Thursday, 12th December 2024

ಬದುಕೂ ಒಂದು ಲಾಂಗ್ ಡ್ರೈವ್‌…

ವಿದೇಶವಾಸಿ

dhyapaa@gmail.com

ಲಾಂಗ್ ಡ್ರೈವ್‌ನಲ್ಲಿ ಸವಾಲುಗಳು ಎದುರಾಗುವುದು ಮಾಮೂಲು. ಪೂರ್ವ ಭಾವಿಯಾಗಿ ನಾವು ಎಷ್ಟೇ ಸಿದ್ಧತೆ ಮಾಡಿ ಕೊಂಡರೂ ನಮಗೆ ಅರಿವಿಲ್ಲದಂತೆ ಯಾವುದೋ ಸಮಸ್ಯೆ ಎದುರಾಗುತ್ತದೆ. ನಾವು ನೂರಕ್ಕೆ ನೂರು ಪ್ರತಿಶತ ಸಿದ್ಧತೆ ನಡೆಸಿದರೂ ಕೆಲವೊಮ್ಮೆ ಎಡವಟ್ಟಾಗುತ್ತದೆ.

ಹಾಗೆ ನೋಡಿದರೆ ಬಸ್ ಪ್ರಯಾಣದಿಂದ ಹಿಡಿದು ವಿಮಾನ ಪ್ರಯಾಣದವರೆಗೆ, ಯಾವ ಪ್ರಯಾಣವೂ ಪರಿಪೂರ್ಣವೂ ಅಲ್ಲ, ಸುರಕ್ಷಿತವೂ ಅಲ್ಲ. ಇಲ್ಲಿ ಅಪಘಾತದ ವಿಷಯ ಹೇಳುತ್ತಿಲ್ಲ, ಅದರ ಹೊರತಾಗಿಯೂ ಕೆಲವು ಸಮಸ್ಯೆ ಗಳು ಎದುರಾಗ ಬಹುದು. ಬೇರೆ ಸಾರಿಗೆ ಮಾಧ್ಯಮದಲ್ಲಿ ಸಮಸ್ಯೆ ಎದುರಾದರೆ ನಾವು ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡಬಹುದು, ಅವರನ್ನು ದೂಷಿಸಬಹುದು.

ನಾವೇ ಆಯ್ದುಕೊಂಡು, ಆಯೋಜಿಸಿದ ಸೋಲೋ (ಒಂಟಿ) ಅಥವಾ ಲಾಂಗ್ ಡ್ರೈವ್‌ನಲ್ಲಿ ತಪ್ಪಾದರೆ ಅದಕ್ಕೆ ನಾವೇ ಹೊಣೆ ತಾನೆ? ಅದಕ್ಕೇ ಹೇಳಿದ್ದು, ಎಷ್ಟು ಸಿದ್ಧತೆ ಮಾಡಿಕೊಂಡರೂ ಕಮ್ಮಿ, ಎಷ್ಟು ಸಿದ್ಧರಾಗಿರುತ್ತೇವೋ ಅಷ್ಟು ಒಳ್ಳೆಯದು. ನಿರ್ಜನ ಪ್ರದೇಶದಲ್ಲಿ ಲಾಂಗ್ ಡ್ರೈವ್ ಹೋಗುವಾಗ ನಾವು ಬಳಸುತ್ತಿರುವ ವಾಹನದ ಬಗ್ಗೆ ತಿಳಿದುಕೊಂಡಿರಬೇಕು. ನಮಗೆ ಮೂರು- ನಾಲ್ಕು ದಶಕದ ಚಾಲನೆಯ ಅನುಭವವೇ ಇದ್ದರೂ, ಅದು ಒಂದು ಕಡೆ ಇರಲಿ.

ಲಾಂಗ್ ಡ್ರೈವ್ ಹೋಗುವಾಗ ಇರಬೇಕಾದ ಅನುಭವ, ಮಾಹಿತಿಯೇ ಬೇರೆ. ದೂರದ ಪ್ರಯಾಣಕ್ಕೆಂದು ವಾಹನ ಬಳಸು ವಾಗ, ಅದರ ಸಂಪೂರ್ಣ ಮಾಹಿತಿ ಇರಬೇಕು. ಏಕೆಂದರೆ ಪ್ರಯಾಣದುದ್ದಕ್ಕೂ ಆ ವಾಹನವೇ ನಮ್ಮ ನಂಬಿಗಸ್ಥ ಸಂಗಾತಿ. ನಮ್ಮ ಜತೆ ಪ್ರಯಾಣಿಸುವವರ ಕುರಿತು ತಿಳಿಯದೇ ಪ್ರಯಾಣಿಸುವುದೆಂದರೆ, ಆಗಂತುಕರೊಂದಿಗೆ ಪ್ರಯಾಣಿಸಿದಂತೆಯೇ. ಎಲ್ಲಿ, ಯಾವಾಗ ಕೈಕೊಡುತ್ತದೆಯೋ ಎಂಬ ಅಳುಕಿನೊಂದಿಗೇ ಪ್ರಯಾಣಿಸುವುದಕ್ಕಿಂತ ದೊಡ್ಡ ಆತಂಕ ಇನ್ನೊಂದಿಲ್ಲ.

ಆದ್ದರಿಂದ ಪ್ರಯಾಣಕ್ಕೂ ಮುನ್ನ ನಾವು ಬಳಸುವ ವಾಹನದ ನಾಡಿ ತಿಳಿದಿರುವುದು ಲೇಸು. ಕೊನೆ ಪಕ್ಷ ವಾಹನ ಎಲ್ಲಿಯಾದರೂ ನಿಂತರೆ, ಯಾವ ಸಮಸ್ಯೆಯಾಗಿದೆ ಎಂದು ಗುರುತಿಸಿ, ಹೇಳುವಷ್ಟಾದರೂ ತಿಳುವಳಿಕೆ ನಮ್ಮಲ್ಲಿ ಇರಬೇಕು.
ಇರಲಿ, ಪಕ್ಕದಲ್ಲಿ ಮರುಭೂಮಿ ಕಾಣ್ತಾ ಇದೆಯಲ್ಲ, ಆ ಮರಳಿನ ರಾಶಿಯ ಮಧ್ಯದಲ್ಲಿ ಎಂದಾದರೂ ವಾಹನ ನಡೆಸಿದ್ದೀರಾ? ಬನ್ನಿ, ಒಮ್ಮೆ ಮರಳು ಗುಡ್ಡದ ತುದಿಗೆ ಹೋಗಿ ಬರೋಣ.

ಏನು? ಭಯಾನಾ? ಏನೂ ಆಗಲ್ಲ ಬನ್ನಿ. ನಾನು ಒಬ್ಬನೇ ಇದ್ದಾಗ ಇಂತಹ ಅವಕಾಶ ಸಿಕ್ಕರೆ ಖಂಡಿತ ಬಿಡಲ್ಲ. ನನಗಂತೂ ದಾರಿ ಬದಿಯಲ್ಲಿ ಮರಳುಗುಡ್ಡೆ ಕಂಡರೆ ಮುಗೀತು. ಒಬ್ಬ ಈಜುಗಾರನಿಗೆ ದಾರಿ ಬದಿಯಲ್ಲಿ ಹೊಳೆಯೋ, ಕೆರೆಯೋ ಕಂಡರೆ
ಹೇಗೆ ಮುಳುಗೆದ್ದಿ ಬರುತ್ತಾನೋ ಹಾಗೆಯೇ. ‘ಮರಳಿನಲ್ಲಿ ವಾಹನ ನಡೆಸುವುದನ್ನು ಕಲಿತ ಮೇಲೆ, ಆಗಾಗ ಡೆಸರ್ಟ್ ಡ್ರೈವಿಂಗ್ ಮಾಡದಿದ್ದರೆ ಅದು ಮರಳುಗಾಡಿಗೆ ಅವಮಾನ’ ಎಂದು ನನಗೆ ತರಬೇತಿ ನೀಡಿದವರು ಹೇಳುತ್ತಿದ್ದರು.

ಅಷ್ಟಕ್ಕೂ ನಾನು ಹದಿನೇಳು ವರ್ಷ ಸತತವಾಗಿ ಮಾಡಿದ ಕಸುಬನ್ನು ಹೇಗೆ ಮರೆಯಲಿ? ನಿಜ, ತೈಲ ಭಾವಿಯನ್ನು ಕೊರೆಯಲು ಬರುವ ‘ರಿಗ್’ಗಳಿಗೆ ದಾರಿ, ಚರಂಡಿ ಮೊದಲಾದ ಮೂಲಭೂತ ಸೌಕರ್ಯ ಒದಗಿಸಿಕೊಡುವ ಸಂಸ್ಥೆಯಲ್ಲಿ ನಾನು
ಕೆಲಸ ಮಾಡುತ್ತಿದ್ದೆ. ಆಗ ದೂರದೂರದವರೆಗೆ ಮಾನವ ಜೀವಿ ಬದುಕಿದ ಒಂದೇ ಒಂದು ಕುರುಹೂ ಸಿಗದ ಮರುಭೂಮಿಯ ಮಧ್ಯದಲ್ಲಿ ಮೈಲುಗಟ್ಟಲೆ ಹೋಗಬೇಕಾಗುತ್ತಿತ್ತು. ಮರು ಭೂಮಿಯಲ್ಲಿ ಯಾವುದೋ ಒಂದು ಸಣ್ಣ ಜಾಡು ಹಿಡಿದು ಹೋಗಿ-ಬರುವುದು ನಮ್ಮ ನಿತ್ಯದ ರೂಢಿಯಾಗಿತ್ತು.

ನನ್ನ ಪರಿಸ್ಥಿತಿ, ‘ಎಲ್ಲ ನೋಡಲಿ ಎಂದು ನಾನು (ಮರುಭೂಮಿಯಲ್ಲಿ ವಾಹನ) ನಡೆಸುವುದಿಲ್ಲ, ನಡೆಸುವುದು ಅನಿವಾರ್ಯ
ಕರ್ಮ ನನಗೆ…’ ಎಂಬಂತಿತ್ತು. ಆ ಕಾರಣಕ್ಕೆ ಅನಿವಾರ್ಯವಾಗಿ ಡೆಸರ್ಟ್ ಡ್ರೈವಿಂಗ್ ಕಲಿತದ್ದು ನಿಜವಾದರೂ, ನಂತರ ಅದೇ ಸಂತೋಷ ನೀಡಲು ಆರಂಭಿಸಿತು. ಈ ಭಾಗ್ಯ ಎಷ್ಟು ಜನರಿಗುಂಟು ಹೇಳಿ! ಅದರ ಅನುಭವ ಇಂದು ನಿಮಗೂ ಆಗಲಿ.
ನನ್ನ ಜತೆ ಕೆಲಸ ಮಾಡುತ್ತಿದ್ದ, ನನ್ನಿಂದ ಡೆಸರ್ಟ್ ಡ್ರೈವಿಂಗ್ ತರಬೇತಿ ಪಡೆದ ಶಾಜಿ ಕುವೈತ್‌ನಲ್ಲಿ ಡೆಸರ್ಟ್ ಸಫಾರಿಯ ಚಾಲಕನಾಗಿದ್ದಾನೆ.

ರಫೀಕ್ ದುಬೈನಲ್ಲಿ ಚಾಲಕನಾಗಿದ್ದಷ್ಟೇ ಅಲ್ಲದೆ, ಸಫಾರಿ ಚಾಲಕರ ನೇತೃತ್ವ ವಹಿಸುತ್ತಿದ್ದಾನೆ ಎಂದರೆ, ಅಷ್ಟರ ಮಟ್ಟಿಗಾದರೂ ನೀವು ನನ್ನನ್ನು ನಂಬಬಹುದು. ಒಂದು ವೇಳೆ ಮರಳಿನ ಮಧ್ಯದಲ್ಲಿ ನಮ್ಮ ಕಾರು ಹೂತು ಹೋದರೂ, ಎತ್ತಿ ಆಚೆ ತರುವ ಜವಾಬ್ದಾರಿ ನನ್ನದು. ಹೇಗಿದ್ದರೂ, ದೂರದ ಪ್ರವಾಸಕ್ಕೆ, ಮರಳುಗಾಡಿನಲ್ಲಿ ಇಳಿಯಲು ಬೇಕಾದ ವಸ್ತುಗಳು, ಸಿದ್ಧತೆಗಳು ನಮ್ಮಲ್ಲಿ ಇದ್ದೇ ಇದೆ, ಅಂದರೆ ಭಯ ಏಕೆ? ಮರಳಿಗೆ ಇಳಿಯುವುದಕ್ಕಿಂತ ಮೊದಲು ಒಂದು ವಿಷಯ ಹೇಳಿಬಿಡುತ್ತೇನೆ.

ಉಸುಕಿನ ಮೇಲೆ ಓಡುವ ಗಾಡಿಯಲ್ಲಿ ಕುಳಿತುಕೊಳ್ಳುವುದು ಎಂದರೆ ನೀರಿನ ಮೇಲೆ ಚಲಿಸುವ ಮೋಟರ್‌ಜೆಟ್ ಬೋಟ್‌ನಲ್ಲಿ ಕುಳಿತ ಅನುಭವವೇ. ಅಲೆ ಬಂದಾಗ ಮೋಟಾರು ದೋಣಿ ಹೇಗೆ ತೇಲುತ್ತದೆಯೋ, ಜಿಗಿಯುತ್ತದೆಯೋ, ಮರಳಿನ ಮೇಲೂ ವಾಹನ ಹಾಗೆಯೇ ತೇಲುತ್ತದೆ, ಜಿಗಿಯುತ್ತದೆ. ಆದ್ದರಿಂದ ಗಟ್ಟಿಯಾಗಿ ಹಿಡಿದುಕೊಳ್ಳಿ.

ನಮ್ಮ ಕಾರಿನ ಹಿಂಭಾಗ ಆಚೆ ಈಚೆ ವಾಲಿದ ಅನುಭವ ಆಗುತ್ತಿದೆಯಲ್ಲ. ಅದನ್ನು ಫಿಶ್ ಟೈಲಿಂಗ್ ಎನ್ನುತ್ತಾರೆ. ಮೀನು ಚಲಿಸುವಾಗ ಹೇಗೆ ಬಾಲವನ್ನು ಅತ್ತ-ಇತ್ತ ಅಲಾಡಿಸುತ್ತದೆಯೋ, ಇದೂ ಹಾಗೆಯೇ. ಅದು ನಮ್ಮ ನಿಯಂತ್ರಣದಲ್ಲಿಲ್ಲ.
ಆದರೆ ಅದಕ್ಕೆ ತಕ್ಕಂತೆ ಮುಂದಿನ ಗಾಲಿಯನ್ನು ನಾವು ನಿಯಂತ್ರಿಸಬೇಕು. ನೀರಿನಲ್ಲಿ ಹೇಗೆ ಅಲೆಗಳಿರುತ್ತವೆಯೋ, ಮರಳಿ ನಲ್ಲಿಯೂ ಅಲೆಗಳಿರುತ್ತವೆ.

ಗಾಳಿ ಬೀಸುವ ದಿಕ್ಕನ್ನು ಅನುಸರಿಸಿ ಮರಳಿನಲ್ಲಿ ಅಲೆ ಸೃಷ್ಠಿಯಾಗುತ್ತದೆ. ಸಾಮಾನ್ಯವಾಗಿ ಅಲೆಗಳಿರುವ ಮೇಲ್ಮೈ ಸ್ವಲ್ಪ ಗಟ್ಟಿಯಾಗಿರುತ್ತದೆ. ಆ ಅಲೆಯನ್ನು ಅನುಸರಿಸಿ ಮರುಭೂಮಿಯಲ್ಲಿ ವಾಹನ ನಡೆಸಬೇಕು, ಆದಷ್ಟು ವೇಗವಾಗಿಯೇ
ನಡೆಸಬೇಕು. ನಿಮಗೆ ತಿಳಿದಿರಲಿ, ಮರಳಿನ ರಾಶಿಯ ಮೇಲೆ ತಾಸಿಗೆ ನೂರು- ನೂರಿಪ್ಪತ್ತು ಕಿಲೋಮೀಟರ್ ವೇಗದಲ್ಲಿ ಕಾರು ಓಡಿಸುವವರೂ ಇದ್ದಾರೆ.

ನಾವು ಈಗಾಗಲೇ ಅರವತ್ತರ ವೇಗದಲ್ಲಿದ್ದೇವೆ ಗೊತ್ತಾ? ಅಲೆಗೆ ವಿರುದ್ಧವಾಗಿ ಅಥವಾ ತೀರಾ ಮೃದುವಾದ ಮರಳಿನ ರಾಶಿಯ ಮೇಲೆ ವಾಹನ ನಡೆಸಿದರೆ ವಾಹನ ಹೂತು ಹೋಗುತ್ತದೆ. ಮರಳಿನಲ್ಲಿ ಒಮ್ಮೆಲೇ ವಾಹನದ ಸ್ಟೇರಿಂಗ್ ತಿರುಗಿಸಿ ದರೆ, ಬ್ರೇಕ್ ಹಾಕಿದರೂ ವಾಹನ್ ಹುಗಿದುಕೊಳ್ಳುತ್ತದೆ. ಒಮ್ಮೆ ಮರಳಿನಲ್ಲಿ ವಾಹನ ಹೂತು ಹೋದರೆ ಮುಗೀತು. ಅದನ್ನು
ಮೇಲೆತ್ತುವಾಗ, ತನ್ನ ಬದುಕಿನ ಕೊನೆಯ ಕ್ಷಣಗಳಲ್ಲಿ ಯುದ್ಧಭೂಮಿಯಲ್ಲಿ ಹೂತುಹೋದ ರಥವನ್ನು ಮೇಲೆತ್ತಲು ಸಾಹಸ ಮಾಡಿದ ಮಹಾಭಾರತದ ಕರ್ಣ ನೆನಪಾಗುತ್ತಾನೆ!

ದೋಣಿಯಲ್ಲಿ ಹೋಗುವಾಗ ಪಕ್ಕದಲ್ಲಿ ನೀರು ಚಿಮ್ಮುವುದನ್ನು ಹೇಗೆ ಆಸ್ವಾದಿಸುತ್ತೀರೋ, ಹಾಗೆಯೇ ಮರಳುಗಾಳಿನಲ್ಲಿ ಮರಳು ಚಿಮ್ಮುವುದನ್ನೂ ಕಂಡು ಆನಂದಿಸಿ. ಇದನ್ನು ‘ಡ್ಯೂನ್ ಬ್ಯಾಶಿಂಗ್’ ಎಂದೂ ಹೇಳುತ್ತಾರೆ. ಯಾರು ವಾಹನದ ಚಕ್ರದಿಂದ ಹೆಚ್ಚು ಎತ್ತರಕ್ಕೆ ಮರಳು ಚಿಮ್ಮಿಸುತ್ತರೋ ಅವರು ಅಷ್ಟೇ ಒಳ್ಳೆಯ ಚಾಲಕರು ಎಂದು ಅರ್ಥ. ಅದೋ ಅಲ್ಲಿ ನೋಡಿ, ಊಡಾ ಓಡಿಹೋಗುತ್ತಿದೆ. ಅದನ್ನು ಬೆನ್ನಟ್ಟೋಣ. ಅದು ನಮ್ಮ ಕೈಗೆ ಸಿಗುವುದಿಲ್ಲ ಎಂಬುದು ನಿಜವಾದರೂ ಮರುಭೂಮಿಯಲ್ಲಿ ಹೇರಳವಾಗಿರುವ ಅದರ ಬೆನ್ನು ಹತ್ತಬೇಕು.

ಕೆಲವರು ಅದನ್ನು ಹಿಡಿದು ತಮ್ಮ ಆಹಾರವನ್ನಾಗಿಸಿಕೊಳ್ಳುತ್ತಾರೆ. ನಮಗೆ ಅದರ ಅವಶ್ಯಕತೆ ಇಲ್ಲ ಬಿಡಿ. ನಮ್ಮದೇನಿದ್ದರೂ ‘ಮುಟ್ಟಾಟ’ದ ಪ್ರಯತ್ನ, ಅಷ್ಟೇ. ಮರುಭೂಮಿಯಲ್ಲಿ ಇಂತಹ ಸಣ್ಣ ಸಣ್ಣ ಸಂಗತಿಗಳನ್ನೆಲ್ಲ ಅನುಭವಿಸಬೇಕು, ಆನಂದಿಸಬೇಕು.
ಮರಳಿನ ಗುಡ್ಡೆಯ ಮೇಲಿನ ಸವಾರಿ ಹೇಗಿತ್ತು? ಈಗ ನಾವೊಬ್ಬರೇ ಮರಳ ಯಾತ್ರೆ ಹೋಗಿ ಬಂದೆವು ನಿಜ, ಇತ್ತೀಚೆಗೆ ಜನ ಎಂಟು ಹತ್ತು ವಾಹನಗಳ ತಂಡವಾಗಿ, ಪಡೆಯಾಗಿ ಇದಕ್ಕೆ ಹೋಗುತ್ತಾರೆ.

ದುಬೈನ ಮರುಭೂಮಿಯ ಯಾತ್ರೆ (ಡೆಸರ್ಟ್ ಸಫಾರಿ) ಇದಕ್ಕೆ ಉತ್ತಮ ಉದಾಹರಣೆ. ಅದರ ಕಾರ್ಯವೈಖರಿಯ ರೀತಿ
ಬೇರೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ನೋಡಿ, ಮಾತಿನ ಭರದಲ್ಲಿ ಪೆಟ್ರೋಲ್ ಕಡೆ ಗಮನವನ್ನೇ ಹರಿಸಲಿಲ್ಲ. ಈಗ ಕಾರಿ ನಲ್ಲಿರುವ ಇಂಧನದಿಂದ ಇನ್ನು ಐದು ಕಿಲೋಮೀಟರ್ ದೂರ ಮಾತ್ರ ಸಾಗಬಹುದು. ಇದ್ದಕ್ಕಿದ್ದಂತೆ ಇಂಧನ ಕಮ್ಮಿಯಾಗಲು ಕಾರಣ ಏನು? ಓಹೋ… ಡೆಸರ್ಟ್ ಡ್ರೈವಿಂಗ್.

ಮರುಭೂಮಿಯಲ್ಲಿ ವಾಹನ ಹೆಚ್ಚು ಇಂಧನ ಬಳಸುತ್ತದೆ. ಅದು ನಮ್ಮ ಲಕ್ಷ್ಯಕ್ಕೇ ಬರಲಿಲ್ಲ ನೋಡಿ! ಈಗ ಸಮೀಪದಲ್ಲಿ ಪೆಟ್ರೋಲ್ ಪಂಪ್ ಇದೆಯೇ ಎಂದು ಗೂಗಲ್ ಮ್ಯಾಪ್‌ನಲ್ಲಿ ಹುಡುಕಲು ಮೊಬೈಲ್ ನೆಟ್ವರ್ಕ್ ಇಲ್ಲ. ಕತ್ತಲು ಬೇರೆ ಬೇಗ ಕವಿಯುತ್ತಿದೆ. ಏನಪ್ಪಾ ಮಾಡೋದು? ಸಧ್ಯ ನಮಗಿರುವ ದಾರಿ ಎರಡೇ. ಒಂದು, ಸಮೀಪದ ಪ್ರಶಸ್ತ ಸ್ಥಳ ನೋಡಿ ಅಲ್ಲಿ
ಕಾಯುವುದು. ಇನ್ನೊಂದು, ಎಷ್ಟು ದೂರ ವಾಹನ ಸಾಗುತ್ತದೆಯೋ ಅಷ್ಟು ದೂರ ಹೋಗಿ ಇಂಧನ ಬರಿದಾದ ಮೇಲೆ ನಿಲ್ಲುವುದು.

ಇಂತಹ ನಿರ್ಜನ ಪ್ರದೇಶದಲ್ಲಿ ಹೇಗೇ ನಿಲ್ಲುವುದಾದರೂ ಯಮಯಾತನೆಯೇ, ಆದರೆ ಅನಿವಾರ್ಯ. ಇಂತಹ ಸಂದರ್ಭದಲ್ಲಿ ಸಹನೆ ಅತಿ ಮುಖ್ಯ. ಎಷ್ಟು ಶಾಂತಚಿತ್ತರಾಗಿರುತ್ತೇವೋ ಅಷ್ಟು ನಮಗೇ ಒಳ್ಳೆಯದು. ಹಾಗಾದರೆ ಮುಂದಿನ ದಾರಿ ಏನು?
ಎಷ್ಟು ಹೊತ್ತು ಕಾಯುವುದು? ನೋಡಿ, ಹೇಳುತ್ತಿದ್ದಂತೆಯೇ ಒಂದು ವಾಹನ ಬಂತು. ನಾವು ಕೈ ತೋರಿಸಿದ್ದನ್ನು ಕಂಡು ಆತ ನಿಂತದ್ದೂ ಆಯಿತು. ಈಗ ಆತನಲ್ಲಿ ಸಹಾಯ ಕೇಳಬೇಕು.

ನೇರಾ ನೇರ ಪೆಟ್ರೋಲ್ ಮುಗಿದಿದೆ, ಮೊಬೈಲ್ ನೆಟ್ವರ್ಕ್ ಇಲ್ಲ ಎಂದರೆ ಸರಿಯೇ? ಆತ ಯಾರೋ ಏನೋ? ಅವರ ಬಳಿ ಸಹಾಯ ಕೇಳುವುದು ಸ್ವಲ್ಪ ರಿಸ್ಕಿ ಆದರೂ ಅನಿವಾರ್ಯ. ಎಲ್ಲರೂ ನಮ್ಮ ಸಹಾಯಕ್ಕೆ ನಿಂತುಬಿಡುತ್ತಾರೆ ಎಂಬ ಭರವಸೆ ಯೂ ಇಲ್ಲ, ಹಾಗೆ ನಿಂತವರೆಲ್ಲ ಒಳ್ಳೆಯವರೇ ಆಗಿರಬೇಕೆಂದೇನೂ ಇಲ್ಲ. ಆದ್ದರಿಂದ ಮೊದಲು ಅವರಲ್ಲಿ ಹತ್ತಿರದ ಪೋಲೀಸ್ ಸ್ಟೇಷನ್ ಎಲ್ಲಿದೆ ಎಂದು ಕೇಳೋಣ.

ನಮ್ಮ ಸಮೀಪದಲ್ಲಿಯೇ ಇದ್ದರೆ, ಮುಲಾಜಿಲ್ಲದೇ ಪೋಲೀಸ್ ಸ್ಟೇಷನ್‌ಗೆ ಹೋಗಿ ಪೋಲೀಸರ ಸಹಾಯ ಕೇಳೋಣ.
ಅದಿಲ್ಲವಾದರೆ, ಹೆzರಿಯಲ್ಲಿ ಪೋಲೀಸ್ ವಾಹನ ಸದಾ ಓಡಾಡುತ್ತಿರುತ್ತದೆ. ಅವರಿಗಾಗಿ ಕಾಯೋಣ. ನೋಡಿ, ನಮ್ಮ ಅದೃಷ್ಟವೂ ಚೆನ್ನಾಗಿದೆ. ಪೋಲೀಸ್ ವಾಹನವೇ ಬಂತು. ಅವರನ್ನು ಕೇಳಿದ್ದು ಒಳ್ಳೆಯದಾಯಿತು. ‘ಒಂದು ಕಿಲೋಮೀಟರ್ ಮುಂದೆ ಹೋಗಿ ಬಲಕ್ಕಿರುವ ದಾರಿಯಲ್ಲಿ ಸಾಗಿ, ಒಂದು ಸಣ್ಣ ಊರು ಸಿಗತ್ತೆ, ಅಲ್ಲಿ ಪೆಟ್ರೋಲ್ ಪಂಪ್ ಇದೆ’ ಎಂದದ್ದನ್ನು
ಅನುಸರಿಸಿ ಬಂದದ್ದೂ ಒಳ್ಳೆಯದೇ ಆಯಿತು.

ಇಲ್ಲವಾದರೆ ಹೆzರಿಯ ಐದು ಕಿಲೋಮೀಟರ್ ದೂರ ಹೋಗಿ ನಿಲ್ಲುತ್ತಿದ್ದೆವು. ಮತ್ತೆ ಯಾವುದಾದರೂ ವಾಹನಕ್ಕೆ ಕೈ ಮಾಡಿ, ಅವರಲ್ಲಿ ಸಹಾಯ ಬೇಡಬೇಕಾಗುತ್ತಿತ್ತು. ಈಗ ವಾಹನಕ್ಕೆ ಇಂಧನ ತುಂಬಿಕೊಳ್ಳುವುದರ ಜತೆಗೆ ಆಗಬೇಕಾದ
ಇನ್ನೊಂದು ಕಾರ್ಯವೆಂದರೆ, ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದು. ಪೆಟ್ರೋಲ್ ಪಂಪ್‌ನಲ್ಲಿ ಸಾಮಾನ್ಯವಾಗಿ ಆ ವ್ಯವಸ್ಥೆ ಇರತ್ತೆ. ಇಲ್ಲವಾದರೆ, ಪಕ್ಕದ ಇರುವ ಅಂಗಡಿಯಲ್ಲಂತೂ ಇದ್ದೇ ಇರತ್ತೆ.

ನಮಗೂ ಸ್ವಲ್ಪ ಫ್ರೆಶ್ ಆಗಬೇಕು. ಬಿಸ್ಕತ್ತು, ಚಾಕಲೇಟ್, ಜ್ಯೂಸ್ ಸೇವೆ ಆಗುವವರೆಗೆ ಮೊಬೈಲ್ ಚಾರ್ಜ್ ಆಗಲಿ. ಅದರೊಂದಿಗೆ ಇನ್ನೊಂದು ಮಹತ್ವದ ಸಂಗತಿಯೆಂದರೆ, ಆ ಪ್ರದೇಶದ ಒಬ್ಬಿಬ್ಬರೊಂದಿಗೆ ಮಾತಾಡುವುದು, ಅಲ್ಲಿ ಬೆಳೆಯುವ ತರಕಾರಿ, ಹಣ್ಣು, ಆಹಾರದ ಕುರಿತು ಕೇಳಿ ತಿಳಿದುಕೊಳ್ಳುವುದು, ಕಟ್ಟಡಗಳನ್ನು ಗಮನಿಸುವುದು. ನಿಜವಾಗಿಯೂ ರೋಡ್ ಟ್ರಿಪ್ ಅಥವಾ ಲಾಂಗ್ ಡ್ರೈವ್‌ನ ಮಜವೇ ಅದು.

ಸುಮ್ಮನೇ ದೇಶದ ರಾಜಧಾನಿಗೋ, ಪ್ರಮುಖ ನಗರಕ್ಕೋ ವಿಮಾನದಲ್ಲಿ ಹೋಗಿ, ಆ ಊರಿನ ಪ್ರೇಕ್ಷಣೀಯ ಸ್ಥಳವನ್ನಷ್ಟೇ ಕಂಡು ಬಂದರೆ ತಪ್ಪೇನೂ ಇಲ್ಲ, ಆದರೆ ಅದು ಸಂಪೂರ್ಣವಲ್ಲ. ದೇಶದ, ಪ್ರದೇಶದ ಉದ್ದಗಲವನ್ನೂ ಅಳೆಯ ಬೇಕಾದರೆ ಹೆಚ್ಚು ಹೆಚ್ಚು ಸುತ್ತಬೇಕು. ಆಗ ಆ ದೇಶ, ಪ್ರದೇಶ ನಮ್ಮೊಳಗೆ ಇಳಿಯುತ್ತದೆ. ನಮ್ಮ, ವಾಹನ ಮತ್ತು ಮೊಬೈಲ್ ಮೂರರದ್ದೂ
ಹೊಟ್ಟೆ ತುಂಬಿಸಿಕೊಂಡದ್ದಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ಆಪ್ರದೇಶದ ಕೆಲವರೊಂದಿಗ ಮಾತಾಡಿದ್ದಾಗಿದೆ.

ಅಲ್ಲಿಯ ಒಳಿತು-ಕೆಡುಕುಗಳ ಬಗ್ಗೆ ತಿಳಿದದ್ದಾಗಿದೆ. ಇನ್ನೇನಿದ್ದರೂ ಮುಂದಿನ ಪಯಣವನ್ನು ಸವಿಯುವ ಸಮಯ. ಮುಂದೆ ಒಂದು ಕಡೆ ಸಮುದ್ರ, ಇನ್ನೊಂದು ಕಡೆ ಗುಡ್ಡಗಳಿವೆ ಎಂದು ಕೇಳಿದ್ದೇನೆ. ಇನ್ನು, ಪ್ರಕೃತಿಯ ಆ ಸೊಬಗನ್ನು ಸವಿಯೋಣ. ಸುಮ್ಮನೇ ಕುಳಿತು ಆಚೆ-ಈಚೆ ನೋಡುತ್ತಿರಿ. ಸುಂದರವಾಗಿದ್ದುದ್ದನ್ನು ಕಣ್ತುಂಬಿಕೊಳ್ಳಿ. ಏನೂ ಇಲ್ಲವಾದರೆ, ಸಮತಟ್ಟಾದ ಬೋಳು ಭೂಮಿಯನ್ನೇ ನೋಡುತ್ತಿರಿ. ಅದೇ ನಿಮ್ಮನ್ನು ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ನನಗೆ ಪ್ರತಿ ಸಲ ಲಾಂಗ್ ಡ್ರೈವ್ ಹೋದಾಗಲೂ ಏನು ಅನಿಸತ್ತೆ ಗೊತ್ತಾ? ನಮ್ಮ ಜೀವನವೂ ಒಂದು ಲಾಂಗ್ ಡ್ರೈವ್. ಬಾಳ ಪಯಣದಲ್ಲಿ, ನಾವು ಎಷ್ಟೇ ಸಿದ್ಧತೆ ಮಾಡಿಕೊಂಡರೂ, ಅನಿರೀಕ್ಷಿತ ಸವಾಲುಗಳು ಎದುರಾಗುತ್ತವೆ. ಒಮ್ಮೆ ಜತೆಗಾರ ರೊಂದಿಗಿದ್ದರೆ, ಒಮ್ಮೊಮ್ಮೆ ಏಕಾಂಗಿಯಾಗಿ ಪಯಣ. ಕೆಲವೊಮ್ಮೆ ಅನಿರೀಕ್ಷಿತ ಆಗಂತುಕರ ಆಗಮನ. ಕೆಲವರು ಉಪಕಾರಕ್ಕಾದರೆ ಕೆಲವರು ಉಪದ್ರವಕ್ಕೆ. ನಾವು ಎಣಿಸಿದ ಸಣ್ಣ, ಎಣಿಸದ ದೊಡ್ಡ ತಿರುವುಗಳು. ರೋಡ್ ಹಂಪ್‌ನಂತಹ
ವೇಗದ ತಡೆಗಳು. ಆದರೂ ಚಲಿಸುತ್ತಿರಬೇಕು.

ಮುಂದೆ ಎಲ್ಲಾ ಟಾಯರ್ ಪಂಚರ್ ಆಗಬಹುದು ಎಂದು ಈಗಲೇ ಪ್ರಯಾಣ ನಿಲ್ಲಿಸುವುದಿಲ್ಲವಲ್ಲ ಹಾಗೆಯೇ. ರೋಮಾಂಚನದ ಅನುಭವಬೇಕೆಂದರೆ ಒಂದು ಪ್ರಮಾಣದಲ್ಲಿ ಸವಾಲನ್ನೂ ಎದುರಿಸಲು ಸಿದ್ಧರಾಗಿರಬೇಕು. ಬದುಕಿಗಿಂತ ದೊಡ್ಡ ‘ಲಾಂಗ್ ಡ್ರೈವ್’ ಯಾವುದಾದರೂ ಇದೆಯೇ?