ಶ್ವೇತಪತ್ರ
shwethabc@gmail.com
ಬದುಕಿನ ಮುಂಭಾಗದ ಮುಖ್ಯ ವಾಸ್ತವಗಳನ್ನಷ್ಟೇ ನಾನು ಉದ್ದೇಶಪೂರ್ವಕ ಬದುಕಲು ಇಚ್ಛಿಸುತ್ತೇನೆ. ಅವು ಕಲಿಸಿದ ಅಥವಾ ಕಲಿಸದ ಪಾಠಗಳನ್ನಲ್ಲ. ಸಾವಿಗೆ ಹತ್ತಿರವಾದಾಗ ತಿಳಿದದ್ದು ಇಷ್ಟು ದಿನ ನಾನು ಬದುಕಲೇ ಇಲ್ಲವೆಂದು. ಬದುಕಿನ ತಿರುಳನ್ನೆಲ್ಲ
ಹೀರುತ್ತ ಜೀವಿಸಿ ಬಿಡಬೇಕು.
ಹೀಗೆ ಅಮೆರಿಕದ ಕವಿ ಹೆನ್ರಿ ಡೇವಿಡ್ ತಾರೋನ ಮಾತುಗಳು ಮನಸ್ಸಿನೊಳಕ್ಕೆ ಇಳಿಯುತ್ತ, ಹಾಗಿದ್ದರೆ ಬದುಕಿನ ಸಾರವನ್ನು ನಮ್ಮದಾಗಿಸಿಕೊಳ್ಳುತ್ತ ಪೂರ್ಣವಾಗಿ ಜೀವಿಸಿ ಬಿಡುವು ದೆಂದರೇನು? ಎಂಬ ಪ್ರಶ್ನೆಯನ್ನು ಮೂಡಿಸದೇ ಇರುವುದಿಲ್ಲ. ನಮಗೆ ಬೇಕಾದದ್ದು ಸಿಗದೇ ಹೋದಾಗ ಸಿಗುವ ಮುಖ್ಯ ಸಂಗತಿಯೇ ಅನುಭವ! ಹೀಗೆ ಹೇಳಿದ್ದು ರಾಂಡಿ ಪೌಶ್; ತನ್ನ The Last Lecture ಭಾಷಣದಲ್ಲಿ.
ಸೆಪ್ಟೆಂಬರ್18, 2007ರಲ್ಲಿ ಅಮೆರಿಕದ ಕಾರ್ನಗಿ ವಿಶ್ವವಿದ್ಯಾಲಯದಲ್ಲಿ ರಾಂಡಿ ಪೌಶ್ ನೀಡಿದ ದ ಲಾಸ್ಟ್ ಲೆಕ್ಚರ್ ಭಾಷಣ ವನ್ನು ಯೂಟ್ಯೂಬ್ ನಲ್ಲಿ 18 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅದೇ ಭಾಷಣ ‘ರಿಯಲಿ ಅಚೀವಿಂಗ್ ಯುವರ್ ಚೈಲ್ಡ್ ಹುಡ್ ಡ್ರೀಮ್ಸ್’ ಪುಸ್ತಕವಾಗಿ ಹೊರಹೊಮ್ಮಿ 112 ವಾರಗಳ ಕಾಲ ನ್ಯೂಯಾರ್ಕ್ ಟೈಮ್ಸನ ಬೆಸ್ಟ್ ಸೆಲ್ಲರ್ ಪುಸ್ತಕವಾಗಿ ಮೂಡಿ ಬಂದಿತ್ತು.
ಒಂದು ಭಾಷಣ ಜನರನ್ನು ಇಷ್ಟೊಂದು ಪ್ರಭಾವಿಸುತ್ತದೆ ಎನ್ನುವುದಾದರೆ ಅದರಲ್ಲಿನ ರಾಂಡಿಯ ಮಾತುಗಳು ನಾವು ಏಕೆ ಬದುಕಬೇಕೆಂಬ ಹಂಬಲವನ್ನು ಮತ್ತೆ ಮತ್ತೆ ಪ್ರತಿಧ್ವನಿಸುತ್ತವೆ ಎಂತಲೇ ಅರ್ಥ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಂಡಿ, ಕವಿ ತಾರೋನ ಮಾತುಗಳಂತೆ ಸಾವಿಗೆ ಹತ್ತಿರವಾಗುತ್ತಲೇ ನಕ್ಕು, ನಗಿಸುತ್ತ, ಪ್ರೀತಿಸುತ್ತ ಬದುಕಿದ. ಅಷ್ಟೇ ಅಲ್ಲ ಸಾವಿನ ಅನಂತರವೂ ಅನಂತವಾಗಿ ಧ್ವನಿಸುತ್ತಲೇ ಇದ್ದಾನೆ.
ಜೀವನ ಪಯಣದಲ್ಲಿ ನಮ್ಮ ಮನಸ್ಸಿನ ಅನಿಸಿಕೆಗಳಿಗೆ ವಿರುದ್ಧವಾಗಿ ಅನೇಕ ಸಂಗತಿಗಳು ನಡೆದು ಬಿಟ್ಟಿರುತ್ತವೆ. ಹಾಗಾಗಿ ಬದುಕಿಗೆ ಸೂಕ್ಷ್ಮವಾಗಿ ಮುಖ ಮಾಡಿರಬೇಕೆಂಬ ರಾಂಡಿಯ ಮಾತುಗಳಲ್ಲಿ ಜೀವನ ಪಾಠವೇ ಅಡಗಿದೆ. ಹಾಗೆ ನಮ್ಮನ್ನು ನಾವು ಕೇಳಿಕೊಳ್ಳೋಣ ಇಂದು ನಮ್ಮೊಳಗೆ ಆವರಿಸಿರುವ ಸಂಗತಿಗಳು ಯಾವುವೆಂದು? ಸಮರ್ಥವಾಗಿ ಡಯಟ್ ಮಾಡುವುದು ಹೇಗೆ? ಮದುವೆಯನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆ? ಸಮರ್ಥವಾದ ಕೆಲಸವನ್ನು ಪಡೆಯುವುದು ಹೇಗೆ? ಸಮರ್ಥವಾದ ಸಾಮಾಜಿಕ ಅಂತಸ್ತನ್ನು ಸ್ಥಾಪಿಸಿಕೊಳ್ಳುವುದು ಹೇಗೆ? ಉತ್ತಮ ಲೈಂಗಿಕ ಜೀವನವನ್ನು ನಡೆಸುವುದು ಹೇಗೆ? ಯಶಸ್ಸನ್ನು ಪಡೆಯುವುದು ಹೇಗೆ? ಈ ಎಲ್ಲ‘ಹೇಗೆ’ಗಳ ನಡುವೆ ಕಳೆದು ಹೋಗಿರುವುದು ಮಾತ್ರ ನಮ್ಮಯ ಖುಷಿ ಮತ್ತು ಜೀವನ ತೃಪ್ತಿ.
ಖುಷಿ, ಸಂತೋಷದ ಕುರಿತಾಗಿ ನಾನು ಸಂಶೋಧನೆಯಲ್ಲಿ ತೊಡಗಿ ಕೊಂಡಾಗಿನಿಂದಲೂ ನನ್ನ ಅನುಭವಕ್ಕೆ ಬಂದ ಸಂಗತಿ ಎಂದರೆ ನಮ್ಮ ಬದುಕಿನ ಖುಷಿ ಹಾಗೂ ಜೀವನ ತೃಪ್ತಿ ಒಂದು ಮುಖ್ಯ ಅಂಶದ ಮೇಲೆ ಅವಲಂಬಿತವಾಗಿರುತ್ತವೆ ಅದು ನಮ್ಮ ವರ್ತನೆಯ ಆಯ್ಕೆಯ ಜತೆಗೆ ಸಾಮಾಜಿಕವಾಗಿ ಸಂಬಂಧಗಳನ್ನು ನಾವು ಹೇಗೆ ನಿಭಾಯಿಸುತ್ತೇವೆ ಎನ್ನುವುದರಲ್ಲಿ ಅಡಕ ವಾಗಿದೆ. ನಮ್ಮ ಜೀವನ ತೃಪ್ತಿ ಮಾನಸಿಕ ಯೋಗ ಕ್ಷೇಮ ಹಾಗೂ ಖುಷಿಗಳು ಎರಡು ಮುಖ್ಯ ಗುರಿಗಳ ಆಧಾರದಲ್ಲಿ ನಿರ್ಧಾರಿತ ವಾಗುತ್ತವೆ.
ಒಂದು ಸುಖ, ಸಮೃದ್ಧಿ, ಹಿತಕರವಾದ ಸಂಗತಿಗಳನ್ನಷ್ಟೇ ಬದುಕಿನ ಜೋಳಿಗೆಗೆ ಹೆಚ್ಚು ಹೆಚ್ಚು ತುಂಬಿಸಿಕೊಳ್ಳುತ್ತ ಆದಷ್ಟು ನೋವುಗಳನ್ನು ಕಡಿಮೆಗೊಳಿಸುತ್ತ ಜೀವಿಸುವುದು, ಮತ್ತೊಂದು ಸಂಪೂರ್ಣ ಪರಿಕಲ್ಪನೆಯಲ್ಲಿ ವೈಯಕ್ತಿಕ ಬೆಳವಣಿಗೆ, ಬದುಕಿನ ಅರ್ಥ ಮತ್ತು ಉದ್ದೇಶ ಹಾಗೂ ಸ್ವಯಂ ಅರಿವಿನ ಮೂಲಕ ಜೀವನಕ್ಕೆ ಅರ್ಥವನ್ನು ಮೂಡಿಸಿಕೊಳ್ಳುತ್ತ ಹೋಗು ವುದು. ಈ ಹೊತ್ತು ನಮ್ಮ ಪೂರ್ಣದ ಪರಿಕಲ್ಪನೆಗಿಂತ ಸುಖದ ಪರಿಕಲ್ಪನೆ ಹೆಚ್ಚು ಮುಖ್ಯ ಮತ್ತು ಪ್ರಸ್ತುತವಾಗಿದೆ.
ಇನ್ನೂ ಸರಳೀಕರಿಸಿ ಹೇಳಬೇಕೆಂದರೆ ನಮ್ಮ ಆಸೆ ಬುರುಕುತನ ಹಾಗೂ ಕೊಳ್ಳುಬಾಕುತನ ಕಡಿಮೆಯಾದಷ್ಟು ಬದುಕಿಗೆ ಖುಷಿ
ತಾನಾಗೇ ಮೂಡುತ್ತದೆ. ಅಲ್ಲಿ ಜೀವನದ ಸವಿ ಅನುಭವಗಳು ಅನುಭಾವಗಳಾಗಿ ಮನೆ ಮನಸ್ಸನ್ನು ತುಂಬುತ್ತವೆ. ಕ್ಷಣಿಕ
ಖುಷಿ ಗಳಿಗೆ ನಮ್ಮ ಪ್ರಾಮುಖ್ಯ ಹೆಚ್ಚಾಗಿದೆ. ಅದಕ್ಕೆ ಇವತ್ತು ಮನೆ (ಕಾರು,ಚಿನ್ನ,ಒಡವೆ, ಬಟ್ಟೆ,೫೦ ಇಂಚಿನ ಟಿವಿ, ಐ-ನೋ ಇತ್ಯಾದಿಗಳಿಂದ) ತುಂಬಿದೆ, ಆದರೆ ಮನಸ್ಸು ಖಾಲಿಯಾಗಿದೆ.
2013ರಲ್ಲಿ ಕೆಲವು ‘ಬೇಕು’ಗಳ ಅನುಪಸ್ಥಿತಿ ಮತ್ತು ಖುಷಿಯ ಕುರಿತು ಒಂದು ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನಕ್ಕೆ ಒಳಪಟ್ಟ ವ್ಯಕ್ತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಒಂದು ಗುಂಪನ್ನು ಒಂದು ವಾರಗಳ ಕಾಲ ಚಾಕೊಲೇಟ್ ತಿನ್ನುವು ದರಿಂದ ದೂರವಿರಿಸಲಾಯಿತು. ಎರಡನೇಯ ಗುಂಪಿಗೆ ಬೇಕಾದಷ್ಟು ತಿನ್ನಲು ಚಾಕೊಲೆಟನ್ನು ನೀಡಲಾಯಿತು ಹಾಗೂ ಮೂರನೇಯ ಗುಂಪನ್ನು ಯಾವುದೇ ಸೂಚನೆಗಳಿಲ್ಲದೆ ನಿಯಂತ್ರಣಕ್ಕೆ ಒಳಪಡಿಸಲಾಯಿತು. ಒಂದು ವಾರದ ನಂತರ
ಮೂರೂ ಗುಂಪುಗಳ ವ್ಯಕ್ತಿಗಳ ಅಭಿಪ್ರಾಯ ಪಡೆದುಕೊಂಡಾಗ ಕಂಡುಬಂದ ಸಂಗತಿ ಎಂದರೆ- ಒಂದು ವಾರಗಳ ಕಾಲ ಚಾಕೊ ಲೆಟ್ ಅನ್ನು ಸೇವಿಸಿದ ಗುಂಪು ಚಾಕೊಲೆಟ್ ಅನ್ನು ತಿನ್ನುವಾಗ ತಮ್ಮ ಮನಃಸ್ಥಿತಿ ಹೆಚ್ಚು ಸಕಾರಾತ್ಮಕವಾಗಿ ಇದ್ದದ್ದಾಗಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮಿಕ್ಕ ಎರಡು ಗುಂಪಿನಲ್ಲಿ ಈ ಅನುಭವ ಕಂಡುಬಂದಿಲ್ಲ. ಇದರ ಅರ್ಥ ಕೆಲವೊಮ್ಮೆ ನಮ್ಮ ‘ಬೇಕು’ಗಳಿಂದ ದೂರ ಉಳಿವಿಕೆ ಯು ನಮ್ಮಲ್ಲಿ ಬೇಕಾಬಿಟ್ಟಿಯ ಮನಃಸ್ಥಿತಿಯನ್ನು ಎಚ್ಚರಿಕೆಯ ಪ್ರಜ್ಞೆಯಾಗಿ ಬದಲಾಯಿಸುತ್ತದೆ. ಆಗ ಸಂಗತಿಗಳು ಭೋಗ ಗಳಾಗಿ ನಮಗೆ ಕಾಣುವುದಿಲ್ಲ. ಬದುಕಿನ ಹೆಚ್ಚು ಹೊತ್ತು ನಮ್ಮನ್ನು ನಿರಂತರ ಆವರಿಸಿರುವ ಸಂಗತಿ ಎಂದರೆ ಹಣ. ಹಣ ಬದುಕಿನ ಅವಶ್ಯಕತೆಯೂ ಹೌದು ಅನಿವಾರ್ಯವೂ ಹೌದು. ಆದರೆ ಅದು ನಮ್ಮನ್ನು ಸಂಪೂರ್ಣ ಆವರಿಸಿಬಿಡುವ ಅಂಶವಾಗಿ ಬಿಡಬಾರದು.
ದುಡಿದದ್ದರ ಹಂಚಿ ಬದುಕಿದರೆ ಅಂದು ಆತ್ಮತೃಪ್ತಿ. ಈ ಆತ್ಮತೃಪ್ತಿಗೆ, ಆತ್ಮಸಿದ್ದಿಗೆ ಎ ಹಿಮಾಲಯವನ್ನೋ ಮಠ-ಮಾನ್ಯ ವನನ್ನೋ ಹುಡುಕಿ ಹೋಗಬೇಕಿಲ್ಲ. ದುಡಿಯುತ್ತ, ದುಡಿದಿದ್ದರ ಇಷ್ಟಪಟ್ಟು ಕೊಡುವ ಉದಾರತೆ ನಮ್ಮಲ್ಲಿ ಮಾನಸಿಕ ಯೋಗ ಕ್ಷೇಮವನ್ನು ತುಂಬುತ್ತದೆ. ಸಂತೋಷ ಹಾಗೂ ಜೀವನ ತೃಪ್ತಿಯ ಹುಡುಕಾಟದಲ್ಲಿ ಬಹು ಮುಖ್ಯವಾಗುವ ಮತ್ತೊಂದು ವಿಚಾರ ವೆಂದರೆ ಬದುಕಲ್ಲಿ ನಾವು ಮಾಡುವ ಕೆಲಸಗಳ ಜತೆ ಜತೆಗೆ ಜೀವವನ್ನು, ಜೀವನವನ್ನು ಹಸಿರಾಗಿಸುವ, ಉಸಿರಾಗಿಸುವ ಉತ್ಸಾಹ ವಿರಬೇಕು.
ಯಾವುದೇ ವಿಷಯವಿರಲಿ ಅದಕ್ಕೆ ನಮ್ಮ ಅನುರಾಗವಿರಬೇಕು. ಈ ಅನುರಾಗಗಳು ಮತ್ತೆ ಮತ್ತೆ ಬದುಕನ್ನು ಬದುಕುವಂತೆ ಮಾಡಲು ಸದಾ ಪ್ರತಿಧ್ವನಿಸುತ್ತಲೇ ಇರಬೇಕು. ನಮ್ಮ ಮನಃಸ್ಥಿತಿ ಯಾವಾಗಲೂ ಫಲಿತಾಂಶದ ಆಧಾರದ ಮೇಲೆ ನಿರ್ಧಾರಿತ ವಾಗಿರುತ್ತದೆ. ಉದಾಹರಣೆಗೆ ನಾವು ನಮ್ಮ ಸಮಯ ಮತ್ತು ಶಕ್ತಿಯನ್ನು ಫಲಿತಾಂಶದ ನಿರೀಕ್ಷೆಯಲ್ಲಿ ಹೂಡಿಕೆ ಮಾಡಿರುತ್ತೇವೆ. ಏನನ್ನೇ ಮಾಡಿದರೂ ನಮ್ಮ ಯೋಚನೆ ಅದರ ಫಲಿತಾಂಶದತ್ತಲೇ.
ಸಂಜೆ ಪಾರ್ಕಿಗೆ ವಾಕ್ ಹೋಗುವುದು ನಮ್ಮಯ ಖುಷಿಗೆ ನೆಮ್ಮದಿಗೆ ಅಲ್ಲ, ತೂಕ ಇಳಿಸಲು. ಅನುರಾಗವೆನ್ನುವುದು ಏನೋ ಮಾಡಬೇಕು ಅದನ್ನು ಮಾಡುವುದಲ್ಲ, ಅದನ್ನು ಮೀರಿದ ಅಧ್ಯಾತ್ಮ. ಇನ್ನುಅಗತ್ಯವಾಗಿ ನಮ್ಮ ಬದುಕಿನ ಪಯಣಕ್ಕೆ ಜತೆಯಾಗಿಸಿಕೊಳ್ಳಬೇಕಿರುವುದು ನಗು ಮತ್ತು ಹಾಸ್ಯಗಳನ್ನು. ಹಾಸ್ಯ ಮತ್ತು ನಗು ವ್ಯಕ್ತಿಗಳಾಗಿ- ವ್ಯಕ್ತಿತ್ವವಾಗಿ ನಮಗೊಂದು ಆಕರ್ಷಣೆಯ ಸೆಳೆತವನ್ನು ನೀಡುತ್ತವೆ.
ಸಾಮಾಜಿಕ ಖುಷಿಗಳನ್ನು ನಮ್ಮದಾಗಿಸುತ್ತವೆ. ನಮ್ಮ ಬಗ್ಗೆಯೇ ನಾವು ಮಾಡಿಕೊಳ್ಳುವ ಹಾಸ್ಯ ನಮ್ಮಯ ಒತ್ತಡಗಳಿಗೊಂದು ಉತ್ತಮ ಚಿಕಿತ್ಸೆ. ಆದರೆ ನಾವೆಲ್ಲ ಆಕ್ರಮಣಕಾರಿ ಹಾಸ್ಯದತ್ತಲೇ ಹೆಚ್ಚು ಒಳಗೊಂಡಿದ್ದೇವೆ. ನಮ್ಮ ವ್ಯಂಗ್ಯ, ಚುಚ್ಚುಮಾತು, ಚೇಡಿಸುವುದು, ಆ ಮೂಲಕ ಎದುರಿಗಿರುವ ವ್ಯಕ್ತಿಯನ್ನು ಅವಮಾನಿಸುತ್ತ ಅವನ ಮನಃಸ್ಥಿತಿಯನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ ನಮ್ಮ ವ್ಯಕ್ತಿತ್ವವೇ ಕಳೆದು ಹೋಗುತ್ತಿದೆ ನೆನಪಿರಲಿ. ಎಷ್ಟೋ ಸಂದರ್ಭದಲ್ಲಿ ಸಕಾರಾತ್ಮಕ ಹಾಸ್ಯವು ಏಷ್ಟೋ ಸಮಸ್ಯೆಗಳಿಗೆ ಪರಿಹಾರವೂ ಹೌದು!
ಮತ್ತೂ ನೆನಪಿರಲಿ ಆತ್ಮಗೌರವ, ಸಕಾರಾತ್ಮಕ ಯೋಗ ಕ್ಷೇಮ, ಆತ್ಮವಿಶ್ವಾಸಕ್ಕೂ ಹಾಸ್ಯಕ್ಕೂ ಒಂದು ದಿವ್ಯ ನಂಟು. ಖಿನ್ನತೆ,
ಉದ್ವಿಗ್ನತೆ, ಭಾವನಾತ್ಮಕ ಏರುಪೇರುಗಳಿಗೂ ಹಾಸ್ಯವೂ ಕೂಡ ಚಿಕಿತ್ಸೆಯಾಗಿ ಪರಿಣಾಮಕಾರಿಯಾಗಿರಬಲ್ಲದು. ವಾಸ್ತವಕ್ಕೆ ಹತ್ತಿರವಾಗಿ ನಿಂತು ನಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿಸಿಕೊಳ್ಳಬೇಕು. ಆದರೆ ಇಂದು ನಾವೆಲ್ಲ ಅವಾಸ್ತವಿಕ ನೆಲೆ ಗಳಲ್ಲಿ, ಭ್ರಮೆಗಳಲ್ಲಿ ಕಳೆದು ಹೋಗಿದ್ದೇವೆ. ಈ ಭಾವ ನಮ್ಮನ್ನು ಮತ್ತಷ್ಟು ದುಃಖಿತರನ್ನಾಗಿಯೂ, ಭರವಸೆ ಕಳೆದು ಕೊಂಡವರ ನ್ನಾಗಿಯೂ ಮಾಡಿಬಿಟ್ಟಿದೆ. ಹಾಗಾಗಿಯೇ ನಮ್ಮ ನಮ್ಮ ಆಲೋಚನೆಯಲ್ಲಿ ಒಂದು ನಂಬಿಕೆ ಇರಬೇಕು.
ಆಲೋಚಾತ್ಮಕವಾಗಿ ನಾವು ಭ್ರಮೆಗಳಲ್ಲಿ ಕಳೆದು ಹೋಗಬಾರದು. ಉದಾಹರಣೆಗೆ ನಮ್ಮ ಆಲೋಚನೆಗಳಿಗೆ ಸದಾ ಅಂತಸ್ತಿನದ್ದೇ ಹೆಚ್ಚು ಭಾರ. ನಾನು ಇಷ್ಟು ದೊಡ್ಡ ಕೆಲಸದಲ್ಲಿದ್ದೇನೆ, ನನ್ನ ಸಂಬಳ ವರ್ಷಕ್ಕೆ ಇಷ್ಟೊಂದು ಪ್ಯಾಕೇಜ್, ನನ್ನ ಬಳಿ ಆಡಿ ಕಾರಿದೆ, ಪ್ರತಿಷ್ಠಿತ ಏರಿಯಾದಲ್ಲಿ ನನ್ನ ಮನೆ ಇದೆ… ಇವು ನಮ್ಮ ಯೋಚನೆಗಳಿಗೆ, ಜನರ ನಡುವಿನ ಸಂಬಂಧಗಳಿಗೆ, ನಮ್ಮ ಖುಷಿಗಳಿಗೆ, ಪ್ರೀತಿಗೆ, ಅನುರಾಗಕ್ಕೆ, ನಗುವಿಗೆ ಅಷ್ಟೇ ಏಕೆ ಕೊನೆಗೆ ಬದುಕಿಗೆ ತಡೆಗೋಡೆಗಳಾಗಿ ನಿಂತು ಬಿಡುತ್ತವೆ.
ನಿಮ್ಮ ಹತ್ತಿರ ಆಡಿ ಕಾರ್ ಇರಬಹುದು, ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇರಬಹುದು. ಪುಟ್ಟ ಮಗುವಿನೆದುರೂ ಆಡಲು ಹೋದರೆ
ಮಗು ಹೇಳುವುದು ಆಡುವುದಾದರೆ ನನ್ನ ಜತೆ ಕಣ್ಣ ಮುಚ್ಚಾಲೆ ಆಡು. ಇಲ್ಲ ಬಾಲ್ ಬ್ಯಾಟ್ ಆಟ ಆಡು. ನಿನ್ನ ಆಡಿ ಕಾರಿನಲ್ಲಿ ಆಡಲು ಸಾಧ್ಯವಿಲ್ಲವೆಂದು. ಮಗುವಿನ ಮನಃಸ್ಥಿತಿಯನ್ನು ನಮ್ಮದಾಗಿಸಿಕೊಳ್ಳಬೇಕು; ಎಲ್ಲ ಬಿಗಿತಗಳಾಚೆ. ನಿಮ್ಮೆಲ್ಲರಿಗೂ ಒಂದು ವಿಷಯ ತಿಳಿದಿರಲಿ, ಇಂದು ಹೆಚ್ಚು ಸಾಂಕ್ರಾಮಿಕವಾಗಿರುವುದು ಕೋವಿಡ್ ಅಲ್ಲ, ಖಿನ್ನತೆ (ಡಿಪ್ರೆಶನ್). ಯಾಕೆ ಗೊತ್ತಾ? ನಾವು ಜನರ ನಡುವಿನಿಂದ ಮಾನಸಿಕವಾಗಿ, ದೈಹಿಕವಾಗಿ ಸಾಮಾಜಿಕವಾಗಿ ದೂರವಾಗುತ್ತಿದ್ದೇವೆ.
ಸಂಬಂಧಗಳ ಗುಣಮಟ್ಟ ಕ್ಷೀಣಿಸುತ್ತಿದೆ, ಸಂಬಂಧಗಳು ಮನಸ್ಸಿನಿಂದ ದೂರವಾಗುತ್ತಿರುವಂತೆ ಅಭದ್ರತೆಗಳು, ಅಸ್ಥಿರತೆಗಳು ಗಾಯಗಳಾಗಿ ಮನಸ್ಸನ್ನು ಮುತ್ತುತ್ತಿವೆ. ಬದುಕೊಂದು ರೇಸ್ ಅಲ್ಲ ಅದೊಂದು ಸುಂದರ ಪಯಣ. ನಮ್ಮ ಇಡೀ ಬದುಕನ್ನು ನಿಯಂತ್ರಿಸಲು ಸಾಧ್ಯವಿರುವುದು ನಮಗಷ್ಟೇ ಹೊರತು ಬೇರೆ ಯಾರಿಗೋ ಅಲ್ಲ. ನಮ್ಮ ಬದುಕು ಬರಿಯೇ ನಮ್ಮ ಕಾರು, ಮನೆ, ಬಂಗ್ಲೆ, ಕೆಲಸ, ಬ್ಯಾಂಕ್ ಬ್ಯಾಲೆನ್ಸ್ ಅಲ್ಲ. ಅದರ ಆಚೆಗಿನ ಪ್ರೀತಿ, ಅನುರಾಗ, ಮೌನ, ಮಾತು, ಹೃದಯ. ಮನಸ್ಸು ಬರಿಯೇ
ಬ್ಯಾಂಕ್ ಅಕೌಂಟಲ್ಲ; ಆತ್ಮವೂ-ಅಧ್ಯಾತ್ಮವೂ ಹೌದು!
ನಿಮ್ಮ ಒಳ ಧ್ವನಿಯ ಮಾತುಗಳಿಗೆ ಕಿವಿಯಾಗಿ ನಿಮ್ಮ ಆಯ್ಕೆಯೇ ನಿಮ್ಮ ಬದುಕಾಗಿರುತ್ತದೆ ನಿಮ್ಮ ಆಳದ ಅನುರಾಗಗಳು ನಿಮ್ಮ
ಅನ್ವೇಷಣೆಗಳಾಗಲಿ. ಪ್ರತಿ ಕ್ಷಣಗಳು ನಿಮ್ಮಲ್ಲಿ ಉತ್ಸುಕತೆಯನ್ನು ತುಂಬಿರಲಿ. ಪ್ರತಿ ಬೆಳಗು ನಿಮ್ಮಂದು ಅಹ್ಲಾದತೆ ಇರಲಿ. ನಿಮ್ಮ ಆಲೋಚನೆ, ವಿವೇಕಗಳು ಸಕಾರಾತ್ಮಕವಾಗಿ ಪಸರಿಸಲಿ. ಬದುಕನ್ನು ಪೂರ್ಣವಾಗಿಯೂ, ಅರ್ಥಪೂರ್ಣವಾಗಿಯೂ ಇರಿಸಬೇಕಾದರೆ ನೀವು ಮಾಡುವ ಪ್ರತಿಯೊಂದು ಪ್ರೀತಿ, ಖುಷಿ, ನಗುವಿನಿಂದ ತುಂಬಿರಲಿ ಅದಕ್ಕೆ ಹೇಳಿದ್ದು ಲೀವ್ – ಲವ್ – ಲಾ- !!!
Read E-Paper click here