ಚಿಂತನ-ಮಂಥನ
ಮಹಾದೇವ ಬಸರಕೋಡ
ನಾವಿಂದು ಅತ್ಯಂತ ಮುಂದುವರಿದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ವೈಜ್ಞಾನಿಕ ಅವಿಷ್ಕಾರಗಳು ನಮ್ಮ ದೈನಂದಿನ ಬದುಕನ್ನು ಇನ್ನಿಲ್ಲದಂತೆ ಪ್ರಭಾವಿಸಿವೆ. ಆಧುನಿಕತೆಯನ್ನು ಜಪಿಸುತ್ತ, ಅಭಿವೃದ್ಧಿಯ ಬೆನ್ನು ಹತ್ತಿ ಜಾಗತೀಕರಣ, ಔದ್ಯೋಗೀಕರಣ, ಉದಾರೀಕರಣಗಳ ಪ್ರಭಾವ ಪ್ರತಿ ಹಳ್ಳಿಯ
ಗಲ್ಲಿಗಳನ್ನು ತನ್ನ ತಕ್ಕೆಯಲ್ಲಿ ತಬ್ಬಿಕೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದೇವೆ.
ಯಂತ್ರನಾಗರಿಕತೆಯು ವಿಸ್ತರಣೋದ್ಯಮಗಳಲ್ಲಿ ಪರಿಸರ ಮತ್ತು ಮಾನವನ ನಡುವಿನ ಹೊಕ್ಕಳು ಸಂಂಧವನ್ನು ಕಡಿದುಹಾಕುತ್ತಿದೆ. ನೆಲ-ಜಲ-ವಾತಾ ವರಣಗಳು ನಿರಂತರ ಮಲಿನಗೊಂಡು ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಹೊರಗೆ ಕಾಲಿಟ್ಟರೆ ವಿಷಕಾರಿ ಗಾಳಿಯನ್ನೇ ಉಸಿರಾಡ ಬೇಕಾ ಗುವುದೆಂಬ ಕಾರಣಕ್ಕೆ ಬೆನ್ನಿಗೆ ಶುದ್ಧಗಾಳಿ ಕಟ್ಟಿಕೊಂಡು ಓಡಾಡಬೇಕಾದ ಕಾಲ ಸನ್ನಿಹಿತವಾಗುತ್ತಿದೆ. ಹಿಂದೆಂದೂ ಕಾಣದಂಥ ಭೀಕರ ಜಲಪ್ರಳಯ, ಸುನಾಮಿ, ಭೂಕಂಪಗಳಂಥ ಪ್ರಾಕೃತಿಕ ವಿಕೋಪಗಳು ಕೋವಿಡ್‌ನಂಥ ವೈರಸ್ ಹೆಮ್ಮಾರಿಗಳು ಆಗಾಗ ಸರ್ವಸ್ವವನ್ನು ನುಂಗಿ ನೊಣೆ ಯುತ್ತಿವೆ. ಜಗತ್ತಿನೆಲ್ಲೆಡೆ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿಯಾಗಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಇಷ್ಟಾಗಿಯೂ ಜೀವ ಸಮತೋಲನ ವನ್ನು ಹೊಸಕಿ ಹಾಕುವ ಏಕಮುಖ ಪ್ರಗತಿಯತ್ತ ದಾಪುಗಾಲು ಹಾಕುವ ಧಾವಂತ ತೋರುತ್ತಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇದ್ದೇವೆ.
ಜನಸಂಖ್ಯೆ ನಿರಂತರ ಏರುಮುಖಿಯಾಗುತ್ತಿದೆ. ಇದಕ್ಕೆ ಸಮಾನಾಂತರದಲ್ಲಿ ಎಲ್ಲವೂ ನನಗಿರಲಿ ಎಂಬ ಹಪಾಹಪಿ, ನೈತಿಕ ಮೌಲ್ಯಗಳ ಅಧಃಪತನ, ನಗರೀಕರಣದ ತೀವ್ರ ಚಲನೆ ನಮ್ಮ ಸುತ್ತಲೂ ಆವರಿಸಿಕೊಂಡಿದ್ದ ಸಸ್ಯಶಾಮಲೆಯನ್ನು ತಿಂದು ಬೀಗುತ್ತಿವೆ. ಕಾಡೆಲ್ಲವೂ ಕಾಂಕ್ರೀಟ್ ನಾಡಾಗಿ ಪರಿವರ್ತನೆಗೊಳ್ಳುತ್ತಿದೆ. ಪ್ರಕೃತಿಯನ್ನು ಅಸಮತೋಲನಗೊಳಿಸಿ ಮಾಲಿನ್ಯಯುಗಕ್ಕೆ ಮತ್ತೆ ಮತ್ತೆ ಕಾರಣರಾಗುತ್ತಲೇ ಇರುವುದು ಪ್ರಸ್ತುತ ದಿನದ ದುರಂತವಾಗಿದೆ. ಒಂದೆಡೆ ಅಭಿವೃದ್ಧಿಯ ಕುರಿತಾದ ಅರ್ಥತಜ್ಞರ ವಿಚಾರಗಳು, ಆಡಳಿತಗಾರರ ಚಿಂತನೆಗಳು, ಇನ್ನೊಂದಡೆ ಪರಿಸರ ಪ್ರೇಮಿಗಳ ವಾದ, ಪ್ರತಿಭಟನೆಗಳು ನಮ್ಮನ್ನು ಗೊಂದಲಕ್ಕೀಡುಮಾಡುತ್ತಿವೆ.
ಜಗತ್ತಿನ ಇತರ ರಾಷ್ಟ್ರಗಳ ಜತೆ ಜತೆಯಾಗಿ ಮುಂದುವರಿಯಬೇಕಾದ ಅನಿವಾರ‍್ಯತೆಯ ಸುಳಿಯಲ್ಲಿ ಸಿಲುಕಿ ನಾವು ಕೂಡ ಅಭಿವೃದ್ಧಿಯನ್ನು ಸಾಧಿಸ ಬೇಕಾದ ಒತ್ತಡಕ್ಕೆ ಒಳಗಾಗಿದ್ದೇವೆ. ಒಟ್ಟಾರೆ ಈ ಹೊತ್ತಿನ ನಾಗರಿಕತೆ, ಸಮುದಾಯದ ಹಿತಕ್ಕೆ ಅಗತ್ಯವಾದ ಅಭಿವೃದ್ಧಿಯನ್ನು ಮತ್ತು ಪರಿಸರದ ಜತೆಗಿನ ಕರುಳು ಸಂಬಂಧವನ್ನು ಸರಿದೂಗಿಸಿಕೊಂಡು ಮುಂದುವರಿಯುವಲ್ಲಿ ಹಿನ್ನಡೆಯಾಗುತ್ತಿದೆ ಎಂಬುದಂತೂ ಸತ್ಯ. ಏನೂ ಮಾಡಲಾಗದ ಹತಾಶ ಸ್ಥಿತಿ ತಲುಪುವ ಮುನ್ನವೇ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ.
ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಿಸರಕ್ಕೆ ಧಕ್ಕೆ ತಾರದಂತೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ದೊಡ್ಡ ಜವಾಬ್ದಾರಿ ಸರಕಾರದ ಮೇಲಿದ್ದು, ಅದು ತೀರಾ ಅಗತ್ಯವಿರುವ ಯೋಜನೆಗಳಿಗೆ ಮಾತ್ರವೇ ಭೂಮಿಯನ್ನು ಬಳಸಿಕೊಳ್ಳುವ ವಿವೇಚನೆ ತೋರಬೇಕಿದೆ. ಉತ್ತುವ, ಬಿತ್ತುವ ಭೂಮಿಯನ್ನು, ಹಸಿರು ಪರಿಸರದ ನೆಲವನ್ನು ಬಂಜರಾಗಿಸುವ, ನಗರೀಕರಣಗೊಳಿಸುವ ನೂರೆಂಟು ರಾಜಕೀಯ ಪ್ರೇರಿತ, ಬಂಡವಾಳಷಾಹಿ ಹುನ್ನಾರಗಳಿಗೆ ತಡೆಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವ, ಶಿಕ್ಷಿಸುವ ಬದ್ಧತೆ ಪ್ರದರ್ಶಿಸಬೇಕಿದೆ.
ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಇಂಗ್ಲೆಂಡ್, ಯುರೋಪ್, ಇಟಲಿ ಮಾತ್ರವಲ್ಲದೆ ಇನ್ನು ಹತ್ತು ಹಲವು ರಾಷ್ಟ್ರಗಳು ತಮ್ಮ ಯಾಂತ್ರೀಕರಣದ ಭರಾಟೆಯ ಜತೆಗೆ ನಿಸರ್ಗದ ಶ್ರೀಮಂತಿಕೆಯನ್ನು ಕಾಪಿಟ್ಟುಕೊಳ್ಳಲು ಅನುಸರಿಸುತ್ತಿರುವ ಕ್ರಮಗಳನ್ನು ಸರಕಾರ ಗಮನಿಸುವ, ಅಧ್ಯಯನ ಮಾಡಿ ಅನುಸರಿಸುವ, ಪರಿಸರ ತಜ್ಞರ ಅಭಿಪ್ರಾಯ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರಬೇಕಿದೆ. ಪ್ರಕೃತಿಯನ್ನು ಬರೀ ಒಂದು ಸಂಪನ್ಮೂಲವೆಂದು ಭಾವಿಸಿ ಅದರ ಕೆಚ್ಚಲನ್ನೇ ಕೊಯ್ಯುವ ನೂರೆಂಟು ದುಸ್ಸಾಹಸಗಳಿಗೆ ಕಡಿವಾಣ ಹಾಕಬೇಕಿದೆ.
ಇದಕ್ಕೆ ಪೂರಕವಾಗಿ ನಾವು ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ನಾಗರಿಕತೆಯನ್ನು ಮೆರೆಯಬೇಕಿದೆ. ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕಿದೆ. ದವಸ-ಧಾನ್ಯ ಬೆಳೆಯುವ ಪ್ರದೇಶಗಳನ್ನು ಸಂರಕ್ಷಿಸಬೇಕಿದೆ. ಶಕ್ತಿಮೂಲಗಳನ್ನು ವ್ಯರ್ಥಗೊಳಿಸದಂತೆ ವಿವೇಚನೆ ಯಿಂದ ಬಳಸಿಕೊಳ್ಳಬೇಕಿದೆ. ನಮ್ಮ ಬದುಕಿನ ಶೈಲಿಯನ್ನು ಪರಿಸರಕ್ಕೆ ಪೂರಕವಾಗಿರುವಂತೆ ರೂಢಿಸಿಕೊಳ್ಳಬೇಕಿದೆ. ಮತ್ತೊಮ್ಮೆ ಮೊದಲಿನಂತೆಯೇ ಹಸಿರಿನ ಜತೆಗೆ ಹೊಕ್ಕಳುಬಳ್ಳಿಯ ಸಂಬಂಧವನ್ನು ಹುರಿಗೊಳಿಸಬೇಕಿದೆ. ಯಾವುದೋ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಹತ್ತು ಹಲವು ಅವೈಜ್ಞಾನಿಕ ನಂಬಿಕೆಗಳ ಆಲದ ಮರಕ್ಕೆ ಜೋತುಬೀಳುವುದನ್ನು ಬಿಟ್ಟು, ಗಿಡ ಮರಗಳನ್ನು ಬೆಳೆಸುವುದು ನಮ್ಮ ಮನೆ, ಕಟ್ಟಡಗಳ ವಾಸ್ತುವಿನ ಒಂದು ಅಂಗವಾಗಿ ಪರಿಭಾವಿಸಬೇಕಿದೆ. ಹಸಿರಿನ ಸಮೃದ್ಧಿಯನ್ನು ಮನೆ ಮನೆಗಳಲ್ಲಿ ಹೆಚ್ಚಿಸಬೇಕಿದೆ.
ವೈಯಕ್ತಿಕ ಮೌಲ್ಯಗಳ ಸಮ್ಮೋಹಿನಿಗೆ ಒಳಗಾಗದೆ ಸಾರ್ವತ್ರಿಕ ಮೌಲ್ಯಗಳನ್ನು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕಿದೆ. ಅವಿಭಕ್ತ ಕುಟುಂಬಗಳಿಗೆ ಆದ್ಯತೆ ನೀಡಬೇಕಿದೆ. ಸಾರ್ವಜನಿಕ ಸಾರಿಗೆಗಳ ಬಳಕೆಯತ್ತ ಗಮನ ಹರಿಸಬೇಕಿದೆ. ನನ್ನ ಹಣ, ನಾನು ಅದನ್ನು ಹೇಗಾದರೂ ಬಳಸ ಬಹುದೆಂಬ ಮನೋಧೋರಣೆಯಿಂದ ಹೊರಬರಬೇಕಿದೆ. ಆಡಂಬರದ ಬದುಕಿನ ಶೈಲಿಗೆ ಶರಣಾಗುವುದನ್ನು ನಿಲ್ಲಿಸಬೇಕಿದೆ. ಮಾರುಕಟ್ಟೆಯಲ್ಲಿ ದೊರೆಯುತ್ತಿವೆ ಎಂಬ ಕಾರಣಕ್ಕೆ, ಪ್ರತಿಷ್ಠೆಗೆ ಜೋತುಬಿದ್ದು, ಐಷಾರಾಮಿ ಬದುಕಿನ ಭ್ರಾಂತಿಗೆ ಒಳಗಾಗಿ, ಬೇರೆಯವರು ಬಳಸುತ್ತಾರೆ ಅದಕ್ಕಾಗಿ ನಾವೂ ಅದನ್ನು ಬಳಸಬೇಕೆಂಬ ಅತಾರ್ಕಿಕ ನಿಲುವಿಗೆ ಕಟ್ಟುಬಿದ್ದು, ಅನಗತ್ಯ ವಸ್ತುಗಳನ್ನು ಕೊಳ್ಳುವುದದನ್ನು ಬಿಟ್ಟು ಅವಶ್ಯಕವಿರುವ ವಸ್ತುಗಳನ್ನು ಮಾತ್ರವೇ ಕೊಳ್ಳುವುದನ್ನು ರೂಢಿಸಿಕೊಳ್ಳಬೇಕಿದೆ. ಮಾಲ್ ಸಂಸ್ಕೃತಿಗೆ ಕಡಿವಾಣ ಹಾಕಬೇಕಿದೆ.
ಶಕ್ತಿಯ ಸಂಪನ್ಮೂಲಗಳನ್ನು ಅತ್ಯಂತ ವಿವೇಚನೆಯಿಂದ ಬಳಸಬೇಕಿದೆ. ಎಲ್ಲವನ್ನೂ ಹಿತಮಿತವಾಗಿ ಬಳಸುವುದು ನಮ್ಮ ಆದ್ಯತೆಯಾಗಬೇಕಿದೆ.
‘ಆಸೆಯೆಂಬುದು ಅರಸಂಗಲ್ಲದೇ ಶಿವಭಕ್ತರಿಗುಂಟೇ ಅಯ್ಯಾ’ ಎಂಬ ಶರಣರ ಮಾತಿನಂತೆ ಅನಗತ್ಯವಾಗಿ ವಸ್ತುಗಳನ್ನು ವಿಪರೀತ ಸಂಗ್ರಹಿಸುವ ನಮ್ಮ ವಿವೇಚನಾರಹಿತ ನಡೆಯನ್ನು ದೂರಕ್ಕೆ ಸರಿಸಿ ಬದುಕನ್ನು ಸರಳೀಕರಣಗೊಳಿಸಬೇಕಿದೆ. ಇದರಿಂದಾಗಿ ಬೇಡಿಕೆ ತಗ್ಗುತ್ತ ಹೋಗುವುದರಿಂದ ಉತ್ಪದ ನೆಯು ಕಿರಿದುಗೊಳ್ಳುತ್ತದೆ, ತನ್ಮೂಲಕ ಕೈಗಾರಿಕೀಕರಣಕ್ಕೆ ಕೊಂಚವಾದರೂ ಕಡಿವಾಣ ಬೀಳಬಲ್ಲದು. ಏಕೆಂದರೆ ನಾವು ಜೀವ ಸಮತೋಲದ ಮಹತ್ವ ಅರಿತು ವಿವೇಕವಂತರಾಗಬೇಕಿದೆ, ಪ್ರಕೃತಿಯ ಮೇಲೆ ಸಲ್ಲದ ನಿಯಂತ್ರಣ ಸಾಽಸುವ ಹುಚ್ಚು ಹುನ್ನಾರಗಳನ್ನು ನಿಲ್ಲಿಸಬೇಕಿದೆ.
ಗಿಡಮರಗಳನ್ನು ವಾಸ್ತುಶಾಸ್ತ್ರದ ಒಂದು ಭಾಗವಾಗುವಂತೆ ನಮ್ಮ ಕಟ್ಟಡಗಳನ್ನು ನಿರ್ಮಿಸುವತ್ತ ಗಮನವಹಿಸಬೇಕಿದೆ. ಸೌಕರ್ಯಗಳನ್ನು ಹೆಚ್ಚಿಸುವ ಆಧುನಿಕತೆ, ತಂತ್ರಜ್ಞಾನಗಳ ಏಕಮುಖ ಪ್ರಗತಿ ಮಾರ್ಗದಿಂದ ಒಂದಷ್ಟು ಕಳಚಿಕೊಂಡು, ಅದಕ್ಕೊಂದು ಮಿತಿ ಹಾಕಬೇಕಿದೆ. ಬಹುಮುಖ್ಯವಾಗಿ ಸ್ವಸ್ಥ ಬದುಕಿಗ ತೀರಾ ಅಗತ್ಯವಾಗಿರುವ ಸಾಮಾಜಿಕ ಸ್ವಾಸ್ಥ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬದುಕಿನ ಭಾಗವಾಗಿಸಿಕೊಳ್ಳಬೇಕಿದೆ. ಮನುಷ್ಯ-ಪ್ರಕೃತಿ-ಜೀವಸಂಕುಲದ ಮಧ್ಯೆ ಸಮತೋಲನ ಸಾಧಿಸಬೇಕಿದೆ.
ಸಾಧ್ಯವಾದಷ್ಟು ಪ್ರಕೃತಿಯನ್ನು ಕದಲಿಸದೆ ಅದರೊಂದಿಗೆ ಸಹಬಾಳ್ವೆಯನ್ನು ರೂಢಿಸಿಕೊಳ್ಳಬೇಕಿದೆ. ಕುವೆಂಪು ಒಂದೆಡೆ ಹೇಳುವಂತೆ, ಒಂದು ಗಿಡ, ಮರ, ಹೂವು, ಹಕ್ಕಿ, ಗುಡ್ಡ, ಬೆಟ್ಟವನ್ನು ಪ್ರೀತಿಸಲಾರದವನು ಮನುಷ್ಯರನ್ನು ಹೇಗೆ ಪ್ರೀತಿಸಲು ಸಾಧ್ಯ? ಎಂಬ ಮಾತಿನ ಮರ್ಮವನ್ನು ನಾವೆಲ್ಲ ಅರಿಯಬೇಕಿದೆ. ನಮ್ಮ ಜನಪದರು ಬಹು ಸುಂದರವಾಗಿ ಕಟ್ಟಿಕೊಟ್ಟ, ‘ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ, ಭೂಮಿತಾಯ ಎದ್ದೊಂದು ಗಳಿಗೆ ನೆನದೇನ’ ಎಂಬ ಪ್ರಾರ್ಥನೆ ನಿತ್ಯವೂ ನಮ್ಮದಾಗಬೇಕಿದೆ. ನಾನೊಬ್ಬ ಬದಲಾದರೆ ಎಲ್ಲವೂ ಸರಿಯಾದೀತೆ? ಎಂಬ
ನಕಾರಾತ್ಮಕತೆಯಿಂದ ಹೊರಬಂದು ನಮ್ಮ ನಮ್ಮ ಡೊಂಕನ್ನು ನಾವು ತಿದ್ದಿಕೊಳ್ಳುವಂತಾಗಬೇಕು. ಚಿನ್ನದ ಮೊಟ್ಟೆಯಿಡುವ ಕೋಳಿಯ ಹೊಟ್ಟೆ ಯನ್ನು ಬಗೆದು ನೋಡುವ ಉದ್ಧಟ ಪ್ರವೃತ್ತಿಯನ್ನು ತೊರೆದು ನಮ್ಮ, ಸಮಸ್ತ ಜೀವಸಂಕುಲದ ಮತ್ತು ಪ್ರಕೃತಿಯ ಉಳಿವಿಗಾಗಿ ನಾವೆಲ್ಲ ಒಂದು ಗೂಡಬೇಕಿದೆ. ಗಂಭೀರವಾಗಿ ಯೋಚಿಸಿ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಅದುವೇ, ಇತರ ಜೀವಿಗಳೊಂದಿಗಿನ ನಮ್ಮ ಸುಗಮ ಸಹಬಾಳ್ವೆಗೆ ನಾಂದಿಯಾಗಬಲ್ಲದು.
(ಲೇಖಕರು ಶಿಕ್ಷಕರು)