Friday, 22nd November 2024

ಕನ್ನಡದಲ್ಲಿ ಲಿಟರರಿ ಏಜೆಂಟ್, ಲಿಟರರಿ ಎಡಿಟರ್‌ ಹುದ್ದೆ ಖಾಲಿ ಇದೆ !

ಇದೇ ಅಂತರಂಗ ಸುದ್ದಿ

vbhat@me.com

ಇಂದಿಗೂ ಕನ್ನಡ ಪುಸ್ತಕ ಪ್ರಕಟಣೆ ಲೋಕದಲ್ಲಿ ಲಿಟರರಿ ಏಜೆಂಟ್ (ಸಾಹಿತ್ಯ ಸಂಗಾತಿಗಳು ಅಥವಾ ಸಹವರ್ತಿಗಳು) ಮತ್ತು ಲಿಟರರಿ ಎಡಿಟರ್(ಸಾಹಿತ್ಯ ಸಂಪಾದಕರು ) ಎಂಬ ಜವಾಬ್ದಾರಿಗಳೇ ಇಲ್ಲ. ಅಂದರೆ ಇವರುಗಳ ಸಹಾಯವಿಲ್ಲದೇ ಪುಸ್ತಕಗಳ ಪ್ರಕಟಣೆ ನಿರಂತರವಾಗಿ ನಡೆಯುತ್ತಿವೆ. ಯಾವುದೇ ಒಂದು ಪುಸ್ತಕದ ರಚನೆಗೆ ಲೇಖಕನಾದವನು ತೊಡಗಿದಾಗ, ಲಿಟರರಿ ಏಜೆಂಟ್ ಆದವನು ಆ ಕೃತಿಯನ್ನು ಪ್ರಮೋಟ್ ಮಾಡಲು ಆರಂಭಿಸುತ್ತಾನೆ.

ಸಾಹಿತ್ಯ ವಲಯಗಳಲ್ಲಿ, ಗಣ್ಯ ಸಾಹಿತಿಗಳ ಮುಂದೆ ಆ ಕೃತಿಯ ಮಹತ್ವ ಮತ್ತು ಗುಣಕಥನಗಳನ್ನು ಹೇಳಲಾರಂಭಿಸುತ್ತಾನೆ. ಕೃತಿ ಬರುವುದಕ್ಕಿಂತ ಮುಂಚೆಯೇ ಅದರ ಬಗ್ಗೆ ಕುತೂಹಲ ಮೂಡಿಸುತ್ತಾನೆ. ಪತ್ರಿಕೆಗಳ ಪುರವಣಿ ಸಂಪಾದಕರ ಜತೆ, ಪತ್ರಿಕಾ ಸಾಹಿತ್ಯ ವಿಮರ್ಶಕರ ಜತೆ ಆ ಕೃತಿಯ ಬಗ್ಗೆ ಹೇಳಲಾರಂಭಿಸು ತ್ತಾನೆ. ಆ ಕೃತಿ ಬಗ್ಗೆ ಇವರೆಲ್ಲ ತಮಗರಿವಿಲ್ಲದಂತೆ ಆಸಕ್ತಿ, ನಿರೀಕ್ಷೆಗಳನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಾನೆ. ಅಲ್ಲದೆ ಈತ ಲೇಖಕನಿಗೆ ಉತ್ತಮ ಪ್ರಕಾಶಕನನ್ನು ಹುಡುಕಿಕೊಡಲು ಸಹಕರಿಸುತ್ತಾನೆ. ಸಂಭಾವನೆ, ಮಾರಾಟದ ಬಗ್ಗೆ ಕಾರ್ಯತಂತ್ರ ರೂಪಿಸುತ್ತಾನೆ.

ಒಂದು ಕೃತಿ ಹೆಚ್ಚು ಜನರಿಗೆ ತಲುಪಿಸುವುದು ಹೇಗೆ, ಅದು ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಲು ಸಹಾಯ ಮಾಡುವುದು ಹೇಗೆ ಎಂಬ ಬಗ್ಗೆಯೂ ಯೋಜನೆಯನ್ನು ರೂಪಿಸುತ್ತಾನೆ. ಒಂದು ಕೃತಿ ತಲುಪಬಹುದಾದ ಎಲ್ಲ ಆಯಾಮಗಳಿಗೆ ವಿಸ್ತರಿಸುವುದು ಅವನ ಹೊಣೆಗಾರಿಕೆ. ಆತನ ನೆರವಿಲ್ಲದಿದ್ದರೆ ಪುಸ್ತಕ ತಲುಪಬೇಕಾದವರಿಗೆ ತಲುಪುವುದಿಲ್ಲ. ದುರ್ದೈವವೆಂದರೆ, ಕನ್ನಡದಲ್ಲಿ ಇಲ್ಲಿಯವರೆಗೆ ಈ ವೃತ್ತಿಪರ ಸಾಹಿತ್ಯ ಸಂಗಾತಿಗಳೇ ಇಲ್ಲದಿರುವುದು ಮತ್ತು ಇಂಥ ಒಬ್ಬ ವ್ಯಕ್ತಿ ಬೇಕು ಎಂದು ಅನಿಸದಿರುವುದು. ಉದ್ಯಮ ಅಂದ ಮೇಲೆ ಇಂಥ ವೃತ್ತಿಪರರು ಬೇಕೇ ಬೇಕು.

ಅದೇ ರೀತಿ ಲಿಟರರಿ ಎಡಿಟರುಗಳು. ಲೇಖಕನಾದವನು ಒಂದು ಪುಸ್ತಕವನ್ನು ಬರೆದ ನಂತರ ಅದನ್ನು ಯಾರಾದರೂ ಎಡಿಟ್ ಮಾಡಬೇಕು ತಾನೇ? ಕನ್ನಡದಲ್ಲಿ ಈ ವ್ಯವಸ್ಥೆಯೇ ಇಲ್ಲ. ಲೇಖಕರ ಬರಹಗಳನ್ನು ಎಡಿಟ್ ಮಾಡದೇ ಮುದ್ರಿಸುವುದು ಅಪರಾಧ. ಲೇಖಕನಾದವನು ತನ್ನ ಬರಹಗಳನ್ನು ಎಡಿಟ್ ಮಾಡಲಾರ.
ಅಲ್ಲದೇ ಮಾಡಲೂಬಾರದು. ಪ್ರಕಾಶಕನ ಕೈಗೆ ಹಸ್ತಪ್ರತಿ ಬರುವುದಕ್ಕಿಂತ ಮೊದಲು, ಎಡಿಟ್ ಆಗಬೇಕು, ಸರಿಯಾಗಿ ಪ್ರೂಫ್ ಮಾಡಬೇಕು. ಇಂದಿಗೂ ಕನ್ನಡದಲ್ಲಿ ಲೇಖಕ ಬರೆದುಕೊಟ್ಟಿದ್ದನ್ನು ಯಥಾವತ್ತು ಪ್ರಕಟ ಮಾಡುವ ಪ್ರಕಾಶಕರಿದ್ದಾರೆ. ಅಂದರೆ ಲಿಟರರಿ ಎಡಿಟರುಗಳೂ ಇಲ್ಲ, ಪ್ರಕಾಶಕರೂ ಓದಿರುವುದಿಲ್ಲ. ಲೇಖಕ ಬರೆದುಕೊಟ್ಟಿದ್ದೇ ಅಂತಿಮ.

ಆನಂತರ ಪುಸ್ತಕದ ರಚನೆ, ಸ್ವರೂಪ, ವಿನ್ಯಾಸ, ಒಳ- ಹೊರ ಅಂದ, ರಕ್ಷಾಪುಟ, ಕಾಗದ ಬಳಕೆ, ಮುಖಪುಟ ಆಕರ್ಷಣೆಗೆ ಸಂಬಂಧಪಪಟ್ಟ ವಿಷಯಗಳ ಬಗ್ಗೆ ಯೋಚಿಸುವವರು ಯಾರು? ಕನ್ನಡದಲ್ಲಿ ಬಹುತೇಕ ಸಂದರ್ಭಗಳಲ್ಲಿ ಲೇಖಕರೇ ಮಾಡುತ್ತಾರೆ. ಹಾಗೆ ನೋಡಿದರೆ ಅದು ಲೇಖಕನ ಕೆಲಸವಲ್ಲ. ಲೇಖಕನ ಸಹಯೋಗದೊಂದಿಗೆ ಇದನ್ನು ನಿರ್ಧರಿಸಬೇಕಾದವನು ಲಿಟರರಿ ಎಡಿಟರ್. ಆತನೇ ಪುಸ್ತಕಕ್ಕೆ ಮೂರ್ತ ರೂಪ ಕೊಡುವವನು. ಆದರೆ ಕನ್ನಡ ಪುಸ್ತಕೋದ್ಯಮ ಈ ಎರಡು ಪ್ರಮುಖ ಕಸುಬುದಾರರ ಸಹಕಾರವಿಲ್ಲದೆ ನಡೆಯುತ್ತಿದೆ ಅಂದರೆ ಇನ್ನೂ ವೃತ್ತಿಪರತೆಯಿಂದ ಎಷ್ಟು ದೂರ ಇದ್ದೇವೆ ಎಂಬುದು ಗೊತ್ತಾಗುತ್ತದೆ. ಇಷ್ಟೆಲ್ಲ ಮಾಡಬೇಕೆಂದರೆ ಕನ್ನಡ ಪುಸ್ತಕೋದ್ಯಮ ಅಷ್ಟು ದೊಡ್ಡದಿದೆಯಾ ಎಂಬ ಪ್ರಶ್ನೆ ಮೂಡಬಹುದು.

ಸೋಜಿಗವೆಂದರೆ, ಯೂರೋಪಿನ ಎಲ್ಲ ಭಾಷೆಗಳಿಗಿಂತ ಹೆಚ್ಚು ಮಾತಾಡುವವರು, ಓದುವವರು ಕನ್ನಡದಲ್ಲಿ ಇದ್ದಾರೆ. ಬರೋಬ್ಬರಿ ಆರೂವರೆ ಕೋಟಿ ಜನಸಂಖ್ಯೆಯಿರುವ ಕನ್ನಡದಲ್ಲಿ ಒಂದು ಸಾವಿರ ಪ್ರತಿಗಳು ಮಾರಾಟವಾಗುತ್ತಿದೆ ಎನ್ನುವುದೇ ಅವಮಾನ. ಆರೂವರೆ ಕೋಟಿಯಲ್ಲಿ ಕೇವಲ ಒಂದು ಸಾವಿರ
ಪ್ರತಿಗಳನ್ನು ಕೊಳ್ಳುವವರಷ್ಟೇ ಪುಸ್ತಕಪ್ರಿಯರಾ? ಉಳಿದವರಿಗೆ ಪುಸ್ತಕ ಓದುವುದಿಲ್ಲವಾ ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಪುಸ್ತಕೋದ್ಯಮಕ್ಕೆ ಕಾಯಕಲ್ಪ ಕೊಡುವುದು ಸಾಧ್ಯವಿಲ್ಲ. ಕನ್ನಡದಲ್ಲಿ ಒಂದು ಸಾವಿರ ಪ್ರತಿ ಮಾರಾಟವಾಗುವುದು ಕಷ್ಟದ ಮಾತು ಎಂದು ಪ್ರಕಾಶಕರಾದವರು ಹೇಳಿದರೆ ಅವರು ತಮ್ಮ ಸಾಮರ್ಥ್ಯವನ್ನು ಕೀಳಾಗಿ ಕಂಡಿದ್ದಾರೆ ಮತ್ತು ಕನ್ನಡಿಗರು ಪುಸ್ತಕಪ್ರೇಮಿಗಳಲ್ಲ ಎನ್ನುವ ಮೂಲಕ ಕನ್ನಡಿಗರನ್ನು ಹೀಯಾಳಿಸುತ್ತಿದ್ದಾರೆ ಎಂದು ಭಾವಿಸಬಹುದು. ಅಲ್ಲದೇ ತಮ್ಮ ಲೋಪ-ದೋಷ, ಅಸಾಮರ್ಥ್ಯ ಮತ್ತು ಕೊರತೆಯನ್ನು ಮುಚ್ಚಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ ಎಂಬ ನಿರ್ಧಾರಕ್ಕೆ ಬರಬಹುದು.

ಮರೆತುಹೋದ ಸಂಪಾದಕ
ಡಾ.ಹನ್ನನ್ ಎಝೆಕಿಲ್ ಎಂಬ ವ್ಯಕ್ತಿಯ ಹೆಸರನ್ನು ಕೇಳಿದ್ದೀರಾ ಎಂದು ಇಂದಿನ ಪತ್ರಕರ್ತರಿಗೆ ಕೇಳಿದರೆ, ಗೊತ್ತು ಎಂದು ಹೇಳುವವರು ಎಷ್ಟು ಜನ ಸಿಗಬಹುದೋ ಗೊತ್ತಿಲ್ಲ. ಡಾ.ಎಝೆಕಿಲ್ ಅವರು ಕೆಲಸ ಮಾಡಿದ್ದ ಪತ್ರಿಕೆಯಲ್ಲಿ ಈಗ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರೊಬ್ಬರನ್ನು ಕೇಳಿದಾಗ, ತಾವು ಆ ಹೆಸರನ್ನು ಕೇಳಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು. ‘ಡಾ. ಎಝೆಕಿಲ್ ಅವರು ನಿಮ್ಮ ಪತ್ರಿಕೆಯ ಸಂಪಾದಕರಾಗಿದ್ದರು ಗೊತ್ತಾ?’ ಎಂದು ಹೇಳಿದಾಗ, ಅವರಿಗೆ ತುಸು ಸಂಕೋಚವಾಯಿತು. ‘ನಾನು ಕೆಲಸ ಮಾಡುತ್ತಿರುವ ಪತ್ರಿಕೆಯ ಸಂಪಾದಕರಾಗಿದ್ದವರ ಹೆಸರು ನನಗೆ ಗೊತ್ತಿಲ್ಲವಲ್ಲ… ಕ್ಷಮಿಸಿ…’ ಎಂದು ವಿನೀತರಾಗಿ ಹೇಳಿದರು.

ಎಲ್ಲ ಪತ್ರಕರ್ತರ ಹೆಸರು ನಮಗೆ ಗೊತ್ತಿರಬೇಕು ಎಂದೇನೂ ಇಲ್ಲ. ಆದರೆ ನಾವು ಯಾವ ಪತ್ರಿಕೆಯಲ್ಲಿದ್ದೇವೋ, ಆ ಪತ್ರಿಕೆಗೆ ಆಗಿ ಹೋದ ಸಂಪಾದಕ ರೆಲ್ಲರ ಕನಿಷ್ಠ ಹೆಸರುಗಳಾದರೂ ಗೊತ್ತಿರಬೇಕು. ಡಾ. ಹನ್ನನ್ ಎಝೆಕಿಲ್ ಅವರು ‘ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಬದುಕಿದ್ದಿದ್ದರೆ ಅವರಿಗೆ ತೊಂಬತ್ತೇಳು ವರ್ಷ ವಯಸ್ಸಾಗಿರುತ್ತಿತ್ತು. ಆದರೆ ಅವರು ತಮ್ಮ ೮೬ ನೇ ವಯಸ್ಸಿ (೨೦೧೩ ರಲ್ಲಿ) ನಲ್ಲಿ ನಿಧನರಾದರು. ಇಸ್ರೇಲಿ ಮೂಲದವರಾದ ಅವರು, ಡಾಕ್ಟರ್ ಆಗಬೇಕೆಂದು ಬಯಸಿದ್ದರು. ಆದರೆ ಬಹಳ ಇಷ್ಟಪಟ್ಟು ಪತ್ರಿಕಾ ವೃತ್ತಿಗೆ ಬಂದವರು. ಉತ್ತಮ ವಾಗ್ಮಿ ಯಾಗಿದ್ದ ಡಾ.ಎಝೆಕಿಲ, ಹಣಕಾಸು, ಬ್ಯಾಂಕಿಂಗ್ ವಿಷಯಗಳ ಬಗ್ಗೆ ಅಧಿಕಾರವಾಣಿಯಿಂದ ಮಾತಾಡುತ್ತಿದ್ದರು.

೧೯೬೧ರಲ್ಲಿ ‘ಎಕನಾಮಿಕ್ ಟೈಮ್ಸ್’ ಪತ್ರಿಕೆಯನ್ನು ಆರಂಭಿಸಿದಾಗ, ಅವರು ಸಹಾಯಕ ಸಂಪಾದಕರಾಗಿ ಆ ಪತ್ರಿಕೆಯನ್ನು ಸೇರಿದರು. ನಂತರ ಅವರು ಆ ಪತ್ರಿಕೆಯ ಸಂಪಾದಕರಾಗುವ ತನಕ ಬೆಳೆದಿದ್ದು ಗಮನಾರ್ಹ. ಒಂದು ಕಾಲಕ್ಕೆ ಟ್ರೇಡ್ ಯೂನಿಯನ್ ನಾಯಕರಾಗುವುದು ಪ್ರತಿಷ್ಠೆಯಾಗಿತ್ತು. ಅದು ಪ್ರಭಾವಿ ಹುzಯೂ ಆಗಿತ್ತು. ಡಾ. ಎಝೆಕಿಲ್ ಅವರು ಒಂದು ದಶಕ ಕಾಲ ಟ್ರೇಡ್ ಯೂನಿಯನ್ ನಲ್ಲಿ ಸಕ್ರಿಯರಾಗಿದ್ದರು. ತಾವು ಯಹೂದಿಯಾದರೂ, ಹೆಮ್ಮೆಯ ಮುಂಬೈಕರ್ ಎಂದು ಹೇಳಿಕೊಳ್ಳುತ್ತಿದ್ದರು. ಆ ದಿನಗಳಲ್ಲಿ ಎಕನಾಮಿಕ್ ಟೈಮ್ಸನಲ್ಲಿ ಕೆಲಸ ಮಾಡಲು ಬಿಜಿನೆಸ್ ಅಥವಾ ಎಕನಾಮಿಕ್ಸ್ ಹಿನ್ನೆಲೆ ಬೇಕಿರಲಿಲ್ಲ. ಆದರೆ ಯಾವ ವಿಷಯದ ಹಿನ್ನೆಲೆಯಿಂದ ಬಂದರೂ, ಅವರಿಗೆ ಡಾ.ಎಝೆಕಿಲ್ ಒಳ್ಳೆಯ ತರಬೇತಿ ಕೊಟ್ಟು ಪಳಗಿಸುತ್ತಿದ್ದರು.

ಅವರೊಂದಿಗೆ ಕೆಲಸ ಮಾಡಿದ ಅನೇಕರು ಮುಂದಿನ ಅರ್ಧ ಶತಮಾನ ಮುಂಬೈ ಪತ್ರಿಕೋದ್ಯಮದಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದು ಬೇರೆ ಮಾತು.
ಆ ದಿನಗಳಲ್ಲಿ ಬಿಜಿನೆಸ್ ಪತ್ರಿಕೋದ್ಯಮ ಅಷ್ಟೊಂದು ಹುಲುಸಾಗಿ ಬೆಳೆದಿರಲಿಲ್ಲ. ಎಕನಾಮಿಕ್ಸ್ ಟೈಮ್ಸ್ ಸಂಪಾದಕರಾದವರು ಸಾಯಂಕಾಲ ಆರು ಗಂಟೆಗೆ ಮನೆಗೆ ಮರಳುವ ಕಾಲವದು. ಅಂಥ ಕಾಲದಲ್ಲಿ ಡಾ.ಎಝೆಕಿಲ್ ‘ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆಯನ್ನು ಕರ್ಮಯೋಗಿಯಂತೆ ಕಟ್ಟಿದರು.

ಪಾಪು ಹೇಳಿದ ಪ್ರಮಾದಗಳು
ಪಾಟೀಲ ಪುಟ್ಟಪ್ಪನವರು ಹೆಡ್‌ಲೈನ್‌ಗಳಲ್ಲಿ ಪದಗಳನ್ನು ಬೇಕಾಬಿಟ್ಟಿ ಕತ್ತರಿಸುವುದರಿಂದ ಆಗುವ ಆವಾಂತರಗಳ ಬಗ್ಗೆ ರಸವತ್ತಾಗಿ ಬಣ್ಣಿಸುತ್ತಿದ್ದರು. ವಿಜಯಲಕ್ಷ್ಮಿಬಾಯಿ ತೇರದಾಳ ಎಂಬುವವರು ನಿಧನರಾದಾಗ, ವಿಜಯಲಕ್ಷ್ಮಿ/ ಬಾಯಿ ತೆರದಾಳ/ ನಿಧನ ಎಂದು ಪ್ರಕಟವಾಗಿತ್ತು. ಉತ್ತರ ಕರ್ನಾಟಕದ ಭಾಗಗಳಲ್ಲಿ ‘ಬಾಯಿ ತೆರದಾಳ’ಅಂದರೆ ನಿಧನಳಾದಳು ಎಂದೇ ಅರ್ಥ. ಹೀಗಾಗಿ ಹೆಸರನ್ನು ಬೇಕಾಬಿಟ್ಟಿ ಕತ್ತರಿಸಿದ್ದರಿಂದ ಅರ್ಥವ್ಯತ್ಯಾಸವಾಗಿ ಎಡವಟ್ಟಾಗಿತ್ತು. ಪಂಡಿತ ಜವಾಹರಲಾಲ್ ನೆಹರು ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಅಮೆರಿಕದ ರಾಯಭಾರಿಯಾಗಿ ನೇಮಕವಾದರು.

ಆರು ತಿಂಗಳಲ್ಲಿ ಅವರು ಅಮೆರಿಕವನ್ನು ಸುತ್ತಿ ಬಂದರು. ಅದನ್ನೇ ಕನ್ನಡದ ಪತ್ರಿಕೆಯೊಂದು ದೊಡ್ಡ ಸುದ್ದಿ ಮಾಡಿತು. ‘ಅಮೆರಿಕೆಯಲ್ಲಿ/ ವಿಜಯ ಲಕ್ಷ್ಮಿಯವರ/ ಸಂಚಾರ’ ಎಂಬ ಶೀರ್ಷಿಕೆ ‘ಅಮೆರಿಕೆಯಲ್ಲಿ/ ವಿಜಯಲಕ್ಷ್ಮಿಯ/ ವರ ಸಂಚಾರ’ ಎಂದು ಪ್ರಕಟವಾಗಿಬಿಟ್ಟಿತು. ‘ವಿಜಯಲಕ್ಷ್ಮಿಯವರ’ ಎಂಬ ಪದ ಮೊದಲ ಸಾಲಿನಲ್ಲಿ ಫಿಟ್ ಆಗದೇ ಇದ್ದುದು ಈ ಪ್ರಮಾದಕ್ಕೆ ಕಾರಣವಾಗಿತ್ತು.

ಇನ್ನೊಂದು ಪ್ರಸಂಗ. ಒಮ್ಮೆ ಕೇಂದ್ರದ ಕೃಷಿ ಮತ್ತು ಆಹಾರ ಸಚಿವ ಕನ್ಹಯ್ಯಾಲಾಲ್ ಮುನಸಿಯವರು ತಮ್ಮ ಪತ್ನಿಯೊಂದಿಗೆ ಸೂರತ್ ನಗರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸುದ್ದಿ ಕನ್ನಡ ಪತ್ರಿಕೆಗಳಿಗೆ ಪಿಟಿಐ ಮತ್ತು ಯುಎನೈ ಸಂಸ್ಥೆಗಳ ಮೂಲಕ ಬಂದಿತು. ಅದನ್ನು ಕನ್ನಡಕ್ಕೆ ಅನುವಾದಿಸಿ ಸುದ್ದಿಯಾಗಿ ತೆಗೆದುಕೊಳ್ಳಲಾಯಿತು. ಕನ್ನಡದ ಒಂದು ಪ್ರಮುಖ ಪತ್ರಿಕೆಯಲ್ಲಿ ಈ ಸುದ್ದಿ, ‘ಮುನಸಿ ದಂಪತಿಗಳ ಸುರತ ಸಮಾರಂಭ’ ಎಂದು ಪ್ರಕಟವಾಗಿತ್ತು. ಸೂರತ್ ಪದ ಸುರತ ಆಗಿ ಮುಜಗರಕ್ಕೆ ಕಾರಣವಾಗಿತ್ತು.

ಮಹಾತ್ಮ ಗಾಂಧಿಯವರು ದಂಡಿ ಸತ್ಯಾಗ್ರಹಕ್ಕೆ ಸಿದ್ಧತೆ ಮಾಡುತ್ತಿದ್ದಾಗ ತಮ್ಮನ್ನು ಬಂಧಿಸಬಹುದು ಎಂಬ ಸಂದೇಹ ಅವರನ್ನು ಕಾಡಲಾರಂಭಿಸಿತು. ಒಂದು ವೇಳೆ ತಮ್ಮ ಬಂಧನವಾದರೆ ಜನ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿಸುವುದಕ್ಕಾಗಿ ಅವರು ’ಬಾಂಬೆ ಕ್ರಾನಿಕಲ್’ ಪತ್ರಿಕೆಗೆ ಒಂದು ಸಂದರ್ಶನ ನೀಡಿದರು. ಆಗ ಆ ಪತ್ರಿಕೆಯ ಸಂಪಾದಕರಾಗಿದ್ದ ಸೈಯದ್ ಅಬ್ದು ಬ್ರೆಲ್ವಿ ಅವರೇ ಖುಧಿಗಿ ಗಾಂಧಿಯವರ ಸಂದರ್ಶನ ಮಾಡಿದರು. ಆ ಸಂದರ್ಶನಕ್ಕೆ ಬ್ರೆಲ್ವಿಯ ವರೇ, Mahatma Gandhi’s message to the masses ಎಂಬ ಶೀರ್ಷಿಕೆ ನೀಡಿದರು. ಆ ದಿನಗಳಲ್ಲಿ ಅಚ್ಚುಮೊಳೆಯಲ್ಲಿ ಅಕ್ಷರಗಳನ್ನು ಜೋಡಿಸುತ್ತಿದ್ದರು. ಞZooಛಿo ಎಂಬ ಪದದಲ್ಲಿ ’ಞ’ ಅಕ್ಷರ ಎಗರಿ ಹೋಗಿ, Zooಛಿo(ಕತ್ತೆ ಅಥವಾ ಅಂಡು) ಎಂದಾಗಿ ಬಿಟ್ಟಿತು. ಇದನ್ನು ಖುದ್ದು ಗಾಂಧಿಯವರೇ ನೋಡಿ ಖೇದ ವ್ಯಕ್ತಪಡಿಸಿದರು.

ದೇಶ-ರಿವಾಜು
ನೀವು ಜಪಾನಿಗೆ ಹೋಗುವಾಗ ಒಂದು ಸಂಗತಿ ತಿಳಿದಿರಬೇಕು. ಅದೇನೆಂದರೆ, ನೀವು ಮಾತ್ರೆ ಅಥವಾ ಔಷಧಗಳನ್ನು ಹಾಗೆ ಒಯ್ಯುವಂತಿಲ್ಲ. ನಿಮಗೆ ಅವುಗಳ ಅಗತ್ಯವಿರಬಹುದು. ಅದಿಲ್ಲದೇ ಬದುಕು ಅಸಹನೀಯವಾಗಬಹುದು. ನಿತ್ಯವೂ ಅವನ್ನು ಸೇವಿಸಬಹುದು. ಭಾರತದ ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್ ಇರಬಹುದು. ಜಪಾನಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಮುಂದೆ ನೀವು ತಂದ ಮಾತ್ರೆ ಮತ್ತು ಔಷಧಗಳ ವಿವರಗಳನ್ನು ನೀಡಬೇಕು. ಅದಕ್ಕೆ ಅವರು ಪರವಾ ನಗಿ ಕೊಡುತ್ತಾರೆ. ಅದನ್ನು ನಿಮ್ಮ ಜತೆಯಲ್ಲಿ ಇಟ್ಟುಕೊಂಡಿರಬೇಕು. ಇಲ್ಲದಿದ್ದರೆ ನಿಮ್ಮನ್ನು ತಪಾಸಣೆ ಮಾಡಿ ದಾಗ, ಅನುಮತಿ ಪತ್ರ ಇರದಿದ್ದರೆ ನಿಮಗೆ ದಂಡ ಗ್ಯಾರಂಟಿ.

ಸ್ಪೇನ್‌ನಲ್ಲಿ ಒಂದು ವಿಚಿತ್ರ ಕಾನೂನಿದೆ. ಅದೇನೆಂದರೆ, ಹೆದ್ದಾರಿಯಲ್ಲಿ ನೂರಕ್ಕಿಂತ ಹೆಚ್ಚು ಕಿಮೀ ವೇಗದಲ್ಲಿ ಕಾರನ್ನು ಓಡಿಸುವಾಗ, ನೀವು ಕಾರಿನ ಸ್ಟಿಯರಿಂಗ್ ಮೇಲೆ ಎರಡೂ ಕೈಗಳನ್ನು ಗಟ್ಟಿಯಾಗಿ ಇಟ್ಟುಕೊಂಡಿರಬೇಕು ಅಥವಾ ಹಿಡಿದಿರಬೇಕು. ಒಂದೇ ಕೈಯಲ್ಲಿ ಸ್ಟಿಯರಿಂಗ್ ಹಿಡಿದಿದ್ದು ರಸ್ತೆ ಪಕ್ಕದ ಕೆಮೆರಾದಲ್ಲಿ ಸೆರೆಯಾದರೆ, ಪೊಲೀಸು ಮಾಮ ಮುಂದೆ ‘ನಿಮ್ಮ ಆತಿಥ್ಯ’ಕ್ಕೆ ನಿಂತಿರುತ್ತಾನೆ ! ಕೆಲವರು ಡ್ರೈವ್ ಮಾಡುವಾಗ ಒಂದು ಕೈಯನ್ನು ಕಿಟಕಿ ಮೇಲೆ ಇಟ್ಟಿರುತ್ತಾರೆ ಹಾಗೂ ಇನ್ನೊಂದು ಕೈಯನ್ನು ಸ್ಟಿಯರಿಂಗ್ ಮೇಲಿಟ್ಟಿರುತ್ತಾರೆ. ಇದರಿಂದ ವೇಗವಾಗಿ ಚಲಿಸುವ ಕಾರಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವುದು ಕಷ್ಟ. ಈ ಕಾರಣದಿಂದ ಈ ಕಾನೂನು. ಗ್ರೀಸಿನ ಅಕ್ರೋಪ್ಲಿಸ್ ಮ್ಯೂಸಿಯಮ್ಮಿಗೆ ನಿಮ್ಮ ಸ್ನೇಹಿತೆಯೋ ಅಥವಾ ಪತ್ನಿಯ ಜತೆಗೆ ಹೋಗುವಾಗ ಅವಳು ಹೈ ಹೀಲ್ಡ್ ಚಪ್ಪಲಿ ಧರಿಸಿದ್ದರೆ, ದಂಡ ತೆರಳು ಸಿದ್ಧರಾಗಿರಿ.

ಹೈ ಹೀಲ್ಡ್ ಅಥವಾ ಪಾಯಿಂಟೆಡ್ ಚಪ್ಪಲಿ, ಷೂ ಧರಿಸುವುದರಿಂದ ಅಲ್ಲಿನ ಐತಿಹಾಸಿಕ ತಾಣದಲ್ಲಿರುವ ಸ್ಮಾರಕಗಳಿಗೆ, ನೆಲದ ಮೇಲಿರುವ ಶಾಸನಗಳಿಗೆ ಧಕ್ಕೆ ಆಗಬಹುದೆಂಬ ಕಾರಣಕ್ಕಾಗಿ ಈ ಎಚ್ಚರವಹಿಸಲಾಗಿದೆ. ಕೆಲವು ತಾಣಗಳಲ್ಲಿ ವಯಸ್ಸಾದವರು ಊರುಗೋಲನ್ನು ಹಿಡಿದು ಹೋಗುವುದನ್ನು ಸಹ ನಿಷೇಧಿಸ ಲಾಗಿದೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನುಗಳಿರುತ್ತವೆ. ಅದು ನಮಗೆ ವಿಚಿತ್ರವೆನಿಸಬಹುದು, ಆದರೆ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಜಾರಿಗೆ ತಂದಿರುತ್ತಾರೆ. ಈ ಸಂಗತಿಯನ್ನು ಅರಿಯದೇ ಹೋದರೆ, ನಾವು ವೃಥಾ ಮುಜುಗರ ಅನುಭವಿಸಬೇಕಾ ಗುತ್ತದೆ ಇಲ್ಲವೇ ತೊಂದರೆಗೆ ಸಿಲುಕಬೇಕಾಗುತ್ತದೆ. ಈ ಕಾರಣದಿಂದ ಮೊದಲೇ ಇವನ್ನು ತಿಳಿದಿರುವುದು ಒಳ್ಳೆಯದು. ಅಂದ ಹಾಗೆ ಮುಂದಿನ ಸಲ ಜರ್ಮನಿಗೆ ಹೋದಾಗ, ಅಲ್ಲಿನ ಸರ್ವಾಧಿಕಾರಿ ಹಿಟ್ಲರ್ ಥರ ಸೆಲ್ಯೂಟ್ ಹೊಡೆಯಬೇಡಿ. ಜನ ನಿಮ್ಮನ್ನು ಕ್ಯಾಕರಿಸಿ ನೋಡಿಯಾರು. ಅದನ್ನು ಪೊಲೀಸ್ ನೋಡಿದರೆ ದಂಡ ಹಾಕಿಯಾನು !

ನಾಲ್ಕನೇ ಮಹಾಯುದ್ಧ ನಡೆಯುತ್ತಾ?

ಒಮ್ಮೆ ಯೋಗಿ ದುರ್ಲಭಜೀ ಅವರಿಗೆ ಯಾರೋ ಕೇಳಿದರಂತೆ – ‘ಮೂರನೇ ಮಹಾಯುದ್ಧದ ಬಗ್ಗೆ ನೀವೇನಾದರೂ ಹೇಳುತ್ತೀರಾ?’ ಅದಕ್ಕೆ ಯೋಗಿ ಯವರು, ‘ಮೂರನೇ ಮಹಾಯುದ್ಧದ ಬಗ್ಗೆ ನಾನು ಈಗಲೇ ಏನನ್ನೂ ಹೇಳಲಾರೆ. ಆದರೆ ನಾಲ್ಕನೇ ಮಹಾಯುದ್ಧದ ಬಗ್ಗೆ ತಿಳಿದುಕೊಳ್ಳಲು ನಿಮಗೆ ಆಸಕ್ತಿ ಇದ್ದರೆ, ನಾನು ಆ ವಿಷಯದ ಬಗ್ಗೆ ಹೇಳುತ್ತೇನೆ’ ಎಂದರಂತೆ. ಆ ಪ್ರಶ್ನೆ ಕೇಳಿದ ವ್ಯಕ್ತಿ, ಯೋಗಿಯವರ ಉತ್ತರ ಕೇಳಿ ಗೊಂದಲಕ್ಕೀಡಾದನಂತೆ. ಮೂರನೇ ಮಹಾ ಯುದ್ಧದ ಬಗ್ಗೆ ಏನನ್ನೂ ಹೇಳದ ವ್ಯಕ್ತಿ ನಾಲ್ಕನೆಯದರ ಬಗ್ಗೆ ಏನು ಹೇಳಿಯಾನು ಎಂದು ಅವನಿಗೆ ಅನಿಸಿರಬೇಕು.

ಆದರೂ ತನ್ನ ಗೊಂದಲವನ್ನು ಪರಿಹರಿಸಿಕೊಳ್ಳಲು, ‘ಸರಿ, ನಾಲ್ಕನೇ ಮಹಾಯುದ್ಧದ ಬಗ್ಗೆ ಹೇಳುತ್ತೇನೆ ಎಂದು ಹೇಳಿದಿರಲ್ಲ, ಆಯ್ತು, ಅದರ ಬಗ್ಗೆಯೇ ಹೇಳಿ’ ಎಂದು ಹೇಳಿದನಂತೆ. ಅದಕ್ಕೆ ಯೋಗಿ ದುರ್ಲಭಜೀ ಖಚಿತ ನುಡಿಗಳಲ್ಲಿ ಹೇಳಿದರಂತೆ – ‘ನಾಲ್ಕನೇ ಮಹಾಯುದ್ಧ ನಡೆಯುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ವಾಗಿ ಹೇಳುತ್ತೇನೆ. ಮೂರನೆಯದರ ಬಗ್ಗೆ ಮಾತ್ರ ಏನನೂ ಹೇಳಲಾರೆ.’ ಮೂರನೇ ಮಹಾಯುದ್ಧದಲ್ಲಿ ಈ ಭೂಮಿ ಉಳಿದರೆ ತಾನೇ ನಾಲ್ಕನೆಯದು ನಡೆಯು ವುದು?

ರಾಹುಲ್ ದ್ರಾವಿಡ್ ಮತ್ತು ಸೋಲು !

ರೀಡರ್ಸ್ ಡೈಜೆಸ್ಟ್ ಪತ್ರಿಕೆ ಆರು ಗಣ್ಯ ಸಾಧಕರಿಗೆ ಒಂದು ಪ್ರಶ್ನೆಯನ್ನು ಕೇಳಿತ್ತು – ‘ಮೊದಲ ಪ್ರಯತ್ನದಲ್ಲಿ ನೀವು ಯಶಸ್ಸನ್ನು ಗಳಿಸಲಿಲ್ಲ. ಆಗ ನಿಮಗೆ ಏನನಿಸಿತು?’ ಆ ಆರು ಮಂದಿ ಪೈಕಿ ನಮ್ಮವರೇ ಆದ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರಿಗೂ ಈ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ದ್ರಾವಿಡ್ ಹೇಳಿದ್ದು – ‘ನಾನು ಯಶಸ್ಸು ಕಂಡಿದ್ದಕ್ಕಿಂತ ಸೋತಿದ್ದೇ ಜಾಸ್ತಿ. ನಾನು ವಿಜಯಶಾಲಿಗಿಂತ ಹೆಚ್ಚು ಪರಾಭವಶಾಲಿ. ಹೀಗಾಗಿ ನಾನು ಯಶಸ್ಸಿಗಿಂತ ಸೋಲಿನ ಬಗ್ಗೆ
ಮಾತಾಡಲು ಹೆಚ್ಚು ಅರ್ಹ ವ್ಯಕ್ತಿ. ನಾನು ಸೋಲನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದರ ಮರ್ಮವನ್ನು ಅರಿಯಲು ಪ್ರಯತ್ನಿಸಿದ್ದರಿಂದ ನನಗೆ ಯಶಸ್ಸು ಒಲಿಯುತ್ತಾ ಬಂದಿತು.

ಸೋಲು ಎದುರು ನಿಂತಾಗ ಅದನ್ನು ಒಲಿಸಿಕೊಂಡು, ಅದರ ಜತೆ ಹೆಜ್ಜೆ ಹಾಕುತ್ತಾ ಕ್ರಮೇಣ ಅದರಿಂದ ದೂರ ಹೋಗುವುದು ಹೇಗೆ ಎಂಬುದನ್ನು ತಿಳಿಯಬೇಕು. ಒಂದೇ ಸೋಲಿಗೆ ಧೃತಿಗೆಟ್ಟು ಹತಾಶರಾಗುವುದಲ್ಲ. ಅಂಥವರು ಒಮ್ಮೆ ಯಶಸ್ವಿಯಾದರೂ ನಂತರ ಸೋಲುತ್ತಾರೆ. ಗೆಲುವು ಕಲಿಸುವು ದಕ್ಕಿಂತ ಸೋಲು ಕಲಿಸುವ ಪಾಠವೇ ಪರಿಣಾಮಕಾರಿಯಾಗಿರುತ್ತದೆ.’

ಬೆಡ್ ರೂಮ್ ವಾಸನೆ
ನಾನು ಎಲ್ಲೋ ಓದಿದ್ದು. ಮದುವೆಯಾದ ನಂತರ, ಬೆಡ್ ರೂಮಿನಲ್ಲಿ ವಾಸನೆ ಹೇಗಿರುತ್ತದೆ ? ಮೊದಲ ಮೂರು ವರ್ಷಗಳಲ್ಲಿ… ಅತ್ತರು (ಪ-ಮ), ಹೂವು, ಚಾಕೊಲೇಟ, ಹಣ್ಣಿನ ವಾಸನೆಯಿರುತ್ತದೆ. ಐದು ವರ್ಷಗಳ ನಂತರ… ಬೇಬಿ ಪೌಡರ್, ಜಾನ್ಸನ್ ಕ್ರೀಮ, ಲೋಷನ್, ಬೇಬಿ ಆಯಿಲ್ ವಾಸನೆಯಿರುತ್ತದೆ. ಮೂವತ್ತು ವರ್ಷಗಳ ನಂತರ… ಟೈಗರ್ ಬಾಮ, ಅಮೃತಾಂಜನ, ವಿಕ್ಸ್ ವಾಸನೆ ಸೂಸುತ್ತಿರುತ್ತದೆ. ಐವತ್ತು ವರ್ಷಗಳ ನಂತರ… ಬರೀ ಅಗರಬತ್ತಿ ವಾಸನೆ !