Sunday, 15th December 2024

ಭಾವನೆ ಕಳಚಿದ ಬದುಕು, ಸಂವೇದನೆ ಸೋತ ನಾವು

ಶ್ವೇತ ಪತ್ರ

shwethabc@gmail.com

ಈ ಭೌತಿಕ ಮನಃಸ್ಥಿತಿಯಿಂದಾಗಿ ನಾವು ವೈಭೋಗದ ಕಡೆಗೆ ಮುಖ ಮಾಡುತ್ತಿದ್ದೇವೆಯೇ ವಿನಃ ನಮ್ಮ ಸಹಜೀವಿಗಳೆಡೆಗೆ, ಮನುಷತ್ವದ ಕಡೆಗೆ ಮುಖ ಮಾಡುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ಎಡೆ ಆತಂಕ, ಖಿನ್ನತೆಗಳು ಆವರಿಸಿವೆ. ನಮ್ಮೆಲ್ಲರ ಬದುಕು ನಿಧಾನವಾಗಿ ಅದರ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ಭೌತಿಕ ವಸ್ತುಗಳ ಒಡನಾಟಕ್ಕೆ ಬಿದ್ದವರ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿರುವುದು ಸಾಬೀತಾಗಿದೆ.

ಇತ್ತೀಚೆಗೆ ಕನ್ನಡದ ಖ್ಯಾತ ಸಾಹಿತಿ ಜೋಗಿ ಅವರ ಫೇಸ್ಬುಕ್ ಗೋಡೆಯ ಮೇಲೆ ಕಂಡ ಬರಹ ಇಂದು ನನ್ನ ಇವತ್ತಿನ ಅಂಕಣ ಬರಹಕ್ಕೆ ಪ್ರೇರಣೆಯಾದದ್ದು ಸುಳ್ಳಲ್ಲ. ‘ಅವನು ಹಲವಾರು ಅಪರಾಧಗಳಲ್ಲಿ ಭಾಗಿಯಾಗಿದ್ದ. ಅವನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿದಾಗ.
ನ್ಯಾಯಾಲಯ ಅವನನ್ನು ಕೇಳುತ್ತದೆ? ‘ನೀನು ಮಾಡಿರುವ ಯಾವ ಅಪರಾಧಕ್ಕೂ ಲಾಭದ ಉದ್ದೇಶ ಇರಲಿಲ್ಲ, ಮತ್ಯಾಕೆ ನೀನು ಅಪರಾಧ ಮಾಡುತ್ತಲೇ ಹೋದ್ವೆ ಏನು ಬೇಕಾಗಿತ್ತು ನಿನಗೆ?’. ಆತ ಉತ್ತರಿಸುತ್ತಾನೆ ‘ನನಗೆ ಒಂದು ಹಿಡಿ ಪ್ರೀತಿ ಬೇಕಾಗಿತ್ತು’!

ಕಾರ್ಪೊರೇಟ್ ಹಿಡಿತದ ಸಿಕ್ಕುಗಳಲ್ಲಿ ಬದುಕುತ್ತಿರುವ ನಮ್ಮೆಲ್ಲರಲ್ಲಿ ಮಾನವೀಯ ಮಿಡಿತಗಳು ಹಿನ್ನೆಲೆಗೆ ಸರಿಯುತ್ತಿರುವ ಈ ದಿನಗಳಲ್ಲಿ ಸಮಾಧಾನದ ಮನಸ್ಸು, ಪ್ರೀತಿ, ಆತ್ಮೀಯತೆ ಎಲ್ಲವಕ್ಕೂ ನಾಟಕಿಯ ಸ್ಪರ್ಶ. ಇಂದು ಆಪ್ತ ಸಲಹೆಗಾರರ ಬಳಿಗೆ ಬರುವವರ ಪೈಕಿ ನೂರಕ್ಕೆ ಎಂಬತ್ತು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಆ ಖಿನ್ನತೆಗೆ ಕಾರಣ ಇದೇ ಪ್ರೀತಿ, ಆತ್ಮೀಯತೆಯ ಅಭಾವ. ಎಲ್ಲರಲ್ಲೂ ಆಳದಲ್ಲಿ ಒಂಟಿ ಎಂಬ ಭಾವ. ಇನ್ನೊಂದು ಚೂರು ಪ್ರೀತಿ ಸಿಕ್ಕರೆ ಸಂತೋಷವಾಗಿರಬ ಎಂಬ ಆಸೆ. ವೃತ್ತಿ ಜೀವನ ಮತ್ತು ಏಕಾಂತ ನಮ್ಮೆಲ್ಲರನ್ನು ಕೊಲ್ಲುತ್ತಿದೆ. ಜತೆಗೆ ಈ ಹೊತ್ತು ನಾವೆಲ್ಲ ಮನುಷ್ಯರನ್ನು ಪ್ರೀತಿಸುವ ಬದಲು ವರ್ಚುವಲ್ ಜಗತ್ತನ್ನು ಆರಾಧಿಸಲು ಶುರುವಿಟ್ಟು ಕೊಂಡಿದ್ದೇವೆ.

ಮನಸ್ಸನ್ನು ಅರಳಿಸುವ ಹಾಗೂ ಮನೋವಿಕಾಸಕ್ಕೆ ಕಾರಣವಾಗಬಲ್ಲ ಎಲ್ಲ ಅಪೂರ್ವ ಸಂಗತಿಗಳು ಅರ್ಥ ಕಳೆದುಕೊಳ್ಳುತ್ತಿವೆ. ಪಕ್ಕದಲ್ಲಿ ಕೂತು ಏಳೆಂಟು ಗಂಟೆ ಒಟ್ಟಿಗೆ ಕೆಲಸ ಮಾಡುವ ಸಹೋದ್ಯೋಗಿಗಳನ್ನು, ಸ್ನೇಹಿತರನ್ನು ಅರ್ಥೈಸುವ ಸಂವೇದನೆ ಇಂದು ನಮ್ಮಲ್ಲಿ ಇಲ್ಲವಾಗಿದೆ. ಬದುಕು
ಭಾವನೆ ಕಳಚಿ ಬರಡಾಗಿದೆ. ಅಂತರಂಗವನ್ನು ಅರಿಯುವ ಅನುಸಂಧಾನಗಳಿಗೆ ಇಂದಿನ ಮೆಟೀರಿಯಲಿಸ್ಟಿಕ್ ಜಗತ್ತಿನಲ್ಲಿ ಜಾಗವೆಲ್ಲಿಂದ ಬರಬೇಕು? ಅನಿವಾರ್ಯಕ್ಕಷ್ಟೇ ಇಂದು ಸಂಬಂಧಗಳಿಗೆ ನಾವೆಲ್ಲ ಅಂಟಿಕೊಂಡು ಬದುಕುತ್ತಿದ್ದೇವೆ. ಆ ಸಂಬಂಧಗಳಿಗೆ ಸಂವೇದನೆಯ ಸ್ಪರ್ಶವೇ ಇಲ್ಲದಂತಾ ಗಿದೆ.

ಇನ್ನೊಬ್ಬರ ಕಾಲೊಳೆಯುವುದು, ಅವರು ಬಿದ್ದ ದ್ದನ್ನು ನೋಡಿ ಸಂಭ್ರಮಿಸುವುದು, ಮತ್ತೊಬ್ಬರನ್ನು ಅವ ಮಾನಿಸುವುದು, ಒಬ್ಬರ ಮೇಲೊಬ್ಬರು
ಹಗೆ ಸಾಽಸುತ್ತ ತಿರುಗುವುದು, ನನಗೆ ವಿಶ್ ಮಾಡಲಿಲ್ಲ, ನನ್ನನ್ನು ಒಲೈಸುವುದಿಲ್ಲ, ನನಗೆ ಗೌರವ ಕೊಡಲಿಲ್ಲ, ನನ್ನ ಮಾತು ಕೇಳಲಿಲ್ಲ… ಇದು ಇವತ್ತಿನ ಅಕ್ಷರಸ್ಥರ ಮನೋಧರ್ಮ. ಈ ನಮ್ಮ ಅಸೂಕ್ಷ್ಮ ಮನಃಸ್ಥಿತಿ ನಾವು ಬದುಕುತ್ತಿರುವ ಪರಿಸರವನ್ನು ಹತಾಶಗೊಳಿಸುತ್ತಿದೆ, ಮಂಕಾಗಿಸಿದೆ. ನಮ್ಮಲ್ಲಿ ಮತ್ತು ನಮ್ಮ ಬದುಕುಗಳಲ್ಲಿ ಇಂದು ಮಾನವೀಯ ಸ್ಪರ್ಶ ಸಾಮಾಜಿಕ ಕಾಳಜಿ ಇಣುಕುತ್ತಿಲ್ಲ.

ಏಕೆಂದರೆ ನಮ್ಮೆಲ್ಲ ಕ್ರಿಯೆ ಪ್ರಕ್ರಿಯೆಗಳ ನಡುವೆ ಸಮಾಜದ ಆರೋಗ್ಯದ ಕುರಿತಾದ ಎಚ್ಚರ ಕಾಳಜಿ ಕೆಲಸ ಮಾಡುತ್ತಿಲ್ಲ. ಬದುಕೊಂದು ಜೀವಸೆಲೆಯ ಹುಡುಕಾಟ ಅದು ಸಿಗದಿದ್ದಾಗ ಖಿನ್ನರಾಗುತ್ತೇವೆ. ನಿಜವಾದ ಸುಖವೆಂದರೆ ಆತ್ಮಸ್ಥ ಸುಖ ಮಾತ್ರ ಎನ್ನುತ್ತಾರೆ ರಮಣ ಮಹರ್ಷಿಗಳು. ನಿಜ ನಾವೆಲ್ಲ ಒಳ್ಳೆಯ ಮನುಷ್ಯರಾಗಲು ಹಾತೊರೆಯುವುದಕ್ಕಿಂತ ಒಳ್ಳೆಯ ವಿಷಯ ಪರಿಣಿತರಾಗಲು ಹಾತೊರೆಯುತ್ತಿದ್ದೇವೆ.

ಭಾವನೆಗಳಿಗಿಂತ, ಭಾವಕ್ಕಿಂತ, ಮನುಷ್ಯ ಸಹಜತೆಗಿಂತ, ಜೀವ ಕೊರತೆಗಿಂತ ಭೌತಿಕ ವಸ್ತುಗಳೊಡನೆ ನಮ್ಮ ಒಡನಾಟ ಹೆಚ್ಚಾಗಿದೆ. ಅದಕ್ಕೇ
ಹೇಳುವುದು ‘ಇಂದು ನಮ್ಮೆಲ್ಲರ ಮನೆ ತುಂಬಿದೆ; ಮನಸ್ಸು ಮಾತ್ರ ಖಾಲಿಯಾಗಿದೆ’ ಎಂದು. ಈ ಭೌತಿಕ ಮನಃಸ್ಥಿತಿಯಿಂದಾಗಿ ನಾವು ವೈಭೋಗದ ಕಡೆಗೆ ಮುಖ ಮಾಡುತ್ತಿದ್ದೇವೆಯೇ ವಿನಃ ನಮ್ಮ ಸಹಜೀವಿಗಳೆಡೆಗೆ, ಮನುಷತ್ವದ ಕಡೆಗೆ ಮುಖ ಮಾಡುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ಎಡೆ ಆತಂಕ, ಖಿನ್ನತೆಗಳು ಆವರಿಸಿವೆ. ನಮ್ಮೆಲ್ಲರ ಬದುಕು ನಿಧಾನವಾಗಿ ಅದರ ಅರ್ಥವನ್ನು ಕಳೆದುಕೊಳ್ಳುತ್ತಿದೆ.

ಸಂಶೋಧನೆಗಳ ವರದಿಯನ್ನು ಆಧರಿಸಿ ನೋಡಿದಾಗ ಈ ಭೌತಿಕ ವಸ್ತುಗಳ ಒಡನಾಟಕ್ಕೆ ಬಿದ್ದವರ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ತಲೆದೋರು ತ್ತಿರುವುದು ಸಾಬೀತಾಗಿದೆ. ಮೊನ್ನೆ ಹೀಗೆ ಮಾತನಾಡುವಾಗ ಸಹೋದ್ಯೋಗಿಯೊಬ್ಬರು ಹೇಳುತ್ತಿದ್ದರು-ನಾವು ಬೇರುಗಳಿಗೆ, ಜಾನಪದಕ್ಕೆ ಅಂಟಿಕೊಂಡು ಬದುಕಿದಷ್ಟೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಹಳ ಆರೋಗ್ಯವಾಗಿರುತ್ತೇವೆ. ಇದಕ್ಕೆ ಜೀವಂತ ಉದಾಹರಣೆ
ಎಂದರೆ ನಮ್ಮ ಚಂದ್ರಶೇಖರ ಕಂಬಾರರು. ಅವರು ಇವತ್ತಿಗೂ ಇಪ್ಪತ್ತರ ಹರೆಯದ ಹುಡುಗನಿಗೆ ಸರಿಸಮಾನವಾಗಿ ಸಿಹಿ ಸೇವಿಸುತ್ತಾರೆ. ಸಕ್ಕರೆ ಕಾಯಿಲೆಯಾಗಲಿ ಮತ್ತೊಂದಾಗಲಿ ಅವರಿಗಿಲ್ಲ. ಜಾನಪದದ ಬೇರು ಅವರನ್ನು ಅಷ್ಟು ಗಟ್ಟಿಯಾಗಿಸಿದೆ ಎಂದು.

ಜಾನಪದಕ್ಕಿರುವ ಶಕ್ತಿಯೇ ಅಂಥಹುದು. ಎಲ್ಲ ಮನಸ್ಸುಗಳನ್ನು ಒಗ್ಗೂಡಿಸುವ ಮಾನವೀಯ ಸಂವೇದನೆ ಅದು. ನಮ್ಮ ಸಮೃದ್ಧಿಯ ಗಟ್ಟಿತನ ಅರಿವಿಗೆ ಬರುವುದು ಸಹೃದಯರ ಸ್ಪಂದನಗಳಿಂದಲೇ. ಆದರಿಂದು ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಕುಟುಂಬಗಳಾಗಿವೆ. ಅದರ ಜತೆಗೆ
ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿದೆ. ಶಾಲೆಗೆ ಹೋಗುವುದು, ಜತೆಗೆ ಓದುವುದು ಸಾಮೂಹಿಕ ಕ್ರಿಯೆಯಾಗಿ ಉಳಿದಿಲ್ಲ. ಮಕ್ಕಳು ಕ್ಲಾಸು ಮುಗಿಯುತ್ತಿದ್ದಂತೆ ಮನೆಗೆ ಬರುತ್ತಾರೆ.

ಹೋಂವರ್ಕ್, ಟ್ಯೂಷನ್, ಕೋಡಿಂಗ್ ಹೀಗೆ ಇನ್ನಿತರ ಕ್ಲಾಸುಗಳ ಒತ್ತಡ ಅವರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿದೆ. ಸಮೂಹ-ಗುಂಪು-ಗೆಳೆತನ ಇವೆಲ್ಲದರ ಸವಿಯನ್ನು ಅಂಕಪಟ್ಟಿಯ ಹೊರೆ ನುಂಗಿ ಹಾಕಿದೆ. ನಮ್ಮ ವ್ಯಕ್ತಿತ್ವ ಚಿಂತನೆ, ವರ್ತನೆ ಪ್ರತಿದಿನ ಯಾರಾದರೊಬ್ಬರು ತಿದ್ದುಪಡಿಗೆ ಒಳಗಾಗುತ್ತಲೇ ಇರುತ್ತದೆ. ಇವತ್ತಿನ ಸಮಾಜದಲ್ಲಿ ನಮ್ಮೊಳಗಿನ ವೈಕಲ್ಯಗಳು ಎದುರುಗಿರುವವರು ಎತ್ತಿ ತೋರಿಸಲು ಪ್ರಯತ್ನಿಸು ತ್ತಲೇ ಇರುತ್ತಾರೆ.

ಪ್ರತಿವ್ಯಕ್ತಿಯಲ್ಲೂ ವ್ಯಕ್ತಿತ್ವದಲ್ಲೂ ಒಂದು ಊನ, ಒಂದು ನ್ಯೂನತೆ, ಒಂದು ಕೊರತೆ ಇದ್ದೇ ಇರುತ್ತದೆ. ಅದನ್ನು ಕೊನೆತನಕವು ಸರಿಪಡಿಸಿ ಕೊಳ್ಳುತ್ತ ದಿನದಿನಕ್ಕೂ ಪರಿಪೂರ್ಣತೆಯತ್ತ ಸಾಗಿ ಹೋಗುವುದೇ ಜೀವನ. ಈ ಪ್ರಜ್ಞೆ ಆಶ್ಚರ್ಯವೆನಿಸುವಷ್ಟು ನಮ್ಮೆದೆಯ ಆಳದಲ್ಲಿ ಇಳಿಯಬೇಕು. ದಿನಗಳೆದಂತೆ ಮನಸ್ಸಿನ ಓದು ಕಮ್ಮಿಯಾಗುತ್ತ ಪ್ರಭುತ್ವ ಮತ್ತು ಅಧಿಕಾರ ಕೇಂದ್ರೀಕೃತವಾಗುತ್ತಿದೆ. ನಾವೆಲ್ಲ ಮಾನಸಿಕವಾಗಿ ಇಕ್ಕಟ್ಟಿನ ಹಂತ ತಲುಪುತ್ತಿದ್ದೇವೆ. ಸಮಾಜದ ಪೂರ್ವಗ್ರಹಗಳಲ್ಲಿ ಬಂಧಿಯಾಗದೇ ಬಹುಜನ ಮುಖಿ ಸಾಧ್ಯತೆಯ ಕಡೆಗೆ ನಾವೆಲ್ಲ ಹೊರಳಬೇಕಾಗಿದೆ. ಇಂದು ನಮಗೆಲ್ಲ ಸಿಕ್ಕಿರುವ ಶಿಕ್ಷಣ ನಮ್ಮನ್ನು ಕೇವಲ ಮಹತ್ವಾಕಾಂಕ್ಷಿಗಳನ್ನಾಗಿಸಿ, ಸಾಧಕ ಹಠವನ್ನು ಹೊತ್ತು ತಿರುಗುವವರನ್ನಾಗಿ ಮಾಡುತ್ತಿದೆ.

ಇಂದು ನಾವ್ಯಾರೂ ಮಣ್ಣಿನಿಂದ ಅನ್ನ ಹುಟ್ಟಿಸಿ ಹೊಟ್ಟೆ ಹೊರೆಯ ಬೇಕಿಲ್ಲ. ಹಾಗಾಗಿ ಪ್ರಕೃತಿಯ ಸಂವೇದನೆಗಳಿಂದ ದೂರಸರಿದು ನಿಂತುಬಿಟ್ಟಿದ್ದೇವೆ.
೨೦ನೇಯ ಶತಮಾನವೆಂಬುದು ಎಲ್ಲ ಬಗೆಯಲ್ಲೂ ಸ್ಫೋಟಕ ಶತಮಾನವಾಗಿದೆ. ಶುದ್ಧ ವಿಜ್ಞಾನ ಕ್ಷೇತ್ರದಲ್ಲಿ ಹೇಗೋ ಹಾಗೆ ಅನ್ವಯಿಕ ಕ್ಷೇತ್ರಗಳಾದ ತಂತ್ರಜ್ಞಾನ ಮತ್ತು ಯಂತ್ರ ನಿರ್ಮಾಣದದ ತ್ವರಿತ ಪ್ರಗತಿಯಿಂದಾಗಿ ಅನೇಕ ಭೋಗೋತ್ಪನ್ನಗಳ ಜತೆ ಅಣುಬಾಂಬು ಕೂಡ ತಯಾರಾಗಿ ರಾಷ್ಟ್ರ ರಾಷ್ಟ್ರಗಳ ಗೋಧಾಮನ್ನು ಇಂದು ಸೇರಿಬಿಟ್ಟಿದೆ.

ಬಿಡುಗಡೆಯ ಹೊಸ ಬೆಳಕಿನಂತೆ ಮೊದಲು ಕಂಡಿದ್ದ ವಿಜ್ಞಾನವು ಭೋಗ ವಿಜ್ಞಾನವಾಗಿ, ವಿನಾಶ ವಿಜ್ಞಾನವಾಗಿ ಮನುಕುಲವನ್ನು ಶೀಘ್ರ ಪತನದ ಹಾದಿಯಲ್ಲಿ ಕೊಂಡೊಯಯ್ದಿತು. ಅಲ್ಲಿಂದೀಚೆಗೆ ೨೧ನೆಯ ಶತಮಾನದಲ್ಲಿ ಅಣು ಬಾಂಬಿನ ಸದ್ದಿಗಿಂತ ಹೆಚ್ಚಾಗಿ ನೋಟೆಂಬ ಬಾಂಬು ಸದ್ದು ಮಾಡುತ್ತಿದೆ. ಈ ವಿನಾಶಕ ಗತಿಗೆ ಎದುರಾಗಿ ನಿಲ್ಲಬಲ್ಲ ಮಾನಸಿಕ ಗಟ್ಟಿತನ ಈ ಹೊತ್ತು ನಮ್ಮೆಲ್ಲರಿಗೂ ಬೇಕಿದೆ. ನೋಟು-ದುಡ್ಡು ನಮ್ಮನ್ನು
ಹಲವು ರೀತಿಯಲ್ಲಿ ಕಾಡಿದೆ, ನುಂಗಿ ಹಾಕಿದೆ. ಅದರಿಂದಾಗಿ ನಮ್ಮ ದೈನಿಕದ ಬದುಕಿನ ಚಲನೆಗೆ ಅಡ್ಡಿ ಆತಂಕಗಳು ಎದುರಾಗಿವೆ. ನೋಟಿನ ಮುಂದೆ ನಾವೆಲ್ಲ ಮನುಷ್ಯರು ಎಷ್ಟು ಅಸಹಾಯಕ ನಿರ್ಬಲ ಜೀವಿಗಳಾಗಿ ಕಾಣಿಸಿಕೊಳ್ಳುತ್ತಿದ್ದೇವೆ.

ಹಾಗೇ ಹಿಂದೆಂದಿಗಿಂತಲೂ ಇಂದು ನಾವೆಲ್ಲ ಒಬ್ಬರ ಬಗ್ಗೆ ಒಬ್ಬರ ನಂಬಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ನಂಬಿಕೆ ನಮ್ಮ  ಏಕಾಂತಕ್ಕೆ ಜತೆಯಾಗಬಲ್ಲದು. ಕಾರ್ಪೊರೇಟ್ ಕಾಲವನ್ನು ಎದುರಿಸುವ ಧೈರ್ಯ-ಸ್ಥೈರ್ಯವನ್ನು ಕೊಡಬಲ್ಲದು. ಈ ನಂಬಿಕೆ ನಮ್ಮ ನಿಜ ದನಿಯಾಗಬೇಕು. ಇವತ್ತು ನಾವೆಲ್ಲ ದುಡ್ಡು ಸಂಪಾದಿಸಬಹುದು, ಆರೋಗ್ಯ ಕಾಪಾಡಿಕೊಳ್ಳಬಹುದು, ಜ್ಞಾನಗಳಿಸಬಹುದು, ಆಯಸ್ಸನ್ನು ವೃದ್ಧಿಗೊಳಿಸಬಹುದು. ಆದರೆ ನಿಜ ಪ್ರೀತಿಯನ್ನು ನಂಬಿಕೆ ವಿಶ್ವಾಸಗಳನ್ನು ಹೊಂದುವುದು ಹೇಗೆ? ನಮ್ಮೆಲ್ಲರ ಇಂದಿನ ಮಾತು ಕಥೆ ಸ್ನೇಹ ಒಡನಾಟ ಮನಸ್ಸನ್ನು ಮುಟ್ಟುತ್ತಿಲ್ಲ ಕೇವಲ ಯಾಂತ್ರಿಕವಾಗಿದೆ ಅಷ್ಟೇ.

ಪ್ರೀತಿ-ವಿಶ್ವಾಸ- ನಂಬಿಕೆಗಳೆಂಬ ಗಾಳಿ ಬೆಳಕಿಗೆ ನಾವೆಲ್ಲ ನಮ್ಮನ್ನು ತೆರೆದುಕೊಳ್ಳಬೇಕಿದೆ. ಈ ವೈವಿಧ್ಯವೇ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಸಮೃದ್ಧವನ್ನಾಗಿಸುತ್ತದೆ. ಭಾವನೆಗಳು ಸಂವೇದನೆಗಳು ಮನುಷ್ಯನ ಇರುವಿಕೆಯನ್ನು ತೋರಿಸುತ್ತವೆ. ಆತ್ಮೀಯತೆಗಿಂತ ಅನುಮಾನಗಳೇ ಇಣುಕಿದಾಗ ಮನಸ್ಸು ಇನ್ನೆಲ್ಲಿಂದ ಅರಳಬೇಕು? ನಮ್ಮ ನಡವಳಿಕೆಯಲ್ಲಿ ಒಂದಿನಿತು ಪ್ರೀತಿಯ ಸ್ಪರ್ಶವಿಲ್ಲ ಸಿಕ್ಕೋಡನೆ ಶೇಕ್ ಹ್ಯಾಂಡ್ ಕೊಟ್ಟು, ತಬ್ಬಿ ನಗುತ್ತಾ ‘ಹಲೋ ಹೌ ಆರ್ ಯು’ ಎಂದು ಕೇಳುವ ಆತ್ಮೀಯತೆಯ ಪ್ರದರ್ಶನ ನಾಟಕೀಯ ವರ್ತನೆ ಎನಿಸುತ್ತಿದೆ.

ಆತ್ಮೀಯತೆಯನ್ನು ಪ್ರದರ್ಶಿಸುವಂತೆ ಮಾಡಿಕೊಳ್ಳುವ ತರಬೇತಿ ಶಾಲೆಗಳು ತಲೆಯೆತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲ ನಮ್ಮ ನಮ್ಮ ಬದುಕಿಗೊಂದು ಹೊಸ ಆಯಾಮವನ್ನು ನೀಡಿಕೊಳ್ಳಬೇಕು. ಏಕೆಂದರೆ ಪ್ರೀತಿ ನಂಬಿಕೆ ವಿಶ್ವಾಸ ಆತ್ಮೀಯತೆಯ ಜಾಗವನ್ನು ದುಡಿಮೆಯ ಹಂಬಲ ಆವರಿಸಿಕೊಂಡು ಬಿಟ್ಟಿದೆ. ಮೈಮುರಿದು ದುಡಿಯುವುದು, ಅವಮಾನವನ್ನು ಎದುರಿಸುವುದು, ಬದುಕು ಕಟ್ಟಿಕೊಳ್ಳುವುದು, ಎದ್ದು ನಿಲ್ಲುವುದು, ತಲೆ
ಎತ್ತುವುದು ನಮ್ಮೆಲ್ಲರಲ್ಲಿ ಇಂದು ಮುಖ್ಯವಾಗಿ ಅರಳಿರುವುದು ಸಂಪಾದಿಸುವ ಆಸೆ ಮಾತ್ರ. ಹಾಗಾಗಿ ಇಲ್ಲಿ ಭಾವನೆಗಳಿಗೆ ಸಂವೇದನೆಗಳಿಗೆ ಪ್ರೀತಿ ವಿಶ್ವಾಸಗಳಿಗೆ ಆತ್ಮೀಯತೆಗೆ ಜಾಗವಿಲ್ಲ, ಕಾರ್ಪೊರೇಟ್ ಜಗತ್ತು ಸೃಷ್ಟಿಸಿರುವ ಈ ನೋಟಿನ ಬಲೆಯನ್ನು ನಾವೆಲ್ಲ ಮೀರಲೇಬೇಕು ಆಗಷ್ಟೇ ಬದುಕಲ್ಲಿ ಜೀವ ಚಲನೆ!