Saturday, 14th December 2024

ದಕ್ಷಿಣದಲ್ಲಿ ಲೋಕಸಮರದ ಅಗ್ನಿಪರೀಕ್ಷೆ

ಅಶ್ವತ್ಥಕಟ್ಟೆ

ranjith.hoskere@gmail.com

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು, ರಾಜ್ಯ ಸರಕಾರ ತನ್ನ ಹನಿಮೂನ್ ಪೀರಿಯಡ್ ಮುಗಿಸಿ ಕೆಲವು ತಿಂಗಳು ಕಳೆಯುವ ಹೊತ್ತಿಗೆ, ರಾಜ್ಯ ಸಭಾ ಚುನಾವಣೆಯಲ್ಲಿ ನಾಲ್ಕರಲ್ಲಿ ಮೂರು ಸ್ಥಾನವನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ‘ಭರ್ಜರಿ’ ಸಾಧನೆಯನ್ನು ದಾಖಲಿಸಿದೆ. ಈ ಎರಡು ಚುನಾವಣೆ ಗಳ ಗುಂಗು ಮಾಸುವ ಮುನ್ನವೇ ಮತ್ತೊಂದು ಚುನಾವಣೆ ಸನ್ನಿಹಿತವಾಗಿದೆ. ಕೆಲವೇ ದಿನದಲ್ಲಿ ಎದುರಾಗಲಿರುವ ಲೋಕಸಮರಕ್ಕೆ ಎಲ್ಲ ಪಕ್ಷಗಳು ಸಜ್ಜಾಗಿವೆ.

ಲೋಕಸಭಾ ಚುನಾವಣೆಯ ವೇದಿಕೆ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕ ಒಂದಿಲ್ಲೊಂದು ಕಾರಣಕ್ಕೆ ಪ್ರಮುಖ ರಾಜ್ಯ ಎನಿಸಿದೆ. ಪ್ರಾದೇಶಿಕ ಪಕ್ಷಗಳ ಪಾರುಪತ್ಯವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಹೇಳಿಕೊಳ್ಳುವಂಥ ಹಾಗೂ ಫೈಟ್ ನೀಡಬಹುದಾದ ರಾಜ್ಯ ವೆಂದರೆ ‘ಕರ್ನಾಟಕ’. ೨೮ ಸೀಟುಗಳ ಬಲವನ್ನು ಹೊಂದಿರುವ ಕರ್ನಾಟಕದಲ್ಲಿ ಹೆಚ್ಚು ಸೀಟು ಗಳಿಸಿಕೊಂಡರೆ ದಕ್ಷಿಣ ಭಾರತದಲ್ಲಿ ‘ಮರ್ಯಾದೆ’ ಉಳಿಸಿಕೊಳ್ಳುವಷ್ಟು ಸ್ಥಾನಗಳನ್ನು ಪಡೆದು ದೆಹಲಿ ಸಂಸತ್‌ಗೆ ಪ್ರವೇಶಿಸಬಹುದು ಎನ್ನುವುದು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳ ಲೆಕ್ಕಾಚಾರ.

ಕರ್ನಾಟಕ ಹೊರತುಪಡಿಸಿದರೆ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳ ಪಾರುಪತ್ಯವಿರುವುದರಿಂದ ಹೇಳಿಕೊಳ್ಳುವಂಥ ಸ್ಥಾನಗಳನ್ನು ಪಡೆಯುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲು. ತೆಲಂಗಾಣ ಹಾಗೂ ಕೇರಳದಲ್ಲಿ ಕಾಂಗ್ರೆಸ್ ಸಂಘಟನೆಯ ಬಲವಿದ್ದರೂ, ಕರ್ನಾಟಕದಲ್ಲಿ ಗೆಲುವು ಸಾಧಿಸಿದಷ್ಟು ಸುಲಭವಾಗಿ ಈ ರಾಜ್ಯಗಳಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎನ್ನುವುದು ಪಕ್ಷದ ಹೈಕಮಾಂಡ್‌ನ
ಗಮನದಲ್ಲಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಟ್ಟು ೧೩೧ ಲೋಕಸಭಾ ಸೀಟುಗಳಿವೆ. ತಮಿಳುನಾಡು ೩೯ ಸೀಟುಗಳೊಂದಿಗೆ ಅತಿಹೆಚ್ಚು ಸೀಟುಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ೨೮ ಸೀಟುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಈ ೧೩೧ ಸೀಟುಗಳಲ್ಲಿ ಬಿಜೆಪಿ ಕೇವಲ ೩೦ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಕಾಂಗ್ರೆಸ್ ೨೮ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದೆ. ಇನ್ನುಳಿದ ೭೩ ಕ್ಷೇತ್ರಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಪಾರುಪತ್ಯ ಸಾಧಿಸಿವೆ. ಬಿಜೆಪಿ ಪಡೆದಿರುವ ೩೦ ಸೀಟುಗಳ ಪೈಕಿ ಕರ್ನಾಟಕದಲ್ಲಿಯೇ ೨೫ ಸೀಟುಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಗೆದ್ದಿರುವ ೩೦ ಸ್ಥಾನಗಳ ಪೈಕಿ ೧೫ ಸ್ಥಾನವನ್ನು ಕೇರಳದಲ್ಲಿ ಪಡೆದುಕೊಂಡಿದೆ (ಕಳೆದ ಬಾರಿ ರಾಹುಲ್ ಗಾಂಧಿ
ವಯನಾಡಿನಿಂದ ಸ್ಪರ್ಧಿಸಿದ್ದರಿಂದ ಪೂರಕ ವಾತಾವರಣವಿತ್ತು). ಇದನ್ನು ಬಿಟ್ಟರೆ ಇನ್ನುಳಿದ ರಾಜ್ಯಗಳಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳ ಸಾಧನೆ ಒಂದಂಕಿ ದಾಟಿಲ್ಲ ಎನ್ನುವುದು ಗಮನಾರ್ಹ.

ಹಾಗೆ ನೋಡಿದರೆ, ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇರಳದಲ್ಲಿ ಕಳೆದ ಬಾರಿ ಇದ್ದ ‘ಕ್ರೇಜ್’ ಇಲ್ಲ ಎನ್ನುವ ಮಾತುಗಳು ಕೇಳಿಬರು ತ್ತಿವೆ. ಇದರೊಂದಿಗೆ ಕೇರಳದಲ್ಲಿ ಪ್ರಬಲವಾಗಿರುವ ಸಿಎಂಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿ ಕೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಮಾತುಗಳನ್ನು ಹೇಳಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಹಾಗೂ ತೆಲಂಗಾಣವೇ
ನಿರ್ಣಾಯಕ ರಾಜ್ಯಗಳಾಗುವುದರಲ್ಲಿ ಅನುಮಾನವಿಲ್ಲ.

ಇನ್ನು ಬಿಜೆಪಿಯದ್ದೂ ಇದಕ್ಕಿಂತ ಭಿನ್ನ ಸ್ಥಿತಿಯಲ್ಲ. ಈ ಬಾರಿ ತಮಿಳುನಾಡು ಹಾಗೂ ಕೇರಳದಲ್ಲಿ ಖಾತೆ ತೆರೆಯುವುದೇ ಬಿಜೆಪಿಯ ಗುರಿಯಾಗಿರುವು ದರಿಂದ, ಹೆಚ್ಚು ಸೀಟುಗಳನ್ನು ಗೆಲ್ಲುವ ನಿರೀಕ್ಷೆಯನ್ನು ಆ ರಾಜ್ಯಗಳಿಂದ ಇಟ್ಟುಕೊಂಡಿಲ್ಲ. ಆದ್ದರಿಂದ ಬಿಜೆಪಿಗೂ ಕರ್ನಾಟಕವೇ ಅನಿವಾರ್ಯ ವಾಗಿದೆ. ಕರ್ನಾಟಕದಲ್ಲಿ ಕಳೆದ ನಾಲ್ಕು ಲೋಕಸಭಾ ಚುನಾವಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಹಜವಾಗಿಯೇ ಬಿಜೆಪಿಯ ಅಲೆಯಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರದಿದ್ದರೂ, ೨೦೦೪ರಿಂದ ಈಚೆಗೆ ಪ್ರತಿಬಾರಿಯೂ ಎರಡಂಕಿ ಸಂಸದರನ್ನು ಕರ್ನಾಟಕ ಬಿಜೆಪಿಗೆ ಕೊಡುಗೆಯಾಗಿ ನೀಡುತ್ತಿದೆ.

ದೇಶದಲ್ಲಿ ಮೋದಿ ಅಲೆ ಬೀಸುವ ಮೊದಲೇ ಅಂದರೆ ೨೦೦೪ರಲ್ಲಿ ಬಿಜೆಪಿಯ ೧೮, ಕಾಂಗ್ರೆಸ್‌ನ ಎಂಟು ಹಾಗೂ ಜೆಡಿಎಸ್‌ನ ಇಬ್ಬರು ಗೆಲುವು ಸಾಧಿಸಿ ದ್ದರೆ, ೨೦೦೯ರಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ ೧೯, ೬ ಹಾಗೂ ೩ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ್ದವು. ೨೦೧೪ರಲ್ಲಿ ನಡೆದ
ಚುನಾವಣೆಯಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೯ ಹಾಗೂ ಜೆಡಿಎಸ್ ೨ ಸೀಟುಗಳಿಗೆ ಸೀಮಿತವಾಗಿದ್ದವು. ಇನ್ನು ಕಳೆದ ಚುನಾವಣೆಯಲ್ಲಿ ೨೫ ಸ್ಥಾನಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ೨೦೦೯ರ ಚುನಾವಣೆ ಹೊರತುಪಡಿಸಿ, ಇನ್ನುಳಿದ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿರುವುದರಿಂದ, ರಾಜ್ಯ ರಾಜಕೀಯದ ಲೆಕ್ಕಚಾರಗಳು ಏನೇ ಇದ್ದರೂ, ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪರ
ಅಲೆಯಿರುವುದು ಸ್ಪಷ್ಟ.

ಈ ಹಿಂದಿನ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಕೊಂಚ ಭಿನ್ನ ಪರಿಸ್ಥಿತಿ ಕರ್ನಾಟಕದಲ್ಲಿದೆ. ಕಳೆದ ಲೋಕಸಭಾ  ಚುನಾವಣೆ ಯವರೆಗೆ ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಸಕ್ರಿಯರಾಗಿದ್ದರು. ಅವರು ಪಕ್ಷ ತೊರೆದ ಸಮಯದಲ್ಲಿ ಅನಂತಕುಮಾರ್ ತಮ್ಮ ತಂತ್ರಗಾರಿ ಕೆಯ ಮೂಲಕ ಈ ಕೊರತೆಯನ್ನು ನೀಗಿಸಿದ್ದರು. ಈ ಬಾರಿ ಯಡಿಯೂರಪ್ಪ ಅವರು ಸಕ್ರಿಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವು ದರಿಂದ ಅವರ ಮುಖ ನೋಡಿ, ಜನರು ಹೋಲ್‌ಸೇಲ್ ಆಗಿ ಮತ ಹಾಕುವರೇ ಎನ್ನುವ ಅನುಮಾನವಿದೆ.

ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಕಾಂಗ್ರೆಸ್ ಸಾಧಿಸಿದೆ. ಅದೇ ಅಲೆಯಲ್ಲಿ ಲೋಕಸಭಾ ಚುನಾವಣೆಯಲ್ಲೂ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಗ್ಯಾರಂಟಿಗಳನ್ನೇ ಅಸ್ತ್ರವಾಗಿಸಿಕೊಂಡು ಲೋಕಸಭಾ ಚುನಾವಣೆಯನ್ನು ಗೆಲ್ಲುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಗಿರುವ ಬಹುದೊಡ್ಡ ಸಮಸ್ಯೆಯೆಂದರೆ ರಾಷ್ಟ್ರ ಮಟ್ಟದಲ್ಲಿರುವ ನಾಯಕತ್ವ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಈಗಾಗಲೇ ರಾಜ್ಯಸಭೆಯಿಂದ ಆಯ್ಕೆಯಾಗುವ ಮೂಲಕ ಲೋಕಸಭೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇನ್ನು ಸೋನಿಯಾ ಪ್ರತಿನಿಧಿಸುತ್ತಿದ್ದ ಅಮೇಥಿಯಿಂದ ಪ್ರಿಯಾಂಕಾ ಸ್ಪರ್ಧಿಸುವ ಸಾಧ್ಯತೆಯಿದ್ದರೂ, ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿ ಅವರ ವಿರುದ್ಧ ಬಿಂಬಿಸುವುದು ಕಷ್ಟಸಾಧ್ಯ. ಇನ್ನು ಎರಡು ಬಾರಿ ಮೋದಿ ಎದುರು ಪ್ರಧಾನಿ ಅಭ್ಯರ್ಥಿಯಾಗಿ ಭಾರಿ ಹಿನ್ನಡೆ ಅನುಭವಿಸಿರುವ ರಾಹುಲ್ ಗಾಂಧಿಯವರನ್ನು ಮತ್ತೊಮ್ಮೆ ಪ್ರಧಾನಿ ಅಭ್ಯರ್ಥಿಯನ್ನಾಗಿ ತೋರಿಸಲು ಕಾಂಗ್ರೆಸ್
ಸಿದ್ಧವಿದ್ದರೂ ‘ಇಂಡಿಯ’ ಮೈತ್ರಿಕೂಟ ಸಿದ್ಧವಿಲ್ಲ.

ಇದರೊಂದಿಗೆ ‘ಇಂಡಿಯ’ ಮೈತ್ರಿಕೂಟದ ಕಾರಣಕರ್ತರಾದ ನಿತೀಶ್‌ಕುಮಾರ್ ಸೇರಿದಂತೆ ಅನೇಕ ಪ್ರಮುಖರು ಅದರಿಂದ ಹೊರನಡೆದು, ಎನ್‌ಡಿಎಗೆ
ಬೆಂಬಲಿಸಿದ್ದಾರೆ. ಇನ್ನುಳಿದ ಕೆಲ ಪ್ರಮುಖ ಪಕ್ಷಗಳು ಸ್ವತಂತ್ರ ಸ್ಪರ್ಧೆಗೆ ಉತ್ಸುಕತೆ ತೋರಿವೆ. ಹೀಗಿರುವಾಗ, ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕು ಎನ್ನುವುದೇ ಕಾಂಗ್ರೆಸಿಗರ ಬಹುದೊಡ್ಡ ಪ್ರಶ್ನೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಹಾಗೂ ರಾಜ್ಯದ ಸಮಸ್ಯೆಗಳಿಗಿಂತ ರಾಷ್ಟ್ರೀಯ ಮಟ್ಟದ ಸಮಸ್ಯೆ ಹಾಗೂ ನಾಯಕತ್ವಕ್ಕೆ ‘ಮತ’ಗಳು ಬೀಳುವುದರಿಂದ ಅದು ರಾಜ್ಯ ಕಾಂಗ್ರೆಸಿಗರ ಆತಂಕಕ್ಕೆ ಕಾರಣವಾಗಿದೆ.

ಇದೇ ಆತಂಕದಿಂದಾಗಿ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಹಲವದರಲ್ಲಿ ಸ್ಪರ್ಧಿಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸಚಿವರನ್ನೇ ಸ್ಪರ್ಧಿಗಳನ್ನಾಗಿ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದ್ದರೂ, ಗೆಲುವಿನ ಸಮೀಕರಣ ಹಾಗೂ ಗೆದ್ದರೂ ಮುಂದೇನು ಎನ್ನುವ ಪ್ರಶ್ನೆಯಿಂದ ಹಲವು ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಒತ್ತಡದಿಂದ ಟಿಕೆಟ್ ಕೊಟ್ಟರೂ ಚುನಾವಣೆ ಯಲ್ಲಿ ಗೆಲುವು ಸಾಧಿಸದಿದ್ದರೆ ಮುಂದೇನು ಎನ್ನುವ ಪ್ರಶ್ನೆ ಹೈಕಮಾಂಡ್ ಮಟ್ಟದಲ್ಲಿದೆ. ಇನ್ನು ಕೆಲವು ಭಾಗದಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗಿದೆ. ಚುನಾವಣಾ ರಾಜಕೀಯದ ಮೊದಲ ಹೆಜ್ಜೆಯಾಗಿ ಟಿಕೆಟ್ ಸಿಗಲಿ ಎನ್ನುವ ಲೆಕ್ಕಾಚಾರದಲ್ಲಿ ಕೆಲವು ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಲು ಉತ್ಸುಕರಾಗಿದ್ದಾರೆ.

ಆದರೆ ಮೋದಿ ವೇವ್ ಎದುರು ಈ ‘ಪ್ರಯೋಗ’ ಸಫಲವಾಗುವುದೇ ಎನ್ನುವ ಅನುಮಾನ ಹಲವರಲ್ಲಿದೆ. ಇನ್ನು ದೇಶದಲ್ಲಿ ‘ಮೋದಿ ವೇವ್’, ಅಯೋಧ್ಯೆಯ ಹವಾ ಇರುವುದರಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಕ್ಲೀನ್ ಸ್ವೀಪ್ ಮಾಡುವ ಲೆಕ್ಕಾಚಾರದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರಿದ್ದಾರೆ. ಆದರೆ ರಾಜ್ಯ ಘಟಕದಲ್ಲಿನ ಆಂತರಿಕ ಕಲಹ ಈ ಕನಸನ್ನು ನನಸು ಮಾಡುವುದೇ ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರ ಬಳಿ ಉತ್ತರವಿಲ್ಲ. ಬಿಜೆಪಿ, ಆರ್‌ಎಸ್‌ಎಸ್ ನಡೆಸಿರುವ ಸಮೀಕ್ಷೆ ಪ್ರಕಾರ ಹಾಲಿ ಸಂಸದರಲ್ಲಿ ಐದಾರು ಮಂದಿಯ ಗೆಲುವಿನ ಸಾಧ್ಯತೆ ತೀರಾ ಕ್ಷೀಣಿಸಿದೆ. ಆದರೆ ಸೂಕ್ತ ಅಭ್ಯರ್ಥಿ ಗಳೊಂದಿಗೆ ಮೋದಿ ಹೆಸರಲ್ಲಿ ಚುನಾವಣೆಗೆ ಹೋದರೆ, ಗೆಲ್ಲುವುದು ಬಹುದೊಡ್ಡ ವಿಷಯವೇನಲ್ಲ ಎನ್ನಲಾಗುತ್ತಿದೆ. ಈ ವಿಷಯವನ್ನು ಅರಿತಿರುವ ಆಕಾಂಕ್ಷಿಗಳು ಮೋದಿ ಹೆಸರಲ್ಲಿ ಗೆಲ್ಲುವುದಕ್ಕೆ ಜಿದ್ದಿಗೆ ಬಿದ್ದಿರುವುದರಿಂದ ಸಹಜವಾಗಿಯೇ ಹಲವು ಕ್ಷೇತ್ರದಲ್ಲಿ ಆಂತರಿಕ ಪೈಪೋಟಿ ಹೆಚ್ಚಾಗಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಇನ್ನುಳಿದ ಆಕಾಂಕ್ಷಿಗಳು ಬಂಡಾಯವೇಳುವ ಸಾಧ್ಯತೆಯಿರುವುದರಿಂದ ಎಚ್ಚರಿಕೆಯ ಹೆಜ್ಜೆಯಿಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ.

ಈ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಕೈಜೋಡಿಸಿರುವ ಜೆಡಿಎಸ್, ಗೆಲ್ಲುವ ಕ್ಷೇತ್ರಗಳನ್ನು ಮಾತ್ರ ಕೇಳಲು
ತೀರ್ಮಾನಿಸಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ವರಿಷ್ಠರು ನಾಲ್ಕು ಸೀಟು ಎಂದರೂ, ಜೆಡಿಎಸ್ ಮೂರೇ ಸಾಕು ಎನ್ನುವ ಮನಸ್ಥಿತಿಯಲ್ಲಿದೆ. ಈ ಮೂಲಕ ಬಿಜೆಪಿ ಬಿಟ್ಟುಕೊಡುವ ಮೂರು ಕ್ಷೇತ್ರದಲ್ಲಿ ಗೆಲುವು ಸಾಽಸಿ ಬಿಜೆಪಿ ವರಿಷ್ಠರ ‘ಕೃಪೆ’ಗೆ ಒಳಗಾಗುವ ಲೆಕ್ಕಾಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದ್ದಾರೆ ಎನ್ನುವುದು ಸುಳ್ಳಲ್ಲ.

ಈ ಎಲ್ಲ ರಾಜಕೀಯ ಲೆಕ್ಕಾಚಾರದ ನಡುವೆ ಕೆಲವೇ ದಿನದಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆಯ ಸನಿಹದಲ್ಲಿದ್ದರೂ, ಕರ್ನಾಟಕದ ಮಟ್ಟಿಗೆ ಮೂರು ಪಕ್ಷಗಳಲ್ಲೂ ಕೆಲವೊಂದಷ್ಟು ಗೊಂದಲ- ಗೋಜಲುಗಳಿರುವುದು ಸಷ್ಟ. ಲೋಕಸಭೆಯಲ್ಲಿ ಕಳೆದ ಒಂದು ದಶಕದಿಂದ ಅಧಿಕೃತ ಪ್ರತಿಪಕ್ಷ ಸ್ಥಾನದ ಅರ್ಹತೆ ಪಡೆಯಲು ವಿಫಲವಾಗಿರುವ ಕಾಂಗ್ರೆಸ್ ನಾಯಕರಿಗೆ, ಈ ಬಾರಿ ಅತಿಹೆಚ್ಚು ಸ್ಥಾನ ಗೆಲ್ಲುವ ನೆಚ್ಚಿನ ರಾಜ್ಯವಾಗಿ ಕರ್ನಾಟಕವಿದ್ದರೆ, ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ರಾಜ್ಯ ನಾಯಕತ್ವವನ್ನು‘ಪರೀಕ್ಷೆ’ಗೆ ಇಟ್ಟಿರುವ ಬಿಜೆಪಿ ವರಿಷ್ಠರಿಗೆ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ಫಲಿತಾಂಶವು ರಾಜ್ಯ ರಾಜಕೀಯದಲ್ಲಿನ ಬದಲಾವಣೆ ಹಾಗೂ ಮುಂದಿನ ನಾಲ್ಕು ವರ್ಷದಲ್ಲಿ ಎದುರಾಗುವ ವಿಧಾನಸಭಾ
ಚುನಾವಣೆಗೆ ವೇದಿಕೆಯನ್ನು ಯಾವ ರೀತಿ ಸಿದ್ಧಪಡಿಸಬೇಕು ಎನ್ನುವುದಕ್ಕೆ ಪ್ರಾಥಮಿಕ ವರದಿಯಾಗುವುದು ನಿಶ್ಚಿತ.

ಬಿಜೆಪಿಯೊಂದಿಗೆ ಸೇರಿ ಅಸ್ತಿತ್ವ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಜೆಡಿಎಸ್‌ಗೆ ಮುಂದಿನ ದಿನದಲ್ಲಿ ತಾನೇನು ಮಾಡಬೇಕು ಎನ್ನುವುದನ್ನು ಯೋಚಿಸಲು ಈ ಫಲಿತಾಂಶ ಸ್ಪಷ್ಟ ಉತ್ತರ ನೀಡಲಿದೆ.