Friday, 13th December 2024

Lokesh Kayarga Column: ನಾಡಹಬ್ಬದಲ್ಲೂ ದರ್ಬಾರ್‌ ಬೇಕೆ ?

ಲೋಕಮತ

ಲೋಕೇಶ್‌ ಕಾಯರ್ಗ

ರಾಜ್ಯದ ನಾನಾ ಭಾಗಗಳಲ್ಲಿ ನವರಾತ್ರಿ ದಸರೆ ಸಂಭ್ರಮ ಕಳೆಗಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ನಾನಾ ಜಿಲ್ಲೆಗಳಲ್ಲಿ ದಸರೆ ಕಾರ‍್ಯಕ್ರಮಗಳು ನಡೆಯುತ್ತಿವೆ. ಮಡಿಕೇರಿ, ಮಂಗಳೂರು ದಸರಾ ವೈಭ ವವೂ ವರ್ಷದಿಂದ ವರ್ಷಕ್ಕೆ
ಜನಾಕರ್ಷಣೆ ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಇವೆಲ್ಲವನ್ನೂ ನವರಾತ್ರಿ ಹಬ್ಬದ ಆಚರಣೆಯಾಗಿ ಕಾಣಲಾಗುತ್ತಿ
ದೆಯೇ ಹೊರತು ನಾಡಹಬ್ಬ ಎಂದು ನಾವು ಕರೆಯುವುದಿಲ್ಲ.

ನಮ್ಮ ಪಾಲಿಗೆ ನಾಲ್ಕು ಶತಮಾನಗಳ ಇತಿಹಾಸವಿರುವ ಮೈಸೂರು ದಸರೆಯೇ ನಾಡಹಬ್ಬ. ಆದರೆ ಇದು ಇಡೀ ನಾಡಿನ ಹಬ್ಬವಾಗಿ ಉಳಿದಿದೆಯೇ ಎಂಬ ಪ್ರಶ್ನೆಗೆ ನಾವಿಂದು ಉತ್ತರ ಕಂಡುಕೊಳ್ಳಬೇಕಾಗಿದೆ. ಪ್ರತೀ ವರ್ಷದ ದಸರಾ ಕಾರ‍್ಯಕ್ರಮದ ಆಯೋಜನೆಯ ವೈಖರಿ ಗಮನಿಸಿದರೆ ನಾಡಹಬ್ಬದ ವ್ಯಾಪ್ತಿ ಕಿರಿದಾಗಿ ವಿಶ್ವವಿಖ್ಯಾತ ದಸರೆ, ಮೈಸೂರು ಹಬ್ಬದ ಮಟ್ಟಕ್ಕೆ ಇಳಿದಿದೆ ಎನ್ನುವ ಸಂಶಯ ಮೂಡುತ್ತದೆ.

ಎಂದಿನಂತೆ ಈ ಬಾರಿಯೂ ಮೈಸೂರು ದಸರಾ ಉದ್ಘಾಟನೆ ಸಮಾರಂಭದ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಆಮಂತ್ರಣ ಪತ್ರದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಹಂಪ ನಾಗರಾಜಯ್ಯ ಅವರ ಫೋಟೋ ಇರಲಿಲ್ಲ ವೆನ್ನುವುದು ಮೊದಲನೇ ಆಕ್ಷೇಪವಾಗಿತ್ತು. ಅವರ ಉದ್ಘಾಟನಾ ಭಾಷಣದ ಬಗ್ಗೆಯೂ ಒಂದಷ್ಟು ಚರ್ಚೆ ಗಳಾದವು. ಆದರೆ ಈ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿದ್ದು ಶಾಸಕ ಜಿ.ಟಿ. ದೇವೇಗೌಡರು.

ದಸರೆಗೂ ಅವರ ಭಾಷಣಕ್ಕೂ ಸಂಬಂಧ ಇಲ್ಲದಿದ್ದರೂ ಇಂದಿನ ಪ್ರಚಲಿತ ರಾಜಕೀಯ ಸನ್ನಿವೇಶದಲ್ಲಿ ಅವರ
ಮಾತುಗಳು ಹೆಚ್ಚಿನ ಟಿಆರ್‌ಪಿ ಪಡೆದಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದ ಮಧ್ಯೆ ದಸರೆ ಅಧಿಕಾರಿಗಳ ಹಬ್ಬವಾಗದೇ ಜನರ ಹಬ್ಬವಾಗಬೇಕೆಂದು ಕರೆ ನೀಡಿದರು. ಇದು ಎಲ್ಲ ವರ್ಷವೂ ಕೇಳಿ ಬರುತ್ತಿರುವ ಮಾತು.

ಮುಂದಿನ ದಸರೆಯಲ್ಲೂ ಈ ಮಾತು ಕೇಳಿ ಬರುವುದರಲ್ಲಿ ಅನುಮಾನವಿಲ್ಲ. ಆದರೆ ಅರಸೊತ್ತಿಗೆಯ ದರ್ಬಾರ್ ಬಿಟ್ಟು ನಾಡಹಬ್ಬವಾಗಿ ರೂಪಾಂತರಗೊಂಡ ದಸರೆಯಲ್ಲಿ ಯಾರ‍್ಯಾರೋ ದರ್ಬಾರು ನಡೆಸುತ್ತಲೇ ಇರುತ್ತಾರೆ. ರಾಜಪೋಷಾಕಿನ ಬದಲು ಆಧುನಿಕ ದಿರಿಸು ತೊಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಅವರ ಕುಟುಂಬಸ್ಥರು… ಹೀಗೆ ಪ್ರತೀ ವರ್ಷವೂ ದರ್ಬಾರ್ ಮುಂದುವರಿಯುತ್ತದೆ. ಈ ದರ್ಬಾರ್‌ನ ಮುಂದೆ ರಾಜವಂಶಸ್ಥರು ಅರಮನೆಗೆ
ಸೀಮಿತವಾಗಿ ನಡೆಸುವ ಸಾಂಕೇತಿಕ ದರ್ಬಾರು ಏನೇನೂ ಅಲ್ಲ.

ದಸರೆಯಷ್ಟೇ ಅಲ್ಲ
ಸರಕಾರದ ಸುತ್ತೋಲೆ ಪ್ರಕಾರ ಮೈಸೂರು ದಸರೆ ನಾಡಹಬ್ಬ. ಸರಕಾರದ ಜಾಹೀರಾತುಗಳಲ್ಲೂ ನಾಡಹಬ್ಬ ದಸರೆ ಎಂದೇ ಉಖಿಸಲಾಗುತ್ತದೆ. ಎಂದರೆ ಇದು ಇಡೀ ನಾಡಿನ ಹಬ್ಬವಾಗಬೇಕು. ವಿಶಾಲ ಕರ್ನಾಟಕದ ಉದ್ದಗಲಕ್ಕೂ ಹಬ್ಬದ ಸಂಭ್ರಮ ಕಾಣಿಸಬೇಕು. ಹಬ್ಬದ ನೆಪದಲ್ಲಿ ನಡೆಯುವ ನಾನಾ ಕಾರ‍್ಯಕ್ರಮಗಳಲ್ಲಿ ಚಾಮರಾಜನಗರದಿಂದ ಹಿಡಿದು ಬೀದರ್‌ವರೆಗಿನ ದಕ್ಷಿಣೋತ್ತರ ಕರ್ನಾಟಕದ ಜನತೆ ಒಟ್ಟು ಸೇರಬೇಕು. ನಾಡಿನ ಸಾಂಸ್ಕೃತಿಕ ಪ್ರತಿಭೆಗಳ
ಅನಾವರಣಕ್ಕೆ, ಕ್ರೀಡಾ ಪ್ರತಿಭೆಗಳ ಪ್ರದರ್ಶನಕ್ಕೆ ದಸರೆ ವೇದಿಕೆಯಾಗಬೇಕು. ನಾಡಿನ ಮುಖ್ಯಮಂತ್ರಿ,
ರಾಜ್ಯಪಾಲರು ಸೇರಿ ಸರಕಾರದ ವರಿಷ್ಠರೆಲ್ಲರೂ ಪಾಲ್ಗೊಳ್ಳುವ ಕಾರ‍್ಯಕ್ರಮಗಳಲ್ಲಿ ಈ ಪ್ರತಿಭೆಗಳು ಪ್ರಜ್ವಲಿಸಬೇಕು. ಈ ಮೂಲಕ ನಾಡಿನ ಪ್ರಜೆಗಳು ತಮ್ಮ ದರ್ಬಾರು ತೋರಿಸಬೇಕು. ಆದರೆ ಈಗ ದಸರೆ ಕಾರ‍್ಯಕ್ರಮಗಳಲ್ಲಿ ಪ್ರಜೆಗಳಿಗೆ ನೋಡುವುದಷ್ಟೇ ಕೆಲಸ.

ದಸರೆ ಆರಂಭವಾಗಲು ಒಂದೆರಡು ತಿಂಗಳಿರುವಾಗ ಸಿಎಂ ನೇತೃತ್ವದಲ್ಲಿ ದಸರಾ ಸಿದ್ಧತೆ ಸಭೆ ನಡೆಯುತ್ತದೆ. ಅನುದಾನ ಮತ್ತು ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸಿದರೆ ಅಲ್ಲಿಂದ ಮುಂದೆ ಅಧಿಕಾರಿಗಳದ್ದೇ ದರ್ಬಾರು. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ದಸರೆಗೆ ಎರಡು ಕೋಟಿ ರೂ. ಅನುದಾನ ಕೊಟ್ಟಾಗ ಎಲ್ಲರೂ ಹುಬ್ಬೇರಿಸಿದ್ದರು. ಮುಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗ ದಸರಾ ಸಂದರ್ಭದಲ್ಲಿ ಮೈಸೂರಿಗೆ 100 ಕೋಟಿ ರೂ.ಗಳ ಅನುದಾನ ಘೋಷಿಸಿದ್ದರು. ಈ ವರ್ಷ ಬರೋಬ್ಬರಿ 40 ಕೋಟಿ
ರೂ. ಅನುದಾನ ಘೋಷಿಸಲಾಗಿದೆ. ಆದರೆ ಎಷ್ಟೇ ಕೋಟಿಗಳು ಬಂದರೂ ಕೊನೆಯಲ್ಲಿ ಕೊರತೆಯ ಕೊರಗು ತಪ್ಪುವುದಿಲ್ಲ.

ಸಿಕ್ಕ ಅನುದಾನದಲ್ಲಿ ಅರ್ಧದಷ್ಟು ಮೊತ್ತ ಅನಪೇಕ್ಷಿತ ಆಡಂಬರಕ್ಕೆ ಖರ್ಚಾದರೆ, ಹೊರಗಿನ ಕಲಾವಿದರು, ಅತಿಥಿಗಳ ಸಂಭಾವನೆ, ವಾಸ್ತವ್ಯಕ್ಕೆ ಕೋಟಿಗಟ್ಟಲೆ ಹಣ ಸುರಿಯಲಾಗುತ್ತದೆ. ದಸರೆ ವೇದಿಕೆ ರಚನೆ, ಆನೆಗಳ ನಿರ್ವಹಣೆ, ಜಂಬೂ ಸವಾರಿ ಮೆರವಣಿಗೆ, ಗಣ್ಯರ ಆತಿಥ್ಯ, ಅರಮನೆಯ ಗೌರವ ಸಂಭಾವನೆ, ಅತಿಥಿ ಕಲಾವಿದರ ಸಂಭಾವನೆ, ದೀಪಾಲಂಕಾರ ಇತ್ಯಾದಿ ಬಾಬ್ತುಗಳ ಕೋಟಿ ಲೆಕ್ಕಾಚಾರ ಮುಗಿದು ಹೋಗುತ್ತದೆ. ಲೆಕ್ಕಕ್ಕೆ ಸಿಗದ ಮೊತ್ತವನ್ನು ಇನ್ನಾವುದೋ ಬಾಬ್ತಿಗೆ ಜಮೆ ಮಾಡಿ ದಸರೆ ಪರಂಪರೆಗೆ ಮಂಗಳ ಹಾಡಲಾಗುತ್ತದೆ. ಪ್ರತೀ ವರ್ಷ ದಸರೆಯ ವೇಳೆಗೆ ಮೈಸೂರು ನಗರದ ರಸ್ತೆಗಳಿಗೆ ಒಂದಷ್ಟು ತೇಪೆ ಕಾರ‍್ಯ ನಡೆಯುತ್ತದೆ.

ಆದರೆ ಇದೆಲ್ಲವೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೀಮಿತ. ದಸರೆಯ 10 ದಿನಗಳಲ್ಲಿ ಏಳೆಂಟು ಕಿ.ಮೀ.
ವ್ಯಾಪ್ತಿಯ ಮೈಸೂರು ನಗರವಷ್ಟೇ ಜಗಮಗಿಸುತ್ತದೆ. ವರ್ತುಲ ರಸ್ತೆಯಾಚೆಗಿನ ಮೈಸೂರು ಮತ್ತು ಇಲ್ಲಿನ
ಕುಗ್ರಾಮಗಳು ಎಂದಿನಂತೆ ಕತ್ತಲಲ್ಲಿ ಮುಳುಗಿರುತ್ತವೆ.

ನಾಡು ಕಟ್ಟುವ ಹಬ್ಬ
ರಾಜಪ್ರಭುತ್ವದ ಕಾಲದಿಂದಲೂ ಮೈಸೂರು ದಸರೆ ಜಾತಿ, ಧರ್ಮ,ಮತ,ಭಾಷೆ, ಪ್ರಾದೇಶಿಕತೆಯ ಗಡಿ ಮೀರಿದ ಹಬ್ಬವಾಗಿತ್ತು. ಮೈಸೂರು ದಸರೆ ಹೆಸರಿನಲ್ಲಿಯೇ ಅದು ನಾಡಹಬ್ಬವಾಗಿ ಆಚರಣೆಯಾಗುತ್ತಿತ್ತು. ಅರಸರ ಆಡಂಬರ, ವೈಭವ ಪ್ರದರ್ಶನ, ಅಥವಾ ಧಾರ್ಮಿಕ ವಿಽಗಳಿಗೆ ಸೀಮಿತವಾಗದೇ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ಸಾಂಸ್ಕೃತಿಕ ಹಬ್ಬವಾಗಿಯೂ ಆಚರಣೆಯಾಗುತ್ತಿತ್ತು. ಆದರೆ ನಾಡಹಬ್ಬವೆಂದು ಕರೆದ ನಾವೇ ಈಗ ದಸರೆಯ ವ್ಯಾಪ್ತಿಯನ್ನು ಇಡೀ ನಾಡಿಗೆ ವಿಸ್ತರಿಸುವ ಬದಲು ಮೈಸೂರು ನಗರಕ್ಕೆ ಸೀಮಿತಗೊಳಿಸುತ್ತಿದ್ದೇವೆ.
ನಾಡಹಬ್ಬದ ವೇದಿಕೆ ಬಳಸಿಕೊಂಡು ರಾಜ್ಯದ ಸಾಂಸ್ಕೃತಿಕ ಲೋಕವನ್ನು ಮತ್ತು ಕ್ರೀಡಾಲೋಕವನ್ನು ಕಟ್ಟುವ ಅದ್ಭುತ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೇವೆ.

ರಾಜಾಶ್ರಯದಲ್ಲಿ ಆಚರಿಸುತ್ತಿದ್ದ ದಸರೆಯಲ್ಲಿ ಮಹಾರಾಜರ ದರ್ಬಾರ್ ಪ್ರಮುಖ ಆಕರ್ಷಣೆಯಾಗಿತ್ತು. ಮೈಸೂರು ರಾಜಪ್ರಭುತ್ವದ ಕೊನೆಯ ಅರಸರಾದ ಜಯಚಾಮರಾಜ ಒಡೆಯರ್ ಅವರು, ಪ್ರಜಾ ಸರಕಾರದ ಪ್ರತಿನಿಧಿಯಾದ ಬದಲಾದ ಬಳಿಕವೂ ಈ ಸಾಂಪ್ರದಾಯಿಕ ಉತ್ಸವವನ್ನು ಮುಂದುವರಿಸಬೇಕೆನ್ನುವುದು ಜನರ ಅಪೇಕ್ಷೆಯಾಗಿತ್ತು. ಸಾಕಷ್ಟು ಜಿಜ್ಞಾಸೆ, ಅಡೆತಡೆಗಳ ಬಳಿಕ ದಸರೆ ಈಗಿನ ರೂಪ ಪಡೆಯಿತು. ರಾಜವಂಶಸ್ಥರ ದರ್ಬಾರ್ ಸಾಂಪ್ರ ದಾಯಿಕ ಆಚರಣೆಗೆ ಸೀಮಿತವಾಯಿತು. ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಕೂರಿಸಿ ನಾವು ಮೈಸೂರು ಹಬ್ಬಕ್ಕೆ ನಾಡಹಬ್ಬದ ಪಟ್ಟ ಕಟ್ಟಿದೆವು. ದಸರಾ ಸಂಭ್ರಮವನ್ನು ಇಡೀ ನಾಡಿಗೆ ವಿಸ್ತರಿಸುವ ಕೆಲಸವೂ ನಡೆಯಿತು. ನಿಜಕ್ಕೂ ಇದೊಂದು ಅಪೂರ್ವ ಅವಕಾಶವಾಗಿತ್ತು.

ಧಾರ್ಮಿಕ ಲೇಪನ ಮತ್ತು ಸಾಂಸ್ಕೃತಿಕ ಬಂಧದೊಂದಿಗೆ ಇಡೀ ರಾಜ್ಯದಲ್ಲಿ 10 ದಿನಗಳ ಕಾಲ ಹಬ್ಬ ಆಚರಿಸುವ, ಎಲ್ಲರನ್ನೂ ಒಟ್ಟು ಸೇರಿಸುವ ಕೆಲಸಕ್ಕೆ ಇದೊಂದು ಅದ್ಭುತ ವೇದಿಕೆಯಾಗಿತ್ತು. ಆರಂಭದಲ್ಲಿ ದಸರೆಯ ಯೋಚನೆ, ಯೋಜನೆ, ರೂಪುರೇಷೆಗಳೆಲ್ಲವೂ ಈ ಮಾದರಿಯಲ್ಲೇ ಇತ್ತು.

ಕುಂದಿದ ದಸರೆ ಬೆಳಕು
ನೀವೇ ನೆನಪಿಸಿಕೊಳ್ಳಿ. ದಶಕಗಳ ಹಿಂದೆ ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ದಸರಾ ಕ್ರೀಡಾ ಕೂಟ ಎಂದರೆ ಹಬ್ಬದ ಸಂಭ್ರಮವೇ ಮೇಳೈ ಸುತ್ತಿತ್ತು. ಇದರಲ್ಲಿ ಗೆಲ್ಲುವುದಕ್ಕಾಗಿಯೇ ಕ್ರೀಡಾಪಟುಗಳು ತಿಂಗಳು ಗಟ್ಟಲೆ ಬೆವರು ಸುರಿಸುತ್ತಿದ್ದರು. ಮೈಸೂರಿನಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದ ಅಂತಿಮ ಹಣಾಹಣಿ ರೋಚಕ ವಾಗಿರುತ್ತಿತ್ತು. ಕ್ರೀಡಾಕೂಟ ಮುಗಿದ ಬಳಿಕ ಮೈಸೂರನ್ನು ಸುತ್ತು ಹಾಕಿ ತಮ್ಮ ಜಿಲ್ಲೆ ಗಳಿಗೆ ಮರಳುತ್ತಿದ್ದ ಕ್ರೀಡಾಪಟುಗಳಿಗೆಇದೊಂದು ಅವಿಸ್ಮರಣೀಯ ಕ್ಷಣವಾಗಿ ನೆನಪಲ್ಲಿ ಉಳಿಯುತ್ತಿತ್ತು. ದಸರಾದ ಕುಸ್ತಿ ಸ್ಪರ್ಧೆಯಲ್ಲಿ ಸೆಣಸಲು ಇಡೀ ದೇಶದ ಕುಸ್ತಿ ಸ್ಪರ್ಧಿಗಳು ಹಾತೊರೆಯುತ್ತಿದ್ದರು. ಕಲೆ, ನೃತ್ಯ, ಸಾಹಿತ್ಯ ಮತ್ತಿತರ ಕ್ಷೇತ್ರದ ಉದಯೋನ್ಮುಖ ಪ್ರತಿಭೆಗಳು ಮೈಸೂರು ದಸರಾದ ಬೆಳಕಿನಲ್ಲಿ ಮಿಂಚಲು ಹಂಬಲಿಸುತ್ತಿದ್ದರು.

ದಸರೆ ಎಂದರೆ ಜಂಬೂ ಸವಾರಿ, ಯುವಜನ ಮೇಳ, ಆಹಾರ ಮೇಳ, ಬೆಳಕಿನ ಚಿತ್ತಾರ ಅಷ್ಟೇ ಆಗಿರಲಿಲ್ಲ.
ಈ ಸಂಭ್ರಮ ಮೈಸೂರಿಗಷ್ಟೇ ಸೀಮಿತವಾಗಿರಲಿಲ್ಲ. ಇಂದು ದಸರೆಯ ಕ್ರೀಡಾಕೂಟಕ್ಕೆ ವಿಶೇಷ ಸಿದ್ಧತೆ ಬೇಕಿಲ್ಲ. ಕ್ರೀಡಾಕೂಟದ ದಿನ ಚಾಮುಂಡಿ ವಿಹಾರ ಮೈದಾನದಲ್ಲಿ ಒಂದರೆಡು ಟೆಂಟ್‌ಗಳನ್ನು ಹಾಕಿದರೆ ಮುಗಿಯಿತು. ಮೊದಲು ಕ್ರೀಡಾಪಟುಗಳಿಗೆ ಶೂ ಮೊದಲಾದ ಪರಿಕರ ನೀಡುವ ಸಂಪ್ರದಾಯವಿತ್ತು. ಈ ಅದಕ್ಕೂ ಕೊಕ್ಕೆ ಹಾಕಲಾಗಿದೆ. ಕೆಲವೊಂದು ಕ್ರೀಡೆಗಳನ್ನೂ ಕೈ ಬಿಡಲಾಗಿದೆ. ಈ ಹಿಂದೆ ದಸರಾ ಕ್ರೀಡಾಕೂಟದಲ್ಲಿ ಕಾಣುತ್ತಿದ್ದ ಪೈಪೋಟಿ, ಭಾಗವಹಿ ಸಲೇಬೇಕೆಂಬ ತುಡಿತ ಎರಡೂ ಕಾಣಿಸುತ್ತಿಲ್ಲ.

ಕ್ರೀಡಾಪಟುಗಳಿಗೆ ನೀಡುತ್ತಿದ್ದ ಸಂಭಾ ವನೆಯಲ್ಲೂ ಹೆಚ್ಚೇನೂ ಏರಿಕೆಯಾಗಿಲ್ಲ. ಆದರೆ ಕ್ರೀಡಾಪಟುಗಳ
ವಾಸ್ತವ್ಯದ ಹೆಸರಿನಲ್ಲಿ ಈಗಲೂ ಲಕ್ಷಾಂತರ ರೂ. ವ್ಯಯಿಸಲಾಗುತ್ತಿದೆ. ದಸರೆ ಮತ್ತು ಇತರೆ ಕ್ರೀಡಾಕೂಟ ಗಳಿಗೆ ಬರುವವರಿಗಾಗಿಯೇ ಕಾಯಂ ನೆಲೆಯಲ್ಲಿ ಕ್ರೀಡಾ ಹಾಸ್ಟೆಲ್‌ವೊಂದನ್ನು ಕಟ್ಟಿದ್ದರೆ ಪ್ರತೀ ವರ್ಷ ಲಕ್ಷಾಂತರ ರೂ. ವ್ಯಯಿಸುವ ಅಗತ್ಯ ಇರಲಿಲ್ಲ.

ಈಗ ದಸರೆಯ ವೇಳೆ ವೇದಿಕೆ ಏರಲು ಪ್ರತಿಭೆಯ ಜತೆ ಸಾಕಷ್ಟು ಪ್ರಭಾವವೂ ಬೇಕು. ಮೊದಲು ಸ್ಥಳೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ತಂಡಗಳನ್ನು ದಸರೆಯ ಸಂದರ್ಭದಲ್ಲಿ ಕಾರ‍್ಯಕ್ರಮ ನೀಡಲು ಆಹ್ವಾನಿಸ ಲಾಗುತ್ತಿತ್ತು. ಯುವ ಸಂಭ್ರಮದಲ್ಲಿ ಭಾಗವಹಿಸುವ ಶಾಲಾ ಕಾಲೇಜು ತಂಡಗಳಿಗೆ ಅದೊಂದು ಜೀವಮಾನದ ಸಂಭ್ರಮವಾಗಿರುತ್ತಿತ್ತು.

ಈಗ ಕೊನೆ ಕ್ಷಣದಲ್ಲೂ ತಂಡಗಳು ಸೇರ್ಪಡೆಯಾಗುತ್ತವೆ, ಹೊರಗುಳಿಯುತ್ತವೆ. ಮೈಸೂರು ವಿವಿ ಬಯಲು ಮಂದಿರದಲ್ಲಿ ನಡೆಯುವ ‘ಯುವ ಸಂಭ್ರಮ’ದಲ್ಲಿ ಸಿನಿಮಾ ಹಾಡುಗಳ ಭರಾಟೆಯೇ ಹೆಚ್ಚು. ಇನ್ನು ಯುವ ದಸರಾದಲ್ಲಿ ಸಿನಿ ತಾರೆಯರು, ಬಾಲಿವುಡ್ ಗಾಯಕ, ಗಾಯಕಿಯರದ್ದೇ ಅಬ್ಬರ. ಹೊರಗಿನ ತಾರೆಯರನ್ನು ಕರೆ ತರುವುದೇ ಆಯಾ ವರ್ಷದ ದಸರಾ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಈ ವರ್ಷದಿಂದ ಈ ಕಾರ‍್ಯಕ್ರಮವನ್ನು ವೇದಿಕೆಯಿಂದ ಸಮೀಪದಿಂದ ವೀಕ್ಷಿಸಬೇಕಾದರೂ 8 ಸಾವಿರ ರೂ. ಗಳ ವಿಐಪಿ ಟಿಕೆಟ್ ಖರೀದಿಸಬೇಕು. ಇದುವರೆಗೆ
ಉಚಿತ ಪ್ರವೇಶವಿದ್ದ ಕಾರ‍್ಯಕ್ರಮ ಈ ವರ್ಷದಿಂದ ಸ್ಥಳಾಂತರಗೊಂಡು ಹಣವಂತರ ಹತ್ತಿರಕ್ಕೆ ಸಾಗಿದೆ. 40
ಕೋಟಿ ರು. ಬರೋಬ್ಬರಿ ಅನುದಾನದ ಹೊರತಾಗಿಯೂ ಗೋಲ್ಡ್ ಪಾಸ್ ಮೊತ್ತವನ್ನು 5 ಸಾವಿರ ರೂ.ಗಳಿಂದ 6500 ರೂ.ಗಳಿಗೆ ಏರಿಸಲಾಗಿದೆ. ಪ್ರವಾಸಿಗರಿಗೆ ಸುಲಭದಲ್ಲಿ ದಸರೆ ಲೈಟಿಂಗ್ಸ್ ನೋಡಲು ಬಳಸಬಹುದಾಗಿದ್ದ ಡಬಲ್ ಡೆಕ್ಕರ್ ಬಸ್ ಟಿಕೆಟ್ ಶುಲ್ಕವನ್ನು 350ರೂ.ಗಳಿಂದ 500ರೂ. ಗಳಿಗೆ ಏರಿಸಲಾಗಿದೆ. ಮಹಾರಾಜರ ಕಾಲದಲ್ಲಿ ಮೈಸೂರಿಗೆ ಬಂದವರು ಉಳಿದುಕೊಳ್ಳುವುದಕ್ಕಾಗಿಯೇ ಉಚಿತ ಛತ್ರಗಳಿತ್ತು. ಈಗ ವಾಸ್ತವ್ಯದಿಂದ ಹಿಡಿದು ಜಂಬೂ ಸವಾರಿ, ಪಂಜಿನ ಕವಾಯತು ವೀಕ್ಷಣೆಯ ತನಕ ಎಲ್ಲವೂ ಪೆಯ್ಡ್ ಸರ್ವಿಸ್.

ವಾರ್ಷಿಕ ಆಚರಣೆಯಷ್ಟೇ ಅಲ್ಲ ನಾಡಹಬ್ಬವಾಗಿ ಬದಲಾದ ದಸರೆ ಕೇವಲ ವಾರ್ಷಿಕ ಆಚರಣೆಯಾಗಿ ಉಳಿಯ ಬಾರದು. ದಸರಾ ಕ್ರೀಡಾಕೂಟದ ಮಾದರಿಯಲ್ಲಿ ಈ ವೇದಿಕೆಯನ್ನು ಬಳಸಿಕೊಂಡು ನಾವು ವರ್ಷ ಪೂರ್ತಿ, ನಾಡಿ ನಾದ್ಯಂತ ಸಾಂಸ್ಕೃತಿಕ, ಸಾಹಿತ್ಯಿಕ ಸ್ಪರ್ಧೆಗಳನ್ನು ಏರ್ಪಡಿಸಲು ಸಾಧ್ಯವಿದೆ. ಹೋಬಳಿ ಮಟ್ಟದಲ್ಲಿ ಗೆದ್ದವರು ತಾಲ್ಲೂಕು ಮಟ್ಟಕ್ಕೆ, ಇಲ್ಲಿ ಗೆದ್ದವರು ಜಿಲ್ಲೆ, ವಿಭಾಗ ಮಟ್ಟದಲ್ಲಿ ಜಯಿಸಿ ದಸರೆಯ ವೇದಿಕೆಯಲ್ಲಿ ಲಕ್ಷಾಂತರ ಪ್ರೇಕ್ಷಕರ ಸಮ್ಮುಖದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಬಹುದು. ದಸರೆಯ ಹೆಸರಿನಲ್ಲಿ ವರ್ಷ ಪೂರ್ತಿ ಕಾರ‍್ಯಕ್ರಮ ಆಯೋಜಿಸುವ ಮೂಲಕ ನಮ್ಮ ಕಲೆ, ಸಂಸ್ಕೃತಿ, ಜನಪದ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನೂ ಮಾಡಬಹುದು. ಟಿವಿ ರಿಯಾಲಿಟಿ ಶೋಗಳಲ್ಲಿ ನೈಜತೆ ಕಳೆದುಕೊಳ್ಳುವ ಪ್ರತಿಭೆಗಳಿಗೆ ನಿಜವಾದ ವೇದಿಕೆಗಳಲ್ಲಿ ಬೆಳೆದು ಬೆಳಗಲು ಅವಕಾಶ ಮಾಡಿಕೊಡಬಹುದು. ಹಾಗೆಯೇ ನಮ್ಮ ದೇಶೀ ಕ್ರೀಡೆಗಳಿಗೆ ಉತ್ತೇಜನ ನೀಡಬಹುದು.

ಖಾಸಗಿ ಪ್ರಾಯೋಜಕರನ್ನು ಬಳಸಿಕೊಂಡು ಸರಕಾರದ ದುಡ್ಡಿಲ್ಲದೆಯೇ ಇದೆಲ್ಲವನ್ನೂ ಸಂಘಟಿಸಬಹುದು. ದಸರೆ ಸಮಿತಿಗಳು ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ದರ್ಬಾರ್ ಕೇಂದ್ರಗಳಾಗದೇ, ನಾಡ ಹಬ್ಬದ ಕಾಯಂ
ಆಚರಣೆಗೆ ಪರಿಣತರ ಸಮಿತಿ ರಚನೆಯಾಗಬೇಕು. ಈಗಾಗಲೇ ಕೇಳಿ ಬರುತ್ತಿರುವ ಪ್ರಾಧಿಕಾರದ ಕೂಗು ಇದಕ್ಕೆ ಪೂರಕವಾಗಬಹುದು. ಕೇಂದ್ರ ಸರಕಾರ ಗಣರಾಜ್ಯೋತ್ಸವವನ್ನು ಆಚರಿಸುವ ಮಾದರಿಯಲ್ಲಿಯೇ ನಾವು ದಸರೆ ಆಚರಿಸಬಹುದು.

ದಸರಾ ವೇದಿಕೆಯನ್ನು ಅಲಂಕರಿಸಿದ ಪ್ರತಿಭೆಗಳಿಗೆ ವಿಜಯದಶಮಿ ದಿನ ಅರಮನೆ ಒಳಗೆ ಕುಳಿತು ಜಂಬೂ ಸವಾರಿಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಬಹುದು. ಈ ಬಾರಿಯ ದಸರೆ ಮುಗಿದ ಕೂಡಲೇ ಗ್ರಾಮ ಮಟ್ಟದಿಂದ ಆರಂಭವಾಗುವ ಸ್ಪರ್ಧೆ ಮುಂದಿನ ದಸರೆಯ ವೇಳೆಗೆ ಸಮಾಪ್ತಿಯಾಗುವ ರೀತಿಯಲ್ಲಿ ವರ್ಷ ಪೂರ್ತಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಸಂಘಟಿಸಬೇಕು. ಇದಕ್ಕೆ ಬೇಕಿರುವುದು ದೂರದೃಷ್ಟಿ ಉಳ್ಳ ಒಂದಷ್ಟು ಪರಿಣಿತರ ತಂಡ. ದಸರೆ ನಿಜವಾದ ಅರ್ಥದಲ್ಲಿ ಇಡೀ ಕರುನಾಡಿನ ಹಬ್ಬವಾಗಲಿ ಎನ್ನುವುದು ಕನ್ನಡಿಗರೆಲ್ಲರ ಆಶಯ.

ಇದನ್ನೂ ಓದಿ: Lokesh Kayarga Column: ತಿರಸ್ಕರಿಸುವುದು ಸುಲಭ, ಮುಂದೇನು ?