Thursday, 12th December 2024

ಭುವನದ ಭಾಗ್ಯ ಮಹಾತ್ಮರ ಜೀವನ

ಸ್ಮರಣೆ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

ಗಾಂಧೀಜಿಯವರಿಗೆ ಜನ್ಮವಿತ್ತ ಭಾರತ ಮಾತೆಯೇ ಧನ್ಯಳೆಂದು ನಾವು ಹೆಮ್ಮೆಪಟ್ಟುಕೊಳ್ಳಬೇಕು. ಸಹಸ್ರಮಾನದ ಮಾನವನೆಸಿಕೊಂಡ ಈ ಮಹಾನ್ ಚೇತನ ತನ್ನ ಜೀವಿತಾವಧಿಯ ಅರ್ಧ ಶತಮಾನಕ್ಕೂ ಮೇಲ್ಪಟ್ಟ ಕಾಲವನ್ನು ಶಾಂತಿ, ಸತ್ಯ ಮತ್ತು ಅಂಹಿಸೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.

ಗಾಂಧೀಜಿ ಅಂದಿಗೆ, ಇಂದಿಗೆ ಮಾತ್ರವಲ್ಲ, ಭಷ್ಯದ ಬದುಕಿಗೂ ಬೇಕಾದವರು. ಅವರ ಸಾಧನೆ, ತ್ಯಾಗ, ಬಲಿದಾನ ಸೇವೆ, ಪಾರದರ್ಶಕ ಬದುಕು ಎಂದೆಂದಿಗೂ ಪ್ರಸ್ತುತ. ಗಾಂಧೀಜಿಯವರ ಮುಂದಾಳತ್ವದಲ್ಲಿ, ಸ್ವಾತಂತ್ರ್ಯವೇನೋ ಸಿಕ್ಕಿತು ಆದರೆ ‘ಗಾಂಧೀಜಿಯವರಿಗೆ ಯಾವುದು ಇಷ್ಟವಿರಲಿಲ್ಲವೋ ಅದೇ ಆಯಿತು’. ಮತ್ತು ಇಂದೂ ಕೂಡಾ ಅದೇ ಆಗುತ್ತಿದೆ. ಇದು ನಮ್ಮ ರಾಷ್ಟ್ರದ ಪಾಲಿನ ದುರದೃಷ್ಟ ಮತ್ತು ದುರಂತ. ಗಾಂಧೀ ಜಿಯವರ 152ನೇ ವರ್ಷಾಚರಣೆ ಹೊಸ್ತಿಲನ್ನು ದಾಟುತ್ತಿರುವ ಈ ಸಂದರ್ಭದಲ್ಲಿಯೂ ಕೂಡಾ ಸ್ವಾತಂತ್ರ್ಯ ತರುವಲ್ಲಿ ಗಾಂಧೀಜಿ ವಹಿಸಿದ ಮುತುರ್ವಜಿಯನ್ನು ಸ್ವಾತಂತ್ರ್ಯಾನಂತರ ಮತ್ತು ಈಗಲೂ ಕೂಡಾ ರಾಷ್ಟ್ರ ನಿರ್ಮಾಣ ಮಾಡಲು ನಿರಾಸಕ್ತರಾಗಿರುವುದು ವಿಷಾದದ ವಿಚಾರ.

ತಮ್ಮ ಇಳಿವಯಸ್ಸಿನಲ್ಲಿಯೂ ಹಗಲಿರುಳು ಶ್ರಮಿಸಿ, ಸೆರೆಮನೆವಾಸ ಅನುಭಸಿ, ಸ್ವಾತಂತ್ರ್ಯ ಬಂದದ್ದನ್ನು ಕಂಡರಾದರೂ ಅವರ ಕನಸಿನ ಐಕ್ಯತೆಯ ಸರ್ವೋದ ಯವೆಂಬ ಭಾರತ ‘ರಾಮರಾಜ್ಯವೆಂಬ ಭಾರತ’ ಕನಸಾಗಿಯೇ ಉಳಿದಿದೆ. ಗಾಂಧಿ ಜಯಂತಿ ಮತ್ತು ಪುಣ್ಯ ತಿಥಿಯಂದು ಅವರ ಪ್ರತಿಮೆಗೆ ಹೂಹಾರ ಹಾಕಿ ಬಾಯಿ ತುಂಬಾ ಗುಣಗಾನ ಮಾಡುತ್ತೇವೆ. ಆದರೆ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವುದು ಆ ಮಹಾನ್ ಚೇತನಕ್ಕೆ ಸರ್ಮಪಿಸುವ ನೈಜ ಮತ್ತು ಪ್ರಾಮಾ ಣಿಕ ಶೃದ್ಧಾಂಜಲಿ ಎಂಬುದನ್ನು ಸಾರಾಸಗಟಾಗಿ ಮರೆತಿರುತ್ತೇವೆ. ಇದು ಅಕ್ಷಮ್ಯ ಅಪರಾಧ.

‘ಇಂದು ಗಾಂಧೀಜಿಯವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಜನರೇ ಹೆಚ್ಚಾಗಿರುವುದು ಪಶ್ಚಾ ತ್ತಾಪವೂ ವಿಪರ್ಯಾಸವೂ ಆಗಿದೆ’. ಶಾಂತಿ ಮತ್ತು ಅಂಹಿಂಸೆಯ ತತ್ವಕ್ಕೆ ಮಾನವೀಯತೆಯನ್ನು ಒಗ್ಗೂಡಿ ಸುವ ಶಕ್ತಿ ಇದೆ. ಸರ್ವೋದಯವು ಗಾಂಧೀಜಿಯವರ ಗುರಿಯಾಗಿತ್ತು. ಸರ್ವರೂ ಉದಯಿಸಬೇಕು, ಶಾಂತಿ ಕಾಣಬೇಕು ಎಂಬುದು ಸರ್ವೋದಯದ ತಿರುಳು. ಆದರೆ ‘ಸ್ವಾತಂತ್ರ್ಯ ಸಿಕ್ಕು ಪೂರ್ತಿ ಏಳು ದಶಕಗಳು ಕಳೆದರೂ ಬಹು ಪಾಲು ಜನ ಅನ್ನ, ಅರಿವೆ ಮತ್ತು ಅಕ್ಷರದಿಂದ ವಂಚಿತರಾಗಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಿದೆ’.

‘ಇಂದು ಪ್ರಜಾಪ್ರಭುತ್ವವೇ ಡೋಲಾಯಮಾನ ಪರಿಸ್ಥಿತಿ ಯಲ್ಲಿದೆ’. ಈ ಸಂದರ್ಭದಲ್ಲಿ ಗಾಂಧೀಜಿಯವರು ಪ್ರಜಾಪ್ರಭುತ್ವದ ಬಗ್ಗೆ ಹೇಳಿದ ಮಾತುಗಳನ್ನು
ನೆನಪಿಸಿಕೊಳ್ಳುವುದು ಸೂಕ್ತ. ಅದೇನೆಂದರೆ ಒಂದು ಸಂಸ್ಥೆ ದೊಡ್ಡದಾದಷ್ಟೂ ಅದರ ದುರುಪಯೋಗದ ಅವಕಾಶಗಳು ಹೆಚ್ಚಿಗೆ ಇರುತ್ತವೆ. ಪ್ರಜಾಪ್ರಭುತ್ವ ಎನ್ನುವುದು ಒಂದು ದೊಡ್ಡ ಸಂಸ್ಥೆಯಾಗಿರು ವುದರಿಂದ ಅದು ಹೆಚ್ಚಿನ ಪ್ರಮಾಣದಲ್ಲಿ ದುರುಪಯೋಗಕ್ಕೆ ಒಳಗಾಗುತ್ತದೆ. ಇದಕ್ಕೆ ಪರಿಹಾರವೆಂದರೆ ಪ್ರಜಾ ಪ್ರಭುತ್ವವನ್ನು ತೊರೆದು ಬಿಡುವುದಲ್ಲ. ಆದರೆ ಕನಿಷ್ಠ ಪ್ರಮಾಣಕ್ಕೆ ದುರುಪಯೋಗದ ಸಾಧ್ಯತೆಯನ್ನು ತಗ್ಗಿಸುವುದೇ ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣ ದುರುಪಯೋಗಪಡಿಸಿಕೊಂಡು, ಸ್ವಾರ್ಥಕ್ಕೆ ಬಳಸಿಕೊಂಡು, ಅಧಿಕಾರ ದುರಪಯೋಗದ ಪರಮಾವಧಿಯನ್ನು ನಾವು ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಳಲ್ಲಿ ವೀಕ್ಷಿಸುತ್ತಿರುವುದು ಮತ್ತೊಂದು ದುರಂತ. ಇಂತಹ ಸಮಾಜಕ್ಕೆ ಭಾರತ ಸಾಗುತ್ತಿದೆ. ಇದಕ್ಕೆ ಕಾರಣ ಯಾರು ಎನ್ನುವುದಕ್ಕಿಂತಲೂ ಏಕೆ ಹೀಗಾಗುತ್ತಿದೆ ಎಂದು ಯೋಚಿಸುವುದು ಸೂಕ್ತ ಮತ್ತು ಒಳಿತು.

ಈ ದೇಶ, ಈ ರಾಜ್ಯ, ಈ ಊರು, ಈ ಸಮಾಜ ಯಾರದ್ದು? ಒಂದೇ ಶಬ್ದದ ಉತ್ತರ ನಮ್ಮದ್ದು. ನಶಿಸುತ್ತಿರುವ ಪ್ರಜಾಪ್ರಭುತ್ವ, ವ್ಯವಸ್ಥೆ ಮತ್ತು ಮೌಲ್ಯಗಳೇ ಇಲ್ಲದ ಸಮಾಜ ನಿರ್ಮಾಣಕ್ಕೆ ನಾವೇ ಕಾರಣರು. ಅಕ್ಷರಜ್ಞಾನ, ವಿದ್ಯಾಭ್ಯಾಸದ ಮಟ್ಟ ಹೆಚ್ಚುತ್ತಿದ್ದರೂ ವಿದ್ಯಾವಂತರು ಅವೇಕಿಗಳಂತೆ ವರ್ತಿಸುವುದು, ಸ್ವಾರ್ಥ ಮತ್ತು ಮಿತಿ ಮೀರಿದ ಆಸೆಗೆ ಕಡಿವಾಣ ಹಾಕಲೇ ಬೇಕಾಗಿದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ಅವರು ತಳೆದ ನೀತಿಯ ಬಗ್ಗೆ ಉಲ್ಲೇಖಿಸುವುದು ಸೂಕ್ತ. ‘ಈ ಜಗತ್ತು ನೂರಾರು ಹಿಟ್ಲರ್‌ಗಳನ್ನು ಸೃಷ್ಠಿಸಬಹುದು.

ಆದರೆ ಒಬ್ಬ ಗಾಂಧಿಯನ್ನು ಸೃಷ್ಠಿಸಲು ಅಸಾಧ್ಯ’. ತಮ್ಮ ಸತ್ಯ, ನ್ಯಾಯ, ಧರ್ಮ, ನೀತಿ, ಪ್ರಾಮಾಣಿಕತೆ, ನಿಷ್ಠೆ, ಅಹಿಂಸೆ ಮತ್ತು ಸರಳ ತತ್ವಗಳಿಂದ ಇಡಿ ಜಗತ್ತೇ ಬೆರಗಾಗುವಷ್ಟು ಎತ್ತರಕ್ಕೆ ಬೆಳೆದರು. ಗಾಂಧೀಜಿಯವರು ರಾಮಾಯಣ, ಮಹಾಭಾರತ, ಗೀತೋಪದೇಶಗಳನ್ನು ಓದಿ ಸತ್ಯ ಹರಿಶ್ಚಂದ್ರ ನಾಟಕವನ್ನು ಬಾರಿ ಬಾರಿ ನೋಡಿ, ಜೀವನದಲ್ಲಿ ಅವುಗಳ ತಿರುಳನ್ನು ಅಳವಡಿಸಿಕೊಂಡು ಮಹಾತ್ಮರೆಂದೆನಿಸಿಕೊಂಡರು, ರಾಷ್ಟ್ರಪಿತ, ವಿಶ್ವಾತ್ಮನೊಂದಿಗೆ ಒಂದಾದ ವ್ಯಕ್ತಿ ಎಂದೆ ನಿಸಿಕೊಂಡರು. ಸತ್ಯವು ಶಾಂತಿಗಿಂತ ಹಿರಿದಾದದ್ದು, ಸತ್ಯವೇ ದೇವರು. ಅಂಹಿಂಸೆಯಿಲ್ಲದೆ ಸತ್ಯ ಸಾಕ್ಷಾತ್ಕಾರವಾಗಲಾರದು.

ಕರ್ತವ್ಯ ಕನಿಷ್ಠ ಜೀವನದ ಪಾಠವನ್ನು ಕಲಿಸುತ್ತದೆ. ಅನುಭವ ಮತ್ತು ವಿದ್ಯೆ ವಿನಯವನ್ನು ಕೊಡುತ್ತದೆ. ಉತ್ತಮ ಜೀವನವೂ ಒಂದು ಕಲೆ. ಸತ್ಯಕ್ಕಾಗಿ ಏನನ್ನಾ ದರೂ ತ್ಯಾಗ ಮಾಡಿ ಆದರೆ ಸತ್ಯವನ್ನು ಯಾವ ಕಾರಣಕ್ಕೂ ತ್ಯಾಗ ಮಾಡಬೇಡಿ ಎಂಬುದನ್ನು ಜಗತ್ತಿಗೇ ಪರಿಚಯಿಸಿದ ಮಹಾನ್ ಚೇತನ. ಸೃಷ್ಠಿಯ ನಿಜ ರೂಪಕ ಪಂಚಭೂತಗಳಾದ ಗಾಳಿ, ನೀರು, ಬೆಳಕು, ಆಕಾಶ, ಭೂಮಿ ಹಾಗೂ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ ಹಾಗೂ ಪಂಚನೀತಿ
ಗಳಾದ ಭಾವನೆ, ಯೋಚನೆ, ಮಾತು, ಪ್ರಚಾರ ಮತ್ತು ಸತ್ಯಕ್ಕೆ ಮಾರು ಹೋಗಿ ಸಾಧಿಸುವ ಸಾಧನ ಮಾರ್ಗವು ಶುಚಿಯಾಗಿರಬೇಕೆಂದು ಪ್ರಬಲವಾಗಿ ಪ್ರತಿಪಾ ದಿಸಿ ’end justifies the means’ ಎಂದರು. ಬ್ರಿಟಿಷರ ನೀತಿಯನ್ನು ವಿರೋಧಿಸಿದರೂ ಪ್ರತಿಯೊಬ್ಬ ಬ್ರಿಟಿಷರೂ ತನ್ನ ಮಿತ್ರನೆಂದು ನಂಬಿದರು.

ರಾಜಕೀಯದಲ್ಲಿ ಧಾರ್ಮಿಕ ನಿಷ್ಠೆ, ಅಸ್ಪ್ರಶ್ಯೋದ್ಧಾರ, ಹರಿಜನೋದ್ಧಾರ, ಸ್ವದೇಶಿ ಚಳುವಳಿ, ಖಾದಿ, ಪ್ರಚಾರ, ಕೈನೂಲಿನ ಅಂದೋಲನ, ಗ್ರಾಮ ಸುಧಾರಣೆ, ಸಾಕ್ಷರತ ಪ್ರಚಾರ, ಪಾನ ನಿರೋಧ, ಹಿಂದೂ ಮುಸ್ಲಿಂ ಐಕ್ಯ, ಮೂಲ ಶಿಕ್ಷಣ, ಅಹಿಂಸಾತ್ಮಕ ಅಂದೋಲನಗಳು, ವಿದೇಶಿ ಬಟ್ಟೆಗಳ ಬಹಿಷ್ಕಾರ, ಉಪ್ಪಿನ ಸತ್ಯಾ ಗ್ರಹ, ಜಂಗಲ್ ಸತ್ಯಾಗ್ರಹ, ಮಾಡು ಇಲ್ಲವೇ ಮಡಿ, ಸತ್ಯಾಗ್ರಹಗಳಿಂದ ಜೈಲುವಾಸ, ಉಪವಾಸ, ಸತ್ಯಾಗ್ರಹಗಳು ಚಳವಳಿಯ ನೆರಳಾಗಿ ನಡೆದು ಬಂದವು. ಯಾವುದೇ ಯೋಜನೆ ಅಸ್ತಿತ್ವಕ್ಕೆ ತರುವಾಗ ಎಲ್ಲರೂ ತ್ಯಜಿಸಿದರೂ ಅವರು ಏಕಾಂಗಿಯಾಗಿ ಕೊನೆ ಮುಟ್ಟಿಸುತ್ತಿದ್ದರು.

ಯಶಸ್ವಿಯಾಗದಾಗ ಅಪರಾಧವಾಯಿತೆಂದು ಮಮ್ಮಲ ಮರುಗುತ್ತಿದ್ದರು. ಅವರ ಕ್ವಿಟ್ ಇಂಡಿಯಾ ಚಳವಳಿ ಬ್ರಿಟಿಷರನ್ನು ನಡುಗಿಸಿತು. ಗಾಂಧಿ ಸಹಸ್ರಮಾನದ
ಮಾನವನಾದರು. ಬಿಬಿಸಿ ನಡೆಸಿದ ಸಮೀಕ್ಷೆಯಲ್ಲಿ ಏಸು, ಐನ್‌ಸ್ಟೀನ್, ಕಾರ್ಲ್‌ಮಾರ್ಕ್ಸ್‌ರನ್ನು ತಮ್ಮ ಸತ್ಯ ಮತ್ತು ಅಹಿಂಸೆಗಳೆಂಬ ಆಯುಧಗಳಿಂದ ಹಿಂದಿಕ್ಕಿ ದರು. ವಿಶ್ವದ ವಿವಿಧ ದೇಶಗಳು ಗಾಂಧಿ ಸ್ಮಾರಕ ಮತ್ತು ಪ್ರತಿಮೆಗಳನ್ನು ಸ್ಥಾಪಿಸಿವೆ ಅದಲ್ಲದೆ ಪ್ರಮುಖ ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನು ನಾಮಕರಣ ಮಾಡಿವೆ. ‘ನೆದರ್‌ಲ್ಯಾಂಡ್ ದೇಶವು ತನ್ನ ದೇಶದಲ್ಲಿರುವ 29 ರಸ್ತೆಗಳಿಗೆ ಗಾಂಧೀಜಿಯವರ ಹೆಸರನ್ನಿಟ್ಟಿದೆ’.

ಗಾಂಧೀಜಿಯಂತಹ ಮತ್ತೊಬ್ಬ ಮುಂದೆಯೂ ಹುಟ್ಟಲಾರನೇನೋ ಅವರು ಬರೆದ ‘ನನ್ನ ಕನಸಿನ ಭಾರತ’ ಸತ್ಯಾಗ್ರಹದ ಶಸ್ತ್ರಾಗಾರದಲ್ಲಿ ವಿಶ್ಲೇಸಿದ ಹಲವಾರು ಮೂಲಭೂತ ವಿಚಾರಗಳನ್ನು ಜನರ ಮನ ಮುಟ್ಟಿಸಿದರು. ಎಲ್ಲಿ ಶಾಂತಿ ಇಲ್ಲವೇ ಅಲ್ಲಿ ವಿಶ್ರಾಂತಿಯಿಲ್ಲ ಎಂದು ಪ್ರತಿಪಾದಿಸಿದರು. ಅಹಿಂಸಾ ಸಂತನ ಹಿಂಸಾ ತ್ಮಕ ಅಂತ್ಯದ ಬಗ್ಗೆ ಜಾರ್ಜ್ ಬರ್ನಾಡ್ ಷಾರವರು ಅತ್ಯಂತ ಸದ್ಗುಣಗಳು ಮತ್ತು ಮಾನವೀಯತೆಯನ್ನು ಹೊಂದಿರುವುದೂ ಅಪಾಯಕಾರಿ (to be too good is too dangerous)ಎಂದು ತಮ್ಮ ಅಳಲನ್ನು ತೋಡಿಕೊಂಡರು.

‘ಲಂಡನ್ ಗೈಡ್’, ’ಬ್ರಿಟಿಷರಲ್ಲಿ ವಿನಂತಿ’, ’ಹಿಂದ್ ಸ್ವರಾಜ್’, ’ದೇಶ ಕಟ್ಟುವ ಕೆಲಸ’, ’ಕಾರಾಗೃಹದ ಹಾಡು’, ’ಆತ್ಮ ಕಥೆ’, ’ಕನಸಿನ ಭಾರತ’ ಅವರ ಶ್ರೇಷ್ಠ ಕೃತಿಗಳು ಮಿಗಿಲಾಗಿ ಈ ಮಾನವತಾವಾದಿಯ ಬದುಕೇ ಮಹಾಕಾವ್ಯ. ಬದುಕು ಮತ್ತು ಬರಹಗಳು ಸಮಸ್ಯೆ ಗೊಂದಲಗಳಿಗೆ ಮಾರ್ಗೋಪಾಯ ನೀಡಬೇ ಕೆಂದರು. ಬಡವರ, ಶೋಷಿತರ, ನತದೃಷ್ಟರ, ನೊಂದವರ ಹಾಗೂ ತಿರಸ್ಕರಿಸಲ್ಪಟ್ಟವರ ಒಳಗೆ ಮಾನವೀಯ ಅನುಕಂಪವನ್ನು ಸೂಸಿ ದಲಿತೋದ್ಧಾರಕ ರಾದರು. ‘ಆಕಾಶಕ್ಕೆ ಆಕಾಶವೇ ಹೋಲಿಕೆ’. ಸ್ವಾತಂತ್ರ್ಯ ಸಂಗ್ರಾಮದ ದಲಿತೋದ್ಧಾರಕ, ಪವಾಡ ಪುರುಷರಾದ ಗಾಂಧೀಜಿಯವರನ್ನು ಹೋಲಿಸಲು ಇನ್ನೊಬ್ಬ ಗಾಂಧಿಯನ್ನು ತರಲು ಸಾಧ್ಯವೇ? ಇಲ್ಲಿ ಗಾಂಧೀಜಿಯವರು ಉಪದೇಶಿಸಿ ಕಾರ್ಯರೂಪದಲ್ಲಿ ಅಳವಡಿಸಿಕೊಂಡು ಮಾರ್ಗದರ್ಶನ ಮಾಡಿದ ಕೆಲವೇ ಕೆಲವು ನುಡಿ ಮುತ್ತುಗಳು ಹೀಗಿವೆ: ‘ಕಷ್ಟದ ಜೀವನ ಶಿಸ್ತಿನ ಪಾಠವನ್ನು ಕಲಿಸುತ್ತದೆ’.

‘ಜೀವನ ಸೇವೆಗಾಗಿ, ಭೋಗಕ್ಕಾಗಿ ಅಲ್ಲ’. ‘ಸತ್ಯವು ಶಾಂತಿಗಿಂತಲೂ ಹಿರಿದಾದದ್ದು’. ‘ಚಿಕ್ಕ ಸುಳ್ಳು ಮನುಷ್ಯನನ್ನೇ ನಾಶ ಮಾಡುವುದು’. ‘ಉತ್ತಮ ಜೀವನವೂ ಒಂದು ಕಲೆ’. ‘ಗೆಳೆತನವು ಕಳೆದುಕೊಳ್ಳಬಾರದಂತಹ ಒಂದು ನಿಧಿ’. ‘ಜೀವನವು ಒಂದು ಕಲೆ, ಅದು ಎಲ್ಲಾ ಕಲೆಗಿಂತಲೂ ಹಿರಿದಾದದ್ದು’. ‘ಸತ್ಯವೇ ದೇವರು’. ’ಒಳ್ಳೆಯ ನಾಲಿಗೆ ಅನೇಕ ಗಾಯಗಳನ್ನು ವಾಸಿ ಮಾಡುತ್ತದೆ’. ‘ನೀರಿನಲ್ಲಿ ಮುಳುಗಿ ಸತ್ತವರಿಗಿಂತಲೂ ಮದ್ಯಪಾನದಲ್ಲಿ ಮುಳುಗಿ ಸತ್ತವರು ಹೆಚ್ಚು ಜನ’. ‘ವಿದ್ಯಾರ್ಥಿಗಳು ನಮ್ಮ ನಾಡಿನ ಆಶ್ರಯದಾತರು ಮತ್ತು ದೇಶದ ಭಾವೀ ಸಂಪತ್ತು’.

1948ರ ಜನವರಿ 31ರಂದು ಗಾಂಧೀಜಿಯವರ ಅಂತ್ಯ ಸಂಸ್ಕಾರದ ದಿನವಾಗಿತ್ತು. ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ 55 ರಾಷ್ಟ್ರಗಳ ಧ್ವಜಗಳು ಅರ್ಧಮಟ್ಟ ದಲ್ಲಿ ಹಾರಿಸಿದವು. ಅದು ಯಾವುದೇ ಸಂಪತ್ತು, ಅಧಿಕಾರವಲ್ಲದೆ ಸತ್ಯ, ಅಹಿಂಸೆ, ಸರಳತೆಯ ಮಾರ್ಗದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ರೂವಾರಿ, ಬಾಪು, ಮಹಾತ್ಮ, ರಾಷ್ಟ್ರಪಿತನಿಗೆ ಸಂದ ಶೃದ್ಧಾಂಜಲಿ, ಗೌರವ ಮತ್ತು ಕೃತಜ್ಞತಾಪೂರ್ವಕ ನಮನವಾಗಿತ್ತು. ಗಾಂಧೀಜಿ ಭಾರತದ ರಾಷ್ಟ್ರಪಿತ ಮಾತ್ರವಲ್ಲ ವಿಶ್ವ ವಂದ್ಯರು ಗಾಂಧಿ!!