ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಕರೋನಾ ಮತ್ತು ಲಾಕ್ ಡೌನ್ ನಮ್ಮನ್ನು ಹೈರಾಣಾಗಿಸಿದೆ. ಈ ಎರಡು ವಿಷಯಗಳ ಬಗ್ಗೆ ನಮಗೆ ಅಗತ್ಯ ಕ್ಕಿಂತ ಹೆಚ್ಚು ಗೊತ್ತಿದೆ. ಕಳೆದ ಒಂದು ವರ್ಷದಿಂದ ಇವೆರಡರ ಮಧ್ಯೆ ಜೀವಿಸುತ್ತಿದ್ದೇವೆ. ಈಗ ಮತ್ತೊಮ್ಮೆ ಕರೋನಾ ಮತ್ತು ಲಾಕ್ ಡೌನ್ ಕೂಪಕ್ಕೆ ನಾವೇ ನಮ್ಮನ್ನು ತಳ್ಳಿಕೊಂಡಿದ್ದೇವೆ.
ಒಂದೇ ತಪ್ಪನ್ನು ಅನೇಕ ಬಾರಿ ಮಾಡಿ, ಒಂದೇ ಪಾಠವನ್ನು ಅನೇಕ ಬಾರಿ ಕಲಿಯುತ್ತಿದ್ದೇವೆ. ಆದರೂ ನಮಗೆ ಬುದ್ಧಿ ಬಂದಂತಿಲ್ಲ. ಹಿಂದಿನ ವರ್ಷ ಇದೇ ಸಮಯದಲ್ಲಿ ಲಾಕ್ ಡೌನ್ ಮಾಡಿ ಕುಳಿತಿದ್ದೆವು. ಈ ವರ್ಷವೂ ಅದೇ ಸ್ಥಿತಿ, ಅದೇ ಮನಸ್ಥಿತಿ. ಆದರೆ ನಮ್ಮ ತಪ್ಪಿಗೆ ನಾವು ಪ್ರಧಾನಿ ಮೋದಿಯವರನ್ನು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ದೂಷಿಸುತ್ತಿದ್ದೇವೆ. ಅನಿಷ್ಟಕ್ಕೆ ಶನೈಶ್ಚರನೇ ಕಾರಣ! ಇರಲಿ.
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ, 23.04.20 20 ರಂದು ನಾನೊಂದು ಅಂಕಣ ಬರೆದಿದ್ದೆ. ಆಗಲೂ ಲಾಕ್ ಡೌನ್ ವಿಧಿಸಲಾಗಿತ್ತು. ಜನ ಅವುಡುಗಚ್ಚಿ ಮನೆಯಲ್ಲಿ ಕುಳಿತಿದ್ದರು. ಈಗ ಮತ್ತೊಂದು ಲಾಕ್ ಡೌನ್ ಮುಂದೆ ಮೌನವಾಗಿ ಕುಳಿತಿದ್ದೇವೆ. ಆಗಿನ ಸ್ಥಿತಿಗೂ, ಈಗಿನದಕ್ಕೂ ಸ್ವಲ್ಪವೂ ವ್ಯತ್ಯಾಸವಿಲ್ಲ. ಒಂದು ವರ್ಷ ಕಳೆದರೂ, ನಾವೆಲ್ಲಿದ್ದೇವೋ, ಅಲ್ಲಿಯೇ ಇದ್ದೇವೆ ಅಥವಾ ಇನ್ನೂ ಹಿಂದಕ್ಕೆ ಹೋಗಿದ್ದೇವೆ. ಹಿಂದಿನ ವರ್ಷದ ಆ ಮನಸ್ಥಿತಿಯನ್ನು ನೆನಪಿಸಲು, ಅಂದು ಬರೆದ ಅಂಕಣವನ್ನು ಇಂದು ಯಥಾವತ್ತಾಗಿ ಎತ್ತಿ ಕೊಡುತ್ತಿದ್ದೇನೆ. ರಿವರ್ಸ್ ಗಿಯರಿನಲ್ಲಿ ಒಂದು ವರ್ಷ ಹಿಂದಕ್ಕೆ ಹೋಗಿ ಬರೋಣ….
ಹಾಗೆ ನೋಡಿದರೆ, ಇಂದು ನಾನು ಈ ಅಂಕಣವನ್ನು ಖಾಲಿ ಬಿಡಬೇಕಿತ್ತು ಅಥವಾ ಬರೆಯಲೇಬಾರದಿತ್ತು. ಇದು ಮೌನವನ್ನು ಧೇನಿಸುವ ಸಮಯ. ಲೇಖಕ ಅಥವಾ ಕವಿಗೆ ಸಿಗುವ ಮೌನ, ಬಿಡುವು ಪತ್ರಕರ್ತನಿಗೆ ಸಿಗುವುದಿಲ್ಲ. ಕವಿಯಾದವನು ಮೂಡು ಬಂದಾಗ ಬರೆಯುತ್ತಾನೆ. ಪತ್ರಕರ್ತ ಮೂಡು ತರಿಸಿಕೊಂಡು
ಬರೆಯಬೇಕಾಗುತ್ತದೆ. ಆತ ಏನೇ ಆದರೂ ಬರೆಯಲೇಬೇಕು.
ಮೂಡಿನ ಕುಂಟುನೆಪ ಕೊಟ್ಟು ಸುಮ್ಮನಿರಲಾಗುವುದಿಲ್ಲ, ಕಳ್ಳ ಬೀಳಲಾಗುವುದಿಲ್ಲ. ಪತ್ರಕರ್ತನ ಒತ್ತಾಸೆ ಗಳೆಲ್ಲ ಮೂಡು ಇಲ್ಲದಾಗಲೇ ಚಿಗುರಿಕೊಳ್ಳುತ್ತದೆ. ಎದುರಿಗೆ ಸಾವು – ನೋವನ್ನು ನೋಡುತ್ತಲೇ ಬರೆಯ ಬೇಕಾಗುತ್ತದೆ. ಸಾವಿನ ಮನೆಯ ಗಾಢ ಶೋಕದ ನಡುವೆಯೇ ಭಾವನೆಗಳನ್ನು ಬಸಿದು ಕೊಡಬೇಕಾಗುತ್ತದೆ. ಪ್ಲೇಗ್‌ನಿಂದ ಸಾವಿರಾರು ಜನ ಸತ್ತು ಎಡೆ ಮೌನ ಕವಿದ ಸಮಯದಲ್ಲಿ ಕವಿ ಪ್ಯಾಬ್ಲೋ ನರೋಡಾನನ್ನು ಯಾರೋ ‘ಇತ್ತೀಚೆಗೆ ನೀವು ಯಾವ ಕವನವನ್ನೂ ಬರೆದಿಲ್ಲ ಏಕೆ?’ ಎಂದು ಕೇಳಿದಾಗ, ಯಾರಿಗೂ ಅದರ ಅಗತ್ಯ ಇಲ್ಲ, ಅಗತ್ಯವಿಲ್ಲದಾಗ ಹುಟ್ಟುವ ಸಾಹಿತ್ಯವೆಲ್ಲ ಶುಷ್ಕವಾದುದು.
ನಾನು ಏನನ್ನೂ ಬರೆಯದಿದ್ದಾಗಲೇ ಕವಿಯಾಗೋದು’ ಎಂದು ಹೇಳಿದ ಮಾತು ನೆನಪಾಯಿತು. ಆದರೆ ಈ ಲಕ್ಸುರಿ ಪತ್ರಕರ್ತನಿಗಿಲ್ಲ. ಹೀಗಾಗಿ ಅಂಕಣ ಖಾಲಿಬಿಡುವ, ಬರೆಯದೇ ಸುಮ್ಮನಿರುವ ಅವಕಾಶವನ್ನು
ಬಳಸಿಕೊಳ್ಳಲು ಆಗದಿರುವುದಕ್ಕೆ ನನ್ನನ್ನೇ ಶಪಿಸುತ್ತಾ ಅಕ್ಷರಗಳಿಗೆ ಶರಣಾಗುತ್ತಿದ್ದೇನೆ. ವ್ಯಕ್ತಿಯಾಗಿ, ಬರಹ ಗಾರರಾಗಿ ನಾನು ಇಷ್ಟಪಡುವ, ನಮ್ಮ ತಲೆಮಾರಿನ ಅಕ್ಷರ ಮತ್ತು ಭಾವಜೀವಿಗಳಿಗೆ ಆಪ್ತವಾಗುವ ಸ್ನೇಹಿತ ಜಯಂತ ಕಾಯ್ಕಿಣಿ, ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಬರೆದ ಕೆಲವು ಸಾಲುಗಳು ಕಣ್ಣಿಗೆ ಬಿದ್ದವು.
ನಮ್ಮೆಲ್ಲರ ಅನಿಸಿಕೆಗಳಿಗೆ ಭಾವಸ್ಪರ್ಶ ನೀಡಿ, ಅದನ್ನು ಒಂದು ಸುಂದರ ಅನುಭೂತಿಯಾಗಿಸುವ ಜಯಂತ
ಹೀಗೆ ಬರೆದಿದ್ದರು – ಚಂಡಮಾರುತ ಬಂದಾಗ ದೊಡ್ಡ ದೊಡ್ಡ ಹೆಮ್ಮರಗಳು ಉರುಳುತ್ತವೆ. ಏಕೆಂದರೆ ಅವು ಪ್ರತ್ಯೇಕವಾಗಿರುತ್ತವೆ. ಆದರೆ ಬಿದಿರಿನ ಮೆಳೆಗಳು ಎಂದಿಗೂ ಬುಡಮೇಲಾಗುವುದಿಲ್ಲ. ಏಕೆಂದರೆ ಅವು ಒಂದಕ್ಕೊಂದು ಆತುಕೊಂಡು ಸಂತಿಗೆ ಕುಟುಂಬದಲ್ಲಿರುತ್ತವೆ. ತನ್ನ ಸ್ವಭಾವ (Nature)ದಲ್ಲಿಯ, ವಿಕಾಸ ಮುಖಿಯಲ್ಲದ ಅಪಭ್ರಂಶಗಳನ್ನು, ಭೇದ-ಭಾವಗಳನ್ನು ಕೊಡವಿಕೊಂಡು ಮನುಜಲೋಕ ಒಂದಾಗಲೆಂದೇ ನಿಸರ್ಗ (Nature) ಈ ಭೀಕರ ಹುನ್ನಾರವನ್ನು ಹೂಡಿರಬಹುದೇ?’ ಈಗಲೂ ನಾವು ನಮ್ಮ ನಮ್ಮ ಅಹಂಕಾರ, ಅಜ್ಞಾನ, ಅಸಮಾನತೆ ಮತ್ತು ಅಮಾನವೀಯ ಅವಕಾಶವಾದಿತ್ವಗಳಿಂದ ಹೊರ ಬರದಿದ್ದರೆ, ಯಾರೂ ನಮ್ಮನ್ನು ಬಚಾವ್ ಮಾಡಲಾರರು. ಎಚ್ಚೆತ್ತುಕೊಳ್ಳೋಣ.
ಇದು, ನಮ್ಮೆಲ್ಲರ ಸತ್ವಪರೀಕ್ಷೆಯ ಕಾಲವಷ್ಟೇ ಅಲ್ಲ, ನಮ್ಮ ನಮ್ಮ ಮಿತಿಗಳನ್ನು ಮೀರಿ ಮನುಷ್ಯರಾಗುವ ಒಂದು ತಿದ್ದುಪಡಿಗೆ ಅವಕಾಶವೂ ಹೌದು. ಕರೋನಾ ಪೀಡಿತರ ಮತ್ತು ಶಂಕಿತರ ಉಳಿವಿಗಾಗಿ ತಮ್ಮ ತಮ್ಮ ಸುರಕ್ಷತೆಯನ್ನು ಪಣಕ್ಕೊಡ್ಡಿ ಹಗಲು ರಾತ್ರಿ ಹಲವು ತಿಂಗಳುಗಳಿಂದ ದುಡಿಯುತ್ತಿರುವ ವೈದ್ಯಕೀಯ ಮಹಾ
ಬಳಗ, ಪೊಲೀಸ್ ಬಳಗ, ಸಂಬಂಧಿತ ಎಲ್ಲಾ ಸರಕಾರಿ ವಿಭಾಗೀಯ ಬಳಗ ಮತ್ತು ಅಸಂಖ್ಯಾತ ಸ್ವಯಂ ಸೇವಾ ಸಮೂಹಗಳಿಗೆ ಇಲ್ಲಿಂದಲೇ ಬೆಂಬಲ ನೀಡೋಣ.
ಸರಕಾರಿ ಸೂಚನೆಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಿಂತ ಹೆಚ್ಚಿನ ಸಹಯೋಗ ಬೇರೆ ಇಲ್ಲ. ಈ ಸಮಯದಲ್ಲಿ ನಮ್ಮ ಕಲ್ಪನೆಗೂ ಮೀರಿದ ಸಂಖ್ಯೆಯಲ್ಲಿ ನತದೃಷ್ಟರು ಮನೆಯಿಲ್ಲದೆ, ನೆಲೆಯಿಲ್ಲದೆ, ದೈನಿಕ ಕನಿಷ್ಠ ಗಳಿಕೆಯಿಲ್ಲದೆ ಹಸಿವು, ಅಶಕ್ತತೆ, ಅಭದ್ರತೆಗಳಿಂದ ಕಂಗಾಲಾಗಿ ಒದ್ದಾಡುತ್ತಿರುವಾಗ, ಅವರಿಗಾಗಿ
ಸಹಾನುಭೂತಿ ಹೊಂದೋಣ. ಕೌಟುಂಬಿಕ ಪಿಕ್ನಿಕ್ ಕೋಮಣೆಯ ಆನ್ ಲೈನ್ ತೋರುಗಾಣಿಕೆಯನ್ನು ತೊರೆದು ಸರಳವಾಗಿರೋಣ.
ದುಂದು ಮಾಡದಿರೋಣ. ಮನೇಲಿ ಕೂತು, ಯಾರ‍್ಯಾರೋ ಕಳಿಸುವ ಕಲ್ಪಿತ, ನಕಲಿ ವೈದ್ಯಕೀಯ ಸಲಹೆ, ವೈಷಮ್ಯ ಹರಡುವ ಸುಳ್ಳು ಮಾಹಿತಿಯನ್ನು ಫಾರ್ವರ್ಡ್ ಮಾಡದಿರೋಣ. ಜೀವನ್ಮುಖಿ ವಿಚಾರಗಳನ್ನೇ ಹಂಚಿಕೊಳ್ಳೋಣ. ಅನಿಶ್ಚಿತತೆಯನ್ನು ಮೂಕವಾಗಿ ಎದುರಿಸುತ್ತಿರುವ ಯುವ ಜನಾಂಗಕ್ಕೆ, ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ನಾಳೆಗಳ ಕುರಿತು ಭರವಸೆ, ಅಭಯ ಕೊಡೋಣ. ಆ ಬಗ್ಗೆ ತಾಳ್ಮೆಯಿಂದ ಇರುವಂತೆ ಮನವರಿಕೆ ಮಾಡೋಣ.’
ಪೂರ್ವಗ್ರಹಗಳು ನಮ್ಮನ್ನು ದುರ್ಬಲವಾಗಿಸುತ್ತವೆ, ಜೀವನಪ್ರೀತಿಯಿಂದ ದೂರ ಒಯ್ಯುತ್ತವೆ. ಪ್ರೀತಿಗೆ ಮಾತ್ರ ಉಳಿಸುವ ಶಕ್ತಿಯಿದೆ. ಪ್ರಕೃತಿಯ ಮೂಲಗುಣ ಅದು. ಸಹಜೀವಿಗಳ ಕುರಿತ ಪ್ರೇಮವೇ ನಿಜವಾದ ಜೀವನ ಪ್ರೇಮ. ‘ನಮಗೇನೂ ಆಗುವುದಿಲ್ಲ’, ಯಾರಿಗೇನಾದರೂ ಆದರೆ ನಮಗೇನು?’ ಎನ್ನುವ ಪ್ರತ್ಯೇಕ ಮನೋವೃತ್ತಿ ನಮ್ಮನ್ನೇ ಬಲಿ ತೆಗೆದುಕೊಂಡೀತು.
ನಿಯಮ ಪಾಲನೆ, ಸಹನೆ, ಸಹಾನುಭೂತಿ, ಪ್ರೀತಿ ಮತ್ತು ಸಂಯುಕ್ತ ಮಾನವೀಯ ವಿವೇಕ ನಮ್ಮೆಲ್ಲರನ್ನೂ ಖಂಡಿತ ಉಳಿಸುತ್ತದೆ. Actually its time to pause…introspect..absorb and outgrow. People who write otherwise should read. People who read otherwise should write…’ ಎಂದು ಜಯಂತ ಬರೆದಿದ್ದರು.
ನಿಜಕ್ಕೂ ಇವು ಎಷ್ಟು ಸರಳ, ಸುಂದರ ಮತ್ತು ಶಕ್ತಿಪೂರ್ಣವಾದ ಮಾತುಗಳು. ಜಯಂತ ಹೇಳಿದ ಪ್ರತಿ ಮಾತನ್ನು ಈ ಸಂದರ್ಭದಲ್ಲಿ ಕೇಳಿಸಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ನಮ್ಮ ಒಳಗಣ್ಣನ್ನು ತೆರೆದು ಕೊಳ್ಳದಿದ್ದರೆ, ವಿವೇಕ, ಮೌನ, ಸಹನೆ, ಸಂಯಮವನ್ನು ನಮ್ಮೊಳಗೆ ಮರುಪೂರಣ ಮಾಡಿಕೊಳ್ಳದಿದ್ದರೆ, ಈ ಸಂದರ್ಭದ ಮಹತ್ವವೇ ನಮಗಾಗುವುದಿಲ್ಲ.
ಕಳೆದ ಇಪ್ಪತ್ತು ದಿನಗಳಿಂದ ನನ್ನ ಆಡಿ ಕಾರು ಸುಮ್ಮನೆ ನಿಂತಿದೆ, ಅದರ ಸಂಕಟವನ್ನು ನೋಡಲಾಗುತ್ತಿಲ್ಲ’
ಎಂದು ಫೇಸ್ ಬುಕ್‌ನಲ್ಲಿ ಬರೆದುಕೊಂಡವನಿಗಿಂತ, ಕಳೆದ ಇಪ್ಪತ್ತೇಳು ದಿನಗಳಿಂದ ಊರಿಗೆ ಹೋದ ನನ್ನ ಅಪ್ಪ-ಅಮ್ಮ ಬರಲಾಗದೇ ಈ ಲಾಕ್ ಡೌನ್ ಕಾಲದಲ್ಲಿ ನಾನೊಬ್ಬನೇ ಮನೆಯಲ್ಲಿರುವ ಈ ಹೊತ್ತಿನಲ್ಲಿ,
ನನ್ನ ನಾಯಿಯ ಸಾಂಗತ್ಯ, ಸಾಮೀಪ್ಯ ನನಗೆ ಹೊಸ ಜೀವನಪ್ರೀತಿಯನ್ನು ಕಲಿಸಿದೆ. ಸಂಬಂಧಗಳಿಗೆ ನಾನು ಹೊಸ ಅರ್ಥ ಕಂಡುಕೊಂಡಿದ್ದೇನೆ’ ಎಂದು ಅದೇ ಫೇಸ್ ಬುಕ್‌ನಲ್ಲಿ ಬರೆದುಕೊಂಡವ ಹೆಚ್ಚು ಆಪ್ತನಾಗು ತ್ತಾನೆ.
ಇಡೀ ಜಗತ್ತು ನಿಶ್ಚಲವಾಗಿರುವ ಈ ಹೊತ್ತಿನ ತಳಮಳ, ಅವ್ಯಕ್ತ ಭಾವ, ತಲ್ಲಣ ಹುಟ್ಟಿಸುವ ಅನಿಶ್ಚಿತತೆ, ಊಹೆಗೂ ನಿಲುಕದ ಭವಿಷ್ಯದ ಹೊರಳು ಹಾದಿ, ಸಾವು-ಬದುಕಿನ ಹೋರಾಟ, ಎಡೆ ಆವರಿಸಿರುವ ದುಗುಡ, ಕುದಿ ಮೌನ, ಹೇಳಲಾರದ ದಿಗಿಲು, ಬೇರೆಯವರ ದುಃಖದಲ್ಲೂ ಭಾಗಿಯಾಗಲು ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ, ಸಂಕಟ, ಈ ಎಲ್ಲಾ ಭಾವಗಳು ಸೃಷ್ಟಿಸುವ ವಿಷಾದ, ಸಂಚಿತ ವಿಷಣ್ಣತೆಗಳನ್ನೆಲ್ಲ ನಾವು ಹಿಡಿದಿಟ್ಟುಕೊಳ್ಳುವ ಸಮಯವಿದು.
ಇವೆಲ್ಲವನ್ನೂ ನಮ್ಮೊಳಗೇ ಬಿಟ್ಟುಕೊಳ್ಳುವ ಸಮಯವಿದು. ನಮ್ಮೊಳಗೇ ಕವಿದ ಮೌನವನ್ನು ಕೇಳಿಸಿಕೊಳ್ಳ ಬೇಕಾದ ಸಮಯವಿದು. ಎಂದೋ ಅಪರೂಪಕ್ಕೆ ಸಿಕ್ಕಿದ ನಮ್ಮನ್ನೇ ಹಿಡಿದು ಕುಳ್ಳಿರಿಸಿ ಮಾತಿಗೆ ಕರೆಯುವ,
ಮುಖಾಮುಖಿಯಾಗುವ ಸಮಯವಿದು. ನಮ್ಮ ನಮ್ಮ ದೈನಂದಿನ ರಗಳೆಗಳು ಇದ್ದಿದ್ದೇ. ಆದರೆ ಈ ಲಾಕ್
ಡೌನ್ ನಮ್ಮೊಳಗೇ ಒಂದು ಧ್ಯಾನ ವಿರಚಿತ ತಪೋಭಾವವನ್ನು ಮೂಡಿಸಿ, ಮನುಷ್ಯತ್ವಕ್ಕೆ ನೀರೆರೆಯಬೇಕು. ಇಲ್ಲದಿದ್ದರೆ ನಮ್ಮ ಕಾಳಜಿಗಳಿಗೆ ಅರ್ಥವೇ ಇರುವುದಿಲ್ಲ.
ಪ್ರತಿದಿನ ಪತ್ರಿಕೆಯ ಮುಖಪುಟದಲ್ಲಿ ಕ್ರಿಕೆಟ್ ಸ್ಕೋರ್ ಬೋರ್ಡಿನಂತೆಯೋ, ವಾಣಿಜ್ಯ ಪುಟದಲ್ಲಿ ಪ್ರಕಟಿ ಸುವ ಪೇಟೆ – ಧಾರಣೆಯಂತೆಯೋ ಸಾವಿನ ಸಂಖ್ಯೆಯನ್ನು ಪ್ರಕಟಿಸಿದಂತಾದೀತು. ಕಾರಣ, ಆಗ ನಮಗೆ ಪ್ರತಿ ಸಾವು ಸಹ ಒಂದು ಸಂಖ್ಯೆಯಾಗಬಹುದೇ ಹೊರತು ವ್ಯಕ್ತಿಯನ್ನು ಕಳೆದುಕೊಂಡ ಭಾವ ಮೂಡುವುದಿಲ್ಲ.
ಇದನ್ನೇ ಯೋಗಿ ದುರ್ಲಭಜೀ ಬೇರೆ ರೀತಿಯಲ್ಲಿ ಹೇಳಿದರು – ಮನುಷ್ಯರ ಸಾವನ್ನು ಹೆಡ್ ಲೈನ್‌ಗಳಲ್ಲಿ ನೋಡ ಬೇಡಿ. ನೂರು ಸಾವಿಗೂ, ನೂರಾಹತ್ತು ಸಾವಿಗೂ ಹೆಚ್ಚು ಫರಕ್ಕು ಕಾಣುವುದಿಲ್ಲ. ಸಾವಿನ ಸಂಖ್ಯೆ ಜಾಸ್ತಿ ಆಗುತ್ತಾ ಹೋದಂತೆ ವ್ಯತ್ಯಾಸಗಳು ಕಾಣುವುದಿಲ್ಲ. ಒಬ್ಬ ವ್ಯಕ್ತಿಯ ಸಾವನ್ನು ಸಂಖ್ಯೆಯಲ್ಲಿ ನೋಡಲಾರಂಭಿಸಿದಾಗ, ಸಾವಿನ ಸಂಖ್ಯೆ ಒಂದು ಶಬ್ದವಾಗಿ ಕೇಳಿಸುತ್ತದೆ.
ಸಂಖ್ಯೆ ಏರುತ್ತಾ ಹೋದಂತೆ ಶಬ್ದಗಳ ವ್ಯತ್ಯಾಸವಾಗುತ್ತದೆಯೇ ಹೊರತು ಭಾವಗಳು ಮರಗಟ್ಟುತ್ತವೆ. ಆಗ
ಸಾವಿರ ಸಾವಿಗೆ ದುಃಖಿಸುವಷ್ಟೇ ಎರಡು ಸಾವಿರ ಸಾವಿಗೂ ದುಃ ಖಿಸುತ್ತೇವೆ. ಅದು ಭಾವನೆಗಳು ಖಾಲಿಯಾಗುವ, ಸೂಕ್ಷ್ಮತೆ ಕಳೆದುಕೊಳ್ಳುವ ಸಂದರ್ಭ. ಸಾವು ಹೊತ್ತು ತರುವ ಸಂಕಟಗಳು ಜಡವಾಗುವ ಸಂದರ್ಭ. ಯಾವಾಗ ಸಾವು ಹೆಡ್ ಲೈನ್‌ಗಳಲ್ಲಿ ವಿಜೃಂಭಿಸಿ ಆವಿಯಾಗುತ್ತದೋ, ಮನುಷ್ಯನ ಸಾಮೂಹಿಕ
ಭಾವನೆಗಳು, ಸಂವೇದನೆಗಳು ಬತ್ತುತ್ತಿವೆ ಎಂಬುದರ ಸೂಚಕ.
ಸಾವಿರಾರು ಜನ ಸತ್ತಾಗ ನಮಗೆ ಪ್ರತಿ ಸಾವಿಗೂ ಮರುಗಲಾಗದಿದ್ದರೆ, ನಾವು ಆ ವಿಷಯದಲ್ಲಿ ಮಾನವೀಯತೆ ಜತೆ ರಾಜಿ ಮಾಡಿಕೊಂಡಿದ್ದೇವೆ ಎಂದರ್ಥ.’ ನನಗೆ ಈ ಕಾರಣದಿಂದ, ಈ ಸಂದರ್ಭದ ನಮ್ಮ ನಡವಳಿಕೆ ಬಹಳ ಮುಖ್ಯವಾಗಿ ಕಾಡುತ್ತದೆ. ನನ್ನೊಬ್ಬನ ನಡೆವಳಿಕೆ ಮತ್ತು ಸಮೂಹದ ಭಾಗವಾಗಿ ನನ್ನ ನಡವಳಿಕೆ ಮುಖ್ಯವಾಗುತ್ತದೆ. ರೋಗಿಗಳ ಚಿಕಿತ್ಸೆಗೆ ಬಂದ ವೈದ್ಯರು, ದಾದಿಯರಿಗೆ ಹೊಡೆಯುವ, ಪೊಲೀಸರನ್ನೇ
ಥಳಿಸುವ ಮನಸ್ಸಿನ ಹಿಂದಿನ ಪೈಶಾಚಿಕತೆ ಕಲ್ಲವಿಲಗೊಳಿಸುತ್ತದೆ.
ಇಂಥ ಮನಸ್ಸುಗಳನ್ನು ರೂಪಿಸಿದ ವ್ಯವಸ್ಥೆಯ ಭಾಗವಾಗಿಯೇ ನಾವು ಇರಬೇಕಾದ ಅನಿವಾರ್ಯತೆ ನಮ್ಮಲ್ಲಿ ಮತ್ತಷ್ಟು ಕಳವಳವನ್ನುಂಟು ಮಾಡುತ್ತದೆ. ಇಲ್ಲಿ ಅಂಥ ಕೃತ್ಯಗಳನ್ನೆಸಗಿದ ವ್ಯಕ್ತಿಗಳ ಧರ್ಮ, ಜಾತಿಗಿಂತ, ಮನುಷ್ಯತ್ವವನ್ನೂ ಕಲಿಸದ ಮಾನವೀಯ ಧರ್ಮದ ಸೋಲು ಬಹುವಾಗಿ ಕಾಡುತ್ತದೆ. ಕಾಪಾಡಲು ಬಂದವ ರನ್ನೇ ಕತ್ತರಿಸುವ ಸಂಸ್ಕಾರವನ್ನು ಯಾವ ಧರ್ಮವೂ ಕಲಿಸಲಾರದು. ಆದರೆ ಅದೇ ಧರ್ಮ ಪಿಪಾಸುಗಳ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ನಮ್ಮಲ್ಲಿ ಎಚ್ಚರ ಮತ್ತು ಎಚ್ಚರಿಕೆಯನ್ನು ಮೂಡಿಸುತ್ತದೆ.
ಸಾವಿನ ಮನೆಯಲ್ಲಿ ಕುಳಿತು ಶೋಕಿಸುವುದೂ ಸಾಧ್ಯವಾಗದಿದ್ದರೆ, ಅದು ನಮಗೆ ಸಂಬಂಧವೇ ಇಲ್ಲದ ಘಟನೆ ಎಂಬಂತೆ ಭಾವಿಸಿದರೆ, ಅದು ನಮ್ಮಲ್ಲಿ ಪಾಪಾಸುಕಳ್ಳಿಯನ್ನು ಮೂಡಿಸಬಲ್ಲುದೇ ಹೊರತು ಪುಷ್ಪಪರಾಗ ವನ್ನಂತೂ ಅಲ್ಲವೇ ಅಲ್ಲ. ಕರೋನಾವೈರಸ್ ಇಡೀ ವಿಶ್ವವನ್ನು ತಲ್ಲಣಗೊಳಿಸಿ, ನಮ್ಮ ನಮ್ಮ ವೈಯಕ್ತಿಕ ಸಮಸ್ಯೆಗೆ ಜಾಗತಿಕ ಸ್ವರೂಪ, ವ್ಯಾಪ್ತಿಯನ್ನು ಕೊಟ್ಟಿರುವ ಈ ಮಾರಿಪತ್ತಿನಲ್ಲಿ, ಮನುಷ್ಯತ್ವದ ಸಹಜತೆ ಯನ್ನೂ ನಾವು ನಮ್ಮ ಮನಸ್ಸಿನಲ್ಲಿ ಆವಿರ್ಭವಿಸಿಕೊಳ್ಳದಿದ್ದರೆ, ಅದನ್ನು ಹೀರಿಕೊಳ್ಳಲು ಮೌನಕ್ಕೆಶರಣಾಗ ದಿದ್ದರೆ, ಶೋಕವೂ ನಮ್ಮಲ್ಲಿ ಒಂದು ಮ್ಲಾನವತೆ ಮೂಡಿಸದಿದ್ದರೆ, ನಿಡುಸುಯ್ಯುವಿಕೆಯೂ ನಮಗೆ ಭಾರ ಎನಿಸದಿದ್ದರೆ, ಇದರಿಂದ ಸಿಗುವ ದಟ್ಟ ಅನುಭವವನ್ನು ಮತ್ತು ದತ್ತ ಫಲವನ್ನು ನಾವು ನಮ್ಮದಾಗಿಸಿಕೊಳ್ಳ ದಿದ್ದರೆ, ಜೀವನಸಾಗರದಿಂದ ಬರಿಗೈಲಿ ಬಂದಂತಾಗಬಹುದು.
ಹಾಗಂತ ಯಾವತ್ತೂ ಕುಣಿಯುವವನು, ಹೋಳಿಹಬ್ಬದಂದು ಹುಲಿವೇಷ ಹಾಕಿ, ಮಂಕುಬಡಿದವನಂತೆ ಸುಮ್ಮನೆ ಕುಳಿತವನಂತೆಯೂ ಆಗಬಾರದು. ಇದು ಮಾತಾಡುವ, ಭಾಷಣ ಮಾಡುವ, ಅಬ್ಬರಿಸುವ,
ಬೊಬ್ಬಿರಿಯುವ ಕಾಲವಲ್ಲ. ನಮ್ಮಲ್ಲಿರುವ ಸಾಮಾನ್ಯ ಮತ್ತು ಸಹಜ ಗುಣಗಳನ್ನು ಮುನ್ನೆಲೆಗೆ ತಂದು ಕೊಳ್ಳುವ ಕಾಲ. ಮಹಾ ಬುದ್ಧಿವಂತರು, ಮುಂಗಾಲಪುಟಕಿಗಳು, ಉದ್ಧಟರ ಮುಂದೆ ಶುದ್ಧ ಬೋಳೆ ಸ್ವಭಾವದವರಂತೆ ವರ್ತಿಸುವ ಕಾಲ.
ಕಾರಣ ಕರೋನಾ ವೈರಸ್ ಆರ್ಭಟದ ಮುಂದೆ ನಮ್ಮದೇನೂ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಅಣುಬಾಂಬನ್ನು ಸೃಷ್ಟಿಸಿ, ಒಂದು ಬಟನ್ ಅದುಮಿದರೆ ವಿಶ್ವವನ್ನೇ ಉಡಾಯಿಸಬ ಎಂದು ಹಾರಾಡುತ್ತಿದ್ದ
ಮನುಷ್ಯ , ಕಣ್ಣಿಗೆ ಕಾಣದ ವೈರಸ್ ಮುಂದೆ ಕಣ್ಣುಕಾಣದಂತಾಗಿದ್ದಾನೆ. ಈಗಲೂ ನಮ್ಮ ಇತಿಮಿತಿಗಳನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ, ಪ್ರಕೃತಿ ನೀಡುತ್ತಿರುವ ಸಂದೇಶಗಳನ್ನು ನಮ್ಮ ಆಂಟೆನಾ ಹೀರಿಕೊಳ್ಳ ದಿದ್ದರೆ, ಭೋರ್ಗಲ್ಲಿನ ಮೇಲೆ ಮಳೆ ಸುರಿದಂತಾದೀತು.
ಕೃತಿ ಬಿಟ್ಟು, ಪ್ರಕೃತಿಯ ವಿರುದ್ಧವಾಗಿ ಹೋದರೆ, ಅದು ನಮ್ಮ ಕಿವಿ ಹಿಂಡಿ ಹೇಳುತ್ತದೆ. ಆಗಲೂ ಬುದ್ಧಿ ಕಲಿಯ ದಿದ್ದರೆ ಕೆನ್ನೆಗೊಂದು ಬಾರಿಸುತ್ತದೆ. ಈ ಮೌನದಲ್ಲಿ ಈ ಸಂಗತಿಗಳು ನಮ್ಮ ಅನುಭವಕ್ಕೆ ಬರಬೇಕು. ಕಳೆದ ಒಂದು ತಿಂಗಳ ಅವಧಿಯಲ್ಲಿ ನಮ್ಮ ಸುತ್ತ ಮುತ್ತಲಿನ ಪರಿಸರ ನಮ್ಮ ಅರಿವಿಗೆ ಬರುವಷ್ಟರ ಮಟ್ಟಿಗೆ ಬದಲಾವಣೆ ಕಂಡಿದೆ.
ಶುಭ್ರ ಆಗಸವನ್ನು ನೋಡದೇ, ಹೊಳೆವ ನಕ್ಷತ್ರಗಳನ್ನು ಕಾಣದೇ, ಪಕ್ಷಿಗಳ ಕಲರವ ಕೇಳದೇ ಅವೆಷ್ಟೋ ವರ್ಷಗಳಾಗಿಬಿಟ್ಟಿದ್ದವು. ನಮ್ಮ ಬದುಕಿನ ಪಯಣದಲ್ಲಿ ಪ್ರಾಣಿ-ಪಕ್ಷಿಗಳೂ ನಮ್ಮ ಸಹವರ್ತಿಗಳು, ಸಂಗಾತಿ ಗಳು ಎಂಬುದನ್ನು ನಾವು ಮರೆತೇ ಬಿಟ್ಟಿದ್ದೆವು. ಈ ಕಾರಣದಿಂದ ಅವುಗಳ ಸಂತತಿಯನ್ನು ಅಳಿಸಿ ಹಾಕುತ್ತಾ ಬಂದಿದ್ದೆವು. ಆಗಲೂ ನಮಗೆ ಏನೂ ಅನಿಸಿರಲಿಲ್ಲ. ಆ ಪ್ರಾಣಿಗಳಿಗೆ, ಸಸ್ಯಗಳಿಗೆ ನಮ್ಮಂತೆ ಜೀವವಿದೆ ಎಂಬ ಸರಳ ಸಂಗತಿಯನ್ನು ಮರೆತಿದ್ದೆವು. ಈಗ ಕರೋನಾ ಆ ಪುಟ್ಟ ಸಂಗತಿಗಳನ್ನು ನಮಗೆ ಕಲಿಸಿದೆ. ತೀರ್ಥವಾಗಿ
ಅಂಗೈ ಮೇಲೆ ಸ್ವೀಕರಿಸಲು ಯೋಗ್ಯವಲ್ಲದ ಗಂಗಾ ನದಿಯ ನೀರು ಇದ್ದಕ್ಕಿದ್ದಂತೆ ಸ್ವಚ್ಛವಾಗಿದೆ.
ಗಬ್ಬುನಾರುತ್ತಿದ್ದ ವೃಷಭಾವತಿ ಶುಭ್ರವತಿಯಾಗಿದ್ದಾಳೆ. ಮೊನ್ನೆ ಆಪ್ತ ಮಿತ್ರ ನಂಜನಗೂಡು ಮೋಹನ ಕುಮಾರ ಒಂದು ಕತೆ ಹೇಳಿದರು. ಒಮ್ಮೆ ಪಂಡಿತನೊಬ್ಬ ನೂರಾರು ಜನರನ್ನು ಕುಳ್ಳಿರಿಸಿಕೊಂಡು ಪ್ರವಚನ ಮಾಡುತ್ತಿದ್ದನಂತೆ. ಪಕ್ಕದಲ್ಲಿ ಹತ್ತಾರು ಕಪ್ಪೆಗಳು ಜೋರಾಗಿ ವಟಗುಟ್ಟುತ್ತಿದ್ದವಂತೆ. ತನ್ನ ಪ್ರವಚನಕ್ಕೆ ಕಪ್ಪೆಗಳ ವಟಗುಟ್ಟುವಿಕೆಯಿಂದ ಅಡ್ಡಿ, ಕಿರಿಕಿರಿಯಾಗುತ್ತಿದೆ ಎಂದು ಪಂಡಿತನಿಗೆ ಅನಿಸಿದ್ದರಿಂದ, ಜೋರಾಗಿ ಸದ್ದು ಎಂದು ಕಿರುಚಿದನಂತೆ. ಮರುಕ್ಷಣಕ್ಕೆ ಕಪ್ಪೆಗಳಲ್ಲ ಗಪ್ ಚುಪ್ !
ಪಂಡಿತ ತನ್ನ ಪ್ರವಚನ ಮುಂದುವರಿಸಿದನಂತೆ. ಪಂಡಿತ ತನ್ನ ಪ್ರಖರ ಪಾಂಡಿತ್ಯ ಪ್ರದರ್ಶನದ ಉತ್ತುಂಗ ದಲ್ಲಿದ್ದಾಗ, ಅಶರೀರವಾಣಿಯೊಂದು ಜೋರಾಗಿ ‘ಸದ್ದು’ ಎಂದು ಕೂಗಿತಂತೆ. ಹಠಾತ್ ತನ್ನ ಪ್ರವಚನ ಸ್ಥಗಿತಗೊಳಿಸಿದ ಪಂಡಿತ ಅತ್ತಿತ್ತ ನೋಡಿದರೆ ಯಾರೂ ಕಾಣಿಸುತ್ತಿಲ್ಲ. ಪಂಡಿತ, ಏನು ಹುಡುಕುತ್ತಿರುವೆ’ ಎಂದು ಅಶರೀರವಾಣಿ ಕೇಳಿತಂತೆ. ಅದಕ್ಕೆ ಪಂಡಿತ ‘ನಾನು ದೇವರ ಮಹಿಮೆ ಬಣ್ಣಿಸುತ್ತಾ, ಅವನ ಸರ್ವ ಗುಣಗಳ ಕುರಿತು ಉಪನ್ಯಾಸ ಮಾಡುತ್ತಿರುವಾಗ ನೀನು ಏಕಾಏಕಿ ಸದ್ದು’ ಎಂದು ಹೇಳಿ ಪ್ರವಚನಕ್ಕೆ ಅಡ್ಡಿಯುಂಟು ಮಾಡಬಹುದಾ? ನನ್ನ ಪ್ರವಚನಕ್ಕೆ ಭಂಗವನ್ನುಂಟು ಮಾಡಿದ್ದು ಸರಿಯಾ ?’ ಎಂದು ಕೇಳಿದನಂತೆ.
ಆಗ ಅಶರೀರವಾಣಿ ‘ಪಂಡಿತನೇ! ನೀನೇಕೆ ಆ ಕಪ್ಪೆಗಳಿಗೆ ಸದ್ದು’ ಎಂದು ಕೂಗಿ ಅವುಗಳ ಬಾಯಿ ಮುಚ್ಚಿಸಿದೆ ?’ ಎಂದು ಕೇಳಿತಂತೆ. ನಾನು ದೇವರ ಬಗ್ಗೆ ಮಾತಾಡುವಾಗ ಆ ಕಪ್ಪೆಗಳೆ ಅಸಹ್ಯ ಸ್ವರದಲ್ಲಿ ವಟವಟ ಎಂದು ಕಿರುಚುತ್ತಿದ್ದವು. ಹೀಗಾಗಿ ‘ಸದ್ದು’ ಎಂದು ಬಾಯಿಮುಚ್ಚಿಸಿದೆ’ ಎಂದು ಹೇಳಿದನಂತೆ. ಆಗ ಅಶರೀರವಾಣಿ
‘ಮೂರ್ಖ ಪಂಡಿತನೇ! ನೀನೇನು ಮಾಡುತ್ತಿzಯೋ, ಆ ಕಪ್ಪೆಗಳೂ ಅದನ್ನೇ ಮಾಡುತ್ತಿದ್ದವು. ಅವೂ ಸಹ ದೇವರ ಭಜನೆ ಮಾಡುತ್ತಿದ್ದವು.
ಅವುಗಳ ಭಾಷೆ ಗೊತ್ತಿಲ್ಲದ ನಿನಗೆ ವಟಗುಟ್ಟಿದಂತೆ ಕೇಳಿಸಿತು. ನಿನ್ನ ಪ್ರವಚನವೂ ಅವುಗಳಿಗೆ ವಟಗುಟ್ಟಿ ದಂತೆಯೇ ಕೇಳಿಸುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀಯಾ? ಅವೂ ಕೂಡ ನಿನ್ನ ಪ್ರವಚನ ಕೇಳಿ ಜೋರಾಗಿ ಸದ್ದು’ ಎಂದು ಕಿರುಚಿಕೊಂಡರೂ ನಿನಗೆ ಅರ್ಥವಾಗಿಲ್ಲ. ಅವು ವಟಗುಟ್ಟುತ್ತಿವೆ ಎಂದು ನೀನು ಅಸಹನೆ ತೋರಿದೆ. ಅವುಗಳನ್ನು ನಿಕೃಷ್ಟವಾಗಿ ಕಂಡೆ. ಹೀಗಾಗಿ ನಾನು ಮಧ್ಯೆ ಪ್ರವೇಶಿಸಿ ನಿನಗೆ ಇಷ್ಟೆ ಹೇಳ ಬೇಕಾಯಿತು. ಬೇರೆಯವರ ಭಾವನೆಗಳನ್ನು ಅರ್ಥ ಮಾಡಿಕೋ , ಅದನ್ನು ಗೌರವಿಸು.
ಈ ಜಗತ್ತು ನಿನ್ನದೊಂದೇ ಅಲ್ಲ, ಗೊತ್ತಿರಲಿ’ ಎಂದು ಹೇಳಿ ಅದೃಶ್ಯವಾಯಿತಂತೆ. ಪಂಡಿತನಿಗೆ ಕಪಾಳ ಮೋಕ್ಷವಾದ ಅನುಭವ! ಈ ಕರೋನಾ ವೈರಸ್ ಎಂಬ ಅಗೋಚರ ಜೀವಿ ಕೂಡ ಅದೇ ಅಗೋಚರವಾಣಿ ಯಂತೆ ಬಂದು ಇಷ್ಟೆಲ್ಲ ಹೇಳುತ್ತಿದೆಯಾ? ನಾವಿನ್ನೂ ಮೂರ್ಖ ಪಂಡಿತನಂತೆ ಪ್ರವಚನ ಪ್ರವೀಣರಾಗಿಯೇ
ಇದ್ದೇವಾ? ‘ನಾ ತಿನ್ನೋದು ಮಾತ್ರ ಅಕ್ಕಿ, ನೀ ಏನ್ ನೋಡ್ತಿ ಕಕ್ಕಾಬಿಕ್ಕಿ’ ಎಂಬ ಕವಿವಾಣಿಯಂತೆ ಇನ್ನೂ ಮೂರ್ಖರ ಸ್ವರ್ಗದಲ್ಲಿ ವಿಹರಿಸುತ್ತಿದ್ದೇವಾ? ಈ ಲಾಕ್ ಡೌನ್ ಕಾಲದಲ್ಲಿ, ನಮ್ಮೊಳಗಿನ ಮೌನ, ಈ ಪ್ರಶ್ನೆ ಗಳಿಗೆ ಉತ್ತರ ಕಂಡುಕೊಳ್ಳೋಣ.