ಅದನ್ನು ಆಗಾಗ ಮರೆಯುವುದು, ಮತ್ತೆ ಕಲಿಯುವುದು, ಕಲಿತದ್ದನ್ನು ಮಾರ್ಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಏನಂತೀರಾ? ಸರಿಸುಮಾರು ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಶಿರಸಿಯ ಮೊಟ್ಟಮೊದಲ ದೈನಿಕ ‘ಲೋಕಧ್ವನಿ’ಯನ್ನು ಇತ್ತೀಚೆಗೆ ನಾನು ತೆಗೆದುಕೊಂಡ ನಂತರ ಆ ಕಚೇರಿಯ ಸಿಬ್ಬಂದಿಯಲ್ಲಿನ ಸಹಜ ಆರಂಭಿಕ ಆತಂಕಗಳನ್ನು
ಗಮನಿಸಿದಾಗ ಇದೆಲ್ಲ ನೆನಪಾಯಿತು.