Thursday, 12th December 2024

ಬದಲಾವಣೆ ಸಂಚಿಗೆ ಮೀಸಲು ಸೀಟು ಖೋತಾ

ಚರ್ಚಾ ವೇದಿಕೆ

ಡಾ.ಸುಧಾಕರ ಹೊಸಳ್ಳಿ

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಉತ್ತರ ಕನ್ನಡ ಕ್ಷೇತ್ರದ ಅಂದಿನ ಸಂಸದ ಅನಂತ ಕುಮಾರ್ ಹೆಗಡೆ ಅವರು ಸಂವಿಧಾನ ತಿದ್ದುಪಡಿ ಎಂಬ
ಒಂದು ಸಾಮಾನ್ಯ ಪ್ರಕ್ರಿಯೆಗೆ ಮತ್ತು ಅವಶ್ಯಕ ನಡಾವಳಿಗೆ ರಾಜಕೀಯ ಸ್ವರೂಪ ನೀಡಿದ ಕಾರಣಕ್ಕಾಗಿ ಸಂವಿಧಾನ ತಿದ್ದುಪಡಿಯ ಕುರಿತಾದ ಬಹುದೊಡ್ಡ ಚರ್ಚೆ ಮತ್ತೊಮ್ಮೆ ಹುಟ್ಟಿಕೊಂಡಿತು.

ಭಾರತದಂಥ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಈ ವಿಷಯ ರಾಜಕೀಯದ ಅಸವಾಗಿದ್ದು ಅಪಾಯಕಾರಿ ಸಂಗತಿಯಾಗಿತ್ತು. ಸಂವಿಧಾನ ತಿದ್ದುಪಡಿ ಮತ್ತು ಸಂವಿಧಾನದ ಬದಲಾವಣೆ ವಿರುದ್ಧ ದಿಕ್ಕಿನ ಪ್ರತಿಪಾದನೆಗಳು. ೧೯೭೩ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಕೇಶವಾನಂದ ಭಾರತಿ ವರ್ಸಸ್ ಕೇರಳ ಸರಕಾರ ಪ್ರಕರಣದಲ್ಲಿ, ಸಂವಿಧಾನದ ಮೂಲರಚನೆಯನ್ನು ಬದಲಾವಣೆ ಮಾಡಲು  ಸಾಧ್ಯವಿಲ್ಲವೆಂಬ ಘನೀಭೂತವಾದ ಆದೇಶವನ್ನು ನೀಡಿದೆ. ಆ ಆದೇಶ ಹೊರಡಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಸಂವಿಧಾನದ ಮರುವಾಕ್ಯ ಮಾಡುವ ಅವಕಾಶವನ್ನು ಸಂವಿಧಾನವೇ ನೀಡಿದೆ. ಹಾಗಾಗಿ ಸಂವಿಧಾನದ ಮೂಲಸ್ವರೂಪದ ಬದಲಾ ವಣೆಯು ಭಾರತ ಇರುವವರೆಗು ಸಾಧ್ಯವಿಲ್ಲ ಎಂಬುದು ನಿಶ್ಚಿತವಾದದ್ದೇ.

ವಸ್ತುಸ್ಥಿತಿ ಹೀಗಿದ್ದಾಗಿಯೂ ಅನಂತಕುಮಾರ್ ಹೆಗಡೆಯ ವರ ಹೇಳಿಕೆಯನ್ನು ದೇಶದ ಉದ್ದಗಲಕ್ಕೂ ಅತ್ಯಂತ ಗಟ್ಟಿಯಾಗಿ ಸಾರಿದ್ದರ ಪರಿಣಾಮ, ಇಂದು ಬಿಜೆಪಿ ತನ್ನ ಫಲಿತಾಂಶದಲ್ಲಿ ೨೨ ಮೀಸಲು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಈ ವಿಷಯ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಸ್ವತಃ
ನರೇಂದ್ರ ಮೋದಿಯವರೇ, ‘ಅಂಬೇಡ್ಕರ್ ಅವರೇ ಬಂದರೂ ಮೀಸಲಾತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಕೊಟ್ಟಿದ್ದಾಯಿತು. ಈ ಗೊಂದಲಕ್ಕೆ ಕಾರಣ ರಾದ ಅನಂತಕುಮಾರ್ ಹೆಗಡೆಯವರಿಗೆ ಚುನಾವಣಾ ಟಿಕೆಟ್ ತಪ್ಪಿಸಲಾಯಿತು. ಆದರೂ ಈ ನಕಾರಾತ್ಮಕ ಸಂಚಿಗೆ ಮೀಸಲು ಸೀಟುಗಳು ಕಡಿತವಾಗದಂತೆ ನೋಡಿಕೊಳ್ಳಲು ಸಾಧ್ಯವಾಗಲೇ ಇಲ್ಲ ಎಂಬುದು ಫಲಿತಾಂಶದಿಂದ ಬಿಂಬಿತವಾಗುತ್ತದೆ.

ಈ ಹಿಂದೆ ಸಂಸತ್ತಿನ ಉಭಯ ಸದನಗಳ ಒಟ್ಟು ೧೩೧ ಮೀಸಲು ಕ್ಷೇತ್ರಗಳ ಪೈಕಿ ೭೭ನ್ನು ಗೆದ್ದಿದ್ದ ಬಿಜೆಪಿಯು ಇಂದು ೫೫ ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ವಾಸ್ತವವೇ ಅಲ್ಲದ ಸಂವಿಧಾನ ಬದಲಾವಣೆಯ ಕೂಗು ಅದೆಷ್ಟು ಪರಿಣಾಮಕಾರಿ ಪ್ರಭಾವ ಬೀರಿದೆ ಎಂದರೆ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾರಂಥ ಪ್ರಭಾವಿ ದಲಿತ ನಾಯಕ ತಮ್ಮ ಎದುರಾಳಿಯ ಮುಂದೆ ೧,೫೦,೦೦೦ ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲುಂಡಿದ್ದಾರೆ. ಸಂವಿಧಾನದ ಮೂಲರಚನೆಯ ಬದಲಾವಣೆ ಅಸಾಧ್ಯವೇ ಆಗಿದ್ದರೂ, ತಿದ್ದುಪಡಿ ತೀರಾ ಅತ್ಯಗತ್ಯವಾದ ಪ್ರಕ್ರಿಯೆ. ಕಾಲಕಾಲಕ್ಕೆ ಸಂವಿಧಾನದ ತಿದ್ದುಪಡಿಯಾಗಲೇಬೇಕೆಂಬುದು ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಹೆಬ್ಬಯಕೆಯೇ ಆಗಿತ್ತು.

೧೯೪೮ರ ನವೆಂಬರ್ ೧೫ರಂದು ಸಂವಿಧಾನ ರಚನಾ ಸಭೆಯಲ್ಲಿ ಜಾತ್ಯತೀತತೆಯ ಸೇರ್ಪಡೆಯನ್ನು ನಿರಾಕರಿಸಿ ಅವರು ಮಾತನಾಡುವಾಗ, ‘ಸಂವಿಧಾ
ನವು ಕೇವಲ ರಾಷ್ಟ್ರದ ವಿವಿಧ ಅಂಗಗಳ ಕೆಲಸವನ್ನು ನಿಯಂತ್ರಿಸುವ ಒಂದು ವ್ಯವಸ್ಥೆಯಾಗಿದೆ, ಅಷ್ಟೇ. ಅದು ನಿರ್ದಿಷ್ಟ ಪಕ್ಷ ಇಲ್ಲವೇ ನಿರ್ದಿಷ್ಟ ಸದಸ್ಯರನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುವ ವ್ಯವಸ್ಥೆ ಅಲ್ಲ. ರಾಷ್ಟ್ರದ ನೀತಿ ಏನಾಗಿರಬೇಕು, ತಮ್ಮ ಸಾಮಾಜಿಕ ಮತ್ತು ಆರ್ಥಿಕ ಅಂಶಗಳನ್ನಾಧರಿಸಿ ಈ ಸಮಾಜವನ್ನು ಹೇಗೆ ಕಟ್ಟಬೇಕು ಈ ಸಂಗತಿಗಳನ್ನು ಸಮಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಜನರು ನಿರ್ಧರಿಸಬೇಕು.

ಇದನ್ನು ಸಂವಿಧಾನವೇ ಕೈಗೊಳ್ಳಬಾರದು. ಏಕೆಂದರೆ ಅದು ತನ್ನೊಂದಿಗೆ ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತದೆ’ ಎಂದು ಹೇಳುವ ಮೂಲಕ ಕಾಲಕಾಲದ ನಿರೀಕ್ಷೆಗಳಿಗೆ ತಕ್ಕಂತೆ ತಿದ್ದುಪಡಿಯ ಮೂಲಕ ಸಂವಿಧಾನವು ಮಾರ್ಪಾಟಾಗಬೇಕೆಂದು ತಿಳಿಸಿದ್ದರು. ಇದರಂತೆ, ೧೯೫೧ರಿಂದ ಮೊದ
ಲ್ಗೊಂಡು ಇಲ್ಲಿಯವರೆಗೆ ಸಂವಿಧಾನ ತಿದ್ದುಪಡಿ ಅವಕಾಶ ವಿಧಿಯಾದ ೩೬೮ನೇ ವಿಽಯ ಅನುಸಾರ ೧೦೬ ಅಂಗೀಕೃತ ತಿದ್ದುಪಡಿಗಳಾಗಿವೆ. ೧೯೫೧ರಲ್ಲಿ ಜಮೀನ್ದಾರಿ ಪದ್ಧತಿಯ ರದ್ದತಿ ಸೇರಿದಂತೆ ಮೊದಲನೇ ತಿದ್ದುಪಡಿ ಹಾಗೂ ೨೦೨೩ರ ಸೆಪ್ಟೆಂಬರ್ ೨೮ರಂದು ಮಹಿಳಾ ಮೀಸಲಾತಿ ಕುರಿತು ತಿದ್ದುಪಡಿ ಮಾಡಲಾಗಿದೆ.

೧೯೭೬ರಲ್ಲಿ ೪೨ನೇ ತಿದ್ದುಪಡಿಯ ಮುಖಾಂತರ ಅಂಬೇಡ್ಕರರರು ನೀಡಿದ್ದ ೫೯ ವಿಽಗಳನ್ನು ಒಮ್ಮೆಲೇ ತಿದ್ದುಪಡಿ ಮಾಡಲಾಗಿದೆ. ಹಾಗಾಗಿ ತಿದ್ದುಪಡಿ
ವಿಷಯವು ರಾಜಕೀಯದ ಭಾಗವಾಗಲು ಸಾಧ್ಯವೇ ಇಲ್ಲ. ಇಂದು ಸಂವಿಧಾನ ತಿದ್ದುಪಡಿಯ ಮರುಹುಟ್ಟಿನ ಚರ್ಚೆಯ ಹಿನ್ನೆಲೆಯಲ್ಲಿ ಸಂವಿಧಾನ ತಿದ್ದುಪಡಿಯ ಕುರಿತಾದ ಅಂಬೇಡ್ಕರರ ಅಭಿಮತವನ್ನು ಹಾಗೂ ಸಾಂವಿಧಾನಿಕ ಅವಕಾಶವನ್ನು ಅವಲೋಕನಕ್ಕೆ ಒಳಪಡಿಸಬೇಕಿದೆ. ಭಾರತದಲ್ಲಿ ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲಿ ಬದುಕು ಸಾಗಿಸಬೇಕಿದೆ, ನಿಯಮಗಳನ್ನು ಅನುಸರಿಸಲೇಬೇಕಿದೆ.

ಇಂಥ ಸಂವಿಧಾನವು ಕಾಲಕಾಲದ ನಿರೀಕ್ಷೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಾಟಾಗಬೇಕೆಂಬುದು ಅಂಬೇಡ್ಕರರ ಆಶಯವಾಗಿತ್ತು. ಅದಕ್ಕಾಗಿಯೇ ದಕ್ಷಿಣ ಆಫ್ರಿಕಾದಿಂದ ತಿದ್ದುಪಡಿ ನಿಯಮವನ್ನು ಎರವಲು ಪಡೆದರು. ವಸ್ತುಸ್ಥಿತಿ ಹೀಗಿದ್ದರೂ, ಕೆಲವರು ಸಂವಿಧಾನದ ಕುರಿತು ಮಾತನಾಡಲೇಬಾರದು, ಸಂವಿಧಾನದ ತಿದ್ದುಪಡಿ ಯಾಗಲೇಬಾರದು ಎಂದು ಆಗಾಗ ಬೊಬ್ಬೆ ಹೊಡೆಯುತ್ತಾ ಸಮಾಜದಲ್ಲಿ ಅಶಾಂತಿ  ಸೃಷ್ಟಿಯಾಗುವಂತೆ ನೋಡಿಕೊಳ್ಳುತ್ತಾರೆ.

ಈ ನಿಟ್ಟಿನಲ್ಲಿ ಸಂವಿಧಾನ ರಚನಾಕಾರರ ದೃಷ್ಟಿ ಏನಿತ್ತು ಎಂಬುದನ್ನು ಸಾಂಖಿಕವಾಗಿ ತಿಳಿದುಕೊಳ್ಳುವುದು ಅನಿವಾರ್ಯ. ಅಂದು ೧೯೪೮ರ ನವೆಂಬರ್ ೪ರಂದು ಸಂವಿಧಾನ ರಚನಾ ಸಭೆಯಲ್ಲಿ ನಿಂತ ಅಂಬೇಡ್ಕರ್ ಹೀಗೆ ಮಾತು ಮುಂದುವರಿಸುತ್ತಾರೆ: ಸಂವಿಧಾನವನ್ನು ತಿದ್ದುಪಡಿ
ಮಾಡಲು ಅವಕಾಶ ನೀಡಿರುವ ಉಪಬಂಧವು ಟೀಕಾಕಾರರ ತೀವ್ರ ಟೀಕೆಗೆ ಒಳಗಾಗಿದೆ. ಕರಡು ಸಂವಿಧಾನದಲ್ಲಿ ಸೂಚಿಸಿರುವ ಉಪಬಂಧಗಳು ಸಂವಿಧಾನವನ್ನು ತಿದ್ದುಪಡಿ ಮಾಡಲು ಬಹಳ ಕಷ್ಟದ ನಿಯಮ ಮಾಡಿವೆ ಎನ್ನಲಾಗಿದೆ.

ಸಂವಿಧಾನವನ್ನು ಕನಿಷ್ಠಪಕ್ಷ ಮೊದಮೊದಲ ವರ್ಷಗಳಲ್ಲಿ ಸರಳ ಬಹುಮತದಿಂದ ತಿದ್ದುಪಡಿ ಮಾಡಬಹುದಾದ ಅವಕಾಶವನ್ನು ಕಲ್ಪಿಸಬೇಕಾಗಿತ್ತು ಎಂಬ ವಾದವೂ ಸೃಜಿಸಲ್ಪಟ್ಟಿದೆ. ಸಂವಿಧಾನ ರಚನಾ ಸಭೆಯು ವಯಸ್ಕ ಮತದಾನದ ಆಧಾರದ ಮೇಲೆ ಚುನಾಯಿತವಾಗಿಲ್ಲ ವಾದರೂ, ಸರಳ ಬಹುಮತದಿಂದ ಕರಡು ಸಂವಿಧಾನವನ್ನು ಅಂಗೀಕರಿಸಿದೆ. ಅದು ವಯಸ್ಕ ಮತದಾನದ ಆಧಾರದ ಮೇಲೆ ಚುನಾಯಿತವಾಗುವ ಸಂಸತ್ತಿಗೆ, ಸರಳ ಬಹುಮತದ ಮೇಲೆ ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡುವ ಹಕ್ಕನ್ನು ಕೊಟ್ಟಿಲ್ಲ. ಇದನ್ನು ಕರಡು ಸಂವಿಧಾನದಲ್ಲಿರುವ ಒಂದು ಅಸಂಬದ್ಧತೆ ಯೆಂದು ಮೆರೆಸಲಾಗುತ್ತಿದೆ.

ಸಂವಿಧಾನದ ತಿದ್ದುಪಡಿ ಮಾಡಲು ಅಳವಡಿಸಿರುವ ಅವಕಾಶಗಳು ಎಷ್ಟು ಸರಳವಾಗಿವೆಯೆಂದು ತಿಳಿಯಲು, ಅಮೆರಿಕ ಮತ್ತು ಆಸ್ಟ್ರೇಲಿಯಾದ ಸಂವಿಧಾನಗಳನ್ನು ಅಭ್ಯಾಸ ಮಾಡಬೇಕು. ಅವುಗಳಿಗೆ ಹೋಲಿಸಿದರೆ, ನಮ್ಮ ಕರಡು ಸಂವಿಧಾನದಲ್ಲಿ ಇರುವ ತಿದ್ದುಪಡಿ ವಿಽಗಳು ಬಹಳ ಸರಳವಾಗಿವೆಯೆಂಬುದು ತಿಳಿಯುತ್ತದೆ. ಈ ಸಂವಿಧಾನವು ಕಾರ್ಯಸಾಧುವೂ, ನಮ್ಯವೂ ಆಗಿದೆ ಮತ್ತು ಶಾಂತಿ ಹಾಗೂ ಯುದ್ಧದ ಸಮಯ
ಗಳಲ್ಲಿ ದೇಶದ ಏಕತೆಯನ್ನು ಕಾಪಾಡುವುದಕ್ಕೆ ಸಮರ್ಥವೂ ಆಗಿದೆಯೆಂದು ನಾನು ಭಾವಿಸಿದ್ದೇನೆ. ನಾನು ಹೀಗೆ ಹೇಳ ಬಹುದಾದರೆ, ಮುಂದೆ ಆಡಳಿತದಲ್ಲಿ ವ್ಯವಸ್ಥೆಯು ಕೆಟ್ಟು ಹೋದ ಪಕ್ಷದಲ್ಲಿ, ಅದು ನಾವು ಒಂದು ಕೆಟ್ಟ ಸಂವಿಧಾನವನ್ನು ಹೊಂದಿದ್ದೇವೆ ಎಂಬುದನ್ನು ತೋರಿಸುವುದಿಲ್ಲ.

ಆದರೆ, ಮಾನವ ಮೂಲತಃ ಕುತಂತ್ರಿ ಎಂದಷ್ಟೇ ಹೇಳಬಹುದು. ಸಂವಿಧಾನದ ತಿದ್ದುಪಡಿ ಎಷ್ಟು ಅವಶ್ಯಕ ಎಂಬುದನ್ನು ಅಂಬೇಡ್ಕರರೇ ತಿಳಿಯಪಡಿಸಿದ್ದಾರೆ. ೨೦೨೦ರಲ್ಲಿ ಸಂಸತ್ತಿನಲ್ಲಿ ಶೋಷಿತರ ಪರವಾಗಿರುವ ಮೀಸಲಾತಿಯ ಸ್ಥಾನಗಳು ಉಳಿದಿದ್ದೇ ಸಂವಿಧಾನಕ್ಕೆ ತಂದ ೧೦೪ನೇ ತಿದ್ದುಪಡಿಯ ಮುಖಾಂತರ. ಮಹಿಳೆಯರಿಗೆ ಮೀಸಲಾತಿ ದೊರೆತದ್ದೂ ತಿದ್ದುಪಡಿಯ ಮೂಲಕವೇ. ತಿದ್ದುಪಡಿ ಎಂಬ ಸಾಂವಿಧಾನಿಕ ಮಂತ್ರದಂಡದ ಬಗೆಗೆ ರಾಜಕೀಯ ಕಾರಣಕ್ಕಾಗಿ ಅನಾರೋಗ್ಯಕರ ಚರ್ಚೆ ಮುಂದುವರಿಯುವುದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸು ತ್ತದೆ.

(ಆಧಾರ: ಭಾರತ ಸಂವಿಧಾನ ರಚನಾ ಸಭೆಯ
ಚರ್ಚೆಗಳು ೪ ನವೆಂಬರ್ ೧೯೪೮;
ಪುಟ ಸಂಖ್ಯೆ ೫೯, ೬೦, ೬೧. ಸಂಪುಟ: ೩)
(ಲೇಖಕರು ಸಂವಿಧಾನತಜ್ಞರು)