ಲೋಕಮತ
ಲೋಕೇಶ್ ಕಾಯರ್ಗ
ಪಶ್ಚಿಮ ಘಟ್ಟ ಸಂರಕ್ಷಣೆ ವಿಚಾರದಲ್ಲಿ ಡಾ. ಮಾಧವ ಗಾಡ್ಗೀಳ್, ಡಾ. ಕಸ್ತೂರಿರಂಗನ್, ಅನಂತ ಹೆಗಡೆ ಅಶೀಶರ ನೇತೃತ್ವದ ಪಶ್ಚಿಮ ಘಟ್ಟ ಕಾರ್ಯಪಡೆ ವರದಿಯನ್ನೂ ಬೇಡ ಎಂದಿದ್ದಾಯಿತು. ಪರ್ಯಾಯಗಳನ್ನು ಸೂಚಿಸದೆ, ತಿದ್ದುಪಡಿಗಳನ್ನು ಮುಂದಿಡದೆ ಎಲ್ಲ ವರದಿಗಳನ್ನು ತಿರಸ್ಕರಿಸುತ್ತಲೇ ಸಾಗಿದರೆ ನಾಳೆ ನಾವು ಸಮಸ್ಯೆಯಲ್ಲಿ ಸಿಲುಕುವುದು ಖಚಿತ. ಒಂದು ವೇಳೆ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಅಂತಿಮ ಅಧಿಸೂಚನೆ ಹೊರಬಿದ್ದರೆ ನಮ್ಮ ಮುಂದೆ ಯಾವುದೇ ಆಯ್ಕೆಗಳಿರುವುದಿಲ್ಲ.
ಭೂಮಿಯು ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ಶಕ್ತವಾಗಿದೆ. ಆದರೆ ಪ್ರತಿ ಮಾನವನ ದುರಾಸೆಯನ್ನಲ್ಲ- ಗಾಂಧೀಜಿಯವರ ಈ ಮಾತು ಭಾರತೀಯರಿಗೆ ಮಾತ್ರವಲ್ಲ ಇಡೀ ಮನುಕುಲಕ್ಕೆ ನೀಡಿದ ಸಂದೇಶ. ರಾಷ್ಟ್ರಪಿತನ
ಜನುಮದಿನದಂದೇ ಈ ಸಂದೇಶವನ್ನು ನೆನಪಿಸಿಕೊಳ್ಳಲು ಕಾರಣವಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತ ಡಾ.ಕೆ ಕಸ್ತೂರಿರಂಗನ್ ವರದಿಯನ್ನು ರಾಜ್ಯಸರಕಾರ ಮತ್ತೊಮ್ಮೆ ತಿರಸ್ಕರಿಸಿದೆ.
ಈ ಸಂಬಂಧ ಕಳೆದ ವಾರ ರಾಜ್ಯ ಸಚಿವ ಸಂಪುಟ ಅಂಗೀಕರಿಸಿದ ನಿರ್ಣಯವನ್ನು ಕೇಂದ್ರಕ್ಕೆ ಕಳುಹಿಸಿ ಕೊಡಲಾ ಗಿದೆ. ಕಸ್ತೂರಿರಂಗನ್ ವರದಿ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್ ಹಸಿರು ಪೀಠ ಹಲವು ಬಾರಿ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಕೇಂದ್ರ ಸರಕಾರವು ರಾಜ್ಯಗಳಿಂದ ವರದಿ ಕೇಳುವ ನೆಪದಲ್ಲಿ ಅಂತಿಮ ಅಧಿಸೂಚನೆ ನಿರ್ಧಾರವನ್ನು ಮುಂದಕ್ಕೆ ಹಾಕುತ್ತಲೇ ಬಂದಿದೆ.
ಕೇಂದ್ರ ಪರಿಸರ ಸಚಿವಾಲಯ 2014ರ ಮಾರ್ಚ್ನಿಂದ ಈ ತನಕ ಆರು ಬಾರಿ ಕರಡು ಅಧಿಸೂಚನೆಗಳನ್ನು ಹೊರಡಿ ಸಿದೆ. ಆದರೆ, ಕರ್ನಾಟಕ ಸೇರಿದಂತೆ ಪಶ್ಚಿಮ ಘಟ್ಟ ಶ್ರೇಣಿಯ ರಾಜ್ಯಗಳ ಆಕ್ಷೇಪದಿಂದಾಗಿ ಅಂತಿಮ ಅಧಿಸೂಚನೆ ಇನ್ನೂ ಬಾಕಿ ಉಳಿದಿದೆ. ಮುಂದೂಡುವ ಈ ಆಟ ಹೆಚ್ಚು ದಿನ ನಡೆಯಲಾರದೆನ್ನುವುದು ನಮ್ಮ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಜನರ ವಿರೋಧವನ್ನು ಎದುರಿಸುವುದಕ್ಕಿಂತ ಈ ಜವಾಬ್ದಾರಿ ಯನ್ನು ಸುಪ್ರೀಂಕೋರ್ಟ್ ಮೇಲೆ ಹೊರಿಸುವುದು ಸರಕಾರಗಳ ಪಾಲಿಗೆ ಹೆಚ್ಚು ಸುರಕ್ಷಿತ ಮಾರ್ಗ.
ಸುಪ್ರೀಂಕೋರ್ಟ್ ನಾಳೆ ಅಂತಿಮ ಅಧಿಸೂಚನೆ ಜಾರಿಗೊಳಿಸಿ ಎಂದು ಕಟ್ಟುನಿಟ್ಟಾಗಿ ಕೇಂದ್ರ ಮತ್ತು ರಾಜ್ಯ
ಸರಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರೆ ಏನು ಗತಿ ? ಇದಕ್ಕೆ ಸರಕಾರಗಳ ಬಳಿ ಉತ್ತರವಿಲ್ಲ. ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿರುವ ರಾಜ್ಯದ 20,668 ಚದರ ಕಿಲೋಮೀಟರ್ ಪ್ರದೇಶದಲ್ಲಿ ಬರುವ 1573ಗ್ರಾಮಗಳ ಜನರಲ್ಲೂ ಪರ್ಯಾಯ ಆಯ್ಕೆಗಳಿಲ್ಲ. ಇನ್ನೊಂದೆಡೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಪ್ರತೀ ಮಳೆಗಾಲದಲ್ಲೂ ಸಂಭವಿಸುತ್ತಿರುವ ಪ್ರಾಕೃತಿಕ ದುರಂತಗಳು, ನಿಸರ್ಗ ಯಾರ ಆದೇಶಕ್ಕೂ ಕಾಯುವುದಿಲ್ಲ ಎಂಬ ಸಂದೇಶವನ್ನು ಸಾರುತ್ತಿವೆ.
ಜೀವವೈವಿಧ್ಯತೆಯ ತಾಣ
ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ 1600 ಕಿ.ಮೀ ಉದ್ದಕ್ಕೆ ಹಬ್ಬಿರುವ ಸಹ್ಯಾದ್ರಿ ಬೆಟ್ಟದ ಸಾಲುಗಳು ಹಿಮಾಲಯಕ್ಕಿಂತಲೂ ಹಿಂದಿನವು ಎಂದು ತಜ್ಞರ ಮಾತು. ಹಿಮಾಲಯ ಪರ್ವತ ಇಡೀ ಉತ್ತರಭಾರತದ ಜನರ ಬದುಕನ್ನು ನಿರ್ಧರಿಸಿದಂತೆ, ಗುಜರಾತಿನ ತಪತಿ ನದಿಯಿಂದ ಆರಂಭಿಸಿ ದಕ್ಷಿಣ ಕನ್ಯಾಕುಮಾರಿವರೆಗೆ ಪಶ್ಚಿಮ ಕರಾವಳಿಯುದ್ದಕ್ಕೂ ಹಬ್ಬಿರುವ ಪಶ್ಚಿಮಘಟ್ಟಗಳು ದಕ್ಷಿಣ ಭಾರತದ ರಾಜ್ಯ ಗಳ ಬದುಕಿಗೆ ನಿರ್ಣಾಯಕವಾಗಿವೆ.
ಮಾಧವ ಗಾಡ್ಗೀಳ್ ವರದಿಯಲ್ಲಿ ಪಶ್ಚಿಮ ಘಟ್ಟಗಳ 59,940 ಚ.ಕಿ.ಮೀ ವಿಸ್ತೀರ್ಣ ಪ್ರದೇಶ ಅಂದರೆ ಶೇಕಡಾ 36.49 ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco sensitive area) ಎಂದು ಗುರುತಿಸಲಾಗಿದೆ.ಇಲ್ಲಿನ ಪರಿಸರ, ಮಳೆ-ಬೆಳೆ, ಜನಜೀವನ, ಜೀವರಾಶಿಯ ಮೇಲೆ ಪಶ್ಚಿಮ ಘಟ್ಟಗಳ ದಟ್ಟಾರಣ್ಯದ ಪ್ರಭಾವವಿದೆ. ನಮ್ಮ ದೇಶದ ಲ್ಲಿರುವ ಸರೀಸೃಪ, ಉಭಯಚರ, ಮೀನುಗಳು, ಪಕ್ಷಿಗಳು ಮತ್ತು ಸಸ್ತನಿ ಪ್ರಭೇದಗಳ ಪೈಕಿ ಶೇ.30ರಷ್ಟು ಪಶ್ಚಿಮಘಟ್ಟದಲ್ಲಿವೆ. ಅಪರೂ ಪದ ಪ್ರಾಣಿಗಳು, ಪಕ್ಷಿಗಳು, ಗಿಡ, ಮರ, ಬಳ್ಳಿಗಳು, ಸೂಕ್ಷ್ಮ ಜೀವಿಗಳು, ಹಲವು ಜೀವ ನದಿಗಳಿಗೆ ಇದು ತಾಣ. ಈ ಕಾರಣಕ್ಕಾಗಿಯೇ ವಿಶ್ವ ಜೈವಿಕ ವೈವಿಧ್ಯಗಳ ಪ್ರಮುಖ ಎಂಟು ತಾಣಗಳಲ್ಲಿ ಪಶ್ಚಿಮ ಘಟ್ಟವೂ ಒಂದು ಎಂದು ಯುನೆಸ್ಕೋ ಗುರುತಿಸಿದೆ.
5 ಕೋಟಿ ಜನರ ಬದುಕು ಅತಂತ್ರ ಗಾಡ್ಗೀಳ್ ವರದಿ ಜಾರಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಚನೆ ಯಾದ ಡಾ. ಕಸ್ತೂರಿರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ತುಸು ಇಳಿಸಿ 56874 ಚದರ ಕಿ. ಮೀ. ಎಂದು ಗುರುತಿಸಿದೆ. ಈ ಪೈಕಿ ಶೇಕಡ 40ರಷ್ಟು ಭೂಭಾಗವನ್ನು ‘ನೈಸರ್ಗಿಕ ವಲಯ’ ಮತ್ತು ಉಳಿದ ಶೇಕಡ 60 ರಷ್ಟು ಭೂಭಾಗವನ್ನು ‘ಸಾಂಸ್ಕೃತಿಕ ವಲಯ’ ಎಂದು ವಿಂಗಡಿಸಿದೆ. ನೈಸರ್ಗಿಕ ವಲಯ ಸಂಪೂರ್ಣವಾಗಿ ಅರಣ್ಯದಿಂದ ಆವೃತ ಪ್ರದೇಶ. ಅರಣ್ಯ ಇಲಾಖೆಯ ಅಧೀನದ ಈ ಭಾಗದಲ್ಲಿ ಆದಿವಾಸಿಗಳನ್ನು ಬಿಟ್ಟರೆ ಬೇರೆ ಜನವಸತಿ ಇಲ್ಲ. ಸಾಂಸ್ಕೃತಿಕ ವಲಯದಲ್ಲಿ ಖಾಸಗಿ ಭೂ ಒಡೆತನವಿದ್ದು, ಜನವಸತಿ ಮತ್ತು ಕೃಷಿ ಚಟುವಟಿಕೆಗಳು ಜತೆ, ಜತೆಯಾಗಿ ಸಾಗುತ್ತಿವೆ.
ಕಸ್ತೂರಿ ರಂಗನ್ ವರದಿ ಪ್ರಕಾರ ಈ ಭಾಗದಲ್ಲಿ ಕನಿಷ್ಠ ಐದು ಕೋಟಿ ಜನರ ವಾಸ್ತವ್ಯವಿದೆ. ಇವರಲ್ಲಿ
ಬಹುತೇಕರು ನೂರಾರು ವರ್ಷಗಳಿಂದ ಇಲ್ಲಿನ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕಸ್ತೂರಿ
ರಂಗನ್ ವರದಿಯನ್ನು ಸದ್ಯದ ಸ್ಥಿತಿಯಲ್ಲಿ ಒಪ್ಪುವುದಾದರೆ ಈ ಐದು ಕೋಟಿ ಜನರ ತಮ್ಮ ವಾಸ್ತವ್ಯದ ಸ್ಥಳಗಳಲ್ಲಿಯೇ ಬಂಧಿಗಳಾಗಲಿದ್ದಾರೆ.
ಕಾನೂನಿನ ಸಂಕೋಲೆ
ಕಸ್ತೂರಿರಂಗನ್ಸಮಿತಿ ಶಿಫಾರಸಿನ ಪ್ರಕಾರ ಈ ಪ್ರದೇಶದಲ್ಲಿ ಗಣಿಗಾರಿಕೆ, ಮರಳುಗಾರಿಕೆ, ಕ್ವಾರಿ ಕೆಲಸ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳ್ಳಬೇಕು. 20000 ಚ.ಮೀ. ಗಿಂತ ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ
ಕಾಮಗಾರಿ ನಡೆಸುವುದಿದ್ದರೂ ಪರಿಸರ ಇಲಾಖೆ ಮತ್ತು ಸ್ಥಳೀಯ ಗ್ರಾಮಸಭೆಯ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಾಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ. ಅಂದರೆ ಕರ್ನಾಟಕ ರಾಜ್ಯದ ಬೆಳಗಾವಿ, ಉತ್ತರಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು
ಮತ್ತು ಚಾಮರಾಜನಗರದ ಜಿಲ್ಲೆಗಳ ಒಟ್ಟು 20668 ಚದರ ಕಿಲೋಮೀಟರ್ ವ್ಯಾಪ್ತಿಯ 1573 ಗ್ರಾಮಗಳಲ್ಲಿ ಜನಜೀವನ ಬಹುತೇಕ ಸ್ತಬ್ಧವಾಗಲಿವೆ.
ಎಲ್ಲಕ್ಕಿಂತ ಮಿಗಿಲಾಗಿ ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಾದರೆ ಪರಿಸರ ಸೂಕ್ಷ್ಮ ಪ್ರದೇಶವಿಡೀ ಕೇಂದ್ರ ಸರಕಾರದ ಸುಪರ್ದಿಗೆ ಸೇರಲಿದೆ. ರಸ್ತೆ, ಸಂಪರ್ಕ ಸಾರಿಗೆ, ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಚಟುವಟಿಕೆ
ನಡೆಸಲು ಕಷ್ಟ ಸಾಧ್ಯವಾಗಲಿದೆ.
ದ್ವಂದ್ವ ನಿಲುವು
ಸುಪ್ರೀಕೋರ್ಟ್ ಹಸಿರು ನ್ಯಾಯಪೀಠದ ಮುಂದೆ ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ ಐದು ಕೋಟಿ ಜನರ ಬದುಕನ್ನು ಪಲ್ಲಟಗೊಳಿಸುವ ವರದಿಯ ಅನುಷ್ಠಾನ ಸುಲಭದ ಕಾರ್ಯವಲ್ಲ ಎನ್ನುವುದು ಕೇಂದ್ರ ಸರಕಾರಕ್ಕೂ ಗೊತ್ತು. ಇದಕ್ಕಾಗಿ ಕಳೆದ ಒಂದು ದಶಕದಿಂದ ರಾಜ್ಯಸರಕಾರಗಳ ಅಂತಿಮ
ಅಭಿಪ್ರಾಯ ಪಡೆಯುವ ನೆಪದಲ್ಲಿ ಕಾಲಹರಣ ಮಾಡುತ್ತಾ ಬಂದಿದೆ.
ಇದೀಗ ಆರನೇ ಬಾರಿಗೆ ಕೇಳಿರುವ ಅಭಿಪ್ರಾಯಕ್ಕೂ ಕರ್ನಾಟಕ ಸರಕಾರ, ವರದಿ ಯನ್ನು ತಿರಸ್ಕರಿಸುವುದೊಂದೇ ಮಾರ್ಗ ಎಂದಿದೆ. ಈ ನಡುವೆಯೇ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಪರಿಸರ ಸಚಿವಾಲಯದ ಸೂಚನೆ ಮೇರೆಗೆ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಕೆಲಸವನ್ನೂ ಮಾಡಿದೆ. ಈ ಭಾಗದ ಜನರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡುತ್ತಿದೆ. ರಾಜ್ಯಸರಕಾರದ ಈ ದ್ವಂದ್ವ ನಿಲುವು ಜನರಲ್ಲಿ ಗೊಂದಲ ಮೂಡಿಸಿದೆ.
ಕಾನೂನಿನ ಸೂಕ್ಷ್ಮತೆಯನ್ನೊಳಗೊಂಡ ಈ ವಿಷಯವನ್ನು ನಿರ್ವಹಿಸುವಲ್ಲಿ ಕರ್ನಾಟಕ ಮೊದಲಿನಿಂದಲೂ ಎಡವಿದೆ ಎಂಬ ಮಾತುಗಳಿವೆ. ಪರಿಸರ ಸೂಕ್ಷ್ಮ ಪ್ರದೇಶವನ್ನು 850 ಗ್ರಾಮಗಳಿಗೆ ಸೀಮಿತಗೊಳಿಸಬೇಕೆಂಬ ರಾಜ್ಯದ ಮನವಿಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಕೇಂದ್ರ ಸರಕಾರದ ಎರಡು ಬಾರಿಯ ಅಧಿಸೂಚನೆಯಲ್ಲಿ ಕೇರಳ ರಾಜ್ಯದ 13 ಜಿಲ್ಲೆಗಳ ಹೆಸರಿತ್ತು. ಆದರೆ ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳದ ಹೆಸರಿಲ್ಲ. ಆಂದರೆ ಕೇರಳದ ಯಾವ ಗ್ರಾಮಗಳಿಗೂ ಈಗ ತೆರವಿನ ಭೀತಿ ಇಲ್ಲ. ಕರ್ನಾಟಕ ತನ್ನ ಜನವಸತಿ ಪ್ರದೇಶದಲ್ಲಿ ಕೈಗೊಂಡಿ ರುವ ಅರಣ್ಯ ಸಂರಕ್ಷಣೆ ಯೋಜನೆಗಳ ಜೊತೆಗೆ ಇಲ್ಲಿನ ಲಕ್ಷಾಂತರ ಹಳ್ಳಿಗಳು ಪಟ್ಟಣಗಳಾಗಿ ರೂಪಾಂತರಗೊಂಡಿ ರುವ ಬಗೆಯನ್ನು ನಕ್ಷೆ ಸಹಿತವಾಗಿ ವಾದ ಮಂಡಿಸಬೇಕಿತ್ತು.
ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತೆಂಬ ಮಾತುಗಳು ಕೇಳಿ ಬರುತ್ತಿವೆ. ಅನಂತ ಹೆಗಡೆ ಅಶೀಶರ ನೇತೃತ್ವದಲ್ಲಿ
ರಾಜ್ಯಸರಕಾರವೇ ರಚಿಸಿದ ಪಶ್ಚಿಮಘಟ್ಟ ಕಾರ್ಯಪಡೆ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆಯಡಿ ಪಶ್ಚಿಮ ಘಟ್ಟಗಳ ರಕ್ಷಣೆಗೆ ಹಲವು ಸಲಹೆಗಳನ್ನು ನೀಡಿದೆ. ಇದರಂತೆ ರಾಜ್ಯದ 4203 ಗ್ರಾಮಪಂಚಾಯಿತಿಗಳಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದೆ. ಗ್ರಾಮಮಟ್ಟದಲ್ಲಿ ಜೀವವೈವಿಧ್ಯ ದಾಖಲಾತಿ ಕಾರ್ಯಾಗಾರಗಳು ನಡೆದಿವೆ. ವನ್ಯಜೀವಿ ಧಾಮಗಳಲ್ಲಿ ಪರಿಸರ ಅಭಿವೃದ್ಧಿ ಸಮಿತಿಗಳು ರಚನೆಯಾಗಿವೆ. ಇವೆಲ್ಲವನ್ನೂ ಕೇಂದ್ರ ಸರಕಾರದ ಮುಂದಿಟ್ಟು ಪಶ್ಚಿಮ ಘಟ್ಟದ ಯಾವ ಭಾಗವನ್ನೂ ಕೇಂದ್ರಸರಕಾರ ತನ್ನ ಸುಪರ್ದಿಗೆ ಪಡೆಯುವ ಅಗತ್ಯವಿಲ್ಲವೆಂದು ರಾಜ್ಯ ಸರಕಾರ ವಾದ ಮಂಡಿಸಬೇಕಾಗಿದೆ.
ಚಾರಿತ್ರಿಕವಾಗಿ ನೋಡಿದರೆ ಪಶ್ಚಿಮ ಘಟ್ಟಕ್ಕೆ ಅತಿ ಹೆಚ್ಚು ಹಾನಿಯಾಗಿರುವುದು ಸರಕಾರಗಳಿಂದಲೇ ಹೊರತು ಇಲ್ಲಿನ ಜನರಿಂದಲ್ಲ. ಸಾವಿರಾರು ಹೆಕ್ಟೇರ್ ದಟ್ಟ ಕಾಡನ್ನು ಕಡಿದು ತೇಗ, ರಬ್ಬರ್, ಅಕೇಶಿಯಾ ನೆಡುತೋಪು ಗಳನ್ನು ಬೆಳೆಸಿದ ಸರಕಾರದ ಮೂರ್ಖ ನಿರ್ಧಾರಗಳಿಂದ ಇಲ್ಲಿನ ಜನರು ತೊಂದರೆಗೊಳಗಾಗಿದ್ದಾರೆ. ಇಲ್ಲಿನ ರೈತರು ಸಾವಿರಾರು ಎಕರೆಯಲ್ಲಿ ಬೆಳೆಸಿದ ಕಾಫಿ, ಏಲಕ್ಕಿ, ಕಾಳುಮೆಣಸು, ಅಡಿಕೆ ಇತ್ಯಾದಿ ಬೆಳೆಗಳು ಹಸಿರೀಕರಣವನ್ನು ಹೆಚ್ಚಿಸಿವೆಯೇ ಹೊರತು ಭೂಮಿ ಯನ್ನು ಬಂಜರು ಮಾಡಿಲ್ಲ. ಕೃಷಿ, ವಸತಿ ಮತ್ತು ಹೋಂ ಸ್ಟೇ ನೆಪದಲ್ಲಿ ಜೆಸಿಬಿ ಬಳಕೆಯಿಂದ ಪರಿಸರಕ್ಕೆ ಧಕ್ಕೆಯಾಗಿರುವುದು ನಿಜ.
ಆದರೆ ಜೀವವೈವಿಧ್ಯತೆಯ ಈ ತಾಣದಲ್ಲಿ ಇದನ್ನು ಮಾಡಬಹುದು, ಇದನ್ನು ಮಾಡಬಾರದು ಎಂಬ ಸ್ಪಷ್ಟ
ನೀತಿಯನ್ನು ತಂದು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಪಶ್ಚಿಮಘಟ್ಟಗಳ ಸಂರಕ್ಷಣೆ ಕಷ್ಟವೇನಲ್ಲ. ಶತಮಾನ
ಗಳಿಂದಲೂ ಇಲ್ಲಿನ ಜನತೆ ಅರಣ್ಯದಂಚಿನಲ್ಲಿದ್ದುಕೊಂಡು ಬದುಕು ನಡೆಸುತ್ತಿದ್ದಾರೆ. ಈ ಸಹಬಾಳ್ವೆಗೆ ಕಾನೂನು ಕಟ್ಟಳೆಗಳು ಅಡ್ಡಿಯಾ ಗಬಾರದು. ಜನರನ್ನು ದೂರವಿಟ್ಟು ಪರಿಸರ ಸಂರಕ್ಷಣೆ ಮಾಡುವ ಸರಕಾರದ ಧೋರಣೆ
ಯಲ್ಲಿಯೇ ಮೂಲಭೂತ ಲೋಪಗಳಿವೆ.
ಇದನ್ನೂ ಓದಿ: Lokesh Kayarga Column: ಬದುಕೇ ಕಲಬೆರಕೆ, ತುಪ್ಪವೇನು ಮಹಾ ?!