ಇದೇ ಅಂತರಂಗ ಸುದ್ದಿ
vbhat@me.com
ಇಂದಿಗೂ ಕನ್ನಡ ಪುಸ್ತಕ ಪ್ರಕಟಣೆ ಲೋಕದಲ್ಲಿ ಲಿಟರರಿ ಏಜೆಂಟ್ (ಸಾಹಿತ್ಯ ಸಂಗಾತಿಗಳು ಅಥವಾ ಸಹವರ್ತಿಗಳು) ಮತ್ತು ಲಿಟರರಿ ಎಡಿಟರ್(ಸಾಹಿತ್ಯ ಸಂಪಾದಕರು ) ಎಂಬ ಜವಾಬ್ದಾರಿಗಳೇ ಇಲ್ಲ. ಅಂದರೆ ಇವರುಗಳ ಸಹಾಯವಿಲ್ಲದೇ ಪುಸ್ತಕಗಳ ಪ್ರಕಟಣೆ ನಿರಂತರವಾಗಿ ನಡೆಯುತ್ತಿವೆ.
ಯಾವುದೇ ಒಂದು ಪುಸ್ತಕದ ರಚನೆಗೆ ಲೇಖಕನಾದವನು ತೊಡಗಿದಾಗ, ಲಿಟರರಿ ಏಜೆಂಟ್ ಆದವನು ಆ ಕೃತಿಯನ್ನು ಪ್ರಮೋಟ್ ಮಾಡಲು ಆರಂಭಿಸುತ್ತಾನೆ. ಸಾಹಿತ್ಯ ವಲಯಗಳಲ್ಲಿ, ಗಣ್ಯ ಸಾಹಿತಿಗಳ ಮುಂದೆ ಆ ಕೃತಿಯ ಮಹತ್ವ ಮತ್ತು ಗುಣಕಥನಗಳನ್ನು ಹೇಳಲಾರಂಭಿಸುತ್ತಾನೆ. ಕೃತಿ ಬರುವುದಕ್ಕಿಂತ ಮುಂಚೆಯೇ ಅದರ ಬಗ್ಗೆ ಕುತೂಹಲ ಮೂಡಿಸುತ್ತಾನೆ. ಪತ್ರಿಕೆಗಳ ಪುರವಣಿ ಸಂಪಾದಕರ ಜತೆ, ಪತ್ರಿಕಾ ಸಾಹಿತ್ಯ ವಿಮರ್ಶಕರ ಜತೆ ಆ ಕೃತಿಯ ಬಗ್ಗೆ ಹೇಳಲಾರಂಭಿಸುತ್ತಾನೆ. ಆ ಕೃತಿ ಬಗ್ಗೆ ಇವರೆಲ್ಲ ತಮಗರಿ ವಿಲ್ಲದಂತೆ ಆಸಕ್ತಿ, ನಿರೀಕ್ಷೆಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಾನೆ. ಅಲ್ಲದೆ ಈತ ಲೇಖಕನಿಗೆ ಉತ್ತಮ ಪ್ರಕಾಶಕನನ್ನು ಹುಡುಕಿಕೊಡಲು ಸಹಕರಿಸು ತ್ತಾನೆ.
ಸಂಭಾವನೆ, ಮಾರಾಟದ ಬಗ್ಗೆ ಕಾರ್ಯತಂತ್ರ ರೂಪಿಸುತ್ತಾನೆ. ಒಂದು ಕೃತಿ ಹೆಚ್ಚು ಜನರಿಗೆ ತಲುಪಿಸುವುದು ಹೇಗೆ, ಅದು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಲು ಸಹಾಯ ಮಾಡುವುದು ಹೇಗೆ ಎಂಬ ಬಗ್ಗೆಯೂ ಯೋಜನೆಯನ್ನು ರೂಪಿಸು ತ್ತಾನೆ. ಒಂದು ಕೃತಿ ತಲುಪಬಹುದಾದ ಎಲ್ಲ ಆಯಾಮಗಳಿಗೆ ವಿಸ್ತರಿಸುವುದು ಅವನ ಹೊಣೆಗಾರಿಕೆ. ಆತನ ನೆರವಿಲ್ಲ ದಿದ್ದರೆ ಪುಸ್ತಕ ತಲುಪಬೇಕಾದವರಿಗೆ ತಲುಪುವುದಿಲ್ಲ. ದುರ್ದೈವವೆಂದರೆ, ಕನ್ನಡದಲ್ಲಿ ಇಲ್ಲಿಯವರೆಗೆ ಈ ವೃತ್ತಿಪರ ಸಾಹಿತ್ಯ ಸಂಗಾತಿಗಳೇ ಇಲ್ಲದಿರುವುದು ಮತ್ತು ಇಂಥ ಒಬ್ಬ ವ್ಯಕ್ತಿ ಬೇಕು ಎಂದು ಅನಿಸದಿರುವುದು.
ಉದ್ಯಮ ಅಂದ ಮೇಲೆ ಇಂಥ ವೃತ್ತಿಪರರು ಬೇಕೇ ಬೇಕು. ಅದೇ ರೀತಿ ಲಿಟರರಿ ಎಡಿಟರುಗಳು. ಲೇಖಕನಾದವನು
ಒಂದು ಪುಸ್ತಕವನ್ನು ಬರೆದ ನಂತರ ಅದನ್ನು ಯಾರಾದರೂ ಎಡಿಟ್ ಮಾಡಬೇಕು ತಾನೇ? ಕನ್ನಡದಲ್ಲಿ ಈ ವ್ಯವಸ್ಥೆಯೇ ಇಲ್ಲ.
ಲೇಖಕರ ಬರಹಗಳನ್ನು ಎಡಿಟ್ ಮಾಡದೇ ಮುದ್ರಿಸುವುದು ಅಪರಾಧ. ಲೇಖಕನಾದವನು ತನ್ನ ಬರಹಗಳನ್ನು ಎಡಿಟ್
ಮಾಡಲಾರ. ಅಲ್ಲದೇ ಮಾಡಲೂಬಾರದು. ಪ್ರಕಾಶಕನ ಕೈಗೆ ಹಸ್ತಪ್ರತಿ ಬರುವುದಕ್ಕಿಂತ ಮೊದಲು, ಎಡಿಟ್ ಆಗಬೇಕು,
ಸರಿಯಾಗಿ ಪ್ರೂಫ್ ಮಾಡಬೇಕು.
ಇಂದಿಗೂ ಕನ್ನಡದಲ್ಲಿ ಲೇಖಕ ಬರೆದುಕೊಟ್ಟಿದ್ದನ್ನು ಯಥಾವತ್ತು ಪ್ರಕಟ ಮಾಡುವ ಪ್ರಕಾಶಕರಿದ್ದಾರೆ. ಅಂದರೆ ಲಿಟರರಿ ಎಡಿಟರುಗಳೂ ಇಲ್ಲ, ಪ್ರಕಾಶಕರೂ ಓದಿರುವುದಿಲ್ಲ. ಲೇಖಕ ಬರೆದುಕೊಟ್ಟಿದ್ದೇ ಅಂತಿಮ. ಆನಂತರ ಪುಸ್ತಕದ ರಚನೆ, ಸ್ವರೂಪ, ವಿನ್ಯಾಸ, ಒಳ- ಹೊರ ಅಂದ, ರಕ್ಷಾಪುಟ, ಕಾಗದ ಬಳಕೆ, ಮುಖಪುಟ ಆಕರ್ಷಣೆಗೆ ಸಂಬಂಧಪಪಟ್ಟ ವಿಷಯಗಳ ಬಗ್ಗೆ ಯೋಚಿಸುವವರು ಯಾರು? ಕನ್ನಡದಲ್ಲಿ ಬಹುತೇಕ ಸಂದರ್ಭಗಳಲ್ಲಿ ಲೇಖಕರೇ ಮಾಡುತ್ತಾರೆ.
ಹಾಗೆ ನೋಡಿದರೆ ಅದು ಲೇಖಕನ ಕೆಲಸವಲ್ಲ. ಲೇಖಕನ ಸಹಯೋಗದೊಂದಿಗೆ ಇದನ್ನು ನಿರ್ಧರಿಸಬೇಕಾದವನು ಲಿಟರರಿ
ಎಡಿಟರ್. ಆತನೇ ಪುಸ್ತಕಕ್ಕೆ ಮೂರ್ತ ರೂಪ ಕೊಡುವವನು. ಆದರೆ ಕನ್ನಡ ಪುಸ್ತಕೋದ್ಯಮ ಈ ಎರಡು ಪ್ರಮುಖ ಕಸುಬುದಾರರ ಸಹಕಾರವಿಲ್ಲದೆ ನಡೆಯುತ್ತಿದೆ ಅಂದರೆ ಇನ್ನೂ ವೃತ್ತಿಪರತೆಯಿಂದ ಎಷ್ಟು ದೂರ ಇದ್ದೇವೆ ಎಂಬುದು
ಗೊತ್ತಾಗುತ್ತದೆ.
ಇಷ್ಟೆಲ್ಲ ಮಾಡಬೇಕೆಂದರೆ ಕನ್ನಡ ಪುಸ್ತಕೋದ್ಯಮ ಅಷ್ಟು ದೊಡ್ಡದಿದೆಯಾ ಎಂಬ ಪ್ರಶ್ನೆ ಮೂಡಬಹುದು. ಸೋಜಿಗವೆಂದರೆ, ಯೂರೋಪಿನ ಎಲ್ಲ ಭಾಷೆಗಳಿಗಿಂತ ಹೆಚ್ಚು ಮಾತಾಡುವವರು, ಓದುವವರು ಕನ್ನಡದಲ್ಲಿ ಇದ್ದಾರೆ. ಬರೋಬ್ಬರಿ ಆರೂವರೆ ಕೋಟಿ ಜನಸಂಖ್ಯೆಯಿರುವ ಕನ್ನಡದಲ್ಲಿ ಒಂದು ಸಾವಿರ ಪ್ರತಿಗಳು ಮಾರಾಟವಾಗುತ್ತಿದೆ ಎನ್ನುವುದೇ ಅವಮಾನ.
ಆರೂವರೆ ಕೋಟಿಯಲ್ಲಿ ಕೇವಲ ಒಂದು ಸಾವಿರ ಪ್ರತಿಗಳನ್ನು ಕೊಳ್ಳುವವರಷ್ಟೇ ಪುಸ್ತಕಪ್ರಿಯರಾ? ಉಳಿದವರಿಗೆ ಪುಸ್ತಕ
ಓದುವುದಿಲ್ಲವಾ ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಪುಸ್ತಕೋದ್ಯಮಕ್ಕೆ ಕಾಯಕಲ್ಪ ಕೊಡುವುದು ಸಾಧ್ಯವಿಲ್ಲ.
ಕನ್ನಡದಲ್ಲಿ ಒಂದು ಸಾವಿರ ಪ್ರತಿ ಮಾರಾಟವಾಗುವುದು ಕಷ್ಟದ ಮಾತು ಎಂದು ಪ್ರಕಾಶಕರಾದವರು ಹೇಳಿದರೆ ಅವರು ತಮ್ಮ ಸಾಮರ್ಥ್ಯವನ್ನು ಕೀಳಾಗಿ ಕಂಡಿzರೆ ಮತ್ತು ಕನ್ನಡಿಗರು ಪುಸ್ತಕಪ್ರೇಮಿಗಳಲ್ಲ ಎನ್ನುವ ಮೂಲಕ ಕನ್ನಡಿಗರನ್ನು ಹೀಯಾಳಿಸುತ್ತಿದ್ದಾರೆ ಎಂದು ಭಾವಿಸಬಹುದು. ಅಲ್ಲದೇ ತಮ್ಮ ಲೋಪ-ದೋಷ, ಅಸಾಮರ್ಥ್ಯ ಮತ್ತು ಕೊರತೆಯನ್ನು ಮುಚ್ಚಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ ಎಂಬ ನಿರ್ಧಾರಕ್ಕೆ ಬರಬಹುದು.
ಕಾರ್ಯಕ್ರಮ : ಕಷ್ಟ – ಸುಖ!
ಇತ್ತೀಚಿನ ದಿನಗಳಲ್ಲಿ ನಾನು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಿದ್ದೇನೆ. ಹಾಗಂತ ನಿಲ್ಲಿಸಿಲ್ಲ. ಕೆಲವು
ಕಾರ್ಯಕ್ರಮಗಳಿಗೆ ಹೋಗದಿರಲು ಸಾಧ್ಯವೇ ಇಲ್ಲ. ಇನ್ನು ಕೆಲವು ಕಾರ್ಯಕ್ರಮಗಳಿಗೆ ಹೋಗದಿರುವುದೇ ಮೇಲು. ಯಾವ
ಕಾರ್ಯಕ್ರಮಗಳಿಗೆ ಹೋಗಬೇಕು, ಹೋಗಬಾರದು ಎಂಬುದನ್ನು ನಾವೇ ನಿರ್ಧರಿಸಬೇಕು. ಇದು ಅನುಭವದಿಂದ
ಬರುವಂಥದ್ದು. ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಅರ್ಥವಾಗುವಂಥದ್ದು.
ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಅರ್ಧ ದಿನ ಹೋಯಿತು ಅಂತಾನೆ ಅರ್ಥ. ಪರ ಊರುಗಳಲ್ಲಿನ ಕಾರ್ಯಕ್ರಮ ಗಳಿಗೆ ಒಪ್ಪಿಕೊಂಡರೆ ಒಂದು ಅಥವಾ ಎರಡು ದಿನ ಹೋದಂತೆ. ಭಾಷಣ ಮಾಡುವುದು ಹೆಚ್ಚೆಂದರೆ ಅರ್ಧ ಅಥವಾ ಮುಕ್ಕಾಲು ಗಂಟೆಯಿರಬಹುದು. ಆದರೆ ಇಡೀ ದಿನವೇ ಹೋಗಿಬಿಡುತ್ತದೆ. ಹೀಗಾಗಿ ಬೇರೆ ಊರುಗಳಿಗೆ ಕಾರ್ಯಕ್ರಮಕ್ಕೆ ಕರೆದರೆ ಒಪ್ಪಿಕೊಳ್ಳುವುದು ಕಷ್ಟ.
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಒಪ್ಪಿಕೊಂಡರೂ ಅರ್ಧ ದಿನ ತೆಗೆದಿಡಬೇಕು. ಸಮಯ ಉಳಿಸಲೆಂದು
ನಮ್ಮ ಭಾಷಣ ಮುಗಿಯುತ್ತಿದ್ದಂತೆ ಎದ್ದು ಬರುವುದು ಸಭಾ ಮರ್ಯಾದೆ ಅಲ್ಲ. ಎಲ್ಲರ ಭಾಷಣ ಕೇಳುವುದಕ್ಕಾಗಿ ಕುಳಿತರೆ
ಸಮಯ ಹೋಗುತ್ತದೆ ಮತ್ತು ಒಮ್ಮೊಮ್ಮೆ ತಲೆ ಸಿಡಿದು ಹೋಗುತ್ತದೆ. ಅದರಲ್ಲೂ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ
ಒಪ್ಪಿಕೊಂಡರೆ, ಕಡ್ಡಾಯವಾಗಿ ಎಲ್ಲರ ಭಾಷಣ ಕೇಳದೇ ಬೇರೆ ಉಪಾಯವಿಲ್ಲ. ಹಾಗಂತ ಈ ಕಾರಣಗಳಿಂದ ಕಾರ್ಯಕ್ರಮ ಗಳನ್ನು ತಪ್ಪಿಸಿಕೊಳ್ಳುವಂತಿಲ್ಲ. ಕೆಲವು ಕಾರ್ಯಕ್ರಮಗಳಿಗೆ ಹೋಗಲೇಬೇಕು.
ಒಂದು ಕಾರ್ಯಕ್ರಮಕ್ಕೆ ಸಂಘಟಕರು ನಿಮ್ಮನ್ನು ಆಹ್ವಾನಿಸಿದ್ದಾರೆ ಅಂದರೆ ಅದು ಅವರು ನಿಮಗೆ ಕೊಡುವ ದೊಡ್ಡ ಗೌರವ,
ಕಿಮ್ಮತ್ತು. ನಿಮ್ಮ ಸ್ಥಾನಮಾನ, ಮಾತು, ವಿಚಾರ, ವ್ಯಕ್ತಿತ್ವವನ್ನು ಮನ್ನಿಸಿ ಅವರು ನಿಮ್ಮನ್ನು ಕರೆದಿರುತ್ತಾರೆ. ನಿಮ್ಮ ಬಗ್ಗೆ ಅಪಾರ ಪ್ರೀತಿ, ಅಭಿಮಾನದಿಂದ ಆಹ್ವಾನಿಸಿರುತ್ತಾರೆ. ಸಾವಿರಾರು ಅಥವಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಸಂಘಟಿಸಿದಾಗ ನೀವೂ ಪ್ರಮುಖ ಆಕರ್ಷಣೆಗಳಂದಾಗಿರುತ್ತೀರಿ.
ಅಂಥ ಅವಕಾಶ ತಪ್ಪಿಸಿಕೊಳ್ಳಬಾರದು. ನಿಮ್ಮ ಜತೆ ಮತ್ತೆ ಯಾರನ್ನು ಕರೆದಿದ್ದಾರೆ ಎಂಬುದನ್ನು ಅವಲಂಬಿಸಿ ನಿಮ್ಮ ಸ್ಥಾನಮಾನವೇನು ಎಂಬುದನ್ನು ನಿರ್ಧರಿಸಬಹುದು. ಅದೇನೇ ಇರಲಿ, ನಿಮಗೆ ವೇದಿಕೆ ಮೇಲೆ ಸ್ಥಾನವಿದೆ ಅಂದರೆ, ಅದು ಗೌರವವೇ.
ನನ್ನ ಅನುಭವವೇನೆಂದರೆ, ನೀವು ಪದೇ ಪದೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ, ನಿಮಗೆ ಆಹ್ವಾನ ಜಾಸ್ತಿಯಾಗುತ್ತಾ ಹೋಗುತ್ತದೆ. ಪ್ರತಿದಿನ ಐದಾರು ಮನವಿಗಳು ಬರುತ್ತವೆ. ಎರಡು ತಿಂಗಳು ಯಾವ ಕಾರ್ಯಕ್ರಮದಲ್ಲೂ ಭಾಗವಹಿಸು ದಿದ್ದರೆ, ಈ ಮನವಿ, ವರಾತಗಳು ಕಡಿಮೆಯಾಗುತ್ತವೆ. ಬಹುತೇಕ ಸಂದರ್ಭಗಳಲ್ಲಿ ಮುಖ್ಯ ಅತಿಥಿಯಾಗಿ ಬನ್ನಿ ಅಥವಾ
ಅಧ್ಯಕ್ಷತೆ ವಹಿಸಿ ಎಂದಾಗ ಇಲ್ಲ ಎನ್ನಲು ಆಗುವುದಿಲ್ಲ. ದಾಕ್ಷಿಣ್ಯಕ್ಕೆ ಒಪ್ಪಿಕೊಂಡುಬಿಡುತ್ತೇವೆ.
ಯಾವುದೇ ಕಾರ್ಯಕ್ರಮಕ್ಕೆ ಒಪ್ಪಿಕೊಂಡಾಗ ಸ್ವಲ್ಪವೂ ಸಿದ್ಧತೆ ಇಲ್ಲದೇ ಹೋಗಬಾರದು. ಅದು ನಮಗೂ ಒಳ್ಳೆಯದಲ್ಲ,
ಕಾರ್ಯಕ್ರಮಕ್ಕೂ ನ್ಯಾಯ ಒದಗಿಸಿದಂತಾಗುವುದಿಲ್ಲ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಾಗ ಪುಸ್ತಕ ಓದಿಯೇ ಹೋಗ
ಬೇಕು. ಇದು ಕನಿಷ್ಠ ಸೌಜನ್ಯ. ತಯಾರಿ ಇಲ್ಲದೇ ಹೋದರೆ, ಸಭಿಕರಿಗೆ ಗೊತ್ತಾಗುತ್ತದೆ. ಅವರ ಮುಂದೆ ಬೆತ್ತಲಾಗ
ಬೇಕಾಗುತ್ತದೆ.
ಒಮ್ಮೆ ಕಾರ್ಯಕ್ರಮಕ್ಕೆ ಒಪ್ಪಿಕೊಂಡರೆ, ಯಾವ ಕಾರಣಕ್ಕೂ ಕೈಕೊಡಬಾರದು. ಕೆಲವು ಸಲ ಹತ್ತಾರು ಜನರನ್ನು ಕರೆದಿರುತ್ತಾರೆ. ಆಗ ಒಂದು ವೇಳೆ ನೀವು ಹೋಗದಿದ್ದರೆ, ನಿಮ್ಮ ಅನುಪಸ್ಥಿತಿ ಅಷ್ಟಾಗಿ ಕಾಣದೇ ಹೋಗಬಹುದು. ಅಂಥ ಕಾರ್ಯಕ್ರಮಗಳಿಗೆ ಕೈಕೊಡಬಹುದು. ಆದರೆ ಕರೆದ ಮೂರ್ನಾಲ್ಕು ಮಂದಿಯಲ್ಲಿ ನೀವೂ ಒಬ್ಬರಾಗಿದ್ದರೆ, ಯಾವ ಕಾರಣಕ್ಕೂ ತಪ್ಪಿಸಬಾರದು. ಆದರೆ ಒಮ್ಮೊಮ್ಮೆ ಅನಿವಾರ್ಯ ಕಾರಣಗಳಿಂದ ಹೋಗಲು ಆಗುವುದಿಲ್ಲ. ಆಗ ಸಂಘಟಕರಿಗೆ ಅತೀವ ಬೇಸರವಾಗುವುದು ಸಹಜ. ಇಂಥ ಸಂದರ್ಭದಲ್ಲಿ ಕನಿಷ್ಠ ಸಂದೇಶವನ್ನಾದರೂ ಕಳಿಸಬೇಕು.
ನಾನು ಕಾರ್ಯಕ್ರಮಗಳಿಗೆ ಒಪ್ಪಿಕೊಂಡು ಕೆಲವು ಸಲ ತಪ್ಪಿಸಿದ್ದಿದೆ. ಆಗೆಲ್ಲ ಬಹಳ ನೊಂದುಕೊಂಡಿದ್ದೇನೆ, ಪರಿತಪಿಸಿದ್ದೇನೆ.
ಮ್ಯಾನ್ ಆಫ್ ಲೆಟರ್ಸ್! ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ಬಾಬು ರಾಜೇಂದ್ರ ಪ್ರಸಾದ ಅವರೇ, ನಿಮ್ಮನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನದೊಳಗೆ ಬರುವಾಗ ಗೋಡೆಗೆ ತಗುಲಿ ಹಾಕಿದ್ದ ದೊಡ್ಡದಾದ ಫೋಟೋ ಕೆಳಗೆ President swearing at ceremony ಎಂಬ ಅಡಿಶೀರ್ಷಿಕೆ ಬರೆಯಲಾಗಿದೆ. ಅದು President at Swearing&In Ceremony ಎಂದಾಗಬೇಕಿತ್ತು. ಅಲ್ಲವೇ ? ಇದು ನಿಮ್ಮ ಗಮನಕ್ಕೆ.
ತಮ್ಮ ವಿಶ್ವಾಸಿ …’ ಹೀಗೆಂದು ಪತ್ರ ಬರೆದವರು ಜಹಾಂಗೀರ ರತನಜೀ ದಾದಾಭಾಯಿ ಟಾಟಾ. ಇವರು ‘ಜೆಆರ್ಡಿ’ ಎಂದೇ ಪ್ರಸಿದ್ಧ. ಪತ್ರ ಬರೆಯುವ ಕಲೆ, ಹವ್ಯಾಸ, ಸಂಪ್ರದಾವೇ ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ, ಜೆಆರ್ಡಿ ಬರೆದ ಪತ್ರಗಳ ಸಂಕಲವನ್ನು ಈ ಲಾಕ್ಡೌನ್ ಕಾಲದಲ್ಲಿ ಓದುತ್ತಿದ್ದೆ. ಜೆಆರ್ಡಿ ಬಗ್ಗೆ ಬಹಳ ಅಭಿಮಾನ ಮೂಡಿತು. ಈ ಮಹಾನ್ ವ್ಯಕ್ತಿ ತಮ್ಮ ಜೀವಿತ ಕಾಲದಲ್ಲಿ ಸುಮಾರು ನಲವತ್ತು ಸಾವಿರ ಪತ್ರಗಳನ್ನು ಬರೆದಿದ್ದರಂತೆ.
ಅವೆಲ್ಲವುಗಳನ್ನು ಸಂಗ್ರಹಿಸಿ ಇಡಲಾಗಿದೆ. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳಿಗೂ ಅವರು ಪತ್ರ ಬರೆಯುತ್ತಿದ್ದರು. ತಮಗೆ ಯಾರೇ ಪತ್ರ ಬರೆದರೂ ಅವರು ಉತ್ತರ ಬರೆಯದೇ ಇರುತ್ತಿರಲಿಲ್ಲ. ಆಗ ತಾನೇ ಪದವಿ ಮುಗಿಸಿದ ಯುವಕನೊಬ್ಬ, ‘ಜೆಆರ್ಡಿ ಅವರೇ, ನನಗೆ ಜೀವನದಲ್ಲಿ ಪ್ರೇರಣೆ ಬರುವಂಥ ಸಂಗತಿಗಳನ್ನು ಬರೆಯಿರಿ’ ಎಂದು ಬರೆದಿದ್ದ. ಜೆಆರ್ಡಿ ವಿದೇಶ ಪ್ರವಾಸದಲ್ಲಿದ್ದುದರಿಂದ ಈ ಪತ್ರವನ್ನು ಅವರು ಎರಡು ತಿಂಗಳ ನಂತರ ಓದಿದರು. ಆ ಯುವಕನಿಗೆ ಜೆಆರ್ಡಿ ಎರಡು ಪತ್ರಗಳನ್ನು ಬರೆದರು. ಮೊದಲನೆಯದು, ತಡವಾದುದಕೆ ಕ್ಷಮಾಪಣೆ ಹಾಗೂ ಎರಡನೆಯದು, ಪ್ರೇರಣಾದಾಯಕ ವಿಚಾರ.
ಜೆಆರ್ಡಿ ಅವರಿಗೆ ಮಹಿಳೆಯೊಬ್ಬಳು ಬರೆದಿದ್ದಳು -‘ಸಿಗ್ನಲ್ ಬಳಿ ನಿಮ್ಮನ್ನು ಕಾರಿನಲ್ಲಿ ನೋಡಿದೆ. ನೀವು ಪದೇ ಪದೆ ಕಣ್ಣು
ಮುಚ್ಚುತ್ತಿದ್ದಿರಿ. ನಿಮ್ಮ ನಡೆ ನನಗೆ ವಿಚಿತ್ರವಾಗಿ ಕಂಡಿತು.’ ಅದಕ್ಕೆ ಜೆಆರ್ಡಿ ಬರೆದರು- ‘ನಾನು ಕಂಪನಿಯ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಓಡಾಡುತ್ತೇನೆ. ಎಲ್ಲರಿಗೂ ಇದು ಸಾಧ್ಯವಾಗೊಲ್ಲ. ರಸ್ತೆಗಳಲ್ಲಿ ಓಡಾಡುವ ಪಾದಚಾರಿಗಳನ್ನು ಕಂಡಾಗ ನಾನು ಕಾರಿನಲ್ಲಿ ಓಡಾಡುವುದು ಎಷ್ಟು ಸರಿ ಎಂಬ ಅಪರಾಧಿ ಭಾವ ಕಾಡುತ್ತದೆ. ಭಗವಂತ, ಪಾದಚಾರಿಗಳಿಗೂ ವಾಹನ ಕರುಣಿಸು ಎಂದು ಆಗಾಗ ಕಣ್ಣು ಮುಚ್ಚಿ ಪ್ರಾರ್ಥಿಸುವೆ.
ಇದು ವಿಚಿತ್ರವಾಗಿ ಕಂಡರೆ ನಾನೇನು ಮಾಡಲಿ?’ ಟಾಟಾ ಮೋಟರ್ಸ್ ಕಂಪನಿಯ ಅಧಿಕಾರಿ ಸುಮಂತ್ ಮುಳಗಾವಂಕರ ಅವರಿಗೆ ಜೆಆರ್ಡಿ ಬರೆದ ಪತ್ರ ಓದಿದರೆ, ಅವರ ವ್ಯಕ್ತಿತ್ವದ ಮತ್ತೊಂದು ಮುಖ ತಿಳಿದೀತು -‘ಪ್ರಿಯ ಸುಮಂತ್, ನಿನ್ನೆಯ ಮೀಟಿಂಗಿನಲ್ಲಿ ನಿಮ್ಮ ಮೇಲೆ ನಾನು ಏಕಾಏಕಿ ಕೂಗಾಡಿದ್ದಕ್ಕೆ ಕ್ಷಮೆ ಯಾಚಿಸುವೆ. ನೀವು ನನ್ನನ್ನು ವಿನಾಕಾರಣ
ಟೀಕಿಸುತ್ತಿದ್ದೀರೆಂದು ನಾನು ಭಾವಿಸಿದೆ. ಆನಂತರ ಯೋಚಿಸಿದಾಗ, ನಿಮ್ಮ ಮನದ ಇಂಗಿತ, ಮಾತಿನ ತಾತ್ಪರ್ಯ
ಅರ್ಥವಾಯಿತು. ಇನ್ನೊಮ್ಮೆ ಕ್ಷಮೆ ಯಾಚಿಸುವೆ. ನಿಮ್ಮ ಮೇಲಿನ ಪ್ರೀತಿ, ಅಭಿಮಾನ ಎಂದೆಂದಿಗೂ ಬದಲಾಗುವುದಿಲ್ಲ.’
ಪ್ರತಿದಿನ ಆಫೀಸಿಗೆ ಬರುತ್ತಿರುವಂತೆ, ಆ ದಿನ ಬಂದ ಟಪಾಲು(ಪತ್ರ)ಗಳನ್ನು ಅವರ ಮುಂದೆ ಇಡಬೇಕಾಗುತ್ತಿತ್ತು.
ತಕ್ಷಣ ಉತ್ತರ ಬರೆಯದಿದ್ದರೆ ಅವರಿಗೆ ಸಮಾಧಾನ ಆಗುತ್ತಿರಲಿಲ್ಲ. ಸದಾ ಬಿಜಿಯಿದ್ದರೂ ಪತ್ರ ಬರೆಯಲು ಅವರು ಸಮಯ ಮಾಡಿಕೊಳ್ಳುತ್ತಿದ್ದರು. ‘ನಮಗೆ ಪತ್ರ ಬರೆದವರಿಗೆ ನಾವು ಮಾಡುವ ಅವಮಾನವೆಂದರೆ, ಉತ್ತರ ಬರೆಯದಿರುವುದು’ ಎಂದು ಜೆಆರ್ಡಿ ಬರೆಯುತ್ತಾರೆ. ಯಾರೂ ಸುಮ್ಮನೆ ದೊಡ್ಡವರಾಗುವುದಿಲ್ಲ.
ದೇಶ-ರಿವಾಜು
ನೀವು ಜಪಾನಿಗೆ ಹೋಗುವಾಗ ಒಂದು ಸಂಗತಿ ತಿಳಿದಿರಬೇಕು. ಅದೇನೆಂದರೆ, ನೀವು ಮಾತ್ರೆ ಅಥವಾ ಔಷಧಗಳನ್ನು
ಹಾಗೆ ಒಯ್ಯುವಂತಿಲ್ಲ. ನಿಮಗೆ ಅವುಗಳ ಅಗತ್ಯವಿರಬಹುದು.
ಅದಿಲ್ಲದೇ ಬದುಕು ಅಸಹನೀಯವಾಗಬಹುದು. ನಿತ್ಯವೂ ಅವನ್ನು ಸೇವಿಸಬಹುದು. ಭಾರತದ ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್
ಇರಬಹುದು. ಜಪಾನಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ನೀವು ತಂದ ಮಾತ್ರೆ ಮತ್ತು ಔಷಧಗಳ
ವಿವರಗಳನ್ನು ನೀಡಬೇಕು. ಅದಕ್ಕೆ ಅವರು ಪರವಾನಗಿ ಕೊಡುತ್ತಾರೆ. ಅದನ್ನು ನಿಮ್ಮ ಜತೆಯಲ್ಲಿ ಇಟ್ಟುಕೊಂಡಿರಬೇಕು.
ಇಲ್ಲದಿದ್ದರೆ ನಿಮ್ಮನ್ನು ತಪಾಸಣೆ ಮಾಡಿದಾಗ, ಅನುಮತಿ ಪತ್ರ ಇರದಿದ್ದರೆ ನಿಮಗೆ ದಂಡ ಗ್ಯಾರಂಟಿ.
ಸ್ಪೇನ್ನಲ್ಲಿ ಒಂದು ವಿಚಿತ್ರ ಕಾನೂನಿದೆ. ಅದೇನೆಂದರೆ, ಹೆದ್ದಾರಿಯಲ್ಲಿ ನೂರಕ್ಕಿಂತ ಹೆಚ್ಚು ಕಿಮೀ ವೇಗದಲ್ಲಿ ಕಾರನ್ನು
ಓಡಿಸುವಾಗ, ನೀವು ಕಾರಿನ ಸ್ಟಿಯರಿಂಗ್ ಮೇಲೆ ಎರಡೂ ಕೈಗಳನ್ನು ಗಟ್ಟಿಯಾಗಿ ಇಟ್ಟುಕೊಂಡಿರಬೇಕು ಅಥವಾ ಹಿಡಿದಿರ
ಬೇಕು. ಒಂದೇ ಕೈಯಲ್ಲಿ ಸ್ಟಿಯರಿಂಗ್ ಹಿಡಿದಿದ್ದು ರಸ್ತೆ ಪಕ್ಕದ ಕೆಮೆರಾದಲ್ಲಿ ಸೆರೆಯಾದರೆ, ಪೊಲೀಸು ಮಾಮ ಮುಂದೆ ‘ನಿಮ್ಮ
ಆತಿಥ್ಯ’ಕ್ಕೆ ನಿಂತಿರುತ್ತಾನೆ ! ಕೆಲವರು ಡ್ರೈವ್ ಮಾಡುವಾಗ ಒಂದು ಕೈಯನ್ನು ಕಿಟಕಿ ಮೇಲೆ ಇಟ್ಟಿರುತ್ತಾರೆ ಹಾಗೂ ಇನ್ನೊಂದು
ಕೈಯನ್ನು ಸ್ಟಿಯರಿಂಗ್ ಮೇಲಿಟ್ಟಿರುತ್ತಾರೆ.
ಇದರಿಂದ ವೇಗವಾಗಿ ಚಲಿಸುವ ಕಾರಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವುದು ಕಷ್ಟ. ಈ ಕಾರಣದಿಂದ ಈ ಕಾನೂನು. ಗ್ರೀಸಿನ ಅಕ್ರೋಪ್ಲಿಸ್ ಮ್ಯೂಸಿಯಮ್ಮಿಗೆ ನಿಮ್ಮ ಸ್ನೇಹಿತೆಯೋ ಅಥವಾ ಪತ್ನಿಯ ಜತೆಗೆ ಹೋಗುವಾಗ ಅವಳು ಹೈ ಹೀಲ್ಡ್ ಚಪ್ಪಲಿ ಧರಿಸಿದ್ದರೆ, ದಂಡ ತೆರಳು ಸಿದ್ಧರಾಗಿರಿ. ಹೈ ಹೀಲ್ಡ್ ಅಥವಾ ಪಾಯಿಂಟೆಡ್ ಚಪ್ಪಲಿ, ಷೂ ಧರಿಸುವುದರಿಂದ ಅಲ್ಲಿನ ಐತಿಹಾಸಿಕ ತಾಣದಲ್ಲಿರುವ ಸ್ಮಾರಕಗಳಿಗೆ, ನೆಲದ ಮೇಲಿರುವ ಶಾಸನಗಳಿಗೆ ಧಕ್ಕೆ ಆಗಬಹುದೆಂಬ ಕಾರಣಕ್ಕಾಗಿ ಈ ಎಚ್ಚರವಹಿಸಲಾಗಿದೆ.
ಕೆಲವು ತಾಣಗಳಲ್ಲಿ ವಯಸ್ಸಾದವರು ಊರುಗೋಲನ್ನು ಹಿಡಿದು ಹೋಗುವುದನ್ನು ಸಹ ನಿಷೇಧಿಸಲಾಗಿದೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನುಗಳಿರುತ್ತವೆ. ಅದು ನಮಗೆ ವಿಚಿತ್ರವೆನಿಸಬಹುದು, ಆದರೆ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಜಾರಿಗೆ ತಂದಿರುತ್ತಾರೆ. ಈ ಸಂಗತಿಯನ್ನು ಅರಿಯದೇ ಹೋದರೆ, ನಾವು ವೃಥಾ ಮುಜುಗರ
ಅನುಭವಿಸಬೇಕಾಗುತ್ತದೆ ಇಲ್ಲವೇ ತೊಂದರೆಗೆ ಸಿಲುಕಬೇಕಾಗುತ್ತದೆ. ಈ ಕಾರಣದಿಂದ ಮೊದಲೇ ಇವನ್ನು
ತಿಳಿದಿರುವುದು ಒಳ್ಳೆಯದು.
ಅಂದ ಹಾಗೆ ಮುಂದಿನ ಸಲ ಜರ್ಮನಿಗೆ ಹೋದಾಗ, ಅಲ್ಲಿನ ಸರ್ವಾಧಿಕಾರಿ ಹಿಟ್ಲರ್ ಥರ ಸೆಲ್ಯೂಟ್ ಹೊಡೆಯಬೇಡಿ. ಜನ
ನಿಮ್ಮನ್ನು ಕ್ಯಾಕರಿಸಿ ನೋಡಿಯಾರು. ಅದನ್ನು ಪೊಲೀಸ್ ನೋಡಿದರೆ ದಂಡ ಹಾಕಿಯಾನು ! ರಾಹುಲ್ ದ್ರಾವಿಡ್ ಮತ್ತು ಸೋಲು ! ರೀಡರ್ಸ್ ಡೈಜೆಸ್ಟ್ ಪತ್ರಿಕೆ ಆರು ಗಣ್ಯ ಸಾಧಕರಿಗೆ ಒಂದು ಪ್ರಶ್ನೆಯನ್ನು ಕೇಳಿತ್ತು – ‘ಮೊದಲ ಪ್ರಯತ್ನದಲ್ಲಿ ನೀವು
ಯಶಸ್ಸನ್ನು ಗಳಿಸಲಿಲ್ಲ. ಆಗ ನಿಮಗೆ ಏನನಿಸಿತು?’ ಆ ಆರು ಮಂದಿ ಪೈಕಿ ನಮ್ಮವರೇ ಆದ ಕ್ರಿಕೆಟರ್ ರಾಹುಲ್ ದ್ರಾವಿಡ್
ಅವರಿಗೂ ಈ ಪ್ರಶ್ನೆ ಕೇಳಲಾಗಿತ್ತು.
ಈ ಪ್ರಶ್ನೆಗೆ ದ್ರಾವಿಡ್ ಹೇಳಿದ್ದು – ‘ನಾನು ಯಶಸ್ಸು ಕಂಡಿದ್ದಕ್ಕಿಂತ ಸೋತಿದ್ದೇ ಜಾಸ್ತಿ. ನಾನು ವಿಜಯಶಾಲಿಗಿಂತ
ಹೆಚ್ಚು ಪರಾಭವಶಾಲಿ. ಹೀಗಾಗಿ ನಾನು ಯಶಸ್ಸಿಗಿಂತ ಸೋಲಿನ ಬಗ್ಗೆ ಮಾತಾಡಲು ಹೆಚ್ಚು ಅರ್ಹ ವ್ಯಕ್ತಿ. ನಾನು ಸೋಲನ್ನು
ಚೆನ್ನಾಗಿ ಅರ್ಥ ಮಾಡಿಕೊಂಡು, ಅದರ ಮರ್ಮವನ್ನು ಅರಿಯಲು ಪ್ರಯತ್ನಿಸಿದ್ದರಿಂದ ನನಗೆ ಯಶಸ್ಸು ಒಲಿಯುತ್ತಾ
ಬಂದಿತು. ಸೋಲು ಎದುರು ನಿಂತಾಗ ಅದನ್ನು ಒಲಿಸಿಕೊಂಡು, ಅದರ ಜತೆ ಹೆಜ್ಜೆ ಹಾಕುತ್ತಾ ಕ್ರಮೇಣ ಅದರಿಂದ ದೂರ ಹೋಗುವುದು ಹೇಗೆ ಎಂಬುದನ್ನು ತಿಳಿಯಬೇಕು.
ಒಂದೇ ಸೋಲಿಗೆ ಧೃತಿಗೆಟ್ಟು ಹತಾಶರಾಗುವುದಲ್ಲ. ಅಂಥವರು ಒಮ್ಮೆ ಯಶಸ್ವಿಯಾದರೂ ನಂತರ ಸೋಲುತ್ತಾರೆ. ಗೆಲುವು ಕಲಿಸುವುದಕ್ಕಿಂತ ಸೋಲು ಕಲಿಸುವ ಪಾಠವೇ ಪರಿಣಾಮಕಾರಿಯಾಗಿರುತ್ತದೆ.’