ಅವಲೋಕನ
ಕೆ.ರಾಮಮೂರ್ತಿ ರಾವ್
ramamurthyrao@gmail.com
ಕಳೆದ ಒಂದೂವರೆ ವರ್ಷದಿಂದೀಚೆಗೆ ಹೆಚ್ಚು ಕಡಿಮೆ ಸಾಂಸ್ಕೃತಿಕ ಕ್ಷೇತ್ರವೇ ಸಂಪೂರ್ಣ ಸ್ತಬ್ಧಗೊಂಡಿದೆ. ಶೈಕ್ಷಣಿಕ ಕ್ಷೇತ್ರ, ಶಾಲಾ ಕಾಲೇಜುಗಳ ಪರಿಸ್ಥಿತಿ ಡೋಲಾಯಮಾನವಾಗಿರುವಂತೆ ಸಂಗೀತ, ನೃತ್ಯ, ಮುಂತಾದ ಕಲಾ ಶಿಕ್ಷಣಕ್ಕೂ ಗ್ರಹಣ ಬಡಿದಂತಾಗಿದೆ. ದಿನಕ್ಕೊಂದು ಹೊಸ ಹೊಸ ರೂಪಾಂತರಿ
ವೈರಾಣು ರಂಗ ಪ್ರವೇಶ ಮಾಡುತ್ತಿದ್ದು ಮುಂದಿನ ದಿನಗಳ ಬಗ್ಗೆ ಅನಿಶ್ಚಿತತೆ ಎಲ್ಲೂ ಕಾಣುತ್ತದೆ. ಈ ಅನಿಶ್ಚಿತತೆಗೆ ಬೇಗನೆ ತೆರೆ ಬಿದ್ದು ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ರಂಗಗಳ ತೆರೆ ಬೇಗನೆ ತೆರೆಯುವಂತಾಗಲೆಂದು ಕೋರೋಣ.
ಕಳೆದ ಒಂದೂವರೆ ವರ್ಷದಿಂದೀಚೆಗೆ ಕರೋನಾ ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಆರ್ಥಿಕ, ಶೈಕ್ಷಣಿಕ, ವಾಣಿಜ್ಯ, ಸಾಮಾಜಿಕ ಹೀಗೆ ಎಲ್ಲಾ ರಂಗಗಳನ್ನು ಕರೋನಾ ನಾಶಪಡಿಸಿದೆ. ವ್ಯಾಪಾರ, ವಾಣಿಜ್ಯ, ಉದ್ಯೋಗ, ವೃತ್ತಿ ಸಂಬಂಽತ ಯಾವುದೇ ಚಟುವಟಿಕೆಗಳಿರಲಿ ಎಲ್ಲಾ ಕಡೆಯೂ ಈ ಕರೋನಾ ಮಾಯಾವಿಯಂತೆ ಹೊಕ್ಕು ಎಲ್ಲರ ಜೀವನವನ್ನು ಮೂರಾ ಬಟ್ಟೆಯಾಗಿಸಿದೆ. ಈ ಕರೋನಾ ಎಲ್ಲಿ ಯಾವ ರೂಪದಲ್ಲಿ ಹೇಗೆ ವಕ್ಕರಿಸಿಕೊಂಡು ಜೀವನ ಮತ್ತು ಜೀವವನ್ನು ಬಲಿ ತೆಗೆದುಕೊಳ್ಳುತ್ತದೆಂಬ ಭಯ, ಆತಂಕ ಎಲ್ಲರನ್ನು ಕಾಡುತ್ತಿದೆ.
ಕರೋನಾ ಕಿರಿಕಿರಿಯಿಂದ ಕಂಗಾಲಾಗಿರುವವರ ಪಟ್ಟಿಯಲ್ಲಿ ಕಲಾವಿದರ ಸಂಖ್ಯೆಯೂ ಬಹು ದೊಡ್ಡದಿದೆ. ಇಲ್ಲಿ ಕಲಾವಿದರು ಎಂದಾಗ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ನಾಟಕ, ಯಕ್ಷಗಾನ, ಜಾನಪದ, ಸಿನಿಮಾ, ಚಿತ್ರಕಲೆ , ಶಿಲ್ಪ, ದೂರದರ್ಶನದ ಕಲಾವಿದರು ಎಲ್ಲರೂ ಸೇರುತ್ತಾರೆ. ಅಷ್ಟೇ ಅಲ್ಲದೆ ಈ
ಎಲ್ಲಾ ಕಲೆಗಳ ಪ್ರದರ್ಶನಕ್ಕೆ ಬೇಕಾದ ಪೂರಕವಾದ ಸಲಕರಣೆಗಳನ್ನೊದಗಿಸುವ ವೃತ್ತಿಪರರಾದ ಎಲ್ಲಾ ವರ್ಣಾಲಂಕಾರದವರು, ವಸ್ತ್ರಾಲಂಕಾರದವರು,
ಕಾಸ್ಟ್ಯೂಮ್ ಡಿಸೈನರ್ಸ್, ವಾದ್ಯ ತಯಾರಕರು, ರಂಗಪರಿಕರಗಳ ತಯಾರಕರು, ಧ್ವನಿ ವರ್ಧಕದವರು, ಛಾಯಾಚಿತ್ರ ಗ್ರಾಹಕರು, ವಿಡಿಯೋ ಗ್ರಾಫರ್‌ಗಳು,
ದೀಪಾಲಂಕಾರದವರು, ಪ್ಲೆಕ್ಸ್ ಮತ್ತು ಬ್ಯಾನರ್ ತಯಾರಕರು, ಆಹ್ವಾನ ಪತ್ರಿಕೆ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಸರಬರಾಜು ಮಾಡುವವರು, ಸಭೆ,
ಸಮಾರಂಭಗಳಿಗೆ, ವೃತ್ತಿಪರ ನಿರೂಪಕರು (ಆಂಕರ್ಸ್), ಹಾರ, ನೆನಪಿನ ಕಾಣಿಕೆಗಳ ತಯಾರಕರು ಹೀಗೆ ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಇವರಲ್ಲಿ ಹೆಚ್ಚಿನವರು ಈಗ ತೊಂದರೆಗೊಳಗಾಗಿದ್ದು ಇವರ ಬದುಕೇ ದುಸ್ತರವಾಗಿದೆ.
ಸ್ವಂತ ಶ್ರಮದಿಂದ ಹಲವು ವರ್ಷಗಳ ಸತತ ಪರಿಶ್ರಮದಿಂದ ಕರಗತವಾಗಿಸಿಕೊಂಡ ಕೆಲವು ಕಲೆ ಹಾಗೂ ನೈಪುಣ್ಯತೆಗಳನ್ನು ಉಪಯೋಗಿಸಿಕೊಂಡು
ಆತ್ಮಗೌರವದೊಂದಿಗೆ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಈ ಎಲ್ಲರಿಗೂ ಈಗ ಕೆಟ್ಟಕಾಲ ಬಂದಿದೆ. ತಮ್ಮಲ್ಲಿ ವಿದ್ಯೆ, ಕಲೆ,
ಕೌಶಲ್ಯ, ಸಾಮರ್ಥ್ಯ, ಉತ್ಸಾಹ, ಸೃಜನಶೀಲತೆ ಎಲ್ಲವೂ ಇದೆ. ಆದರೆ ಅದರ ಬಳಕೆಗೆ, ಪ್ರದರ್ಶನಕ್ಕೆ ಅವಕಾಶಗಳು ಈಗ ಸಂಪೂರ್ಣವಾಗಿ ಬಂದ್ ಆಗಿದೆ.
ಲಾಕ್ ಡೌನ್‌ನಿಂದಾಗಿ ಅವರು ತಮ್ಮ ದುಃಖ, ದುಮ್ಮಾನ, ಒತ್ತಡ, ಕಳವಳಗಳನ್ನು ನಾಲ್ಕು ಗೋಡೆಗಳ ನಡುವೆ ಗೋಡೆಗಳೊಂದಿಗೆ ಹಂಚಿಕೊಂಡು ಬದುಕ ಬೇಕಾದ ಅನಿವಾರ್ಯತೆ ಎದುರಾಗಿದೆ.
ತಮ್ಮ ಹಣಕಾಸಿನ ಸಂಕಷ್ಟಗಳನ್ನು ಮನೆ ಮಂದಿಯ ಜತೆ ಹಂಚಿಕೊಂಡರೆ ತಾನು ಮಾತ್ರವಲ್ಲದೆ ಕುಟುಂಬದ ಎಲ್ಲರ ಆತ್ಮಸ್ಥೈರ್ಯವೂ ಕುಸಿಯುತ್ತ ದೆಂದು
ಕೆಲವರು ತಾವೇ ಸಂಕಷ್ಟಗಳನ್ನು ಯಾರಿಗೂ ಹೇಳದೆ ಹೊಟ್ಟೆಯೊಳಗಿಟ್ಟುಕೊಂಡು ಸಂಕಟ ಪಡುತ್ತಿದ್ದಾರೆ. ನಿಜ, ನಮ್ಮ ಘನ ಸರಕಾರವೂ ಕೂಡ ಕಲಾವಿದರ
ಸಂಕಷ್ಟಕ್ಕೆ ಸ್ಪಂದಿಸಿ ಕೆಲವು ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಹಾಗೆಯೇ ಕೆಲವು ಸಂಘ – ಸಂಸ್ಥೆಗಳು, ಜನಪ್ರತಿನಿಧಿಗಳು, ದಾನಿಗಳು, ಮಠಮಾನ್ಯಗಳವರು, ಚಿತ್ರ ನಟರು, ಮುಂತಾದವರು ಕೂಡಾ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿ ಪಡಿತರ ಕಿಟ್‌ಗಳನ್ನು ನೀಡುತ್ತಿದ್ದಾರೆ.
ಇದು ತುಂಬಾ ಪ್ರಶಂಸನೀಯವಾದzಗಿದೆ. ಇದು ಕಲಾವಿದರ ದೈನಂದಿನ ಹಲವಾರು ತುರ್ತು ಅವಶ್ಯಕತೆಗಳಿಗೆ ತುಂಬಾ ಸಹಾಯ ಆಗಬಹುದಾದರೂ ಅದನ್ನು ಪಡೆಯುವಾಗಿನ ಅವರ ಮನೋಸ್ಥಿತಿ ಶೋಚನೀಯವೆನಿಸುತ್ತದೆ. ಸಾಮಾನ್ಯವಾಗಿ ಕಲಾವಿದರು ಅತ್ಯಂತ ಸೂಕ್ಷ್ಮ ಸಂವೇದನೆ ಉಳ್ಳವರು. ತಿಂಗಳಿಗೆ ಇಂತಿಷ್ಟೇ ನಿರ್ದಿಷ್ಟ ಆದಾಯವೆಂಬುದು ಇಲ್ಲದಿದ್ದಾಗಲೂ ಬದ್ಧತೆಯೊಂದಿಗೆ ಪ್ರಾಮಾಣಿಕವಾಗಿ ದುಡಿದು ನಿಶ್ಚಿಂತೆಯಿಂದಲೇ ಜೀವನ ಸಾಗಿಸುತ್ತಿದ್ದವರಿಗೆ ಇಂದಿನ ಅವರ ಈ ಪರಿಸ್ಥಿತಿ ತುಂಬಾ ನೋವು ತಂದಿದೆ.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಮಾನ್ಯ/ ವಿಶೇಷ ಘಟಕ, /ಗಿರಿಜನ ಉಪಯೋಜನೆಗಳಡಿಯಲ್ಲಿ ಸಾಂಸ್ಕೃತಿಕ ಸಂಘ – ಸಂಸ್ಥೆಗಳ ಚಟುವಟಿಕೆಗಳಿಗೆ ಧನ ಸಹಾಯ ಹಾಗೂ ಅಸಂಘಟಿತ ಕಲಾವಿದರಿಗೆ ವಾದ್ಯಪರಿಕರ, ವೇಷ ಭೂಷಣ ಖರೀದಿಗೆ ಧನ ಸಹಾಯ ಮತ್ತು ಶಿಲ್ಪಕಲೆ,
ಚಿತ್ರಕಲೆ ಕಲಾವಿದರಿಗೆ ಕಲಾಪ್ರದರ್ಶನ ಏರ್ಪಡಿಸುವ ಸಲುವಾಗಿ ಎಂದು ಹಲವಾರು ಕೋಟಿಗಳಷ್ಟು ಸಹಾಯ ಧನವನ್ನು ಮಾರ್ಚ್ ತಿಂಗಳ ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಈಗಾಗಲೇ ಧನಸಹಾಯ ನೀಡಿದೆ. ಆದರೆ ಈ ಕೋವಿಡ್ ಮಹಾಮಾರಿಯು ಎರಡನೇ ಅಲೆಯ ಹೊಡೆತದಿಂದಾಗಿ ಸಂಘ – ಸಂಸ್ಥೆಗಳು ಈ ಅನುದಾನವನ್ನು ಕೂಡಾ ಈಗ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲದಿರುವುದು ದುರದೃಷ್ಟಕರ.
ಈಗ ಶಾಸ್ತ್ರೀಯ ಸಂಗೀತ, ನೃತ್ಯ ಕ್ಷೇತ್ರದ ವೃತ್ತಿಪರ ಕಲಾವಿದರ ಪರಿಸ್ಥಿತಿಯನ್ನೇ ಅವಲೋಕಿಸೋಣ. ಶಾಸೀಯ ಸಂಗೀತ ಕಲಾವಿದರಿಗೆ ಕಳೆದ ವರ್ಷ
ಹಾಗೂ ಈ ವರ್ಷ ರಾಮೋತ್ಸವದ ಅಂಗವಾಗಿ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳು ರದ್ದಾದವು. ಹಾಗೆಯೇ ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ, ಮೈಸೂರು ದಸರಾ, ದಕ್ಷಿಣ ಕನ್ನಡ ಜಿಲ್ಲೆಯಂಥ ಕಡೆಗಳಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಶರವನ್ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮಗಳೆ ಕರೋನಾ ದಿಂದ ರzದವು. ಜಾತ್ರಾ ಮಹೋತ್ಸವಗಳು, ಮಠ ಮಾನ್ಯಗಳಲ್ಲಿ ಹಬ್ಬ ಹರಿದಿನಗಳಲ್ಲಿ ನಡೆಯುತ್ತಿದ್ದ ಸಂಗೀತ ನೃತ್ಯ ಕಾರ್ಯಕ್ರಮಗಳು ಸಂಪೂರ್ಣ ವಾಗಿ ನಿಂತು ಹೋಗಿವೆ.
ಹಾಗೆಯೇ ವಿವಿಧ ಸಂಗೀತ ಸಭಾಗಳು ಏರ್ಪಡಿಸುತ್ತಿದ್ದ ಮಾಸಿಕ ಕಚೇರಿಗಳು, ಸಂಗೀತ ನೃತ್ಯೋತ್ಸವಗಳು, ಸಂಗೀತ ಸಮ್ಮೇಳನಗಳು ದೇಶದಾದ್ಯಂತ ನಿಂತು ಹೋಗಿವೆ. ಸಂಪೂರ್ಣವಾಗಿ ಕಲೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಪೂರ್ಣಾವಧಿ ವೃತ್ತಿಪರರಿಗೆ ಈಗ ಸಂಕಷ್ಟದ ಕಾಲವೇ ಆಗಿದೆ. ಇನ್ನು ಕೆಲವು ಸಂಗೀತ, ನೃತ್ಯ ಕ್ಷೇತ್ರದ ಪ್ರಖ್ಯಾತರು ಆಗಿಂದಾಗ್ಗೆ ವಿದೇಶ ಪ್ರವಾಸ ಮಾಡಿ ಅಲ್ಲಿ ಕಾರ್ಯಾಗಾರ, ಶಿಬಿರ ಹಾಗೂ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆದರೆ ಕಳೆದ ವರ್ಷದಿಂದ ವಿದೇಶದ ಸಾಂಸ್ಕೃತಿಕ ಹೆಬ್ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿವೆ.
ಇನ್ನು ಶಾಸ್ತ್ರೀಯ ನೃತ್ಯ ಕ್ಷೇತ್ರವನ್ನು ತೆಗೆದುಕೊಂಡರೆ ಅಲ್ಲಿಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಭರತನಾಟ್ಯದ ರಂಗಪ್ರವೇಶಗಳು, ನೃತ್ಯೋತ್ಸವಗಳು, ನೃತ್ಯ ಸಂಸ್ಥೆಗಳು ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಯ ಪ್ರಕಾಶಕ್ಕಾಗಿ ನಡೆಸುತ್ತಿದ್ದ ವಾರ್ಷಿಕೋತ್ಸವದಂಥ ಕಾರ್ಯಕ್ರಮಗಳಲ್ಲಿ ನಿಂತು ಹೋಗಿವೆ. – ಸಂಗೀತ, ನೃತ್ಯ, ವಾದ್ಯ ಸಂಗೀತ, ಸುಗಮ ಸಂಗೀತ ಮುಂತಾದವುಗಳನ್ನು ಆಸಕ್ತರಿಗೆ ಪಾಠ ಹೇಳುತ್ತ ಪ್ರದರ್ಶನಗಳನ್ನು ನೀಡುತ್ತ ಸಮಾಜವನ್ನು ಸುಸಂಸ್ಕೃತ ಗೊಳಿಸುತ್ತಿದ್ದ ಕಲಾವಿದರು ಇಂದು ಗೃಹ ಬಂದಿಗಳಂತಾಗಿದ್ದಾರೆ.
ನಿಜ. ಕೆಲವೇ ಕೆಲವು ಮಂದಿ ಕಲಾವಿದರು ಅಂತರ್ಜಾಲದ ಮೂಲಕ ಸಂಗೀತ, ನೃತ್ಯ, ಪಾಠ ಹೇಳುತ್ತಿದ್ದಾರೆ. ಕೆಲವು ಸಂಘ ಸಂಸ್ಥೆಗಳೂ ಕಾರ್ಯಕ್ರಮಗಳನ್ನು ಅಂತರ್ಜಾಲ ತಾಣಗಳ ಮೂಲಕ ನಡೆಸುತ್ತಿವೆಯಾದರೂ ಅದರ ಪರಿಣಾಮ ಹಾಗೂ ಫಲಿತಾಂಶ ಮಾತ್ರ ನಿರಾಶಾದಾಯಕ ವಾದದ್ದಾಗಿದೆ. ಒಂದು ಜೀವಂತ ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ನೋಡಿ ಅನುಭವಿಸುವ ಸುಖ ಇದರಲ್ಲಿರಲಾರದು. 40*60 ಅಡಿ ಅಗಲ – ಉದ್ದದ ವೇದಿಕೆಯ ಮೇಲಿನ ಕಾರ್ಯಕ್ರಮವನ್ನು
ಅನುಭವಿಸುವ ಸುಖ 4*6 ಇಂಚುಗಳ ಉದ್ದಗಲದ ಮೊಬೈಲ್ ಪರದೆಯ ಮೇಲೆ ನೋಡಿದಾಗ ಸಿಗಲಾರದು.
ಅಷ್ಟೇ ಅಲ್ಲದೆ ಕಲಾಪ್ರದರ್ಶನಗಳಲ್ಲಿ ಪ್ರೇಕ್ಷಕರ ಚಪ್ಪಾಳೆಯ ಸ್ಪಂದನವಿದ್ದರೆ ಮಾತ್ರ ಆ ಕಲೆಗೆ ಬೆಲೆ. ಕಲಾವಿದ ಮತ್ತು ಪ್ರೇಕ್ಷಕನ ಮಧ್ಯೆ ಇರಬೇಕಾದ
ಅವಿನಾಭಾವ ಸಂಬಂಧ ಖಂಡಿತಾ ಅಂತರ್ಜಾಲ ತಾಣಗಳ ಕಾರ್ಯಕ್ರಮಗಳಿಂದ ಮೂಡಲಾರದು. ಅಷ್ಟೇ ಅಲ್ಲದೆ ಅಲ್ಲಿ ಒಟ್ಟು ವೀಕ್ಷಕರು ಇಂತಿಷ್ಟು ಎಂಬ
ಸಂಖ್ಯೆ ನಮೂದಾಗುತ್ತದಾದರೂ ನಿಜಕ್ಕೂ ಅದನ್ನು ಪೂರ್ಣಪ್ರಮಾಣದಲ್ಲಿ ಅವರು ನೋಡಿದ್ದಾರೆಂಬ ಭರವಸೆ ಏನಿಲ್ಲ.
ಒಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಿಂದೀಚೆಗೆ ಹೆಚ್ಚು ಕಡಿಮೆ ಸಾಂಸ್ಕೃತಿಕ ಕ್ಷೇತ್ರವೇ ಸಂಪೂರ್ಣ ಸ್ತಬ್ಧಗೊಂಡಿದೆ. ಶೈಕ್ಷಣಿಕ ಕ್ಷೇತ್ರ, ಶಾಲಾ ಕಾಲೇಜುಗಳ
ಪರಿಸ್ಥಿತಿ ಡೋಲಾಯಮಾನವಾಗಿರುವಂತೆ ಸಂಗೀತ, ನೃತ್ಯ, ಮುಂತಾದ ಕಲಾ ಶಿಕ್ಷಣಕ್ಕೂ ಗ್ರಹಣ ಬಡಿದಂತಾಗಿದೆ. ದಿನಕ್ಕೊಂದು ಹೊಸ ಹೊಸ ರೂಪಾಂತರಿ ವೈರಾಣು ರಂಗ ಪ್ರವೇಶ ಮಾಡುತ್ತಿದ್ದು ಮುಂದಿನ ದಿನಗಳ ಬಗ್ಗೆ ಅನಿಶ್ಚಿತತೆ ಎಲ್ಲೂ ಕಾಣುತ್ತದೆ. ಈ ಅನಿಶ್ಚಿತತೆಗೆ ಬೇಗನೆ ತೆರೆ ಬಿದ್ದು ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ರಂಗಗಳ ತೆರೆ ಬೇಗನೆ ತೆರೆಯುವಂತಾಗಲೆಂದು ಕೋರೋಣ.