Friday, 13th December 2024

ಜೀವನಪ್ರೀತಿಯ ಪಸೆ ಮೂಡಿಸಿ, ಮನಸ್ಸನ್ನು ತೇವವಾಗಿಸುವ ಕೃತಿ

ಇದೇ ಅಂತರಂಗ ಸುದ್ದಿ

vbhat@me.com

ಕರೋನಾ ನಮ್ಮೊಳಗೇ ತಂದ ಪರಿವರ್ತನೆ, ಅದು ಕಲಿಸಿದ ಜೀವನ ಪಾಠ ಇತ್ಯಾದಿಗಳ ಬಗೆಗೆ ಖ್ಯಾತ ಸಿನಿಮಾ ನಟ ಮತ್ತು ತಮ್ಮ ಸಂವೇದನಾ ಶೀಲ ಕಾಳಜಿಯಿಂದ ಆಪ್ತವಾಗುವ ಅನುಪಮ್ ಖೇರ್ Your Best Day Is Today ಎಂಬ ಕೃತಿಯಲ್ಲಿ, ವೈಯಕ್ತಿಕ ಅನುಭವದ ನೆಲೆಯಲ್ಲಿ ಅವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಇಲ್ಲಿ ವಿವರಿಸಿದ್ದಾರೆ. ನಾನು ಈ ಪುಸ್ತಕವನ್ನು ‘ಇಂದಿನ ದಿನವೇ ಶುಭದಿನವು!’ ಎಂದು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಇದೇ ಫೆಬ್ರವರಿ ಐದರಂದು ಈ ಕೃತಿ ಬಿಡುಗಡೆ ಆಗಲಿದೆ.

ಅಂದು ಚಿಕ್ಕಮಗಳೂರು ಜಿಯ ಕಳಸ ಸನಿಹವಿರುವ ಹೊರನಾಡಿನಲ್ಲಿರುವ ಆಪ್ತ ಸ್ನೇಹಿತರೊಬ್ಬರು ಫೋನ್ ಮಾಡಿ, ‘ಭಟ್ರೇ, ಕರೋನಾ ಬೆಂಗಳೂ ರಿಗೂ ಬಂದಿದೆಯಂತೆ. ಈಗಾಗಲೇ ನಾಲ್ಕು ಜನರಿಗೆ ಸೋಂಕು ತಟ್ಟಿದೆಯಂತೆ. ಯಾವುದಕ್ಕೂ ಎಚ್ಚರಿಕೆಯಿಂದ ಇರಿ’ ಎಂದರು. ಅದಾಗಿ ಒಂದು ವಾರದ ಬಳಿಕ, ‘ಏನ್ ಸಾರ್, ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಜನ ಕರೋನಾ ಪೀಡಿತ ರಾಗಿದ್ದಾರಂತೆ, ಅದು ಹಬ್ಬುತ್ತಿರುವ ರೀತಿ ನೋಡಿದರೆ ಭೀತಿಯಾಗುತ್ತದೆ, ಹುಷಾರು’ ಎಂದು ಹೇಳಿ ಫೋನಿಟ್ಟರು.

ಆ ದಿನಗಳಲ್ಲಿ ಪತ್ರಿಕೆ, ಟಿವಿಯಲ್ಲ ಅದೇ ಸುದ್ದಿ. ಹೋದಲ್ಲಿ, ಬಂದಲ್ಲಿ ಕರೋನಾ. ಬರಲಿರುವ ಅಪಾಯದ ಮುನ್ಸೂಚನೆ ಆಗಲೇ ಸಿಕ್ಕಿತ್ತು. ಕರೋನಾ ಯಾರಿಗೆ ಬಂದರೂ ತನಗೆ ಬರಲಿಕ್ಕಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಹೊರನಾಡಿನ ಮಿತ್ರರು ಹದಿನೈದು ದಿನಗಳ ನಂತರ ಫೋನ್ ಮಾಡಿ, ‘ಭಟ್ರೇ, ನೋಡಿ ನಾವೇ ಭಾಗ್ಯವಂತರು. ಇಡೀ ಜಗತ್ತಿಗೆ ಕರೋನಾ ಬಂದರೂ ನಮಗಂತೂ ಬರುವುದಿಲ್ಲ. ಕಾರಣ ನಮ್ಮದು ಒಂಟಿ ಮನೆ. ಸುತ್ತ-ಮುತ್ತ ಒಂದೆರಡು ಕಿಮಿ ಅಂತರದಲ್ಲಿ ಬೇರೆ ಮನೆಗಳಿಲ್ಲ. ನೀವೆಲ್ಲ ಬೆಂಗಳೂರಿನಂಥ ಆ ಜನನಿಬಿಡ ಊರಿನಲ್ಲಿ ಹೇಗೆ ಜೀವನ ಮಾಡು ತ್ತಿದ್ದೀರೋ, ಏನೋ? ನನಗಂತೂ ಭಯವಾಗು ತ್ತದೆ. ಒಂದು ಕೆಲಸ ಮಾಡಿ, ನೀವು ಮತ್ತು ನಿಮ್ಮ ಮನೆ-ಮಂದಿ ಯೆಲ್ಲ ಇಲ್ಲಿಗೇ ಬಂದು ಬಿಡಿ.

ನಮ್ಮ ಮನೆಯಂಥ ಸುರಕ್ಷಿತ ಸ್ಥಳ ಮತ್ತೊಂದಿಲ್ಲ’ ಅಂದರು. ಅದಾಗಿ ಒಂದು ವಾರದ ನಂತರ, ನಾನೇ ಅವರಿಗೆ ಸುಮ್ಮನೆ ಫೋನ್ ಮಾಡಿದೆ. ಅವರಿಂದ ಯಾವ ಪ್ರತಿಕ್ರಿಯೆ ಇರಲಿಲ್ಲ. ಮರುದಿನ ಪುನಃ ಫೋನ್ ಮಾಡಿದೆ. ಅವರು ಆಯಾಸದಿಂದ ಮಾತಾಡಲಾರಂಭಿಸಿದರು. ನನಗೆ ಗಾಬರಿ ಯಾಯಿತು. ನಾನು ತುಸು ಕಳವಳಗೊಂಡು, ‘ಏನಾಯ್ತು ಸಾರ್?’ ಎಂದು ಕೇಳಿದೆ. ಅದಕ್ಕೆ ಅವರು, ‘ಮನೆಮಂದಿಗೆ ಕರೋನಾ’ ಎಂದರು.
‘ಏನ್ಸಾರ್! ಜಗತ್ತಿಗೇ ಕರೋನಾ ಬಂದರೂ, ನಮ್ಮ ಮನೆಗೆ ಬರುವುದಿಲ್ಲ ಅಂತ ಹೇಳಿದ್ದಿರಿ. ಅದು ಹೇಗೆ ನಿಮ್ಮ ಮನೆಗೆ ಕಾಲಿಟ್ಟಿತು?’ ಎಂದು ಕೇಳಿದೆ.

‘ನೋಡ್ರಿ, ಕರೋನಾ ಇಡೀ ವಿಶ್ವಕ್ಕೆ ಬಂದರೂ ನಮ್ಮ ಮನೆಗೆ ಕಾಲಿಡುವುದಿಲ್ಲ ಅಂತಾನೇ ಭಾವಿಸಿದ್ದೆ. ಆದರೆ ಹಿಂದಿನ ವಾರ ನಮ್ಮ ಮನೆಯ ಏರ್ ಕಂಡೀಷನ್ ಹಾಳಾಗಿತ್ತು. ಅದರ ರಿಪೇರಿಗೆ ಮಂಗಳೂರಿನಿಂದ ಟೆಕ್ನಿಷಿಯನ್ ಕರೆಯಿಸಿದೆ. ಆತನಿಗೆ ಕರೋನಾ ಸೋಂಕಿತ್ತು ಎಂಬುದು ನಮಗೆ ಗೊತ್ತೇ ಆಗಲಿಲ್ಲ. ಆತ ಬಂದು ನಮಗೆಲ್ಲ ಕರೋನಾ ಅಂಟಿಸಿ ಹೋದ’ ಎಂದರು. ಕರೋನಾ ವಿಶ್ವದೆಡೆ ಕಳ್ಳ ಹೆಜ್ಜೆ ಹಾಕುತ್ತಾ ವ್ಯಾಪಿಸಿದ್ದು ಹೀಗೆ!

ಈ ಶತಮಾನದ ಅತಿ ದೊಡ್ಡ ಜಾಗತಿಕ ಆರೋಗ್ಯ ವಿಪತ್ತು ಅಂದ್ರೆ ಅದು ಕೋವಿಡ್. ಅದು ಇಡೀ ಮಾನವ ಸಂಕುಲವನ್ನು ತತ್ತರಗೊಳಿಸಿದ ಮಹಾ ಮಾರಿ. ಜಗತ್ತಿನೆಡೆ ಇದನ್ನು ಎದುರಿಸಲು ಯಾರೂ ಸಿದ್ಧರಾಗಿರಲಿಲ್ಲ. ಸಾಮಾಜಿಕ-ಆರ್ಥಿಕ ಹೊಡೆತಗಳು ಒಂದೆಡೆಯಿರಲಿ, ನೂರಾರು ದಿನಗಳ ಕಾಲ, ಮನೆಯಿಂದ ಹೊರಗೆ ಹೋಗದೇ, ನಾಲ್ಕು ಗೋಡೆಗಳ ಮಧ್ಯ ಮುಂದೇನಾಗುವುದೋ ಎಂಬ ಭೀತಿಯಲ್ಲಿ ದಿನದೂಡುವಂತಾದ ಆ ಭೀಭತ್ಸ ದಿನಗಳನ್ನಂತೂ ಮರೆಯುವಂತೆಯೇ ಇಲ್ಲ. ನಾವು ವಾಸಿಸುವ ನಗರಕ್ಕೆ ಕರೋನಾ ಕಾಲಿಟ್ಟಿದೆಯಂತೆ ಎಂದಾಗ ಭಯದಿಂದ ನಲುಗಿದ ಜನ, ತಾವು ವಾಸಿಸುವ ಬಡಾವಣೆಗೆ, ನಂತರ ಪಕ್ಕದ ಮನೆಗೇ ದಾಳಿಯಿಟ್ಟಿದೆಯೆಂದು ಕೇಳಿದಾಗ, ಮನೆಯ ಕಿಟಕಿ-ಬಾಗಿಲುಗಳನ್ನು ಮುಚ್ಚಿ, ಜೀವ ಉಳಿಸಿ ಕೊಳ್ಳಲು ಬಿಲ ಸೇರುವ ಪ್ರಾಣಿಗಳಂತೆ, ಅವಿತು ಕೊಂಡು ಅನಿಶ್ಚಿತತೆಯಲ್ಲಿ ದಿನದೂಡುವಂತಾಗಿದ್ದು ಒಂದು ಕರಾಳ ನೆನಪು.

ಕರೋನಾ ವೈರಸ್ ಇಡೀ ಜಗತ್ತನ್ನೇ ಬಾಧಿಸಿರಬಹುದು, ಆದರೆ ಅದು ತನಗೆ ಮಾತ್ರ ಸೋಂಕುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ವಿಶ್ವದ ಯಾವ ದೇಶವನ್ನೂ ಬಿಡಲಿಲ್ಲ. ನಮ್ಮ ಮುಂದೆ ಇದ್ದವರೆಲ್ಲ ಮಿಂಚುಹುಳುಗಳ ಹಾಗೆ ಸತ್ತು ಹೋದರು. ಇಡೀ ವಿಶ್ವದ ಚಲನೆ ಸ್ತಬ್ಧವಾಯಿತು.
ಆತ್ಮೀಯರ ಅಂತ್ಯಸಂಸ್ಕಾರಕ್ಕೂ ಹೋಗಲು ಆಗಲಿಲ್ಲ. ತಂದೆ ಸತ್ತರೂ ಮಗ ಮನೆಯೊಳಗೇ ಇದ್ದ. ಚಿತೆಗೇರಿದ ಗಂಡನನ್ನು ಹೆಂಡತಿ ನೋಡಲಿಲ್ಲ. ಮಾನವ ಸಂಬಂಧದ ಎಲ್ಲಾ ಕೋಶ- ತಂತುಗಳನ್ನು ಕರೋನಾ ಚಿವುಟಿ ಹಾಕಿಬಿಟ್ಟಿತು.

ಎಲ್ಲರೂ ತಮ್ಮ ತಮ್ಮ ಜೀವವನ್ನು ಕಂಕುಳಲ್ಲಿ ಬಚ್ಚಿಟ್ಟುಕೊಂಡವರಂತೆ ಭಯದಲ್ಲಿ ಜೀವಿಸಿದರು. ಬದುಕಿನ ಬಗೆಗಿದ್ದ ಕಲ್ಪನೆಯನ್ನೇ ಕರೋನಾ ಗುಡಿಸಿಹಾಕಿತು. ನಮ್ಮ ಆಚರಣೆ, ಸಂಪ್ರದಾಯ, ಜನಜೀವನ, ಯೋಚನೆ, ಜೀವನಕ್ರಮ, ಪದ್ಧತಿಗಳನ್ನೆಲ್ಲ ಕರೋನಾ ಮುದ್ದೆ ಕಟ್ಟಿ ಬಿಸಾಕಿತು. ಕೆಲದಿನ ಜಗತ್ತಿನ ಯಾವ ರಾಷ್ಟ್ರದ ಮೇಲೂ ವಿಮಾನ ಹಾರಲಿಲ್ಲ. ವಾಹನ ಸಂಚರಿಸಲಿಲ್ಲ. ಹಡಗು ದಡ ಬಿಟ್ಟು ಕದಲಲಿಲ್ಲ. ಕರೋನಾ ಟ್ರಾಫಿಕ್ ಸಿಗ್ನಲ್ ಮುಂದೆ, ಜಗತ್ತೇ ಸ್ಟಾಪ್!

ಆ ಸಮಯದಲ್ಲಿ ಮೂಡಿದ ಆಲೋಚನೆಗಳೇನು? ಕರೋನಾ ಕಲಿಸಿದ ಪಾಠಗಳೇನು? ಕದಲಿದ ನಂಬಿಕೆ ಗಳೇನು? ಅವನ್ನೆಲ್ಲ ನಿಭಾಯಿಸಿ ಬದುಕನ್ನು ಮರಳಿ ಹಳಿಗೆ ಎತ್ತಾಕಿಕೊಂಡು ಬಂದಿದ್ದು ಹೇಗೆ? ಸಾವಿನ ಕದ ತಟ್ಟಿ ಬಂದ ಆ ಅನುಭವ ಹೇಗಿತ್ತು? ಕರೋನಾ ನಮ್ಮೊಳಗೇ ತಂದ ಪರಿವರ್ತನೆ
ಏನು? ಬದುಕು ಮೂರಾಬಟ್ಟೆಯಾದಾಗ, ಆತ್ಮವಿಶ್ವಾಸ, ಪ್ರೀತಿ, ಆನಂದ, ಸಮಾಧಾನ, ನಂಬಿಕೆಗಳಿಂದ ಪುನಃ ನೆಲಸಮವಾದ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ? ಖ್ಯಾತ ಸಿನಿಮಾ ನಟ ಮತ್ತು ತಮ್ಮ ಸಂವೇದನಾಶೀಲ ಕಾಳಜಿಯಿಂದ ಆಪ್ತವಾಗುವ ಅನುಪಮ್ ಖೇರ್ Your Best Day Is Today ಎಂಬ ಕೃತಿಯಲ್ಲಿ, ವೈಯಕ್ತಿಕ ಅನುಭವದ ನೆಲೆಯಲ್ಲಿ ಅವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಇಲ್ಲಿ ವಿವರಿಸಿದ್ದಾರೆ.

ನಾನು ಈ ಪುಸ್ತಕವನ್ನು ‘ಇಂದಿನ ದಿನವೇ ಶುಭದಿನವು!’ ಎಂದು ಕನ್ನಡಕ್ಕೆ ಅನುವಾದ ಮಾಡಿದ್ದೇನೆ. ಫೆಬ್ರವರಿ ಐದರಂದು ಈ ಕೃತಿ ಬಿಡುಗಡೆ ಆಗಲಿದೆ. ಕರೋನಾ ಕರಾಳ ಅಧ್ಯಾಯ ಮುಗಿದ ಬಳಿಕ ಬಿಡುಗಡೆ ಯಾದ ಖೇರ್ ಅವರ ಕೃತಿಯನ್ನು ನಾನು ಆಸ್ಥೆಯಿಂದ ಓದುತ್ತಿದ್ದೆ. ಕರೋನಾ ಬಗ್ಗೆ ಹೇಳಲು ಎಲ್ಲರಿಗೂ ಕಥೆಗಳಿವೆ. ಆದರೆ ಯಾರೂ ತಮ್ಮ ಅನುಭವಗಳನ್ನು ದಾಖಲಿಸುವ ಗೋಜಿಗೆ ಹೋಗದಿದ್ದುದು ಸೋಜಿಗವೇ. ನನ್ನ ಅನುಭವ
ಬೇರೆಯವರದ್ದೂ ಆಗಿರಲಿಕ್ಕೆ ಸಾಕು ಎಂದು ಸುಮ್ಮನಾಗಿರ ಬೇಕು. ಆದರೆ ಖೇರ್ ಮಾತ್ರ ಆ ದಿನಗಳ ಚಿತ್ರಣವನ್ನು ನಮ್ಮ ಮುಂದೆ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಈ ಕರೋನಾ ಬಿಕ್ಕಟ್ಟು ಒಂದು ಅಂಶವನ್ನಂತೂ ಸ್ಪಷ್ಟವಾಗಿ ನಮಗೆ ಹೇಳಿದೆ.

ಅದೇನೆಂದರೆ, ‘ಇಂದಿನ ದಿನವೇ ಶುಭ ದಿನವು!’ ಹೀಗಾಗಿ ಈ ಪುಸ್ತಕಕ್ಕೆ ಆ ಹೆಸರನ್ನೇ ಇಟ್ಟಿದ್ದೇನೆ. ಈ ಕೃತಿಯನ್ನು ಅನುವಾದಿಸಲು ಬೇಕಾದ ಅಗತ್ಯ ಅನುಮತಿ ದೊರಕಿಸಿಕೊಡುವಲ್ಲಿ ಅನುಪಮ್ ಖೇರ್ ನನಗೆ ನೆರವಾದರು. ಅವರ ಯೋಗದಾನ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬದುಕಿಗೆ ಪ್ರೀತಿಯುಣಿಸುವ, ವಿಶ್ವಾಸದ ಕೈತುತ್ತು ತಿನಿಸುವ ಭರವಸೆಯ ಸಾಲುಗಳು ಇದರಲ್ಲಿವೆ. ಈ ಕೃತಿ ನಿಮ್ಮಲ್ಲಿ ಜೀವನಪ್ರೀತಿಯ ಪಸೆಯನ್ನು ಮೂಡಿಸಿ, ಮನಸ್ಸನ್ನು ತೇವವಾಗಿಸುವುದಂತೂ ಸತ್ಯ.

ದೇಗುಲ, ಚರ್ಚುಗಳೇಕೆ ಬೇಕು ? 
ಹಿಂದುಗಳಿಗೆ ದೇವಸ್ಥಾನ ಹೇಗೋ, ಕ್ರಿಶ್ಚಿಯನ್ನರಿಗೆ ಚರ್ಚು ಗಳು, ಮುಸಲ್ಮಾನರಿಗೆ ಮಸೀದೆಗಳು. ದೇವಸ್ಥಾನ ಗಳಾಗಲಿ, ಚರ್ಚುಗಳಾಗಲಿ ಕೇವಲ ಭೌತಿಕ ಕಟ್ಟಡಗಳಲ್ಲ. ಪೂಜೆ ಅಥವಾ ಪ್ರಾರ್ಥನಾ ಸ್ಥಳಗಳಲ್ಲ. ಅವು ನಮ್ಮ ನಂಬಿಕೆ, ವಿಶ್ವಾಸ ಮತ್ತು ಶ್ರದ್ಧೆಯ ತಾಣಗಳು. ಬದುಕಿನ ಬಗ್ಗೆ ನಾವು ಪ್ರೇರಣೆ ಪಡೆಯಲು ಸಾಧ್ಯವಾಗುವುದು ಈ ಪವಿತ್ರ ತಾಣಗಳಲ್ಲಿ. ಅನೇಕರು ಭಾವಿಸಿದಂತೆ ದೇಗುಲ ಅಥವಾ ಚರ್ಚುಗಳು ಕೇವಲ ಪೂಜಾ ಕೇಂದ್ರಗಳಲ್ಲ. ಶ್ರದ್ಧಾಕೇಂದ್ರಗಳೂ ಅಲ್ಲ. ಅವು ನಮ್ಮ ಜ್ಞಾನ, ವಿವೇಕವನ್ನು ಅರಳಿಸುವ ಬೌದ್ಧಿಕ ನೆಲೆಗಟ್ಟುಗಳು.

ಸಂಸ್ಕೃತಿ ಮತ್ತು ಸಂಸ್ಕಾರಗಳ ಬೀಡುಗಳು. ಒಂದು ಕ್ಷಣ ಯೋಚಿಸಿ, ಒಂದು ವೇಳೆ ಈ ಭೂಮಿಯ ಮೇಲೆ ಮರ-ಗಿಡಗಳು ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಒಂದು ಕ್ಷಣ ಊಹಿಸಿಕೊಳ್ಳಿ. ನೀರು-ಕೊಳಗಳು ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಕಲ್ಪಿಸಿಕೊಳ್ಳಿ. ಅದಾದ ಬಳಿಕ, ನಾವು ವಾಸಿಸುವ ಪರಿಸರ ದಲ್ಲಿ ದೇವಾಲಯ ಮತ್ತು ಚರ್ಚು ಇಲ್ಲದಿದ್ದರೆ ಹೇಗಿರುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ಅರಣ್ಯ, ಗಿಡ-ಮರಗಳಿಲ್ಲದ ಜಗತ್ತು ಹೇಗೋ, ದೇಗುಲ ಗಳಿಲ್ಲದ ನಾಡು ಕೂಡ ಹಾಗೆ. ಈ ಜನ್ಮದಲ್ಲಿ ನಾವು ಮನುಷ್ಯರಾಗಿ ಹುಟ್ಟುವುದು ಎಷ್ಟು ಶ್ರೇಷ್ಠವೋ, ಮನುಷ್ಯತ್ವದ ಸಂಸ್ಕಾರ ಪಡೆಯುವುದೂ ಅಷ್ಟೇ ಮುಖ್ಯ.

ಮನುಷ್ಯರಾಗಿ ಹುಟ್ಟಿದವರೆಲ್ಲ ಮನುಷ್ಯತ್ವದ ಸಂಪನ್ನ ಗುಣ, ಗುಣ ವಿಶೇಷಣಗಳನ್ನು ಪಡೆಯುವುದಿಲ್ಲ. ಅಂಥವರಲ್ಲಿ ಮನುಷ್ಯತ್ವದ ಜೀವಕೋ ಶಗಳನ್ನು ಅರಳಿಸಲು, ಸಂಸ್ಕಾರಗಳನ್ನು ನೀಡಲು ದೇಗುಲಗಳು ಬೇಕೇ ಬೇಕು. ಆ ತಾಣದಲ್ಲಿ ಮನುಷ್ಯನಾದವನು ವಿಷಯ, ಮಾಹಿತಿ ಪಡೆಯು ವುದರ ಜತೆಗೆ, ಅರಿವು, ಜ್ಞಾನವನ್ನು ಪಡೆಯು ತ್ತಾನೆ. ಅಗ್ನಿದಿವ್ಯದಲ್ಲಿ ಹೂವೂ ಬಂಗಾರವಾಗು ವಂತೆ, ಮನುಷ್ಯ ನಾದವನು ಮನುಷ್ಯತ್ವದ ಗುಣ ಶ್ರೇಷ್ಠತೆಗಳನ್ನು ಪಡೆಯುತ್ತಾನೆ, ದಕ್ಕಿಸಿಕೊಳ್ಳುತ್ತಾನೆ.

ಈ ಕಾರಣಗಳಿಂದ ನಮಗೆ ದೇಗುಲಗಳು ಬೇಕು. ಕೆಲವು ರಾಜಕಾರಣಿಗಳು, ಶಾಸಕರು, ತಮ್ಮ ಊರಿನಲ್ಲಿ ಒಂದು ಪೊಲೀಸ್ ಠಾಣೆಯೊಂದನ್ನು ಸ್ಥಾಪಿಸುವಲ್ಲಿ ನಾನು ಮಹತ್ವದ ಪಾತ್ರವಹಿಸಿದೆ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಯಾರೂ ಮಾಡದ ಸಾಧನೆ ಮಾಡಿದ್ದೇನೆಂದು ಬೀಗುತ್ತಾರೆ. ಯಾವುದೇ ಊರಿನಲ್ಲಿ ಪೊಲೀಸ್ ಠಾಣೆಯೊಂದು ತಲೆಯೆತ್ತಿದರೆ, ಸಂಕಟವಾಗುತ್ತದೆ. ಕಾರಣ ಇಷ್ಟೇ, ಒಂದು ಊರಿನಲ್ಲಿ ಪೊಲೀಸ್ ಠಾಣೆ ತಲೆಯೆತ್ತಿದರೆ, ಆ ಊರಿನಲ್ಲಿ ಎಲ್ಲವೂ ಸರಿ ಇಲ್ಲ ಎಂದರ್ಥ. ಶಾಂತಿ ಸುವ್ಯವಸ್ಥೆ ಕದಡುವ ಶಕ್ತಿಗಳು ತಲೆಯೆತ್ತಿದ್ದಾರೆ ಎಂದರ್ಥ. ಊರಿನ
ನೆಮ್ಮದಿ ಕೆಡಿಸುವವರ ಕೈ ಮೇಲಾಗಿದೆ ಎಂದರ್ಥ. ಅದಕ್ಕಾಗಿ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗುತ್ತದೆ. ಹೀಗಾಗಿ ಯಾವುದೇ ಊರಿನಲ್ಲಿ ಪೊಲೀಸ್ ಸ್ಟೇಷನ್ ತಲೆಯೆತ್ತುವುದು ಒಳ್ಳೆಯ ಲಕ್ಷಣವಲ್ಲ.

ಅದೇ, ಯಾವುದೇ ಊರಿನಲ್ಲಿ ದೇಗುಲ ತಲೆ ಎತ್ತಿದರೆ, ಆ ಊರಿನ ಜನ ಧರ್ಮಬೀರುಗಳು, ದೈವಭಕ್ತರು, ಸಂಭಾವಿತರು, ದೇವರಲ್ಲಿ ನಂಬಿಕೆ ಇರುವವರು, ಧಾರ್ಮಿಕ ಕೈಂಕರ್ಯಗಳಲ್ಲಿ ಆಸಕ್ತಿಯಿರುವವರು ಎಂದರ್ಥ. ಯಾರಲ್ಲಿ ಈ ಗುಣ ವಿಶೇಷಣಗಳು ಇರುವವೋ, ಅವರು ತಮ್ಮ
ಸುತ್ತ-ಮುತ್ತ ಅಶಾಂತಿ-ಕ್ಷೋಭೆಗೆ ಅವಕಾಶ ನೀಡುವು ದಿಲ್ಲ. ದೇವರನ್ನು ನಮಿಸುವ ಕೈಗಳು ಕಡಿಯಲಾರವು, ಕೊಲ್ಲಲಾರವು. ಹತ್ತು ಠಾಣೆಗಳಿಂದ ಸಾಧಿಸಲಾಗದ್ದನ್ನು ಒಂದು ದೇಗುಲ ಮಾಡಬಲ್ಲುದು. ಇಡೀ ಸಮಾಜವನ್ನು ನಿಯಂತ್ರಿಸುವ ತಾಕತ್ತಿರುವುದು ಪೊಲೀಸರಿಗಲ್ಲ, ದೇಗುಲ, ಚರ್ಚ್, ಮಸೀದಿ ಎಂಬ ಶ್ರದ್ಧಾಕೇಂದ್ರಗಳಿಗೆ.

ನಾನು ಇಲ್ಲಿ ಇಂಗ್ಲೆಂಡಿನ ಒಂದು ನಗರದಲ್ಲಿ ನಡೆದ ಒಂದು ಸಣ್ಣ ಪ್ರಸಂಗವನ್ನು ಹೇಳುತ್ತೇನೆ. ಅದು ಸುಮಾರು ಒಂದು ಸಾವಿರ ಜನರಿರುವ ಒಂದು ಊರು. ಸುಮಾರು 50 ವರ್ಷಗಳ ಹಿಂದೆ, ಆ ಊರಿನಲ್ಲಿ ಒಂದೇ ಒಂದು ಚರ್ಚ್ ಇರಲಿಲ್ಲ. ಆದರೆ ಆ ಊರಿನಲ್ಲಿ ನಾಲ್ಕು ಬಾರ್ ಮತ್ತು ಎರಡು ಪಬ್
ಗಳಿದ್ದವು. ಒಂದೆರಡು ಡ್ಯಾನ್ಸ್ ಬಾರ್‌ಗಳಿದ್ದವು. ಆ ಊರಿನ ಜನ ತಮ್ಮ ಬಿಡುವಿನ ವೇಳೆಯಲ್ಲಿ ಅಥವಾ ಕೆಲಸವಿದ್ದರೂ ಬಿಡುವು ಮಾಡಿಕೊಂಡು, ಬಾರ್, ಪಬ್‌ಗಳಲ್ಲಿ ಕಳೆಯುತ್ತಿದ್ದರು. ಆ ಊರಿಗೆ ಭೇಟಿ ನೀಡಿದ ಬಿಷಪ್‌ಗೆ, ಒಂದೇ ಒಂದು ಚರ್ಚ್ ಇರಬಾರದಿತ್ತೇ ಎಂದು ಅನಿಸಿತು. ಆ ಬಿಷಪ್ ಬಹಳ ಪ್ರಯತ್ನಪಟ್ಟು ಒಂದು ಚರ್ಚ್ ಕಟ್ಟಲು ಮುಂದಾದ. ಜನ ಸ್ವಯಂಪ್ರೇರಿತರಾಗಿ ಹಣ ನೀಡಿದರು. ಎರಡು ವರ್ಷಗಳೊಳಗೆ ಆ ಊರಿನಲ್ಲಿ ಒಂದು ಚರ್ಚ್ ತಲೆಯೆತ್ತಿತು.

ಅದೇನು ದೇವರ ಪವಾಡವಲ್ಲ, ಚರ್ಚ್‌ನಲ್ಲಿ ಜನ ನಿಯಮಿತವಾಗಿ ಸೇರುವಂತಾದರು. ಸಮಾನ ಮನಸ್ಕರ ಗುಂಪು ಬೆಳೆಯಲಾರಂಭಿಸಿತು. ಆಗ ಅಲ್ಲಿ ಸದ್ವಿಚಾರಗಳು ಮುನ್ನೆಲೆಗೆ ಬರುವಂತಾಯಿತು. ಆ ಊರಿನಲ್ಲಿ ಎರಡು ಗ್ರಂಥಾಲಯಗಳು ತಲೆಯೆತ್ತಿದವು. ಬಿಡುವಿನ ವೇಳೆಯಲ್ಲಿ ಬಾರ್‌ಗೆ ಹೋಗುವವರು, ಗ್ರಂಥಾಲಯದೆಡೆಗೆ ಹೋಗಲಾರಂಭಿಸಿದರು. ಕ್ರಮೇಣ ಊರಿನಲ್ಲಿ ಒಂದು ಆರ್ಟ್ ಗ್ಯಾಲರಿ ತಲೆಯೆತ್ತಿತ್ತು. ರಂಗ ಚಟುವಟಿಕೆಗಳು ಗರಿಗೆದರಿದವು.

ಇದಾಗಿ ಸುಮಾರು ಒಂದು ವರ್ಷದ ಬಳಿಕ, ಬಾರ್, ಪಬ್ಬುಗಳಿಗೆ ಹೋಗುವಾರ ಸಂಖ್ಯೆಯಲ್ಲಿ ಗಣನೀಯ ಇಳಿಮುಖ ಕಂಡಿತು. ಜನರ ಏಕಾಗ್ರತೆ ಬೇರೆಡೆಗೆ ಹೊರಳಿತು. ಊರಿನಲ್ಲಿ ಬುಕ್ ಕ್ಲಬ್‌ಗಳು ಹುಟ್ಟಿಕೊಂಡವು. ಸ್ವಯಂ ಸೇವಾ ಕೇಂದ್ರಗಳು ತಲೆಯೆತ್ತಿದವು. ಮಹಿಳೆಯರು ಸಾಹಿತ್ಯ-
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲಾ ರಂಭಿಸಿದರು. ಇದರಿಂದ ಬಾರ್, ಪಬ್‌ಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಲಾರಂಭಿಸಿತು. ಇದು ವ್ಯಾವಹಾರಿಕ ವಾಗಿ ಲಾಭದಾಯಕ ಅಲ್ಲ ಎಂಬುದು ಮನವರಿಕೆ ಆಗುತ್ತಿದ್ದಂತೆ, ಬಾರ್, ಪಬ್‌ಗಳು ಬಂದ್ ಆದವು. ಒಂದು ಚರ್ಚ್ ಆ
ಊರಿನಲ್ಲಿ ನೋಡನೋಡುತ್ತಿದ್ದಂತೆ ಒಂದು ಅಗಾಧ ಪ್ರಮಾಣದ ಬದಲಾವಣೆಗೆ ಕಾರಣವಾಗಿತ್ತು.

ಈ ಕಾರಣದಿಂದ ಒಂದು ಊರಲ್ಲಿ ದೇಗುಲ ಅಥವಾ ಚರ್ಚುಗಳು ನಿರ್ಮಾಣವಾಗುತ್ತಿದೆ ಅಂದ್ರೆ, ಆ ಊರಿನಲ್ಲಿ ಒಂದಷ್ಟು ಉತ್ತಮ ಚಿಂತನೆ ಮಾಡು ವವರು ರೂಪುಗೊಳಿತ್ತಿದ್ದಾರೆ ಎಂದು ತಕ್ಷಣ ಭಾವಿಸಬಹುದು. ದೇಗುಲಗಳ ಗಲಿ, ಚರ್ಚುಗಳಗಲಿ, ಮಸೀದಿಗಳಗಲಿ ಹೇಳಿ ಕೊಡುವುದು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳ ಬಗ್ಗೆ. ಉತ್ತಮ ಗುಣಗಳನ್ನು ರೂಢಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ.

ಇತ್ತೀಚೆಗೆ ಒಬ್ಬ ಪ್ರಗತಿಪರ ಚಿಂತಕರೊಬ್ಬರು, ‘ಈ ದೇವಾಲಯಗಳನ್ನು ನಿರ್ಮಿಸುವ ಬದಲು ಆಸ್ಪತ್ರೆ ನಿರ್ಮಿಸಿದ್ದರೆ ಎಷ್ಟೋ ಒಳ್ಳೆಯದಿತ್ತು’ ಎಂದು ಹೇಳಿದ್ದನ್ನು ಕೇಳಿ ಇವೆಲ್ಲ ನೆನಪಾದವು.

 
Read E-Paper click here