Wednesday, 20th November 2024

Lokesh Kaayarga Column: ಪಂಜಾಬ್‌ ಹಾದಿಯಲ್ಲಿದೆಯೇ ಕರ್ನಾಟಕ ?

ಲೋಕಮತ

ಲೋಕೇಶ್‌ ಕಾಯರ್ಗ

kaayarga@gmail.com

ಪಿಯುಸಿ ತೇರ್ಗಡೆಯಾದ ಸ್ನೇಹಿತರ ಮಗ, ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರವೇಶ ಪರೀಕ್ಷೆ ಬರೆದು ಮುಂದಿನ ವಿದ್ಯಾ ಭ್ಯಾಸಕ್ಕೆ ಅವಕಾಶ ಪಡೆದಿದ್ದ. ಆದರೆ ಆತನ ಹೆತ್ತವರಿಗೆ ಅಲ್ಲಿಗೆ ಕಳುಹಿಸಬೇಕೋ, ಬೇಡವೋ ಎಂಬ ದ್ವಂದ್ವ. ನಾನು,“ಮಗ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದ ಶಿಕ್ಷಣ ಸಂಸ್ಥೆಗೆ ಸೇರಲು ಹೊರಟಿದ್ದಾನೆ, ಕಳುಹಿಸಿಕೊಡಿ” ಎಂದೆ.

ಅವರ ಆತಂಕ ಬೇರೆಯೇ ಇತ್ತು. “ಅಲ್ಲಿ, ಹೊರ ರಾಜ್ಯದವರು, ಹೊರ ದೇಶದವರು ಕೂಡ ಇರುತ್ತಾರೆ. ಮಕ್ಕಳು ಬೇಗ ಹಾದಿ ತಪ್ಪುತ್ತಾರೆ” ಎಂದರು. ಅವರ ಹಾದಿ ತಪ್ಪುವ ಆತಂಕ ನನಗೆ ಅರ್ಥ ವಾಯಿತು. ಕಳೆದ ವರ್ಷ ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮಾದಕ ದ್ರವ್ಯ ದಂಧೆ ಸಂಬಂಧ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿತ್ತು. ಇಂತಹ ಕಡೆ ಮಗ ನನ್ನು ಕಳುಹಿಸಲು ಅವರು ಹಿಂದೇಟು ಹಾಕುತ್ತಿದ್ದರು. ಸನ್ನಡತೆಯಲ್ಲಿ ಬೆಳೆದ ಮಗನ ಬಗ್ಗೆ ವಿಶ್ವಾಸ ವಿಡುವಂತೆ ಹೇಳಿ, ಮಗನನ್ನು ಕಳುಹಿಸಿಕೊಡಲು ತಿಳಿಸಿದೆ. ಈ ಆತಂಕ ಅವರೊಬ್ಬರದ್ದೇ ಅಲ್ಲ. ಮಕ್ಕಳು ವಿದ್ಯಾಭ್ಯಾಸ ನಿಮಿತ್ತ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಹೊರಟು ನಿಂತಾಗ ಬಹುತೇಕ ಎಲ್ಲ ಪಾಲಕರನ್ನು ಕಾಡುವ ತಳಮಳವಿದು. ಕಾರಣ ಸ್ಪಷ್ಟ. ದೂರದ ಪಂಜಾಬಿನಲ್ಲೋ, ಮುಂಬೈನಲ್ಲೋ ಕೇಳಿ ಬರುತ್ತಿದ್ದ ಮಾದಕ ದ್ರವ್ಯದ ದಂಧೆ ಇಂದು ನಮ್ಮ
ಹಳ್ಳಿಗಳಿಗೂ ಕಾಲಿಟ್ಟಿದೆ. ಗ್ರಾಮೀಣ ಭಾಗದ ಯುವ ಜನರೂ ಡ್ರಗ್ ವ್ಯಸನಿಗಳಾಗುತ್ತಿದ್ದಾರೆ. ಸುಲಭ ಹಣ ಗಳಿಕೆಯ ಮಾರ್ಗವಾಗಿ ಈ ದಂಧೆಯ
ಭಾಗವಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಮಾದಕ ದ್ರವ್ಯ ಪಿಡುಗಿನ ವಿರುದ್ಧ ಸಮರ ಸಾರಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಹೇಳಿಕೊಂಡಿದ್ದಾರೆ. ರಾಜ್ಯ
ದಲ್ಲಿ ಈ ಪಿಡುಗು ಎಲ್ಲೆ ಮೀರುತ್ತಿದೆ ಎನ್ನುವುದು ಈ ಮಾತಿನ ತಾತ್ಪರ‍್ಯ. ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆ ಹೆಸರು ಪಡೆದ ನಮ್ಮ ಬೆಂಗಳೂರು ಈಗ ಡ್ರಗ್ ಸಿಟಿ ಎನಿಸಿಕೊಳ್ಳುತ್ತಿದೆ. ಬಂದರು ನಗರಿ ಮಂಗಳೂರು ನಶೆಯ ನಗರಿಯಾಗುತ್ತಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು ಮೊದಲಾದ ಕರಾವಳಿ ಮತ್ತು ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಜಿಲ್ಲೆಗಳು ಗಾಂಜಾ ಸೇರಿದಂತೆ ನಾನಾ ಮಾದಕ ದ್ರವ್ಯಗಳ ಅಡ್ಡೆಯಾಗುತ್ತಿವೆ.

ಡ್ರಗ್ಸ್ ಸಿಟಿ‌

ರಾಜಧಾನಿಯಲ್ಲಿ ಪ್ರತಿದಿನ ಎಂಬಂತೆ ಈ ದಂಧೆ ಸಂಬಂಧ ಪ್ರಕರಣಗಳು ದಾಖಲಾಗುತ್ತಿವೆ. ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಮಾದಕದ್ರವ್ಯ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿಯರು ಸೇರಿದಂತೆ 67 ಮಂದಿಯನ್ನು ಬಂಧಿಸಲಾಗಿದೆ. ಸೆ.೯ರಂದು ಬೆಂಗಳೂರಿನ 12 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಥಾಯ್ಲೆಂಡ್ ದೇಶದಿಂದ ಹೈಡ್ರೋ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಮಹಿಳೆ ಸೇರಿದಂತೆ 15 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಽಸಲಾಗಿತ್ತು. ಇವರಿಂದ 4.5 ಕೋಟಿ ರೂ ಮೌಲ್ಯದ ನಿಷೇಧಿತ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಳೆದ ಜನವರಿಯಿಂದ ಈ ತನಕ ರಾಜಧಾನಿ ಯೊಂದರಲ್ಲೇ ೫೦೦ಕ್ಕೂ ಹೆಚ್ಚು ಮಾದಕ ದ್ರವ್ಯ
ಸೇವನೆ, ಸಂಗ್ರಹ, ಸಾಗಾಟ ಮತ್ತು ಮಾರಾಟ ಸಂಬಂಧ ಪ್ರಕರಣಗಳು ದಾಖಲಾಗಿವೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ಒಂದೇ ನಗರದಲ್ಲಿ 15200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಂದರೆ ನಾವೂ ಕೂಡ ಪಂಜಾಬಿನ ಹಾದಿಯಲ್ಲಿದ್ದೇವೆಯೇ ಎಂಬ ಆತಂಕಕಾಡುತ್ತಿದೆ. ರಾಜ್ಯದ ವಿಚಾರಕ್ಕೆ ಬಂದರೆ ಕಳೆದ ವರ್ಷ 106 ವಿದೇಶಿಯರು ಸೇರಿದಂತೆ 8648 ಆರೋಪಿಗಳನ್ನು ಮಾದಕ ದ್ರವ್ಯ ನಿಯಂತ್ರಣ ಕಾಯಿದೆಯಡಿ ಬಂಧಿಸಲಾಗಿದೆ. ಇವರಿಂದ ನೂರಾರು ಕೋಟಿ ರು. ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಅಂದರೆ ರಾಜ್ಯದ ಯುವಜನತೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ಮಾದಕ ದ್ರವ್ಯ ಜಾಲ ಕಾರ್ಯಾ ಚರಿಸುತ್ತಿರುವುದು ಸ್ಪಷ್ಟ. ಈ ದಂಧೆಯ ಪ್ರಮಾಣಕ್ಕೆ ಹೋಲಿಸಿದರೆ ಬಂಧನಕ್ಕೊಳ ಗಾಗುವವರ ಸಂಖ್ಯೆ ತೀರಾ ಕಡಿಮೆ. ತೀರಾ ರಹಸ್ಯ
ವಾಗಿ, ವಿಶ್ವಾಸದ ಮೇಲೆ ನಡೆಯುವ ದಂಧೆಯಲ್ಲಿ ಯಾರೂ ದೂರು ನೀಡುವುದಿಲ್ಲ. ಪಾಲದಾರರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಮಾತ್ರ ಪೊಲೀಸರಿಗೆ ಸುಳಿವು ನೀಡುತ್ತಾರೆ. ಇತ್ತೀಚೆಗೆ ಮಾದಕ ದ್ರವ್ಯದ ನೇರ ಮಾರಾಟ, ಸಾಗಾಟಕ್ಕಿಂತಲೂ ಡಾರ್ಕ್ ವೆಬ್ ಬಳಸಿ ಆನ್‌ಲೈನ್, ಅಂಚೆ, ಕೊರಿಯರ್ ಮೂಲಕ ಮಾಲುಗಳನ್ನು ತರಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಲ್ಲಿ ಮಾಲು ಪೊಲೀಸರಿಗೆ
ಸಿಕ್ಕಿದರೂ ಆರೋಪಿಗಳನ್ನು ಬಂಧಿಸುವುದು ದೂರದ ಮಾತು. ಬೆಂಗಳೂರಿನ ಯಾವುದೇ ಮೂಲೆಗೆ ಕೇವಲ 20 ನಿಮಿಷದ ಅಂತರದಲ್ಲಿ ಮಾದಕ ದ್ರವ್ಯ ಸರಬರಾಜಾಗುವ ವ್ಯವಸ್ಥೆ ಇದೆ ಎನ್ನುತ್ತಾರೆ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು. ಇದರೊಂದಿಗೆ ನಮ್ಮ ಮೆಡಿಕಲ್ ಸ್ಟೋರ್‌ಗಳೂ ಅಗ್ಗ ದರದಲ್ಲಿ ನಿಷೇಧಿತ ಡ್ರಗ್ಸ್ ಪೂರೈಸುವ ತಾಣಗಳಾಗುತ್ತಿವೆ.

ವ್ಯಸನದ ವ್ಯಥೆ
ಯುವಕ, ಯುವತಿಯರು, ಟೆಕ್ಕಿಗಳು, ವಿದ್ಯಾರ್ಥಿಗಳು ಒಂದು ಬಾರಿ ಈ ಸುಳಿಗೆ ಸಿಲುಕಿದರೆ ಮುಂದೆ ಡ್ರಗ್ಸ್ ದಾಸರಾಗಿ ಕಾಯಂ ಗಿರಾಕಿ ಗಳಾಗುತ್ತಾರೆ. ದುಡ್ಡು ಎಷ್ಟಾದರೂ ಸರಿ, ಮಾಲು ಪಡೆದೇ ತೀರ ಬೇಕೆಂಬ ನಶೆಯಲ್ಲಿ ಮಾಡಬಾರದ ತಪ್ಪುಗಳನ್ನು ಮಾಡುತ್ತಾರೆ. ತಮ್ಮ ಭವಿಷ್ಯವನ್ನು ಮಾತ್ರವಲ್ಲ, ತಮ್ಮನ್ನು ನಂಬಿದ ಮನೆಮಂದಿಯ ಬದುಕನ್ನೂ ಕತ್ತಲೆಗೆ ತಳ್ಳುತ್ತಾರೆ. ಆರಂಭದಲ್ಲಿ ಸ್ನೇಹಿತರೊಂದಿಗೆ
ವಿನೋದಕ್ಕಾಗಿ ಡಗ್ಸ್ ಸೇವಿಸುವವರಿಗೆ ಮುಂದೊಂದು ದಿನ ಕಾಯಂ ವ್ಯಸನಿಗಳಾಗುತ್ತೇವೆ ಎಂಬ ಕಲ್ಪನೆಯೂ ಇರುವುದಿಲ್ಲ. ತೀರಾ ಮರ‍್ಯಾದಸ್ಥ ಕುಟುಂಬದಿಂದ ಬಂದ ಯುವಕ, ಯುವತಿಯರು ಸ್ನೇಹಿತರ ಪಾರ್ಟಿಗಳಲ್ಲಿ ‘ಒನ್ ಟೈಮ್ ಎಕ್ಸಿಪೀರಿಯನ್ಸ್’ ಆಗಿ ಡ್ರಗ್ಸ್ ಸೇವಿಸಿ ಶಾಶ್ವತವಾಗಿ ಹಾದಿ ತಪ್ಪಿದ ಉದಾಹರಣೆಗಳಿವೆ. ಈ ವ್ಯಸನಿಗಳಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು, ಬೆಳಗಾವಿ, ಮೈಸೂರು, ಹುಬ್ಬಳ್ಳಿಯಂಥ ನಗರಗಳಲ್ಲಿ ಡ್ರಗ್ಸ್ ಜಾಲ ತನ್ನ ಬಾಹುಗಳನ್ನು ದಿನದಿಂದ ದಿನಕ್ಕೆ ವಿಸ್ತರಿಸಿಕೊಳ್ಳುತ್ತಿದೆ.‌

ಕಳೆದ ತಿಂಗಳು ಮಂಗಳೂರಿನಲ್ಲಿ ಬಂಧಿತ ನೈಜೀರಿಯಾ ಪ್ರಜೆಯಿಂದ ಆರು ಕೋಟಿಗೂ ಹೆಚ್ಚು ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳ ಲಾಗಿತ್ತು. ಆಫ್ರಿಕಾ ದೇಶಗಳ ಕೆಲವು ಪ್ರಜೆಗಳು, ಶಿಕ್ಷಣಮತ್ತು ಸಿದ್ದ ಉಡುಪು ಮಾರಾಟದ ನೆಪದಲ್ಲಿ ರಾಜ್ಯದ ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳನ್ನು ಸೇರಿ ಈ ದಂಧೆಯಲ್ಲಿ ತೊಡಗಿಸಿ ಕೊಂಡಿರುವುದು ಪೊಲೀಸರಿಗೆ ತಿಳಿದ ವಿಚಾರ.

ಆದರೆ ಇವರನ್ನು ಬಂಧಿಸುವುದೇ ತಲೆನೋವಿನ ವಿಚಾರ. ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗುವ ಭೀತಿಯಿಂದ ಇವರನ್ನು ಬಂಧಿಸಿ ಜೈಲಿಗಟ್ಟುವ ಬದಲು ಗಡಿಪಾರು ಮಾಡಲಾಗುತ್ತಿದೆ. ಗೃಹಸಚಿವ ಪರಮೇಶ್ವರ್ ಅವರ ಪ್ರಕಾರ ಕಳೆದ ಎಂಟು ತಿಂಗಳಲ್ಲಿ, ಮಾದಕ ದ್ರವ್ಯ ದಂಧೆಯಲ್ಲಿ ಪಾಲ್ಗೊಂಡಿದ್ದ ಸುಮಾರು 80 ವಿದೇಶಿಗರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ. ಪೊಲೀಸರ ಪ್ರಕಾರ ಬೆಂಗಳೂರಿನಲ್ಲಿ ವರ್ಷಕ್ಕೆ ಸುಮಾರು 500 ಕೋಟಿ ರೂ.ನಷ್ಟು ಡ್ರಗ್ಸ್ ವಹಿವಾಟು ನಿರಾತಂಕವಾಗಿ ನಡೆಯುತ್ತದೆ. ಅಘ್ಘನಿಸ್ತಾನ, ಪಾಕಿಸ್ತಾನ, ಇರಾನ್, ನೇಪಾಳ, ಭೂತಾನ್, ಥಾಯ್ಲೆಂಡ್, ಲ್ಯಾಟಿನ್ ಅಮೆರಿಕ, ಬ್ರೆಜಿಲ್,‌ ಬೆಲ್ಜಿಯಂ ಮುಂತಾದ ರಾಷ್ಟ್ರಗಳಿಂದ ಪೂರೈಕೆಯಾಗುವ ಮಾದಕ ದ್ರವ್ಯ, ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಹೆಬ್ಬಾಗಿಲು ಎನಿಸಿದ ಪಂಜಾಬ್‌ನ ಪಠಾಣ್‌ಕೋಟ್ ಮೂಲಕ ದೇಶದೊಳಗೆ ನುಸುಳುತ್ತಿದೆ. ಅಲ್ಲಿಂದ ಪಂಜಾಬ್ ಮಾರ್ಗವಾಗಿ ಮುಂಬಯಿ, ಗೋವಾ, ಕೊಚ್ಚಿ, ತಿರುವನಂತಪುರಂ ಮಾರ್ಗವಾಗಿ ಬೆಂಗಳೂರು ತಲುಪುತ್ತದೆ.

ಪಂಜಾಬಿನ ದುರಂತ ಕಥೆ
ಮಾದಕ ದ್ರವ್ಯ ದಂಧೆಯ ಕರಾಳತೆಯನ್ನು ಮನದಟ್ಟು ಮಾಡಿಕೊಳ್ಳಬೇಕಾದರೆ ಇಂದಿನ ಪಂಜಾಬನ್ನು ಒಮ್ಮೆ ಅವಲೋಕಿಸಿದರೆ ಸಾಕು. ತಮ್ಮ ಅಪ್ರತಿಮ ಶೌರ‍್ಯ ಮತ್ತು ಸ್ವಾತಂತ್ರ್ಯ ಪ್ರೇಮಕ್ಕೆ ಹೆಸರಾದ ರಾಜ್ಯ ಇಂದು ವ್ಯಸನಿಗಳ ರಾಜ್ಯವಾಗಿ ಅಲ್ಲಿನ ತಾಯಂದಿರು ಕಣ್ಣೀರಿಡುತ್ತಿದ್ದಾರೆ. ಕೇಂದ್ರ ಸರಕಾರ ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ ಪಂಜಾಬಿನಲ್ಲಿ 66 ಲಕ್ಷಕ್ಕೂ ಹೆಚ್ಚು ಮಾದಕ ದ್ರವ್ಯ ವ್ಯಸನಿಗಳಿದ್ದಾರೆ. ಇವರಲ್ಲಿ ಸುಮಾರು ಏಳು ಲಕ್ಷ ಮಂದಿ 10ರಿಂದ 17 ವರ್ಷದೊಳಗಿನ ಮಕ್ಕಳು. ಸುಮಾರು ಮೂರುವರೆ ಲಕ್ಷ ಮಕ್ಕಳು ಹೆರಾಯಿನ್ ಸೇರಿದಂತೆ ದುಬಾರಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದ ಶೇ.70ರಷ್ಟು ಯುವ ಜನತೆ ಮಾದಕದ್ರವ್ಯ ಅಥವಾ ಮದ್ಯ ವ್ಯಸನಕ್ಕೆ ಒಳಗಾಗಿದ್ದಾರೆ. ಶೇ.67ರಷ್ಟು ಗ್ರಾಮೀಣರ ಪೈಕಿ ಕನಿಷ್ಠ ಒಬ್ಬ ಮದ್ಯ ವ್ಯಸನಿ ಅಥವಾ ಮಾದಕ ದ್ರವ್ಯ ವ್ಯಸನಿ ಇದ್ದಾರೆ.

ಕಳೆದ 3 ವರ್ಷಗಳಲ್ಲಿ ದೇಶ ದಲ್ಲಿ ಮಾದಕವಸ್ತು ಸೇವನೆ ಕಾರಣಕ್ಕೆ ಮೃತಪಟ್ಟ ವರಲ್ಲಿ ಶೇ.21ರಷ್ಟು ಮಂದಿ ಪಂಜಾಬಿಗಳು. ಇವರಲ್ಲಿ ಹೆಚ್ಚಿನವರು 18-30 ವರ್ಷ ವಯಸ್ಸಿನ ವರು ಎನ್ನುವುದು ಈ ದಂಧೆಯ ಕರಾಳತೆಗೆ ಸಾಕ್ಷಿಯಾಗಿದೆ. ಈ ವ್ಯಸನ ಕಾಳ್ಗಿಚ್ಚಿನಂತೆ ನೆರೆ ರಾಜ್ಯಗಳಿಗೂ ಹಬ್ಬಿದೆ. ದೆಹಲಿ, ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲೂ ವ್ಯಸನಿ ಗಳ ಸಂಖ್ಯೆ ಏರುತ್ತಲೇ ಇದೆ.

ಪಂಜಾಬಿನ ಈ ದುರಂತಕ್ಕೆ ಹಲವು ಕಾರಣಗಳಿವೆ. ಹಸಿರು ಕ್ರಾಂತಿಯ ಬಳಿಕ ಕ್ಷಿಪ್ರ ಪ್ರಗತಿ ಕಂಡ ಪಂಜಾಬ್ ದೇಶದ ಶ್ರೀಮಂತ ರಾಜ್ಯವಾಗಿ ಹೊರ ಹೊಮ್ಮಿತ್ತು. ಆದರೆ 80ರ ದಶಕದಲ್ಲಿ ಕಾಣಿಸಿಕೊಂಡ ಖಲಿಸ್ತಾನಿ ಚಳವಳಿ ರಾಜ್ಯದ ದಿಕ್ಕು ದೆಶೆಯನ್ನು ಬದಲಾಯಿಸಿತು. ವಿದೇಶಿ ಶಕ್ತಿಗಳ ಮೂಲಕ ಹರಿದು ಬಂದ ಮಾದಕ ದ್ರವ್ಯದ ನಶೆ ಇಡೀ ರಾಜ್ಯವನ್ನು ವ್ಯಾಪಿಸಿತು. 2020ರಲ್ಲಿ ದೇಶದಲ್ಲಿ ವಶಪಡಿಸಿಕೊಂಡ ಮಾದಕವಸ್ತುಗಳಲ್ಲಿ ಶೇ. 75 ಪಂಜಾಬ್ ವೊಂದರಲ್ಲಿಯೇ ಸಿಕ್ಕಿತ್ತು. ಪಂಜಾಬ್‌ನ ಗಡಿ ಜಿಲ್ಲೆಗಳಿಗೆ ದಿನ ಬೆಳಗಾಗುವುದರೊಳಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮೂಲಕ ಹೆರಾಯಿನ್ ಪೂರೈಕೆ ಯಾಗುತ್ತಿದೆ.

‘ಗೋಲ್ಡನ್ ಕ್ರೆಸೆಂಟ್’ ಎಂದು‌ ಕರೆಯುವ ಅಫ್ಘಾನಿಸ್ತಾನ, ಇರಾನ್ ಮತ್ತು ಪಾಕಿಸ್ತಾನವನ್ನೊಳಗೊಂಡ ನಶೆ ವರ್ತುಲದ ಸಾಮಿಪ್ಯ ಇಡೀ ಪಂಜಾಬಿನ ಯುವ ಜನತೆಯ ಭವಿಷ್ಯವನ್ನು ಕತ್ತಲೆಗೆ ನೂಕಿದೆ. ಮೊದಲು ಯ್ಲೆಂಡ್, ಲಾವೋಸ್ ಹಾಗೂ ಮ್ಯಾನ್ಮಾರ್ ಗಡಿಗಳು ಸೇರುವ ಪ್ರದೇಶ ಈ ದಂಧೆಯ ಕಾರಸ್ಥಾನವಾಗಿತ್ತು. ಇವೆಲ್ಲವೂ ನಮ್ಮ ಕೊರಳಿಗೆ ಸುತ್ತಿಕೊಳ್ಳುವ ವಿಷ ಸರ್ಪಗಳಾಗಿವೆ. ಕಠಿಣ ಪರಿಶ್ರಮಕ್ಕೆ ಹೆಸರಾದ ರಾಜ್ಯದ ರೈತರು ಈಗ ಸುಲಭದಲ್ಲಿ ಹಣ ಗಳಿಸಲು ಮುಂದಾಗುತ್ತಿದ್ದಾರೆ. ಅವರ ಹೊಲಗಳಲ್ಲಿ ಗೋಧಿಯೊಂದಿಗೆ ಗಾಂಜಾ ಮತ್ತು ಇತರ ಮತ್ತು ಬರಿಸುವ ಗಿಡಗಳು ಬೆಳೆಯುತ್ತಿವೆ.

10 ವರ್ಷದೊಳಗೆ ಮಕ್ಕಳು ಧೂಮ ಪಾನಿಗಳಾಗುತ್ತಿದ್ದಾರೆ. ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ಆಲ್ಕೋಹಾಲ್ ನಂತರ ಡ್ರಗ್ಸ್ ಸೇವಿಸುವ ಮೂಲಕ ಬದುಕನ್ನು ‘ಆನಂದಿಸುತ್ತಿದ್ದಾರೆ’. ಯುವಕರು ಪ್ರತಿ ತಿಂಗಳು ಡ್ರಗ್ಸ್ ಮಾರಾಟ ಮತ್ತು ಇಸ್ಪೀಟೆಲೆಗಳ ಮೂಲಕ ಹಣ ಗಳಿಸುತ್ತಿದ್ದಾರೆ. ಇಲ್ಲಿ ಸೋತಾಗ ಅಪರಾಧ ಕೃತ್ಯಕ್ಕಿಳಿಯಲು ಹಿಂಜರಿಯುವುದಿಲ್ಲ. ಮೆಥ್, ಐಸ್, ಹೆರಾಯಿನ್, ಬ್ರೌನ್ ಶುಗರ್, ಸಿಂಥೆಟಿಕ್, ಎಂಡಿಎಂಎ ಇವೆಲ್ಲವೂ ಅಲ್ಲಿನ ಯುವಕರಿಗೆ ಚಿರಪರಿಚಿತ ಹೆಸರು ಗಳು.

ಹಿಂದೊಮ್ಮೆ ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದ, ಆರ್ಥಿಕ ಪ್ರಗತಿಗೆ ಬೆಂಗಾವಲಾಗಿದ್ದ ರಾಜ್ಯ ಈ ನಶೆಯಲ್ಲಿ ಸಿಲುಕಿ ತಾನಾಗಿಯೇ ಕುಸಿದು ಬೀಳುತ್ತಿರುವುದು ಈ ದಶಕದ ದುರಂತಗಳಲ್ಲೊಂದು. ಈ ದುರಂತ ಪಂಜಾಬಿಗೆ ಸೀಮಿತವಾಗುತ್ತಿಲ್ಲ. ಗುಜರಾತ್ ತೀರದಲ್ಲಿ ಕಳೆದ ವಾರ ಭಾರತೀಯ ನೌಕಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 600 ಕೋಟಿ ರುಪಾಯಿಗಳಿಗೂ ಅಽಕ ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡು ಎಂಟು ಮಂದಿ ಇರಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು. ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಆರು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ಇತ್ತೀಚೆಗೆ ಸುಮಾರು 4 ಸಾವಿರ ಕೋಟಿ ರು. ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಐಎಸ್‌ಐ, ಖಲಿಸ್ತಾನಿ ಉಗ್ರರು ಸೇರಿದಂತೆ ವಿದೇಶಿ ಶಕ್ತಿಗಳು ಭಾರತದಲ್ಲಿ ಮಾದಕ ದ್ರವ್ಯ ಜಾಲ ಹರಡಲು ಸತತ ಪ್ರಯತ್ನ ನಡೆಸುತ್ತಿರುವುದು ಈ ಹಿಂದೆಯೇ ಗಮನಕ್ಕೆ ಬಂದಿದೆ. ಮಾದಕ ದ್ರವ್ಯ ದಂಧೆ ನಿಯಂತ್ರಣಕ್ಕಿಂತಲೂ ಇವುಗಳ ದುಷ್ಪರಿಣಾಮಗಳ ಬಗ್ಗೆ ನಮ್ಮ ಯುವಕ/ ಯುವತಿ ಯರಿಗೆ ಅರಿವು ಮೂಡಿಸಿ, ಸ್ವಯಂ ನಿಯಂತ್ರಣದ ಮಾರ್ಗ ತೋರಿಸಿ ಕೊಡುವುದು ಇಂದಿನ ತುರ್ತು. ಕರ್ನಾಟಕ ಇನ್ನೊಂದು ಪಂಜಾಬ್ ಆಗದಿರಲಿ.

ಇದನ್ನೂ ಓದಿ: