Sunday, 15th December 2024

ಮೀಸಲಾತಿಗೂ ಇರಲಿ ಇತಿಮಿತಿ

ಅಭಿವ್ಯಕ್ತಿ

ಡಾ.ಕೆ.ಪಿ.ಪುತ್ತುರಾಯ

ನಮ್ಮ ದೇಶದಲ್ಲಿ, ಶತ ಶತಮಾನಗಳ ಹಿಂದೆ ಕರ್ಮಾಧಾರಿತವಾಗಿ ಸ್ಥಾಪಿತವಾದ ವರ್ಣಾಶ್ರಮ ವ್ಯವಸ್ಥೆ ಕ್ರಮೇಣ ಜನ್ಮಾಧಾ ರಿತವಾಗಿ ರೂಪುಗೊಂಡು, ಹರಿಜನ-ಗಿರಿಜನ, ಬುಡಗಟ್ಟು ಜನಾಂಗದವರೇ ಮೊದಲಾಗಿ ಹಲವಾರು ಕೆಳಜಾತಿಯ ಜನರು ಸಾಮಾಜಿಕವಾಗಿಯೂ, ಶೈಕ್ಷಣಿಕವಾಗಿಯೂ, ಆರ್ಥಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಬಹಳ ಹಿಂದುಳಿದು ಬಿಟ್ಟರು.

ಮಾತ್ರವಲ್ಲದೇ ಮೇಲು ವರ್ಗದವರಿಂದ ನಾನಾ ತರಹದ ಶೋಷಣೆಗೆ, ದೂಷಣೆಗೆ ಒಳಗಾದರು. ಇವರ ಪುನರುಜ್ಜೀವನವಾಗಿ
ಈ ಅಸಮತೋಲನತೆಗಳನ್ನು ನಿವಾರಿಸಿ, ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು, ಸಾಮಾಜಿಕ ಸಮಾನತೆಯನ್ನು ತರದಿದ್ದರೆ, ಮುಂದುವರಿದವರೇ ಇನ್ನಷ್ಟು ಮುಂದುವರಿದು, ಹಿಂದುಳಿದ ವರ್ಗದವರು ಶಾಶ್ವತವಾಗಿ ಹಿಂದುಳಿದು ಬಿಟ್ಟು, ದೇಶದ ಅಭಿವೃದ್ಧಿ ಸಂಪೂರ್ಣವಾಗದು ಎಂಬ ಚಿಂತನೆ ಸಮಾಜ  ಸುಧಾರಕರಲ್ಲಿ ಬಲವಾಗತೊಡಗಿತು.

ಸಮಪಾಲು ಸಮಬಾಳು ಎಂಬ ಸೂತ್ರದಡಿ, ಸಮಾಜದ ಎಲ್ಲಾ ವರ್ಗದವರಿಗೂ ಸರಿಸಮಾನವಾದ ಅವಕಾಶ- ಅಧಿಕಾರ, ಸ್ಥಾನ-ಮಾನ, ಹಕ್ಕುಭಾದ್ಯತೆಗಳನ್ನು ಕಲ್ಪಿಸಿಕೊಡಬೇಕಾದುದು ಸಾಮಾಜಿಕ ನ್ಯಾಯದಲ್ಲಿ ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದವರಿಗೆ ವಿಶೇಷವಾದ ಸವಲತ್ತು-ಸೌಲಭ್ಯಗಳನ್ನು ನೀಡದಿದ್ದರೆ, ಇವರು ಮುಂದುವರಿದ ಜಾತಿಯವರೊಂದಿಗೆ
ಸ್ಪರ್ಧಿಸಿ ಗೆಲ್ಲಲು ಸಾಧ್ಯವಾಗದು ಹಾಗೂ ಅವರು ಎಂದೆಂದಿಗೂ ಹಿಂದೆಯೇ ಉಳಿದು ಬಿಟ್ಟಾರು ಎಂಬ ವಾದವೂ ಹೆಚ್ಚಾಯಿತು.

ಇಂತಹ ಪ್ರಗತಿಪರ ಚಿಂತನ-ಮಂಥನಗಳ ಫಲಶ್ರುತಿಯಾಗಿ, ಹಿಂದುಳಿದ ವರ್ಗದವರನ್ನು ಮೇಲೆತ್ತಲು ಅನ್ಯಮಾರ್ಗವಿಲ್ಲದೆ,
ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತು ಸರಕಾರೀ ಉದ್ಯೋಗಗಳಲ್ಲಿ ಸಂವಿಧಾನತ್ಮಾಕವಾಗಿ ಮೀಸಲಾತಿ ನೀತಿಯನ್ನು ಜಾರಿಗೆ ತರಲಾಯಿತು. ಸಂವಿಧಾನದ ೧೫(೪) ಮತ್ತು ೧೬(೪)ನೇ ವಿಧಿಗಳಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಮೀಸಲಿನ ಮೂಲಕ ಮೀಸಲಿಗೆ ಅಂತ್ಯ ಹಾಡಬೇಕೆಂಬುದೇ ಇದರ ತಾತ್ಪರ್ಯ. ಈ ಹೆಜ್ಜೆ ಸ್ವಾಗತಾರ್ಹವೇ.

ಆದರೆ, ಮೀಸಲು ನೀತಿಯ ಸ್ವರೂಪ ಮತ್ತು ಅನುಷ್ಠಾನಗಳ ಕುರಿತು, ಅನೇಕ ಅಪಸ್ವರಗಳು, ಅಸಮಾಧಾನಗಳು ಆಗಾಗ ವ್ಯಕ್ತವಾಗುತ್ತಿರುವುದಂತೂ ನಿಜ. ಗೊಂದಲದ ಗೂಡಾಗಿರುವ ವಿವಾದಾತ್ಮಕವಾದ ಈ ವಿಷಯಗಳ ಕುರಿತ ಮರುಚಿಂತನೆ ಅಪೇಕ್ಷಣೀಯ. ಹಿಂದುಳಿದ ವರ್ಗದವರಿಗೆ ಮೀಸಲಾತಿಯ ಅವಶ್ಯಕತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ,
ಹಿಂದುಳಿದವರೆಂದರೆ ಯಾರು? ಇದನ್ನು ನಿರ್ಧರಿಸಲು ಅನುಸರಿಸಬೇಕಾದ ಮಾನದಂಡ ಯಾವುದು? ಕೇವಲ ಅವರವರ ಜಾತಿಯನ್ನಾಧರಿಸಿ ನಿರ್ಧರಿಸುವಂತಾದರೆ, ಜಾತಿ ಯಾವುದೇ ವ್ಯಕ್ತಿಯ ಆಯ್ಕೆ ಅಲ್ಲದ, ಅವನ ಅಽನದಲ್ಲಿ ಇಲ್ಲದ ವಿಷಯ ವಲ್ಲವೇ! ಇದರಲ್ಲಿ ವ್ಯಕ್ತಿಯ ಪಾತ್ರವೇನೂ ಇಲ್ಲವಲ್ಲ!

ಅಂದಮೇಲೆ, ಜಾತ್ಯಾಧಾರಿತ ಎಲ್ಲಾ ಲೆಕ್ಕಾಚಾರಗಳು, ಅಸಮಂಜಸ ಮತ್ತು ಅವೈಜ್ಞಾನಿಕವಾಗಲಾರದೇ? ಕೇವಲ ಹಿಂದುಳಿದ ವರ್ಗದಲ್ಲಿ ಜನಿಸಿದವರು ಎಂಬ ಒಂದೇ ಒಂದು ಕಾರಣಕ್ಕೆ, ಅವರನ್ನು ಎಲ್ಲಾ ರೀತಿಯ ರಿಯಾಯಿತಿ, ವಿನಾಯಿತಿಗಳಿಗೆ ಪರಿಗಣಿಸಿ, ಪ್ರತಿಭೆ ಇದ್ದರೂ, ಕಡು ಬಡವರಾಗಿದ್ದರೂ, ಮುಂದುವರಿದ ವರ್ಗಕ್ಕೆ ಸೇರಿದವರು ಎಂಬ ಒಂದೇ ಒಂದು ಕಾರಣಕ್ಕೆ,
ಅವರನ್ನು ಅವಕಾಶ ವಂಚಿತರನ್ನಾಗಿ ಮಾಡೋದು ನ್ಯಾಯಸಮ್ಮತವೇ? ಸಂವಿಧಾನ ಪ್ರಕಾರವೂ ನಮ್ಮದು ಜಾತ್ಯಾತೀತ ರಾಷ್ಟ್ರ. ಅಂದರೆ ಜಾತಿ ಸಿದ್ಧಾಂತವನ್ನು ಒಪ್ಪದ ರಾಷ್ಟ್ರ. ಅಂದಮೇಲೆ ಜಾತ್ಯಾಧಾರಿತ ಮೀಸಲು ಸಂವಿಧಾನ ವಿರುದ್ಧವಾ  ದಂತಾಯಿತಲ್ಲವೇ? ಮರೆಯಬೇಕಾಗಿದ್ದ ಜಾತೀಯತೆಯನ್ನು ಮತ್ತೆ ಮೆರವಣಿಗೆ ಮಾಡಿದಂತಾಗದೇ? ಜಾತಿ ವಾದಕ್ಕೆ ಪರೋಕ್ಷ  ವಾಗಿ ಮಹಾಮಸ್ತಕಾಭಿಷೇಕ ಮಾಡಿದಂತಾಯಿತಲ್ಲವೇ? ಪ್ರಾಣ ಹೋಗುವ ಸಂದರ್ಭದಲ್ಲಿ ‘ಭಟ್ರ ರಕ್ತ ಶೆಟ್ರಿಗೂ, ಶೆಟ್ರ ರಕ್ತ ಭಟ್ರಿಗೂ’ ಆಗುವಂತಾದರೆ, ಈ ಜಾತ್ಯಾಧಾರಿತ ಲೆಕ್ಕಾಚಾರ ಮತ್ತೇಕೆ ಬೇಕು? ಇದರ ಬದಲಾಗಿ, ವ್ಯಕ್ತಿಯ ಜಾತಿ ಯಾವುದೇ ಇರಲಿ,
ಅವರು ಸಾಮಾಜಿಕವಾಗಿ ಬಹಳವಾಗಿ ಹಿಂದುಳಿದು ಬಿಟ್ಟಿದ್ದರೆ, ಅಂತಹವರಿಗೆ ಮೀಸಲಾತಿಯ ಸೌಲಭ್ಯ ಕಲ್ಪಿಸೋದು ಸಮಂಜಸ ವಾದೀತಲ್ಲವೇ? ಈ ಸತ್ಯವನ್ನರಿತೇ ‘Caste based reservation is no solution ಎಂಬುದಾಗಿ ರವಿಶಂಕರ್ ಗುರೂಜಿ ಹೇಳಿದ್ದರು.

ಅಂತೆಯೇ, ಹಿಂದುಳಿದ ವರ್ಗದವರಲ್ಲೂ ಕೆಲ ಶ್ರೀಮಂತರಿದ್ದಾರೆ. ಇವರಿಗೇಕೆ ಬೇಕು ಮೀಸಲಾತಿಯ ಸೌಲಭ್ಯ? ಹಾಗೂ ಮುಂದು ವರಿದ ವರ್ಗದವರಲ್ಲೂ ಕಡು ಬಡವರಿದ್ದಾರೆ. ಇವರಿಗೆ ಯಾಕಿಲ್ಲ ಮೀಸಲಾತಿ? ಬಡತನ ಜಾತಿಯನ್ನು ನೋಡುವುದಿಲ್ಲ! ! Poverty has no caste.. ಅಂದ ಮೇಲೆ ಇವರೆಲ್ಲಿಗೆ ಹೋಗಬೇಕು! ಇವರೂ ದೇಶದ ಪ್ರಜೆಗಳಲ್ಲವೇ! ಈ ದೃಷ್ಟಿಯಲ್ಲಿ ಜಾತಿಯ ಲೆಕ್ಕಾಚಾರವನ್ನು ಬಿಟ್ಟು, ಜನರ ಆರ್ಥಿಕ ಸ್ಥಿತಿಗತಿಗಳನ್ನಾಧರಿಸಿ, ನಿರ್ಣಯಿಸುವ ಮೀಸಲಾತಿ ನ್ಯಾಯ ಸಮ್ಮತವಾದೀತಲ್ಲವೇ. ಆದರೆ ಯಾವುದೇ ಒಂದು ವ್ಯಕ್ತಿಯ ನಿಜವಾದ ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳುವುದು ಸುಲಭದ ಕೆಲಸವಲ್ಲ.

ಕಾರಣ ಜನರ ಅಪ್ರಾಮಾಣಿಕತೆ ಒಂದೆಡೆಯಾದರೆ, ಒಂದಿಷ್ಟು ಕೈ ಬಿಸಿ ಮಾಡಿದರೆ ನಿಮಗೆ Low Income Certificate  ನೀಡುವ ಭ್ರಷ್ಟ ಅಧಿಕಾರಿಗಳ ಪಡೆ ಇನ್ನೊಂದೆಡೆ. ಶೇ. ೧೨ ರಷ್ಟಿರುವ ಗುಜರಾತಿನ ಪಠೇಲ್ ಇಲ್ಲವೇ ಶೇ. ೨೧ರಷ್ಟಿರುವ ಹರಿಯಾಣದ ಜಾಠ್‌ಗಳಂತಹ ಆರ್ಥಿಕವಾಗಿ ಮುಂದುವರಿದ ಸಮಾಜದವರೂ ಮೀಸಲಾತಿಗಾಗಿ ಹೋರಾಟ ನಡೆಸಿದರೆ, ನಿಜವಾದ ಫಲಾನು ಭವಿಗಳಿಗೆ ಮೋಸಮಾಡಿದಂತಾಗದೇ. ಹಾಗೆಂದು ಕಟ್ಟುನಿಟ್ಟಾದ ಕಾನೂನಿನ ಕ್ರಮದಿಂದ ಪಾರದರ್ಶಕ ವ್ಯವಸ್ಥೆಯಿಂದ
ಆರ್ಥಿಕ ವಾಗಿ ಹಿಂದುಳಿದವರನ್ನು ಗುರುತಿಸೋದು ಕಷ್ಟದ ಕೆಲಸವಾಗದು.

ಜಾತಿ, ಧರ್ಮಗಳ ಹೆಸರಿನ ಬದಲಾಗಿ ಯಾವ ಜಾತಿಮತದವರೇ ಆಗಿರಲಿ, ಬಡತನ ರೇಖೆಗಿಂತ ಕೆಳಗಿರುವ, ಆರ್ಥಿಕವಾಗಿ ದುರ್ಬಲರಿಗೆ ಮೀಸಲಾತಿಯ ಸೌಲಭ್ಯವನ್ನು ಕಲ್ಪಿಸುವುದು ದೇವರು ಮೆಚ್ಚುವ ಕೆಲಸವಾದೀತು. ಇನ್ನು ಮೀಸಲಾತಿಯ ಪ್ರಮಾಣ, ಯಾವ ಯಾವ ಜಾತಿಗಳಿಗೆ ಶೇಕಡಾ ಎಷ್ಟಿರಬೇಕೆಂಬುದೂ, ವಿವಾದಾತ್ಮಕ ಹಾಗೂ ಸಮರ್ಪಕವಾಗಿ ರೂಪುಗೊಂಡು
ಪಾಲನೆಯಾಗದ ವಿಷಯ. ೨೦೦೬ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪಂಚನ್ಯಾಯ ಮೂರ್ತಿಗಳ ಪೀಠ ಮೂಗಿಗಿಂತ ಮೂಗುತಿ ದೊಡ್ಡದಾಗಿರಬಾರದು ಎಂಬ ಸಿದ್ಧಾಂತದಡಿ, ಯಾವ ಕಾಲಕ್ಕೂ ಮೀಸಲು ಪ್ರಮಾಣ ಶೇ. ೫೦ಕ್ಕಿಂತ ಹೆಚ್ಚು ಮೀರುವಂತಿಲ್ಲವೆಂದು ಹೇಳಿತು.

ಅಂತೆಯೇ ಹಿಂದುಳಿದ ವರ್ಗದವರಲ್ಲೇ ಕೆನೆಪದರಿ ನವರಿಗೆ ಮತ್ತೆ ಮೀಸಲಾತಿಯ ಸೌಲಭ್ಯವಿರಬಾರದು, ಭಡ್ತಿಯಲ್ಲಿ ಮೀಸಲು ಅವಶ್ಯಕತೆ ಇಲ್ಲ, ಅನಿರ್ದಿಷ್ಟ ಕಾಲದವರೆಗೆ ಮೀಸಲನ್ನು ಮುಂದುವರಿಸಬಾರದೆಂದೂ ಹೇಳಿತು. ಇಷ್ಟೆಲ್ಲಾ ಆದೇಶಗಳಿದ್ದರೂ,
ಅವೆಲ್ಲವನ್ನೂ ಗಾಳಿಗೆ ತೂರಿ, ರಾಜಕೀಯ ಹಿತಾಸಕ್ತಿಯಿಂದ ಪಕ್ಷಾತೀತವಾಗಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿರುವುದಂತೂ ನಿಜ. ಈ ಕಾರಣದಿಂದಲೇ, ಮೀಸಲಾತಿ ನೀತಿ ದೇಶದಾದ್ಯಂತ ಒಂದೇ ತೆರನಾಗಿಲ್ಲ. ಒಂದೊಂದು ರಾಜ್ಯಕ್ಕೆ ಒಂದೊಂದು ನೀತಿ; ಒಂದೊಂದು ರೀತಿ.

ಮೀಸಲಾತಿ ಪದ್ಧತಿ ಎಷ್ಟು ಕಾಲ, ಕುಟುಂಬದಲ್ಲಿ ಎಷ್ಟು ತಲೆಮಾರಿನವರೆಗೆ ಮುಂದುವರಿಯಬೇಕೆಂಬುದೂ ಸ್ಪಷ್ಟವಾಗಿ ಉತ್ತರವಿಲ್ಲದ ಇನ್ನೊಂದು ಪ್ರಶ್ನೆ. ಇದಕ್ಕೆ ಕೊನೆಯೇ ಇಲ್ಲವೇ? “Once backward, always backward?” ಅಪ್ಪನಿಗೆ ಸಿಕ್ಕಿದ ಮೀಸಲಾತಿ ಸೌಲಭ್ಯ ಅವನ ಮಗನಿಗೂ, ಮೊಮ್ಮಗನಿಗೂ ಮುಂದುವರಿಯಬೇಕೇ? ಒಂದು ವರ್ಗಕ್ಕೆ ಒಮ್ಮೆ ದೊಕಿದ ಮೀಸಲಾತಿ ಸೌಲಭ್ಯ ಆ ವರ್ಗದವರಿಗೆ ಶಾಶ್ವತವಾಗಿ ದೊರೆಯಬೇಕೇ? ಮೀಸಲಾತಿ ನೀತಿಯ ಪ್ರತಿಪಾದಕರಾದ ಡಾ. ಬಿ. ಆರ್. ಅಂಬೇಡ್ಕರ್ ರವರು, ಮೀಸಲಾತಿ ಪದ್ಧತಿ, ಕೆಲವೇ ವರ್ಷಗಳಷ್ಟೇ (೧೫ ವರ್ಷಗಳು) ಸೀಮಿತವಾಗಿ, ಕ್ರಮೇಣ ಕೆಳ ಮುಖವಾಗುತ್ತಾ, ಒಂದು ಹಂತದಲ್ಲಿ ದೇಶದ ಹಿತದೃಷ್ಟಿಯಿಂದ ಸಂಪೂರ್ಣವಾಗಿ ಮರೆಯಾಗಬೇಕೆಂದು ಸೂಚಿಸಿದ್ದರೂ, ವರುಷದಿಂದ ವರುಷಕ್ಕೆ, ವರ್ಗದಿಂದ ವರ್ಗಕ್ಕೆ ಮೇಲ್ ಮುಖವಾಗಿ ಬೆಳೆಯುತ್ತಿರೋದು ಆತಂಕಕಾರಿ ಹಾಗೂ ಅಭಿವೃದ್ಧಿಯ ಸಂಕೇತವಲ್ಲ. ನಮಗೆ ಸ್ವಾತಂತ್ರ್ಯ ಒಂದು ೭೦ ವರುಷಗಳ ಮೇಲಾದರೂ, ಹಿಂದುಳಿದವರ ಉದ್ಧಾರಕ್ಕೆಂದು ಕೋಟ್ಯಾಂತರ ರುಪಾಯಿಗಳು ಖರ್ಚಾಗಿದ್ದರೂ, ಅವರ ಪೈಕಿ ಯಾರೂ ಪ್ರಗತಿ ಹೊಂದಲೇ ಇಲ್ಲವೇ? ಪ್ರಗತಿ ಹೊಂದಿದ್ದಲ್ಲಿ ಮತ್ತೇಕೆ ಮುಂದುವರಿಯಬೇಕು,
ಮೇಲ್ ಮುಖವಾಗಬೇಕು ಈ ಮೀಸಲಾತಿ? ಇದರ ಹಿಂದೆ ಪಕ್ಷಾತೀತವಾಗಿ, ರಾಜಕೀಯ ಹಿತಾಸಕ್ತಿ ಇದೆ ಎಂಬುದನ್ನು ಬೇರೆ ಹೇಳಬೇಕೇ? ಹಿಂದುಳಿದ ವರ್ಗದವರಲ್ಲೂ ಈಗಾಗಲೇ ಮೀಸಲಾತಿಯ ಲಾಭ ಪಡೆದು, ಮುಂದುವರೆದಿರುವವರ ಮಕ್ಕಳೂ, ಮೊಮ್ಮಕ್ಕಳೂ ಪುನಃ ಮತ್ತೆ ಮತ್ತೆ ಮೀಸಲು ಸೌಲಭ್ಯವನ್ನು ಪಡೆಯುವಂತಾದರೆ, ಮೀಸಲಾತಿಯ ಲಾಭವನ್ನು ಅವರೊಳಗಿನ ಉಚ್ಛವರ್ಗವೊಂದೇ ಕಬಳಿಸಿದಂತಾಗದೇ? ಆಗ ನಿಜವಾಗಿ ಹಿಂದುಳಿದ ಬಡದಲಿತರ ಮಕ್ಕಳ ಗತಿ ಏನು? ಹೀಗಾಗಬಾರದಲ್ಲ.

ಆದುದರಿಂದ ಮೀಸಲಾತಿಯನ್ನು ಒಂದೇ ತಲೆಮಾರಿಗೆ ಸೀಮಿತಗೊಳಿಸಬೇಕು ಹಾಗೂ ಕೆನೆಪದರಿನವರನ್ನು ಮೀಸಲಾತಿಯಿಂದ ಹೊರಗಿಡಬೇಕು. ಇಲ್ಲವಾದರೆ, ತಿಂದವರೇ ತಿನ್ನುವರು, ಬೆಂದವರೇ ಬೇಯುವರು. ಉಂಡವರಿಗೇ ಉಣಿಸುವ ಬದಲು, ಉಣದ ವರಿಗೆ ಉಣಿಸಬೇಕು. ಇಲ್ಲವಾದರೆ ಬಡ ದಲಿತರಿಗೆ ಬಲಿಷ್ಠ ದಲಿತರೇ ಶತ್ರಗಳಾದಾರು. ಹೀಗಾಗಬಾರದೆಂದು, ವೆಂಕಟ ಸ್ವಾಮಿ ಆಯೋಗ ಶಿಫಾರಸ್ಸು ಮಾಡಿದ್ದ ಪ್ರಸ್ತಾವನೆಯನ್ನು, ಮೀಸಲಾತಿಯ ಲಾಭ ಪಡೆದು, ಉನ್ನತ ಅಧಿಕಾರ ಸ್ಥಾನದಲ್ಲಿರುವ ಪಟ್ಟಭದ್ರ ಹಿತಾಸಕ್ತರು ತಮ್ಮ ಸಾರ್ಥಕ್ಕಾಗಿ ತಳ್ಳಿಹಾಕಿದರು ಇದು ತರವಲ್ಲ.

ಅಲ್ಪ ಸಂಖ್ಯಾತರರಿಗೂ ಒಂದು ಕೆಟಗಿರಿಯಡಿ ಲಭ್ಯವಿರುವ ಮೀಸಲಾತಿ ಸೌಲಭ್ಯ ಜಾತಿ-ಮತ ಭೇಧವಿಲ್ಲದೆ ಎಲ್ಲಾ ಅಲ್ಪ ಸಂಖ್ಯಾತರರಿಗೂ ಸಿಗಬೇಕಲ್ಲ. ಅಂದಮೆಲೆ ಅಲ್ಪಸಮಖ್ಯಾತರರಾದ ಬ್ರಾಹ್ಮಣರು-ಜೈನರು-ವೈಶ್ಯರಿಗೆ ಮಾತ್ರ ಏಕೆ ಸಿಗುತ್ತಿಲ್ಲ?
ಮೇಲಾಗಿ, ಒಂದು ಕಾಲದಲ್ಲಿ ಅಲ್ಪ ಸಂಖ್ಯಾತರಾಗಿದ್ದವರು, ಕ್ರಮೇಣ ಬಹುಸಂಖ್ಯಾತರರಾದಾಗಲೂ, ಅವರಿಗೆ ಈ ಮೀಸಲಾತಿ ಸೌಲಭ್ಯ ಮುಂದುವರಿಯಬೇಕೇ? ಉತ್ತರವಿಲ್ಲ. ಅಂತೆಯೇ ಮೀಸಲಾತಿ ನೀತಿಯನ್ನು ಯಾವ ಹಂತದಲ್ಲಿ, ಯಾವ ಕ್ಷೇತ್ರಗಳಲ್ಲಿ
ಅನುಸರಿಸಬೇಕೆಂಬ ವಿಷಯದಲ್ಲೂ ಉತ್ತರ ನಿರಾಶಾದಾಯಕವಾಗಿದೆ.

ಉದಾಹರಣೆಗೆ ಭಡ್ತಿಯಲ್ಲೂ, ಉನ್ನತ ಶಿಕ್ಷಣದಲ್ಲೂ ಮೀಸಲಾತಿಯ ಅವಶ್ಯಕತೆ ಇದೆಯೇ? ೧೯೯೯ರಲ್ಲಿ ಡಾ. ಪ್ರೀತಿ ಶ್ರೀವಾತ್ಸವ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠ ನೀಡಿದ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾದುದರಿಂದ, ಅತ್ಯುನ್ನತ ಕೊರ್ಸ್‌ಗಳ ಹಂತದಲ್ಲಿ ಮೀಸಲಾತಿ ನೀಡಬಾರದು ಎಂಬ ತೀರ್ಪು ನ್ಯಾಯಸಮ್ಮತವಾದುದೇ. ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥರಾಗಿದ್ದ ಕಾಕಾ ಕಾಲೇಕರ್ ಕೂಡಾ ಹೇಳಿದ್ದರು, ಶಿಕ್ಷಣದಲ್ಲಿ ಜಾತಿ, ಲಿಂಗ, ಧಾರ್ಮಿಕ ಲೆಕ್ಕಾಚಾರಗಳು ಅಡ್ಡ ಬರಬಾರದು. ಅದರಲ್ಲೂ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯುವ ಹಕ್ಕನ್ನು ಪ್ರತಿಭೆಯಿಂದಲೇ ಗಳಿಸಿಕೊಳ್ಳಬೇಕೇ ಹೊರತು ಜಾತಿಯ ಭಿಕ್ಷೆಯಿಂದ ಅಲ್ಲ’ ಎಂದು.

ಉನ್ನತ ಶಿಕ್ಷಣದಲ್ಲೂ ಮೀಸಲಾತಿಯನ್ನು ತಂದರೆ, ದಡ್ಡರನ್ನೇ ಮತ್ತೆ ಮತ್ತೆ ಪ್ರೋತ್ಸಾಹಿಸಿದಂತಾಗುತ್ತದೆ ಹಾಗೂ ಜ್ಞಾನದಲ್ಲಿ
ಸಾಮಾನ್ಯವಾದ ಪದವೀಧರರನ್ನು ಹೊರತಂದಂತಾಗುತ್ತದೆ. ಜಾತಿ ಮತ ಬೇಧವಿಲ್ಲದೆ ಪ್ರತಿಭಾವಂತರಿಗೆ ಮಾತ್ರ ಅವಕಾಶಗಳು ಲಭ್ಯವಾಗಬೇಕೆಂಬ ನಿಲುವನ್ನು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳೂ ಸಮರ್ಥಿಸುತ್ತಿರೋದು ಆಶಾದಾಯಕವೇ ಸರಿ.
ಉನ್ನತ ಶಿಕ್ಷಣದಲ್ಲೂ ಮೀಸಲಾತಿಯನ್ನು ವಿರೋಧಿಸಿ, ೧೯೯೦ರ ಮಂಡಲ್ ವರದಿಯ ವಿರುದ್ಧ ದೇಶದಾದ್ಯಂತ ವಿದ್ಯಾರ್ಥಿ ಸಮುಹವು ನಡೆಸಿದ ಪ್ರತಿಭಟನೆ ಮತ್ತು ಆತ್ಮಾಹುತಿ ಪ್ರಕರಣಗಳನ್ನು ಮರೆಯುವಂತಿಲ್ಲ.

ಇನ್ನು ಖಾಸಗೀ ಕ್ಷೇತ್ರಗಳಲ್ಲೂ ಮೀಸಲಾತಿ ಇರಬೇಕೆಂಬ ಕೆಟ್ಟ ಕೂಗುಗಳೂ ಕೇಳಿಬರುತ್ತಿವೆ. ಸರಕಾರಿ ವಲಯವನ್ನಂತೂ ನಾಶ ಮಾಡಿದ್ದಾಯಿತು; ಇನ್ನು ಜಾತಿ ಮತ ಭೇದವಿಲ್ಲದೆ ಪ್ರತಿಭಾಧಾರಿತವಾಗಿ ಬೆಳೆಯುತ್ತಿರುವ ಖಾಸಗೀ ಕ್ಷೇತ್ರಗಳನ್ನು ಹಾಳು ಮಾಡ
ಬೇಕೆಂಬ ಈ ಹುನ್ನಾರ ಖಂಡನೀಯವೇ ಸರಿ! . ಮೀಸಲಾತಿ ಇರಲಿ, ಆದರೆ ಒಂದು ಹಂತದವರೆಗೆ ಮಾತ್ರ ಸೀಮಿತವಾಗಿರಲಿ. ಇತಿಮಿತಿ ಇಲ್ಲದೆ. ಪ್ರತಿ ಹಂತದಲ್ಲೂ ಮೀಸಲಾತಿಯ ಸೌಲಭ್ಯವನ್ನು ನೀಡುತ್ತಾ ಹೋದರೆ, ಆಗುವ ದುಷ್ಪರಿಣಾಮಗಳೆಂದರೆ:
? ಮೀಸಲಾತಿಯಿಂದಾಗಿ, ದೇಶದಿಂದ ಪ್ರತಿಭಾ ಪಲಾಯನವಾಗುತ್ತಿರುವುದಂತೂ ನಿಜ.

ಪಾಶ್ಚಾತ್ಯ ದೇಶದಲ್ಲಿರುವ ಎನ್‌ಆರ್‌ಐಗಳ ಪೈಕಿ ಅಂದಾಜು ಶೇ.೮೦ರಷ್ಟು ಅನಿವಾಸೀ ಭಾರತೀಯರು ಬುದ್ಧಿವಂತ ಮುಂದು ವರಿದ ವರ್ಗಕ್ಕೆ ಸೇರಿದವರು ವಿನಹಃ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ! ಈ ಸತ್ಯವನ್ನು ಮಾರ್ಮಿಕವಾಗಿ, ಅಮೆರಿಕದ ಮಾಜಿ ಅಧ್ಯಕ್ಷ ಬರಕ್ ಒಬಾಮಾ ಹೇಳಿದರು. “Let the reserved people be in India and the deserved be in USA” ಹೀಗಾದಾಗ ಆಗುವ ನಷ್ಟ ದೇಶಕ್ಕಲ್ಲವೇ? ಇದಕ್ಕೆ ಯಾರು ಹೊಣೆ? ? ಹಾಗೆಂದು Army, Cricket, Science ಮುಂತಾದ ಕ್ಷೇತ್ರಗಳಲ್ಲೂ ಮೀಸಲಾತಿಯನ್ನು ತರಲಾದೀತೇ? ಆಗ ನಮಗೆ Best performer  ಬೇಕು! ವಿಪರ್ಯಾಸವೆಂದರೆ ‘People want success, not a successful man’ಎಂಬಂತೆ, ತಮ್ಮ ವೈಯಕ್ತಿಕ ಕೆಲಸಗಳಿಗೆ ಜಾತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಯಾವ ಜಾತಿಯವರೇ ಆಗಲಿ,
ಕೇವಲ ಪ್ರತಿಭಾವಂತರನ್ನಷ್ಟೇ ಆಯ್ಕೆ ಮಾಡುವ ಹಿಂದುಳಿದ ವರ್ಗದವರು, ತಮ್ಮ ಜಾತಿ ಹೇಳೋದರಿಂದ ತಮಗೆ ಲಾಭವಾಗು ವಂತಿದ್ದರೆ ಅವಶ್ಯವಾಗಿ ತಮ್ಮ ಜಾತಿಗಿರುವ ಲಾಭವನ್ನು ಪಡೆದುಕೊಳ್ಳುತ್ತಾರೆ. ಇದು ಸಹಜ ಸ್ವಾಭಾವಿಕವೇ ಆದರೂ, ಒಂದು
ರೀತಿಯ ಅತ್ಮ ವಂಚನೆಯಲ್ಲವೇ!

? ಅಂತೆಯೇ ಬರೇ ಮೀಸಲಾತಿಯಿಂದ ಹಿಂದುಳಿದ ವರ್ಗದವರನ್ನು ಮುಂದಕ್ಕೆ ತರಬಹುದು ಎನ್ನುವುದೂ ಒಂದು ಭ್ರಮೆಯೇ ಸರಿ! ಮುಂದುವರಿಯಬೇಕಾದರೆ, ವೈಯಕ್ತಿಕವಾದ ಪ್ರಾಮಾಣಿಕ ಪ್ರಯತ್ನ-ಪರಿಶ್ರಮಗಳೂ ಬೇಕು. ಒಂದು ರೀತಿಯಿಂದ ನೋಡಿದರೆ, ಮೀಸಲಾತಿಯು ಇವರನ್ನು ಆಲಸಿಗಳನ್ನಾಗಿ ಮಾಡುವುದರಿಂದ ದಡ್ಡರನ್ನು ಇನ್ನಷ್ಟು ದಡ್ಡರನ್ನಾಗಿ ಮತ್ತು ಬುದ್ಧಿವಂತರನ್ನು ಇನ್ನಷ್ಟು ಬುದ್ಧಿವಂತರನ್ನಾಗಿ ಮಾಡುವ ಪ್ರಕ್ರಿಯೆ ಎನ್ನಬಹುದೇನೋ! ನಿಜವಾಗಿ ನೋಡಿದರೆ ಅವರಿಗೆ
ಬೇಕಾದುದು ಬರೇ ಮೀಸಲಾತಿಯಲ್ಲ; ಉಚಿತ ಶಿಕ್ಷಣ, ಮೂಲಭೂತ ಸೌಕರ್ಯಗಳು, ಸೌಲಭ್ಯಗಳು, ಅನುಕೂಲತೆಗಳು, ಸಹಾಯ ಹಸ್ತ, ಸಮಾನತೆ ಮತ್ತು ಮಾನವೀಯತೆ. ಈ ಸತ್ಯವನ್ನೇ ಸಾರುವ ಅರ್ಥಗರ್ಭಿತ ಜಪಾನೀ ಗಾದೆಯೊಂದು ಹೀಗಿದೆ  ‘When a man is hungry, don’t give him fish, instead teach him fishing’ ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗದ ವರಿಗೆ, ಶಾಶ್ವತವಾದ ಪರಿಹಾರಗಳನ್ನೊದಗಿಸುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕೇ ವಿನಹ ತಾತ್ಕಾಲಿಕವಾದವುಗಳನ್ನಲ್ಲ!

ಆರೋಗ್ಯವಂತ ಸಮಾಜಕ್ಕೆ ದುಡಿಯುವ ಕೈಗಳು ಬೇಕೇ ಹೊರತು, ನಿತ್ಯ ಬೇಡುವ ಕೈಗಳಲ್ಲ! ಪರಿಶ್ರಮದಿಂದ ಗಳಿಸಿದ ಪ್ರತಿಭೆಗೆ ತಕ್ಕ ಪ್ರತಿ-ಲ ನೀಡುವ ವ್ಯವಸ್ಥೆ ಇರಬೇಕೇ ಹೊರತು, ಸೋಮಾರಿಗಳಿಗೆ, ಕೆಲಸಕಳ್ಳರಿಗೆ ರಿಯಾಯಿತಿ ನೀಡುವ ವ್ಯವಸ್ಥೆ ಇರಬಾ ರದು. ಈ ಸತ್ಯವನ್ನೇ ಸಾರುವ, ಉತ್ತರಾಖಾಂಡದ ಇತ್ತೀಚೆಗಿನ ಒಂದು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಗಮನಾರ್ಹ. “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ, ಉದ್ಯೋಗ ಮತ್ತು ಭಡ್ತಿಯಲ್ಲಿ ಮೀಸಲಾತಿ ನೀಡೋದು ಮೂಲಭೂತ ಹಕ್ಕಲ್ಲ.

ಹೀಗಾಗಿ ಮೀಸಲಾತಿ ಕಲ್ಪಿಸುವಂತೆ ಸರಕಾರಗಳಿಗೆ ಸೂಚಿಸಲಾಗದು. ಮೇಲಾಗಿ ಸಂವಿಧಾನ ೧೫(೪)ರ ವಿಧಿ, ಮೀಸಲನ್ನು ಕಲ್ಪಿಸುವ ಅವಕಾಶವನ್ನು ನೀಡುತ್ತದೆಯೇ ಹೊರತು, ಮೀಸಲು ಕಲ್ಪಿಸಲೇಬೇಕೆಂಬ ನಿರ್ಭಂದವನ್ನಲ್ಲ!’ ಈ ಎಲ್ಲಾ ಹಿನ್ನೆಲೆಯಲ್ಲಿ, ಮೀಸಲು ಇರಲಿ, ಆದರೆ ಅದರ ರೂಪರೇಷೆ ಬದಲಾಗಲಿ ಎಂಬುದೇ ಆಶಯ.

ಕಾರಣ, ಇದನ್ನು ಹೀಗೆಯೇ ಮುಂದುವರಿಸಿದರೆ ಮತ್ತು ಬೆಳೆಸಿದರೆ, ಒಂದು ಹಂತದಲ್ಲಿ ಇದು ಪ್ರಗತಿ ವಿರೋಧಿ ಕಾರ್ಯಕ್ರಮ ವಾಗಬಹುದು. ಕೆಳಕ್ಕೆ ಬಿದ್ದವರನ್ನು ಮೇಲಕ್ಕೆ ಎತ್ತಬೇಕು ನಿಜ; ಆದರೆ ಮೇಲಿದ್ದವರನ್ನು ಕೆಳಕ್ಕೆ ತಳ್ಳಿ ಅಲ್ಲ! ಮುಂದುವರಿದ
ವರ್ಗದವರನ್ನು ಹೀಗೆ ಕೆಳಕ್ಕೆ ತಳ್ಳುತ್ತಾ ಹೋದರೆ, ಮುಂದೆ ಅವರೇ ಹಿಂದುಳಿದವರ್ಗದವರಾದಾರು ಹಾಗೂ ಅವರಿಗೇ ಮೀಸಲಾತಿಯನ್ನು ತರಬೇಕಾದ ಪ್ರಸಂಗ ಎದುರಾದೀತು! ಹೀಗಾಗಬಾರದಲ್ಲ!

ಹಿಂದುಳಿದವರ ಅವನತಿಗೆ ಮೇಲು ವರ್ಗದವರ ಉನ್ನತಿ ಕಾರಣವಲ್ಲ! ಆದುದರಿಂದ ಮೀಸಲಾತಿಗೂ ಇತಿಮಿತಿಗಳನ್ನು ಹೇರಿ, ಒಂದು ಹಂತದ ಮೇಲೆ, ವ್ಯಕ್ತಿ ಯಾವ ಜಾತಿಗೆ ಸೇರಿದವನೇ ಆಗಿರಲಿ, ಅವರವರ ಯೋಗ್ಯತೆ-ಅರ್ಹತೆ, ಪ್ರತಿಭೆ-ಪಾಂಡಿತ್ಯ, ಶಕ್ತಿ
ಸಾಮರ್ಥ್ಯಗಳಿಗನುಸಾರವಾಗಿ, “If you put the right person for the right job,”  ಅಂದರೆ ಆಯಾಯ ಹುದ್ದೆಗಳಿಗೆ, ಕೆಲಸಗಳಿಗೆ
ಸೂಕ್ತವಾದ ವ್ಯಕ್ತಿಗಳನ್ನೇ ನೇಮಿಸಿದ್ದೇ ಆದಲ್ಲಿ ಈ ದೇಶ ಪ್ರಗತಿಯತ್ತ ಧಾವಿಸೀತು. ಇವೆಲ್ಲವನ್ನೂ ಚರ್ಚಿಸಲು ರಾಜಕಾರಣಿ ಗಳಿಲ್ಲದ ಒಂದು ಸಮಿತಿಯನ್ನು ರಚಿಸಿ, ರಾಷ್ಟ್ರಮಟ್ಟದ ಚಿಂತನ ಮಂಥನವಾಗಬೇಕು.