ಅಭಿಮತ
ನಾಗರಾಜ ಜಿ.ನಾಗಸಂದ್ರ
ಭಾರತ ಹೇಳಿ ಕೇಳಿ ವೈವಿಧ್ಯತೆಯ ತವರೂರು. ಇಲ್ಲಿ ಜಾತಿ, ಧರ್ಮ, ವರ್ಣ, ಆಹಾರ, ವಸ್ತ್ರ, ಭಾಷೆ ಹಿಗೆ ಎಲ್ಲದರಲ್ಲೂ ಭಿನ್ನತೆಯನ್ನು ಕಾಣುವ ನಾಡು ನಮ್ಮದು. ಇಂತಹ ಬಹು ವೈವಿಧ್ಯತೆಯ ನಡುವೆಯೂ ಏಕತೆ ಸಾರಿರುವ ಭವ್ಯ ಪರಂಪರೆ ಹೊಂದಿರುವ ದೇಶ ಭಾರತ. ಇಂತಹ ಸಾಮರಸ್ಯದ ನಾಡಲ್ಲೂ ಒಂದಷ್ಟು ಬಿರುಕುಗಳು ಕಾಣುತ್ತಿರುವುದು ದೇಶದ ಹಿತದೃಷ್ಟಿಯಿಂದ ಸರಿಯಲ್ಲ. ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ಇಂತಹವುಗಳನ್ನು ತೊಡೆದು ಹಾಕುವುದು
ಅಗತ್ಯ. ಸಾಮರಸ್ಯದ ನಾಡಿನಲ್ಲೂ ಸಣ್ಣಪುಟ್ಟ ಅನಪೇಕ್ಷಿತ ಘಟನೆಗಳು ನಡೆಯುತ್ತಿವೆ.
ಅವುಗಳನ್ನು ಅಲ್ಲಿಗೆ ನಿಲ್ಲಿಸುವುದರ ಮೂಲಕ ಪ್ರಪಂಚದ ಇತರ ದೇಶಗಳಿಗೆ ಮಾದರಿಯಾಗಿರುವ ಭಾರತದ ಪರಂಪರೆಯನ್ನು ಮುಂದುವರಿಸಬೇಕಿದೆ. ದೇಶದ ಅಭಿವೃದ್ಧಿಗೆ ಹಲವಾರು ಸಂಘಟನೆಗಳು ತಮ್ಮದೆ ಆದ ಕೊಡುಗೆಗಳನ್ನು ನೀಡುತ್ತಾ ಬಂದಿವೆ. ಇನ್ನು ಕೆಲ ಸಂಘಟನೆಗಳು ಸೀಮಿತ ಗುರಿಗಳನ್ನಿಟ್ಟುಕೊಂಡು
ಸ್ಥಾಪನೆಯಾಗಿರುತ್ತವೆ. ಅಂತಹ ಹಲವಾರು ಸಂಸ್ಥೆಗಳು ತಮ್ಮ ಗುರಿಗಳನ್ನಷ್ಟೇ ತಲುಪಲು ಯೋಜನೆಗಳನ್ನು ಹಾಕಿಕೊಂಡಿರುತ್ತವೆ. ಅಂತಹ ಸಂಘಟನೆಗಳಲ್ಲಿ ಜಾತಿ ಅಥವಾ ಧರ್ಮಾಧಾರಿತ ಸಂಸ್ಥೆಗಳು ಕೂಡ ಸೇರಿವೆ. ಜಾತಿ ಅಥವಾ ಧರ್ಮಾಧಾರಿತ ಸಂಘಟನೆಗಳು ತಮ್ಮ ಮೇಲ್ಮೆ ಸಾಧಿಸಲು ಹೊರಟಲ್ಲಿ ಅದು ವಿಶೇಷವೇನಲ್ಲ. ಏಕೆಂದರೆ ಆ ಸಂಘಟನೆಯ ಹುಟ್ಟು ಅವರ ಜಾತಿ ಅಥವಾ ಧರ್ಮದ ಹಿತ ಕಾಯುವುದೇ ಆಗಿರುತ್ತದೆ. ಆದರೆ ಆ ಹಿತ ಮತ್ತೊಂದು ಜಾತಿ ಅಥವಾ ಧರ್ಮದವರ ಹಿತಾಸಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಾರದಷ್ಟೆ.
ಇದು ನಮ್ಮ ಸಂವಿಧಾನದ ಆಶಯವೂ ಹೌದು. ಇಲ್ಲಿ ಪ್ರತಿಯೊಬ್ಬರು ಅವರಿಗೆ ಸರಿ ಎನಿಸಿದ ಧರ್ಮ ಅನುಸರಿಸಲು ಸರ್ವ ಸ್ವತಂತ್ರರು. ಆದರೆ ಆ ಸ್ವಾತಂತ್ರ್ಯ ಮತ್ತೊಂದು ಧರ್ಮದವರ ಮೇಲೆ ಸವಾರಿ ಮಾಡುವ ಅವಕಾಶವಲ್ಲ. ನಮ್ಮ ಸಂವಿಧಾನವೂ ನಮಗೆ ನೀಡಿರುವ ಹಕ್ಕುಗಳು ನಮ್ಮ ಹಿತರಕ್ಷಣೆಗೆ ಹೊರತು ಇತರರನ್ನು ಹಿಂಸಿಸುವುದಕ್ಕೆ ಅಲ್ಲ. ಇಲ್ಲಿ ಜನಸಾಮಾನ್ಯರ ನಂಬಿಕೆಗಳ ಆಚರಣೆಗಳಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಬೇಕಾದ ಜವಾಬ್ದಾರಿ ನಾಡಿನ ಬುದ್ಧಿಜೀವಿಗಳಾದವರ ಮೇಲಿದೆ. ಅಂತಹ ಬುದ್ಧಿಜೀವಿಗಳ ಸಾಲಿಗೆ ಸೇರುವವರಲ್ಲಿ ಸಾಹಿತಿಗಳ ಬಳಗವೂ ಒಂದು. ಸಾಹಿತ್ಯವು ಸಮಾಜದ ಒಡಕನ್ನು ಒಟ್ಟಗೂಡಿಸುವ ಸಾಮರ್ಥ್ಯ ಹೊಂದಿದೆ.
ಅದು ಅದೇ ಸಮಾಜದ ಹಿತಾಸಕ್ತಿಯನ್ನು ಅಲುಗಾಡಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದಲೇ ಕತ್ತಿಗಿಂತ ಹರಿತವಾದದ್ದು ಪೆನ್ನು ಅನ್ನುವ ಮಾತಿದೆ. ಕತ್ತಿ ಕೆಲ ಮಂದಿಗೆ ಮಾತ್ರ ಹಾನಿಯುಂಟುಮಾಡಬಲ್ಲದು. ಆದರೆ ಹರಿತವಾದ ಬರವಣಿಗೆ ಒಂದು ಸಮಾಜದ ಅಸ್ತಿತ್ವವನ್ನೇ ಬುಡಮೇಲು ಮಾಡಬಲ್ಲದು. ಇತಿಹಾಸ ದುದ್ದಕ್ಕೂ ಇಂತಹ ಸಾವಿರಾರು ನಿದರ್ಶನಗಳು ನಮಗೆ ಸಿಗುತ್ತವೆ. ೧೯೧೭ರಲ್ಲಿ ನಡೆದ ರಷ್ಯಾ ಕ್ರಾಂತಿಗೆ ಕಮ್ಯುನಿಸ್ಟ್ ಸಿದ್ಧಾಂತ ಪ್ರತಿಪಾದಕರಾದ ಕಾರ್ಲ್ ಮಾಕ್ಸ್ ಬರಹಗಳ ಪ್ರಭಾವ ಕಾರಣವಾಗಿತ್ತು. ಶ್ರೀಮಂತ ಮತ್ತು ಕಾರ್ಮಿಕ ವರ್ಗದ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಬರಹಗಳು ಮತ್ತು ಸಂಪತ್ತಿನ ಸಮಾನ ಹಂಚಿಕೆಯಂತಹ ಪರಿಕಲ್ಪನೆಗಳು ಕ್ರಾಂತಿಗೆ ಮುನ್ನುಡಿ ಬರೆಯುವಲ್ಲಿ ಯಶಸ್ವಿಯಾಗಿದ್ದವು. ಅಂದಿನ ಆ ಬರಹಗಳು ಝ್ಸಾರ್ ದೊರೆಗಳ ಆಡಳಿತವನ್ನು ಕೊನೆಗೊಳಿಸಿ ಕಮ್ಯುನಿಸ್ಟ್ ಆಡಳಿತಕ್ಕೆ ನಾಂದಿಯಾಯಿತು. ಇದು ಬರವಣಿಗೆಗೆ ಇರುವ ಶಕ್ತಿ.
ಅಂತಹ ಪ್ರಬಲ ಅಸವನ್ನು ಹಿಡಿದಿರುವ ಬುದ್ಧಿಜೀವಿಗಳೆನಿಸಿಕೊಂಡಿರುವ ಸಾಹಿತಿಗಳು ತಮ್ಮ ಭಿನ್ನ ದನಿಗಳನ್ನು ಸಮಾಜದ ಮುಂದಿಡುವ ಭರದಲ್ಲಿ ಸಮಾಜ ವನ್ನೇ ಒಡೆಯುವ ಹಂತ ತಲುಪಿರುವುದು ವಿಷಾದನೀಯ. ಒಂದು ಪಂಥದ ಪ್ರತಿಪಾದಕರಾದ ಸಾಹಿತಿಗಳು ಮತ್ತೊಂದು ಪಂಥದ ಸಾಹಿತಿಗಳನ್ನು
ಟೀಕಿಸುವುದೇ ತಮ್ಮ ಮೇಲ್ಮೆ ಎಂದು ಭಾವಿಸಿದಂತೆ ಕಾಣುತ್ತಿದೆ. ಅವರುಗಳು ತಮ್ಮ ಸಾಹಿತ್ಯ ಕೃಷಿಗಿಂತ ಮತ್ತೊಂದು ಪಂಥದ ಸಾಹಿತಿಗಳನ್ನು ಟೀಕಿಸುವುದಕ್ಕೆ
ಪ್ರಾಧಾನ್ಯತೆ ನೀಡುತ್ತಿರುವ ಪರಿಪಾಠ ಹೆಚ್ಚುತ್ತಿದೆ. ಅದು ವೈಯುಕ್ತಿಕ ಮಟ್ಟಕ್ಕೆ ಇಳಿಯುತ್ತಿರುವುದು ಸಮಾಜಕ್ಕೆ ನೀಡುತ್ತಿರುವ ಕೆಟ್ಟ ಸಂದೇಶ. ಇದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ. ವೈರುಧ್ಯಗಳು ಎಲ್ಲ ಕಾಲದಲ್ಲೂ ಎಲ್ಲ ವ್ಯಕ್ತಿಗಳಲ್ಲೂ ಇದ್ದೇ ಇರುತ್ತವೆ. ವ್ಯಕ್ತಿಯಿಂದ ವ್ಯಕ್ತಿಗೆ ಆಲೋಚನೆಗಳು ಭಿನ್ನವಾಗಿರುತ್ತವೆ. ಅದು ತಪ್ಪಲ್ಲ.
ಆದರೆ ನನ್ನ ನಂಬಿಕೆಗಳೆ ಸರ್ವ ಶ್ರೇಷ್ಠವೆಂದು ಇತರರ ಮೇಲೆ ಹೇರಲು ಪ್ರಯತ್ನಿಸುವುದು ಅಮಾನವೀಯ. ಇಲ್ಲಿ ಪ್ರತಿಯೊಬ್ಬರು ಭಿನ್ನ. ಅವರ ನಂಬಿಕೆಗಳು ಕೂಡ ವೈವಿಧ್ಯ. ಒಬ್ಬನಿಗೆ ರಾಮ, ಮತ್ತೊಬ್ಬನಿಗೆ ಶಿವ, ಮಗದೊಬ್ಬನಿಗೆ ಹನುಮ, ಇನ್ನೊಬ್ಬನಿಗೆ ಅಲ್ಲಾಹು, ಮತ್ತೊಬ್ಬನಿಗೆ ಜೀಸಸ್, ಬೇರೊಬ್ಬನಿಗೆ ಗೌತಮ ಬುದ್ಧ, ಮಗದೊಬ್ಬನಿಗೆ ಮಹಾವೀರ, ಇನ್ನೊಬ್ಬನಿಗೆ ಗುರುನಾನಕ್ ದೇವರಾಗಿ ಕಾಣುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ಅವರದ್ದೆ ಆದ ನಂಬಿಕೆಗಳಿರುತ್ತವೆ. ಇವರಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು? ಎಂದು ಹೇಳಲು ಸಾಧ್ಯವಿಲ್ಲ. ಅವರವರ ಮಟ್ಟಿಗೆ ಅವರವರ ನಂಬಿಕೆಗಳು ಸರಿಯೆನಿಸುತ್ತವೆ.
ರಾಜಕಾರಣದಲ್ಲಿ ಸಾಹಿತ್ಯವಿರಬಹುದು, ಆದರೆ ಸಾಹಿತ್ಯದಲ್ಲಿ ರಾಜಕಾರಣವಿರಬಾರದು. ರಾಜಕಾರಣದಲ್ಲಿ ಸಾಹಿತ್ಯವಿದ್ದರೆ ಆಡಳಿತಕ್ಕೆ ಸಹಕಾರಿಯಾಗುತ್ತದೆ. ಅದು ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಉದಾಹರಣೆಗೆ ರಾಜರ ಕಾಲದಲ್ಲಿ ಯಾವ ರಾಜ ತನ್ನ ಆಸ್ಥಾನದಲ್ಲಿ ಬುದ್ಧಿಜೀವಿಗಳಾದ ಸಾಹಿತಿಗಳನ್ನು ಇಟ್ಟುಕೊಂಡಿದ್ದರೊ ಅವರ ಸಾಮ್ರಾಜ್ಯದ ಆಡಳಿತ ಉತ್ತಮವಾಗಿ ಸಾಗುತ್ತಿತ್ತು. ಕಾರಣ ಬುದ್ಧಿಜೀವಿಯಾಗಿದ್ದ ಸಾಹಿತಿ ಸಮಾಜದ ಪ್ರತಿಬಿಂಬವಾಗಿರುತ್ತಿದ್ದ. ಅವನ ಸಲಹೆ ಸೂಚನೆಗಳು ಆಡಳಿತಗಾರರಾಗಿದ್ದ ರಾಜರಿಗೆ ಶಕ್ತಿ ತುಂಬುತ್ತಿದ್ದವು. ಅದರಿಂದ ಆಡಳಿತ ಸುಗಮವಾಗು ತ್ತಿತ್ತು. ಇದಕ್ಕೆ ಚಾಣಕ್ಯ, ಬಸವಣ್ಣ, ಪಂಪ, ವಿಜಯನಗರದ ಅಷ್ಟದಿಗ್ಗಜರು, ನಾಗಚಂದ್ರನಂತಹ ಸಾವಿರಾರು ನಿದರ್ಶನಗಳಿವೆ.
ಎಲ್ಲ ಕಾಲಕ್ಕೂ ಸಾಹಿತಿಯಾದವನು ತನ್ನ ಜವಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಿದೆ. ಅವನು ಪ್ರತಿಯೊಂದು ಘಟನೆಯನ್ನೂ ಮಾನವೀಯ ಹಿನ್ನೆಲೆಯಲ್ಲಿ ನೋಡಿದಲ್ಲಿ ಮಾತ್ರ ಉತ್ತಮ ಸಂದೇಶ ನೀಡಲು ಸಾಧ್ಯ. ಅಂತಹ ಸಮಾಜ ಉತ್ತಮ ರೀತಿಯಲ್ಲಿ ಸಾಗಲು ಸಹಕಾರಿಯಾಗುತ್ತದೆ. ಒಂದು ವೇಳೆ ಆತ ತನ್ನ ಜವಾಬ್ದಾರಿಯನ್ನು ಮರೆತು ಸ್ವಾರ್ಥದತ್ತ ವಾಲಿದರೆ ಅದು ಇಡೀ ಸಮಾಜಕ್ಕೆ ದೊಡ್ಡ ಪೆಟ್ಟು ನೀಡುತ್ತದೆ. ಅಂತಹ ಸನ್ನಿವೇಶದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ದೊಡ್ಡ ಅಡಚಣೆಯಾಗುತ್ತದೆ.
ಇಂತಹ ದೊಡ್ಡ ಜವಬ್ದಾರಿ ಹೊತ್ತ ಸಾಹಿತಿಗಳು ಇಂದು ಎಡ ಮತ್ತು ಬಲಪಂಥಗಳ ಹೆಸರಿನಲ್ಲಿ ವಿಭಜನೆಯಾಗಿರುವುದು ಸಮಾಜದ ಮೇಲೆ ದುಷ್ಟ ಪರಿಣಾಮ ಬೀರುತ್ತದೆ. ಸಮಾಜಕ್ಕೆ ಮಾದರಿಯಾಗಬೇಕಿರುವ ಇವರೆ ಕೆಸರೆರಚಾಟದಲ್ಲಿ ತೊಡಗಿದರೆ ಸಮಾಜಕ್ಕೆ ಇನ್ನೆಂತಹ ದೇಶ ನೀಡಲು ಸಾಧ್ಯ? ಇಲ್ಲಿ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸಬಹುದು. ಆದರೆ ಅವು ತೀರಾ ವೈಯುಕ್ತಿಕ ಮಟ್ಟಕ್ಕೆ ಇಳಿಯುವುದು ಅನಪೇಕ್ಷಣೀಯ. ಎಡಪಂಥೀಯ ಕೆಲ ಸಾಹಿತಿಗಳು ಬಲಪಂಥೀಯ ಸಾಹಿತಿಯೊಬ್ಬರ ಆಲೋಚನೆಗಳನ್ನು ಹಾಗೂ ಕೃತಿಯನ್ನು ಕೂಲಂಕಶವಾಗಿ ಪರಿಶೀಲಿಸದೆಯೇ ಟೀಕಿಸುವುದು. ಇನ್ನು ಎಡಪಂಥೀಯ ಸಾಹಿತಿಗಳ ಸಾಹಿತ್ಯವನ್ನು ಪರಾಮರ್ಶಿಸದೆ ಸರಾಸಗಟಾಗಿ ತಿರಸ್ಕರಿಸುವುದು ಎರಡೂ ಅಪಾಯಕಾರಿ ಬೆಳವಣಿಗೆಗಳೇ ಆಗಿರುತ್ತವೆ.
ಇಲ್ಲಿ ಸಾಹಿತ್ಯಕ್ಕಿಂತ ಆತನ ಹಿನ್ನೆಲೆ ನೋಡಿ ವಿಶ್ಲೇಷಣೆ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ತಮ್ಮ ಪಂಥದ ವ್ಯಕಿಯೊಬ್ಬನಿಗೆ ಆದ ಅನ್ಯಾಯದ ಬಗ್ಗೆ ಬೊಬ್ಬೆ ಹೊಡೆಯುವ ಇವರು, ಅದೇ ಮತ್ತೊಂದು ಪಂಥದ ವ್ಯಕ್ತಿಗೆ ಅನ್ಯಾಯವಾದಗ ಏಕೆ? ಧ್ವನಿ ಎತ್ತುವುದಿಲ್ಲ. ಇಲ್ಲಿ ಇವರುಗಳಿಗೆ ಮಾನವೀಯತೆಗಿಂತ ತಮ್ಮ ಪಂಥಗಳೇ ಮುಖ್ಯವಾಗಿರುತ್ತವೆ. ಮನುಷ್ಯನಾದವನಿಗೆ ಮೊದಲ ಆದ್ಯತೆ ಮನುಷ್ಯತ್ವವಾಗಿರಬೇಕು. ಅದರ ಬದಲಿಗೆ ಮತ್ಯಾವುದೋ ಆದ್ಯತೆಯಾಗಿರಬಾರದು. ಅದರಲ್ಲೂ ಜ್ಞಾನಿಗಳೆನಿಸಿಕೊಂಡಿರುವ ಸಾಹಿತಿಗಳಿಗೆ ಇದು ಸೂಕ್ತವಲ್ಲ.
ವ್ಯಕ್ತಿತ್ವ, ಸತ್ಯ, ನ್ಯಾಯ ಮತ್ತು ದೇಶ ಭಕ್ತಿಗಳನ್ನು ಜಾತಿ ಧರ್ಮದ ಆಧಾರದಲ್ಲಿ ತುಲನೆ ಮಾಡುವುದು ಅಮಾನವೀಯ. ಸಮಾಜವನ್ನು ತಿದ್ದುವ ಗುರುತರ ಜವಾಬ್ದಾರಿ ಹೊತ್ತಿರುವ ಬುದ್ಧಿಜೀವಿಗಳು ತಮ್ಮ ವೈಯುಕ್ತಿ ಪ್ರತಿಷ್ಟೆಗಳನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ದುಡಿಯುವ ಅಗತ್ಯವಿದೆ. ಆ ಮೂಲಕ ಉತ್ತಮ ಸಮಾಜ ನಿರ್ಮಾಣದ ಹೊಣೆ ಹೊರಬೇಕಾಗಿದೆ. ಇಲ್ಲಿ ಪ್ರತಿಯೊಬ್ಬರದ್ದು ಭಿನ್ನ ಆಲೋಚನೆ. ಆದರೆ ಆ ಭಿನ್ನತೆಯಲ್ಲಿ ಏಕತೆ ಕಾಣುವ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಜವಾಬ್ದಾರಿ ಸಾಹಿತಿಗಳ ಮೇಲಿದೆ. ತಮ್ಮ ಪಂಥಗಳಿಗಿಂತ ಮಾನವ ಪಂಥ ದೊಡ್ಡದು ಅದನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಮೂಲಕ ಸಭ್ಯ ಸಮಾಜ ನಿರ್ಮಾಣ ಮಾಡುವ ಕಾರ್ಯಕ್ಕೆ ಕೈಜೋಡಿಸಬೇಕಿದೆ. ಆ ಮೂಲಕ ದೇಶದ ಕೀರ್ತಿಯನ್ನು ಜಗದಗಲ ಪಸರಿಸಬೇಕಿದೆ.