Thursday, 12th December 2024

’ಲೈಕ್‌’ ಚಿಹ್ನೆಯ ಅಂಗುಷ್ಠವೇ ಆತ್ಮನೂ, ಪರಮಾತ್ಮನೂ !

ತಿಳಿರು ತೋರಣ

ಶ್ರೀವತ್ಸ ಜೋಶಿ

ಅನಕ್ಷರಸ್ಥರೆಂದರೆ ಹೆಬ್ಬೆಟ್ಟು ಒತ್ತುವವರು ಎಂಬ ಕಾಲವೊಂದಿತ್ತು. ‘ಅಂಗುಠಾಛಾಪ್’ ಎಂದೇ ಅಂಥವರನ್ನು ಗುರುತಿಸ ಲಾಗುತ್ತಿತ್ತು. ಈಗ ಅನಕ್ಷರಸ್ಥರ ಸಂಖ್ಯೆ ಕಡಿಮೆ; ಆದರೆ ಕಾಲನ ಮಹಿಮೆಯೋ ಎಂಬಂತೆ ಈಗ ನಾವೆಲ್ಲ ಅಕ್ಷರಸ್ಥರೇ ಹೆಬ್ಬೆಟ್ಟು ಒತ್ತುತ್ತೇವೆ.

ಒತ್ತಲಿಕ್ಕೆ ಸಾಧ್ಯವಿಲ್ಲದಲ್ಲಿ ಹೆಬ್ಬೆಟ್ಟು ಎತ್ತುತ್ತೇವೆ. ಕೆಲವರಂತೂ ಹೆಬ್ಬೆಟ್ಟನ್ನೇ ಎಷ್ಟು ಅವಲಂಬಿಸಿದ್ದೇವೆಂದರೆ ಒಂದೇಒಂದು
ಅಕ್ಷರವನ್ನೂ ಬರೆಯದೆ ಹೆಬ್ಬೆಟ್ಟಿನಿಂದಲೇ ನಮ್ಮೆಲ್ಲ ಕೆಲಸಗಳನ್ನು ನಿಭಾಯಿಸುತ್ತೇವೆ. ಅಷ್ಟರ ಮಟ್ಟಿಗೆ ಅನಕ್ಷರಸ್ಥರೇ ಆಗಿರುತ್ತೇವೆ. ನಾನಿಲ್ಲಿ ಹೇಳುತ್ತಿರುವ ಹೆಬ್ಬೆಟ್ಟು ಫೇಸ್‌ಬುಕ್‌ನ ಲೈಕ್ ಚಿಹ್ನೆಯದು ಎಂದು ನಿಮಗೆ ಸುಲಭದಲ್ಲೇ ಗೊತ್ತಾಗಿರ ಬಹುದು.

ಅದನ್ನು ಒತ್ತಿಯೇ ತಾನೆ ನಾವು ಲೈಕ್ ಸೂಚಿಸುವುದು? ಇನ್ನು, ಹೆಬ್ಬೆಟ್ಟು ಎತ್ತುವುದೆಂದರೆ ಮೆಸೇಜಿನಲ್ಲಿ ಅಕ್ಷರಗಳಿಲ್ಲದೆ ಹೆಬ್ಬೆಟ್ಟು ಮೇಲಕ್ಕೆತ್ತಿದ ಹಸ್ತಮುದ್ರೆಯನ್ನು ಉಪಯೋಗಿಸುವುದು. ಈ ರೀತಿ ಹೆಬ್ಬೆಟ್ಟು ಒತ್ತುವುದಕ್ಕೂ ಎತ್ತುವುದಕ್ಕೂ ನಾವು
ಬಳಸುವುದು ನಮ್ಮ ಕೈಯ ಹೆಬ್ಬೆಟ್ಟೇ ಎನ್ನುವುದೂ, ಸ್ಮಾರ್ಟ್ ಫೋನ್‌ಅನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿರುವ
ಎಲ್ಲರಿಗೂ ಗೊತ್ತು. ಗೊತ್ತಿಲ್ಲದವರು ಒಮ್ಮೆ ಬಲಗೈಯಲ್ಲಿ ಫೋನ್ ಹಿಡಿದುಕೊಂಡು ಆ ಒಂದು ಕೈಯಿಂದಲೇ ಸ್ಕ್ರೀನ್ ಮೇಲಿನ ಎಲ್ಲ ಚಟುವಟಿಕೆಗಳನ್ನು ಮಾಡುವಾಗ ಯಾವ ಬೆರಳು ಬಳಕೆಯಾಗುವುದೆಂದು ಗಮನಿಸಿ.

ಒಂದೇ ಕೈ ಏಕೆ, ಎರಡೂ ಕೈಗಳಿಂದ ಫೋನ್ ಹಿಡಿದುಕೊಂಡರೂ ಎಡ – ಬಲ ಹೆಬ್ಬೆಟ್ಟುಗಳನ್ನಷ್ಟೇ ಬಳಸಿ ಚಕಚಕನೆ ಫಾಸ್ಟ್ ಆಗಿ ಕೀಬೋರ್ಡ್ ಒತ್ತುತ್ತ, ಸ್ಕ್ರೀನ್‌ನಲ್ಲಿ ಅಕ್ಷರಗಳನ್ನು ಮೂಡಿಸುತ್ತ, ಕಥೆ – ಕಾದಂಬರಿ ಮಹಾಕಾವ್ಯಗಳನ್ನೂ ಕುಟ್ಟುತ್ತ, ‘ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ’ ಎಂದುಕೊಳ್ಳುವ ಕುಮಾರವ್ಯಾಸರೇ ನಾವೆಲ್ಲ ಅಲ್ಲವೇ? ಒಟ್ಟಿನಲ್ಲಿ ಹೆಬ್ಬೆಟ್ಟೇ ನಮಗೆ ಆತ್ಮ ಪರಮಾತ್ಮ ಎಲ್ಲವೂ.

ಹೆಬ್ಬೆಟ್ಟೇ ಆತ್ಮ ಎಂದಿದ್ದು ಸ್ಮಾರ್ಟ್‌ಫೋನ್ ಬಳಕೆಗೆ, ಅದರಲ್ಲೂ ಫೇಸ್‌ಬುಕ್ ಪ್ರಪಂಚಕ್ಕೆ ಸಂಬಂಧಿಸಿದಂತೆ. ಅಲ್ಲಿ ನಮಗೆ ಹೆಚ್ಚುಹೆಚ್ಚು ಹೆಬ್ಬೆಟ್ಟುಗಳು ಸಿಕ್ಕಿದಷ್ಟೂ ಹೆಚ್ಚು ಆತ್ಮತೃಪ್ತಿ. ಆದರೆ ಫೇಸ್‌ಬುಕ್‌ನ ಪ್ರಪಂಚದ ಹೊರಗೆಯೂ ಅಂಗುಷ್ಠಕ್ಕೆ
ಮತ್ತು ಆತ್ಮಕ್ಕೆ ಸಂಬಂಧವಿದೆ. ನಮ್ಮ ಶರೀರದಲ್ಲಿ ‘ಆತ್ಮ’ ಅಂತ ಇರುವುದು ಅಂಗುಷ್ಠದಷ್ಟು ಗಾತ್ರದ್ದಂತೆ. ಅದನ್ನೇ ನಮ್ಮೊಳಗಿನ
ಪರಮಾತ್ಮ ಎಂದು ಗುರುತಿಸುವುದೂ ಇದೆ. ‘ಅಂಗುಷ್ಠಮಾತ್ರಃ ಪುರುಷೋಧಿನ್ತರಾತ್ಮಾ ಸದಾ ಜನಾನಾಂ ಹೃದಯೇ
ಸಂನಿವಿಷ್ಟಃ|’ ಎಂದು ಕಠೋಪನಿಷತ್‌ನಲ್ಲಿ ಬರುವ ವಾಕ್ಯ.

ಅಂಗುಷ್ಠ ಪರಿಮಾಣವುಳ್ಳವನೂ, ಅಂತರಾತ್ಮನೂ ಆದ ಪರಮ ಪುರುಷನು ಜನರ ಹೃದಯದಲ್ಲಿ ಯಾವಾಗಲೂ ಇರುತ್ತಾನೆ.
ಅವನನ್ನು ಶುದ್ಧನೆಂದೂ ಅಮೃತನೆಂದೂ ತಿಳಿದುಕೊಳ್ಳಬೇಕು. ಭಗವದ್ಗೀತೆಯ 15ನೆಯ ಅಧ್ಯಾಯದ 15ನೆಯ ಶ್ಲೋಕದಲ್ಲಿ
‘ಸರ್ವಸ್ಯಚಾಹಂ ಹೃದಿ ಸನ್ನಿವಿಷ್ಟೋ’ ಎಂದು ಕೃಷ್ಣಪರಮಾತ್ಮ ಹೇಳಿದ್ದೂ ಇದನ್ನೇ. ಅಂದಹಾಗೆ ಗೀತೆಯ ಈ ಶ್ಲೋಕವನ್ನು
ತಮಾಷೆಗಾಗಿ – ಕುರುಕ್ಷೇತ್ರ ರಣರಂಗದಲ್ಲಿ ಸತತ ಉಪದೇಶದಿಂದ ದಣಿದ ಕೃಷ್ಣ ‘ಷ್ಟೋ’ವ್ ಹಚ್ಚಿದನು, ‘ಚಾ’ ಮಾಡಿದನು, ಅರ್ಜುನನಿಗೂ ಬೈ- ಟು ಕೊಟ್ಟು ತಾನೂ ಕುಡಿದನು ಎಂದು ವ್ಯಾಖ್ಯಾನಿಸುವುದಿದೆ.

ಅದು ಯಾರೋ ನನ್ನಂಥ ಚಹಾ ಪ್ರಿಯರು ಚಾದಲ್ಲೂ ಭಗವಂತನನ್ನು ಕಂಡದ್ದು, ಅಥವಾ, ಭಗವಂತನಲ್ಲೂ ಚಾ ಇದೆ ಎಂದುಕೊಂಡದ್ದು ಅಷ್ಟೇ. ಇರಲಿ, ನಮಗಿಲ್ಲಿ ಬೇಕಾಗಿರುವುದು ಚಾ ಅಲ್ಲ, ಅಂಗುಷ್ಠ ಗಾತ್ರದ ಆತ್ಮ. ಈ ಲೇಖನಕ್ಕಂತೂ ಅಂಗುಷ್ಠವೇ ಆತ್ಮ. ಒಂದುವೇಳೆ ಅಂಗುಷ್ಠ ಇಲ್ಲದಿದ್ದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನವನ್ನು ಮಾಡುವುದು ಸಾಧ್ಯವೇ ಇಲ್ಲ!

ಟಿವಿ ಮುಂದೆ ಕುಳಿತು ರಿಮೋಟ್ ಕಂಟ್ರೋಲ್‌ನ ಗುಂಡಿಗಳನ್ನು ಒತ್ತುವುದರಿಂದ ಹಿಡಿದು ಪದ್ಮಾಸನ ಹಾಕಿ ಜಪಮಾಲೆಯ
ಮಣಿಗಳನ್ನು ಎಣಿಸುವುದರವರೆಗೂ ಹೆಬ್ಬೆರಳಿಲ್ಲದೆ ಏನೂ ನಡೆಯದು. ಹಾಗೆಯೇ ಬಿಲ್ಲಿಗೆ ಹೆದೆಯೇರಿಸಿ ಬಾಣ ಬಿಡುವುದಕ್ಕೂ ಹೆಬ್ಬೆರಳು ಬೇಕೇಬೇಕು ಎಂದು ದ್ರೋಣಾಚಾರ್ಯರಿಗೆ ಗೊತ್ತಿತ್ತು; ಅದರಿಂದಲೇ ಏಕಲವ್ಯನ ಹೆಬ್ಬೆರಳಿಗೆ ಬಂತು ಕುತ್ತು. ಆತ ಅಷ್ಟು ಕಷ್ಟಪಟ್ಟು ಕಲಿತ ಬಿಲ್ಲುವಿದ್ಯೆಯನ್ನೆಲ್ಲ ಹೆಬ್ಬೆರಳಿನ ರೂಪದಲ್ಲಿ ಅವನಿಂದ ಕಸಿದುಕೊಳ್ಳಲಾಯ್ತು.

ಹೆಬ್ಬೆರಳೊಂದಿಲ್ಲದೆ ಇಡೀ ಏಕಲವ್ಯನೇ ನಿಷ್ಪ್ರಯೋಜಕನಾಗಿ ಹೋದ! ಮಿಕ್ಕೆಲ್ಲ ಜೀವಿಗಳಿಗಿಂತ ಮನುಷ್ಯ ಇಷ್ಟೊಂದು ಮುಂದುವರಿದಿದ್ದಾನೆಂದರೆ ಅದಕ್ಕೆ ಹೆಬ್ಬೆರಳೇ ಕಾರಣ. ಡಾರ್ವಿನ್ ವಿಕಾಸವಾದದಲ್ಲಿ ಅದರ ಪ್ರತಿಪಾದನೆಯಿದೆ. ಕೈಗಳಿಗೆ ಹೆಬ್ಬೆರಳು ಇಷ್ಟು ಪ್ರಬುದ್ಧವಾಗಿ ಬೆಳೆದಿರುವುದು ಮನುಷ್ಯ ಪ್ರಭೇದದಲ್ಲಿ ಮಾತ್ರ. ಆದ್ದರಿಂದ ಜೀವಸಂಕುಲದಲ್ಲಿ ಹೆಬ್ಬೆರಳೇ ಮನುಷ್ಯನ ಐಡೆಂಟಿಟಿ. ಮನುಷ್ಯನ ಜೀವಾತ್ಮವು ಹೃದಯದಲ್ಲಲ್ಲ, ಅಂಗುಷ್ಠದಲ್ಲಿ ನೆಲೆಸಿರುತ್ತದೆನ್ನುವ ನಂಬಿಕೆಯೂ ಇದೆ. ಊಟದ ಕೊನೆಯಲ್ಲಿ ಬಲಗೈ ಹೆಬ್ಬೆರಳನ್ನು ನೆಲಕ್ಕೆ ಊರುತ್ತ ಹೇಳುವ ಮಂತ್ರವೊಂದಿದೆ.

ಅನ್ನ ಕೊಟ್ಟ ದೇವನಿಗೆ ಕೃತಜ್ಞತೆ ಸಲ್ಲಿಕೆ. ‘ಹೆಬ್ಬೆರಳನ್ನು ಆಶ್ರಯಿಸಿರುವ ಜೀವಾತ್ಮನು ಹೆಬ್ಬೆರಳಿನಷ್ಟು ಗಾತ್ರವನ್ನು ಹೊಂದಿದವನು. ಈತ ಪ್ರಪಂಚಕ್ಕೆಲ್ಲ ಒಡೆಯ. ಜಗತ್ತನ್ನೆಲ್ಲ ತನ್ನಲ್ಲಿ ಅಡಗಿಸಿಕೊಂಡಿರುವ ವನು. ಸರ್ವಸಮರ್ಥನಾಗಿ ಸಂತುಷ್ಟನಾಗುವವನು’ ಎಂದು ಮಂತ್ರದ ಅರ್ಥ, ಆಶಯ. ಕೈಯ ಅಂಗುಷ್ಠ ಅಂದರೆ ಪರಮಾತ್ಮ ಎಂದು ಬನ್ನಂಜೆ ಗೋವಿಂದಾಚಾರ್ಯರು ಒಂದು ಪ್ರವಚನದಲ್ಲಿ ‘ಜ್ಞಾನಮುದ್ರೆ’ಯನ್ನು ಬಣ್ಣಿಸುತ್ತ ಹೇಳಿದ್ದನ್ನು ವಿಡಿಯೊದಲ್ಲಿ ನೋಡಿದ್ದು ನನಗೆ ನೆನಪಿದೆ. ಅವರ ಪ್ರಕಾರ ತೋರುಬೆರಳು ಅಂದರೆ ಮನುಷ್ಯನ ಜೀವಾತ್ಮ.

ಕಿರುಬೆರಳು, ಉಂಗುರದ ಬೆರಳು ಮತ್ತು ಮಧ್ಯದ ಬೆರಳುಗಳು ಅನುಕ್ರಮವಾಗಿ ಅವಿದ್ಯಾ, ಕಾಮ, ಮತ್ತು ಕರ್ಮ. ಹಾಗಾಗಿ
ತೋರುಬೆರಳು ಅವುಗಳಿಂದ ದೂರ ಸರಿದು ಬಗ್ಗಿ ಹೆಬ್ಬೆರಳನ್ನು ಮುಟ್ಟಬೇಕು. ಅದು, ಮನುಷ್ಯನು ಪರಮಾತ್ಮನಿಗೆ ಶರಣಾಗತ ನಾದನೆಂಬ ಸಂಕೇತ. ಹಾಗಾದಾಗ ಉಳಿದ ಮೂರು ಬೆರಳುಗಳು ಜ್ಞಾನ, ಭಕ್ತಿ, ವೈರಾಗ್ಯಗಳ ಸಂಕೇತವಾಗುತ್ತವೆ. ಐದೂ ಬೆರಳು ಗಳನ್ನು ಜೋಡಿಸಿ ಹಿಡಿದರೆ ಅಭಯಮುದ್ರೆ ಆಗುತ್ತದೆ. ತುಂಬ ಕನ್ವಿನ್ಸಿಂಗ್ ವಿವರಣೆ ಅದು ಎಂದು ನನಗನಿಸಿತು.

ಜೀವಾತ್ಮನನ್ನಷ್ಟೇ ಅಲ್ಲ, ಈ ಪ್ರಪಂಚದ ವಿವಿಧ ವಸ್ತುಗಳನ್ನೂ ಅಂಗುಷ್ಠದ ಮಾನದಲ್ಲಿ ಅಳೆಯುವ ಪದ್ಧತಿ ಹಿಂದಿನಿಂದಲೂ
ಇದೆ. ಬಡಗಿಗಳು ಮರಮಟ್ಟುಗಳ ಅಳತೆಯನ್ನು ತಮ್ಮ ಹೆಬ್ಬೆರಳಿನಿಂದಲೇ ಮಾಡುತ್ತಿದ್ದರು. ಹೆಬ್ಬೆರಳಿನ ತುದಿಯಿಂದ ಮೊದಲ ಮಡಿಕೆ(ಫೋಲ್ಡ್)ಗೆ ಸರಿಸುಮಾರು ಒಂದು ಇಂಚು ಅಥವಾ ಅಂಗುಲ ಎಂಬ ಲೆಕ್ಕ. ‘ರೂಲ್ ಆಫ್ ಥಂಬ್’ ಎಂಬ ನುಡಿಗಟ್ಟಿನ ಮೂಲ ಅದೇ. ಅಳತೆಪಟ್ಟಿ ಇಲ್ಲದಿದ್ದಾಗ ಹೆಬ್ಬೆರಳನ್ನೇ ಹೇಗೆ ಅಂದಾಜಿನ ಅಳತೆಗೆ ಉಪಯೋಗಿಸುತ್ತೇವೆಯೋ ಹಾಗೆಯೇ ಇದಮಿತ್ಥಂ ಎಂದು ನಿರ್ದಿಷ್ಟವಾದ ಲಿಖಿತ ನಿಯಮಗಳಾಗಲೀ ವೈಜ್ಞಾನಿಕವಾಗಿ ಅನುಮೋದಿಸಲ್ಪಟ್ಟ ಸಿದ್ಧಾಂತಗಳಾಗಲೀ ಇಲ್ಲದಿದ್ದಾಗ ಅಂದಾಜಿನಿಂದ ಮುನ್ನಡೆಯುವುದಕ್ಕೆ ‘ರೂಲ್ ಆಫ್ ಥಂಬ್’ ಬಳಕೆಯಾಗುತ್ತದೆ.

ಈ ನುಡಿಗಟ್ಟಿನ ಬಗ್ಗೆ ಒಂದು ಸ್ವಾರಸ್ಯವಾದ ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಒಂದು ದಂತಕಥೆಯೂ ಇದೆ. ಏನೆಂದರೆ,
19 ನೆಯ ಶತಮಾನದಲ್ಲಿ ಯುರೋಪ್‌ನಲ್ಲಿ ಒಂದು ವಿಚಿತ್ರ ಕಾನೂನು ಇತ್ತಂತೆ. ಗಂಡನಾದವನು ಹೆಂಡತಿಯನ್ನು ತನ್ನ
ಅಂಗುಷ್ಠಕ್ಕಿಂತ ಹೆಚ್ಚು ದಪ್ಪದ ಕೋಲಿನಿಂದ ಹೊಡೆಯುವಂತಿಲ್ಲ. ಒಂದೊಮ್ಮೆ ಹೊಡೆದದ್ದೇ ಆದರೆ ‘ರೂಲ್ ಆಫ್ ಥಂಬ್’
ಪ್ರಕಾರ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹಾಗಾದರೆ, ಅಂಗುಷ್ಠದಷ್ಟು ಅಥವಾ ಅಥವಾ ಅದಕ್ಕಿಂತ ಕಡಿಮೆ ದಪ್ಪದ
ಕೋಲಿನಿಂದ ಹೆಂಡತಿಯನ್ನು ಹೊಡೆಯಬಹುದೇ? ಕೋಲಿನಿಂದಲ್ಲದಿದ್ದರೆ ಮತ್ತ್ಯಾವುದೇ ಆಯುಧದಿಂದ ಹೊಡೆಯಬಹುದೇ? ಆ ಅಧಿಕಾರ ಗಂಡನಿಗೆ ಇದೆಯೇ? ಅದೆಲ್ಲಿಂದ ಬಂತು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಸಿಗಲಿಕ್ಕಿಲ್ಲ.

ಹುಡುಕುವುದು ಸಮಂಜಸವೂ ಅಲ್ಲ. ಅದೊಂದು ಬರೀ ದಂತಕಥೆ ಎಂದುಕೊಂಡು ಸುಮ್ಮನಾಗಬೇಕು. 17ನೆಯ ಶತಮಾನದ ಒಬ್ಬ ಕವಿ ‘ರೂಲ್ ಆಫ್ ಥಂಬ್’ ನುಡಿಗಟ್ಟನ್ನು ಬಳಸಿರುವುದು ಬೇರೆಯೇ ರೀತಿಯಲ್ಲಿ. ಅವನ ಪ್ರಕಾರ, ಗ್ರೀಕ್ ದೇವತೆ ಹರ್ಕ್ಯೂಲಿಸ್‌ನ ಪ್ರತಿಮೆಯ ಔನ್ನತ್ಯವನ್ನು ಅದರ ಹೆಬ್ಬೆರಳಿನ ಪ್ರಮಾಣದಿಂದ ಅಳೆಯಬಹುದು. ಹೆಬ್ಬೆರಳಿನದೇ ಅನುಪಾತ ದಲ್ಲಿ ಇತರ ಅಂಗಾಂಗಗಳೂ ಇರುತ್ತವೆಂದು ಊಹಿಸಬಹುದು. ರೋಮನ್ ದೇವತೆ ವೀನಸ್‌ಳ ಸೌಂದರ್ಯವನ್ನು ಹೇಗೆ ಅವಳ ಪಾದಗಳಿಂದಲೇ ಅಂದಾಜಿಸಬಹುದೋ ಹರ್ಕ್ಯೂಲಿಸ್‌ನ ದೇಹದಾರ್ಢ್ಯವನ್ನು ಅವನ ಹೆಬ್ಬೆರಳಿನಿಂದ ಅಂದಾಜಿಸಬಹುದು ಎಂದು ಕವಿಯ ಅಭಿಪ್ರಾಯ.

ಅಂಗುಷ್ಠ ಎನ್ನುವುದು ಕೈಯ ಹೆಬ್ಬೆರಳಿಗಷ್ಟೇ ಅಲ್ಲ, ಕಾಲಿನ ಹೆಬ್ಬೆರಳಿಗೂ. ಆತ್ಮವನ್ನು ನಾವು ಕೈಯ ಅಂಗುಷ್ಠಕ್ಕೆ ತಳುಕು ಹಾಕಬಹುದಾದರೂ ಪರಮಾತ್ಮನ ವಿಚಾರದಲ್ಲಿ ಕಾಲಿನ ಅಂಗುಷ್ಠದವೇ ಹೆಚ್ಚು ಕಥೆಗಳಿರುವುದು. ಮಹಾಭಾರತ ಯುದ್ಧದಲ್ಲಿ ಕರ್ಣಾರ್ಜುನರ ನಡುವೆ ಭೀಕರ ಕಾಳಗದ ಸಂದರ್ಭ. ಕರ್ಣ ಅರ್ಜುನನ ಕೊರಳಿಗೇ ಗುರಿಯಿಟ್ಟು ಸರ್ಪಾಸ್ತ್ರ ಪ್ರಯೋಗಿಸುತ್ತಾನೆ. ಆ ಕ್ಷಣದಲ್ಲಿ ಕೃಷ್ಣ ತನ್ನ ಕಾಲಿನ ಹೆಬ್ಬೆರಳಿನಿಂದ ರಥವನ್ನು ಅದುಮುತ್ತಾನೆ. ಕರ್ಣನ ಬಾಣ ಅರ್ಜುನನ ಕೊರಳಿಗೆ ತಾಗದೆ ಕಿರೀಟವನ್ನಷ್ಟೇ ಹಾರಿಸಿಕೊಂಡು ಹೋಗುವಂತೆ ಮಾಡುತ್ತಾನೆ. ಅರ್ಜುನನ ಪ್ರಾಣ ಉಳಿಸುತ್ತಾನೆ.

ಯುದ್ಧಕ್ಕೆ ಮೊದಲು ವಿರಾಟಪರ್ವದಲ್ಲೂ ಒಂದು ಸನ್ನಿವೇಶ ಬರುತ್ತದೆ. ಕುಮಾರವ್ಯಾಸ ಅದನ್ನು ಬಹಳ ಚೆನ್ನಾಗಿ ವರ್ಣಿಸಿ ದ್ದಾನೆ. ‘ಸೆಣಸು ಸೇರದ ದೇವನಿದಿರಲಿ| ಮಣಿಯದಾತನ ಕಾಣುತಲೆ ಧಾ| ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ| ಮಣಿಖಚಿತ ಕಾಂಚನದ ಪೀಠದ| ಗೊಣಸು ಮುರಿದುದು ಮೇಲೆ ಸುರ ಸಂ| ದಣಿಗಳಾ ಎನೆ ಕವಿದುಬಿದ್ದನು ಹರಿಯ ಚರಣದಲಿ||’- ಕೃಷ್ಣನು ವಿದುರನ ಮನೆಯಿಂದ ಕೌರವರ ಅರಮನೆಗೆ ಬಂದಿದ್ದಾನೆ.

ಭೀಷ್ಮ, ದ್ರೋಣ ಮುಂತಾದವರೆಲ್ಲ ಎದ್ದುನಿಂತು ಅವನಿಗೆ ವಂದಿಸಿದ್ದಾರೆ. ದುರ್ಯೋಧನ ಮಾತ್ರ ದರ್ಪದಿಂದ ಸಿಂಹಾಸನಾ ರೂಢನಾಗಿಯೇ ಇದ್ದಾನೆ. ಅವನ ಗರ್ವಭಂಗ ಮಾಡಲೆಂದು ಕೃಷ್ಣ ತನ್ನ ಉಂಗುಟ ಅಂದರೆ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ಒತ್ತುತ್ತಾನೆ. ಆ ರಭಸಕ್ಕೆ ಭೂಮಿ ನಡುಗಿ ಸಿಂಹಾಸನ ಅದುರುತ್ತದೆ. ದುರ್ಯೋಧನ ಕೆಳಗೆ ಬೀಳುತ್ತಾನೆ, ನೇರವಾಗಿ ಕೃಷ್ಣನ ಪದತಲಕ್ಕೆ!

ವಿಧಿಲೀಲೆಯೆಂದರೆ ಅಂತಹ ಮಹಾಮಹಿಮ ಶ್ರೀಕೃಷ್ಣನ ಅವತಾರಾಂತ್ಯದಲ್ಲಿ ಮೊದಲು ಘಾಸಿಗೊಳ್ಳುವುದು ಅವನ ಅಂಗುಷ್ಠವೇ. ಕೊನೆಯ ದಿನಗಳಲ್ಲಿ ವನವಾಸಿಯಾಗಿದ್ದ ಕೃಷ್ಣ ಕಾಡಿನಲ್ಲಿ ಒಂದು ಮರದ ಕೆಳಗೆ ಒರಗಿ ಕಾಲುಚಾಚಿ ಕುಳಿತು ಕೊಂಡಿರುತ್ತಾನೆ. ಕೃಷ್ಣನ ಕಾಲ್ಬೆರಳನ್ನು ಜಿಂಕೆಯ ಕಣ್ಣೆಂದು ಭಾವಿಸಿದ ಬೇಡ ಬಾಣ ಬಿಡುತ್ತಾನೆ. ಇಹಲೋಕದ ವಾಸ ಮುಗಿಸಿ ಕೃಷ್ಣ ವೈಕುಂಠಕ್ಕೆ ಮರಳುತ್ತಾನೆ. ಕಾಲಿನ ಹೆಬ್ಬೆರಳು ಎಷ್ಟು ಪವರ್ ಫುಲ್ ಎನ್ನುವುದಕ್ಕೆ ರಾಮಾಯಣ ಮತ್ತಿತರ ಕಥೆಗಳಲ್ಲೂ ವಿಸ್ಮಯದ ಚಿತ್ರಣಗಳು ನಮಗೆ ಸಿಗುತ್ತವೆ.

ವಾಲಿಯು ಬಿಸಾಡಿದ ದುಂದುಭಿ ಎಂಬ ರಾಕ್ಷಸನ ಪರ್ವತಾಕಾರದ ದೇಹವನ್ನು ಶ್ರೀರಾಮ ತನ್ನ ಕಾಲಿನ ಹೆಬ್ಬೆರಳಿನಿಂದಲೇ ದಶ
ಯೋಜನ ದೂರಕ್ಕೆ ಝಾಡಿಸಿದ್ದನಂತೆ. ಹಾಗೆಯೇ ಪರಮೇಶ್ವರನು ತನ್ನ ಅಂಗುಷ್ಠದಿಂದ ಕೈಲಾಸ ಪರ್ವತವನ್ನು ಅದುಮಿ ಹಿಡಿದು ರಾವಣನ ಅಹಂಕಾರಕ್ಕೆ ಪೆಟ್ಟು ಕೊಟ್ಟ ಒಂದು ಪ್ರಸಂಗವೂ ಇದೆ. ಋಷಿ-ಮುನಿಗಳು ಮತ್ತು ಹಿರಣ್ಯಕಷಿಪುವಿನಂಥ ಮಹಾರಾಕ್ಷಸರು ಕಾಲುಗಳ ಹೆಬ್ಬೆರಳ ಆಧಾರದಲ್ಲಿ ನಿಂತು ಘೋರ ತಪಸ್ಸನ್ನಾಚರಿಸಿದ ವಿವರಗಳೂ ಇವೆ.

ಗುರುಹಿರಿಯರಿಗೆ ನಮಸ್ಕರಿಸುವಾಗ ನಾವು ಅವರ ಪಾದಗಳನ್ನು ಮುಟ್ಟುತ್ತೇವಲ್ಲ, ವಿಶೇಷವಾಗಿ ಆಗ ಅಂಗುಷ್ಠಗಳನ್ನು
ಸ್ಪರ್ಶಿಸಬೇಕಂತೆ. ಏಕೆಂದರೆ ಹಿರಿಯರ ತಪಃಶಕ್ತಿ, ಪುಣ್ಯ ಮತ್ತು ಅನುಭವಾಮೃತಗಳೆಲ್ಲ ಆಶೀರ್ವಾದ ರೂಪದಲ್ಲಿ ಅಂಗುಷ್ಠಗಳ ಮೂಲಕ ನಮಗೆ ಹರಿದುಬರುತ್ತವಂತೆ. ಕಾಲಿನ ಅಂಗುಷ್ಠ ಎಂದರೆ ಆಶೀರ್ವಾದಗಳ ಟ್ರಾನ್ಸ್‌ಮಿಷನ್ ಆಗುವ ಆಂಟೆನಾ
ಎಂದು ನೆನಪಿಟ್ಟುಕೊಳ್ಳಬೇಕು.

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ| ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ|| ಆಲದೆಲೆಯ ಮೇಲೆ ಮಲಗಿರುವ ಬಾಲಕೃಷ್ಣ ತನ್ನ ಕಾಲಿನ ಹೆಬ್ಬೆರಳನ್ನು ಚೀಪುತ್ತಿರುವ ಚಿತ್ರವನ್ನು ನಾವು ಕ್ಯಾಲೆಂಡರ್‌ಗಳಲ್ಲಿ, ಪೇಂಟಿಂಗ್‌ಗಳಲ್ಲಿ ನೋಡಿಯೇ ಇರುತ್ತೇವೆ. ಪ್ರಳಯದಿಂದ ರಕ್ಷಿಸಲಿಕ್ಕಾಗಿ ಜಗತ್ತನ್ನು ತನ್ನ ಹೊಟ್ಟೆ ಯಲ್ಲಡಗಿಸಿಕೊಂಡ ಭಗವಂತ, ಮುಗ್ಧ ಮಗುವಾಗಿ ಈ ಲೀಲೆಯನ್ನಾಡುತ್ತಾನಂತೆ.

ತನ್ನ ಪಾದಗಳನ್ನು ಸ್ಪರ್ಶಿಸಿದ ನೀರು ಅಮೃತಕ್ಕಿಂತಲೂ ಸಿಹಿಯೆಂದು ಭಕ್ತರು ತಿಳಿದುಕೊಳ್ಳುತ್ತಾರಲ್ಲ ನಿಜವಾಗಿಯೂ
ಸಿಹಿಯಾಗಿರುವುದು ಹೌದೇ ಎಂದು ಸ್ವಯಂಪರೀಕ್ಷೆ ಮಾಡಿ ಕಂಡುಕೊಳ್ಳುವುದಕ್ಕಾಗಿ ಕಾಲಿನ ಅಂಗುಷ್ಠ ಚೀಪುತ್ತಾನಂತೆ.
ಎಂಥ ಮುದ್ದಾದ ಕಲ್ಪನೆ! ಸಂಸ್ಕೃತ ಕವಿಯೊಬ್ಬ ಕೃಷ್ಣಪರಮಾತ್ಮನ ಆ ಅಂಗುಷ್ಠಚುಂಬನಕ್ಕೆ ಐದು ಶ್ಲೋಕಗಳಲ್ಲಿ ಇನ್ನೂ ಐದು ಬೇರೆಬೇರೆ ಅದ್ಭುತ ಕಲ್ಪನೆಗಳನ್ನು ಚಿತ್ರಿಸಿದ್ದಾನೆ.

ಮೊದಲ ಶ್ಲೋಕದಲ್ಲಿ ಕೃಷ್ಣನು ತನ್ನ ಪಾದಕ್ಕೆ ಹೇಳುತ್ತಿದ್ದಾನೆ: ‘ಎಲೈ ಪಾದವೇ, ನಾನು ತ್ರಿವಿಕ್ರಮನಾಗಿದ್ದಾಗ ಮೂರು ಲೋಕಗಳನ್ನೂ ಆಕ್ರಮಿಸಬೇಕೆಂದು ಅಪೇಕ್ಷೆಪಟ್ಟ ನಿನ್ನ ಇಷ್ಟದಂತೆ ನಡೆಸಿದುದರಿಂದ ಪಾತಾಳದಲ್ಲಿ ಬಲಿಚಕ್ರವರ್ತಿಯ ಮನೆಯ ಕಾವಲುಗಾರನಾಗಿ ಇರಬೇಕಾದ ಸ್ಥಿತಿ ಬಂತು. ಮತ್ತೆಲ್ಲಿಯಾದರೂ ಭೂಮಿಯನ್ನು ಅಳೆಯಬೇಕೆಂದು ಆಶೆಪಟ್ಟು ನನ್ನನ್ನು ಹಿಂದಿನಂತೆ ಇತರರ ಮನೆಯ ಕಾವಲುಗಾರನನ್ನಾಗಿ ಮಾಡಬೇಡ ಕಂಡೆಯಾ!’ ಎಂದು.

ಇನ್ನೊಂದು ಶ್ಲೋಕದಲ್ಲಿ ಪರಮಾತ್ಮನು ಬಲಿಚಕ್ರವರ್ತಿಯ ಭಕ್ತಿಗೆ ಮೆಚ್ಚಿ ತನ್ನನ್ನೇ ಅವನಿಗಾಗಿ ಒಪ್ಪಿಸಿದ್ದರೂ ಆತನನ್ನು ಪಾತಾಳಕ್ಕೆ ತುಳಿದು ವಂಚಿಸಿದುದಕ್ಕಾಗಿ ಪಶ್ಚಾತ್ತಾಪಪಟ್ಟು ಇನ್ನು ಮುಂದೆ ಭಕ್ತರಿಗೆ ಮೋಸ ಮಾಡಬಾರದೆಂದು ಪಾದಕ್ಕೆ ಬುದ್ಧಿ
ಹೇಳುವನೆಂದು ಬಣ್ಣನೆ.

ಮೂರನೆಯ ಶ್ಲೋಕದಲ್ಲಿ ಕೃಷ್ಣನು ತನ್ನ ಪಾದಕ್ಕೆ ಹೀಗೆ ಹೇಳುತ್ತಾನೆ: ‘ಎಲೈ ಪಾದವೇ, ಹಿಂದಿನಂತೆ ಲೋಕಗಳನ್ನೆಲ್ಲ ಆಕ್ರಮಿಸಬೇಕೆಂಬ ಅಪೇಕ್ಷೆಯು ನಿನಗೆ ಈಗಲೂ ಇರುವುದಾದರೆ ನಾನೊಂದು ಸುಲಭ ಉಪಾಯ ಹೇಳುತ್ತೇನೆ, ಅದರಂತೆ ಮಾಡು. ನಿನ್ನ ಇಷ್ಟವೂ ನೆರವೇರುತ್ತದೆ, ನನಗೆ ಶ್ರಮವೂ ಇರುವುದಿಲ್ಲ. ಇಗೋ ನನ್ನ ಬಾಯಿಯಲ್ಲೇ ಹದಿನಾಲ್ಕು ಲೋಕಗಳೂ ಕಾಣುತ್ತಿರುವುವು. ಇಲ್ಲಿಯೇ ಆ ಲೋಕಗಳನ್ನೆಲ್ಲ ಸ್ವೇಚ್ಛೆಯಾಗಿ ಆಕ್ರಮಿಸು. ಇದರಿಂದ ಮತ್ತೊಬ್ಬರನ್ನು ಯಾಚಿಸುವ ಶ್ರಮ ತಪ್ಪುವುದು.’ ನಾಲ್ಕನೆಯ ಶ್ಲೋಕದಲ್ಲಿ, ಕಮಲದಂತೆ ಕೋಮಲವಾದ ತನ್ನ ಪಾದವನ್ನು ಕೃಷ್ಣನು ತನ್ನೆರಡು ಕೈಗಳಿಂದ ಹಿಡಿದು ಕಾಲಿನ ಅಂಗುಷ್ಠ ಚೀಪುವಾಗ ಬಾಯಿಯಿಂದ ಧಾರೆಯಾಗಿ ಹರಿಯುವ ಜೊಲ್ಲು ಆ ಪಾದಕಮಲದ ಮೇಲೆ ಬಿದ್ದು ಪ್ರವಾಹ ದಂತೆ ಹರಿದುಬರುತ್ತಿರುವುದನ್ನು ನೋಡಿದರೆ ಭೂಲೋಕದಲ್ಲೂ ಗಂಗಾನದಿಯನ್ನು ಸೃಷ್ಟಿಸಿ ಪ್ರಪಂಚವನ್ನು ಉದ್ಧಾರ ಮಾಡುವ ಯೋಚನೆಯಲ್ಲಿರುವಂತೆ ಕಾಣುತ್ತದೆ ಕವಿಗೆ.

(ವಾಮನಾವತಾರದಲ್ಲಿ ಭಗವಂತನ ಒಂದು ಪಾದವು ಸತ್ಯಲೋಕವನ್ನು ತಲುಪಿ ಅಲ್ಲಿ ಬ್ರಹ್ಮನು ಕಮಂಡಲುವಿನ ತೀರ್ಥದಿಂದ ಅದನ್ನು ತೊಳೆಯುತ್ತಾನೆ, ಹಾಗೆ ಹರಿದ ನೀರೇ ಗಂಗಾನದಿ, ವಿಷ್ಣುಪಾದೋದಕ ತೀರ್ಥ). ಐದನೆಯ ಶ್ಲೋಕ ಭಲೇ ಕಿಲಾಡಿತ ನದ್ದು. ಅಲ್ಲಿ ಕವಿ ಕೃಷ್ಣನಿಗೆ ಹೀಗೆ ಹೇಳುತ್ತಾನೆ: ‘ನೀನು ಪಾದಕಮಲವನ್ನು ಬಾಯಿಯ ಸಮೀಪದಲ್ಲಿಟ್ಟುಕೊಂಡು ಬಗ್ಗಿ ಚುಂಬಿಸುತ್ತಿರುವುದನ್ನು ನೋಡಿದರೆ ಮತ್ತೊಂದು ಭಾವನೆಯುಂಟಾಗುತ್ತಿದೆ.

ಅಸಂಖ್ಯಾತ ಯುವತಿಯರಲ್ಲಿ ಪ್ರೇಮರಸವನ್ನು ಬೀರಿ ಅವರೊಡನೆ ಸದಾ ರಮಿಸಬೇಕೆಂಬ ಕುತೂಹಲವುಳ್ಳ ಬಹಳ ಕಾಮುಕ ನಾದ ನೀನು ನಿನ್ನ ಪಾದಕಮಲದ ಅದ್ಭುತ ಶಕ್ತಿಯನ್ನು ತಿಳಿದಿರುವೆಯಾದ್ದರಿಂದ ಆ ಅಂಗುಷ್ಠವನ್ನೇ ಕುರಿತು ಹೀಗೆನ್ನುತ್ತಿದ್ದೀ: ‘ಎಲೈ ಅಂಗುಷ್ಠವೇ ಹಿಂದೆ ನೀನು ಒಂದಾನೊಂದು ಸಮಯದಲ್ಲಿ ಒಂದು ಕಲ್ಲನ್ನು ಸ್ಪರ್ಶಿಸಿದ ಮಾತ್ರದಿಂದಲೇ ಅದನ್ನು ಒಬ್ಬ ಸುಂದರಿ(ಅಹಲ್ಯೆ)ಯನ್ನಾಗಿ ಮಾಡಿರುತ್ತೀಯೆ. ಆದ್ದರಿಂದ ಈಗ ನಿನ್ನಲ್ಲಿ ಒಂದು ವಿಷಯವನ್ನು ಗುಟ್ಟಾಗಿ ಕೇಳಿಕೊಳ್ಳುವೆನು. ಏನೆಂದರೆ, ನಾನು ಸಂಚರಿಸುವಾಗ ನಿನಗೆ ಸ್ಪರ್ಶಿಸುವ ಪ್ರತಿಯೊಂದು ಕಲ್ಲನ್ನೂ ಒಬ್ಬೊಬ್ಬ ಸ್ತ್ರೀರತ್ನವನ್ನಾಗಿ ಮಾಡಿಕೊಡುತ್ತಿ ಯಾದರೆ ಅನೇಕ ಸಹಸ್ರ ಯುವತಿಯರಲ್ಲಿ ಮುಂದೆ ರಮಿಸಬೇಕೆಂಬ ಕುತೂಹಲವುಳ್ಳ ನನ್ನ ಇಷ್ಟವು ಸಿದ್ಧಿಸುವುದು’ ಎಂದು. ಹಾಗೆ ಮಾಡಿಕೊಡೆಂದು ನಿನ್ನ ಕಾಲಿನ ಅಂಗುಷ್ಠವನ್ನು ಯಾಚಿಸುತ್ತಿರುವೆಯೇನೋ ಎಂಬಂತೆ ನನಗೆ ತೋರುತ್ತಿದೆ.’

ಕವಿಕಲ್ಪನೆ ಕಾಣುವ ಚೆಲುವಿನ ಜಾಲ ಅಂದರೆ ಹೀಗೇ ಅಲ್ಲವೇ? ತಲೆಯಿಂದ ಅಂಗುಷ್ಠದವರೆಗೂ ಗರಿಗೆದರುವ ಕಲ್ಪನಾಲಹರಿ. ಅಂಗುಷ್ಠದಿಂದಲೇ ಹರಿದರಂತೂ ಅದೇ ಕಾವ್ಯಗಂಗೆ! ಹಾಗೆಯೇ ಇದೊಂದು ಕಲ್ಪನೆ: ‘ಮಣ್ಣಿನಲ್ಲಿ ಕಂಡ ಉಂಗುರ… ಹೆಣ್ಣು ನಾಚಿ ಗೀರಿದುಂಗುರ…’ ಇದು ಅಂಗುಷ್ಠದಿಂದ ಹರಿದದ್ದಲ್ಲ, ಬರೆದದ್ದು!