Thursday, 12th December 2024

ಬದುಕು ಎಲ್ಲೆಲ್ಲಿಗೋ ಕರೆದುಕೊಂಡು ಹೋಗುತ್ತದೆ, ಹೋಗುತ್ತಿರಬೇಕಷ್ಟೇ !

ನೂರೆಂಟು ವಿಶ್ವ

vbhat@me.com

ಜೀವನ ನಮ್ಮನ್ನು ಎಲ್ಲಾ ಕರೆದುಕೊಂಡು ಹೋಗು ತ್ತದೆ. ಯಾವುದೋ ತಿರುವಿನಲ್ಲಿ ಏಕಾಂಗಿಯಾಗಿ ಬಿಟ್ಟು, ಅವೆಷ್ಟೋ ದಿನಗಳ ನಂತರ, ಪುನಃ ಭೇಟಿಯಾಗಿ ನಾವು ಊಹಿಸಿರದ ತಾಣದಲ್ಲಿ ತಂದು ಬಿಟ್ಟು ಹೋಗುತ್ತದೆ. ಈ ಜನ್ಮದಲ್ಲಿ ಅಲ್ಲಿಗೂ ಹೋಗುವುದಿಲ್ಲ ಎಂದು ನಿರ್ಧರಿಸಿದ ಕಡೆಗಳಲ್ಲ ಕೈ ಹಿಡಿದು ಸುತ್ತಿಸಿರುತ್ತದೆ. ಅದು ಬದುಕಿನ ಪಲ್ಲಟಗಳು.

ಜೀವನದಲ್ಲಿ ನಾವು ಮಾಡಿದ ಕೆಲಸಗಳನ್ನು ಈಗ ನೆನಪಿಸಿಕೊಂಡರೆ, ಒಮ್ಮೊಮ್ಮೆ ನಮಗೇ ನಗು ಬರುತ್ತದೆ. ಇದು ನನ್ನೊಬ್ಬನ ಅನುಭವವಲ್ಲ. ಪ್ರತಿಯೊಬ್ಬರ ಜೀವನದಲ್ಲೂ ಅಂಥ ಘಳಿಗೆಗಳು ಹಾದು ಹೋಗಿರುತ್ತವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಕಾಲಕ್ಕೆ ನಾನು ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದೆ ಎಂಬುದನ್ನು ಈಗ ನೆನಪಿಸಿಕೊಂಡರೆ, ನಗು ಬರಬಹುದು ಅಥವಾ ಒಂದು ಕಾಲಕ್ಕೆ, ಅಮೆರಿಕ ಅಧ್ಯಕ್ಷರ ನಿವಾಸ ವೈಟ್ ಹೌಸ್ ಮುಂದೆ ನಿಂತು ತೆಗೆಸಿಕೊಂಡ ಫೋಟೋವನ್ನು ಈಗ ನೋಡಿದರೂ ನಗು ಬರಬಹುದು.

ಈಗ ಮೋದಿಯವರು ಅಲ್ಲಿಗೆ ಹೋದರೆ, ಅಮೆರಿಕದ ಅಧ್ಯಕ್ಷರು ತಮ್ಮ ನಿವಾಸದ ಮುಂದೆ ನಿಂತು, ರತ್ನಗಂಬಳಿ ಹಾಸಿ ಸ್ವಾಗತಿಸುತ್ತಾರೆ. ತಮ್ಮ ಓವಲ್ ಆಫೀಸಿನ ತನಕ ಕೈ ಹಿಡಿದು ಕರೆದುಕೊಂಡು ಹೋಗುತ್ತಾರೆ. ಮೊನ್ನೆ ಜರ್ಮನಿಯಲ್ಲಿ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮೋದಿಯವರನ್ನು ಹುಡುಕಿಕೊಂಡು ಬಂದು ಮಾತಾಡಿಸಿ ಹೋಗಿದ್ದನ್ನು ನೆನಪಿಸಿಕೊಳ್ಳಿ. ಹತ್ತು ವರ್ಷಗಳ ಕಾಲ, ಅಮೆರಿಕಕ್ಕೆ ಭಾರತದಿಂದ ಲಕ್ಷಾಂತರ ಜನ ಹೋಗಿ ಬಂದಿರಬಹುದು. ಆದರೆ ಅಲ್ಲಿನ ಸರಕಾರ ಮೋದಿಯವರಿಗೆ ವೀಸಾವನ್ನೇ ಕೊಟ್ಟಿರಲಿಲ್ಲ. ಹೀಗಾಗಿ ಅವರಿಗೆ ಆ ದೇಶಕ್ಕೆ ಒಬ್ಬ ಮುಖ್ಯಮಂತ್ರಿಯಾಗಿ, ಹೋಗಲೂ ಆಗಿರಲಿಲ್ಲ.

ಆದರೆ ಈಗ? ಇದೇ ಮೋದಿ, ತಮ್ಮ ರಾಜ್ಯವಾದ ಗುಜರಾತಿಗೆ ಐದು ವರ್ಷಗಳ ಕಾಲ ಕಾಲಿಡಲು ಆಗಿರಲಿಲ್ಲ. ಆಗ ಕೇಶುಭಾಯ್
ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಅವರು ಬಿಜೆಪಿ ಹೈಕಮಾಂಡನ್ನು ವಿನಂತಿಸಿಕೊಂಡಿದ್ದರು, ಯಾವ ಕಾರಣಕ್ಕೂ ಮೋದಿ ಗುಜರಾ ತಿಗೆ ಕಾಲಿಡಕೂಡದು ಎಂದು. ಆಗ ಮೋದಿಯವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಆ ಹುದ್ದೆಯಲ್ಲಿದ್ದು ಅವರು ದೇಶವ್ಯಾಪಿ ಸಂಚರಿಸಬೇಕಿತ್ತು, ಗುಜರಾತನ್ನು ಹೊರತುಪಡಿಸಿ. ಕೇಶುಭಾಯಿ ಪಟೇಲ್‌ಗೆ ಮೋದಿಯವರ ಹೆಸರನ್ನು ಹೇಳಿದರೆ
ಆಗುತ್ತಿರ ಲಿಲ್ಲ. ಪಟೇಲ್ ಒತ್ತಡಕ್ಕೆ ಮಣಿದು ಗುಜರಾತಿಗೆ ಕಾಲಿಡದಂತೆ, ಬಿಜೆಪಿ ಹೈಕಮಾಂಡ್ ಮೋದಿಯವರಿಗೆ ಸೂಚಿಸಿತು. ಅವರು ಐದು ವರ್ಷಗಳ ಕಾಲ ತಮ್ಮ ತವರು ರಾಜ್ಯದ ಕಡೆ ಮುಖ ಮಾಡಲಿಲ್ಲ.

ನಂತರ ಆ ರಾಜ್ಯಕ್ಕೆ ಅವರು ಕಾಲಿಟ್ಟಿದ್ದು ಮುಖ್ಯಮಂತ್ರಿಯಾಗಿ! ಒಮ್ಮೊಮ್ಮೆ ಗತಿಸಿ ಹೋದ ದಿನಗಳನ್ನು ಮೆಲುಕು ಹಾಕಿದರೆ, ನಗು ಬರುತ್ತದೆ. ಇವೆ ನಿಜವಾ ಎನಿಸುತ್ತದೆ. ಅವನ್ನೆ ಅನುಭವಿಸಿದ್ದು ನಾನೇನಾ, ಯಾಕಾಗಿ ಹಾಗೆ ಮಾಡಿದೆ ಎಂದು ನಮ್ಮ ಬಗ್ಗೆಯೇ ಖುಷಿ, ಅಚ್ಚರಿ, ವಿಷಾದ, ಮೆಚ್ಚುಗೆ, ಸಂತಸವಾಗುತ್ತದೆ. ಕೆಲವೊಮ್ಮೆ ತಮಾಷೆಯೆನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಒಂದಿಂದು ವಿಧದಲ್ಲಿ
ಇಂಥ ಹಂತಗಳನ್ನು, ಅನುಭವಗಳನ್ನು ದಾಟಿಯೇ ಬಂದಿರುತ್ತಾನೆ. ಹಾಗೆ ನೋಡಿದರೆ, ಅಂಥ ಅನುಭವಗಳೇ ನಮ್ಮನ್ನು ಗಟ್ಟಿಗೊಳಿಸಿ, ಈಗಿರುವ ಸ್ಥಿತಿಯಲ್ಲಿ ನಿಲ್ಲಿಸಿರುತ್ತವೆ. ನಟಿ ಐಶ್ವರ್ಯ ರೈ ಮೊದಲ ಬಾರಿಗೆ ಮುಂಬೈಗೆ ಹೋದಾಗ, ಒಂದು ರೂಮಿನ ಚಿಕ್ಕ ಕೋಣೆಯಲ್ಲಿ ಉಳಿದುಕೊಂಡಿದ್ದರಂತೆ.

ಆ ಕೋಣೆಯಲ್ಲಿ ನಾಲ್ವರು ಮಲಗುತ್ತಿದ್ದರಂತೆ. ಮುಂದೊಂದು ದಿನ ತಾನು ಅಂದೇ ಸ್ಟಾರ್ ನಟರಾಗಿದ್ದ ಅಮಿತಾಬ್ ಬಚ್ಚನ್ ಮನೆಗೆ ಸೊಸೆಯಾಗಿ ಹೋಗುತ್ತೇನೆ ಎಂದು ಕನಸು- ಮನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ. ಜೀವನ ನಮ್ಮನ್ನು ಎಲ್ಲಾ ಕರೆದುಕೊಂಡು ಹೋಗುತ್ತದೆ. ಯಾವುದೋ ತಿರುವಿನಲ್ಲಿ ಏಕಾಂಗಿಯಾಗಿ ಬಿಟ್ಟು, ಅವೆಷ್ಟೋ ದಿನಗಳ ನಂತರ, ಪುನಃ ಭೇಟಿಯಾಗಿ ನಾವು ಊಹಿಸಿರದ ತಾಣದಲ್ಲಿ ತಂದು ಬಿಟ್ಟು ಹೋಗುತ್ತದೆ. ಈ ಜನ್ಮದಲ್ಲಿ ಅಲ್ಲಿಗೂ ಹೋಗುವುದಿಲ್ಲ ಎಂದು ನಿರ್ಧರಿಸಿದ ಕಡೆಗಳಲ್ಲ ಕೈ ಹಿಡಿದು ಸುತ್ತಿಸಿರು ತ್ತದೆ.

ನಾವು ಯಾರನ್ನು ಭೇಟಿ ಮಾಡಬಾರದೋ, ಮುಖ ನೋಡಬಾರದೋ ಎಂದುಕೊಂಡಿರುತ್ತೇವಲ್ಲ ಅಂಥವರ ಜತೆಗೇ ಜೀವನವಿಡೀ ಒಟ್ಟಿಗೆ ಇರುವಂತೆ ಸಂಬಂಧ ಬೆಸದು ಕಟ್ಟಿ ಹಾಕುತ್ತದೆ. ಅದು ಬದುಕಿನ ಪಲ್ಲಟಗಳು. ಎಲ್ಲವನ್ನೂ ನಾನೇ ನಿರ್ಧರಿಸುತ್ತೇನೆ, ನನ್ನ ಅಣತಿಯಂತೆ ನಡೆಯುತ್ತದೆ ಎಂದು ಭಾವಿಸುವಂತಿಲ್ಲ. ನಮ್ಮ ಜೀವನ ನಮ್ಮ ಜತೆಗೇ ಪೈಪೋಟಿಗೆ, ಜಿದ್ದಿಗೆ ಬಿದ್ದಿರುತ್ತದೆ. ಒಮ್ಮೊಮ್ಮೆ ಸೋಲುತ್ತೇವೆ, ಒಮ್ಮೊಮ್ಮೆ ಗೆಲ್ಲುತ್ತೇವೆ.

ಗೆದ್ದೂ ಸೋಲುತ್ತೇವೆ. ಸೋತೂ ಗೆಲ್ಲುತ್ತೇವೆ. ಇಷ್ಟೇ, ಜೀವನ ನಮ್ಮನ್ನು ಎಲ್ಲಿ ಕರೆದುಕೊಂಡು ಹೋಗುವುದೋ, ಅಲ್ಲಿ ಗೆಲ್ಲ ಹೋಗಲು ಸಿದ್ಧವಾಗಿರಬೇಕು. ಯಾವತ್ತೂ ಗಂಟು- ಮೂಟೆ ಕಟ್ಟಿಕೊಂಡು ಸಿದ್ಧವಾಗಿರಬೇಕು. ಇಲ್ಲ, ನಾನು ಬರೊಲ್ಲ, ಇಲ್ಲೇ ಇರ್ತೇನೆ ಎಂದು ಹೇಳುವಂತಿಲ್ಲ. ಕಾರಣ ಬದುಕಿನ ಮುಂದಿನ ದಾರಿ ಯಾವುದೋ, ಬಲ್ಲವರಾರು? ಬದುಕಿನ ಸ್ಕೀಮ್ ಏನಿದೆಯೋ ಯಾರಿಗೆ ಗೊತ್ತು?
ಮೂವತ್ಮೂರು ವರ್ಷಗಳ ಹಿಂದೆ, ನಾನು ಬೆಂಗಳೂರಿಗೆ ಬಂದಾಗ, ಎಂಎಸ್ಸಿ ಜತೆಗೆ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಹೆಗಲಿಗೆ ನೇತು ಹಾಕಿಕೊಂಡು ಬಂದರೂ, ಎಂಟು ತಿಂಗಳು ನಿರುದ್ಯೋಗಿಯಾಗಿ ಅಲೆದಾಡುತ್ತಿದ್ದೆ.

ಪ್ರತಿ ದಿನ ಇಂಡಿಯನ್ ಎಕ್ಸ್ ಪ್ರೆಸ್ ಕಟ್ಟಡದಲ್ಲಿದ್ದ ‘ಕನ್ನಡ ಪ್ರಭ’ ಮತ್ತು ‘ಪ್ರಜಾವಾಣಿ’ ಕಚೇರಿಯ ಮುಂದೆ ಉಗುರು ಕಡಿಯುತ್ತಾ ನಿಂತಿರುತ್ತಿದ್ದೆ. ಆಗಾಗ ರೆಸಿಡೆನ್ಸಿ ರಸ್ತೆಯಲ್ಲಿರುವ ‘ಸಂಯುಕ್ತ ಕರ್ನಾಟಕ’ ಕಚೇರಿಗೆ ಎಡತಾಕಿ ಬರುತ್ತಿದ್ದೆ. ಎಲ್ಲಾ ಕಡೆಗಳಲ್ಲಿ ಅರ್ಜಿ
ಹಾಕಿದ್ದರೂ, ಒಂದೇ ಒಂದು ಕಡೆಯಿಂದ ಸಂದರ್ಶನಕ್ಕೆ ಕರೆ ಬಂದಿರಲಿಲ್ಲ. ಒಲ್ಲದ ಮನಸ್ಸಿನಿಂದ, ಬೇರೆ ದಾರಿ ಕಾಣದೇ ‘ಸಂಜೆವಾಣಿ’ ಪತ್ರಿಕೆಯ ಬಾಗಿಲು ಬಡಿದಾಗ, ಅಲ್ಲಿಯೂ ಕೆಲಸ ನಿರಾಕರಿಸಿಬಿಟ್ಟರು.

ಆಗ ಮಣಿ ಅವರು ಆ ‘ಸಂಜೆವಾಣಿ’ ಪತ್ರಿಕೆಯ ಮಾಲೀಕರೂ ಮತ್ತು ಸಂಪಾದಕರಾದರೂ ಆಗಿದ್ದರು, ಸಂಪಾದಕೀಯ ವಿಭಾಗವನ್ನು ನಿವಾಸ್ ಎಂಬುವವರು ನೋಡಿ ಕೊಳ್ಳುತ್ತಿದ್ದರು. ಅವರ ಮುಂದೆ ನಾನು ಆಗಲೇ ಬರೆದ ಇನ್ನೂರಕ್ಕೂ ಹೆಚ್ಚು ಲೇಖನ, ಪದವಿಪತ್ರ, ಬಂಗಾರದ ಪದಕಗಳನ್ನು ಹರವಿ ಇಟ್ಟಾಗ, ಅವರಿಗೆ ಏನನಿಸಿತೋ ಏನೋ, ‘ನೀನು ನಮ್ಮ ಪತ್ರಿಕೆಗೆ ಲಾಯಕ್ಕಾದವನಲ್ಲ’ ಎಂದು
ಹೇಳಿಬಿಟ್ಟರು. ಪ್ರಾಯಶಃ ನಾನು over qualified ಎಂದು ಭಾವಿಸಿದರಾ, ಗೊತ್ತಿಲ್ಲ. ಅಷ್ಟಾದರೂ ನಾನು ಸುಮ್ಮ ನಾಗಲಿಲ್ಲ. ಹದಿನೈದು ದಿನ ಬಿಟ್ಟು, ಮತ್ತೆ ‘ಸಂಜೆವಾಣಿ’ ಕಚೇರಿಯ ಮುಂದೆ ನಿಂತಾಗ, ಅದೇ ನಿವಾಸ್, ‘ಸದ್ಯ ನಮ್ಮಲ್ಲಿ ಹುದ್ದೆ ಖಾಲಿ ಇಲ್ಲ.

ಖಾಲಿಯಾದಾಗ ತಿಳಿಸುತ್ತೇನೆ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರು. ನನಗೆ ಆಗ ತೀರಾ ಒಂದು ನೌಕರಿಯ ಅಗತ್ಯವಿತ್ತು. ಬೆಂಗ
ಳೂರಿನಲ್ಲಿ ದಿನ ದೂಡುವುದು ಕಷ್ಟವಾಗಿತ್ತು. ಮನೆಯಿಂದ ತಂದ ಹಣವೆ ಬರಿದಾಗಿತ್ತು. ಅಪ್ಪನ ಮುಂದೆ ಕೈಯೊಡ್ಡಲು ಸ್ವಾಭಿಮಾನ ಅಡ್ಡಿಯಾಗುತ್ತಿತ್ತು. ದೈನಂದಿನ ಖರ್ಚಿಗೆ ಸ್ನೇಹಿತರಿಂದ ಸಾಲ ಮಾಡಿದ್ದೆ. ಬೆಳಗಾದರೆ ನೌಕರಿಗೆ ಹುಡುಕಾಟ. ನಾನು ಉಳಿದುಕೊಂಡ ಚಾಮರಾಜಪೇಟೆಯಿಂದ ಮೆಜೆಸ್ಟಿಕ್‌ಗೆ ಬಸ್ ಛಾರ್ಜ್ ಐವತ್ತು ಪೈಸೆ. ಅದನ್ನು ಉಳಿಸಲು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆ.

ಈ ಮಧ್ಯೆ ಒಂದು ದಿನ ಬೆಳಗಿನ ಏಳು ಗಂಟೆಗೆ ವೈಎನ್ಕೆ ಮನೆಯ ಬಾಗಿಲನ್ನು ಬಡಿದೆ. ಅವರು ಆಗ ತಾನೇ ‘ಕನ್ನಡಪ್ರಭ’ಕ್ಕೆ ಸಂಪಾದಕ ರಾಗಿ ನೇಮಕವಾಗಿದ್ದರು. ವೈಎನ್ಕೆ ಅವರು ಬೆಳಗ್ಗೆ ಎಂಟಕ್ಕಿಂತ ಮುಂಚೆ ಏಳುವವರಲ್ಲ. ನಾನು ಬಾಗಿಲು ಬಡಿದಾಗ, ಕಣ್ಣುಜ್ಜುತ್ತಲೇ ಬಂದ ಅವರು, ನನ್ನನ್ನು ನೋಡುತ್ತಿದ್ದಂತೆ ಜೋರಾಗಿ ಗದರಿಬಿಟ್ಟರು. ‘ಗೋ.. ಗೋ…ನಾನ್ಸೆ …ನಾನ್ಸೆ … ನೌಕರಿ ಕಂತೆ…ಗೋ..ಗೋ.. ’ ಎಂದು ‘ಹಚ್ಯಾ’ ಅಂತ ಅಟ್ಟಿಬಿಟ್ಟರು!

ನಾನು ನನ್ನ ಬಗ್ಗೆ ಹೇಳಲು ಅವಕಾಶವನ್ನೇ ಕೊಡಲಿಲ್ಲ. ಅವರು ಅಷ್ಟು ಒರಟು ವ್ಯಕ್ತಿತ್ವದವರಿದ್ದಿರಬಹುದು ಎಂದು ನಾನು ಊಹಿಸಿರಲೂ ಇಲ್ಲ. ನನಗೇನು ಗೊತ್ತು, ಅವರು ಪ್ರತಿದಿನ ರಾತ್ರಿ ಗುಂಡು ಹಾಕುತ್ತಾರೆ ಮತ್ತು ತಡವಾಗಿ ಏಳುತ್ತಾರೆ ಎಂಬುದು. ಸಂಪಾದಕರೆಂದರೆ ಹತ್ತಾರು ಪತ್ರಿಕೆಗಳನ್ನು ಓದಲು ಬೆಳಗ್ಗೆ ಬೇಗ ಏಳುತ್ತಾರೆ ಎಂದು ಭಾವಿಸಿದ್ದೆ. ಅವರ ಮನೆಯ ಮುಂದೆ ಹಾಗೇ ಮೂರು ಗಂಟೆ ನಿಂತಿದ್ದೆ.
ಇನ್ನೇನು ಹೊರಬರುತ್ತಿದ್ದಂತೆ, ಧಾವಂತದಲ್ಲಿದ್ದಂತೆ ಕಂಡು ಬಂದ ಅವರು, ನನ್ನನ್ನು ನೋಡಿದರೂ ನೋಡದವರಂತೆ ನಿರ್ಗಮಿಸಿಬಿಟ್ಟರು. ಮತ್ತೆ ಅವರನ್ನು ಭೇಟಿ ಮಾಡಲು ಯಾಕೋ ಧೈರ್ಯವೇ ಸಾಕಾಗಲಿಲ್ಲ.

ಅದಾಗಿ ಕೆಲ ದಿನಗಳಲ್ಲಿ ಶಂಕರಪುರಂನ ರಂಗರಾವ್ ರಸ್ತೆಯಲ್ಲಿರುವ ರಾಧಾಕೃಷ್ಣ ಅಡಿಗರ ಇಡ್ಲಿ ಹೋಟೆಲಿನಲ್ಲಿ ಸಿಕ್ಕರೂ, ದೂರ ದಿಂದಲೇ ನೋಡಿ ಸುಮ್ಮನಾಗಿದ್ದೆ. ‘ಗೋ.. ಗೋ…ನಾನ್ಸೆ …ನಾನ್ಸೆ … ನೌಕರಿ ಬೇಕಂತೆ…ಗೋ..ಗೋ…’ ಎಂಬ ಅವರ ಮಾತುಗಳು ಪ್ರತಿಧ್ವನಿಸುತ್ತಿದ್ದವು. ನಂತರ ನಾನು ಅವರನ್ನು ಭೇಟಿ ಮಾಡಿದ್ದು, ಅವರು ‘ಕನ್ನಡಪ್ರಭ’ದಲ್ಲಿ ಟ್ರೇನಿ ಉಪಸಂಪಾದಕ ಕೆಲಸ ಕೊಟ್ಟಿದ್ದು, ನಾನು ಅವರಿಗೆ ಆತ್ಮೀಯನಾಗಿದ್ದು, ವಾರದಲ್ಲಿ ಐದು ದಿನ ವಾದರೂ ಅವರ ಜತೆ ಸುತ್ತುತ್ತಿದ್ದುದು,ಅವರ ಮನೆಗೆ ಆಗಾಗ ಹೋಗು ತ್ತಿದ್ದುದು, ಅಮೆರಿಕದಿಂದ ಬೆಂಗಳೂರಿಗೆ ಬರುವಾಗ ವಿಮಾನದಲ್ಲಿಯೇ ಅವರು ಹೃದಯಾಘಾತದಿಂದ ತೀರಿಕೊಂಡಾಗ, ಮುಂಬೈಗೆ ಹೋಗಿ ಅವರ ಪಾರ್ಥಿವ ಶರೀರವನ್ನು ತಂದಿದ್ದು, ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸುವ ತನಕ ನಮ್ಮ ಸಂಬಂಧ ಸಾಗಿ ಬಂದಿದ್ದು, ಅದಾಗಿ ಹನ್ನೆರಡು ವರ್ಷಗಳ ನಂತರ, ಅವರು ಸಂಪಾದಕರಾಗಿದ್ದ ‘ಕನ್ನಡಪ್ರಭ’ ಪತ್ರಿಕೆಗೆ ಐದು ವರ್ಷಗಳ ಕಾಲ ಪ್ರಧಾನ ಸಂಪಾದಕನಾಗಿದ್ದು… ಎಲ್ಲವನ್ನೂ ನೆನಪಿಸಿಕೊಂಡರೆ ನಗು ಬರುತ್ತದೆ.

‘ಸಂಜೆವಾಣಿ’ಯಲ್ಲೂ ಕೆಲಸ ಗಿಟ್ಟಿಸಿಕೊಳ್ಳಲು ವಿಫಲನಾದ ನಾನು, ಬೇರೆ ದಾರಿ ಕಾಣದೇ ಊರಿಗೆ ಹೋಗಲು ನಿರ್ಧರಿಸಿದ್ದೆ. ಕೊನೆಯ ಪ್ರಯತ್ನವಾಗಿ, ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಯತ್ನಿಸೋಣ ಎಂದು ನಿರ್ಧರಿಸಿದ್ದೆ. ಆ ಪತ್ರಿಕೆಯಲ್ಲೂ ಕೆಲಸ ಸಿಗದಿದ್ದರೆ ಅಥವಾ ಸಿಗುವುದು ವಿಳಂಬವಾಗಿದ್ದರೆ, ನಾನು ಪತ್ರಿಕೋದ್ಯಮಕ್ಕೆ ಶರಣು ಹೇಳಿ ಊರಿನ ಬಸ್ ಹತ್ತುತ್ತಿದ್ದೆ. ಆಗ ಕೆಲಸ ಕೊಟ್ಟವರು ಶಾಮರಾ ಯರು. ಅದೂ ಒಂದು ವಿಚಿತ್ರ ಸನ್ನಿವೇಶ. ನಾನು ‘ಸಂಯುಕ್ತ ಕರ್ನಾಟಕ’ ಕಚೇರಿಗೆ ಹೋದಾಗ, ಮಧ್ಯಾಹ್ನ ಒಂದೂವರೆ ಗಂಟೆ.

ರಾಯರು ಬೆಳಗಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಮನೆಗೆ ಹೊರಟಿದ್ದರು. ಹೊರಡಲು ಪೋರ್ಟಿಕೋದಲ್ಲಿ ಕಾರು ನಿಂತಿತ್ತು. ಎದುರಿಗೆ ಶಾಮರಾಯರೇ ಧುತ್ತೆಂದು ಪ್ರತ್ಯಕ್ಷರಾಗಿ ಬಿಟ್ಟರು! ನನಗೆ ಅವರೇ ಶಾಮರಾಯರು ಎಂಬುದೂ ಗೊತ್ತಿರಲಿಲ್ಲ. ನನ್ನನ್ನು ನೋಡಿದವರೇ, ‘ಯಾಕ್ ಬಂದೀ ಇಲ್ಲಿ?’ ಎಂದು ಏರಿದ ದನಿಯಲ್ಲಿ ಕೇಳಿದರು. ‘ಸರ್..ಸರ್.. ಶಾಮರಾಯರನ್ನು ನೋಡಬೇಕಿತ್ತು’ ಎಂದೆ. ಆ ಮಾತನ್ನು
ಕೇಳುತ್ತಿದ್ದಂತೆ ಅವರು ನನ್ನನ್ನು ಕ್ಯಾಕರಿಸಿ ನೋಡಿದರು.

ಬಾಯಿಂದ ಬೆಂಕಿ ಹೊರಹೊಮ್ಮುವುದೊಂದು ಬಾಕಿ. ಹಾಗಿತ್ತು ಅವರ ಪ್ರತಿಕ್ರಿಯೆ. ನನ್ನನ್ನೇ ನೋಡದವನಿಗೆ, ಗುರುತಿಸದವನಿಗೆ ನನ್ನ ಪತ್ರಿಕೆಯಲ್ಲಿ ಕೆಲಸ ಕೊಡಬೇಕಾ? ಈತ ಯಾವ ಸೀಮೆ ಪತ್ರಕರ್ತನಾಗಬಹುದು? ಎಂದು ಅವರಿಗೆ ಅನಿಸಿರಬೇಕು.

‘ಹೋ..ಗೂoooo…’ ಎಂದು ಗದರಿಬಿಟ್ಟರು. ನಾನು ‘ಸರ್…ಸರ್..’ ಎಂದು ಹೇಳುವಷ್ಟರಲ್ಲಿ ಕಾರನ್ನೇರಿ ಹೊರಟು ಬಿಟ್ಟರು. ನಾನು ಅವರ ಕಾರಿನ ಹೊಗೆಯನ್ನು ದಿಟ್ಟಿಸುತ್ತಿದ್ದೆ. ‘ಏನ್ರೀ ಶಾಮರಾಯರು ಯಾರು ಎಂಬುದು ಗೊತ್ತಿಲ್ಲವಾ? ಅವರ ಪತ್ರಿಕೆಯಲ್ಲಿ ಕೆಲಸ
ಕೇಳಲು ಬಂದಿದ್ದೀರಲ್ಲ? ಶಾಮರಾಯರು ಯಾರೆಂಬುದು ಗೊತ್ತಿಲ್ಲದ ನಿಮಗೆ ಅವರು ಕೆಲಸ ಕೊಡ್ತಾರೇನ್ರೀ? ಕಾಮನ್ ಸೆನ್ಸ್ ಇರಬೇಕ್ರೀ’ ಎಂದು ರಾಯರನ್ನು ಕಳುಹಿಸಲು ಬಂದಿದ್ದ ಆಫೀಸ್ ಬಾಯ್ ನನಗೆ ತಿವಿದ. ಅಲ್ಲಿಗೆ ‘ಸಂಯುಕ್ತ ಕರ್ನಾಟಕ’ದಲ್ಲೂ ನೌಕರಿ ಗಿಟ್ಟಿಸಿಕೊಳ್ಳುವ ನನ್ನ ಕೊನೆ ಆಸೆಗೆ ಎಳ್ಳು-ನೀರು ಬಿಟ್ಟಿದ್ದೆ!

ಕೆಲ ದಿನಗಳ ನಂತರ ನಾನು ‘ಸಂಯುಕ್ತ ಕರ್ನಾಟಕ’ ಸೇರಿದ್ದು, ರಾಯರ ವಿಶ್ವಾಸ ಗಳಿಸಿ ಅವರಿಗೆ ಪ್ರೀತಿಪಾತ್ರನಾಗಿದ್ದು, ಆಗಾಗ ತಮ್ಮ ಮನೆಗೆ ಕರೆಯಿಸಿಕೊಂಡು ಹೊಚ್ಚ ಹೊಸ ಪುಸ್ತಕ ಕೊಟ್ಟಿದ್ದು, ವಿದೇಶಗಳ ಪತ್ರಿಕೆಗಳನ್ನು ತಂದು ಕೊಟ್ಟು ಓದುವಂತೆ ಹೇಳುತ್ತಿದ್ದುದು, ರಾಯರಿಗೆ ಟೀಯೆಸ್ಸಾರ್ ಪ್ರಶಸ್ತಿ ಬಂದಾಗ ‘ಯವನಿಕಾ’ದಲ್ಲಿ ನಡೆದ ಸಮಾರಂಭದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್ .ಪಟೇಲರಿದ್ದ ವೇದಿಕೆಯಲ್ಲಿ ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ಟ ಪತ್ರಿಕೋದ್ಯಮದಲ್ಲಿ ನನ್ನ ವಾರಸುದಾರರು ಎಂದು ಪ್ರಶಂಸಿಸಿದ್ದು, ಅನಿರೀಕ್ಷಿತ ಸನ್ನಿವೇಶದಲ್ಲಿ ಅವರನ್ನು ‘ಸಂಯುಕ್ತ ಕರ್ನಾಟಕ’ದಿಂದ ಹೊರ ಹಾಕಿದಾಗ, ಸುಮಾರು ಒಂದು ವರ್ಷ ಕಾಲ ನಾನು ವಾರದಲ್ಲಿ ಮೂರ್ನಾಲ್ಕು ದಿನ ಅವರ ಮನೆಗೆ ಹೋಗಿ ಬರುತ್ತಿದ್ದುದು, ನಂತರ ನಾನು ‘ವಿಜಯ ಕರ್ನಾಟಕ’ ಸಂಪಾದಕನಾದಾಗ ವಿಜಯ
ಸಂಕೇಶ್ವರ ಮತ್ತು ರಾಯರ ನಡುವೆ ಸಂಧಾನ ಮಾಡಿದ್ದು, ರಾಯರಿಂದ ‘ವಿಕ’ಗೆ ಅಂಕಣ ಬರೆಯಿಸಿದ್ದು… ಈ ಎಲ್ಲಾ ಘಟನಾವಳಿಗಳು ಸುರುಳಿ ಬಿಚ್ಚಿಕೊಂಡರೆ, ವಿಚಿತ್ರವೆನಿಸುತ್ತದೆ, ನಗು ಬರುತ್ತದೆ.

ಬದುಕು ಹೀಗೆ ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಎಲ್ಲವನ್ನೂ ನಾವೇ ಮಾಡುತ್ತೇವೆ, ನಿರ್ಧರಿಸುತ್ತೇವೆ ಎಂದು ಅಂದುಕೊಂಡಿರು ತ್ತೇವೆ. ಆದರೆ ಬಹುತೇಕ ಸಂದರ್ಭ ಗಳಲ್ಲಿ ಅವು ನಿಜಕ್ಕೂ ನಮ್ಮ ನಿರ್ಧಾರಗಳಾಗಿರುತ್ತವಾ, ಗೊತ್ತಿಲ್ಲ. ಆ ದಿನಗಳನ್ನು ಈಗ ನೆನಪಿಸಿ ಕೊಂಡರೆ, ಇವೆ ನನ್ನ ಜೀವನದ ನಡೆದಿದ್ದೇ ಎಂದೆನಿಸುತ್ತದೆ. ನಿಮ್ಮ ಬದುಕಿನ ಪುಟಗಳಲ್ಲೂ ಇಂಥವೇ ಘಟನೆಗಳಿರುತ್ತವೆ. ಆಗಾಗ ಮೆಲುಕು ಹಾಕಿ ಮುನ್ನಡೆಯುತ್ತಿರಬೇಕು. ಮುಂದೇನಿದೆಯೋ ಯಾರಿಗೆ ಗೊತ್ತು?!