Sunday, 24th November 2024

Lokesh Kayarga Column: ನವೆಂಬರ್:‌ ಇದು ಹಕ್ಕೊತ್ತಾಯದ ತಿಂಗಳು !

ಲೋಕಮತ

ಲೋಕೇಶ್‌ ಕಾಯರ್ಗ

kaayarga@gmail.com

ನವೆಂಬರ್ 1 ಮತ್ತೆ ಬಂದಿದೆ. ವರ್ಷಕ್ಕೊಮ್ಮೆ ನಮ್ಮ ಕನ್ನಡ ಪ್ರೀತಿ ಎಂಬ ದೀಪವನ್ನು ಬೆಳಗುವ ಕಾಲವಿದು. ಸರಕಾರದ ಪಾಲಿಗೆ ಕನ್ನಡಿಗರ ಹಿತರಕ್ಷಣೆಯ ಘೋಷಣೆಯನ್ನು ಪುನರುಚ್ಚರಿಸುವ ದಿನ. ಕನ್ನಡದ ರಕ್ಷಣೆಯ ಹೆಸರಿನಲ್ಲಿ ಸ್ಥಾಪನೆಯಾದ ನೂರೆಂಟು ಸರಕಾರಿ ಮತ್ತು ಖಾಸಗಿ ಸಂಘಟನೆಗಳಿಗೆ ಹಕ್ಕೊತ್ತಾಯದ ಸಮಯ. ವಾರ್ಷಿಕ ಚಂದಾ ಎತ್ತುವವರಿಗೆ ‘ರಾಜ್ಯೋಸ್ತವ’ ಮಾಸ. ಮನೆಯಲ್ಲಿ ಕುಳಿತು ರಿಯಾಲಿಟಿ ಶೋಗಳ ರಿಪೀಟ್ ಟೆಲಿಕಾಸ್ಟ್‌ ವೀಕ್ಷಿಸುವ ಬಹುತೇಕ ಕನ್ನಡಿಗರಿಗೆ ರಜಾ-ಮಜಾ ದಿನ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಬಂದ ಈ ಬಾರಿಯ ರಾಜ್ಯೋತ್ಸವ ಬೋನಸ್.

ಹಾಗೆಂದು ನವೆಂಬರ್ ಒಂದು ನಮಗಷ್ಟೇ ರಾಜ್ಯೋತ್ಸವ ದಿನವಲ್ಲ. ಇದೇ ದಿನ ಏಕೀಕರಣ ಕಂಡ ಹರಿಯಾಣ, ಪಂಜಾಬ್, ಆಂಧ್ರ ಪ್ರದೇಶ, ಕೇರಳ, ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್‌ಗಳಿಗೂ ಇದು ವಿಶೇಷ ದಿನ . ಆದರೆ ಏಕೀಕರಣ ಭಾಗ್ಯ ಕಂಡು 68 ವರ್ಷಗಳ ಬಳಿಕವೂ ಕನ್ನಡದ ಅಸ್ತಿತ್ವ ಮತ್ತು ಅಸ್ಮಿತೆಯ ಹೆಸರಿನಲ್ಲಿ ‘ಉಗ್ರ’ ಹೋರಾಟ ನಡೆಸುತ್ತಿರುವವರು ನಾವು ಮಾತ್ರ. ಇದಕ್ಕಾಗಿ ಹತ್ತಾರು ಸರಕಾರಿ ಸಂಘಟನೆಗಳು, ಸಾವಿರಾರು ಖಾಸಗಿ ಸಂಘಟನೆಗಳಿವೆ. ಕಳೆದ ಏಳು ದಶಕಗಳಿಂದ ಕನ್ನಡದ ಹೆಸರಿನಲ್ಲಿ ನಾವು ಹೋರಾಡುತ್ತಲೇ ಬಂದಿದ್ದೇವೆ. ಆದರೆ ಗೋಕಾಕ್ ಚಳವಳಿ ಬಿಟ್ಟರೆ ನಿರ್ಣಾಯಕವಾದ, ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಮತ್ತೊಂದು ಚಳವಳಿಯನ್ನು ಇದುವರೆಗೆ ಕಂಡಿಲ್ಲ. ಈಗಿನ ನಮ್ಮ ಬಹುತೇಕ ಹೋರಾಟಗಳು ಕನ್ನಡದ ಹೆಸರಿನಲ್ಲಿ , ಆಯಾ ಸಂಘಟನೆಗಳ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ತೋರಿಕೆಯ ಪ್ರದರ್ಶನಗಳಾಗಿ ಕಾಣುತ್ತಿವೆಯೇ ಹೊರತು ಬೇರೇನೂ ಅಲ್ಲ. ಇಲ್ಲವಾಗಿದ್ದರೆ ಕಳೆದ ಹಲವು ದಶಕಗಳಿಂದ ನಮ್ಮ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗೀಕರಿಸಿರುವ ಠರಾವುಗಳಲ್ಲಿ ಯಾವುದು ಜಾರಿಗೆ ಬಂದಿದೆ ಎಂದು ನೀವೇ ಯೋಚಿಸಿ.

ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಚಾರದಲ್ಲಿ ಕಟ್ಟುನಿಟ್ಟಿನ ಶಿಫಾರಸುಗಳನ್ನು ಮಾಡಿದ ಡಾ. ಸರೋಜಿನಿ ಮಹಿಷಿ ವರದಿಗೆ ಈಗ ಬರೋಬ್ಬರಿ 40 ವರ್ಷ. ರಾಮಕೃಷ್ಣ ಹೆಗಡೆ ಸರಕಾರ ಈ ವರದಿಯನ್ನು ಸ್ವೀಕರಿಸಿದ ಬಳಿಕ, ಬಹುತೇಕ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಮಹಿಷಿ ವರದಿ ಜಾರಿಗೆ ತರಬೇಕೆಂಬ ನಿರ್ಣಯ ಅಂಗೀಕರಿಸಲಾಗಿದೆ. ಆದರೆ ಎಲ್ಲವೂ ಘೋಷಣೆಗಳಾಗಿಯೇ ಉಳಿದಿವೆ.

ಹಾಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ವರದಿ ನೀಡಲು ಕನ್ನಡ ಪ್ರಾಧಿಕಾರದ ಅಂದಿನ ಅಧ್ಯಕ್ಷರಾಗಿದ್ದ ಎಸ್.ಜಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಈ ಸಮಿತಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾದ 24 ಶಿಫಾರಸ್ಸುಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ 7 ಸಲಹೆಗಳ ಸಹಿತ ವರದಿ ಸಲ್ಲಿಸಿದೆ. ಇದಾಗಿ ಏಳು ವರ್ಷಗಳಾಗಿವೆ. ಯಾವ ಶಿಫಾರಸ್ಸುಗಳು ಅನುಷ್ಠಾನಕ್ಕೆ ಬಂದಿಲ್ಲ.

ಇದೊಂದೇ ಅಲ್ಲ, ಕನ್ನಡದ ವಿಚಾರದಲ್ಲಿ ನಮ್ಮ ಬಹುತೇಕ ಸಂಕಲ್ಪಗಳೆಲ್ಲವೂ, ಘೋಷಣೆಯ ಹಂತದಲ್ಲಿಯೇ ಉಳಿದುಕೊಂಡಿವೆ. ರಾಜ್ಯದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಬೇಕು, ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡವೇ ಮಾಧ್ಯಮವಾಗಬೇಕು. ಶಾಸ್ತ್ರೀಯ ಸ್ಥಾನಮಾನ ಪಡೆದ ಭಾಷೆಗೆ ಕೇಂದ್ರ ಸರಕಾರದಿಂದ ಉಳಿದ ಭಾಷೆಗಳಿಗೆ ಸಿಗುವಷ್ಟೇ ಪ್ರೋತ್ಸಾಹ ಸಿಗಬೇಕು. ನಮ್ಮ ಥಿಯೇಟರ್‌ಗಳಲ್ಲಿ ಕನ್ನಡ ಭಾಷಾ ಚಿತ್ರಗಳಿಗೆ ಆದ್ಯತೆ ನೀಡಬೇಕು, ಖಾಸಗಿ ಮಳಿಗೆಗಳ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಪ್ರಧಾನವಾಗಿರಬೇಕು. ರೈಲ್ವೆ, ಬ್ಯಾಂಕ್ ಸೇರಿದಂತೆ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಈ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಕಂಪನಿಗಳ ಉದ್ಯೋಗಗಳಲ್ಲೂ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ನೆಲ-ಜಲ ರಕ್ಷಣೆ, ಬಳಕೆ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಬೇಕು… ಹೀಗೆ ಹತ್ತಾರು ಅಹವಾಲುಗಳು ಹಿಂದೆಯೂ ಕೇಳಿ ಬರುತ್ತಿದ್ದವು. ಈಗಲೂ ಕೇಳಿ ಬರುತ್ತಿವೆ. ಮುಂದೆಯೂ ಕೇಳಿ ಬರಲಿವೆ.

ಹಾಗೆ ನೋಡಿದರೆ 170 ವರ್ಷಗಳಷ್ಟು ಹಿಂದೆಯೇ ನಾವು ಕನ್ನಡಕ್ಕಾಗಿ ಕೈ ಎತ್ತಿದ್ದೆವು. 134 ವರ್ಷಗಳ ಹಿಂದೆಯೇ ಏಕೀಕರಣದ ಉದ್ದೇಶಕ್ಕಾಗಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿತ್ತು. 1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಜೊತೆಗೆ ನಡೆದ ಏಕೀಕರಣ ಸಭೆಯಲ್ಲಿ ಹುಯಿಲಗೋಲ ನಾರಾಯಣ ರಾಯರು, ‘ಉದಯವಾಗಲಿ, ನಮ್ಮ ಚೆಲುವ ಕನ್ನಡ ನಾಡು’ ಎಂಬ ಹಾಡು ಹಾಡಿ ಬರೋಬ್ಬರಿ ನೂರು ವರ್ಷಗಳಾಗಿವೆ. ಆದರೆ ಅಂದು ಕನ್ನಡಕ್ಕಾಗಿ ಎತ್ತಿದ ಕೈಯನ್ನು ಇಳಿಸುವ ಅವಕಾಶ ಇದುವರೆಗೆ ಸಿಕ್ಕಿಲ್ಲ.

ಮೈಸೂರು ರಾಜ್ಯದ ಜತೆ ಉದಯವಾದ ಇತರ ರಾಜ್ಯಗಳನ್ನು ಹೋಲಿಸಿ ನೋಡಿ. ದಕ್ಷಿಣದ ಕೇರಳ, ಆಂಧ್ರ, ತೆಲಂಗಾಣ, ಉತ್ತರದ ಪಂಜಾಬ್, ಹರಿಯಾಣ ರಾಜ್ಯಗಳಲ್ಲೂ ನಾನಾ ಸಮಸ್ಯೆಗಳಿವೆ. ಆದರೆ ಭಾಷೆಯ ವಿಚಾರದಲ್ಲಿ ಅವರಿಗೆ ಆತಂಕಗಳಿಲ್ಲ. ಭಾಷೆಯ ರಕ್ಷಣೆಗೆ ಅಲ್ಲಿ ರಕ್ಷಣಾ ಪಡೆಗಳಿಲ್ಲ. ಕನ್ನಡಿಗರಷ್ಟು ಸ್ವಚ್ಛವಾಗಿ ಹಿಂದಿ, ಇಂಗ್ಲಿಷ್ ಮಾತನಾಡಲು ಬಾರದಿದ್ದರೂ ಮಲೆಯಾಳಿಗಳು ಮತ್ತು ತಮಿಳರು ರೈಲ್ವೆ ಸೇರಿದಂತೆ ಕೇಂದ್ರ ಸರಕಾರಿ ಉದ್ಯಮ ಗಳಲ್ಲಿ ಹೆಚ್ಚಿನ ಉದ್ಯೋಗ ಗಿಟ್ಟಿಸಿದ್ದಾರೆ. ಬ್ಯಾಂಕುಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಮೊದಲಿನಿಂದಲೂ ಅವರ ಬಾಹುಳ್ಯ ಹೆಚ್ಚಿದೆ. ಪಾಪ್ ಸಂಗೀತದ ಮೂಲಕ ಪಂಜಾಬಿ ಭಾಷೆ ಇಂದು ವಿಶ್ವಭಾಷೆಯಾಗಿದೆ. ಪಂಜಾಬಿಗಳು ಕೆನಡಾ, ಅಮೆರಿಕದಂತಹ ದೇಶಗಳಲ್ಲಿ ಸಂಸತ್ ಸ್ಥಾನವನ್ನು ಅಲಂಕರಿಸಿ ಆ ದೇಶಗಳನ್ನು ಆಳುವ ಮಟ್ಟಕ್ಕೆ ತಲುಪಿದ್ದಾರೆ.

ಬೆಂಗಳೂರು ಸಿಲಿಕಾನ್ ಸಿಟಿಯಾದ ಕಾರಣಕ್ಕೆ ಕನ್ನಡಿಗರು ಇತ್ತೀಚಿನ ದಶಕಗಳಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸು ತ್ತಿದ್ದಾರೆ. ಆದರೆ ನಮ್ಮದೇ ದೇಶದ ಇತರ ರಾಜ್ಯಗಳಲ್ಲಿ ಕನ್ನಡಿಗರ ಕಾರುಬಾರು ಅಷ್ಟಕ್ಕಷ್ಟೇ. ಮುಂಬೈ, ಮದ್ರಾಸ್, ಬರೋಡ ಮುಂತಾದ ನಗರಗಳಲ್ಲಿ ಹೊಟೇಲ್ ಉದ್ದಿಮೆಯನ್ನು ಆಶ್ರಯಿಸಿ ಹೊರಟ ಕರಾವಳಿಯ ಒಂದಷ್ಟು ಜನರನ್ನು ಹೊರತುಪಡಿಸಿ ಉಳಿದಂತೆ ಕನ್ನಡಿಗರು, ಕನ್ನಡ ನೆಲದಲ್ಲಿಯೇ ಉಳಿದು ಬದುಕು ಕಟ್ಟಿಕೊಂಡವರು. ನಮ್ಮದೇ ನೆರೆಯ ತೆಲುಗರು, ತಮಿಳರು ಮತ್ತು ಮಲೆಯಾಳಿಗಳಷ್ಟು ಸೀಮೋಲ್ಲಂಘನ ಮಾಡಿದವರಲ್ಲ.

ನಮ್ಮ ಮಕ್ಕಳಿಗೆ ಗುವಾಹಟಿ, ಭುವನೇಶ್ವರ,ರೂರ್ಕಿ ಐಐಟಿಗಳಲ್ಲಿ ಸೀಟು ಸಿಕ್ಕಿದರೆ ಕಳಿಸಲು ಈಗಲೂ ಹಿಂದೇಟು ಹಾಕುತ್ತೇವೆ. ಆದರೆ‌ ಉತ್ತರ ಭಾರತದ ಅತ್ಯಂತ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳು ಕೂಡ ಕರ್ನಾಟಕ ಇಲ್ಲವೇ ದಕ್ಷಿಣ ಭಾರತದ ಇನ್ನಾವುದೇ ನಗರಕ್ಕೆ ಬಂದು ಶಿಕ್ಷಣ ಇಲ್ಲವೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯು ವುದಿಲ್ಲ. ಆದರೆ ಕನ್ನಡಿಗರಿಗೆ ಉತ್ತರ ಭಾರತ ಎಂದರೆ ಅಸುರಕ್ಷಿತ ಭಾವ. ಅಷ್ಟೇ ಏಕೆ, ನಮ್ಮದೇ ರಾಜ್ಯ ರಾಜ್ಯದ ಕಲಬುರ್ಗಿ,ಬೀದರ್, ಯಾದಗಿರಿ ಎಂದರೆ ದಕ್ಷಿಣದವರಿಗೆ ದೂರದ ಭಾವ.

ಕನ್ನಡಿಗರಿಗೆ ತಮ್ಮ ಆರಾಮ ವೃತ್ತದೊಳಗೆ ಸುತ್ತುವುದು ಇಷ್ಟ. ಪೈಪೋಟಿ, ಸ್ಪರ್ಧೆ ಎಂದರೆ ಹಿಂಜರಿಕೆ. ಐಐಎಸ್ಸಿ, ಐಐಎಂ, ನ್ಯಾಷನಲ್ ಲಾ ಕಾಲೇಜ್, ಎನ್‌ಐಟಿ-ಕೆ ಮುಂತಾದ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಕನ್ನಡಿಗರ ಸಂಖ್ಯೆಯೂ ಅನ್ಯ ರಾಜ್ಯದವರಿಗಿಂತ ಕಡಿಮೆ. ಮಣಿಪಾಲ್ ಇನ್‌ಸ್ಟಿಟ್ಯೂಟ್ ಟೆಕ್ನಾಟಲಜಿ (ಎಂಐಟಿ) ಯಂತಹ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ನಮ್ಮವರಿಗಿಂತ ಅನ್ಯರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ.

ತಾತ್ಪರ‌್ಯ ಇಷ್ಟೇ. ಉದ್ಯೋಗದಲ್ಲಿ ನಮ್ಮ ಪಾಲು ಕಡಿತಗೊಳ್ಳಲು, ನಮ್ಮದೇ ನೆಲದಲ್ಲಿ ಅನ್ಯರು ವಿಜೃಂಭಿಸಲು, ನಾವು ಪರಭಾಷಿಕರನ್ನು ಅನುಕರಿಸುವಂತಾಗಲು ನಮ್ಮ ಸ್ವಭಾವವೇ ಮೂಲ ಕಾರಣ. ಕನ್ನಡಿಗರು ಸ್ವಭಾವತ: ಹಿಂಜರಿಕೆ ಸ್ವಭಾವದವರು. ಅಗತ್ಯಕ್ಕಿಂತ ಹೆಚ್ಚು ದಾಕ್ಷಿಣ್ಯ, ಸಂಕೋಚ ಬೆಳೆಸಿಕೊಂಡವರು, ಅತಿ ಸೌಜನ್ಯಪರರು, ಇನ್ನೊಬ್ಬರು ರೊಚ್ಚಿಗೆಬ್ಬಿಸದ ಹೊರತು ಜಗಳ ಕಾಯುವವರಲ್ಲ. ಮುಂದಾಳತ್ವ, ಮುಂದಾಲೋಚನೆ ಮತ್ತು ಮುನ್ನುಗ್ಗುವ ವಿಚಾರದಲ್ಲಿ ಒಂದು ಹೆಜ್ಜೆ ಹಿಂದೆ ನಿಲ್ಲುವವರು… ನಮ್ಮ ಈ ಹುಟ್ಟು ಗುಣವನ್ನು ಎತ್ತಿ ತೋರಿಸಲು ಇಂತಹ ನೂರಾರು ಪುರಾವೆಗಳಿವೆ.

ಇಂದಿನ ನಮ್ಮ ನೆಲ-ಜಲ ಸಂಕಷ್ಟಗಳಿಗೆ ಮುನ್ನುಗ್ಗದಿರುವ ನಮ್ಮ ನಾಯಕರ ಸ್ವಭಾವವೂ ಮುಖ್ಯ ಕಾರಣ. ಕೇರಳ ಸಿಎಂ ಆಗಿದ್ದ ಇಎಂಎಸ್ ನಂಬೂದಿರಿಪಾಡ್ ಅವರೇ ಕಾಸರಗೋಡು ಕನ್ನಡ ನಾಡು ಎಂದು ಹೇಳಿದ್ದರು. ಆದರೆ ಕಾಸರಗೋಡಿನ ಕನ್ನಡ ಹೋರಾಟಗಾರರಿಗೆ ಬೆಂಬಲವಾಗಿ ನಿಲ್ಲದ ಕಾರಣಕ್ಕೆ ಕೆಳದಿ ಶಿವಪ್ಪ ನಾಯಕ ಕಟ್ಟಿದ ಬೇಕಲ ಕೋಟೆ ಇರುವ ಈ ನೆಲವನ್ನು ನಾವು ಕಳೆದುಕೊಳ್ಳಬೇಕಾಯಿತು.

ಕಾಸರಗೋಡನ್ನು ವ್ಯವಸ್ಥಿತವಾಗಿ ಮಲೆಯಾಳೀಕರಣಗೊಳಿಸಿದ ಕೇರಳದ ತಂತ್ರವನ್ನು ನಾವು ಬೆಳಗಾವಿಯಲ್ಲಿ ಬಳಸಬಹುದಿತ್ತು. ಆದರೆ ಕನ್ನಡಿಗರ ಅತಿ ಸೌಜನ್ಯ, ಸ್ನೇಹಪರತೆ ಇದಕ್ಕೆ ಅವಕಾಶ ನೀಡಲಿಲ್ಲ. ಎಂ.ಜಿ. ರಾಮಚಂದ್ರನ್ ತಮಿಳುನಾಡು ಸಿಎಂ ಆಗಿದ್ದಾಗ ನಮ್ಮ ಪರವಾಗಿದ್ದ ‘ಕಾವೇರಿ ಒಪ್ಪಂದ’ಕ್ಕೆ ಸಹಿ ಬೀಳದಿರಲು ನಮ್ಮ ನಾಯಕರ ಮಂದದೃಷ್ಟಿ ಕಾರಣ. ಮಹದಾಯಿ ವಿಚಾರದಲ್ಲೂ ಅಷ್ಟೇ. ಗೋವಾ ಹಿಂದೊಮ್ಮೆ ಒಪ್ಪಿದ್ದ ತೀರ್ಮಾನವನ್ನು ತಕ್ಷಣ ಕಾರ‌್ಯರೂಪಕ್ಕೆ ತಂದಿದ್ದರೆ ಈಗಿನ ರಗಳೆ ಇರುತ್ತಿರಲಿಲ್ಲ.

ಕನ್ನಡ ಭಾಷೆಗೆ ಇಂದು ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದರೆ ಇದಕ್ಕೆ ತಮಿಳುನಾಡಿಗೆ ಧನ್ಯವಾದ ಹೇಳಬೇಕು. ತಮಿಳುನಾಡು ಮೊದಲಾಗಿ ಕೇಂದ್ರದ ಮುಂದೆ ಹಕ್ಕೊತ್ತಾಯ ಸಲ್ಲಿಸಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಪಡೆಯದಿದ್ದಲ್ಲಿ ನಾವೂ ಬಿಲ್‌ಕುಲ್ ಈ ಸ್ಥಾನಮಾನ ಕೇಳುತ್ತಿರಲಿಲ್ಲ. ನೀಟ್, ರಾಷ್ಟ್ರೀಯ ಶಿಕ್ಷಣ ನೀತಿ, ಎಪಿಎಂಸಿ ಕಾಯಿದೆ, ಜಿಎಸ್‌ಟಿ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರದ ಆಜ್ಞಾನುವರ್ತಿಗಳಾಗಿ ನಡೆದ ನಾವು ಈಗ ತಮಿಳುನಾಡಿನ ನಡೆ ನೋಡಿಕೊಂಡು ಮತ್ತೆ ‘ಹಿಂತೆಗೆತ’ದ ನಡೆ ಆರಂಭಿಸಿದ್ದೇವೆ.

ಕುವೆಂಪು ಅವರಂತಹ ದಾರ್ಶನಿಕರು ಕಂಡ ನಾಡು, ನುಡಿಯ ಬೆಳವಣಿಗೆ, ಪ್ರಗತಿ ಆಗದಿರಲು ನಾವು ಮತ್ತು ನಮ್ಮ ಸರಕಾರಗಳ ನಿಧಾನ ಮತ್ತು ನಿರ್ಲಕ್ಷ್ಯ ಧೋರಣೆಯೂ ಪ್ರಧಾನ ಕಾರಣ. ರಾಜ್ಯದ ಪ್ರತಿ ಶಾಲೆಯಲ್ಲೂ 10ನೇ ತರಗತಿವರೆಗೆ ಕನ್ನಡ ಕಲಿಸಲೇಬೇಕು. ಐಸಿಎಸ್‌ಇ, ಸಿಬಿಎಸ್‌ಇ ಯಾವುದೇ ಇರಲಿ, ಕನ್ನಡ ಪಠ್ಯ ವನ್ನು ವಾರಕ್ಕೆ ಕನಿಷ್ಠ ಐದು ಪೀರಿಯಡ್‌ಗಳಲ್ಲಿ ಕಲಿಸಲೇಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲು ಸಾಧ್ಯವಾಗಿದ್ದರೆ ನಮ್ಮ ಮಕ್ಕಳು ಇಂದು ಸಾರ್ವಜನಿಕ ವೇದಿಕೆಯಲ್ಲಿ ನಿಂತು ಒಂದೈದು ನಿಮಿಷ ನಿರರ್ಗಳವಾಗಿ ಕನ್ನಡ ಮಾತನಾಡಲು ತಡವರಿಸುವ ಪ್ರಸಂಗ ಬರುತ್ತಿರಲಿಲ್ಲ.

ಉದ್ಯಮಗಳಿಗೆ ನಿರಾಕ್ಷೇಪಣಾ ಪತ್ರ ನೀಡುವಾಗಲೇ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ನೀಡಲೇಬೇಕು ಎಂಬ ಷರತ್ತು ವಿಧಿಸಿದ್ದರೆ, ಸಿ ಮತ್ತು ಡಿ ದರ್ಜೆಯ ಉದ್ಯೋಗಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಿಡಬೇಕೆಂದು ಸೂಚನೆ ನೀಡಿರುತ್ತಿದ್ದರೆ ಉದ್ಯೋಗಕ್ಕಾಗಿ ಅಂಗಲಾಚುವ ಪರಿಸ್ಥಿತಿ ಬರುತ್ತಿರಲಿಲ್ಲ. ಉದ್ದಿಮೆ ಪರವಾನಗಿ ನೀಡಲು ತಪ್ಪಿಲ್ಲದ ಕನ್ನಡದಲ್ಲಿ ನಾಮಫಲಕ ಪ್ರದರ್ಶನ ಕಡ್ಡಾಯಗೊಳಿಸಿದ್ದರೆ, ಎಲ್ಲೆಡೆ ಇಂಗ್ಲಿಷ್ ಬೋರ್ಡ್‌ಗಳನ್ನು ಕಾಣುವ ದೌರ್ಭಾಗ್ಯ ಬರುತ್ತಿರಲಿಲ್ಲ. ಅರ್ಧದಷ್ಟು ಅನುದಾನ ನಾವೇ ಭರಿಸಿ, ನಮ್ಮದೇ ಜಾಗವನ್ನು ಬಿಟ್ಟು ಕೊಟ್ಟು ಅನುಷ್ಠಾನಗೊಂಡ‌ ಕೊಂಕಣ ರೈಲ್ವೆಯಂತಹ ಯೋಜನೆಗಳಲ್ಲಿ ಉದ್ಯೋಗ ಮತ್ತು ರೈಲುಗಳ ವಿಚಾರದಲ್ಲಿ ಮೊದಲೇ ಪಾಲು ಕೇಳಿದ್ದರೆ, ಈ ಯೋಜನೆ ಕರ್ನಾಟಕದ ಬದಲು ಕೇರಳಕ್ಕೆ ಹೆಚ್ಚು ಪ್ರಯೋಜನವಾಗುವುದು ತಪ್ಪುತ್ತಿತ್ತು.

ಸಂಸತ್ತಿನಲ್ಲಿ ನಮ್ಮ ಸಂಸದರು ಒಟ್ಟಾಗಿ ಧ್ವನಿ ಎತ್ತಿದ್ದರೂ ದಕ್ಷಿಣದ ಉಳಿದ ರಾಜ್ಯಗಳಷ್ಟೇ ರೈಲು ಕರ್ನಾಟಕಕ್ಕೆ ದಕ್ಕುತ್ತಿತ್ತು. ಅತಿ ಹೆಚ್ಚು ಆದಾಯವಿರುವ ಮಂಗಳೂರು ಪಾಲ್ಘಾಟ್ ರೈಲ್ವೆ ವಿಭಾಗಕ್ಕೆ ಸೇರುತ್ತಿರಲಿಲ್ಲ. ಖರ್ಗೆ ರೈಲ್ವೆ ಸಚಿವರಾಗಿದ್ದ ಕಾಲದಲ್ಲಿ ಘೋಷಣೆಯಾದ ಕಲಬುರಗಿ ರೈಲ್ವೆ ವಿಭಾಗ ಸಾಕಾರಗೊಳ್ಳುತ್ತಿತ್ತು. ನಮ್ಮದೇ ರಾಜ್ಯದಲ್ಲಿ ಜನ್ಮ ತಳೆದ ಬ್ಯಾಂಕುಗಳು ವಿಲೀನದ ಹೆಸರಿನಲ್ಲಿ ಅಸ್ತಿತ್ವ ಕಳೆದುಕೊಂಡಾಗ ಪ್ರತಿಭಟಿಸಿದ್ದರೆ, ಬ್ಯಾಂಕುಗಳಲ್ಲಿ ಉತ್ತರದವರ ದರ್ಬಾರ್ ನಡೆಯುತ್ತಿರಲಿಲ್ಲ. ನಾವಾದರೂ ಅಲ್ಲಿನ ಹಿಂದಿ, ತಮಿಳು, ತೆಲುಗು, ಮಲೆಯಾಳಿ ಭಾಷಿಕ ಸಿಬ್ಬಂದಿಗಳ ಜತೆ ನಮ್ಮ ಅರೆಬರೆ ಅನ್ಯಭಾಷಾ ಜ್ಞಾನ ಪ್ರದರ್ಶಿಸದೆ ಕನ್ನಡದಲ್ಲಿಯೇ ಮಾತನಾಡಿದ್ದರೆ, ಅವರಿಗೆ ಉಳಿಗಾಲವಿರುತ್ತಿರಲಿಲ್ಲ. ಕನಿಷ್ಠ ಪಕ್ಷ ಕನ್ನಡಿಗರೆಲ್ಲರೂ ತಮ್ಮ ಬ್ಯಾಂಕ್ ಚೆಕ್‌ಗಳನ್ನು ಕನ್ನಡದಲ್ಲಿಯೇ ಬರೆದಿದ್ದರೂ ಬ್ಯಾಂಕುಗಳಲ್ಲಿ ಅನ್ಯ ಭಾಷಿಕರ ಒಡ್ಡೋಲಗಕ್ಕೆ ಕಡಿವಾಣ ಹಾಕಬಹುದಿತ್ತು.

ಇಂತಹ ‘ರೆ ’ಗಳು ಬೇಕಾದಷ್ಟಿವೆ. ಆದರೆ ನಾವು ಕನ್ನಡಿಗರು ‘ವಿಶ್ವಮಾನವ’ರಾಗಲು ಹೊರಟಿದ್ದೇವೆ. ಮುಂದಿನ 3 ವರ್ಷಗಳಲ್ಲಿ ಕರ್ನಾಟಕದ ಪ್ರತಿಯೊಂದು ಗ್ರಾಮಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯ ಬೋಧಿಸುವ ಆಂಗ್ಲ ಮಾಧ್ಯಮ ಕರ್ನಾಟಕ ಪಬ್ಲಿಕ್ ಶಾಲೆಗಳು ಸ್ಥಾಪನೆಯಾಗಲಿವೆ. ಅಲ್ಲಿಗೆ ನಮ್ಮೆಲ್ಲ ಕನ್ನಡ ಶಾಲೆಗಳು ದಿಡ್ಡು, ಬಾಗಿಲು ಹಾಕಿಕೊಳ್ಳುವುದು ಖಚಿತ. ನಮ್ಮ ಮಕ್ಕಳು, ‘ಹುಯ್ಯೋ, ಹುಯ್ಯೋ ಮಳೆರಾಯ’ ಎನ್ನುವ ಬದಲು ‘ರೈನ್, ರೈನ್ ಗೋ ಅವೇ’ ಎಂದು ಗುನುಗುನಿಸುವುದನ್ನು ಕೇಳಿ ಖುಷಿಪಡಬಹುದು. ಎಂದಿನಂತೆ ನವೆಂಬರ್ ತಿಂಗಳು ಬಂದಾಗ ಕನ್ನಡದ ಉಳಿವಿಗಾಗಿ, ನಾಡು-ನುಡಿಯ ರಕ್ಷಣೆಗಾಗಿ ಸರಕಾರ ಏನೇನು ಕ್ರಮ ಕೈಗೊಳ್ಳಬೇಕೆಂದು ನಾವು ಹಕ್ಕೊತ್ತಾಯ ಸಲ್ಲಿಸಬಹುದು.

ಇದನ್ನೂ ಓದಿ: Lokesh Kayarga Column: ಗೌಡಾಗೆ ಗೌರವಸ್ಥರು ಬೇಕಾಗಿದ್ದಾರೆ !