ಜೀವನಶೈಲಿ
ಡಾ.ದಯಾನಂದ ಲಿಂಗೇಗೌಡ
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆ, ವೈದ್ಯರಿಗೆ ಬರೆದ ಪತ್ರ ಸಂಚಲನ ಮೂಡಿಸಿದೆ. ಆ ಪತ್ರದ ಸಾರಾಂಶ ಈಗಿದೆ. ಸಾಂಕ್ರಾಮಿಕವಲ್ಲದ ರೋಗಗಳಾದ ತಂಬಾಕು ಸೇವನೆ, ವ್ಯಾಯಾಮ ರಹಿತ ಜೀವನಶೈಲಿ, ಮದ್ಯ ಪಾನ, ಅನಾರೋಗ್ಯಕರ ಆಹಾರ ಸೇವನೆ ಶೇ.೬೩ ಸಾವಿಗೆ ಕಾರಣವಾಗುತ್ತಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆ, ವೈದ್ಯರಿಗೆ ಬರೆದ ಪತ್ರ ಸಂಚಲನ ಮೂಡಿಸಿದೆ. ಆ ಪತ್ರದ ಸಾರಾಂಶ ಈಗಿದೆ. ಸಾಂಕ್ರಾಮಿಕವಲ್ಲದ ರೋಗಗಳಾದ ತಂಬಾಕು ಸೇವನೆ, ವ್ಯಾಯಾಮ ರಹಿತ ಜೀವನಶೈಲಿ, ಮದ್ಯಪಾನ ಮತ್ತು ಅನಾ ರೋಗ್ಯಕರ ಆಹಾರ ಸೇವನೆ ಶೇಕಡ ೬೩ ರಷ್ಟು ಸಾವಿಗೆ ಕಾರಣವಾಗುತ್ತಿದೆ.
ಮದ್ಯಪಾನ ಸೇವನೆಯಿಂದ ಪಿತ್ತಜನಕಾಂಗದ ರೋಗಗಳು, ಯಕೃತ್ತಿನ ಕ್ಯಾನ್ಸರ್, ಅನ್ನ ನಾಳದ ಮತ್ತು ಗಂಟಲಿನ ಕ್ಯಾನ್ಸರ್ ಬರುವ ಸಂಭವ ಹೆಚ್ಚಾಗಿರುತ್ತದೆ. ವೈದ್ಯರ ಜೀವನ ಶೈಲಿ ಆದರ್ಶಪ್ರಾಯ ವಾಗಿರಬೇಕು. ಆದ್ದರಿಂದ ವೈದ್ಯಕೀಯ ಸಮ್ಮೇಳನ ಗಳಲ್ಲಿ ಮದ್ಯಪಾನ ಮಾಡುವುದನ್ನು ನಿಲ್ಲಿಸಿ, ವೈದ್ಯರು ಮೇಲ್ಪಂಕ್ತಿ ಉದಾಹರಣೆಯಾ ಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸ ಲಾಗಿದೆ. ಸದ್ಯಕ್ಕೆ ಈ ಪತ್ರ, ಸಲಹೆ ರೂಪದಲ್ಲಿ ಇರುವು ದಾದರೂ, ಮುಂದೆ ಆದೇಶದ ರೂಪ ಪಡೆಯುತ್ತಿದೆಯೋ ಏನೋ ಗೊತ್ತಿಲ್ಲ. ಪತ್ರದ ಕೊನೆಯಲ್ಲಿ, ಈ ಪಾತ್ರದ ಆಶಯ ಈಡೇರಿದರೆ, ಇದನ್ನೇ ಇತರೆ ಕ್ಷೇತ್ರದ ಸಭೆ ಸಮಾರಂಭಗಳಿಗೂ ಕೂಡ ವಿಸ್ತರಿಸುವ ಇಂಗಿತವನ್ನು ಭಾರತ ಸರ್ಕಾರ ವ್ಯಕ್ತಪಡಿಸಿದೆ.
ಈ ವಿಷಯವನ್ನು ವೈದ್ಯರ ಸಮೂಹ ಹೇಗೆ ಸ್ವೀಕರಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಪತ್ರ ಬರೆಯು ವುದಕ್ಕಿಂತ ಮುಂಚೆ ನಾನು ಭಾಗವಹಿಸಿದ ವೈದ್ಯಕೀಯ ಸಮ್ಮೇಳನದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಇದು ಬಿಸಿ ಬಿಸಿ ಚರ್ಚೆ ಯಾಗಿತ್ತು. ಮದ್ಯಪಾನ ಮಾಡದ ಹೊಸ ಅಧ್ಯಕ್ಷರು, ಕಳೆದ ಸಾಲಿನ ವೈದ್ಯಕೀಯ ಸಮ್ಮೇಳನದಲ್ಲಿ ಬಂದ ಲಕ್ಷಗಟ್ಟಲೆ ಮದ್ಯದ ಬಿಲ್ಲಿನ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು.
ಮದ್ಯಪಾನ ಪ್ರಿಯ ಹಳೆಯ ಕಾರ್ಯದರ್ಶಿಗಳು ಮದ್ಯಪಾನ ಎಂಬುದು ಇಂದು ಸಾಮಾಜಿಕ ಪಿಡುಗಾಗಿ ಉಳಿದಿಲ್ಲ. ಅದೊಂದು ಆಧುನಿಕ ಜೀವನಶೈಲಿ. ಹಾಗೆಂದು ಇಲ್ಲಿ ಬರುವ ವೈದ್ಯರು ಕಂಠ ಮಟ್ಟವೇನು ಕುಡಿಯುವುದಿಲ್ಲ. ಮದ್ಯಪಾನ ಜನರೊಂದಿಗೆ ಸುಗಮವಾಗಿ ಬೆರೆಯಲು ಸಹಾಯಕವಾಗುತ್ತದೆ. ಆದ್ದರಿಂದ ಮದ್ಯ ಪಾನವನ್ನು ನಿಲ್ಲಿಸುವುದರಿಂದ ಸಮ್ಮೇಳನ ನೀರಸವಾಗುವ ಸಂಭವವಿದೆ ಎಂದು ಸಮಜಾಯಿಷಿ ಕೊಟ್ಟಿದ್ದರು. ಮದ್ಯ ಪ್ರಿಯರ ಸಂಖ್ಯೆ ಜಾಸ್ತಿ ಇದ್ದಿದ್ದರಿಂದಲೋ ಅಥವಾ ಬಹಳ ಕಾಲದಿಂದ
ಇದು ನಡೆದು ಬಂದಿದ್ದರಿಂದಲೋ ಏನೋ, ಹೊಸ ಅಧ್ಯಕ್ಷರು ಆ ಕ್ಷಣಕ್ಕೆ ಸುಮ್ಮನಿರಬೇಕಾಯಿತು.
ವೈದ್ಯಕೀಯ ಸಮ್ಮೇಳನದಲ್ಲಿ ದಿನದ ಅಂತ್ಯಕ್ಕೆ ಮದ್ಯಪಾನ ಲಭ್ಯವಿರುವುದು ಸಾಮಾನ್ಯ. ಈ ಸಂಸ್ಕೃತಿ ಭಾರತಕ್ಕೆ ಹೇಗೆ ಬಂದಿತ್ತು ಎಂಬುದು ಗೊತ್ತಿಲ್ಲ. ಏಕೆಂದರೆ ಮುಂದುವರಿದ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ವೈದ್ಯ ಸಮಾರಂಭಗಳಲ್ಲಿ ಮದ್ಯಪಾನ ಬಿಡಿ, ಊಟವೂ ಕೂಡ ಕೆಲವೊಮ್ಮೆ ಆಯೋಜಕರು ಆಯೋಜಿಸಿರುವುದಿಲ್ಲ. ಮುಂದುವರಿದ ದೇಶದಲ್ಲಿ ನಡೆಯುವ ವೈದ್ಯಕೀಯ ಸಮಾರಂಭ ಗಳಲ್ಲಿ ಉಚಿತ ಊಟದ ಮಾಡಬೇಕೆಂದರೆ, ಊಟದ ಸಮಯದಲ್ಲಿ ಕಂಪನಿ ಪ್ರಾಯೋಜಿತ ವೈದ್ಯಕೀಯ ಭಾಷಣಗಳನ್ನು ಕೇಳಬೇಕಾಗಿ ಬರುತ್ತದೆ.
ಕಂಪನಿ ಪ್ರಾಯೋಜಿತ ಭಾಷಣಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ನಾವೇ ಹಣಕೊಟ್ಟು ಊಟವನ್ನುಖರೀದಿಸಬೇಕು. ಇನ್ನು
ಮದ್ಯಪಾನ ಸರಬರಾಜು ದೂರದ ಮಾತೆ ಬಿಡಿ. ಆದರೆ ಭಾರತೀಯ ವೈದ್ಯಕೀಯ ಸಮಾರಂಭಗಳ ವಿಚಾರ ಆಗಲ್ಲ. ಸಮಾ ರಂಭಗಳಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ವಿವಿಧ ರೀತಿಯ ಭಕ್ಷ್ಯ ಭೋಜನಗಳು ಮತ್ತು ಸಾಯಂಕಾಲ ಮನೋರಂಜನಾ ಕಾರ್ಯಕ್ರಮ ದ ಜೊತೆ ಮದ್ಯಪಾನ ಲಭ್ಯವಿರುತ್ತದೆ.
ಸಾಮಾನ್ಯವಾಗಿ ರಾಜ್ಯ ಅಥವಾ ರಾಷ್ಟ್ರ ಮಟ್ಟದ ದೊಡ್ಡ ಸಮಾರಂಭವಾದರೆ, ಪ್ರಸಿದ್ಧ ವ್ಯಕ್ತಿಗಳನ್ನು ಹಣಕೊಟ್ಟು ಸಮಾ ರಂಭಕ್ಕೆ ಆಹ್ವಾನಿಸಲಾಗುತ್ತದೆ. ಪ್ರತಿಷ್ಠಿತ ಗಾಯಕರು, ನೃತ್ಯಗಾರರು ಇಲ್ಲಿ ಭಾಗವಹಿಸಿ ನೆರೆದವರನ್ನು ರಂಜಿಸುತ್ತಾರೆ. ಸಮ್ಮೇಳನದ ಯಶಸ್ಸು ವೈದ್ಯಕೀಯ ಚರ್ಚೆ ಮಾತ್ರ ನಿರ್ಧರಿಸುವುದಿಲ್ಲ. ಒಟ್ಟಿನಲ್ಲಿ ವೈದ್ಯಕೀಯ ಸಮಾರಂಭಗಳು ಒಂದು ರೀತಿಯ ಪ್ರವಾಸ, ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮವಾಗಿ ಬದಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಪತ್ರವನ್ನು ವೈದ್ಯಕೀಯ ಸಮುದಾಯ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾಲವೇ ಉತ್ತರಿಸಬೇಕು. ಈ ಹಿಂದಿನ ಅನುಭವಗಳನ್ನು ಆಧರಿಸಿ
ಹೇಳಬೇಕಾದರೆ, ಈ ಪತ್ರದ ಮೇಲೆ ಮದ್ಯಪಾನ ಪ್ರಿಯ / ಮದ್ಯಪಾನ ವಿರೋಧಿ ವೈದ್ಯರುಗಳು ಎಂಬ ಧ್ರುವೀಕರಣ ವಾಗುತ್ತದೋ ಅಥವಾ ಮೋದಿ ವಿರೋಧಿ/ ಮೋದಿ ಪರ ಎಂಬ ಧ್ರುವೀಕರಣ ಎಂಬ ಕುತೂಹಲಕ್ಕೆ ಕಾಲವೇ ಉತ್ತರಿಸಬೇಕು.
ಏಕೆಂದರೆ ಮದ್ಯಪಾನ ಪ್ರಿಯರು ಮೋದಿ ಪರ ಹಾಗೂ ಮೋದಿ ವಿರೋಧಿ ಗುಂಪಿನಲ್ಲಿ ಎರಡೂ ಕಡೆ ಇರುವುದರಿಂದ, ಇದು ಹೇಗೆ ಯಾವ ರೂಪ ಪಡೆಯುತ್ತದೆ ಎಂಬುದು ಕುತೂಹಲಕರವಾಗಿದೆ. ಮೋದಿ ವಿರೋಧಿ ವೈದ್ಯರುಗಳು ಈ ಪತ್ರವನ್ನು ಭಾರತ ಸಂವಿಧಾನ ನಮಗೆ ನೀಡಿದ ಸ್ವಾತಂತ್ರ್ಯದ ಹರಣ ಮಾಡುವ ಪತ್ರ ಇದು.ನಾವೇನು ಸರ್ಕಾರದಿಂದ ಸಬ್ಸಿಡಿ ತೆಗೆದು ಕೊಂಡು, ವೈದ್ಯಕೀಯ ಸಮಾರಂಭವನ್ನು ಮಾಡುತ್ತಿಲ್ಲ. ವೈದ್ಯಕೀಯ ಸಮಾರಂಭಗಳಿಗೂ ೧೮% ತೆರಿಗೆ ಪಾವತಿ ಮಾಡಿ ಸಮಾವೇಶ ಗಳನ್ನು ನಡೆಸುತ್ತಿದ್ದೇವೆ. ಇಂತಹ ವಿಷಯಗಳಲ್ಲಿ ಮೂಗು ತೂರಿಸುವುದು ಅಕ್ಷೇಪಣೀಯ ಎಂದು ವಾದಿಸುವ ಸಂಭವವಿದೆ. ಇದನ್ನ ಮೋದಿ ಪರ ವೈದ್ಯರುಗಳು ರೋಗಿಗಳಿಗೆ ಉಪದೇಶಿಸಿದಂತೆ ನಡೆಯದಿರುವುದು ನೈತಿಕವಾಗಿ ತಪ್ಪಾಗುತ್ತದೆ. ಮದ್ಯಪಾನ ಮಾಡುವುದಿದ್ದರೆ ಖಾಸಗಿಯಾಗಿ ಮಾಡಲಿ.
ಮದ್ಯವನ್ನು ಸಮ್ಮೇಳದಿಂದ ದೂರವಿಟ್ಟರೆ ಖರ್ಚು ಕಡಿಮೆಯಾಗುತ್ತದೆ. ಮದ್ಯಪಾನ ಮಾಡದೇ ಸಾಮಾಜಿಕವಾಗಿ ಬೆರೆಯಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಾವಿನ್ನು ತಲುಪಿಲ್ಲ ಎಂದು ವಾದಿಸಬಹುದು. ಇನ್ನೂ ಪಾನಪ್ರಿಯ ಮತ್ತು ಪಾನ ವಿರೋಧಿ ಆಧಾರದ ಮೇಲೆ ಏನಾದರೂ ಚರ್ಚೆಗಳು ನಡೆದರೆ ಬಹುಶಃ ಹೀಗೆ ನಡೆಯಬಹುದು. ಪಾನಪ್ರಿಯ ವೈದ್ಯರು ನಿಯಮಿತವಾದ ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದರೆ ಹೃದಯಘಾತದ, ಪಾರ್ಶ್ವವಾಯು, ಸಕ್ಕರೆ ಕಾಯಿಲೆ ಸಾಧ್ಯತೆಗಳು ಕಡಿಮೆಯಾಗುತ್ತದೆ ಎಂಬ ಸಂಶೋಧನೆಗಳನ್ನು ತೋರಿಸಲು ಪ್ರಯತ್ನ ಪಡಬಹುದು. ಆದರೆ ಈ ವಾದವನ್ನು ಮದ್ಯ ವಿರೋಧಿ ವೈದ್ಯರುಗಳು ಒಪ್ಪುವ ಸಂಭವ ಕಡಿಮೆ.
ಏಕೆಂದರೆ ಕಡಿಮೆ ಪ್ರಮಾಣದ ಮದ್ಯಪಾನದಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಕಡಿಮೆಯಾಗುತ್ತವೆ ಎಂಬ ಸಂಶೋಧನೆಗಳು ಉತ್ತಮ ಮಟ್ಟದ ಸಂಶೋಧನೆಗಳಲ್ಲ. ಪೂರ್ವಗ್ರಹದಿಂದ ಕೂಡಿದ ಈ ಸಂಶೋಧನೆಗಳು ಮದ್ಯಪಾನವನ್ನು ಹೆಚ್ಚು ಸಾಮಾಜಿಕಗೊಳಿಸುವ ನಿಟ್ಟಿನಲ್ಲಿ ನಡೆದವು. ಅದೂ ಅಲ್ಲದೆ ಇದುವರೆಗೆ ಎಷ್ಟು ಪ್ರಮಾಣದ ಮದ್ಯ ಸುರಕ್ಷಿತ ಎಂಬುದು ಅಳೆಯಲು ಆಗಿಲ್ಲ. ಮದ್ಯದಿಂದ ಆಗುವ ಅತ್ಯಲ್ಪ ಲಾಭಕ್ಕೆ , ದೊಡ್ಡ ನಷ್ಟ ಸಾಧುವಲ್ಲ. ಲಾಳ ಸಿಕ್ಕಿತು ಎಂದು ಕುದುರೆಯನ್ನು ಕೊಂಡ ಹಾಗೆ ಎಂದು ವಾದಿಸಬಹುದು.
ಮದ್ಯಪಾನವನ್ನು ಬಿಡಲು ಸಾಧ್ಯವಿಲ್ಲ ಅಥವಾ ಸಾಮಾಜಿಕ ಕಾರಣಗಳಿಗೆ ಮದ್ಯಪಾನ ಮಾಡಲೇಬೇಕಾದ ಸಂದರ್ಭದಲ್ಲಿ ರೆಡ್ ವೈನ್ ಅಥವಾ ಶಾಂಪೈನ್ ಆಯ್ಕೆ ಇದ್ದುದರಲ್ಲಿ ಪರವಾಗಿಲ್ಲ. ಏಕೆಂದರೆ ಇದರಲ್ಲಿ ಆಕ್ಸಿಡೆಂಟ್ ಆಂಟಿ ಆಕ್ಸಿಡೆಂಟ್ ಅಂಶಗಳು ಸ್ವಲ್ಪ ಹೆಚ್ಚು. ಬಿಯರ್ ಅನ್ನು ಆದಷ್ಟು ದೂರ ವಿಡುವುದು ಒಳ್ಳೆಯದು. ಏಕೆಂದರೆ ಬಿಯರ್ನಲ್ಲಿ ಅತ್ಯಂತ ಹೆಚ್ಚು ಕ್ಯಾಲೋರಿಗಳು ಇರುತ್ತವೆ. ಟಕಿಲಾದಲ್ಲಿ ಅತ್ಯಂತ ಕಡಿಮೆ ಸಕ್ಕರೆ ಅಂಶ ಇರುತ್ತದೆ. ಹಾಗೆ ವಿಸ್ಕಿ ರಮ್ಮುಗಳನ್ನು ಸೇವಿಸುವಾಗ ಅದಕ್ಕೆ ಮಂಜುಗೆಡ್ಡೆ, ನಿಂಬೆಹಣ್ಣಿನ ನೀರನ್ನು ಅಥವಾ ಬರಿಯ ನೀರನ್ನು ಬೆರೆಸಿ ಕುಡಿಯುವುದು ಒಳ್ಳೆಯದು. ಮದ್ಯಕ್ಕೆ ಗಾಳಿ ಮಿಶ್ರಿತ ಪಾನೀಯಗಳನ್ನು ಸೇರಿಸುವುದರಿಂದ, ಅದರಲ್ಲಿ ಹೆಚ್ಚಿನ ಸಕ್ಕರೆ ಅಂಶ ಇರುವುದರಿಂದ ಒಳ್ಳೆಯದಲ್ಲ.
ಏನೇ ಆಗಲಿ ಸಾಮಾನ್ಯವಾಗಿ ವೈದ್ಯರು ಬೇರೆಯವರಿಗೆ, ಏನನ್ನು ತಿನ್ನಬೇಕು /ಕುಡಿಯಬೇಕು ಏನನ್ನು ತಿನ್ನಬಾರದು/ ಕುಡಿಯ ಬಾರದು ಎಂಬುದರ ಬಗ್ಗೆ ಸಲಹೆ ನೀಡಬೇಕು. ಆದರೆ ಇಂದು ಸರ್ಕಾರದಿಂದ ವೈದ್ಯರು ಏನು ತಿನ್ನಬೇಕು ಏನನ್ನು ತಿನ್ನಬಾರದು ಎಂಬ ಸಲಹೆ ಕೇಳುವ ಪರಿಸ್ಥಿತಿ ಬರುವ ಮುಂಚೆ ಎಚ್ಚರ ವಹಿಸಬೇಕಾಗಿತ್ತು. ಬೋಧಿಸಿದ್ದನ್ನು ಪಾಲಿಸದೇ ಇರುವುದು ವೈದ್ಯರಿಗೆ ಇದು ಮೊದಲೇನಲ್ಲ.
ನವಜಾತ ಶಿಶುವಿಗೆ ಆರು ತಿಂಗಳು ಎದೆ ಹಾಲು ಕುಡಿಸಬೇಕು ಎನ್ನುವ ಸೀರೋಗ ತಜ್ಞರು, ತಮ್ಮ ಹೆರಿಗೆಯಾದ ಒಂದು ತಿಂಗಳಿಗೆ ಕೆಲಸಕ್ಕೆ ಹಾಜರಾಗುತ್ತಾರೆ. ದಿನಕ್ಕೆ ಒಂದು ಗಂಟೆ ವ್ಯಾಯಾಮ ಮಾಡಬೇಕು ಎನ್ನುವ ಹೃದ್ರೋಗ ತಜ್ಞರಿಗೆ, ಕೈಕಾಲು ಆಡಿಸಲು ಸಮಯವಿರುವುದಿಲ್ಲ . ಪೌಷ್ಟಿಕ ಆಹಾರ ತಿನ್ನಬೇಕು ಎನ್ನುವ ವೈದ್ಯರುಗಳು ಮೂರೂ ಹೊತ್ತು ಹೋಟೆಲ್ ಊಟ ಮಾಡಿ ಕೊಂಡಿರುತ್ತಾರೆ. ದಿನವೂ ಸ್ಕಾ ನಿಂಗ್ ಮಾಡುವ ರೇಡಿಯೊಲೊಜಿಸ್ಟ್ ಗಳು, ತಮ್ಮ ದೇಹದ ಸ್ಕ್ಯಾನಿಂಗ್ ಮಾಡಿಸಿ ಕೊಂಡಿರುವುದಿಲ್ಲ.
ಎಷ್ಟೋ ವೈದ್ಯರಿಗೆ ತಮ್ಮ ಬಿಪಿ ಎಷ್ಟು? ಕೊಲೆಸ್ಟ್ರಾಲ್ ಎಷ್ಟು? ಎಂಬುದೇ ಗೊತ್ತಿರುವುದಿಲ್ಲ. ಆದ್ದರಿಂದಲೇ ಏನೋ, ಸಾಮಾನ್ಯ
ಜನರಿಗೆ ಹೋಲಿಸಿದರೆ ವೈದ್ಯರ ಸರಾಸರಿ ಆಯಸ್ಸು ಹತ್ತು ವರ್ಷ ಕಡಿಮೆ. ಇರಲಿ, ಮತ್ತೆ ವಿಷಯಕ್ಕೆ ಬರೋಣ . ಮೋದಿ ಸರ್ಕಾರದ ಪತ್ರದಿಂದ ಕೆಲವೊಂದು ವೈದ್ಯಕೀಯ ಸಂಘಗಳಾದರೂ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳುವ ಸಂಭವವಿದೆ.
ವೈದ್ಯಕೀಯ ಸಮಾರಂಭದಲ್ಲಿ ಊಟಗಳನ್ನು ಮಾತ್ರ ಒದಗಿಸುತ್ತೇವೆ, ಅಗತ್ಯವಿದ್ದವರು ಮದ್ಯಗಳನ್ನು ಕೊಂಡು ಸೇವಿಸಬಹುದು ಎಂಬ ನಿಯಮವನ್ನು ಜಾರಿಗೆ ತರಬಹುದು. ಏನೇ ಆದರೂ ಹೋಗುಮ ಹೋಗುಮ, ಕಾನೆರನ್ಸೆಗೆ ಹೋಗುಮ. ಎಣ್ಣೆ ನಿಮ್ದು, ಊಟ ನಮ್ದು ಅಂತ ಹಾಡಿಗೆ ಸ್ಟೆಪ್ಪು ಹಾಕುವುದಕ್ಕೆ ತೊಂದರೆ ಏನಿಲ್ಲ.
ಕೊನೆಮಾತು: ಎಣ್ಣೆ ಎಂದು ಆಡುಮಾತಿನಲ್ಲಿ ಕರೆಸಿಕೊಳ್ಳುವ ಮದ್ಯಕ್ಕೆ ಮಾತ್ರ ಕೆಟ್ಟ ಹೆಸರಿಲ್ಲ. ಅಡಿಗೆಗೆ ಉಪಯೋಗಿಸುವ
ರಿಫೈನ್ಡ್ (ನಿಜವಾದ) ಎಣ್ಣೆಗಳು ಕೂಡ ದೇಹಕ್ಕೆ ಒಳ್ಳೆಯದಲ್ಲ. ಎಣ್ಣೆಗಳನ್ನು ಸಂಸ್ಕರಿಸುವ ದಾರಿಯಲ್ಲಿ ಅನೇಕ ಕೆಮಿಕಲ್ ಗಳನ್ನು ಉಪಯೋಗಿಸಲಾಗಿಸುತ್ತದೆ. ಅದರಲ್ಲೂ ಪದೇ ಪದೆ ಎಣ್ಣೆಯನ್ನು ಕುದಿಸುವುದರಿಂದ ಇನ್ನೂ ವಿಷಯುಕ್ತವಾಗುತ್ತದೆ.