ವರ್ತಮಾನ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ಮಧ್ಯೆ ರಾಜಕೀಯ ಧ್ರುವೀಕರಣದ ಪೈಪೋಟಿ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿ ಇಂಡಿಯ ಮೈತ್ರಿಕೂಟಕ್ಕೆ ಚುನಾವಣಾ ಹೊಂದಾಣಿಕೆ ಕುರಿತು ಸ್ಪಷ್ಟ ಸಂದೇಶ ರವಾನಿಸಲು ಹೊರಟಿರುವುದು ಸ್ಪಷ್ಟವಾಗುತ್ತಿದೆ.
ಕಳೆದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ಫಲಿತಾಂಶ ಬಂತು. ಕಾಂಗ್ರೆಸ್ ೧೩೫ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ, ಅಧಿಕಾರದಲ್ಲಿದ್ದ ಬಿಜೆಪಿ ಕೇವಲ ೬೬ ಸ್ಥಾನಗಳನ್ನು ಪಡೆದು ಹೀನಾಯವಾಗಿ ಸೋತಿತು. ಅತಂತ್ರ ವಿಧಾನಸಭೆ ಸೃಷ್ಟಿಯಾಗ ಬಹುದು. ಆಗ ತಾನೇ ಕಿಂಗ್ ಮೇಕರ್ ಆಗಬಹುದು ಎಂದು ಭಾವಿಸಿದ್ದ ಜೆಡಿಎಸ್ ಅಂತೂ ಕೇವಲ ೧೯ ಸ್ಥಾನಗಳಿಗೆ ಸೀಮಿತವಾಯಿತು. ೨೦೨೪ರ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಬಿಜೆಪಿ ವರಿಷ್ಠರಿಗೆ ಈ ಫಲಿತಾಂಶ ನುಂಗಲಾರದ ಬಿಸಿ ತುಪ್ಪವಾದರೆ, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಹೇಗಾದರೂ ಮಾಡಿ ಕೆಳಗಿಳಿಸಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಹಪಹಪಿಯಲ್ಲಿದ್ದ ಕಾಂಗ್ರೆಸ್ ಪಾಲಿಗೆ ಬೂಸ್ಟರ್ ಡೋಸ್ ನೀಡಿದಂತಾಯಿತು. ಇದರ ಪರಿಣಾಮ ಕಾಂಗ್ರೆಸ್ ದೇಶದಲ್ಲಿನ ಎಲ್ಲಾ ಪ್ರತಿಪಕ್ಷ ಗಳನ್ನು ಒಗ್ಗೂಡಿಸಿ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಇಂಡಿಯ (ಐಎನ್‌ಡಿಐಎಫ್ ಇಂಡಿಯನ್
ನ್ಯಾಷನಲ್ ಡೆವಲಪ್ ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್) ಮೈತ್ರಿಕೂಟವನ್ನು ಸ್ಥಾಪಿಸಿತು.
ಪ್ರಸ್ತುತ ಇಂಡಿಯ ಮೈತ್ರಿಕೂಟ ತನ್ನ ಬಲ ವಿಸ್ತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅದರ ಒಂದು ಭಾಗವೇ ಕರ್ನಾಟಕದಲ್ಲಿ ಆರಂಭವಾದ ಆಪರೇಷನ್ ಹಸ್ತ. ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರು, ಮುಖಂಡರನ್ನು ಸೆಳೆದು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಇನ್ನಷ್ಟು ಬಲಗೊಳಿಸುವ ಮೂಲಕ ಕರ್ನಾಟಕ ದಿಂದ ಲೋಕಸಭೆಗೆ ಪಕ್ಷದಿಂದ ಹೆಚ್ಚು ಸಂಸದರನ್ನು ಕಳುಹಿಸುವುದು ಇದರ ಉದ್ದೇಶ. ಏಕೆಂದರೆ, ೧೯೯೬ರ ಬಳಿಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದು ಅದಿಕಾರಕ್ಕೆ ಬಂದರೂ ಲೋಕಸಭೆ ಚುನಾವಣೆಗಳಲ್ಲಿ ಹೀನಾಯ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಕನಿಷ್ಠ ಎರಡಂಕಿ ದಾಟಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಈ ಕೆಲಸಕ್ಕೆ ಕೈಹಾಕಿದೆ.
ಆಪರೇಷನ್ ಹಸ್ತದ ಕುರಿತು ಚರ್ಚೆ ಆರಂಭವಾದಾಗ ಬಿಜೆಪಿ, ಜೆಡಿಎಸ್‌ನ ಸಾಕಷ್ಟು ಮಂದಿ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ಅದಕ್ಕೆ ಪೂರಕವಾದ ಚಟುವಟಿಕೆಗಳೂ ಆರಂಭವಾದವು. ೨೦೧೯ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ಬಹುತೇಕರು ಘರ್ ವಾಪಸಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಮತ್ತೊಂದೆಡೆ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಸೇರಿಯೇ ಬಿಡುತ್ತಾರೆ ಎಂಬ ವಾತಾವರಣ ಸೃಷ್ಟಿಯಾಯಿತು. ಆದರೆ, ಏಕೋ ಅದೆಲ್ಲವೂ ಈಗ ತಣ್ಣಗಾಗಿದೆ. ಸಣ್ಣ ಪುಟ್ಟವರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದರೂ ನಾಯಕರಾರೂ ಹೋಗುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.
ಇದರ ಮಧ್ಯೆ ದುತ್ತನೆ ಪ್ರತ್ಯಕ್ಷವಾದ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಮುನ್ನಲೆಗೆ ಬಂದಿದ್ದು, ರಾಜ್ಯ ರಾಜಕಾರಣ ಹೊಸ ದಿಕ್ಕಿನತ್ತ ಹೋಗುವ ಲಕ್ಷಣ ಕಾಣಿಸಿ ಕೊಳ್ಳಲಾರಂಭಿಸಿದೆ. ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟು ನಡೆಯುತ್ತಿರುವ ಈ ಮೈತ್ರಿ ಮಾತುಕತೆಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ
ಎಚ್.ಡಿ.ದೇವೇಗೌಡ ಮತ್ತು ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಹೇಳಲಾಗುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತ್ರ ಇದುವರೆಗೆ ಕಾಣಿಸಿಕೊಂಡಿದ್ದಾರೆ.
ಜೆಡಿಎಸ್ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಬಗ್ಗೆ ಘೋಷಿಸಿದ್ದಾರೆ. ಜೆಡಿಎಸ್ ನಾಯಕರು ಪದೇಪದೆ ಮೈತ್ರಿ ಬಗ್ಗೆ ಪ್ರಸ್ತಾಪಿಸುತ್ತಿದ್ದಾರಾದರೂ ರಾಜ್ಯ ಬಿಜೆಪಿ ನಾಯಕರು ಮಾತ್ರ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಅಷ್ಟರ ಮಟ್ಟಿಗೆ ಅವರನ್ನು ಈ ಪ್ರಕ್ರಿಯೆಯಲ್ಲಿ ಕತ್ತಲಲ್ಲಿಡಲಾಗಿದೆ. ಹೀಗಾಗಿ ದೇವೇಗೌಡರು ಮತ್ತು ಅಮಿತ್ ಶಾ ನೇತೃತ್ವದಲ್ಲಿ ನಡೆಯುತ್ತಿರುವ ಈ ಮೈತ್ರಿ ಪ್ರಕ್ರಿಯೆ
ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ ಎನ್ನುವಂತೆ ಕಾಣಿಸುತ್ತಿದೆ.
ಅಷ್ಟಕ್ಕೂ ಈ ಮೈತ್ರಿಯಿಂದ ಯಾರಿಗೇನು ನಷ್ಟ, ಯಾರಿಗೆಷ್ಟು ಲಾಭ ಎನ್ನುವುದಕ್ಕಿಂತ ನೀವು ಚಾಪೆ ಕೆಳಗೆ ತೂರಿದರೆ ನಾವು ರಂಗೋಲಿ ಕೆಳಗೆ ತೂರುತ್ತೇವೆ
ಎಂಬುದನ್ನು ಬಿಜೆಪಿ ವರಿಷ್ಠರು ಕಾಂಗ್ರೆಸ್ ಹೈಮಾಂಡ್‌ಗೆ ಹೇಳುವಂತಿದೆ. ಏಕೆಂದರೆ, ಎನ್‌ಡಿಎ ಮತ್ತು ಇಂಡಿಯ ಮೈತ್ರಿಕೂಟಗಳಲ್ಲಿ ಇರುವುದೆಲ್ಲಾ
ಪ್ರಾದೇಶಿಕ ಪಕ್ಷಗಳು. ಕೆಲವು ಪಕ್ಷಗಳು ಅಧಿಕಾರದಲ್ಲಿವೆ, ಇನ್ನು ಕೆಲವು ಪಕ್ಷಗಳು ಪ್ರತಿಪಕ್ಷದಲ್ಲಿವೆ, ಬಹುತೇಕವು ಹೆಸರಿಗೆ ಮಾತ್ರ ಎಂಬಂತಿವೆ. ಆದರೆ,
ಈ ಪಕ್ಷಗಳು ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗೆಲ್ಲಲಾಗದಿದ್ದರೂ ಇನ್ನೊಂದು ಪಕ್ಷವನ್ನು ಸೋಲಿಸುವ ಸಾಮರ್ಥ್ಯ ಹೊಂದಿವೆ. ಮತ್ತೊಂದು ಪಕ್ಷದೊಂದಿಗೆ
ಮೈತ್ರಿ ಮಾಡಿಕೊಂಡರೆ ಒಂದೆರಡು ಸ್ಥಾನಗಳಲ್ಲಿ ಗೆಲ್ಲಲು ಅವುಗಳಿಗೆ ಅವಕಾಶವಿದೆ.
ಹೀಗಾಗಿಯೇ ಎನ್‌ಡಿಎ ಮತ್ತು ಇಂಡಿಯ ಮೈತ್ರಿಕೂಟಗಳು ಹೆಚ್ಚೆಚ್ಚು ಪಕ್ಷಗಳನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿರುವುದು. ಇದರ ಭಾಗವೇ ಬಿಜೆಪಿ-ಜೆಡಿಎಸ್
ಮೈತ್ರಿ. ಈ ಮೈತ್ರಿಯಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಖಂಡಿತವಾಗಿಯೂ ಲಾಭವಾಗುತ್ತದೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿಯ ಬಲ ಕಡಿಮೆ ಮಾಡಿ ೧೦ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಕಾಂಗ್ರೆಸ್‌ನ ಕನಸಿಗೆ ಈ ಮೈತ್ರಿ ತಣ್ಣೀರೆರಚುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಈ ಕಾರಣ ಕ್ಕಾಗಿಯೇ ಬಿಜೆಪಿ ವರಿಷ್ಠರು ಹಳೆಯದೆಲ್ಲವನ್ನೂ ಮರೆತು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈ ಮೈತ್ರಿಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೇರಿ ಮೂರ್ನಾಲ್ಕು ಸ್ಥಾನಗಳನ್ನು ಹೆಚ್ಚು ವರಿಯಾಗಿ ಪಡೆದುಕೊಳ್ಳಲು ಸಹಕಾರಿಯಾಗಬಹುದು. ಇದರಿಂದ ಲೋಕಸಭೆಯಲ್ಲಿ ಬಿಜೆಪಿಗೆ ಹೆಚ್ಚು ಅನುಕೂಲ ಆಗದೇ ಇದ್ದರೂ ಮೈತ್ರಿಯ ಹಿಂದೆ ಎರಡು ಪ್ರಮುಖ ಉದ್ದೇಶಗಳು ಇವೆ. ಅದರಲ್ಲಿ ಜೆಡಿಎಸ್‌ನಂತಹ ಜಾತ್ಯತೀತ ಪಕ್ಷವೂ ಬಿಜೆಪಿ ಜತೆ ಕೈಜೋಡಿಸುತ್ತಿದೆ ಎಂಬುದು ಒಂದು. ಆ ಮೂಲಕ ಬಿಜೆಪಿ ಕೋಮುವಾದಿಯಲ್ಲ ಎಂಬ ಸಂದೇಶವನ್ನು ದೇಶಾದ್ಯಂತ ವಿಸ್ತರಿಸಲು ಪಕ್ಷಕ್ಕೆ ಅನುಕೂಲವಾಗುತ್ತದೆ. ಆ ಸಂದೇಶ ಗಟ್ಟಿಯಾಗಿ ರವಾನೆಯಾದರೆ ಒಂದಷ್ಟು ಸ್ಥಳೀಯ ಪಕ್ಷಗಳು ಬಿಜೆಪಿ ಜತೆ ಬರಹಹುದು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೇಶಾದ್ಯಂತ ಒಂದಷ್ಟು ಲಾಭವಾಗಬಹುದು.
ಜೆಡಿಎಸ್ ಜತೆ ಮೈತ್ರಿ ಅಂತಿಮಗೊಂಡ ಬಳಿಕ ಈ ಆಧಾರದ ಮೇಲೆಯೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಬಲೆ ಹೆಣೆಯಲು ಸಿದ್ಧತೆ ನಡೆಸುತ್ತಿದೆ. ಇನ್ನೊಂದು ಅಂಶ, ಸುಭದ್ರ ಸರಕಾರ ಮತ್ತು ಕಾಂಗ್ರೆಸ್‌ಗಿರುವ ಅಽಕಾರದ ಹಪಹಪಿ. ೨೦೧೮ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆ
ಯಾದಾಗ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಎನ್‌ಡಿಎ ಹೊರತುಪಡಿಸಿದ ಬಹುತೇಕ ಪಕ್ಷಗಳ ನಾಯಕರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಬಹುತೇಕರು ಈಗ ಇಂಡಿಯ ಮೈತ್ರಿಕೂಟದ ಭಾಗ
ವಾಗಿದ್ದಾರೆ. ಅಂದರೆ, ಇವರೆಲ್ಲರಿಗೂ ಬಿಜೆಪಿಯನ್ನು ಸೋಲಿಸಿ ಅಽಕಾರಕ್ಕೆ ಬರುವುದಷ್ಟೇ ಮುಖ್ಯವೇ ಹೊರತು ದೇಶದ ಹಿತ, ಸುಭ್ರದ್ರ ಸರಕಾರ ಕೊಡು
ವುದು ಆದ್ಯತೆಯಲ್ಲ.
೨೦೧೮ರಲ್ಲಿ ಇದೇ ಕುಮಾರ ಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದ ಕಾಂಗ್ರೆಸ್ ಒಂದು ವರ್ಷದಲ್ಲೇ ಆ ಸರಕಾರವನ್ನು ಕೆಡವಿತು. ಅದಷ್ಟೇ ಅಲ್ಲ, ೨೦೦೪ರಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ ಬಳಿಕ ತನ್ನ ಬಲ ಹೆಚ್ಚಿಸಿಕೊಳ್ಳಲು ಜೆಡಿಎಸ್ ಒಡೆಯಲು ಪ್ರಯತ್ನಿಸಿತು. ಇದರ ಪರಿಣಾಮ ಎಚ್.ಡಿ.ಕುಮಾರಸ್ವಾಮಿ ತಿರುಗಿಬಿದ್ದು ಕಾಂಗ್ರೆಸ್ ಸರಕಾರ ಉರುಳಿಸಿ ಬಿಜೆಪಿ ಜತೆ ಸೇರಿಕೊಂಡು ಸರಕಾರ ರಚಿಸಿದರು. ಆದರೂ ಜೆಡಿಎಸ್ ಒಡೆಯುವುದನ್ನು ತಪ್ಪಿಸಲು ಆಗಲಿಲ್ಲ.
ಇದು ಕುಮಾರಸ್ವಾಮಿಗೆ ಮಾತ್ರ ಸೀಮಿತವಾಗಿರಲಸಿಲ್ಲ ೧೯೯೭ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪ್ರಕರಣದಲ್ಲೂ ಸಾಬೀತಾಗಿದೆ.
ಬಲವಂತದಿಂದ ದೇವೇಗೌಡರನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಸಕಾರಣವಿಲ್ಲದೆ ಅವರನ್ನು ಅಧಿಕಾರದಿಂದ ಇಳಿಸಿತ್ತು. ಆ ಸಂದರ್ಭದಲ್ಲಿ ದೇವೇಗೌಡರಿಗೆ ಬೆಂಬಲ ನೀಡಲು ಬಿಜೆಪಿ ಮುಂದೆ ಬಂದಿತ್ತಾದರೂ ಅವರೇ ಅದನ್ನು ತಿರಸ್ಕರಿಸಿದ್ದರು. ಆದರೆ, ಬಿಜೆಪಿ ಹಾಗಲ್ಲ, ೨೦೦೬ರಲ್ಲಿ ಬಿಜೆಪಿ- ಜೆಡಿಎಸ್ ಸೇರಿ ಕರ್ನಾಟಕದಲ್ಲಿ ಸರಕಾರ ರಚಿಸಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಬಳಿಕ ಅವರ ತಪ್ಪಿ ನಿಂದಲೇ ಸರಕಾರ ಉರುಳಿತೇ ಹೊರತು ಬಿಜೆಪಿ ಸರಕಾರ ಉರುಳಿಸಲಿಲ್ಲ.
ಮಹಾರಾಷ್ಟ್ರದಲ್ಲಿ ಪ್ರಸ್ತುತ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಬಿಹಾರದಲ್ಲೂ ಈ ಹಿಂದೆ ನಿತೀಶ್ ಕುಮಾರ್ ಯಾವುದೇ ಸಮಸ್ಯೆ ಇಲ್ಲದಂತೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿತ್ತು. ಜೆಡಿಯುಗಿಂತ ತನಗೆ ಹೆಚ್ಚು ಸ್ಥಾನ ಬಂದಿದ್ದರೂ ನಿತೀಶ್ ಕುಮಾರ್
ಮುಖ್ಯಮಂತ್ರಿಯಾಗಲು ಸಹಕರಿಸಿತ್ತು. ಸಾಕಷ್ಟು ಸಮಸ್ಯೆ ಮಾಡಿದರೂ ಅವರಾಗಿಯೇ ಮೈತ್ರಿ ಕಡಿದು ಕೊಳ್ಳುವವರೆಗೆ ಬೆಂಬಲ ಮುಂದುವರಿಸಿತ್ತು. ಈ
ಮಧ್ಯೆ ಆಪರೇಷನ್ ಹಸ್ತದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿತ್ತಾದರೂ ಯಾವತ್ತೂ ಚುನಾವಣಾ ಪೂರ್ವ ಮೈತ್ರಿ ಅಥವಾ ಕೊಟ್ಟ ಮಾತಿಗೆ ತಪ್ಪಿಲ್ಲ ಎಂಬ ಸಂದೇಶವನ್ನು ನೀಡುವುದು ಜೆಡಿಎಸ್ ಜತೆಗಿನ ಮೈತ್ರಿ ಹಿಂದೆ ಇರುವ ಮತ್ತೊಂದು ಅಜೆಂಡಾ ಆಗಿದೆ.
ಪರಿಸ್ಥಿತಿ ಹೀಗಿರುವಾಗ ಇಂಡಿಯ ಮೈತ್ರಿಕೂಟ ಅಽಕಾರಕ್ಕೆ ಬಂದರೂ ಕಾಂಗ್ರೆಸ್‌ಗೆ ಪ್ರಧಾನಿ ಸ್ಥಾನ ಸಿಗದಿದ್ದರೆ ಬೇರೆಯವರನ್ನು ಆ ಸ್ಥಾನದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಲು ಅವಕಾಶ ನೀಡುವುದಿಲ್ಲ. ಅಷ್ಟೇ ಅಲ್ಲ, ನೆಹರು ಕುಟುಂಬ ಹೊರತುಪಡಿಸಿ ಬೇರೆಯವರು ಪ್ರಧಾನಿಯಾದರೂ ಅಧಿಕಾರ ಆ ಕುಟುಂಬದ ಬಳಿಯೇ ಇರಬೇಕು ಎಂಬುದಕ್ಕೆ ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷರಾಗಿ ಸರಕಾರವನ್ನು ತನ್ನ ಹಿಡಿತ ದಲ್ಲಿಟ್ಟುಕೊಂಡಿದ್ದ ಸಾಕ್ಷಿ ಇದೆ.
ಈ ಎರಡು ಸಂದೇಶಗಳನ್ನು ನೀಡುವಲ್ಲಿ ಪಕ್ಷ ಯಶಸ್ವಿಯಾದರೆ ಪ್ರಸ್ತುತ ಇಂಡಿಯ ಮೈತ್ರಿಕೂಟದಲ್ಲಿ ಇರುವ ಕೆಲವು ಪಕ್ಷಗಳನ್ನು ಸೆಳೆದುಕೊಳ್ಳುವುದು ಕಷ್ಟ ವೇನೂ ಅಲ್ಲ. ಇತ್ತೀಚೆಗೆ ಜಿ-೨೦ ಶೃಂಗಸಭೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಔತಣ ಕೂಟಕ್ಕೆ ಮಮತಾ ಬ್ಯಾನರ್ಜಿ ಹೋಗಿದ್ದನ್ನು ಕಾಂಗ್ರೆಸ್ ಆಕ್ಷೇಪಿಸಿತ್ತು. ಅಂದರೆ, ತಾನು ಯಾರ ವಿರುದ್ಧ ನಿಂತಿದ್ದೇನೋ, ಅಂಥವರ ಜತೆ ತನ್ನೊಂದಿಗೆ ಇರುವವರು ಯಾವುದೇ ಕಾರಣಕ್ಕೂ ಸೇರಬಾರದು ಎಂಬ ಭಾವನೆ ಕಾಂಗ್ರೆಸ್‌ಗೆ ಇದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಈ ಹಿಂದೆ ಇದೇ ಮಮತಾ ಬ್ಯಾನರ್ಜಿ ಯುಪಿಎ ಜತೆ ಸೇರಿ ಕೈಸುಟ್ಟುಕೊಂಡ ಉದಾಹರಣೆಯೂ ಕಣ್ಣ ಮುಂದೆ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ ಇಂಡಿಯ ಮಿತ್ರಕೂಟದಲ್ಲಿ ಕಾಂಗ್ರೆಸ್ ಜತೆ ಸೇರಿರುವ ಕೆಲವು ಪಕ್ಷಗಳು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿ ಸಬೇಕು ಎಂಬ ಏಕೈಕ ಕಾರಣಕ್ಕಾಗಿ ಕೈಜೋಡಿಸಿವೆಯೇ ಹೊರತು ಸೈದ್ಧಾಂತಿಕವಾಗಿ ಅಲ್ಲ. ಮೇಲಾಗಿ ಕೆಲವು ಪಕ್ಷಗಳು ಹಿಂದೆ ಬಿಜೆಪಿ ಜತೆಗೂ ಇದ್ದವು. ಹೀಗಾಗಿ ಕಾಂಗ್ರೆಸ್‌ನ ಅಽಕಾರ ದಾಹವನ್ನು ತಿಳಿಸಿ ಇಂಡಿಯ ಮೈತ್ರಿಕೂಟದ ಒಗ್ಗಟ್ಟು ಮುರಿಯುವುದು ಕೂಡ ಜೆಡಿಎಸ್ ಜತೆಗಿನ ಮೈತ್ರಿಯ ಹಿಂದಿರುವ ಕಾರಣ ಗಳಲ್ಲಿ ಒಂದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಲಾಸ್ಟ್ ಸಿಪ್: ತನ್ನ ಎದುರಾಳಿ ತಾನಾಗಿಯೇ ಸೋಲುವಂತೆ ಮಾಡಿ ಬಳಿಕ ಗೆಲ್ಲುವುದೇ ಪ್ರಸ್ತುತ ರಾಜಕಾರಣದ ಯಶಸ್ಸಿನಲ್ಲಿ ಪ್ರಮುಖ ಅಸ್ತ್ರ.