Saturday, 27th July 2024

ನಿಮ್ಮ ಆಯ್ಕೆ ನೀವೇ ಆಗಿ: ಬದಲಾಗುವ ಬದುಕಿನ ಮ್ಯಾಜಿಕ್ ಮನಗಾಣಿ !

ಶ್ವೇತಪತ್ರ

shwethabc@gmail.com

ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಕ್ಷಣದಿಂದಲೇ ಅನೇಕ ಸಕಾರಾತ್ಮಕ ಅನುಭವಗಳು ನಮ್ಮವಾಗುತ್ತವೆ. ಬದುಕು ಬಹಳ ಸುಲಭದ್ದಿದೆ ಎಂದೆನಿಸುತ್ತದೆ. ಎಲ್ಲಾ ವಿಷಯಗಳು ಮ್ಯಾಜಿಕಲ್ ಆಗಿ ಬದಲಾಗುತ್ತವೆ.ಸಂಬಂಧ,ಆರೋಗ್ಯ ಎಲ್ಲದರಲ್ಲೂ ಸುಧಾರಣೆ ಕಾಣುತ್ತದೆ.ಇರುವುದಕ್ಕಿಂತ ಬದುಕು ಇನ್ನೂ ಚಂದ ಎನ್ನಿಸುವುದಕ್ಕೆ ಶುರುವಿಟ್ಟು ಕೊಳ್ಳುತ್ತದೆ.

ಒಂದು ಮಾತಿದೆ keep choosing you again and again ಅಂತ. ಮತ್ತೆ ಮತ್ತೆ ನಿಮ್ಮ ಆಯ್ಕೆ ನೀವೇ ಆಗಿರಬೇಕು, ಆಗ ಬದಲಾವಣೆ ತರಬಹುದಾದ ಮ್ಯಾಜಿಕ್ ಸದಾ ನಿಮ್ಮ ಜತೆ ಇರುತ್ತದೆ, ಇರಲೇಬೇಕು ಕೂಡ. ನಮ್ಮ ನ್ಯೂನತೆಗಳನ್ನು ಒಪ್ಪಿ ಕೊಳ್ಳುವ, ಅಪ್ಪಿ ಕೊಳ್ಳುವ ಪ್ರಕ್ರಿಯೆಯೇ ಬದುಕಿನ ಬೆಸ್ಟ್ ಸಂಗತಿ.

ಹೀಗೆ ನಮ್ಮ ಬಗ್ಗೆ ನಾವೇ ಮೂಡಿಸಿಕೊಳ್ಳಬಹುದಾದ ಪ್ರೀತಿ ಬದುಕಿಗೆ ಬೇಕಾದ ಆತ್ಮ ವಿಶ್ವಾಸವನ್ನು, ಆತ್ಮಗೌರವವನ್ನು ಮತ್ತೆ ತುಂಬುತ್ತದೆ. ಎಷ್ಟೋ ಸಲ ನಮ್ಮ ಮನಸ್ಸಿನ ಒಳದನಿಯ ಮಾತುಗಳಿಗೆ ನಾವು ಕಿವಿಯಾದೆ ಹೋಗಿರುತ್ತೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸೋತಿರುತ್ತೇವೆ. ನೆನ್ನೆಯ ಅನುಭವಗಳು ಮತ್ತು ಅವುಗಳ ಜತೆಗಿನ ಕೊರತೆಗಳ ಕಳೆದುಹೋಗಿರುತ್ತೇವೆ. ಈ ಕಳೆದು ಹೋಗುವಿಕೆ ನಮ್ಮಲ್ಲಿ ಮತ್ತಷ್ಟು ಗೊಂದಲ ಅಸಮಾಧಾನವನ್ನು ಹುಟ್ಟುಹಾಕಿ ಬಿಡಬಲ್ಲದೆಂಬುದನ್ನು ಮನಗಾಣ ಬೇಕು.

Love Yourself  ಈ ಎರಡು ಪದಗಳಿಗೆ ಬದುಕನ್ನೇ ಬದಲಾಯಿಸಬಹುದಾದ ದೊಡ್ಡ ಶಕ್ತಿಯಿದೆ. ನಮ್ಮನ್ನು ನಾವು ಪ್ರೀತಿಸಿ ಕೊಳ್ಳಬೇಕು- ಇದು ಯಾರು ನಮಗೆ ಹೇಳಿಕೊಡದ ಒಂದು ಕಲಿಕೆ. ಎಷ್ಟು ಸಲ ನಮ್ಮ ಅಪ್ಪ-ಅಮ್ಮನೇ ನಮಗೆ ಹೇಳಿರುತ್ತಾರೆ; ನೀನೇ ನಮ್ಮ ಬದುಕಲೊಂದು ದೊಡ್ಡ ಸಮಸ್ಯೆ ಅಂತ. ಜನ ನಮ್ಮನ್ನ ಕಠಿಣವಾಗಿ ಟೀಕಿಸು ತ್ತಾರೆ. ಆಗೆಲ್ಲ ನಮ್ಮ ಅರಿವಿಗೆ ಬರ ಬೇಕಾದ ಮುಖ್ಯ ಸಂಗತಿಯೆಂದರೆ ನನ್ನ ಬದುಕಿಗೂ ಅರ್ಥವಿದೆ, ಉದ್ದೇಶವಿದೆ, ಆ ಅರ್ಥ-ಉದ್ದೇಶವನ್ನು ಮೂಡಿಸಿಕೊಳ್ಳಬಲ್ಲ ಮೌಲ್ಯವೂ ನನಗಿದೆ ಎನ್ನುವುದು.

ಹಾಗಾಗಿ ನಮ್ಮನ್ನು ನಾವು ಹೆಚ್ಚು ಪ್ರೀತಿಸಿಕೊಳ್ಳುತ್ತ ಗಟ್ಟಿಯಾಗಬೇಕು. ಪ್ರೀತಿಯು ಒಂದು ಭಾವನಾತ್ಮಕ ಅನುಭೂತಿ ಅದು
ಸ್ವಯಂ ಪ್ರೀತಿಯಾಗಿರುತ್ತದೆ ಅಷ್ಟೇ. ಪ್ರತಿ ದಿನ ನಿಮ್ಮ ಬಗ್ಗೆ ನೀವೇ ಹೊಸ ಹೊಸ ಹುಡುಕಾಟದಲ್ಲಿ ತೊಡಗಬೇಕು, ಆಗ ನಿಮ್ಮ ಬಗ್ಗೆ ನಿಮಗೆ ಇನ್ನು ಹೆಚ್ಚಿನ ಪರಿಚಯವಾಗುತ್ತದೆ. ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳು ತ್ತೇನೆ. ನನ್ನ ವಿದ್ಯಾರ್ಥಿನಿಯೊಬ್ಬಳು ದೂರದ ರಾಯಚೂರಿನವಳು ಇಲ್ಲಿ ಹಾಸ್ಟೆಲ್‌ನಲ್ಲಿ ಇದ್ದಾಳೆ.

ತಂದೆ-ತಾಯಿ ಇಬ್ಬರೂ ವೈದ್ಯರು. ಹೆತ್ತವರು ವೃತ್ತಿಜೀವನದಲ್ಲಿ ಬ್ಯುಸಿ ಇರುವ ಕಾರಣ ಹೆಚ್ಚೂ ಕಡಿಮೆ ಈಕೆಗೆ ಮನೆಯವ ರೊಂದಿಗಿನ ಬಾಂಧವ್ಯ ಕಡಿಮೆಯೇ. ಯಾವಾಗಲೂ ಬರ್ತಾಳೆ, ಮಾತಾಡುತ್ತಾಳೆ. ‘ಹೇಗಿದ್ಯಾ’ ಅಂತ ಕೇಳಿದರೆ ‘ನನ್ನನ್ನ ನಾನು ಚೆನ್ನಾಗಿ ನೋಡಿಕೊಳ್ತಾ ಇದೀನಿ ಮ್ಯಾಮ್’ ಎನ್ನುತ್ತಾಳೆ. ಇದು ನನಗೆ Self-parenting ಅನಿಸುತ್ತದೆ. ‘ಅಪ್ಪ-ಅಮ್ಮ ನನಗೆ ಜಾಸ್ತಿ ಟೈಮ್ ಕೊಡಲ್ಲ ಅಂತ ಅಳ್ತಾ ಕೂರೂವುದಕ್ಕಿಂತ ನನಗೆ ನಾನು ಹೆಚ್ಚು ಟೈಮ್ ಕೊಡಲು ಪ್ರಯತ್ನಿಸುತ್ತಿದ್ದೇನೆ’ ಎನ್ನುವ ಅವಳ ಮಾತುಗಳಲ್ಲಿ ಕಾಣಿಸುವ ಅವಳ ಬಗ್ಗೆ ಅವಳಿಗೆ ಇರುವ ಪ್ರೀತಿ, ಎಲ್ಲವನ್ನೂ ಒಪ್ಪಿಕೊಳ್ಳುವ ಸ್ಥೈರ್ಯವನ್ನು ಕಲಿಸಿಕೊಟ್ಟಿದೆ ಎಂದೆನಿಸುತ್ತದೆ.

ಮುಂಚೆ ಇದೇ ಹುಡುಗಿ ನನ್ನ ಹತ್ತಿರ ಕೌನ್ಸೆಲಿಂಗ್ ಬರ್ತಾ ಇದ್ದಳು. ಈಕೆಯದ್ದು ಮೂಲತಃ ಅಂತರ್ಮುಖಿ ಸ್ವಭಾವ. ಅವಳ ಬದುಕನ್ನ ಅವಳದೇ ವಯಸ್ಸಿನ ಇತರ ಹುಡುಗ ಹುಡುಗಿಯರ ಜತೆ ಕಂಪೇರ್ ಮಾಡಿಕೊಳ್ಳುತ್ತಿದ್ದಳು. ಸುಮಾರು ಮಾತುಕತೆಯ ನಂತರ ತನ್ನನ್ನು ತಾನು ಒಪ್ಪಿಕೊಳ್ಳದ ಹೊರತು ಯಾವುದೇ ಬದಲಾವಣೆಯ ನಿರೀಕ್ಷೆ ಅಸಾಧ್ಯ ಎಂಬ ಅರಿವು ಅವಳಲ್ಲಿ ಕ್ರಮೇಣ ಮೂಡತೊಡಗಿತ್ತು.

ಬೇರೆಯವರೊಂದಿಗೆ ಹೋಲಿಸಿ ನೋಡಿಕೊಳ್ಳುವ ಕ್ರಿಯೆ ನಿಧಾನವಾಗಿ ಕಡಿಮೆಯಾಯಿತು. ಬದುಕನ್ನು ತನ್ನದೇ ರೀತಿಯಲ್ಲಿ ಸಂಭ್ರಮಿಸತೊಡಗಿದಳು. ಈಗ ಹಿಂದೆಂದಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸವನ್ನು ಅವಳಲ್ಲಿ ಕಾಣಬಹುದು. ಒಂದೊಮ್ಮೆ ತನ್ನ ಇರುವಿಕೆಯ ಬಗ್ಗೆಯೇ ಬೇಸರಗೊಂಡಿದ್ದ ಇದೇ ಹುಡುಗಿ ಈ ಹೊತ್ತು ಬದುಕೊಂದು ಪಯಣ ಆ ಪಯಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಅನುಭವ ಎರಡೂ ದೊರಕುತ್ತವೆ. ಬುದ್ಧಿ-ಭಾವಕ್ಕೂ ಬೇಕಾದ್ದನ್ನು ಮಾತ್ರ ಹತ್ತಿರವಾಗಿಸುತ್ತ ನಮ್ಮನ್ನು ನಾವು ಹುಡುಕಿ ಕೊಳ್ಳಬೇಕು ಎಂಬ ಅಧ್ಯಾತ್ಮಿಕ ಅನುಭೂತಿಯೊಂದಿಗೆ ಬದುಕುತ್ತಿದ್ದಾಳೆ.

ಇದನ್ನು ಸಾಧ್ಯವಾಗಿಸಿದ್ದು ಅವಳ ಬಗ್ಗೆ ಅವಳಿಗೆ ಮೂಡಿದ ಪ್ರೀತಿ ಮತ್ತು ದೃಢ ವಿಶ್ವಾಸ. ಅದಕ್ಕೇ ಹೇಳಿದ್ದು ನಮ್ಮ ಬದುಕಲ್ಲಿ ಖಾಲಿ ಬಿಟ್ಟ ಜಾಗವನ್ನು ತುಂಬಬಲ್ಲ ಶಕ್ತಿ ನಮ್ಮದೇ Self Love ಗಿದೆ. ನಮ್ಮ ಬಗೆಗಿನ ಪ್ರೀತಿಯಲ್ಲಿ ನಾವು ಮುಳುಗುವುದೇ ಖುಷಿ ಯಾಗಿರುವುದರ ಮೊದಲ ಸೀಕ್ರೆಟ್. ಬದುಕಿನ ಹೆಣಗಾಟಗಳು ನಮಗೆ ನಾವೇ ಹೆಚ್ಚು ಕಠಿಣವಾಗಿ ಬಿಡುವಂತೆ ಮಾಡುತ್ತವೆ
ಆಗೆಲ್ಲ ನಮ್ಮ ಬಗ್ಗೆ ನಾವೇ ಪ್ರೀತಿ ಮೂಡಿಸಿಕೊಳ್ಳುವ ತತ್ವವನ್ನು ಅನುಭಾವಿಸಿಕೊಳ್ಳಬೇಕು. ನನಗೋಸ್ಕರ ನಾನು ಮನೆ ತೊಗೊಂಡೆ, ಕಾರ್ ತಗೊಂಡೆ, ಒಡವೆ ಮಾಡಿಸಿಕೊಂಡೆ, ಐಫೋನ್ ಹೊಸದಾಗಿ ಕೊಂಡುಕೊಂಡೆ ಎಂಬ ಅಲ್ಪತೃಪ್ತಿಯ material possession ಗಳಾಚೆ Self love ಅನ್ನು ನಾವೆಲ್ಲ ಸಾಧ್ಯವಾಗಿಸಿಕೊಳ್ಳಬೇಕು.

ಆಗ ಶಾಂತಿ ಮತ್ತು ಪ್ರಶಾಂತತೆಯ ಸಮಚಿತ್ತ ಅನುಭವ ನಮಗುಂಟಾಗುತ್ತದೆ. ದೈಹಿಕ ಶಕ್ತಿ, ಮಾನಸಿಕ ಗಮನ, ಆಂತರಿಕ ನಿಶ್ಚಲತೆ, ಖುಷಿಯಾದ ಹೃದಯ ಇವುಗಳನ್ನು ಪೋಷಿಸುವುದೇ ಸ್ವ- ಪ್ರೀತಿ. ನಮ್ಮಲ್ಲಿ ಅನೇಕರಿಗೆ ಈ ಸ್ವ-ಪ್ರೀತಿಯ ಪರಿಕಲ್ಪನೆ
ಅತೀ ಅನ್ನಿಸಬಹುದು. ಹಾಗಾಗಿ ಹೆಚ್ಚಿನ ಜನರು ಇದನ್ನು ಕಡೆಗಾಣಿಸುತ್ತೇವೆ. ಸ್ವ-ಪ್ರೀತಿ ರೂಢಿಸಿಕೊಳ್ಳುವುದ್ದಕ್ಕಿಂತ ಪರಿಪೂರ್ಣವಾಗುವುದರೆಡೆಗೆ ನಮ್ಮದು ಹೆಚ್ಚಿನ ಗಮನ.

ಆಧುನಿಕ ಸಮಾಜದ ಸ್ಪರ್ಧಾತ್ಮಕ ಮನೋಭಾವ ನಮ್ಮನ್ನು ಹಠಕ್ಕೆ ಬೀಳುವಂತೆ ಮಾಡಿದೆ. ಬೇರೆಯವರ ಜತೆ ನಮ್ಮದು
ಕಾಂಪಿಟೇಶನ್. ಇದರ ಬದಲು ನೆನ್ನೆಗಿಂತ ನಾನು ಇವತ್ತು ಹೆಚ್ಚು ಉತ್ತಮವಾಗಿ ಇದ್ದೇನೆ ಎನ್ನುವ ಅರಿವನ್ನು ಬೆಳೆಸಿಕೊಳ್ಳುವ ನಮ್ಮೊಂದಿಗಿನ ಸ್ಪರ್ಧಾತ್ಮಕತೆ ಇದಾಗಬೇಕು. ಆದರೆ ಸಮಾಜದ ನಿರೀಕ್ಷೆಗಳಿಗೆ ಅನುಗುಣವಾದ ಬದುಕು ಇಂದು ನಮ್ಮದಾಗಿದೆ. ಕೆಲಸದ ಅವಧಿ ಜಾಸ್ತಿಯಾಗಿದೆ, ನಿದ್ರೆ ಕಡಿಮೆಯಾಗಿದೆ. ಒಳ್ಳೆಯ ಸಮಯವನ್ನು ಅನುಭವಿಸುತ್ತ ವಿಶ್ರಾಂತಿ ಪಡೆಯುವುದನ್ನು ನಾವು ಇಂದು ಕೆಲಸವನ್ನಾಗಿಸಿಕೊಂಡು ಬಿಟ್ಟಿದ್ದೇವೆ.

ಬದುಕು ಹೆಚ್ಚೇ ನಿರ್ಜೀವವಾಗಿದೆ. ಕೆಲಸ, ಜೀವನದ ಗುರಿಗಳು, ವೀಕೆಂಡ್ ಪ್ಲಾನ್‌ಗಳು ಇವುಗಳ ಮಧ್ಯೆ ನಾವು ಕಳೆದು ಹೋಗಿ ದ್ದೇವೆ. ನಮ್ಮ ರೋಬೋಟಿಕ್ ಬದುಕಿಗೆ ಜೀವ ಚೈತನ್ಯ ತುಂಬಬಲ್ಲ ಶಕ್ತಿ ಇರುವುದೇ ಪ್ರೀತಿಗೆ. ನಮ್ಮೆಲ್ಲರಿಗೂ ಪ್ರೀತಿಯ ಅವಶ್ಯಕತೆ ಇದೆ. ಆದರೆ ನಾವೆಲ್ಲರೂ ನಮ್ಮ ಪ್ರೀತಿ ಮತ್ತು ಶಕ್ತಿಯನ್ನು ಸ್ನೇಹಿತರಿಗೆ, ಸಂಗಾತಿಗಳಿಗೆ, ಮಕ್ಕಳಿಗೆ, ಕುಟುಂಬಕ್ಕೆ ವ್ಯಯಿಸು ತ್ತಿದ್ದೇವೆ.

ತಪ್ಪಲ್ಲ! ಈ ಪ್ರೀತಿಯ ಹಂಚುವಿಕೆಯ ನಡುವೆ ನಮ್ಮ ಪ್ರೀತಿಯನ್ನು ನಮಗಾಗಿ ಎಷ್ಟರಮಟ್ಟಿಗೆ ಕೊಟ್ಟು ಕೊಳ್ಳುತ್ತಿದ್ದೇವೆ ಎಂಬುದೇ ಪ್ರಶ್ನೆ? ಬಾಹ್ಯಪ್ರಪಂಚದ ಪ್ರೀತಿಯ ಮೇಲಷ್ಟೇ ನಾವು ಅವಲಂಬಿತವಾಗಲು ಸಾಧ್ಯವಿಲ್ಲ. ಆಗೆಲ್ಲ ನಮಗೆ ಮುಖ್ಯ ವಾಗುವುದೇ Self love. ಈ ಸ್ವ-ಪ್ರೀತಿ ನಮಗೆ ಅಭ್ಯಾಸವಾದರೆ ಯಾರ ಮೇಲೂ ಅವಲಂಬಿತವಾಗದೆ ಆಂತರಿಕವಾಗಿ ಖುಷಿಯಾಗಿ ರುವ ಶಕ್ತಿಯನ್ನು ಅದು ತುಂಬುತ್ತದೆ. ಪ್ರೀತಿಪಾತ್ರರು ತಪ್ಪು ಮಾಡಿದಾಗ ಅದನ್ನು ನಾವು ಸುಲಭವಾಗಿ ಕ್ಷಮಿಸುತ್ತೇವೆ ಆದರೆ ನಮ್ಮದೇ ತಪ್ಪುಗಳನ್ನು ವಾರಗಟ್ಟಲೆ,ತಿಂಗಳುಗಟ್ಟಲೆ ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತೇವೆ, ನಮ್ಮನ್ನು ನಾವೇ ದೂಷಿಸಿ ಕೊಳ್ಳುತ್ತೇವೆ.

ಇಲ್ಲಿ ನಾವೆಲ್ಲ ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ ದಿನದ ಕೊನೆಯಲ್ಲಿ ನಾವೆಲ್ಲ ಮನುಷ್ಯರು ನಮ್ಮಿಂದ ತಪ್ಪುಗಳಾಗುವುದು ಸಹಜ. ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವು ಇದ್ದದ್ದೇ. ಪ್ರತಿ ದಿನವು ಉತ್ತಮವಾಗಿರುವುದಿಲ್ಲ. ಕತ್ತಲೆ ಕಳೆದು ಬೆಳಕು ಮೂಡುತ್ತದೆ. ಎಲ್ಲರೂ ಅಂಬಾನಿ, ಅದಾನಿ, ದೋನಿ ಆಗಲು ಸಾಧ್ಯವಿಲ್ಲ. ನಾವು ಏನಾಗಿದ್ದೇವೋ ಆ ಕಾರಣಕ್ಕೆ ನಮ್ಮ ಬಗ್ಗೆ ನಮಗೆ ಪ್ರೀತಿ, ಖುಷಿ ಇರಬೇಕು.

ಸ್ವಪ್ರೀತಿ ಉನ್ನತ ಜೀವನ ತೃಪ್ತಿಯನ್ನು ತುಂಬಬಲ್ಲದು. ನಮ್ಮನ್ನು ನಾವು ಪ್ರೀತಿಸಿದಷ್ಟು ಜಗತ್ತಿನ ಬಗೆಗೆ ನಮ್ಮ ದೃಷ್ಟಿಕೋನಗಳು ಬದಲಾಗುತ್ತವೆ, ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ. ಇದು ಉತ್ತಮ ಅಭ್ಯಾಸಗಳನ್ನು ಉತ್ತೇಜಿಸುತ್ತದೆ. ನಿಮ್ಮ ದೇಹ-ಆತ್ಮ-ಮನಸ್ಸನ್ನು ಪ್ರೀತಿಸಿಕೊಳ್ಳುವುದೇ ಸ್ವ-ಪ್ರೀತಿ. ಈ ಮೂರು ವಿಚಾರಗಳಿಗೆ ಕನೆಕ್ಟ್ ಆಗು ವುದು ಮನಃಶಾಂತಿಯ ಮೇಲೆ ಅನಗತ್ಯ ಒತ್ತಡವಾಗು ವುದನ್ನು ತಡೆಯುತ್ತದೆ.

ಉತ್ತಮ ಮಾನಸಿಕ ಆರೋಗ್ಯಕ್ಕೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಅತ್ಯವಶ್ಯ. ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಕಲಿಕೆ ಒತ್ತಡ, ಸೋಮಾರಿತನವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಕ್ಷಣ ದಿಂದಲೇ ಅನೇಕ ಸಕಾರಾತ್ಮಕ ಅನುಭವಗಳು ನಮ್ಮವಾಗುತ್ತವೆ. ಬದುಕು ಬಹಳ ಸುಲಭದ್ದಿದೆ ಎಂದೆನಿಸುತ್ತದೆ. ವಿಷಯಗಳು ಮ್ಯಾಜಿಕಲ್ ಆಗಿ ಬದಲಾಗುತ್ತವೆ. ಸಂಬಂಧ,ಆರೋಗ್ಯ ಎಲ್ಲದರಲ್ಲೂ ಸುಧಾರಣೆ ಕಾಣುತ್ತದೆ.ಇರುವುದಕ್ಕಿಂತ ಬದುಕು ಇನ್ನೂ ಚಂದ ಎನ್ನಿಸುವುದಕ್ಕೆ ಶುರುವಿಟ್ಟುಕೊಳ್ಳುತ್ತದೆ.

ಬೇರೆಯವರು ಮುಖ್ಯ ಅವರ ಭಾವನೆಗಳಿಗೆ ನೋವಾಗದಂತೆ ನಡೆದುಕೊಳ್ಳುವುದೇ ಮುಖ್ಯಎಂದು ಕೇಳಿ ಬೆಳೆದಿರುವ ನಮಗೆಲ್ಲ ‘ಸೆಲ ಲವ್’ ಅಂದಾಕ್ಷಣ ಎಲ್ಲೋ ಅದೊಂದು ಸ್ವಾರ್ಥ ಭಾವನೆಯೆನೋ ಎಂಬ ಅನಿಸಿಕೆ ಬಂದೇ ಬರುತ್ತದೆ. ನಾವೆಲ್ಲ ಯಶಸ್ಸಿನ ಪ್ರಾಮುಖ್ಯವನ್ನು ಅರಿತಿದ್ದೇವೆ. ಕಷ್ಟಪಟ್ಟು ಬದುಕು ಕಟ್ಟುವುದನ್ನು, ದುಡ್ಡು ಮಾಡುವುದನ್ನು ಕಲಿತಿದ್ದೇವೆ. ಬದುಕಿನ ಪಯಣ ದಲ್ಲಿ ನಮಗೆ ನಾವು ಮೋಟಿವೇಟ್ ಮಾಡಿಕೊಳ್ಳಲು ಇಂಧನವಾಗಿ Self love ನ ಅವಶ್ಯಕತೆ ಇದೆ. ನಾವು ಯಾರು ಎಂಬುದನ್ನು ತಿಳಿಸಿಕೊಡುವುದೇ ಈ Self love.

ನಿಮ್ಮನ್ನು ನೀವು ಮೊದಲು ಪ್ರೀತಿಸಿಕೊಂಡರೆ ಆಳವಾದ ಅಂತರಿಕ ಸಂಬಂಧಗಳು, ಸೂರ್ತಿದಾಯಕವಾದ ಮ್ಯಾಜಿಕಲ್ ಪ್ರಯೋಜನಗಳು ನಿಮ್ಮವಾಗುತ್ತವೆ. ಬೇರೆಯವರನ್ನು ಪ್ರೀತಿಸುವುದಕ್ಕೆ ಅವರನ್ನು ಒಪ್ಪಿಸುವುದಕ್ಕೆ ನಾವೆಲ್ಲ ಅನೇಕ ಟ್ರಿಕ್ಕು ಗಳನ್ನು ಬಳಸುತ್ತೇವೆ. ಅದೇ ಟ್ರಿಕ್ಕುಗಳು ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದಕ್ಕೂ ಬಳಸಿದರೆ ನಮ್ಮ ವ್ಯಕ್ತಿತ್ವವನ್ನು
ಇನ್ನೊಂದಿಷ್ಟು ಕಡೆದು ನಿಲ್ಲಿಸಬಹುದು.

ಇದು ಒಂದೇ ದಿನಕ್ಕೆ ದಕ್ಕುವುದಿಲ್ಲ, ಪ್ರತಿದಿನದ ಅಭ್ಯಾಸದ ಮೂಲಕ ದಕ್ಕಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಬೇಕು.
೧) ನಿಮ್ಮ ಅವಶ್ಯಕತೆಗಳನ್ನು ಗುರುತಿಸಿ ಅವುಗಳಿಗೆ ಆದ್ಯತೆ ನೀಡಿ ೨) ನಿಜ ಅರ್ಥದ ಅರಿವನ್ನು ಬೆಳೆಸಿಕೊಳ್ಳಿ ೩) ಪ್ರೀತಿಯ ಚೌಕಟ್ಟುಗಳನ್ನು ಜೋಡಿಸಿ ೪) ಉದ್ದೇಶಪೂರಕವಾಗಿ ನಿಮ್ಮನ್ನು ನೀವು ದೂಷಿಸುವುದನ್ನು ನಿಲ್ಲಿಸಿ ೫) ನಿಮ್ಮದೇ ಖುಷಿಗಳನ್ನು ಹುಡುಕಿಕೊಳ್ಳಿ ಪ್ರೀತಿಯ ಖುಷಿ ನಿಮ್ಮದಾಗಲಿ…

error: Content is protected !!