Wednesday, 23rd October 2024

Lokesh Kayarga Column: ಬೆಂಗಳೂರು ಮಳೆನಾಡೆಂಬ ವಿವೇಕ ನಮಗಿರಲಿ

ಲೋಕಮತ

ಲೋಕೇಶ್‌ ಕಾಯರ್ಗ

ಬೆಂಗಳೂರಿನಲ್ಲಿ ಮಳೆ ಆರ್ಭಟದಿಂದ ಪಾರಾಗುವ ಬಗೆ ಹೇಗೆ ? ತುಂಬಾ ಸಿಂಪಲ್. ಬೆಂಗಳೂರಿನಲ್ಲಿ ಮಳೆ ಬರುತ್ತದೆ ಎಂದು ನಮಗೆ ಗೊತ್ತಿದ್ದರೆ ಸಾಕು. ಅಚ್ಚರಿ ಎಂದರೆ ಬೆಂಗಳೂರಿನಲ್ಲಿ ಎಷ್ಟೇ ಮಳೆ ಬಂದರೂ ಛತ್ರಿ ಹಿಡಿಯುವವರು ಕಡಿಮೆ! ಕೊಡೆ ಹಿಡಿದು ಸಾಗುವ ಪುರುಷ ಪುಂಗವರು ಇನ್ನೂ ಕಡಿಮೆ. ದ್ವಿಚಕ್ರ ಸವಾರರಿಗೂ ರೈನ್‌ಕೋಟ್ ಬಳಸದೆ
ಮಳೆಯಲ್ಲಿ ಜತೆಯಲ್ಲಿ ಸಾಗುವುದೇ ಇಷ್ಟ. ಹೆಚ್ಚಿನ ಬೆಂಗಳೂರಿಗರು ಪ್ರತಿದಿನ ‘ನೋಡೋಣ ಮಳೆ ಬರಲಿಕ್ಕಿಲ್ಲ’ ಎನ್ನುವ ವಿಶ್ವಾಸದಲ್ಲಿಯೇ ಓಡಾಡುತ್ತಾರೆ.

ಕರಾವಳಿ, ಮಲೆನಾಡಿನ ಜಡಿ ಮಳೆಯಲ್ಲಿ ತಮ್ಮ ಬಾಲ್ಯ ಕಳೆದವರು ಕೂಡ ಕೆಂಪೇಗೌಡರ ನಗರಿಗೆ ಕಾಲಿಟ್ಟ ತಕ್ಷಣ ತಮ್ಮ ಕೊಡೆಯನ್ನು ಮೂಲೆಗೆಸೆಯುತ್ತಾರೆ. ಇಲ್ಲಿ ಕೊಡೆ ಹಿಡಿದು ಸಾಗುವುದೆಂದರೆ ಪ್ರತಿಷ್ಠೆಗೆ ಕುತ್ತು. ಹಾಗೆಂದು ರಾಜಧಾನಿಯ ಮಳೆ ಯಾರ ಮರ್ಜಿಗೂ ಕಾಯುವುದಿಲ್ಲ. ವರ್ಷದ ಒಂದರೆಡು ತಿಂಗಳು ಬಿಟ್ಟರೆ ಇಲ್ಲಿ ಮಳೆರಾಯನಿಗೆ ವಿಶ್ರಾಂತಿ ಇಲ್ಲ.

ಕರಾವಳಿಯಲ್ಲಿ ಮುಂಗಾರು ಮಳೆ ಪ್ರವೇಶಿಸುವ ಮುನ್ನವೇ ಇಲ್ಲಿ ಒಂದೆರಡು ಮಳೆ ಮೊದಲೇ ಬಂದು ತಾಲೀಮು ನಡೆಸುತ್ತದೆ. ನಂತರ ಮುಂಗಾರು ಮತ್ತು ಹಿಂಗಾರು ಜತೆ ಸೇರಿಕೊಂಡು ನವೆಂಬರ್, ಡಿಸೆಂಬರ್ ತನಕವೂ ಮಳೆ ಸುರಿಯುತ್ತಲೇ ಇರುತ್ತದೆ. ಇದರ ನಡುವೆ ಅರಬ್ಬಿ ಸಮುದ್ರದಿಂದ ವಾಯುದೇವನ ಅಪ್ಪಣೆ ದೊರೆತರೂ ಇಲ್ಲಿ
ಮಳೆಯಾಗುತ್ತದೆ. ಬಂಗಾಳಕೊಲ್ಲಿಯಲ್ಲಿ ವಾಯುದೇವನ ಭಾರ ಕುಸಿದರೂ ಇಲ್ಲಿ ಜಡಿ ಮಳೆಯಾಗುತ್ತದೆ. ಉಪಖಂಡದ ಎರಡೂ ಸಮುದ್ರಗಳಿಗೆ ಸ್ಪಂದಿಸುವ ಏಕೈಕ ಮೆಟ್ರೋ ನಗರ ಎಂದರೆ ಅದು ನಮ್ಮ ಬೆಂಗಳೂರು. ಮಂಗಳೂರಿನಲ್ಲಿ ಜೋರು ಮಳೆಯಾಯಿತೆಂದರೆ ಬೆಂಗಳೂರು ಸ್ಪಂದಿಸುತ್ತದೆ.

ಮದ್ರಾಸಿನಲ್ಲಿ ಮಳೆಯಾದರೂ ಓಗೊಡುತ್ತದೆ. ಇಷ್ಟಾದರೂ ಬೆಂಗಳೂರಿಗರು ತಮ್ಮದು ಮಳೆ ಜಿಲ್ಲೆ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ದಶಕಗಳಿಂದ ಇಲ್ಲಿ ನೆಲೆಸಿದವರು, ನಿನ್ನೆ ಮೊನ್ನೆ ಬಂದು ಇಲ್ಲಿ ಮನೆ ಕಟ್ಟಿಕೊಂಡವರು ಸೇರಿದಂತೆ ಬೆಂಗಳೂರು ನಿವಾಸಿ ಗಳೆನಿಸಿಕೊಂಡವರು, ಇಲ್ಲಿನ ಅಧಿಕಾರಿಗಳು, ಜನ ಪ್ರತಿನಿಧಿಗಳ ಕಣ್ಣಲ್ಲಿ ಬೆಂಗಳೂರು ‘ಮಳೆನಾಡು’ ಅಲ್ಲವೇ ಅಲ್ಲ.

ಈ ಕಾರಣದಿಂದಲೇ ಇಲ್ಲಿ ಮೊದಲು ಮನೆಗಳನ್ನು ನಿರ್ಮಿಸಲಾಗುತ್ತದೆ. ಮಳೆ ಬಂದು ನಾನೆಲ್ಲಿ ಸಾಗಲಿ ಎಂದು ಕೇಳಿದ ಮೇಲೆ ಚರಂಡಿ ನಿರ್ಮಾಣಕ್ಕೆ ಜಾಗ ಹುಡುಕುತ್ತಾರೆ. ಮೊದಲು ರಸ್ತೆಗಳನ್ನು ನಿರ್ಮಿಸಿ, ಮಳೆ ನೀರಲ್ಲಿ ಮುಳುಗಿದ ಬಳಿಕ ಅದೇ ರಸ್ತೆಯನ್ನು ಅಗೆದು ಚರಂಡಿ ನಿರ್ಮಿಸಲಾಗುತ್ತದೆ. ರಾಜಕಾಲುವೆಗಳನ್ನು ಮುಚ್ಚಿ ಬಡಾ
ವಣೆಗಳನ್ನು ನಿರ್ಮಿಸುತ್ತಾರೆ. ಇದೇ ಬಡಾವಣೆ ಮಳೆ ನೀರಿನಲ್ಲಿ ಮುಳುಗಿದ ನಂತರ ರಾಜ ಕಾಲುವೆ ತೆರವಿಗೆ ಆದೇಶ ಹೊರಡಿಸುತ್ತಾರೆ. ಎಕರೆಗಟ್ಟಲೆ ವಿಸ್ತಾರದ ಕೆರೆಗಳನ್ನು ಮುಚ್ಚಿ ಆಕಾಶದೆತ್ತರದ ಅಪಾರ್ಟ್‌ಮೆಂಟ್‌ಗಳನ್ನು, ಮಾಲ್‌ಗಳನ್ನು ಕಟ್ಟುತ್ತಾರೆ.

ಬೆಂಗಳೂರಿನಲ್ಲಿ ಮಳೆ ಬರುವುದೇ ಇಲ್ಲ ಎಂಬ ‘ದುರಾಲೋಚನೆ’ಯಿಂದ ನಮ್ಮ ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಅನುಮತಿ ನೀಡುತ್ತಾರೆ. ಸ್ವತ: ಮಳೆರಾಯ ಒಂದೆರಡು ಬಾರಿ ಗುಡುಗು, ಸಿಡಿಲಿನೊಂದಿಗೆ ಬಂದು ನೋಟಿಸ್
ಕೊಟ್ಟ ಬಳಿಕ ಜ್ಞಾನೋದಯವಾಗಿ ಕೆರೆಯನ್ನು ಕಬಳಿಸಿ ಕಟ್ಟಿದ ಕಟ್ಟಡಗಳನ್ನು ತೆರವು ಮಾಡಿ ಎಂದು
ನೋಟಿಸ್ ಕೊಡುತ್ತಾರೆ.

ಕಾಂಕ್ರೀಟ್ ಕಾಡಷ್ಟೇ ಅಲ್ಲ

ರಾಜಧಾನಿಯಲ್ಲಿ ಒಂದು ಗಂಟೆಗಿಂತ ಹೆಚ್ಚು ನಿರಂತರವಾಗಿ ಮಳೆ ಸುರಿದರೆ ರಸ್ತೆಗಳು ಕೆರೆಗಳಾಗುತ್ತವೆ. ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಂಡು ಸಂಚಾರ ಏರುಪೇರಾಗುತ್ತದೆ. ಇನ್ನೂ ಸ್ವಲ್ಪ ಮಳೆ ಬಂದರೆ ಚರಂಡಿ ನೀರು ಮಳೆಯೊಳಗೆ ನುಗ್ಗುತ್ತದೆ. ಎರಡು ಗಂಟೆಗಿಂತ ಹೆಚ್ಚಿನ ಮಳೆ ಬಂದರೆ ಬಡಾವಣೆಗಳು, ಅಪಾರ್ಟ್‌ಮೆಂಟ್‌ ಗಳು ನೀರಲ್ಲಿ ಮುಳುಗುತ್ತವೆ. ಮ್ಯಾನ್‌ಹೋಲ್‌ಗಳೆಲ್ಲಾ ಬಾಯ್ತೆರೆದುಕೊಂಡು ರಸ್ತೆ ಮೇಲೆ ನೀರು ಉಕ್ಕಿ ಹರಿದಾಗ, ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆಯಾಯಿತೆಂದು ನಮ್ಮ ನಾಯಕರು ಹಲುಬುತ್ತಾರೆ. ಮಾಧ್ಯಮಗಳು ‘ರಕ್ಕಸ ಮಳೆ’ ಎಂದು ವರುಣದೇವನನ್ನು ರಾಕ್ಷಸ ಗಣಕ್ಕೆ ಸೇರಿಸಿಬಿಡುತ್ತವೆ. ಕೆಲವರು ‘ಏನಿದು ಬೆಂಗಳೂರು ಮಲೆನಾಡಾಗಿದೆ’ ಎಂದು ಗೊಣಗುತ್ತಾರೆ.

ವಾಸ್ತವದ ವಿಚಾರಕ್ಕೆ ಬಂದರೆ ಬೆಂಗಳೂರು ಒಂದು ಕಾಲದಲ್ಲಿ ಮಲೆನಾಡಾಗಿತ್ತು. ಈಗ ‘ಮಲೆ’ ಬನ್ನೇರು ಘಟ್ಟಕ್ಕೆ ಸೀಮಿತಗೊಂಡಿದೆ. ಆದರೆ ಕಾಂಕ್ರೀಟ್ ಕಾಡುಗಳ ನಡುವೆಯೂ ಬೆಂಗಳೂರು ‘ಮಳೆನಾಡು’ ಆಗಿಯೇ ಉಳಿದಿದೆ.

ರಾಜ್ಯದಲ್ಲಿ ವಾರ್ಷಿಕ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಬೆಂಗಳೂರಿಗೆ ಎಂಟನೇ ಸ್ಥಾನ. ಕರ್ನಾಟಕದ ಊಟಿ ಎಂದು ಕರೆಸಿಕೊಳ್ಳುವ ಹಾಸನ ಮತ್ತು ಬೆಂಗಳೂರಿನಲ್ಲಿ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಹಾಸನಕ್ಕಿಂತಲೂ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ 10 ವರ್ಷಗಳ ಮಳೆ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ ಪ್ರಸಕ್ತ ವರ್ಷ ಸೇರಿದಂತೆ ಏಳು ವರ್ಷ ಗಳಲ್ಲಿ ಸರಾಸರಿ ಸಾವಿರ ಮಿಲಿ ಮೀಟರ್‌ಗಿಂತ ಹೆಚ್ಚು ಮಳೆಯಾಗಿದೆ. 2022ರಲ್ಲಿ 1957 ಮಿಲಿ ಮೀಟರ್ ಮಳೆಯಾಗಿರುವುದು ರಾಜಧಾನಿಯ ಪಾಲಿಗೆ ಶತಮಾನದ ದಾಖಲೆ. ಇದು ಶಿವಮೊಗ್ಗ ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ (1813)ಕ್ಕಿಂತ ಹೆಚ್ಚು. ಆದರೆ ಹಾಸನ ಜಿಲ್ಲೆಯನ್ನು ಮಲೆನಾಡಿನ ಸಾಲಿಗೆ ಸೇರಿಸುವ ನಾವು ಮಳೆ
ವಿಚಾರದಲ್ಲಿ ಬೆಂಗಳೂರನ್ನು ಅಬ್ಬೇಪಾರಿ ಮಾಡುತ್ತೇವೆ.

ಮಲೆನಾಡಿನ ಮಳೆ ವೈಭವವನ್ನು ನಾನಾ ರೀತಿಯಲ್ಲಿ ಕೊಂಡಾಡಿದ ನಮ್ಮ ಕವಿಗಳು ಬೆಂಗಳೂರಿನ ಮಳೆಯನ್ನು ‘ರಗಳೆ’ ರೂಪದಲ್ಲೂ ಬಣ್ಣಿಸಿಲ್ಲ ! ಬೆಂಗಳೂರು ಮಳೆನಾಡು ಎಂದಾಕ್ಷಣ ಆಕಾಶನೂ ಕಳಚಿ ಬೀಳುವುದಿಲ್ಲ. ಆದರೆ ಮಳೆ ಬಂದಾಕ್ಷಣ ಈ ನಗರದ ಮೂಲಭೂತ ಸೌಕರ‍್ಯಗಳ ಕೊರತೆಯನ್ನು ಪಟ್ಟಿ ಮಾಡುವವರಿಗೆ ಮತ್ತು ಇನ್ನಷ್ಟು ಮೂಲಸೌಕರ‍್ಯ ಕಲ್ಪಿಸುವ ನಿಟ್ಟಿನಲ್ಲಿ ಅಧ್ವಾನ ಮಾಡಲು ಹೊರಟವರಿಗೆ ಇದು ಮೂಲತಃ ಮಳೆ ಪ್ರದೇಶ ಎನ್ನುವುದನ್ನು ಮನದಟ್ಟು ಮಾಡಿ ಕೊಡ ಬೇಕಾಗಿದೆ. ಬೆಂಗಳೂರಿನ ಭವಿಷ್ಯದ ಯಾವುದೇ ಯೋಜನೆ ಕೂಡ, ವಾರ್ಷಿಕ ೨೦೦೦ ಮಿ.ಮೀಟರ್ ನಷ್ಟು ಮಳೆ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡೇ ಸಿದ್ಧವಾಗಬೇಕಿದೆ.

ಇಲ್ಲವಾದರೆ ಕಟ್ಟುವ, ಮುರಿಯುವ ಪ್ರಹಸನಗಳು, ಬ್ರ್ಯಾಂಡ್ ಹೆಸರಿನಲ್ಲಿ ಬೆಂಗಳೂರನ್ನು ಮರು ನಿರ್ಮಿಸುವ
ಅವಿವೇಕದ ನಿರ್ಧಾರಗಳು ಮುಂದುವರಿಯಲಿವೆ.

ಏರುಪೇರಾದ ಮಳೆ ಚಿತ್ರಣ
ಬೆಂಗಳೂರಿನಲ್ಲಿ ಕೆರೆ, ಕಾಲುವೆಗಳನ್ನು ಮುಚ್ಚಿ ಕಟ್ಟಿದ ಕಟ್ಟಡಗಳನ್ನು ಕೋರ್ಟ್ ಸ್ಟೇ ತಂದು ಉಳಿಸಿಕೊಳ್ಳ ಬಹುದು. ಆದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಳೆಯನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪ್ರಕೃತಿಯೇ ಎಲ್ಲ ಅಪಸವ್ಯಗಳಿಗೆ ಉತ್ತರ ಕಂಡುಕೊಳ್ಳುವ ದಾರಿಯಲ್ಲಿದೆ. ಹವಾಮಾನ ವೈಪರೀತ್ಯ ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆ ಯಾಗುತ್ತಿದೆ. ಬೆಂಗಳೂರನ್ನು ಕೇಂದ್ರವಾಗಿಟ್ಟು ಕೊಂಡು ಈ ಬಗ್ಗೆ ಗಂಭೀರವಾದ ಚರ್ಚೆ, ಸಂಶೋಧನೆ ಅಗತ್ಯವಿದೆ. ಕಳೆದ ಐದು ವರ್ಷಗಳಲ್ಲಿ ನಗರದಲ್ಲಿ ಮಳೆ ಪ್ರಮಾಣ ಶೇ.89ರಷ್ಟು ಏರಿಕೆಯಾಗಿದೆ. ಶತಮಾನದ ಹಿಂದೆ (1900) ವಾರ್ಷಿಕ 900 ಮಿ.ಮೀ. ಮಳೆಯಾಗುತ್ತಿದ್ದ ನಗರದಲ್ಲಿ ಕಳೆದ 10 ವರ್ಷಗಳಲ್ಲಿ ಸರಾಸರಿ 1200 ಮಿ.ಮೀಟರ್ ಮಳೆಯಾಗಿದೆ. 2010ರ ಬಳಿಕ ವಾರ್ಷಿಕ ಮಳೆ ಪ್ರಮಾಣ ಏರುಗತಿಯಲ್ಲಿಯೇ ಇದೆ. ಅದರಲ್ಲೂ 2022ರಲ್ಲಿ 1957.7 ಮಿಲಿಮೀಟರ್ ಮಳೆಯಾಗಿರುವುದು ಸಾರ್ವಕಾಲಿಕ ದಾಖಲೆ. ಕಳೆದ ವರ್ಷ ರಾಜ್ಯಾದ್ಯಂತ ಮಳೆ ಕೊರತೆ ಇದ್ದರೂ, ಬೆಂಗಳೂರಿನಲ್ಲಿ ವಾಡಿಕೆಗಿಂತ ಹೆಚ್ಚು (1020 ಮಿ.ಮೀ) ಮಳೆಯಾಗಿತ್ತು. ಕಳೆದ 15 ವರ್ಷಗಳಲ್ಲಿ ಬಿದ್ದ ಮಳೆ ಗಮನಿಸಿದರೆ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಮಳೆ ಪ್ರಮಾಣ ಏರಿಕೆಯತ್ತ ಸಾಗಿದೆ.

2024ರಲ್ಲಿ ಇದುವರೆಗೆ ಸುರಿದ ಮಳೆಯನ್ನು ಪರಿಗಣಿಸಿದರೆ ಈ ವರ್ಷ ಮತ್ತೊಂದು ದಾಖಲೆ ಬರೆಯುವ ಅವಕಾಶವೂ ಇದೆ. ಮಳೆಯ ಪ್ರಮಾಣ ಮಾತ್ರವಲ್ಲ ಮಳೆ ಬೀಳುವ ರೀತಿಯಲ್ಲೂ ಬದಲಾವಣೆ ಆಗಿದೆ. ಹಿಂದೆ ನಿಧಾನ ವಾಗಿ ಗಂಟೆಗಟ್ಟಲೆ ಸುರಿಯುತ್ತಿದ್ದ ಹದ ಮಳೆ ಅಪರೂಪವಾಗುತ್ತಿದೆ. ಕೊಡದಿಂದ ನೀರು
ಸುರಿದಂತೆ ಭರ್ರನೇ ಸುರಿಯುವ ಮಳೆ ಮೇಘ ಸ್ಪೋಟದ ಭೀತಿ ಹುಟ್ಟಿಸುತ್ತಿದೆ. ಕೇವಲ ಒಂದೆರಡು ಕಿ.ಮೀ. ಅಂತರದಲ್ಲೂ ಮಳೆ ಪ್ರಮಾಣದಲ್ಲಿ ವ್ಯಾಪಕ ವ್ಯತ್ಯಾಸಗಳು ಕಾಣುತ್ತಿವೆ.

ರಾಜರಾಜೇಶ್ವರಿ ನಗರದಲ್ಲಿ ಮಳೆಯಾಗುತ್ತಿದ್ದರೆ ಪಕ್ಕದ ಮೈಸೂರು ರಸ್ತೆಯಲ್ಲಿ ಬೆವರು ಒರೆಸಿಕೊಳ್ಳುವ ವಾತಾವರಣ ಆಗಾಗ ಕಂಡುಬರುತ್ತದೆ. ಈ ವ್ಯತ್ಯಾಸಗಳು ಸಾರ್ವತ್ರಿಕವಾಗಿರಬಹುದು. ಆದರೆ ಬದಲಾದ
ವರುಣನ ವರಸೆಯ ಬಗ್ಗೆ ಅಧ್ಯಯನ ಆಗಬೇಕಾಗಿದೆ.

ಹವಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳ ಈ ಪಲ್ಲಟಕ್ಕೆ ಕಾರಣವಾಗಿರ
ಬಹುದೆಂದು ವಿಜ್ಞಾನಿಗಳ ಅಭಿಪ್ರಾಯ. ಅದರಲ್ಲೂ ಕಳೆದ ನಾಲ್ಕು ವರ್ಷಗಳ ಬದಲಾವಣೆಯ ಹಿಂದೆ
ಪೆಸಿಫಿಕ್ ಸಾಗರದಲ್ಲಿನ ಎಲ್‌ನಿನೋ ಪ್ರಭಾವವೂ ಇರಬಹುದೆಂದು ತರ್ಕಿಸಲಾಗುತ್ತಿದೆ. ಹಸಿರನ್ನು
ಕಳೆದುಕೊಂಡು ಕಾಂಕ್ರೀಟೀಕರಣಗೊಂಡ ಬೆಂಗಳೂರಿನ ಮಳೆಯ ಮೇಲೆ ಏನೇನು ಪರಿಣಾಮಗಳಾಗಿವೆ
ಎಂದು ಆಳವಾದ ಅಧ್ಯಯನದ ಬಳಿಕವಷ್ಟೇ ತಿಳಿಯಲು ಸಾಧ್ಯ. ಆದರೆ ಬೆಂಗಳೂರಿನಲ್ಲಿ ಕುಳಿತು
ಪಶ್ಚಿಮ ಘಟ್ಟದ ಬಗ್ಗೆ, ಗಾಡ್ಗೀಳ್ ವರದಿಯ ಬಗ್ಗೆ ಮಾತನಾಡುವ ನಾವು, ಮಳೆನಾಡು ಬೆಂಗಳೂರಿನ
ವಿಪ್ಲವಗಳ ಬಗ್ಗೆ ಚರ್ಚಿಸುವುದಿಲ್ಲ. ಚರ್ಚಿಸಿದರೂ ಅದು ಬ್ರ್ಯಾಂಡ್ ಬೆಂಗಳೂರಿಗೆ ತಳುಕು ಹಾಕಿ
ಕೊಳ್ಳುತ್ತದೆ.

ನೆಲದ ಗುಣವನ್ನು ಗೌರವಿಸೋಣ
ಸದ್ಯಕ್ಕೆ, ಬೆಂಗಳೂರಿನ ನೆಲದ ಗುಣವನ್ನು ಅರಿಯದೆ ಅಷ್ಟಿಷ್ಟು ಮಳೆಯನ್ನೂ ‘ರಕ್ಕಸ ಮಳೆ’ಯೆಂದು ಹೀಗಳೆ ಯುವುದನ್ನು ಬಿಡಬೇಕಾಗಿದೆ. ಇಲ್ಲಿನ ಮಳೆಯ ಗುಣಧರ್ಮಗಳನ್ನು ಅರಿತು ಅದಕ್ಕೆ ತಕ್ಕಂತೆ ನಮ್ಮ ಯೋಚನೆ, ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಎಲ್ಲದ್ದಕ್ಕೂ ಸರಕಾರವನ್ನು ದೂರುವ ಬದಲು, ನಗರದ ನಲುಗಾಟ ದಲ್ಲಿ ನಮ್ಮ ಪಾಲು ಎಷ್ಟಿದೆಯೆಂದು ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ರಾಜಧಾನಿಯಲ್ಲಿ ಹೇಗಾದರೂ ಮನೆ ಕಟ್ಟಿಕೊಳ್ಳಬೇಕೆಂಬ ಧಾವಂತದಲ್ಲಿ ರಾಜಕಾಲುವೆ, ಕೆರೆಗಳನ್ನು ಮುಚ್ಚಿ ನಿರ್ಮಿಸಿದ ಬಡಾವಣೆಯಲ್ಲಿ ಮನೆ ಕಟ್ಟುವ, ಅಪಾರ್ಟ್‌ಮೆಂಟ್ ಕೊಳ್ಳುವ ಸಾಹಸಕ್ಕೆ ಕೈ ಹಾಕಬಾರದು.

ಸೈಟ್, ಮನೆ ಏನೇ ಇರಲಿ ಅದರ ಒಂದೆರಡು ಕಿ.ಮೀ. ಸುತ್ತಳತೆಯಲ್ಲಿ ಸಾಗಿ ಬಂದರೆ ಅಲ್ಲಿನ ಭೌಗೋಳಿಕ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಅಧಿಕಾರಿಗಳೂ ಅಕ್ರಮ-ಸಕ್ರಮದ ಆಟ ಬಿಟ್ಟು
ಮಳೆ ನೀರಿನ ಹರಿವಿನ ಬಗ್ಗೆ ಮೊದಲು ಯೋಚಿಸಿ, ನಂತರ ಯೋಜನೆಗಳನ್ನು ಕಾರ‍್ಯರೂಪಕ್ಕಿಳಿಸಬೇಕಾ
ಗಿದೆ. ರಸ್ತೆ ನಿರ್ಮಾಣ, ಚರಂಡಿ ಮತ್ತು ಪಾದಚಾರಿ ಮಾರ್ಗ ಏಕಕಾಲಕ್ಕೆ ನಿರ್ಮಿಸುವ ವಿವೇಕ ಮೆರೆಯ
ಬೇಕು. ರಾಷ್ಟ್ರೀಯ ವಿಪತ್ತು ನಿಧಿಯ ಹಣವನ್ನು ಬಳಸಿಕೊಂಡು ಪ್ರಮುಖ ಚರಂಡಿಗಳನ್ನು ಮರು ವಿನ್ಯಾಸ ಗೊಳಿಸುವ ಮೂಲಕ ಭವಿಷ್ಯದಲ್ಲಿ ಪ್ರವಾಹವನ್ನು ತಗ್ಗಿಸುವ ಪ್ರಯತ್ನ ಮಾಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಈ ಚರಂಡಿಗಳಲ್ಲಿ ಹಣ ಪೋಲಾಗದೆ ಮಳೆ ನೀರಷ್ಟೇ ಹರಿಯಬೇಕಾಗಿದೆ. ಸಾಧ್ಯವಾದರೆ ಈ ನೀರು ನೆಲದಾಳ ಸೇರಬೇಕು. ಇಲ್ಲವೇ ಇಲ್ಲಿನ ಕೆರೆಕಟ್ಟೆಗಳನ್ನು ತುಂಬಬೇಕು. ಜೀವಜಲದ ಮೂಲ ಸೆಲೆಯಾದ ಮಳೆಗೆ, ಮಳೆನೀರಿಗೆ ಗೌರವ ಕೊಡದೇ ಹೋದರೆ ಅದು ತಾನಾಗಿಯೇ ಗೌರವ ಪಡೆದು ಕೊಳ್ಳುತ್ತದೆ. ಕೊಡಗು, ವಯನಾಡಿನಲ್ಲಿ ತನ್ನದೇ ದಾರಿ ಹಿಡಿದ ಮಳೆ ಇಲ್ಲೂ ಆ ಹಾದಿಯಲ್ಲಿ ಸಾಗು ವಂತಾಗಬಾರದು. ಬೆಂಗಳೂರು ಬೆಂಗಾಡಲ್ಲ, ಮಳೆ ನಾಡು ಎನ್ನುವ ವಿವೇಕ ನಮಗಿರಲಿ.

ಇದನ್ನೂ ಓದಿ: Lokesh Kayarga Column: ತಿರಸ್ಕರಿಸುವುದು ಸುಲಭ, ಮುಂದೇನು ?