Wednesday, 30th October 2024

Lokesh Kayarga Column: ಗೌಡಾಗೆ ಗೌರವಸ್ಥರು ಬೇಕಾಗಿದ್ದಾರೆ !

ಲೋಕಮತ

ಲೋಕೇಶ್‌ ಕಾಯರ್ಗ

kaayarga@gmail.com

ವರ್ಷಕ್ಕೊಮ್ಮೆ ಘಟಿಕೋತ್ಸವ ಸಮಯ ಬಂದಾಗ ನಮ್ಮ ವಿಶ್ವವಿದ್ಯಾಲಯಗಳಿಗೆ ಈ ತಲೆನೋವು ತಪ್ಪಿದ್ದಲ್ಲ. ಈ ವರ್ಷ ಯಾರಿಗೆ ಗೌರವ ಡಾಕ್ಟರೇಟ್ ನೀಡುವುದು? ನಮ್ಮವರು ಯಾರಿದ್ದಾರೆ? ಅವರು ಆಗಬಹುದಾ? ಇವರನ್ನು ಆಯ್ಕೆ ಮಾಡಿದರೆ ಸರಕಾರದವರು ಏನಂತಾರೋ ಎನೋ? ಅವರೊಬ್ಬರು ಇದ್ದರು, ಆದರೆ ಆ ಯುನಿವರ್ಸಿಟಿ ಯವರು ಆಗಲೇ ಡಾಕ್ಟರೇಟ್ ಕೊಟ್ಟುಬಿಟ್ಟಿದ್ದಾರೆ… ಹೀಗೆ ಆಡಳಿತ ಮಂಡಳಿಗೆ ತರಹೇವಾರಿ ಚಿಂತೆ. ಹಿಂದೆ ಬೆರಳೆಣಿಕೆಯ ವಿ.ವಿ.ಗಳಷ್ಟೇ ಇದ್ದಾಗಲೂ ಗೌರವ ಡಾಕ್ಟರೇಟ್‌ಗೆ ‘ಅರ್ಹರ’ ಆಯ್ಕೆ ಸರಳವಾಗಿರಲಿಲ್ಲ.

ಆಯ್ಕೆಯಾದವರ ಹೆಸರಿಗೆ ವಿರೋಧ ವ್ಯಕ್ತಪಡಿಸಿ ಕತ್ತೆಗೆ ಡಾಕ್ಟರೇಟ್ ಪ್ರದಾನ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಗಳು ಅಂದೂ ನಡೆದಿದ್ದವು. ವಿ.ವಿ.ಗಳ ಸಂಖ್ಯೆ ಹೆಚ್ಚಿದಂತೆ ಅವು ನೀಡುವ ಡಾಕ್ಟರೇಟ್ ಪದವಿಗಳ ಸಂಖ್ಯೆಯೂ ಹೆಚ್ಚಿದೆ. ಅದಕ್ಕೆ ತಕ್ಕಂತೆ ಈ ಪದವಿಗಾಗಿ ಹಂಬಲಿಸುವವರ ಸಂಖ್ಯೆಯೂ ಹಲವು ಪಟ್ಟು ಏರಿದೆ. ಆದರೆ ಇಂದಿನ ಸನ್ನಿವೇಶ ಹೇಗಿದೆ ಎಂದರೆ ‘ಗೌರವ ಡಾಕ್ಟರೇಟ್‌ಗೆ ಗೌರವಸ್ಥರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೀಡಬೇಕಾ ಗಿದೆ!

ಮೂರು ದಶಕಗಳ ಹಿಂದೆ ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು, ಗುಲ್ಬರ್ಗ, ಹಂಪಿ, ಶಿವಮೊಗ್ಗ ಮೊದಲಾದ ಸಾಂಪ್ರದಾಯಿಕ ವಿ.ವಿ.ಗಳನ್ನು ಹೊರತುಪಡಿಸಿದರೆ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ, ಮೀನು ಗಾರಿಕೆ ಸೇರಿ ಒಂದಷ್ಟು ವೃತ್ತಿಪರ ಕೋರ್ಸ್‌ಗಳ ವಿ.ವಿ.ಗಳಷ್ಟೇ ಇದ್ದವು. ಇಂದು ಬೆಂಗಳೂರು ವಿ.ವಿ.ಯೊಂದೇ
ಮೂರು ವಿ.ವಿ.ಗಳಾಗಿ ಕವಲೊಡೆದಿದೆ. ಮಹಿಳಾ ವಿ.ವಿ., ಸಂಸ್ಕೃತ ವಿ.ವಿ., ಕಾನೂನು ವಿ.ವಿ., ಜಾನಪದ ವಿ.ವಿ., ಗ್ರಾಮೀಣಾಭಿವೃದ್ಧಿ ವಿ.ವಿ. ಸೇರಿ ಹೊಸದಾಗಿ ಸ್ಥಾಪನೆಯಾದ ಹತ್ತಾರು ಸರಕಾರಿ ವಿ.ವಿ.ಗಳು ಮತ್ತು ‘ಉದಾರ ಶಿಕ್ಷಣ ನೀತಿ’ಯ ಫಲವಾಗಿ ವಿ.ವಿ. ದರ್ಜೆಗೆ ಬಡ್ತಿ ಪಡೆದ ಹತ್ತಾರು ಖಾಸಗಿ ಕಾಲೇಜುಗಳು ಸೇರಿದರೆ ರಾಜ್ಯದಲ್ಲಿ ಈಗ
60ಕ್ಕೂ ಹೆಚ್ಚು ವಿ.ವಿ.ಗಳಿವೆ. ವರ್ಷಕ್ಕೆ ಸರಾಸರಿ ಮೂವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಬೇಕೆಂದರೂ ರಾಜ್ಯ ಅಥವಾ ರಾಷ್ಟ್ರದ ಕನಿಷ್ಠ ೧೮೦ ಗಣ್ಯರಿಗೆ ‘ಗೌಡಾ’ ಪೇಟ ತೊಡಿಸಬೇಕು. ರಾಜ್ಯೋತ್ಸವ ಪ್ರಶಸ್ತಿ ‘ವಿಜೇತರ’ ಪಟ್ಟಿ ಇಟ್ಟು ಕೊಂಡು ಹುಡುಕಿದರೂ ಇಷ್ಟೊಂದು ಗಣ್ಯರನ್ನು ಹುಡುಕುವುದು ಕಷ್ಟದ ಕೆಲಸ!

ಹಾಗೆಂದು ಗೌರವ ಡಾಕ್ಟರೇಟ್‌ಗಾಗಿ ನಡೆಯುತ್ತಿರುವ ಲಾಬಿಯೇನೂ ಕಡಿಮೆಯಾಗಿಲ್ಲ. ಗೌರವ ಡಾಕ್ಟರೇಟ್ ಪಡೆಯುವುದಕ್ಕಾಗಿಯೇ ಇಡೀ ವರ್ಷ ವಿ.ವಿ. ಆಡಳಿತ ಮಂಡಳಿ, ಸಿಂಡಿಕೇಟ್ ಸದಸ್ಯರನ್ನು ಓಲೈಸುವ ಕೆಲಸ ಈಗಲೂ ನಡೆಯುತ್ತಿವೆ.

ವಿ.ವಿ. ಗಳು ಆಯ್ಕೆ ಮಾಡಿದ ಒಂದಷ್ಟು ಗಣ್ಯರ ಪಟ್ಟಿ ನೋಡಿದರೆ ಅಲ್ಲಿ ಅರ್ಹತೆಗಿಂತ ಇನ್ನೇನೋ ಹೆಚ್ಚಿರು
ವುದನ್ನು ಮೇಲ್ನೋಟಕ್ಕೆ ಕಾಣಬಹುದು. ಈ ಹಿಂದೆ ಗೌರವ ಡಾಕ್ಟರೇಟ್ ಲಾಬಿ ಉದ್ಯಮ ವಲಯಕ್ಕೆ ಸೀಮಿತ ವಾಗಿರುತ್ತಿತ್ತು. ‘ಇವರು ಖ್ಯಾತ ಉದ್ಯಮಿ ಮತ್ತು ಸಮಾಜ ಸೇವಕರು’ ಎಂಬ ಒಕ್ಕಣೆಯೊಂದಿಗೆ ವಿ.ವಿ.ಗಳು ಇಂಥ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದವು. ನಂತರ ಈ ಸಾಲಿನಲ್ಲಿ ಸ್ವಾಮೀಜಿಗಳನ್ನು ಸೇರಿಸಿಕೊಳ್ಳಲಾಯಿತು. ಆಯಾ ಭಾಗದ, ಪ್ರಭಾವಿ ಸ್ವಾಮೀಜಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಿದಾಗ ಹೆಚ್ಚಿನವರು ಬಹಿರಂಗವಾಗಿ ವಿರೋಧಿಸುವುದಿಲ್ಲ ಎನ್ನುವುದು ವಿ.ವಿ.ಗಳ ಪಾಲಿಗೆ ರಕ್ಷಣೆಯಾಗಿತ್ತು.

ಇದೀಗ ಸಿನಿಮಾ ನಟರನ್ನು ಕರೆತಂದು ಡಾಕ್ಟರೇಟ್ ಪೇಟ ತೊಡಿಸುವ ಸುಲಭದ ಮಾರ್ಗ ಕಂಡುಕೊಳ್ಳಲಾಗಿದೆ. ಇದರಲ್ಲಿ ತಪ್ಪೇನಿಲ್ಲ. 1973 ರಲ್ಲಿ ಮೈಸೂರು ವಿ.ವಿ. ವರನಟ ರಾಜ್‌ಕುಮಾರ್ ಅವರಿಗೆ ಡಾಕ್ಟರೇಟ್ ನೀಡಿದಾಗ ಇಡೀ ನಾಡು ಸಂಭ್ರಮಿಸಿತ್ತು. ಅಂದು ಅವರು ಮಾಡಿದ ಭಾಷಣ, ಅವರ ವಿದ್ವತ್ತು ಮತ್ತು ವಿನಮ್ರತೆಗೆ ಸಾಕ್ಷಿ ಯಾಗಿತ್ತು. ಗೌರವ ಡಾಕ್ಟರೇಟ್ ಆಗಿದ್ದರೂ ‘ಡಾಕ್ಟರ್ ರಾಜ್ ಕುಮಾರ್’ ಎಂದು ಕನ್ನಡಿಗರು ಮನದುಂಬಿ
ಕರೆಯುವ ಹೆಸರದು. ಆದರೆ ಇಂದಿನ ತಾರಾಗಣದ ಆಯ್ಕೆಯನ್ನು ಇದೇ ತಕ್ಕಡಿಯಲ್ಲಿಟ್ಟು ತೂಗುವಂತಿಲ್ಲ. ‘ಜನಪ್ರಿಯ’ ಹೆಸರುಗಳಿಗಿಂತ ಹೆಚ್ಚು ಮೌಲಿಕವಾದ, ಹಿರಿತನ, ಅರ್ಹತೆಯುಳ್ಳ ‘ತೂಕ’ದ ವ್ಯಕ್ತಿಗಳು ಸಿನಿ ಉದ್ಯಮದಲ್ಲಿ ಇಲ್ಲವೇ ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಒಂದು ಕಲೆಯಾಗಿ ಸಿನಿಮಾವನ್ನು ಸಮರ್ಥವಾಗಿ ದುಡಿಸಿಕೊಂಡ ಹತ್ತಾರು ಹಿರಿಯ ಕಲಾವಿದರು, ನಿರ್ದೇಶಕರು,
ಸಂಗೀತಜ್ಞರು ನಮ್ಮಲ್ಲಿದ್ದಾರೆ. ಆದರೆ ಹೆಸರು ಮಂದೊತ್ತುವ ಲಾಬಿ ಇಲ್ಲದ ಕಾರಣಕ್ಕೆ ಇಂಥವರಿಗೆ ಗೌರವ ದಕ್ಕುವುದಿಲ್ಲ.

ಯಾರು ಅರ್ಹರು?
ಗೌರವ ಡಾಕ್ಟರೇಟ್ ವಿಚಾರದಲ್ಲಿ ಅರ್ಹರ ಆಯ್ಕೆಯೇ ನಮ್ಮ ವಿ.ವಿ.ಗಳ ಮುಂದಿರುವ ದೊಡ್ಡ ಸವಾಲು. ಸರಕಾರ ವಾಗಲಿ, ನಮ್ಮ ವಿ.ವಿ.ಗಳಾಗಲಿ ಈ ಆಯ್ಕೆಗೆ ಇದುವರೆಗೆ ಯಾವುದೇ ಮಾನದಂಡ ರೂಪಿಸಿಲ್ಲ. ಘಟಿಕೋತ್ಸವ ಎಂಬ ಬ್ರಿಟಿಷರ ಕಾಲದ ಪದ್ಧತಿಯನ್ನು ವಾರ್ಷಿಕ ವಿಧಿ ಎಂಬಂತೆ ನಮ್ಮ ವಿ.ವಿ.ಗಳು ಪಾಲಿಸಿ ಕೊಂಡು ಬಂದಿವೆ. ನೂರಾರು ವಿದ್ಯಾರ್ಥಿಗಳ ಮುಂದೆ ವಿ.ವಿ.ಯೊಂದರ ಗೌರವಕ್ಕೆ ಪಾತ್ರರಾದವರು ಮುಂದೆಯೂ ಈ ಗೌರವ ಉಳಿಸಿ ಕೊಳ್ಳಬೇಕು.

ಇಲ್ಲವಾದರೆ ವಿ.ವಿಯ ಗೌರವವೂ ಮಣ್ಣು ಪಾಲಾಗುತ್ತದೆ. ಆದರೆ ವಿ.ವಿ.ಯ ಆಯಕಟ್ಟಿನ ಸ್ಥಾನದಲ್ಲಿ ಕುಳಿತವರು ಈ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಅವರಿಗೆ ಮೊದಲು ನೆನಪಾಗುವುದು, ಆ ಹುದ್ದೆಗೇರಲು ತಮಗೆ ನೆರ
ವಾದವರು. ಕೆಲ ವರ್ಷಗಳ ಹಿಂದೆ ಮಂಗಳೂರು ಮತ್ತು ಗುಲ್ಬರ್ಗ ವಿ.ವಿ.ಗಳು ಕೇಂದ್ರ ಮತ್ತು ರಾಜ್ಯ ಸಚಿವರಿಗೆ ಡಾಕ್ಟರೇಟ್ ನೀಡಿ ಋಣ ಸಂದಾಯ ಮಾಡಿದ್ದವು. ಮಂಗಳೂರು ವಿ.ವಿ. ಮೂರು ದಶಕಗಳ ಹಿಂದೆಯೇ ಉದ್ಯಮಿ ವಿಜಯ ಮಲ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಇಂದು ಮಲ್ಯ ಘೋಷಿತ ಅಪರಾಧಿ.

ಇಂಥ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ವಾಪಸ್ ಪಡೆಯುವ ಘೋಷಣೆಯನ್ನಾದರೂ ಮಾಡಬೇಕು. ಆದರೆ ಕೊಲೆ ಪ್ರಕರಣದಲ್ಲಿ ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ ಹಲವು ಗಣ್ಯರ ಮನೆಯ ಕಪಾಟುಗಳಲ್ಲಿ ಫ್ರೇಮ್ ಹಾಕಿದ ‘ಗೌಡಾ’ ಪದವಿ ಪತ್ರ ಇಂದಿಗೂ ನಳನಳಿಸುತ್ತಿದೆ.

ಇನ್ನು ಖಾಸಗಿ ವಿ.ವಿ.ಗಳು ಆಡಳಿತ ಮಂಡಳಿ ಸಂಬಂಧಿಕರು, ಜಾತಿ ಬಾಂಧವರು ಸೇರಿದಂತೆ ತಮಗೆ ಬೇಕಾದವರಿಗೆ ಗೌರವ ಡಾಕ್ಟರೇಟ್ ನೀಡಲಾರಂಭಿಸಿವೆ. ಹೀಗೆ ಡಾಕ್ಟರೇಟ್ ಗಿಟ್ಟಿಸಿಕೊಂಡವರು ತಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಎಂದು ನೇಮ್ ಪ್ಲೇಟ್ ಹಾಕಿಸಿಕೊಂಡು, ಊರಿಡೀ ಫ್ಲೆಕ್ಸ್ ಹಾಕಿ ಕೊಂಡು, ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು
ಹಾಕಿಸಿಕೊಂಡು ಮೆರೆಯುತ್ತಿದ್ದಾರೆ. ಇವರ ಪ್ರಚಾರದ ಅಬ್ಬರದ ನಡುವೆ ಜೀವನಪೂರ್ತಿ ಸಮಾಜದ ಒಳಿತಿಗಾಗಿ ದುಡಿದ ಅದೆಷ್ಟೋ ಮಂದಿ ಎಲೆ ಮರೆಯ ಕಾಯಿಯಾಗಿಯೇ ಉಳಿದಿದ್ದಾರೆ. ಗೌರವ ಡಾಕ್ಟರೇಟ್‌ಗೆ ಚಾಲ್ತಿಯಲ್ಲಿರುವ ಹೆಸರುಗಳನ್ನೇ ಆಯ್ಕೆ ಮಾಡಬೇಕೆಂಬ ನಿರ್ಬಂಧಗಳಿಲ್ಲ. ಆದರೆ ಇದುವರೆಗೆ ಯಾವುದೇ ವಿ.ವಿ., ತಮ್ಮ ಕ್ಷೇತ್ರದಲ್ಲಿ
ವಿಶಿಷ್ಟ ಸಾಧನೆಗೈದು ಅನಾಮಿಕರಾಗಿ ಉಳಿದವರನ್ನು ಗುರುತಿಸಿ ಗೌರವಿಸುವ ಸಾಹಸ ಮಾಡಿಲ್ಲ.

ಒಂದು ವೇಳೆ ಈ ರೀತಿಯ ಕೆಲಸ ಮಾಡಿದ್ದರೆ, ಹೊಲಗದ್ದೆಗಳಲ್ಲಿಯೇ ದುಡಿದು, ಸಂಶೋಧಕರಿಗಿಂತ ಹೆಚ್ಚು ಸಾಧನೆ ಮಾಡಿದ ಅದೆಷ್ಟೋ ರೈತರು ಡಾಕ್ಟರ್ ಗೌರವಕ್ಕೆ ಪಾತ್ರರಾಗುತ್ತಿದ್ದರು. ತಮ್ಮ ನಾಟಿ ಔಷಧಿಗಳಿಂದಲೇ ಅದೆಷ್ಟೋ ಜನರ ಕಾಯಿಲೆ ವಾಸಿ ಮಾಡಿದ ಜನಪದ ವೈದ್ಯರು, ಒಂದೇ ಒಂದು ಅವಘಡವಿಲ್ಲದೆ ಸಾವಿರಾರು ಹೆರಿಗೆ ಮಾಡಿಸಿದ ಸೂಲಗಿತ್ತಿಯರನ್ನು ಗುರುತಿಸಿ ಗೌರವಿಸಬಹುದಿತ್ತು.

ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ‘ಗೌಡಾ’ ಪುರಸ್ಕೃತರಲ್ಲಿ ಹಲವರಿಗೆ ತಮ್ಮ ಹೊಸ ಬಿರುದನ್ನು ಮೆರೆಸುವ ಹಂಬಲ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಸುತ್ತಿದ್ದಾರೆ. ಸುಪ್ರೀಂ ಕೋರ್ಟ್ 1995ರ ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನ ಪ್ರಕಾರ ‘ಭಾರತ ರತ್ನ’, ‘ಪದ್ಮ’ ಪ್ರಶಸ್ತಿಗಳನ್ನು ಪಡೆದವರು ತಮ್ಮ ಹೆಸರಿನ ಹಿಂದೆ, ಮುಂದೆ ಅವುಗಳನ್ನು ಬರೆಯುವಂತಿಲ್ಲ.

ಅಧಿಕೃತ ಪತ್ರವ್ಯವಹಾರಗಳಲ್ಲಿ ತಾವು ಈ ಗೌರವಕ್ಕೆ ಪಾತ್ರರಾದವರು ಎಂದು ತಿಳಿಸಬಹುದು. ಆದರೆ ಹೆಸರಿನ ಮುಂದೆ ಈ ಗೌರವವನ್ನು ಮೆರೆಸುವಂತಿಲ್ಲ. ಗೌರವ ಡಾಕ್ಟರೇಟ್ ಪಡೆದವರು ಕೂಡ ತಮ್ಮ ಹೆಸರಿನ ಮುಂದೆ ಇದನ್ನು ಬಳಸುವುದು ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ. ಅಭಿಮಾನಿಗಳು, ಹಿತೈಷಿಗಳು ಪ್ರೀತಿಯಿಂದ ‘ಡಾಕ್ಟರ್’ ಎಂದು ಸಂಬೋಧಿಸಿದರೆ ಅದಕ್ಕೆ ಅವರನ್ನು ಹೊಣೆ ಮಾಡಲು ಸಾಧ್ಯವಿಲ್ಲ.

ಆದರೆ ತಾವಾಗಿಯೇ ಹೆಸರಿನ ಮುಂದೆ ಡಾಕ್ಟರ್ ಎಂದು ನೇಮ್‌ಪ್ಲೇಟ್ ಹಾಕಿಸುವುದು, ಲೆಟರ್‌ಹೆಡ್ ಬಳಸುವುದು
ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ನಮ್ಮ ವಿ.ವಿ.ಗಳು ಗೌರವ ಡಾಕ್ಟರೇಟ್ ನೀಡುವ ವೇಳೆ ಅದಕ್ಕೆ ಪಾತ್ರರಾದವರು ‘ಡಾಕ್ಟರ್’ ಎಂಬ ಪದವನ್ನು ಎಲ್ಲಿ ಬಳಸಬಹುದು, ಎಲ್ಲಿ ಬಳಸಬಾರದು, ಹೇಗೆ ಬಳಸಬೇಕು ಎಂಬ ಸಣ್ಣ ಟಿಪ್ಪಣಿಯನ್ನು ನೀಡಬೇಕು. ಇಲ್ಲವಾದರೆ ಈಗ ಕಾಣುತ್ತಿರುವ ಅಪಸವ್ಯಗಳು ಮುಂದುವರಿಯಲಿವೆ. ಇತ್ತೀಚೆಗೆ ಅಧಿಕೃತವಾಗಿ ‘ಗೌಡಾ’ ಪದವಿಗೆ ಪಾತ್ರರಾದವರು ಮಾತ್ರವಲ್ಲ ನಕಲಿ ಡಾಕ್ಟರೇಟ್ ಪಡೆದವರು ಕೂಡ ಡಾಕ್ಟರ್ ಹೆಸರನ್ನು ಯದ್ವಾತದ್ವಾ ಬಳಸುತ್ತಿದ್ದಾರೆ.

ನಕಲಿಗಳ ಹಾವಳಿ
ಗೌರವ ಡಾಕ್ಟರೇಟ್‌ನದ್ದು ಒಂದು ಕಥೆಯಾದರೆ ಇದೇ ಹೆಸರಿನಲ್ಲಿ ನಡೆಯುವ ನಕಲಿ ವಿ.ವಿ.ಗಳ ಡಾಕ್ಟರೇಟ್ ಪ್ರದಾನ ಮತ್ತೊಂದು ದಂಧೆ. ಇತ್ತೀಚೆಗೆ ‘ಸ್ವಾಮೀಜಿ’ಯೊಬ್ಬರ ಹೆಸರಿನ ಮುಂದೆ ‘ಡಾಕ್ಟರ್’ ಕಾಣಿಸಿಕೊಂಡಿದೆ. ಇವರಿಗೆ ಭಾರತ ದೇಶದ ಯಾವ ವಿ.ವಿ.ಯೂ ಗೌರವ ಡಾಕ್ಟರೇಟ್ ನೀಡಿಲ್ಲ. ಆದರೆ ಲೆಟರ್‌ಹೆಡ್‌ನಲ್ಲಷ್ಟೇ ಅಸ್ತಿತ್ವ ದಲ್ಲಿರುವ ನಕಲಿ ವಿ.ವಿ.ಯೊಂದು ಸ್ವಾಮೀಜಿಯಿಂದಲೇ ಕಾಣಿಕೆ ಪಡೆದು ಗೌರವ ಡಾಕ್ಟರೇಟ್ ದಯಪಾಲಿಸಿದೆ. ಇದರ ಅರಿವಿದ್ದೋ, ಅರಿವಿಲ್ಲದೆಯೋ ಅವರು ಈಗ ಡಾಕ್ಟರ್ ಸ್ವಾಮೀಜಿಯಾಗಿದ್ದಾರೆ.

‘ನಿಮಗೆ ಕ್ರೆಡಿಟ್ ಕಾರ್ಡ್ ಬೇಕೇ’ ಎಂದು ಕೇಳುವಷ್ಟು ಸಹಜವಾಗಿ ಡಾಕ್ಟರೇಟ್ ಬೇಕೇ ಎಂದು ಕೇಳುವ ದಲ್ಲಾಳಿ ಗಳಿದ್ದಾರೆ. ಪ್ರಚಾರ ಪ್ರಿಯರ ದೇಶದಲ್ಲಿ ಯಾರೋ ಕರೆ ಮಾಡಿ, “ನಿಮ್ಮ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟ ರೇಟ್‌ಗೆ ಅಥವಾ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ” ಎಂದರೆ ಮರುಳಾಗದವರು ಕಡಿಮೆ. ಉತ್ತರ ಭಾರತದ ಯಾವುದೋ ನಗರದ ವಿಳಾಸ ತೋರಿಸಿ ಅಲ್ಲಿನ ವಿ.ವಿ. ಎಂದಾಗ, ಹಿಂದೆಮುಂದೆ ನೋಡದೇ ಒಪ್ಪಿಕೊಳ್ಳುವ ವರಿದ್ದಾರೆ. ಬಳಿಕ ಇದೇ ಮಧ್ಯವರ್ತಿಗಳು, ಯಾವುದೋ ಶುಲ್ಕದ ಹೆಸರು ಹೇಳಿ ಹಣಕ್ಕೆ ಬೇಡಿಕೆ ಇಟ್ಟಾಗ ಕೊಡುವವರಿದ್ದಾರೆ. ಇದು ಮಾತ್ರವಲ್ಲ, ವಿದೇಶಿ ವಿ.ವಿ.ಗಳ ಹೆಸರಿನಲ್ಲಿ ಡಾಕ್ಟರೇಟ್ ನೀಡುವ ನಕಲಿ ಸಂಸ್ಥೆಗಳಿವೆ. ವಿದೇಶಕ್ಕೆ ಕರೆಸಿಕೊಂಡು ಲಕ್ಷಗಟ್ಟಲೆ ಹಣ ಪೀಕಿಸಿ, ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ, ಯಾರದ್ದೋ ಕೈಯಲ್ಲಿ ‘ಗೌಡಾ’ ಪ್ರದಾನ ಮಾಡಿ ಕಳಿಸಿದ್ದನ್ನೇ ಮಹಾಪ್ರಸಾದ ಎಂದು ನಂಬಿ ಜಾಹೀರಾತು ನೀಡುವ ಅಮಾಯಕರು/ಬುದ್ಧಿವಂತರು ನಮ್ಮ ನಡುವೆ ಇದ್ದಾರೆ.

ಎಂದಿನಂತೆ ಇಂಥ ದಂಧೆಯನ್ನು ತಡೆಯುವ ಯಾವುದೇ ವ್ಯವಸ್ಥೆ ನಮ್ಮಲಿಲ್ಲ. ಯುಜಿಸಿ, ಎಐಎಸಿಟಿಇ ಅಪರೂಪ
ಕ್ಕೊಮ್ಮೆ ನಕಲಿ ವಿವಿಗಳ ಹೆಸರನ್ನು ಬಿಡುಗಡೆ ಮಾಡುತ್ತವೆ. ಆದರೆ ಬೆಳೆ ಬಿತ್ತದೆಯೇ ಫಸಲು ತೆಗೆಯುವ ಈ ದಂಧೆ ಮತ್ತೊಂದು ಹೆಸರಿನಲ್ಲಿ ಮುಂದುವರಿಯುತ್ತಲೇ ಇರುತ್ತದೆ.

ಡಾಕ್ಟರೇಟ್ ಪ್ಯಾಕೇಜ್
ಇದು ‘ಗೌಡಾ’, ನಕಲಿ ಡಾಕ್ಟರೇಟ್‌ಗಳ ಕಥೆಯಾದರೆ ಅಸಲಿ ಪಿಎಚ್‌ಡಿಗಳ ವ್ಯಥೆ ಬೇರೆಯೇ ಇದೆ. ಪಿಎಚ್‌ಡಿ ಹೆಸರಿ ನಲ್ಲಿ ವರ್ಷಗಟ್ಟಲೆ ತಮ್ಮ ವಿದ್ಯಾರ್ಥಿ ಗಳನ್ನು ಸತಾಯಿಸುವ ಮಾರ್ಗದರ್ಶಕರಿದ್ದಾರೆ. ಮಾರ್ಗದರ್ಶಕರ ಕಿರುಕುಳದ ಕಾರಣಕ್ಕೆ ಪಿಎಚ್‌ಡಿ ಅಧ್ಯಯನವನ್ನು ಕೈ ಬಿಟ್ಟ ವಿದ್ಯಾರ್ಥಿ/ವಿದ್ಯಾರ್ಥಿನಿಯರಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ದಡ್ಡ ವಿದ್ಯಾರ್ಥಿಗಳ ಮೇಲಿನ ಪ್ರೀತಿಯಿಂದ ಇಡೀ ಪಿಎಚ್‌ಡಿ ಪ್ರಬಂಧವನ್ನು ಬರೆದು ಕೊಟ್ಟ ಗುರುಗಳಿದ್ದಾರೆ.

ಇವರೆಲ್ಲರ ನಡುವೆ ಪಿಎಚ್‌ಡಿ ನೋಂದಣಿ ಅವಧಿಯಲ್ಲಿಯೇ ಡೀಲ್ ಕುದುರಿಸಿಕೊಂಡು ಯಾರೋ ಬರೆದುಕೊಟ್ಟ
ಮಹಾಪ್ರಬಂಧವನ್ನು ವಿ.ವಿ.ಗೆ ಸಲ್ಲಿಸಿ ಡಾಕ್ಟರ್ ಎನಿಸಿಕೊಂಡು ವಿ.ವಿ., ಕಾಲೇಜುಗಳಲ್ಲಿ ಬಡ್ತಿ ಪಡೆದವರಿದ್ದಾರೆ. ಪೂರ್ಣಕಾಲಿಕ ಅಧ್ಯಾಪನ ವೃತ್ತಿ ಬಿಟ್ಟು ಪಿಎಚ್‌ಡಿ ಆಕಾಂಕ್ಷಿಗಳ ಹೆಸರಿನಲ್ಲಿ ಸಂಶೋಧನಾ ಪ್ರಬಂಧ ಬರೆದು ಕೊಟ್ಟು ಬಂಗಲೆ ಕಟ್ಟಿಕೊಂಡವರಿದ್ದಾರೆ. ಇನ್ನು ಸಂಶೋಧನಾ ಪ್ರಬಂಧಗಳ ಗುಣಮಟ್ಟ ಮತ್ತು ಸಮಾಜಕ್ಕೆ ಆಗಬಹುದಾದ ಪ್ರಯೋಜನಗಳ ವಿಚಾರಕ್ಕೆ ಬಂದರೆ ಮುಂದಿನ ಒಂದಷ್ಟು ವರ್ಷಗಳ ಕಾಲ ಪಿಎಚ್‌ಡಿ ಅಧ್ಯಯನ ವನ್ನು ನಿಲ್ಲಿಸುವುದು ಎಷ್ಟೋ ಒಳ್ಳೆಯದು.

ಮಾನವಿಕ ವಿಭಾಗಗಳಲ್ಲಿ ಸಂಶೋಧನಾ ನಿರತರ ಪ್ರಬಂಧಗಳ ಹೆಸರು ಕೇಳಿದರೆ ಸಾಕು, ಇವುಗಳನ್ನು ಅರ್ಥೈಸಲು
ಮತ್ತೊಂದು ಸಂಶೋಧನೆಯೇ ಬೇಕು. ವಿ.ವಿ. ಗಳಿಗೂ, ಅವುಗಳಲ್ಲಿ ನಡೆಯುವ ಸಂಶೋಧನೆಗಳಿಗೂ, ಅವು ನೀಡುವ ಪದವಿ, ಗೌರವಗಳಿಗೂ ಮೌಲ್ಯ ದಕ್ಕಬೇಕಾದರೆ ಅಲ್ಲಿನ ಪೀಠ ಅಲಂಕರಿಸಿದವರೂ ಮೌಲ್ಯ, ಗೌರವ ಹೊಂದಿರ ಬೇಕು. ಇಲ್ಲವಾದರೆ ಮುಂದೊಂದು ದಿನ ಸಂಶೋಧನೆಗಳು, ಗೌರವ ಡಾಕ್ಟರೇಟ್‌ಗಳು ಲೇವಡಿಯ ವಸ್ತುವಾಗ ಬಹುದು.

ಇದನ್ನೂ ಓದಿ: Lokesh Kayarga Column: ತಿರಸ್ಕರಿಸುವುದು ಸುಲಭ, ಮುಂದೇನು ?