Sunday, 15th December 2024

ಭಾರತದ ಮಾನ ಕಳೆಯಲು ದೇಶಿ-ವಿದೇಶಿ ಪತ್ರಕರ್ತರು ಸಾಕು !

ನೂರೆಂಟು ವಿಶ್ವ

ಕೆಲವು ವರ್ಷದ ಹಿಂದೆ ‘ಫೈನಾನ್ಶಿಯಲ್ ಟೈಮ್ಸ್’ನ ಅಮೆರಿಕ ಆವೃತ್ತಿಯಲ್ಲಿ ಒಂದು ಚಿತ್ರ ಪ್ರಕಟವಾಗಿತ್ತು. ಅದು ‘ಇಲ್ಲಿ ಯಾರೂ ಉಗುಳಬಾರದು, ಇಲ್ಲಿ
ಯಾರೂ ಮೂತ್ರ ವಿಸರ್ಜನೆ ಮಾಡಬಾರದು’ ಎಂದು ಗೋಡೆ ಮೇಲೆ ಬರೆದ ಫೋಟೊ. ಭಾರತದಲ್ಲಿ ಸಾರ್ವಜನಿಕ ಸ್ವಚ್ಛತೆ, ನೈರ್ಮಲ್ಯ ಯಾವ ಮಟ್ಟದಲ್ಲಿದೆ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲು ಈ ಫೋಟೊವೊಂದೇ ಸಾಕು. ಅದನ್ನು ನೋಡಿದ ಯಾರಿಗಾದರೂ ಭಾರತದಲ್ಲಿ ಜನ ಕಂಡ ಕಂಡಲ್ಲಿ ಉಗುಳುತ್ತಾರೆ, ಮೂತ್ರ ವಿಸರ್ಜನೆ ಮಾಡುತ್ತಾರೆ, ಹೊಲಸು ಮಾಡುತ್ತಾರೆ ಎಂಬ ಭಾವನೆ ಮೂಡಿದರೆ ಆಶ್ಚರ್ಯವಿಲ್ಲ.

ಒಂದು ವೇಳೆ ಈ ರೀತಿ ಬರೆದಿದ್ದನ್ನು ಯಾವುದೇ ಯುರೋಪಿಯನ್ ದೇಶಗಳಲ್ಲಾಗಲಿ, ಅಮೆರಿಕದಲ್ಲಾಗಲಿ, ಕೆನಡ, ಆಸ್ಟ್ರೇಲಿಯಾದಲ್ಲಾಗಲಿ ಕಾಣಲು ಸಾಧ್ಯವೇ? ಬಿಲ್‌ಖುಲ್ ಸಾಧ್ಯವಿಲ್ಲ. ಆಫ್ರಿಕಾದ ರವಾಂಡ, ಉಗಾಂಡ, ಕೀನ್ಯಾ, ದಕ್ಷಿಣ ಆಫ್ರಿಕಾದಲ್ಲೂ ನೋಡಲು ಸಾಧ್ಯವಿಲ್ಲ. ಈ ಬರಹಗಳನ್ನು ನಾನು ಯಾವುದೇ ದೇಶದಲ್ಲೂ ಇಲ್ಲಿ ತನಕ ನೋಡಿಲ್ಲ. ಒಂದು ದೇಶದ ಮಾನ, ಮರ್ಯಾದೆ, ಪ್ರತಿಷ್ಠೆ, ಸ್ಥಾನಮಾನವನ್ನು ಹರಾಜು ಹಾಕಲು ಗೋಡೆ ಮೇಲೆ ಬರೆದ ಈ ಎರಡು ಸಾಲುಗಳು ಸಾಕು.

ದೇಶ ಎಷ್ಟೇ ಮುಂದುವರಿಯಲಿ, ಎಂಥದೇ ಅಗ್ರಸಾಧನೆ ಮಾಡಿರಲಿ, ಅವೆಲ್ಲವೂ ಮಣ್ಣುಪಾಲಾಗಲು ಈ ಗೋಡೆ ಬರಹ ಸಾಕು. ಒಂದೇ ದಿನ ನೂರು ಉಪಗ್ರಹಗಳನ್ನು ಉಡಾಯಿಸಿ, ಚಂದ್ರನ ಮೇಲಿಳಿದು ಜಗತ್ತೇ ಬೆರಗಾಗುವ ಅಮೋಘ ಸಾಧನೆ ಮಾಡಿರಲಿ. ಆದರೆ, ಆ ದೇಶದಲ್ಲಿ ಕಂಡ ಕಂಡಲ್ಲಿ ಉಚ್ಚೆ
ಹೊಯ್ಯುತ್ತಾರೆ, ಮಲವಿಸರ್ಜನೆ ಮಾಡುತ್ತಾರೆ, ಎಂಜಲು ಉಗುಳುತ್ತಾರೆ ಅಂದ್ರೆ ಆ ದೇಶದ ಬಗ್ಗೆ ಒಳ್ಳೆಯ ಭಾವನೆ ಮೂಡಲು ಸಾಧ್ಯವೇ ಇಲ್ಲ. ‘ಎಲ್ಲ ಬಣ್ಣ ಮಸಿ ನುಂಗಿತು’ ಎಂಬಂತಾಗುತ್ತದೆ. ತನ್ನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸೋತ ರಾಷ್ಟ್ರ ಅದೆಷ್ಟೇ ದೊಡ್ಡ ಸಾಧನೆ ಮೆರೆದರೇನು ಬಂತು?

‘ಫೈನಾನ್ಶಿಯಲ್ ಟೈಮ್ಸ್’ ವರದಿಗಾರ ಇದೇ ಸಂಗತಿಯನ್ನು ತನ್ನ ವರದಿಯಲ್ಲಿ ಪ್ರತಿಪಾದಿಸಿದ್ದ. ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಹು ನಿರೀಕ್ಷಿತ ‘ಸ್ವಚ್ಛ್ ಭಾರತ್’ ಯೋಜನೆ ಅಂದುಕೊಂಡಷ್ಟು ಯಶಸ್ವಿಯಾಗಿಲ್ಲ ಎಂದು ಹೇಳಿದ್ದ. ಆತನ ವರದಿಗೆ ಪೂರಕವಾಗಿ ಪ್ರಕಟವಾದ ಆ ಫೋಟೊ ನೋಡಿದ
ಯಾರಿಗಾದರೂ ಆತ ಬರೆದಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಅನಿಸುವಂತಿತ್ತು. ಒಂದು ವೇಳೆ ‘ಸ್ವಚ್ಛ್ ಭಾರತ್’ ಯೋಜನೆ ಯಶಸ್ವಿಯಾಗಿಯೂ, ಆ ಗೋಡೆ ಬರಹ ಬರೆಯುವಂತಾಗಿದೆ ಅಂದ್ರೆ ಮೂಲದಲ್ಲೇ ಏನೋ ದೋಷವಿದೆ ಎಂದು ಯಾರಿಗಾದರೂ ಅನಿಸದೇ ಇರದು.

ನಾವೇನೋ ಉತ್ಸಾಹದಲ್ಲಿ ‘ಇಲ್ಲಿ ಉಗುಳಬಾರದು, ಮೂತ್ರ ವಿಸರ್ಜನೆ ಮಾಡಬಾರದು, ಮೂತ್ರ ವಿಸರ್ಜಿಸಿದವರಿಗೆ ದಂಡ ವಿಧಿಸಲಾಗುವುದು’ ಎಂದು ಬೋರ್ಡ್ ಬರೆಯಿಸಿ ಹಾಕುತ್ತೇವೆ. ಆದರೆ ದೇಶದ ಮಾನ ಕಳೆಯಲು ಅದೊಂದು ಬೋರ್ಡ್ ಸಾಕು. ಖಂಡಿತವಾಗಿಯೂ ಆ ಬೋರ್ಡಿನಿಂದ ಯಾವ ಪುರು
ಷಾರ್ಥ ಸಾಧನೆಯೂ ಆಗದು. ಬೋರ್ಡ್ ಬರೆಯಿಸು ವುದರಿಂದ ಜನ ಉಗುಳದೇ ಇರುವುದಿಲ್ಲ. ಉಗುಳಬೇಕು ಅಥವಾ ಮೂತ್ರ ವಿಸರ್ಜಿಸಬೇಕೆಂದು ನಿರ್ಧರಿಸಿದವರಿಗೆ ಬೋರ್ಡಿದ್ದರೇನು, ಇಲ್ಲದಿದ್ದರೇನು? ಅವನಿಗೆ ಅದ್ಯಾವುದೂ ವ್ಯತ್ಯಾಸವಾಗುವುದಿಲ್ಲ.

‘ನೋ ಪಾರ್ಕಿಂಗ್’ ಫಲಕದ ಕೆಳಗೇ ವಾಹನ ನಿಲ್ಲಿಸುತ್ತಾರಲ್ಲ, ಅದೇ ರೀತಿ ಆ ಬೋರ್ಡಿನ ಕೆಳಗೇ ಮೂತ್ರ ವಿಸರ್ಜಿಸುತ್ತಾರೆ. ‘ಫೈನಾನ್ಶಿಯಲ್ ಟೈಮ್ಸ್’ ವರದಿಗಾರ ಇದೊಂದು ಫೋಟೊ ಇಟ್ಟುಕೊಂಡು ಹಂತಹಂತವಾಗಿ, ವ್ಯವಸ್ಥಿತವಾಗಿ ಭಾರತದ ಮರ್ಯಾದೆಯನ್ನು ಕೊಚ್ಚಿ ಪಾಲು ಮಾಡಿದ್ದ. ‘ಸ್ವಚ್ಛ್ ಭಾರತ್’
ವಿ-ಲವಾಗಿದೆಯೆಂದು ಸಾಬೀತುಪಡಿಸಲು ಬೇರೆ ಯಾವುದೇ ಸಂಶೋಧನೆ ಬೇಕಿರಲಿಲ್ಲ, ಆಳ ಅಧ್ಯಯನದ ಅಗತ್ಯವೂ ಇರಲಿಲ್ಲ. ಕೇಂದ್ರ ಸರಕಾರ ಸಾವಿರಾರು ಕೋಟಿ ರು. ಖರ್ಚು ಮಾಡಿ, ಒಂದು ಒಳ್ಳೆಯ ಕೆಲಸ ಮಾಡಲು ಹೊರಟರೆ, ಯಾರದೋ ಅವಿವೇಕಿಗಳ ಕ್ಷುಲ್ಲಕ ನಡೆಯಿಂದ ದೇಶದ ಪ್ರತಿಷ್ಠೆ ಜಗತ್ತಿನ ಮುಂದೆ ಮಕಾಡೆ ಮಲಗಿತ್ತು. ಈ ಬೋರ್ಡ್ ಬರೆಯಿಸುವವರ ಮನಸ್ಸಿನಲ್ಲಿ ತಾವು ಒಳ್ಳೆಯ, ಜಾಗೃತಿಯ ಕೆಲಸ ಮಾಡುತ್ತಿದ್ದೇವೆ ಎಂಬ ಸದ್ಭಾವನೆ ಮೊಳೆತಿರುತ್ತದೆ. ಆದರೆ ಮೂಲತಃ ಅವರು ದೇಶದ ಮಾನಕ್ಕೆ ಕುಟಾರಾಘಾತ ರಾಗಿರುತ್ತಾರೆ.

ಭಾರತದಲ್ಲಿ ನೆಲೆಸಿರುವ ವಿದೇಶಿ ಪತ್ರಕರ್ತರು, ವಿದೇಶಿ ಪತ್ರಿಕೆಗಳಿಗೆ ಕೆಲಸ ಮಾಡುವ ಭಾರತೀಯ ಮೂಲದ ವರದಿಗಾರರು ಇಂಥ ಸನ್ನಿವೇಶಗಳನ್ನೇ ಎದುರು ನೋಡುತ್ತಿರುತ್ತಾರೆ. ವಿದೇಶಿ ಪತ್ರಿಕೆಗಳ ಸುದ್ದಿಮನೆಯಲ್ಲಿರುವ ಹಿರಿಯ ಸಂಪಾದಕರನ್ನು ಸಂಪ್ರೀತಗೊಳಿಸಿ, ಬಡ್ತಿ ಗಿಟ್ಟಿಸಿಕೊಳ್ಳಲು ಕಾಲಕಾಲಕ್ಕೆ ಭಾರತೀಯ ಮೂಲದ ವರದಿಗಾರರು ತಮ್ಮ ತಾಯ್ನಾಡಿನ ವಿರುದ್ಧವೇ ವಿದೇಶಿ ಪತ್ರಿಕೆಗಳಿಗೆ ಬರೆಯುತ್ತಾರೆ. ೨೦೧೮ರಲ್ಲಿ ಕೇರಳ ಹಾಗೂ ಕೊಡಗಿನ ಪ್ರವಾಹ ಕುರಿತ
ವರದಿಗಳನ್ನು ವಿದೇಶಿ ಪತ್ರಿಕೆಗಳಲ್ಲಿ ಓದಿದ ಯಾರಿಗಾದರೂ ಭಾರತಕ್ಕೆ ಈಗ ಭೇಟಿ ನೀಡುವುದು ಸುರಕ್ಷಿತವಲ್ಲ ಎಂಬ ಭಾವನೆ ಮೂಡಿದರೆ ಅಚ್ಚರಿಯಿಲ್ಲ. ದೇಶದ ವಿಸ್ತಾರ, ಅಗಲ, ಹರವು, ವ್ಯಾಪ್ತಿ ಗೊತ್ತಿಲ್ಲದ ಈ ಪಡಪೋಶಿಗಳು ಬರೆಯುವ ವರದಿಗಳು ಪ್ರವಾಹಕ್ಕಿಂತ ಭೀಕರ ಹಾಗೂ ಹಾನಿಕಾರಕ. ಆ ವರದಿ ಓದಿದ ಪ್ರವಾಸಿ ಕೇರಳದ ಕಡೆಗೆ ಮುಖ ಹಾಕಲಾರ. ಅದನ್ನು ಗ್ರಹಿಸಿದ ಯಾವ ವಿದೇಶಿ ಬಂಡವಾಳದಾರನೂ ಇಲ್ಲಿ ದಮಡಿ ಕಾಸು ಹೂಡಲಾರ. ನಮ್ಮ ಮರ‍್ಯಾದೆ ತೆಗೆದು ಕೊಳ್ಳುವುದೆಂದರೆ ಇದಕ್ಕಿಂತ ಬೇರೆ ಏನಿದೆ?

ಇದು ವಿದೇಶಿ ಪತ್ರಿಕೆಗಳ ಕತೆಯಾದರೆ, ನಮ್ಮ ಪತ್ರಿಕೆಗಳು ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಅವೂ ಈ ಕೆಲಸವನ್ನು ಬಹಳ ಸಮರ್ಥವಾಗಿ ವಿರೋಧ ಮಾಡುತ್ತ ಬಂದಿವೆ. ಭಾರತ ವಿರೋಧಿ ಸ್ಟೋರಿಗಳನ್ನು ಅತಿ ವಿಜೃಂಭಿಸಿ ಬರೆಯುವ ಪರಿಪಾಠ ಇತ್ತೀಚೆಗಂತೂ ಜಾಸ್ತಿಯಾಗಿದೆ. ಕೆಲವು ತಿಂಗಳುಗಳ ಹಿಂದೆ, ಬೆಂಗಳೂ
ರಿನ ಇಂಗ್ಲಿಷ್ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು- ‘ನಗರದ ಸಾ-ವೇರ್ ಉದ್ಯಮದಲ್ಲಿರುವ ಟೆಕ್ಕಿಗಳಲ್ಲಿ ಶೇ.೩೮ರಷ್ಟು ಮಂದಿ ಅನೈತಿಕ ಸಂಬಂಧ (Extramarital affairs) ಹೊಂದಿದ್ದಾರೆ.’ ಈ ವರದಿಯನ್ನು ಓದಿದ ಯಾರಿಗಾದರೂ ಅನೇಕ ಪ್ರಶ್ನೆಗಳು, ಸಂದೇಹಗಳು ಏಳುವುದು ಸಹಜ.

ಮರ‍್ಯಾದಸ್ಥರು ತಮ್ಮ ಹೆಣ್ಣುಮಕ್ಕಳನ್ನು ಈ ಉದ್ಯಮಕ್ಕೆ ಕಳಿಸಲು ಹಿಂದೇಟು ಹಾಕಬಹುದು. ಇದನ್ನು ಓದಿದವರೊಬ್ಬರು, ‘City software industry is becoming new brothel’ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದರು. ಆ ದಿನದ ಮಟ್ಟಿಗೆ ಈ ವಿಷಯ ಟ್ರೆಂಡ್ ಆಗಿತ್ತು. ಈ ಸ್ಟೋರಿ ಪತ್ರಿಕೆಯಲ್ಲಿ ಪ್ರಕಟವಾಗದಿದ್ದರೆ ಏನು ಆಗುತ್ತಿತ್ತು? ಏನೂ ಆಗುತ್ತಿರಲಿಲ್ಲ ತಾನೇ? ಇಂಥ ವರದಿಯನ್ನು ಅತಿರಂಜಿತವಾಗಿ ಮುಖಪುಟದಲ್ಲಿ ಪ್ರಕಟಿಸಿದರೆ, ಅದನ್ನು ಓದಿದ ಎಂಥವರಿಗಾದರೂ ತಪ್ಪು ಸಮಜೂತಾಗುವುದು ಸಹಜ. ಅದರಲ್ಲೂ ವಿದೇಶಿಯರು ಓದಿದರೆ, ಅವರು ನಮ್ಮ ಜನರ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳದೇ ಹೋಗುವುದಿಲ್ಲ.

ಇಲ್ಲಿ ಒಂದು ಸಂಗತಿಯನ್ನು ಪ್ರಸ್ತಾಪಿಸಬೇಕು, ನಾನು ಐಸ್ ಲ್ಯಾಂಡ್‌ನಲ್ಲಿ ಇದ್ದಷ್ಟು ದಿನಗಳ ಕಾಲ, ಅಲ್ಲಿನ ಪತ್ರಿಕೆಗಳಲ್ಲಿ ಆ ದೇಶದ ಬಗ್ಗೆ ಒಂದೇ ಒಂದು ನೆಗೆಟಿವ್ ಸ್ಟೋರಿಗಳನ್ನು ಓದಲಿಲ್ಲ. ಹಾಗಂತ ಎಲ್ಲ ಸುಸೂತ್ರ ಅಥವಾ ಅದ್ಭುತವಾಗಿದ್ದವು ಎಂದಲ್ಲ. ತೀರಾ ನೆಗೆಟಿವ್ ಸ್ಟೋರಿಗಳಿಗಿಂತ ಪಾಸಿಟಿವ್ ಸುದ್ದಿಯೇ ಮುಖಪುಟದಲ್ಲಿ ದಿನವೂ ಪ್ರಾಧಾನ್ಯ ಪಡೆಯು ತ್ತಿದ್ದವು. ನಾನು ಅಲ್ಲಿ ಇದ್ದಷ್ಟು ದಿನ ಅಲ್ಲಿನ ಪತ್ರಿಕೆಗಳಲ್ಲಿ ಒಂದೇ ಒಂದು ಕ್ರೈಮ್ ಸುದ್ದಿಯೂ ಪ್ರಕಟವಾಗಿರಲಿಲ್ಲ. ‘ಈ ದೇಶದಲ್ಲಿ ಕ್ರೈಮ್ ಘಟಿಸುವುದೇ ಇಲ್ಲವಾ?’ ಎಂದು ಕೇಳಿದಾಗ, ‘ನಮ್ಮ ದೇಶದಲ್ಲಿ ಮೂವತ್ತೆರಡು ವರ್ಷಗಳ ಹಿಂದೆ ಒಂದು ಮರ್ಡರ್ ಆಗಿತ್ತು’ ಎಂದು ಹಿರಿಯರೊಬ್ಬರು ಹೇಳಿದ್ದು ಈಗಲೂ ನೆನಪಾಗುತ್ತಿದೆ. ಆ ದೇಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಕುತೂಹಲ ಮೂಡಿದ್ದು ಆಗಲೇ.

ಯಾವುದೇ ಊರಿಗೆ ಅಥವಾ ದೇಶಕ್ಕೆ ಹೋದಾಗ, ಅದು ಹೇಗಿದೆ ಎಂದು ತಿಳಿದುಕೊಳ್ಳಬೇಕಾದರೆ, ಎರಡು ಕೆಲಸ ಮಾಡಬೇಕು. ಮೊದಲನೆಯದಾಗಿ, ಅಲ್ಲಿನ ನೀರನ್ನು ಕುಡಿದು ವಾತಾವರಣಕ್ಕೆ ತೆರೆದುಕೊಳ್ಳಬೇಕು ಹಾಗೂ ಎರಡನೆಯದಾಗಿ, ಅಲ್ಲಿನ ಪತ್ರಿಕೆಗಳನ್ನು ಓದಬೇಕು. ಪತ್ರಿಕೆಯ ಮುಖಪುಟದಲ್ಲಿ ಬರೀ
ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ಮೋಸ, ವಂಚನೆ, ಆರೋಪ-ಪ್ರತ್ಯಾರೋಪ, ಭ್ರಷ್ಟಾಚಾರ, ಹಗರಣ, ಕರ್ಮಕಾಂಡ ಸುದ್ದಿಯೇ ತುಂಬಿಕೊಂಡರೆ, ಆ ದೇಶದ ಆರೋಗ್ಯ ಹೇಗಿದೆಯೆಂದು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಡ. ಪತ್ರಿಕೆಗಳೇ ಒಂದು ಸಮಾಜದ ಪ್ರತಿಬಿಂಬ. ನಮ್ಮ ಸಮಾಜದ ಮಾನ ಮೂರಾಬಟ್ಟೆ ಮಾಡಲು ವಿದೇಶಿಯರು ಬೇಕಾಗಿಲ್ಲ.

ಪಾಕಿಸ್ತಾನದವರೋ, ಬಾಂಗ್ಲಾದೇಶದವರೋ ಬಂದು ಆ ಕೆಲಸ ಮಾಡಬೇಕಿಲ್ಲ. ಅದನ್ನು ಪತ್ರಿಕೆಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಕೆಲ ದಿನಗಳ ಹಿಂದೆ, ನಮ್ಮ ಪತ್ರಿಕಾ ಕಾರ್ಯಾ ಲಯಕ್ಕೆ ಆಸ್ಟ್ರಿಯಾ ದೇಶದ ‘Die Presse’ ಪತ್ರಿಕೆಯ ಹಿರಿಯ ವರದಿಗಾರರೊಬ್ಬರು ಬಂದಿದ್ದರು. ಅವರು ಸಹ ಭಾರತದ ಪತ್ರಿಕೆಗಳಲ್ಲಿ ಪ್ರಕಟವಾಗುವ ನೆಗೆಟಿವ್ ವರದಿಗಳ ಬಗ್ಗೆ ತಮ್ಮ ತೀವ್ರ ಕಳವಳ ತೋಡಿಕೊಂಡರು. ‘ನಾನು ಭಾರತಕ್ಕೆ ಬರುವುದಕ್ಕಿಂತ ಮುಂಚೆ ಒಂದು ತಿಂಗಳಿನಿಂದ ಮೂರು ಪತ್ರಿಕೆಗಳನ್ನು ನಿಯಮಿತವಾಗಿ ಓದಲಾರಂಭಿಸಿದೆ. ಪ್ರತಿದಿನ ಮುಖಪುಟದ ಶೇ.೮೦ರಷ್ಟು ಸುದ್ದಿ ನೆಗೆಟಿವ್ ವರದಿಗಳಿಂದ ತುಂಬಿಹೋಗಿರುವುದನ್ನು ಗಮನಿಸಿದೆ. ಒಳಪುಟಗಳಲ್ಲೂ ಇದೇ ಕತೆ. ಭಾರತದ ಶೇ.೩೫ರಷ್ಟು ಹಳ್ಳಿಗಳಲ್ಲಿ ಟಾಯ್ಲೆಟ್ ಇಲ್ಲ ಎಂಬ ಸುದ್ದಿ ಓದಿ ನನಗೆ ತಲೆಕೆಟ್ಟುಹೋಗುವಂತಾಗಿತ್ತು. ಭಾರತಕ್ಕೆ ಬರುವುದಾ, ಬೇಡವಾ ಎಂಬ ದ್ವಂದ್ವದಲ್ಲಿ ಕೆಲಕಾಲ ಇದ್ದೆ.

ಇದೊಂದು ಅಂಶ ನನಗೆ ತೀವ್ರ cultural shock ನೀಡಿತ್ತು. ಈ ಸುದ್ದಿಯನ್ನು ಭಾರತದ ಪ್ರಮುಖ ಪತ್ರಿಕೆಯೇ ಪ್ರಧಾನವಾಗಿ ವರದಿ ಮಾಡಿತ್ತು. ಇದು ಒಂದು ದೇಶದ ಪ್ರತಿಷ್ಠೆ, ವರ್ಚಸ್ಸಿಗೆ ದೊಡ್ಡ ಹೊಡೆತ ಕೊಟ್ಟಂತೆ’ ಎಂದು ಆ ಪುಣ್ಯಾತ್ಮ ಅಲವತ್ತುಕೊಂಡಿದ್ದ. ಈ ನಿಟ್ಟಿನಲ್ಲಿ ಇಂಗ್ಲಿಷ್ ಪತ್ರಿಕೆಗಳ ಜವಾಬ್ದಾರಿ ಅತಿ ಮುಖ್ಯ.
ಕನ್ನಡ ಪತ್ರಿಕೆಯಲ್ಲೋ, ಹಿಂದಿ ಪತ್ರಿಕೆಯಲ್ಲೋ ಇಂಥ ವರದಿ ಪ್ರಕಟವಾದರೆ, ಅದನ್ನು ವಿದೇಶಿಯರು ಓದಲಾರರು. ಆದರೆ ಪ್ರಸಾರ ಕಡಿಮೆ ಇರುವ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾದರೂ ಸಾಕು, ಅದರ ಪರಿಣಾಮ ಹೇಳಲಾಗದು. ಇಂಥ ಸುದ್ದಿ ಕಾಳ್ಗಿಚ್ಚಿನಂತೆ, ಇಡೀ ಜಗತ್ತಿನಾದ್ಯಂತ ವೈರಲ್ ಆಗುತ್ತದೆ. ಭಾರತವನ್ನು ಕೆಟ್ಟದಾಗಿ ಚಿತ್ರಿಸಿದರೆ, ಮೋದಿಯವರಿಗೆ ಪ್ರತಿ ಕೂಲ ಪರಿಣಾಮವಾಗುತ್ತದೆಂದು ಭಾವಿಸುವ ಕೆಲವು ವಿಘ್ನ ಸಂತೋಷಿ ನಮ್ಮ ಜನರೇ ಇಂಥ ಸುದ್ದಿ ಬಹುಬೇಗ ಹರಡಲು ಸಹಕಾರಿಯಾಗುತ್ತಾರೆ.

ಮೋದಿಯವರಿಂದಾಗಿ ಭಾರತ ಇಷ್ಟು ಕೆಟ್ಟು ಕಿಲುಸಾರೆದ್ದು ಹೋಗಿದೆ ಎಂದು ವಿದೇಶಿಯರ ಮುಂದೆ ಬಣ್ಣಿಸುವುದಷ್ಟೇ ಅವರ ತಕ್ಷಣದ ಕಾಳಜಿ. ಅದರಿಂದ ರಾಷ್ಟ್ರದ
ಮಾನ ಚಿಂದಿಯಾಗುವುದೆಂದು ಅವರು ಯೋಚಿಸುವುದೂ ಇಲ್ಲ. ಮೋದಿಯವರನ್ನು ಹಳಿಯುವ ಧಾವಂತದಲ್ಲಿ ದೇಶದ ಪ್ರತಿಷ್ಠೆ ಮಣ್ಣುಪಾಲಾಗಲಿದೆ ಎಂಬು ದನ್ನೂ ಲೆಕ್ಕಿಸುವುದಿಲ್ಲ. ಈಗಂತೂ ಸೋಶಿಯಲ್ ಮೀಡಿಯಾದ ಜಮಾನ. ಕ್ಷಣಾರ್ಧ ದಲ್ಲಿ ಇಂಥ ನೆಗೆಟಿವ್ ಸುದ್ದಿ ಜಗತ್ತಿನಾದ್ಯಂತ ವೈರಲ್ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ ಇನ್ನೊಂದು ವಿಚಿತ್ರ ಬೆಳವಣಿಗೆ ಗಮನಿಸಿರಬಹುದು. ಅದೇನೆಂದರೆ, ಭಾರತದ ರಾಜಕಾರಣಿ ಗಳು ವಿದೇಶಗಳಿಗೆ ಹೋಗಿ ನಮ್ಮ ದೇಶ ಹಾಗೂ ತಮ್ಮ ವಿರೋಧಿಗಳನ್ನು ಟೀಕಿಸುವುದು. ಕೆಲ ದಿನಗಳ ಹಿಂದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜರ್ಮನಿ ಹಾಗೂ ಬ್ರಿಟನ್‌ಗೆ ಹೋದಾಗ, ಪ್ರಧಾನಿ ಮೋದಿ, ಬಿಜೆಪಿ ಹಾಗೂ ಆರೆಸ್ಸೆಸ್‌ನ್ನು ಕಟುವಾಗಿ ಟೀಕಿಸಿದರು. ಆರೆಸ್ಸೆಸ್ ಹಾಗೂ ಮುಸ್ಲಿಂ ಭ್ರಾತೃತ್ವದ ಬಗ್ಗೆ ಅವರು ವ್ಯಕ್ತಪಡಿಸಿದ ಅನಿಸಿಕೆ ಸದಾಶಯ ಗಳಿಂದಂತೂ ಕೂಡಿರಲಿಲ್ಲ.

ರಾಹುಲ್ ಗಾಂಧಿಯವರು ತಾವು ಮಾತಾಡಿದ ಎಲ್ಲ ಸಭೆಗಳಲ್ಲೂ ಮೋದಿ ಪ್ರಧಾನಿಯಾದ ನಂತರ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ,ಆರ್ಥಿಕ ಪ್ರಗತಿ ಕುಂಠಿತವಾಗಿದೆ, ಜನರ ಮಧ್ಯೆ ದ್ವೇಷ, ಅಸೂಯೆ, ಅಪನಂಬಿಕೆ ಹೆಚ್ಚಾಗಿ ಅನಿಶ್ಚಿತ ವಾತಾವರಣ ಹರಡುತ್ತಿದೆ, ತಮ್ಮ ವಿಚಾರಧಾರೆಯನ್ನು ಒಪ್ಪದವ ರನ್ನು, ಪ್ರತಿಭಟಿಸುವವರನ್ನು ಹತ್ತಿಕ್ಕುವ, ಕೊಚ್ಚುವ, ಕೊಲ್ಲುವ ಪ್ರವೃತ್ತಿ ಹೆಚ್ಚುತ್ತಿದೆ ಎಂದೆಲ್ಲ ಓತಪ್ರೋತವಾಗಿ ತಮ್ಮ ನಾಲಗೆ ಹರಿಯಬಿಟ್ಟರು. ವಿದೇಶಿ ನೆಲದಲ್ಲಿ ಅವರು ಹಾಗೆ ಮಾತಾಡುವ ಅವಶ್ಯಕತೆಯೇ ಇರಲಿಲ್ಲ. ತಾನು ಮೋದಿ ವಿರುದ್ಧ ಮಾತಾಡುತ್ತಿದ್ದೇನೆ ಎಂಬುದಕ್ಕಿಂತ, ಭಾರತದ ವಿರುದ್ಧ, ತನ್ನ ತಾಯ್ನಾಡಿನ ವಿರುದ್ಧ
ಮಾತಾಡುತ್ತಿದ್ದೇನೆ ಎಂಬ ವಿವೇಕ, ವಿವೇಚನೆ ಅವರಿಗೆ ಇರಬೇಕಿತ್ತು. ಒಂದು ವೇಳೆ ರಾಹುಲ್ ಗಾಂಧಿಯವರು ಮೋದಿ ಯವರನ್ನು ಹೊಗಳದಿದ್ದರೂ, ತೆಗಳದಿದ್ದರೂ ಅವರ ಪ್ರತಿಷ್ಠೆ ಹೆಚ್ಚುತ್ತಿತ್ತು. ವಿದೇಶಿ ನೆಲದಲ್ಲಿ ತಮ್ಮ ಪ್ರಧಾನಿಯನ್ನು ರಾಹುಲ್ ಬಿಟ್ಟುಕೊಡಬಾರದಿತ್ತು ಎಂದೇ ಎಲ್ಲರೂ ಅಂದರು.

ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಾಗ, ಅಪ್ಪಿತಪ್ಪಿಯೂ ತಮ್ಮ ರಾಜಕೀಯ ವಿರೋಧಿಗಳ ಬಗ್ಗೆ ಮಾತಾಡುವುದಿಲ್ಲ. ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಎಲ್ಲಿ ಹೋದರೂ ತಮ್ಮ ಉತ್ತರಾಧಿಕಾರಿ ಟ್ರಂಪ್ ಬಗ್ಗೆ ತುಟಿಪಿಟಿಕ್ಕೆನ್ನುತ್ತಿರಲಿಲ್ಲ. ಅಧ್ಯಕ್ಷ ಪಟ್ಟದಿಂದ ಇಳಿದು ಇಷ್ಟು ವರ್ಷ ಗಳಾದರೂ ಒಬಾಮ ಈ ವಿಷಯದಲ್ಲಿ ಜಂಟಲ್‌ಮನ್! ಈ ವಿಷಯದಲ್ಲಿ ನಮ್ಮ ರಾಜಕಾರಣಿಗಳಿಗೆ ಅದೇನು ರೋಗವೋ ಗೊತ್ತಿಲ್ಲ. ತಾವು ಎಲ್ಲಿದ್ದೇವೆ, ಏನು ಮಾತಾಡಬೇಕು, ಏನು ಮಾತಾಡಿದರೆ ಅದರ ಪರಿಣಾಮವೇನಾದೀತು, ಇದ್ಯಾವುದನ್ನೂ ಲೆಕ್ಕಿಸದೇ ನಾಲಗೆ ಹರಿಯಬಿಡುತ್ತಾರೆ. ತಾನು ಏನೇ ಮಾತಾಡಿ
ದರೂ ಮೊದಲು ಹೋಗುವುದು ತನ್ನ ದೇಶದ ಮರ‍್ಯಾದೆ ಎಂಬ ಕಾಳಜಿಯಿಂದ ಅವರು ಅವುಡುಗಚ್ಚಿ ಕುಳಿತಿರುತ್ತಾರೆ, ತಮ್ಮ ರಾಜಕೀಯ ವಿರೋಽಗಳನ್ನು ಟೀಕಿಸಬೇಕೆಂಬ ಹಂಬಲವಿದ್ದರೂ.

ನಮ್ಮ ದೇಶದ ರಾಜಕಾರಣಿಗಳಲ್ಲಿ ಈ ಕಾಳಜಿ ಏಕಿಲ್ಲ? ರಾಹುಲ್ ಗಾಂಧಿ ಅವರು ವಿದೇಶಗಳಲ್ಲಿ ಮೋದಿ ಹಾಗೂ ಭಾರತವನ್ನು ಟೀಕಿಸಿದ್ದು ಅದೇ ಮೊದಲಲ್ಲ. ಪ್ರತಿಸಲ ಅಲ್ಲಿಗೆ ಹೋದಾಗಲೂ ಈ ಕೆಲಸವನ್ನು ಅತ್ಯಂತ ಪ್ರೀತಿ ಹಾಗೂ ನಿಷ್ಠೆಯಿಂದ ಮಾಡುತ್ತಾರೆ. ಕಳೆದ ಸಲ ಅಮೆರಿಕಕ್ಕೆ ಹೋದಾಗಲೂ ಅವರು ದೇಶದ ಮಾನ ತೊಳೆದು ಬಂದಿದ್ದರು. ಮೂಲತಃ ವಿದೇಶಿಯರಿಗೆ ಇಲ್ಲಿನ ರಾಜಕಾರಣದ ಗಂಧ-ಗಾಳಿ ಗೊತ್ತಿರುವುದಿಲ್ಲ. ಆದರೆ ದೇಶದ ವಿರುದ್ಧ, ದೇಶದ ಪ್ರಧಾನಿ ವಿರುದ್ಧ ಮಾತಾಡುತ್ತಿದ್ದಾನೆಂದಷ್ಟೇ ಗೊತ್ತಾಗುತ್ತದೆ. ಹಾಗೆ ಮಾಡುವುದರಿಂದ ಸಣ್ಣವರಾಗುವವರು ತಾವೇ ಎಂಬ ಸಣ್ಣ ಪ್ರಜ್ಞೆಯೂ ಇಲ್ಲದಿದ್ದರೆ, ಇವರೆಲ್ಲ ಹೇಗೆ ನಾಯಕರಾಗಬಹುದು? ಎಂಥಾ ನಾಯಕರಾಗಬಹುದು? ಶಿವನೇ ಶಂಭುಲಿಂಗ!

ಆರು ವರ್ಷದ ಹಿಂದೆ ಹಿಂದೆ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಮುಖಪುಟದಲ್ಲಿ ಕರ್ನಾಟಕ ಹಾಗೂ ಆಂಧ್ರದ ಕೆಲವು ಊರುಗಳಲ್ಲಿ ಆಚರಣೆಯಲ್ಲಿರುವ ‘ಸಿಡಿ’ ಬಗ್ಗೆ ಸುದೀರ್ಘ ಲೇಖನ ಪ್ರಕಟವಾಗಿತ್ತು. ಕಬ್ಬಿಣದ ಕೊಕ್ಕೆಯನ್ನು ಬೆನ್ನಿಗೆ ಹಾಕಿ ಎತ್ತುವ ಆಚರಣೆ ಕುರಿತು ಬರೆಯಲಾಗಿತ್ತು. ಭಾರತದಲ್ಲಿ ಇಂಥ ಕ್ರೂರ, ಅಮಾನ ವೀಯ ಪದ್ಧತಿ ಜಾರಿಯಲ್ಲಿರುವ ಬಗ್ಗೆ ವರದಿಗಾರ ಸವಿವರವಾಗಿ ಬರೆದಿದ್ದ. ಇದನ್ನು ಓದಿದ ಅಮೆರಿಕನ್ ಓದುಗರ ಮನಸ್ಸಿನಲ್ಲಿ ಭಾರತದ ಬಗ್ಗೆ ಕೆಟ್ಟ ಇಮೇಜ್ ಮೂಡುವುದರಲ್ಲಿ ಸಂದೇಹವೇ ಇಲ್ಲ. ಖುದ್ದು ಮೋದಿಯೇ ಭಾರತದ ಬಗ್ಗೆ ಎಷ್ಟೇ ಗುಣಾತ್ಮಕ ಕತೆಗಳನ್ನು ಹೇಳಿದರೂ, ಯಾರೂ ಕೇಳುವುದಿಲ್ಲ, ನಂಬುವುದಿಲ್ಲ. ಈ ಕೆಲಸವನ್ನು ವಿದೇಶಿ ಪತ್ರಕರ್ತರು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಭಾರತದ ಮಾನ ಕಳೆಯಲು ದೇಶಿ-ವಿದೇಶಿ ಪತ್ರಕರ್ತ ಹಾಗೂ ಅವರೊಬ್ಬರು ಸಾಕು!