ಸಂಗತ
ವಿಜಯ್ ದರಡಾ
ಹೋಳಿ ಹಬ್ಬ ನನ್ನ ಹೃದಯವನ್ನು ಇಷ್ಟೊಂದು ತಟ್ಟಿದ್ದು ಯಾವಾಗ ಎಂಬುದು ಸರಿಯಾಗಿ ನೆನಪಿಲ್ಲ. ಇದು ನನ್ನ ಬದುಕನ್ನು ಗಾಢ ಬಣ್ಣಗಳಲ್ಲಿ ತೋಯಿಸಿದ ಹಬ್ಬ. ತುಂಬಾ ಸಣ್ಣ ವಯಸ್ಸಿನಲ್ಲೇ ನಾನು ಹೋಳಿ ಹಬ್ಬಕ್ಕೆ ಮಾರುಹೋಗಿದ್ದಂತೂ ನಿಜ. ಬಹುಶಃ ನಮ್ಮ ಮನಸ್ಸು ನೆನಪುಗಳನ್ನೂ, ಅನುಭವಗಳನ್ನೂ ಕಲೆಹಾಕಿ ಶೇಖರಿಸಿಟ್ಟುಕೊಳ್ಳುವ ವಯಸ್ಸಿಗೇ ನಾನು ಈ ಹಬ್ಬಕ್ಕೆ ಮನಸೋತಿದ್ದೆ. ಆ ವಯಸ್ಸಿನಿಂದಲೇ ಹೋಳಿ ಹಬ್ಬ ನನ್ನ ಬದುಕಿನ ಅಮೂಲ್ಯ ಅನುಭವಗಳಲ್ಲಿ ಒಂದಾಯಿತು.
ಇವತ್ತಿಗೂ ನನಗೆ ಈ ಹಬ್ಬದ ಬಗ್ಗೆ ಅದೇನೋ ಪ್ರೀತಿ. ಇದು ನಾನು ಮನಸಾರೆ ಸಂಭ್ರಮಿಸುವ ಹಬ್ಬಗಳಲ್ಲಿ ಮುಂಚೂಣಿಯಲ್ಲಿದೆ.
ನೆನಪಿನ ಕನ್ನಡಿಯಲ್ಲೊಮ್ಮೆ ಕಣ್ಣು ಹಾಯಿಸಿದರೆ ಹೋಳಿ ಹಬ್ಬದ ಹಲವಾರು ಬಣ್ಣಗಳು ನನಗೆ ಕಾಣಿಸುತ್ತವೆ. ಈ ಹಬ್ಬದಲ್ಲಿ ಬಣ್ಣಗಳು, ಭಾವನೆಗಳು, ಪ್ರೀತಿ ಹಾಗೂ ಸಂತಸದ ಅಲೆಗಳೊಂದಿಗೆ ನಾನು ತುಂಬಾ ಆಟವಾಡಿದ್ದೇನೆ. ಹೋಳಿ ನನ್ನ ಬದುಕಿನು ದ್ದಕ್ಕೂ ಸಂಬಂಧಗಳ ನಡುವೆ ಸೇತುವೆಯನ್ನು ಕಟ್ಟುವ ಹಬ್ಬವಾಗಿಯೇ ಹೊಸೆದುಕೊಂಡಿದೆ. ಹೂವು ಹಾಗೂ ಕೇಸರಿ ಬಣ್ಣಗಳು ಇದರ ಅನುಭವವನ್ನು ಇನ್ನಷ್ಟು ಗಾಢವಾಗಿಸಿವೆ. ಪ್ರೀತಿ ಪಾತ್ರರನ್ನು ಅಪ್ಪಿಕೊಂಡು, ಅವರಿಗೆ ಬಣ್ಣ ಬಳಿದು, ಭಾಂಗ್ ಬೆರೆಸ ದಿರುವ ತಂಪು ಪಾನಕ ಕುಡಿಯುವುದು ನನ್ನ ಹೋಳಿ ಆಚರಣೆಯ ಪ್ರಮುಖ ಅಂಶ.
ಬಣ್ಣಗಳಿಲ್ಲದ ಬದುಕೂ ಒಂದು ಬದುಕೇ? ಬದುಕಿನಲ್ಲಿ ಬಣ್ಣಗಳೇ ಇಲ್ಲದಿದ್ದರೆ ಅದು ಹೇಗಿರುತ್ತಿತ್ತು ಎಂದು ತುಂಬಾ ಸಲ ಯೋಚಿಸಿದ್ದೇನೆ. ಬಣ್ಣಗಳಿಲ್ಲದಿದ್ದರೆ ಈ ಪ್ರಕೃತಿ ಈಗಿರುವಂತೆ ಆಕರ್ಷಕವಾಗಿ ಇರುತ್ತಿರಲಿಲ್ಲ. ಬಣ್ಣಗಳಿಲ್ಲದಿದ್ದರೆ ಪ್ರಕೃತಿಯ ಜೊತೆಗೇ ವಿಕಾಸಗೊಳ್ಳುತ್ತಾ ಬಂದ ಮನುಷ್ಯ ಕೂಡ ಈಗಿರುವಂತೆ ಇರುತ್ತಿರಲಿಲ್ಲ. ಬದುಕಿನಲ್ಲಿ ಬಣ್ಣಗಳೇ ನಮಗೆ ಖುಷಿ ನೀಡುತ್ತವೆ. ಹೋಳಿ ಹಬ್ಬದಲ್ಲಿ ನಾವು ಸಂಭ್ರಮಿಸುವುದು ಕೂಡ ಅದೇ ಬಣ್ಣವನ್ನೇ ಅಲ್ಲವೇ? ನಾನು ಹುಟ್ಟಿ ಬೆಳೆದಿದ್ದೆಲ್ಲ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯಲ್ಲಿ. ಹೋಳಿ ಹಬ್ಬದ ಸಂದರ್ಭದಲ್ಲಿ ನಮ್ಮ ಊರು ಹೇಗೆ ಸಂಭ್ರಮಪಡುತ್ತಿತ್ತು ಎಂಬುದು ನೆನಪಾಗುತ್ತದೆ.
ಬೇರೆ ಬೇರೆ ಹಿನ್ನೆಲೆಯ, ನಾನಾ ವರ್ಗದ ಜನರು ತಮ್ಮ ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಒಂದೆಡೆ ಸೇರುತ್ತಿದ್ದರು. ನನ್ನ ತಂದೆ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜವಾಹರಲಾಲ್ ದರಡಾ ಆ ಸಂಭ್ರ ಮಾಚರಣೆಯ ನೇತೃತ್ವ ವಹಿಸಿಕೊಳ್ಳುತ್ತಿದ್ದರು. ಅಲ್ಲಿ ಯಾವುದೇ ಭೇದಭಾವ ಇರುತ್ತಿರಲಿಲ್ಲ. ಎಲ್ಲರೂ ಒಂದು, ಎಲ್ಲರೂ ಸಮಾನರು ಹಾಗೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಭಾವನೆಯನ್ನು ನಮ್ಮೂರಿನ ಹೋಳಿ ಹಬ್ಬ ನೀಡುತ್ತಿತ್ತು.
ನನ್ನ ಪ್ರಕಾರ ಇಂದಿಗೂ ಹೋಳಿ ಹಬ್ಬವು ಎಲ್ಲಾ ನಂಬಿಕೆಗಳ ಹಾಗೂ ಎಲ್ಲಾ ಪಂಥಗಳ ಜನರನ್ನು ಪ್ರೀತಿಯ ಬಣ್ಣಗಳ
ಮೂಲಕ ಒಂದಾಗಿಸುವ ಹಬ್ಬವಾಗಿದೆ. ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಬೆಂಬಲಿಸುವವರು ಕೂಡ ಈ ಹಬ್ಬದಲ್ಲಿ ಒಟ್ಟಾಗಿ ಸಂಭ್ರಮಾಚರಣೆ ಮಾಡುತ್ತಾರೆ. ರಾಜಕೀಯ ವೈಷಮ್ಯ ಈ ಹಬ್ಬದಲ್ಲಿ ದೂರವಾಗುತ್ತದೆ. ಹೋಳಿಯ ಪಾನಕ ಕುಡಿದು, ಸಿಹಿ ಹಂಚಿ, ಹಳೆಯ ವೈಮನಸ್ಯಗಳನ್ನೆಲ್ಲ ಮರೆಯುವುದು ಈ ಹಬ್ಬದ ವಿಶೇಷತೆ.
ನನ್ನ ಬಾಲ್ಯದ ಹೋಳಿಯನ್ನು ನೆನೆದಾಗ ಖ್ಯಾತ ಕವಿ ಹರಿವಂಶರಾಯ್ ಬಚ್ಚನ್ ಅವರ ಕವಿತೆಯೊಂದು ನೆನಪಾಗುತ್ತದೆ : ‘ಹೋಲಿ ಹೈ ತೋ ಆಜ್ ಅಪರಿಚಿತ್ ಸೇ ಪರಿಚಯ್ ಕರ್ ಲೋ, ಜೋ ಹೋ ಗಯಾ ಬಿರಾನಾ ಉಸೇ ಭೀ ಅಪನಾ ಕರ್ ಲೋ. ಹೋಲಿ ಹೈ ತೋ ಆಜ್ ಶತ್ರು ಕೋ ಬಾಹೋಂ ಮೇ ಭರ್ ಲೋ, ಹೋಲಿ ಹೈ ತೋ ಆಜ್ ಮಿತ್ರ್ ಕೋ ಪಲಕೋಂ ಮೇ ಧರ್ ಲೋ’. (ಇವತ್ತು ಹೋಳಿಯಲ್ಲವೇ? ಅಪರಿಚಿತರನ್ನು ಪರಿಚಯ ಮಾಡಿಕೋ. ದೂರವಾದವರನ್ನು ಹತ್ತಿರ ಮಾಡಿಕೋ. ಇಂದು ಹೋಳಿಯಲ್ಲವೇ? ಶತ್ರುವನ್ನು ಅಪ್ಪಿಕೋ. ಇಂದು ಹೋಳಿಯಲ್ಲವೇ? ಸ್ನೇಹಿತನನ್ನು ಬಗಲಲ್ಲಿ ಇರಿಸಿಕೋ…)
ನನ್ನ ಪ್ರಕಾರ ಹೋಳಿ ಆಚರಣೆಯ ಪ್ರಮುಖ ಉದ್ದೇಶದಲ್ಲಿ ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸುವುದು ಕೂಡ ಒಂದು. ಜನರಿಗೆ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದು ಕಡೆ ಕಲೆತು ಖುಷಿಪಡಲು ಈ ಹಬ್ಬ ಅವಕಾಶ ನೀಡುತ್ತದೆ. ಹೀಗಾಗಿ ಇಂದಿನ ಕಾಲಘಟ್ಟದಲ್ಲಿ ಈ ಹಬ್ಬ ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ಯುವಕನಾಗಿದ್ದಾಗ ನಾನು ಹೋಳಿಯಾಡಲು ಅಚ್ಚ ಬಿಳಿ ಬಣ್ಣದ ಕುರ್ತಾ ಪೈಜಾಮ ಧರಿಸಿ ಹೋಗುತ್ತಿದ್ದೆ. ಅದರ ಮೇಲೆ ಬೀಳುವ ಬಣ್ಣಗಳು ಹೆಚ್ಚು ಢಾಳಾಗಿ ಕಾಣಿಸುತ್ತವೆ ಎಂಬ ಕಾರಣಕ್ಕೆ. ಆಗೆಲ್ಲಾ ನಾವು ರಾಸಾಯನಿಕ ಬೆರೆಸಿದ ಬಣ್ಣಗಳನ್ನು ಬಳಸುತ್ತಿರಲಿಲ್ಲ.
ಸ್ನೇಹಿತರೆಲ್ಲಾ ಸೇರಿ ಕಾಡಿಗೆ ಹೋಗಿ ತೇಸು ಹೂವು ಸಂಗ್ರಹಿಸಿಕೊಂಡು ಬಂದು ಅದರಿಂದ ಬಣ್ಣ ತಯಾರಿಸುತ್ತಿದ್ದೆವು. ಗುಲಾಲ್ ಸಿದ್ಧಪಡಿಸಲು ಅರಿಶಿಣ ಬಳಸುತ್ತಿದ್ದೆವು. ಆ ಬಣ್ಣಗಳು ಮನಸ್ಸಿಗೆ ಖುಷಿ ಕೊಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಹಿತಕರ ವಾಗಿದ್ದವು. ಆಗೆಲ್ಲ ನಾವು ಎಲ್ಲಾ ಹಬ್ಬಗಳನ್ನೂ ಪ್ರಕೃತಿಯೊಂದಿಗೆ ಹಾಗೂ ಪ್ರಕೃತಿ ಸ್ನೇಹಿಯಾಗಿಯೇ ಆಚರಿಸುತ್ತಿದ್ದೆವು. ಬಾಲ್ಯದಿಂದಲೂ ಅಂತಹದ್ದೊಂದು ಅಭ್ಯಾಸ ನನ್ನಲ್ಲಿ ಬೆಳೆದುಬಂದಿದೆ. ಈಗಲೂ ತೇಸು ಹೂವುಗಳು ಬೇಕಾದಷ್ಟು ಸಿಗುತ್ತವೆ. ಆದರೆ ಯಾರು ಅವುಗಳನ್ನು ಬಣ್ಣ ತಯಾರಿಸಲು ಬಳಸುತ್ತಾರೆ? ಸಮಾಧಾನಕರ ಸಂಗತಿಯೆಂದರೆ ಗುಲಾಲ್ ಬಗ್ಗೆ ನಮ್ಮ ಜನರಲ್ಲಿ ಅಲ್ಪಸ್ವಲ್ಪ ಜಾಗೃತಿ ಮೂಡುತ್ತಿದೆ.
ಸಾವಯವ ಗುಲಾಲ್‌ಗೆ ಬೇಡಿಕೆ ಹೆಚ್ಚುತ್ತಿದೆ. ರಾಸಾಯನಿಕ ರಹಿತ ಗುಲಾಲ್ ಬಳಸಲು ಜನ ಮುಂದಾಗುತ್ತಿದ್ದಾರೆ. ಆದರೆ ಹೋಳಿಯ ದಿನ ಅಲ್ಯುಮಿನಿಯಂ ಬಣ್ಣ ಬಳಿದ ಮುಖಗಳನ್ನು ನೋಡಿದರೆ ನನಗೆ ತುಂಬಾ ಬೇಸರವಾಗುತ್ತದೆ. ಅಂತಹ ಜನರ ಬಗ್ಗೆ ಮರುಕ ಹುಟ್ಟುತ್ತದೆ. ಅವರ ಮುಖದ ಕತೆಯೇನಾಗಬೇಕು? ಪ್ರತಿ ವರ್ಷ ಹೋಳಿಯ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುವವರ ಬಗ್ಗೆ ಸುದ್ದಿಗಳು ಬರುತ್ತವೆ.
ಆದ್ದರಿಂದಲೇ ನಾನು ಸಾಧ್ಯವಾದಷ್ಟು ಪರಿಸರ ಸ್ನೇಹಿ ನೈಸರ್ಗಿಕ ಬಣ್ಣಗಳಿಂದಲೇ ಹೋಳಿಯಾಡಿ ಎಂದು ನನ್ನ ಸಂಪರ್ಕಕ್ಕೆ
ಬರುವವರಿಗೆಲ್ಲ ಹೇಳುತ್ತೇನೆ. ಹೋಳಿ ಯಾವತ್ತೂ ಪರಿಸರಕ್ಕೆ ಪೂರಕವಾಗಿರಬೇಕು. ಕಾಮನ ಸುಡಲು ಮರ ಕಡಿಯುವುದನ್ನೂ ನಾನು ವಿರೋಧಿಸುತ್ತೇನೆ. ಹಬ್ಬಗಳು ಪ್ರಕೃತಿಯನ್ನು ರಕ್ಷಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಪ್ರಕೃತಿಗೆ ಹಾನಿ ಉಂಟು ಮಾಡಬಾರದು. ಕನಿಷ್ಠ ಇಷ್ಟು ತಿಳಿವಳಿಕೆಯಾದರೂ ನಮಗೆ ಇಲ್ಲ ಎಂದಾದರೆ ನಾವೆಂಥ ಆಧುನಿಕ ಜನರು? ಅಮ್ಮನನ್ನು ನಾನು ಪ್ರೀತಿಯಿಂದ ‘ಬಾಯಿ’ ಎಂದು ಕರೆಯುತ್ತಿದ್ದೆ. ಅವಳು ಹೋಳಿಯ ಬಗ್ಗೆ ನನಗೆ ನಾನಾ ಕತೆಗಳನ್ನು ಹೇಳುತ್ತಿದ್ದಳು.
ಅವುಗಳಲ್ಲಿ ಒಂದು ನನಗೆ ಈಗಲೂ ನೆನಪಿದೆ. ಅದು ಕೃಷ್ಣನ ಕಡುಗಪ್ಪು ಬಣ್ಣದ ಬಗ್ಗೆ ಇರುವ ಕತೆ. ಪುಟ್ಟ ಕೃಷ್ಣ ಒಮ್ಮೆ ತನ್ನ ಅಮ್ಮನ ಬಳಿಗೆ ಹೋಗಿ ಅಮ್ಮಾ ನೋಡು ರಾಧೆ ಎಷ್ಟು ಬೆಳ್ಳಗಿದ್ದಾಳೆ, ನಾನು ಮಾತ್ರ ಕಪ್ಪಗಿದ್ದೇನೆ ಎಂದು ಬೇಸರ ಮಾಡಿಕೊಂಡ ನಂತೆ. ಆಗ ಅವನ ಅಮ್ಮ ನೀನು ರಾಧೆಗೆ ನಿನ್ನಂತಹುದೇ ಬಣ್ಣ ಬಳಿದುಬಿಡು ಎಂದು ಹೇಳಿದಳಂತೆ. ಅದರಂತೆ ಕೃಷ್ಣ ಅವಳಿಗೆ ಕಪ್ಪು ಬಣ್ಣ ಬಳಿದನಂತೆ. ಅಂದಿನಿಂದ ಅವರ ಪ್ರೇಮದ ಕತೆಯೂ ಹೋಳಿಯ ಜತೆ ಬೆರೆತುಕೊಂಡು ಬಂದಿದೆ. ಇವತ್ತಿಗೂ ನಾವು ಕೇಳುವ ಅನೇಕ ಹೋಳಿಯ ಹಾಡುಗಳು ಕೃಷ್ಣ-ರಾಧೆಯ ಪ್ರೇಮದ ಕುರಿತಾಗಿವೆ. ಅವುಗಳಲ್ಲಿ ಪ್ರೀತಿಯ ಬಣ್ಣವೇ ಬೆರೆತಿರುತ್ತದೆ. ನಾವು ನೋಡುವ ಅನೇಕ ಸಿನಿಮಾಗಳಲ್ಲಿ ಬೃಜ್‌ನ ಹೋಳಿ ಆಚರಣೆಯ ಡ್ಯಾನ್ಸ್ ಗಳಿರುತ್ತವೆ.
ಪ್ರೌಢಾವಸ್ಥೆಗೆ ಬಂದ ಮೇಲೆ ನಾನು ಹೋಳಿ ಹಬ್ಬದ ಮೂಲದ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿದೆ. ಅವುಗಳಿಗೆಲ್ಲ ಖಚಿತ ಎಂಬಂತಹ ಆಧಾರಗಳಿಲ್ಲವಾದರೂ, ಈ ಹಬ್ಬ ಕನಿಷ್ಠ ಪಕ್ಷ ಕ್ರಿ.ಪೂ. ೬೦೦ರಿಂದ ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿ ಬಂದಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೋಳಿ ಹಬ್ಬದ ಬಗ್ಗೆ ಕಾಳಿದಾಸನ ಕುಮಾರಸಂಭವ ಮಹಾಕಾವ್ಯದಲ್ಲಿ ಹಾಗೂ ಚಾಂದ್‌ಬರಾದಿಯ ಪೃಥ್ವಿರಾಜ್ ರಾಸೋ ಕೃತಿಯಲ್ಲಿ ವಿವರಣೆಗಳು ಸಿಗುತ್ತವೆ. ಸೂರದಾಸ, ರಹೀಂ, ರಷ್ಕನ್, ಪದ್ಮಾಕರ, ಮೀರಾಬಾಯಿ ಹಾಗೂ ಕಬೀರರಂತಹ ಪ್ರಸಿದ್ಧ ಕವಿಗಳು ಹಾಗೂ ಸಂತರು ಹೋಳಿಯನ್ನು ತಮ್ಮ ಕೃತಿಗಳಲ್ಲಿ ಬಣ್ಣಿಸಿದ್ದಾರೆ.
ಬಹಾದೂರ್ ಶಾ ಜಫರ್ ನಂತಹ ಮೊಘಲ್ ದೊರೆ ಕೂಡ ಹೋಳಿ ಆಚರಣೆಗೆ ಪ್ರೋತ್ಸಾಹ ನೀಡುತ್ತಿದ್ದ. ಹೋಳಿ ಹಬ್ಬದ ದಿನ ಜಫರ್ ಸ್ವತಃ ತನ್ನ ಆಸ್ಥಾನಕಾರರಿಂದ ಬಣ್ಣ ಬಳಿಸಿಕೊಂಡು ಸಂಭ್ರಮಪಡುತ್ತಿದ್ದ. ಅಷ್ಟೇಕೆ, ಹೋಳಿ ಬಗ್ಗೆ ಅವನೊಂದು ಕವಿತೆ ಕೂಡ ಬರೆದಿದ್ದಾನೆ: ಕ್ಯೋಂ ಮೋ ಪೇ ರಂಗ್ ಕಿ ಮಾರಿ ಪಿಚಕಾರಿ, ದೇಖೋ ಕುನ್ವರ್‌ಜೀ ದೂಂಗಿ ಮೇ ಗಾರಿ… ನಮ್ಮ ಸಾಹಿತ್ಯ ಸಂಪತ್ತಿನಲ್ಲಿ ಇಂತಹ ಅಸಂಖ್ಯಾತ ರಚನೆಗಳು ಸಿಗುತ್ತವೆ. ಭರತೇಂದು ಹರಿಶ್ಚಂದ್ರ ರಚಿಸಿದ ಒಂದು ಕವಿತೆಯನ್ನು ನನ್ನ ಪ್ರೊಫೆಸರ್ ಒಬ್ಬರು ಹೇಳಿದ್ದರು. ನನಗದು ತುಂಬಾ ಇಷ್ಟವಾಗಿತ್ತು.
ಹೀಗಾಗಿ ಇವತ್ತಿಗೂ ನೆನಪಿನಲ್ಲುಳಿದಿದೆ: ‘ಗಲೇ ಮುಝಕೋ ಲಗಾ ಲೋ ಏಯ್ ದಿಲ್ದಾರ್ ಹೋಲಿ ಮೇ, ಬುಝೇ ದಿಲ್ ಕಿ ಲಗಿ ಭೀ ತೋ ಏಯ್ ಯಾರ್ ಹೋಲಿ ಮೇ. ನಹೀ ಯೇ ಹೈ ಗುಲಾಲೇ-ಸುರ್ಕ್ ಉಡ್ತಾ ಹರ್ ಜಗಹ ಪ್ಯಾರೇ, ಯೇ ಆಶಿಕ್ ಕಿ ಹೈ ಉಮ್ದಿ ಆಹೇ ಆತಿಶ್ ಬಾರ್ ಹೋಲಿ ಮೇ. ಗುಲಾಬಿ ಗಾಲ್ ಪರ್ ಕುಚ್ ರಂಗ್ ಮುಝಕೋ ಭೀ ಜಮಾನೇ ದೋ, ಮನಾನೇ ದೋ
ಮುಝೇ ಭಿ ಜಾನೇಮನ್ ತ್ಯೋಹಾರ್ ಹೋಲಿ ಮೇ.’ ಸ್ನೇಹ, ಪ್ರೀತಿ, ಕಾಳಜಿ ಹಾಗೂ ಸಂಭ್ರಮವನ್ನು ಹಂಚುವ ಹೋಳಿಯ ಬಣ್ಣಗಳ ಅಲೆಯಲ್ಲಿ ನಾವೂ ಒಂದಷ್ಟು ಖುಷಿಪಡೋಣ. ನಮ್ಮ ಬದುಕನ್ನು ಹೋಳಿಯ ಬಣ್ಣಗಳಿಂದ ತೋಯಿಸೋಣ. ಎಲ್ಲರ ಬದುಕಿನಲ್ಲೂ ಹೋಳಿಯು ಪ್ರೀತಿ, ದಯೆ ಹಾಗೂ ಒಗ್ಗಟ್ಟನ್ನು ತರಲಿ. ಹೋಳಿಯ ಬಣ್ಣಗಳಿಗೆ ಆ ಶಕ್ತಿ ಖಂಡಿತ ಇದೆ.
(ಲೇಖಕರು : ಹಿರಿಯ ಪತ್ರಕರ್ತರು, ರಾಜ್ಯಸಭಾ ಮಾಜಿ
ಸದಸ್ಯರು)