Tuesday, 17th September 2024

ಹೊರಗಿನವರಿಗೆ ಮಣೆ ಹಾಕುವುದು ತರವೇ ?

ವಿಶ್ಲೇಷಣೆ

ರಮಾನಂದ ಶರ್ಮಾ

ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಿದ ಹೊರಗಿನವರು, ‘ಈ ರಾಜ್ಯದ ಒಳಿತಿಗಾಗಿ ಹೋರಾಡುತ್ತೇನೆ’ ಎಂದು ಎಷ್ಟೇ ಭರವಸೆ ನೀಡಿದರೂ ಅದು ಕೈಗೂಡುವುದು ವಿರಳವೇ. ನಮ್ಮವರೇ ನಮ್ಮ ಆಶಯಕ್ಕೆ ಸ್ಪಂದಿಸದಿರುವಾಗ ಹೊರಗಿನಿಂದ ಬಂದವರು ನಮ್ಮ ನಿರೀಕ್ಷೆಯ ಮಟ್ಟವನ್ನು ತಲುಪುವರೇ?

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಾರಂತೆ. ರಾಹುಲ್ ಗಾಂಧಿಯವರು ಕೇರಳದ ತಮ್ಮ ಕ್ಷೇತ್ರದ ಬದಲಿಗೆ ಕರ್ನಾಟಕದಿಂದ ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತಾರಂತೆ. ಇದಿನ್ನೂ ‘ವದಂತಿ’ಯ ಹಂತದಲ್ಲಿದ್ದು ಸತ್ಯಾಸತ್ಯತೆ ಗೊತ್ತಿಲ್ಲ, ಕರ್ನಾಟಕದ ಯಾವ ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು ಎಂಬ ಬಗೆಗಿನ ಮಾಹಿತಿ ಹೊರಬಂದಿಲ್ಲ. ಈ ಬಗ್ಗೆ ರಾಜ್ಯದ
ಯಾವ ರಾಜಕೀಯ ಧುರೀಣರೂ ಇನ್ನೂ ಪ್ರತಿಕ್ರಿಯಿಸಿಲ್ಲ ಮತ್ತು ಈ ಸುದ್ದಿಗೆ ರಾಜ್ಯದಲ್ಲಿ ಇನ್ನೂ ಸಂಚಲನ ಸಿಕ್ಕಿಲ್ಲ. ಆದರೆ, ಹೊರಗಿನವರನ್ನು ಹೀಗೆ ಕರೆಸಿ ಕರ್ನಾಟಕದಲ್ಲಿ ಚುನಾವಣೆಗೆ ನಿಲ್ಲಿಸಿ ಆರಿಸಿ ಕಳಿಸುವ ಪರಿಪಾಠ ಇನ್ನೊಮ್ಮೆ ಮುನ್ನೆಲೆಗೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಕೆಲ ಕನ್ನಡಪರ ಚಿಂತಕರು, ‘ಈ ನಿಟ್ಟಿನಲ್ಲಿ ಹೊರರಾಜ್ಯದವರಿಗೆ ಮೀಸಲಾತಿ ಇದೆಯೇ?’ ಎಂದು ಪ್ರಶ್ನಿಸುತ್ತಿದ್ದಾರೆ.

ನಮ್ಮ ಸಂವಿಧಾನ ಮತ್ತು ಚುನಾವಣಾ ನೀತಿ- ನಿಯಮಾವಳಿಯ ಪ್ರಕಾರ, ಇಂಥ ಚುನಾವಣೆ ಗಳಲ್ಲಿ ಸ್ಪರ್ಧಿಸುವ ಅರ್ಹತೆ ಇರುವವರು ತಮಗಿಷ್ಟ ವಾದ ಯಾವುದೇ ಸ್ಥಳದಿಂದ ಸ್ಪರ್ಧಿಸಬಹುದು. ಭಾರತೀಯರು ಈ ದೇಶದ ಯಾವುದೇ ಸ್ಥಳದಲ್ಲಿ ವಾಸಿಸಲು, ಉದ್ಯೋಗ-ವ್ಯವಹಾರದಲ್ಲಿ ತೊಡಗಲು ಸ್ವತಂತ್ರರಿರುವಂತೆ, ಈ ವಿಷಯದಲ್ಲೂ ಧಾರಾಳತನ ತೋರಿಸಲಾಗಿದೆ. ಆ ನೆಲೆಯಲ್ಲಿ ನೋಡಿದಾಗ, ಸೋನಿಯಾ ಮತ್ತು ರಾಹುಲರು ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸುವುದರಲ್ಲಿ ಅಂಥ ವಿಶೇಷವೇನೂ ಕಾಣುವುದಿಲ್ಲ.

ಆದರೆ, ‘ಈ ವಿಷಯದಲ್ಲಿ ಹೊರಗಿನವರಿಗೆ ಕರ್ನಾಟಕದಲ್ಲಿ ನಿರಂತರವಾಗಿ ಮಣೆಹಾಕುತ್ತಿರುವುದೇಕೆ?’ ಎಂಬ ಪ್ರಶ್ನೆಯಿಲ್ಲಿ ಎದ್ದು ಕಾಣುತ್ತದೆ. ಕಾರಣ, ಬೇರೆ
ರಾಜ್ಯದಲ್ಲಿ ಇಂಥ ಪರಿಪಾಠವಿಲ್ಲ; ಇದ್ದರೂ ನಗಣ್ಯವಾಗಿರುತ್ತದೆ ಎಂಬುದು ಕನ್ನಡ ಮತ್ತು ಕರ್ನಾಟಕಪರ ಚಿಂತಕರ ಅಭಿಮತ. ಇವರ ಬೇಸರ ಅಥವಾ ವ್ಯಾಕುಲತೆಯಲ್ಲಿ ಅರ್ಥವಿಲ್ಲದಿಲ್ಲ. ಇತ್ತೀಚೆಗೆ ಭಾರಿ ಸುದ್ದಿ ಮಾಡುತ್ತಿರುವ ರಾಷ್ಟ್ರೀಯವಾದಿಗಳು ಇದನ್ನು ಸಣ್ಣತನ ಎಂದು ಭಾವಿಸುತ್ತಿದ್ದಾರೆ. ಆಗೊಮ್ಮೆ-ಈಗೊಮ್ಮೆ ಇವು ನಡೆದರೆ ಯಾರೂ ಪ್ರಶ್ನಿಸುವುದಿಲ್ಲ; ಆದರೆ ಇದೊಂದು ರೀತಿಯ ನಿಯಮಾವಳಿ ರೂಪದಲ್ಲಿ ನಡೆದರೆ ಮತ್ತು ಅದಕ್ಕೆ ಯಾವುದೋ ‘ಇಸಂ’ ಹೆಸರಿನಲ್ಲಿ ಸಮರ್ಥನೆ ನೀಡಿದರೆ, ಅದು ಪ್ರಾದೇಶಿಕ ಆಕ್ರೋಶಕ್ಕೆ ದಾರಿಯಾಗುತ್ತದೆ.

ಕಾರಣ, ಇಂಥ ಪರಿಪಾಠವು ಸ್ಥಳೀಯ ಪ್ರತಿಭೆಗಳನ್ನು ಹತ್ತಿಕ್ಕುವುದರೊಂದಿಗೆ ಸಂಸತ್ತಿನಲ್ಲಿ ಕನ್ನಡಿಗರ ಪ್ರಾತಿನಿಧ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ಅವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತದೆ. ಕರ್ನಾಟಕದಿಂದ ಸ್ಪರ್ಧಿಸಿದ ಹೊರಗಿನವರು, ‘ಈ ರಾಜ್ಯದ ಒಳಿತಿಗಾಗಿ ಹೋರಾಡುತ್ತೇನೆ’ ಎಂದು ಎಷ್ಟೇ ಭರವಸೆ ನೀಡಿದರೂ, ಅದು ಕೈಗೂಡುವುದು ವಿರಳವೇ ಎಂಬುದು ಸಾರ್ವಕಾಲಿಕ ಸತ್ಯ. ನಮ್ಮವರೇ ನಮ್ಮ ಆಶಯಕ್ಕೆ ಸ್ಪಂದಿಸದಿರುವಾಗ ಮತ್ತು ಅವರ ಸದಸ್ಯತ್ವದ ಅವಽಯ ಕೊನೆಯಲ್ಲಿ ಅವರ ಸಾಧನೆಯ ಗ್ರಾಫ್ ತಳದಲ್ಲೇ ಉಳಿದಿರುವುದು ಸ್ಪಷ್ಟಗೋಚರವಿರುವಾಗ, ಹೊರಗಿನಿಂದ ಬಂದವರು ನಮ್ಮ ನಿರೀಕ್ಷೆಯ ಮಟ್ಟವನ್ನು ತಲುಪುವರೇ? ಲೋಕಸಭೆ ಮತ್ತು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಹೊರಗಿನವರ ಪಟ್ಟಿಯನ್ನು ನೋಡಿದಾಗ, ಕನ್ನಡಪರ ಚಿಂತಕರ ಮತ್ತು
ಸಂಘಟನೆಗಳ ಆಕ್ರೋಶದಲ್ಲಿ ಅರ್ಥವಿರುವುದು ಕಾಣುತ್ತದೆ.

೧೯೭೮ರಲ್ಲಿ ಚಿಕ್ಕಮಗಳೂರಿನ ಸಂಸದ ಡಿ.ಬಿ.ಚಂದ್ರೇಗೌಡರಿಂದ ರಾಜೀನಾಮೆ ಕೊಡಿಸಿ ಇಂದಿರಾ ಗಾಂಧಿಯವರು ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದಾಗಿನಿಂದ ಕರ್ನಾಟಕ ರಾಜಕೀಯದಲ್ಲಿ ಹೊರಗಿನವರಿಗೆ ಮಣೆಹಾಕುವ ಪರಿಪಾಠ ಶುರುವಾಯಿತು. ಇಂದಿರಾರ ಸಂಪುಟದಲ್ಲಿ ಸಂಪರ್ಕ ಖಾತೆ ಸಚಿವರಾಗಿದ್ದ ಕೇರಳ ಮೂಲದ ಸಿ. ಎಂ.ಸ್ಟೀಫನ್ ಅವರು ೧೯೮೦ರಲ್ಲಿ ಕಲಬುರ್ಗಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಸೋನಿಯಾ ಗಾಂಧಿಯವರು ೧೯೯೯ರಲ್ಲಿ ಬಳ್ಳಾರಿಯಲ್ಲಿ
ಬಿಜೆಪಿಯ ಸುಷ್ಮಾ ಸ್ವರಾಜ್‌ರನ್ನು (ಇವರೂ ಹೊರಗಿನವರೇ!) ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು; ಆದರೆ, ತಾವು ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮತ್ತೊಂದು ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್‌ಬರೇಲಿ ಸ್ಥಾನವನ್ನು ಉಳಿಸಿಕೊಂಡ ಸೋನಿಯಾ ಬಳ್ಳಾರಿ ಕ್ಷೇತ್ರಕ್ಕೆ ಜೀನಾಮೆ ನೀಡಿದ್ದು ಬೇರೆ ವಿಷಯ. ರಾಹುಲ್ ಗಾಂಽಯವರು ಕಳೆದ ಬಾರಿ ಕೇರಳದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು; ಈ ಬಾರಿ ಅವರಿಗೆ ಅಲ್ಲಿನ ಸಿಪಿಎಂ ಪಕ್ಷ ‘ರೆಡ್ ಸಿಗ್ನಲ್’ ತೋರಿಸಿದಂತೆ
ಕಾಣುತ್ತದೆ. ಬಹುಶಃ ಕೇರಳದವರು ಸ್ವಲ್ಪ ತಡವಾಗಿ ಅವರನ್ನು ‘ಹೊರಗಿನವರು’ ಎಂದು ಭಾವಿಸಿದರೇನೋ? ಹೀಗಾಗಿ ಅವರು ಈ ಬಾರಿ ಕರ್ನಾಟಕದಿಂದ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.

ಈಗ ರಾಜ್ಯಸಭೆಯ ವಿಷಯಕ್ಕೆ ಬರೋಣ. ಉಪರಾಷ್ಟ್ರಪತಿಯಾಗಿ ವರ್ಷಗಳ ಹಿಂದೆ ನಿವೃತ್ತಿಯಾದ ಆಂಧ್ರಪ್ರದೇಶ ಮೂಲದ ವೆಂಕಯ್ಯ ನಾಯ್ಡು ಅವರು ೩ ಬಾರಿ (೧೯೯೮ರಿಂದ ೨೦೧೬ರ ವರೆಗೆ), ಒಟ್ಟು ೧೮ ವರ್ಷಗಳ ಸುದೀರ್ಘ ಅವಧಿಯವರೆಗೆ ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿದ್ದರು. ನಾಲ್ಕನೇ ಬಾರಿಯೂ ಅವರು ಸ್ಪರ್ಧಿಸಲು ಇಚ್ಛಿಸಿದಾಗ ಕನ್ನಡಿಗರು ‘ವೆಂಕಯ್ಯ ಸಾಕಯ್ಯ’ ಎಂಬ ಟ್ವಿಟರ್ ಅಭಿಯಾನ ನಡೆಸಿ ಅವರ ಸ್ಪರ್ಧೆಯನ್ನು ಒಕ್ಕೊರಲಿನಿಂದ ವಿರೋಧಿಸಿದಾಗ, ಅವರು ಕಣದಿಂದ ಹಿಂದೆ ಸರಿದಿದ್ದರು. ಅವರು ೩ನೇ ಬಾರಿ ಸ್ಪರ್ಧಿಸಿದ್ದಾಗ, ನಮ್ಮ ಶಾಸಕರು ನಮ್ಮವರೇ ಆದ ಶಕುಂತಲಾ ಹೆಗಡೆಯವರನ್ನು (ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಪತ್ನಿ) ಮೂರನೇ ಸ್ಥಾನಕ್ಕೆ ಸರಿಸಿ, ವೆಂಕಯ್ಯ ನಾಯ್ಡು ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತನೀಡಿ ಗೆಲ್ಲಿಸಿ
ಕಳಿಸಿದ್ದರು. ಈ ಕಹಿನೆನಪು ಕನ್ನಡಿಗರ ಮನದಲ್ಲಿ ಬೇರೂರಿದೆ. ನಾಯ್ಡು ಅವರಿಗೆ ಅಂದಿನ ಕೇಂದ್ರ ಮಂತ್ರಿ ಅನಂತಕುಮಾರರ ಬೆಂಬಲವಿತ್ತು
ಎನ್ನಲಾಗುತ್ತದೆ.

ಮುಂಬೈ ಮೂಲದ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಅವರು ರಾಮಕೃಷ್ಣ ಹೆಗಡೆಯವರ ಬೆಂಬಲದಿಂದ ರಾಜ್ಯಸಭೆಗೆ (೧೯೮೮ರಿಂದ ೧೯೯೪ರವರೆಗೆ) ಆಯ್ಕೆಯಾಗಿದ್ದರು. ಚೆನ್ನೈನ ಕೋಟ್ಯಧಿಪತಿ ಮತ್ತು ರೇಸ್ ಕುದುರೆ ಮಾಲೀಕ ಎ.ಎಂ. ರಾಮಸ್ವಾಮಿ (೧೯೮೮ರಿಂದ ೯೪ರವರೆಗೆ) ಈ ನಿಟ್ಟಿನಲ್ಲಿ ಉಲ್ಲೇಖಿಸ ಬಹುದಾದ ಮತ್ತೊಂದು ಹೆಸರು. ಆರ್.ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಬಿಹಾರ/ಬಂಗಾಳ ಮೂಲದ ಮೋನಿಕಾ ದಾಸ್ (೧೯೮೦-೧೯೮೬) ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಚೆನ್ನೈ ಮೂಲದವರೂ, ಮುಂಬೈ ನಿವಾಸಿಯೂ ಆಗಿದ್ದ ಹಿಂದಿ ಚಿತ್ರನಟಿ ಹೇಮಮಾಲಿನಿ (೨೦೧೧-೧೨) ಅಲ್ಪಾವಧಿಗೆ ಮತ್ತು ಅನಿವಾಸಿ ಮದ್ಯದ ದೊರೆ ವಿಜಯ್ ಮಲ್ಯ (೨೦೦೨-೨೦೦೮ ಮತ್ತು ೨೦೧೦-೨೦೧೬) ಎರಡು ಅವಧಿಗೆ ಹೀಗೆಯೇ ಸದಸ್ಯರಾಗಿದ್ದಿದೆ. ಇನ್ನು, ೨೦೧೨-೨೦೧೮ರ ಅವಧಿಗೆ ಆಯ್ಕೆಯಾಗಿದ್ದ ಚೆನ್ನೈ ಮೂಲದ ಆರ್.ರಾಮಕೃಷ್ಣ ಎಂಬುವವರ ಬಗ್ಗೆ ಶ್ರೀಸಾಮಾನ್ಯರಿಗಿರಲಿ, ಅವರಿಗೆ ಮತ ನೀಡಿದವರಿಗೆ ಕೂಡ ಸರಿಯಾಗಿ ಗೊತ್ತಿರಲಿಲ್ಲ ವಂತೆ. ಎ.ಎಂ.ರಾಮಸ್ವಾಮಿ, ಹೇಮಮಾಲಿನಿಯವರಂತೆ ಇವರು ಕೂಡ ನಾಮಪತ್ರ ಸಲ್ಲಿಸುವಾಗ ಮತ್ತು ಆಯ್ಕೆಯಾದಾಗ ಮಾತ್ರ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು ಎಂಬ ಜೋಕ್ ರಾಜಕೀಯ ವಲಯದಲ್ಲಿ ಕೇಳುತ್ತದೆ.

೨೦೦೬ರಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಽಸುತ್ತಿರುವ ರಾಜೀವ್ ಚಂದ್ರಶೇಖರ್ ಅವರು ಕೇರಳ ಮೂಲದ ಬೆಂಗಳೂರು ನಿವಾಸಿ; ಕನ್ನಡಪ್ರಭ ಪತ್ರಿಕೆ ಮತ್ತು ಸುವರ್ಣ ನ್ಯೂಸ್ ವಾಹಿನಿಯ ಮಾಲೀಕರೂ ಆಗಿರುವ ಇವರು ‘ಬಿಪಿಎಲ್’ ಹೆಸರಿನ ಇಲೆಕ್ಟ್ರಾನಿಕ್ ಉದ್ಯಮವನ್ನು (೧೯೯೪-೨೦೦೪) ನಡೆಸಿದವರು ಮತ್ತು ‘ಜ್ಯುಪಿಟರ್ ಕ್ಯಾಪಿಟಲ್ ಪ್ರೈ ಲಿಮಿಟೆಡ್’ ಎಂಬ ಹೂಡಿಕಾ ಕಂಪನಿಯ ಸಂಸ್ಥಾಪಕರು. ೨೦೨೨ರಿಂದ ರಾಜ್ಯಸಭೆ ಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಲೆಹರ್ ಸಿಂಗ್ ಅವರು ದಶಕಗಳಿಂದ ಬೆಂಗಳೂರಿನವರಾಗಿ ದ್ದರೂ, ‘ಹೊರಗಿನವರು’ ಎಂಬ ಹಣೆಪಟ್ಟಿಯಲ್ಲೇ ಇದ್ದಾರೆ. ಈ ನಿಟ್ಟಿನಲ್ಲಿ ಉಲ್ಲೇಖಿಸಬಹುದಾದ ಮತ್ತೊಂದು ಹೆಸರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರದ್ದು.

‘ಹೊರಗಿನವರು’ ಎಂದ ಮಾತ್ರಕ್ಕೆ, ಇವರೆಲ್ಲರ ಅರ್ಹತೆಯ ಬಗ್ಗೆ ಯಾರೂ ಬೆರಳು ಮಾಡಿ ತೋರಿಸುವುದಿಲ್ಲ; ಇವರೆಲ್ಲ ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯಕ್ಕೆ ಏನೂ ಕೊಡುಗೆ ನೀಡಿಲ್ಲ ಎಂದೂ ಹೇಳಲಾಗದು. ಅವರ ಕೊಡುಗೆಯು ಜನರ ನಿರೀಕ್ಷೆಯಷ್ಟು ಇರದಿರಬಹುದು, ಕೆಲವರು ಏನೂ ನೀಡದಿರಬಹುದು. ಅವು ಬೇರೆಯದೇ ಚರ್ಚೆಯ ವಿಷಯಗಳು. ಆದರೆ, ನಮ್ಮವರನ್ನೇ ನಿರ್ಲಕ್ಷಿಸಿ ಹೊರಗಿನವರಿಗೆ ಮಣೆ ಹಾಕುವುದೇಕೆ? ನಮ್ಮ ರಾಜ್ಯದ ಬೇಕು-ಬೇಡಗಳ ಬಗ್ಗೆ ಹೊರಗಿನವರಿಗೆ ನಮ್ಮಷ್ಟು ಬದ್ಧತೆ ಇರುತ್ತದೆಯೇ? ಎಂಬುದು ರಾಜ್ಯದ ಪ್ರಜ್ಞಾವಂತರ ಪ್ರಶ್ನೆ.

ನಮ್ಮಲ್ಲಿ ಅರ್ಹತೆ ಉಳ್ಳವರ ಕೊರತೆಯೇ ಅಥವಾ ಕೆಲವರ ವೈಯಕ್ತಿಕ/ರಾಜಕೀಯ ಹಿತಾಸಕ್ತಿಗಳ ಒತ್ತಡಕ್ಕೆ ಸಿಲುಕಿ ಹೀಗಾಗುತ್ತಿದೆಯೇ? ಯಾವುದೋ ತುರ್ತು, ಅನಿವಾರ್ಯ, ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಂದೆರಡು ಬಾರಿ ಹೀಗಾದರೆ ಸಹಿಸಿಕೊಳ್ಳಬಹುದು. ಆದರೆ ಇದು ‘ಅಪವಾದ’ವಾಗದೇ ‘ರೂಢಮಾದರಿ’ ಆಗಿಬಿಟ್ಟರೆ ಹೇಗೆ? ನಮ್ಮ ನೆರೆರಾಜ್ಯ ತಮಿಳುನಾಡಿನಲ್ಲಿ ಇಂಥ ಬೆಳವಣಿಗೆ ಸಾಧ್ಯವೇ? ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ ಮಹಾರಾಷ್ಟ್ರದಿಂದ ರಾಜ್ಯಸಭೆಗೆ
ಆಯ್ಕೆಯಾಗಿದ್ದಾರೆ; ಆದರೆ ಮಹಾರಾಷ್ಟ್ರದ ಯಾರಾದರೂ ತಮಿಳುನಾಡಿನಿಂದ ಹೀಗೆ ಆಯ್ಕೆಯಾಗಲು ಸಾಧ್ಯವೇ? ಮನಮೋಹನ್ ಸಿಂಗ್ ಅವರು ಅಸ್ಸಾಂ ಮತ್ತು ರಾಜಸ್ಥಾನ ರಾಜ್ಯಗಳಿಂದ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದಾರೆ.

ಕರ್ನಾಟಕದವರೂ ಹೊರರಾಜ್ಯಗಳಿಂದ ಸಂಸತ್ತಿಗೆ ಆಯ್ಕೆಯಾಗಿದ್ದಿದೆ, ಆದರೆ ಇಂಥವರ ಪಟ್ಟಿ ತುಂಬಾ ಚಿಕ್ಕದು. ಬಿಜೆಪಿಯ ಜಗನ್ನಾಥ ರಾವ್ ಜೋಷಿಯವರು ಮಧ್ಯಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಎಸ್.ಆರ್ .ಬೊಮ್ಮಾಯಿಯವರು ಒಡಿಶಾದಿಂದ, ಜೈರಾಂ ರಮೇಶ್ ಆಂಧ್ರದಿಂದ ಮತ್ತು ಕುಂದಾಪುರದ
ಅನಿಲ್ ಹೆಗಡೆಯವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಮತ್ತು ನಿತೀಶ್ ಕುಮಾರ್ ಜತೆ ಗುರುತಿಸಿಕೊಂಡು ದಶಕಗಳಿಂದ ಬಿಹಾರದಲ್ಲಿರುವ ಅನಿಲ್ ಹೆಗಡೆ ಯವರು ಬಹುತೇಕ ಅಲ್ಲಿನ ಕಾಯಂ ನಿವಾಸಿಯಾಗಿದ್ದಾರೆ.

ಒಟ್ಟಿನಲ್ಲಿ, ಸಂವಿಧಾನದ ಆಶಯ ಏನೇ ಇರಲಿ, ನಮ್ಮವರು ಅಸ್ಮಿತೆ, ನಮ್ಮತನ ಮತ್ತು ಸ್ವಾಭಿಮಾನವನ್ನು ಬಲಿಗೊಟ್ಟು ಕಾಯಮ್ಮಾಗಿ ಹೀಗೆ ‘ಅತಿಥಿ ದೇವೋಭವ’ ಎನ್ನುವಂತಾಗದಿರಲಿ. ಹಳ್ಳಿಯೊಂದರ ಅಂಗನವಾಡಿಗೆ ನೆರೆಯ ಹಳ್ಳಿಯ ಶಿಕ್ಷಕಿಯರನ್ನು ನೇಮಕ ಮಾಡಿದ್ದನ್ನು ವಿರೋಧಿಸಿದ ದೃಷ್ಟಾಂತವಿರುವ ರಾಜ್ಯದಲ್ಲಿ, ಚುನಾವಣೆಯ ಸಂದರ್ಭದಲ್ಲಿ ಹೊರಗಿನವರಿಗೆ ಮಣೆಹಾಕುವು ದೇಕೆ? ಎಂಬುದು ಅರ್ಥವಾಗುತ್ತಿಲ್ಲ.

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)

Leave a Reply

Your email address will not be published. Required fields are marked *