Tuesday, 10th September 2024

ಮಳೆಗಾಲದಲ್ಲೂ ಲೋಡ್ ಶೆಡ್ಡಿಂಗ್ ಪ್ರಾಬ್ಲಮ್ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಆಗಸ್ಟ್ ಮಾಸವು ಭುವಿಯ ತುಂಬೆಲ್ಲಾ ಹಸಿರು ಕಾಣುವ ಪರ್ವಕಾಲ. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಕರ್ನಾಟಕ ತತ್ತರಿಸಿ ಹೋಗಿದೆ ಹಾಗೂ ರಾಜ್ಯವು ಸಂಪೂರ್ಣ ಬರಗಾಲ ಎದುರಿಸುವ ಹಂತಕ್ಕೆ ತಲುಪುವ ಮುನ್ಸೂಚನೆಯಿದೆ. ಇದರಿಂದ ಜನ ತಲ್ಲಣಗೊಂಡಿದ್ದಾರೆ. ಕೃಷಿಯನ್ನೇ ನಂಬಿ ಕುಳಿತಿರುವ ಅನ್ನದಾತನಿಗೆ ಪರಿಹಾರ ರೂಪದಲ್ಲಿ ಸರಕಾರ ಒಂದಿಷ್ಟು ಸಹಾಯ ಮಾಡಬೇಕಿದೆ.

ಕರ್ನಾಟಕ ಸರಕಾರ ತನ್ನ ಬಿಟ್ಟಿಭಾಗ್ಯಗಳನ್ನು ಪೂರೈಸುವ ಆಲೋಚನೆಯಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಉತ್ತರಿಸದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಗೆ ತಲುಪಿದೆ. ರಾಜ್ಯದ ಜನರ ದುರದೃಷ್ಟವೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಜನರು ಬರಗಾಲ ಅನುಭವಿಸಿದ್ದೇ ಹೆಚ್ಚು. ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಉಷ್ಣತೆ ವಾಡಿಕೆಗಿಂತ ೩ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ವಿದ್ಯುತ್ ಉತ್ಪಾದನೆ ಕುಂಠಿತವಾದ ಹಿನ್ನೆಲೆ ಈಗಾಗಲೇ ರಾಜ್ಯದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭಿಸಲಾಗಿದ್ದು ಇದರಿಂದ ಸಾರ್ವಜನಿಕರಿಗೆ, ನಿರ್ದಿಷ್ಟವಾಗಿ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇಂಥ ಸನ್ನಿವೇಶಗಳಲ್ಲಿ ಸರಕಾರ ಸಾಕಷ್ಟು ಮುತುವರ್ಜಿ ವಹಿಸಿ ನಿರ್ಣಯಗಳನ್ನು ಕೈಗೊಂಡರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಹುಡುಕಬಹುದಾಗಿದೆ. ರಾಜ್ಯ ಸರಕಾರಕ್ಕೆ ಲೋಡ್ ಶೆಡ್ಡಿಂಗ್ ತಲೆನೋವಾಗಿ ಪರಿಣಮಿಸಿದ್ದು, ಕೇಂದ್ರ ಹಾಗೂ ಹೊರರಾಜ್ಯಗಳನ್ನು ಅವಲಂಬಿಸಬೇಕಾದ ಅನಿವಾರ್ಯ ಎದುರಾಗಿದೆ. ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಯ ಮೇಲೂ ತೀವ್ರ ಪರಿಣಾಮವಾಗಿದ್ದು, ಸರಕಾರಕ್ಕೆ ಇದೊಂದು ಸವಾಲಾಗಿ ಪರಿಣಮಿಸಿದೆ.

ಜುಲೈನಲ್ಲಿ ಸರಿ ಸುಮಾರು ೮೦೦೦ ಮೆಗಾವಾಟ್‌ನಷ್ಟು ವಿದ್ಯುತ್ ಬೇಡಿಕೆಯಿದ್ದುದು ಈಗ ೧೬೦೦೦ಕ್ಕೆ ತಲುಪಿದೆ. ಇದೇ ಕಾರಣದಿಂದ ಸರಕಾರವೀಗ ವಿದ್ಯುತ್ ಬಳಕೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಮುಂಗಾರುಮಳೆ ಈ ಬಾರಿ ನಿರಾಸೆ ಉಂಟುಮಾಡಿರುವ ಪರಿಣಾಮ ವಿದ್ಯುಚ್ಛಕ್ತಿ ಕಂಪನಿಗಳು ಸಾಕಷ್ಟು ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ಜಲ ಮೂಲದಿಂದ ೨,೩೮೦, ಪವನಯಂತ್ರಗಳಿಂದ ೮೫೦, ಸೌರ ಫಲಕಗಳಿಂದ ೫,೯೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದು, ಮಳೆಯಿಲ್ಲದ ಕಾರಣ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಉತ್ಪಾದನೆಯಲ್ಲಿ ನಿರ್ದಿಷ್ಟ ಮಟ್ಟ ತಲುಪಲಾಗುತ್ತಿಲ್ಲ. ಮಳೆಗಾಲ ದಲ್ಲೇ ಲೋಡ್ ಶೆಡ್ಡಿಂಗ್ ಮಾಡುವ ಪರಿಸ್ಥಿತಿಗೆ ತಲುಪಿದರೆ, ಮುಂದೆ ಬೇಸಿಗೆಯಲ್ಲಿ ವಾರಗಟ್ಟಲೆ ವಿದ್ಯುತ್ ಇಲ್ಲದ ಪರಿಸ್ಥಿತಿ ರಾಜ್ಯಕ್ಕೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

ಅನ್ನದಾತ ಕಂಗಾಲು: ಮುಂಗಾರುಮಳೆ ರೈತರ ಪಾಲಿಗೆ ಅಮೃತವಿದ್ದಂತೆ. ಆ ಮಳೆಗಾಗಿ ಹಾತೊರೆಯುವ ರೈತರು ದೇವರ ಪೂಜೆ, ದೈವಗಳಿಗೆ ಹರಕೆ, ಕಪ್ಪೆಗಳ ಮದುವೆ ಇಂಥ ಸಂಪ್ರದಾಯಗಳನ್ನು ಪಾಲಿಸುವುದಿದೆ. ಹವಾಮಾನ ಇಲಾಖೆಯು ೧೯೦೧ರಲ್ಲಿ ದೇಶದ ಮಳೆ ಪ್ರಮಾಣವನ್ನು ದಾಖಲಿಸುವ ಕೆಲಸವನ್ನು ಶುರುಮಾಡಿತು. ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆಯ ಕೊರತೆಯನ್ನು ಪರಿಗಣಿಸಿದಾಗ, ಕಳೆದ ೧೨೩ ವರ್ಷಗಳಲ್ಲಿ ಈ ಪ್ರಮಾಣದ ಕೊರತೆ
ಯಾಗಿಲ್ಲ ಎನ್ನುತ್ತದೆ ಹವಾಮಾನ ತಜ್ಞರ ವರದಿ. ಈ ವರದಿಯನ್ನು ನೋಡುತ್ತಿದ್ದಂತೆ ನನಗೆ ಕಣ್ಣು ಒದ್ದೆಯಾಗತೊಡಗಿತು.

ಹೌದು, ಕರ್ನಾಟಕದ ರೈತರ ಕಷ್ಟ ನಿಜಕ್ಕೂ  ಹೇಳತೀರದಂತಾಗಿದೆ. ಒಮ್ಮೆ ಅತಿವೃಷ್ಟಿ, ಇನ್ನೊಮ್ಮೆ ಅನಾವೃಷ್ಟಿಯಲ್ಲಿ ಸಿಲುಕಿ ರೈತ ದಿನೇದಿನೆ ಕಣ್ಣೀರಲ್ಲಿ ಕೈತೊಳೆಯುವಂಥ ಸಂದಿಗ್ಧ ಸ್ಥಿತಿಗೆ ತಲುಪಿದ್ದಾನೆ. ಆಗಸ್ಟ್ ತಿಂಗಳ ವರದಿಯನ್ನೇ ಗಮನಿಸುವುದಾದರೆ, ವಾಡಿಕೆಯಂತೆ ೨೨ ಸೆಂ.ಮೀ. ಮಳೆಯಾಗಬೇಕು. ಆದರೆ ರಾಜ್ಯದಲ್ಲಿ ಆಗಿದ್ದು ೬ ಸೆಂ.ಮೀ. ಈ ಮೂಲಕ ಒಟ್ಟು ಶೇ.೭೫ರಷ್ಟು ಮಳೆ ಕೊರತೆ ರಾಜ್ಯವನ್ನು ಕಾಡಿದೆ. ಹೀಗಾಗಿ ಆಗಸ್ಟ್ ಮಳೆ ಕೊರತೆಯು, ಶತಮಾನದ ಮಳೆ ಕೊರತೆಯ ತಿಂಗಳು ಎನ್ನುವ ದಾಖಲೆಗೆ ಕಾರಣವಾಗಿದೆ. ಇದು ನಿಜಕ್ಕೂ ಬೇಸರದ ಸಂಗತಿ. ೧೯೭೨ ಮತ್ತು ೨೦೧೬ರ ನಡುವೆ
ಕರ್ನಾಟಕವನ್ನು ಶೇ.೪೩ರಷ್ಟು ಮಳೆ ಕೊರತೆಯು ಕಾಡಿತ್ತು. ಆದರೆ ಈ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಂತಾಗಿದೆ.

ಬರಗಾಲದತ್ತ ಕರ್ನಾಟಕ: ವರುಣನ ಮುನಿಸು ಈಗಾಗಲೇ ಕರ್ನಾಟಕದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರಿದ್ದು, ಸರಿಸುಮಾರು ೧೯೫ ತಾಲೂಕು
ಗಳನ್ನು ‘ಬರದ ಪರಿಸ್ಥಿತಿಯುಳ್ಳ ತಾಲೂಕು’ ಎಂದು ಈಗಾಗಲೇ ಘೋಷಿಸಲಾಗಿದೆ. ಈ ಪೈಕಿ ೧೬೧ನ್ನು ತೀವ್ರ ಬರಗಾಲದ ತಾಲೂಕು ಎಂದೂ, ೩೪ನ್ನು ಸಾಧಾರಣ ಬರಗಾಲದ ತಾಲೂಕು ಎಂದೂ ಪರಿಗಣಿಸಲಾಗಿದೆ. ನಮ್ಮ ಕ್ಷೇತ್ರ ಬೈಂದೂರನ್ನು ಈ ಬಾರಿ ಬರಗಾಲ ತಾಲೂಕಿಗೆ ಸೇರಿಸಿ ಒಂದಿಷ್ಟು ಸಹಕಾರ ನೀಡುವಂತೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂಬರುವ ದಿನಗಳಲ್ಲಾದರೂ ಸರಕಾರ ಈ ಕ್ಷೇತ್ರದತ್ತ ಗಮನ ಹರಿಸಬೇಕಿದೆ. ರೈತ ಆಶ್ರಯಿಸಿರುವ/ನೆಚ್ಚಿರುವ ಬೆಳೆಗಳೆಲ್ಲವೂ ಆತನ ಕೈಹಿಡಿಯುವುದು ಕಷ್ಟಸಾಧ್ಯ ಎನ್ನಲಾಗಿದೆ.

ಒಂದು ವೇಳೆ ಇನ್ನೊಂದು ವಾರಕಾಲ ಉತ್ತಮ ಮಳೆ ಬಂದರೆ, ಸರಿಸುಮಾರು ಶೇ.೫೦ರಿಂದ ೬೦ರಷ್ಟು ಬೆಳೆ ಉಳಿಯಬಹುದು ಎನ್ನಲಾಗಿದೆ. ಹಾಗೆಯೇ, ರಾಜ್ಯದ ಅಣೆಕಟ್ಟು ಗಳಲ್ಲಿ ನೀರಿನ ಸಂಗ್ರಹ ಕೂಡ ಸಮರ್ಪಕವಾಗಿಲ್ಲದ ಕಾರಣ, ರೈತರ ಪಾಲಿಗೆ ಈ ವರ್ಷ ನಿಜಕ್ಕೂ ಘನಘೋರ ವರ್ಷವಾಗಲಿದೆ. ರಾಗಿ, ಭತ್ತ ಸೇರಿದಂತೆ ಅನೇಕ ಬೆಳೆಗಳ ವಿಷಯದಲ್ಲಿ ಬಿತ್ತನೆಯ ಕೊರತೆ ಉಲ್ಬಣಿಸಿದೆ. ಮಳೆ ಕೊರತೆ ಪರಿಣಾಮವಾಗಿ ೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಭತ್ತದ ಬಿತ್ತನೆ ಕೊರತೆ ಉಂಟಾಗಿದ್ದು, ರಾಗಿ (೩.೫ ಲಕ್ಷ ಹೆಕ್ಟೇರ್), ತೊಗರಿ (೨.೫ ಲಕ್ಷ ಹೆಕ್ಟೇರ್), ಹೆಸರು (೨.೩೬ ಲಕ್ಷ ಹೆಕ್ಟೇರ್), ಶೇಂಗಾ (೯೩ ಸಾವಿರ
ಹೆಕ್ಟೇರ್) ಬೆಳೆಗಳದ್ದೂ ಇದೇ ಪರಿಸ್ಥಿತಿಯಾಗಿದೆ. ಹೀಗಾಗಿ ಅನ್ನದಾತನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಅನ್ನದಾತ ಬೆಳೆವಿಮೆ ಮಾಡಿಸಿದ್ದು, ಈ ಬೆಳವಣಿಗೆಗೆ ಕೇಂದ್ರ ಸರಕಾರದಿಂದ ಪ್ರಶಂಸೆ ವ್ಯಕ್ತವಾಗಿದೆ. ಒಟ್ಟು ೧೬ ಲಕ್ಷ ಜನ ಬೆಳೆವಿಮೆಯಲ್ಲಿ ನೋಂದಣಿ ಮಾಡಿಸಿದ್ದು, ರಾಜ್ಯದ ಒಟ್ಟು ೧೯೪ ಗ್ರಾಮ ಪಂಚಾಯತ್‌ಗಳಲ್ಲಿ ೩೫.೯೦ ಕೋಟಿ ರುಪಾಯಿ ಪರಿಹಾರ ದೊರಕಲಿದೆ. ಇನ್ನು ೧೫-೨೦ ದಿನಗಳಲ್ಲಿ ಬೆಳೆವಿಮೆ ಪರಿಹಾರ ರೈತರಿಗೆ ಸಿಗಲಿದ್ದು, ಆ ಮಟ್ಟಿಗಾದರೂ ಬೆಳೆವಿಮೆಯು ಅನ್ನದಾತನ ಮುಖದಲ್ಲಿ ನಗುವನ್ನು ಅರಳಿಸಲಿದೆ, ತೃಪ್ತಿಗೆ ಕಾರಣವಾಗಲಿದೆ.

ತಾಪಮಾನಕ್ಕೆ ತತ್ತರಿಸಿದ ಜನ: ಆಗಸ್ಟ್ ಮಾಸವು ಭರ್ಜರಿ ಮಳೆಯಾಗಿ ಭುವಿಯ ತುಂಬೆಲ್ಲಾ ಹಸಿರು ಕಾಣುವ ಪರ್ವಕಾಲ. ಇಂಥ ದೃಶ್ಯವನ್ನು ಹಿಂದೆ ನಮ್ಮಂಥವರು ಸಾಕಷ್ಟು ಸಲ ಕಂಡದ್ದಿದೆ. ಆದರೆ ಈ ಬಾರಿಯ ಮಳೆ ಕೊರತೆಯಿಂದಾಗಿ ಕರ್ನಾಟಕ ತತ್ತರಿಸಿ ಹೋಗಿದೆ. ಆಗಸ್ಟ್ ೧೬ರವರೆಗಿನ ತಾಪಮಾನ ವನ್ನು ಗಮನಿಸುವುದಾದರೆ, ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ೩೧.೮ ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಕಳೆದ ೧೦
ವರ್ಷಗಳಲ್ಲಿ ಮಳೆಗಾಲದ ಅವಽಯಲ್ಲಿನ ದಾಖಲೆಯ ಉಷ್ಣತೆಯಾಗಿದೆ. ಇವೆಲ್ಲವನ್ನೂ ಗಮನಿಸಿದರೆ, ಈ ವರ್ಷವಿಡೀ ಮಳೆಯ ಕೊರತೆಯಿಂದಾಗಿ ರಾಜ್ಯವು
ಸಂಪೂರ್ಣ ಬರಗಾಲ ಎದುರಿಸುವ ಹಂತಕ್ಕೆ ತಲುಪುವ ಮುನ್ಸೂಚನೆಯಿದೆ.

ಇದರಿಂದಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಮಳೆಗಾಲದಲ್ಲೇ ಹೀಗೆ ನೀರಿಗೆ ಹಾಹಾಕಾರ ಮತ್ತು ಅತೀವ ತಾಪಮಾನವನ್ನು ಅನುಭವಿಸುವ ಸನ್ನಿವೇಶ ಉಂಟಾಗಿದ್ದು, ಬೇಸಿಗೆ ಸಮಯದಲ್ಲಿ ಇದು ಇನ್ನೂ ತಾರಕಕ್ಕೇರುವ ಸಂಭವವಿದೆ. ಹಾಗಾದಲ್ಲಿ ಅನ್ನದಾತನ ಪರಿಸ್ಥಿತಿ ಶೋಚನೀಯವಾಗಲಿದೆ. ಮುಂಬರುವ ಬೇಸಿಗೆ ಕಾಲಕ್ಕೆ ಈಗಲೇ ಸಮರ್ಪಕವಾಗಿ ನೀರಿನ ಸಂಗ್ರಹ ಮಾಡಿಕೊಳ್ಳಬೇಕಾದ ಅನಿವಾರ್ಯ ಸರಕಾರದ ಮುಂದಿದೆ. ಈ ವಿಚಾರದಲ್ಲಿ ಅಸಡ್ಡೆ ತೋರಿದರೆ
ಕರ್ನಾಟಕದಲ್ಲಿ ಬಹುದೊಡ್ಡ ದುರಂತಕ್ಕೆ ಸರಕಾರವೇ ನಾಂದಿಹಾಡಿದಂತಾಗುತ್ತದೆ. ರೈತ ತನ್ನ ಬೆಳೆಯನ್ನು ನಂಬಿಕೊಂಡು ಸಾಲಮಾಡಿ ಬಿತ್ತನೆ ಮಾಡಿ ಫಸಲನ್ನು ನಿರೀಕ್ಷಿಸುತ್ತಿದ್ದ. ಆದರೆ ಈ ಬಾರಿ, ‘ಅಸಲೂ ಇಲ್ಲ ಫಸಲೂ ಇಲ್ಲ’ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ರಾಜ್ಯದ ರೈತರನ್ನು ಕಾಡುತ್ತಿದೆ. ಕರ್ನಾಟಕದಲ್ಲಿ ದಿನಗಳೆದಂತೆ ರೈತರ ಸಂಖ್ಯೆ ಕಡಿಮೆಯಾಗುತ್ತಿದ್ದು, ವರುಣನ ಮುನಿಸು ಹೀಗೇ ಮಂದುವರಿದರೆ ರೈತರು ಕೃಷಿಯನ್ನು ಬಿಟ್ಟು ಕೂಲಿಮಾಡಿ ಜೀವನ ಸಾಗಿಸಬೇಕಾಗುವ ಪರಿಸ್ಥಿತಿ ಉಂಟಾಗಬಹುದು.

ಮನೋಬಲ ಹೆಚ್ಚಿಸಬೇಕಿದೆ: ಈಗಾಗಲೇ ಉಲ್ಲೇಖಿಸಿದಂತೆ ರಾಜ್ಯದ ರೈತ ಈಗಾಗಲೇ ಹತಾಶೆಯಲ್ಲಿ ಸಿಲುಕಿದ್ದಾನೆ. ಈ ಸಂದರ್ಭದಲ್ಲಿ ಆತನ ಮನಸ್ಸು ವಿಚಲಿತ ಗೊಂಡು ಆತ್ಮಹತ್ಯೆಯಂಥ ದುಡುಕಿನ ಹೆಜ್ಜೆಯಿಡುವ ವಿಚಾರ ಅವನ ಮನಸ್ಸಿನಲ್ಲಿ ಸುಳಿದಾಡುವುದು ಸಹಜ. ಹೀಗಾಗಿ ರೈತನಲ್ಲಿ ಮನೋಬಲ ತುಂಬುವಂಥ ಕೆಲಸ ಸರಕಾರಗಳಿಂದ ಆಗಬೇಕಿದೆ. ಕೃಷಿಯನ್ನೇ ನಂಬಿ ಕುಳಿತಿರುವ ಅನ್ನದಾತನಿಗೆ ಪರಿಹಾರ ರೂಪದಲ್ಲಿ ಒಂದಿಷ್ಟು ಸಹಾಯ ಮಾಡುವ ಕಾರ್ಯಕ್ಕೆ ಸರಕಾರ ಮುಂದಾಗಬೇಕು. ಈಗಾಗಲೇ ಘೋಷಣೆಯಾಗಿರುವ ಯೋಜನೆ ಗಳು ಜನರಿಗೆ ತಲುಪುತ್ತಿವೆಯೇ ಇಲ್ಲವೇ ಎನ್ನುವುದರ ಬಗ್ಗೆಯೂ ಸರಕಾರ ಗಮನಹರಿಸಬೇಕಿದೆ. ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಬರದ ಪರಿಸ್ಥಿತಿಯನ್ನು ಅಧ್ಯಯನ ಮಾಡಲೆಂದು ಸೂಕ್ತ ಸಮಿತಿಯೊಂದನ್ನು
ರಚಿಸಬೇಕು. ಆ ಸಮಿತಿಯು ಬರಪೀಡಿತ ಪ್ರದೇಶಗಳಿಗೆ ಭೇಟಿಯಿತ್ತು, ಅನ್ನದಾತರ ಪರಿಸ್ಥಿತಿಗಳನ್ನು ಸಮರ್ಥವಾಗಿ ಅವಲೋಕಿಸಬೇಕು. ಅವರು ನೀಡುವ ವರದಿಯ ಅನುಸಾರ ರಾಜ್ಯ ಸರಕಾರ ಕ್ಷಿಪ್ರಕ್ರಮ ಕೈಗೊಳ್ಳಬೇಕಿದೆ.

ಸೂಕ್ತ ಪರಿಹಾರ ನೀಡಿ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಬೇಕಿದೆ. ಇನ್ನು, ರಾಜ್ಯದಲ್ಲಿ ಈಗಾಗಲೇ ಶುರುವಾಗಿರುವ ಪವರ್‌ಕಟ್ ಸಮಸ್ಯೆಗೆ ರಾಜ್ಯ ಸರಕಾರ ಆದಷ್ಟು ಬೇಗ ಪರಿಹಾರೋಪಾಯ ಕಂಡುಕೊಳ್ಳದಿದ್ದಲ್ಲಿ, ಮುಂಬರುವ ದಿನಗಳಲ್ಲಿ ಸಾಕಷ್ಟು ಸಮಸ್ಯೆಯನ್ನು ಅದು ಎದುರಿಸಬೇಕಾಗುತ್ತದೆ. ಪ್ರಜೆಗಳ ಬದುಕಿಗೆ ಸಂರಕ್ಷಣೆ ಒದಗಿಸಲೆಂದೇ ಈ ಸರಕಾರ ಅಧಿಕಾರಕ್ಕೆ ಬಂದಿರುವುದು ಎನ್ನುವ ವಿಚಾರವನ್ನು ಅದರ ಆಳುಗರಿಗೆ ನಾವು ಮತ್ತೆ ಮತ್ತೆ ನೆನಪು
ಮಾಡಿಕೊಡುವ ಪರಿಸ್ಥಿತಿ ಬಾರದಿರಲಿ ಎಂಬುದೇ ನಮ್ಮ ಆಶಯ.

Leave a Reply

Your email address will not be published. Required fields are marked *