Sunday, 15th December 2024

ಇಂಡಿಯದಲ್ಲೀಗ ಟಿಕೆಟ್ ಹಂಚಿಕೆಯೇ ಸವಾಲು

ಅಶ್ವತ್ಥಕಟ್ಟೆ

ranjith.hoskere@gmail.com

ಮತ್ತೊಂದು ಲೋಕಸಭಾ ಚುನಾವಣೆಗೆ ಇಡೀ ರಾಷ್ಟ್ರ ಸಜ್ಜಾಗುತ್ತಿದೆ. ಎರಡು ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಮೋದಿ ನೇತೃತ್ವದ ಬಿಜೆಪಿಯಲ್ಲಿ, ಮೂರನೇ ಬಾರಿಯೂ ನರೇಂದ್ರ ಮೋದಿ ಅವರನ್ನು ಪ್ರಧಾನಿ ಪಟ್ಟಕ್ಕೆ ಏರಿಸಲು ಸಿದ್ಧತೆ ನಡೆಸಿದ್ದಾರೆ. ಈ ಗೆಲುವಿನ ಓಟಕ್ಕೆ ತಡೆಯೊಡ್ಡಲು ಏಕಾಂಗಿಯಾಗಿ ಹೋರಾಡಿದರೆ ಉಳಿಗಾಲವಿಲ್ಲ ಎನ್ನುವ ಅನಿವಾರ್ಯತೆ ಸಜ್ಜಾಗಿರುವ ‘ಇಂಡಿಯ’ ಕೂಟದಲ್ಲಿ ಸಣ್ಣಗೆ ಶುರುವಾದ ಅಸಮಾಧಾನದ ಕಿಡಿ ಇದೀಗ,
ನಿರೀಕ್ಷೆಯಂತೆ ಜ್ವಾಲೆಯಾಗುವ ಹಂತಕ್ಕೆ ಬಂದು ನಿಂತಿದೆ.

ಮೋದಿ ಸೋಲು ಕಾಣಬೇಕೆಂಬ ಕಾರಣಕ್ಕೆ ಒಂದಾದ ಮೈತ್ರಿ ಪಕ್ಷಗಳಲ್ಲಿನ ಹಲವು ಪಕ್ಷಗಳು ಈಗಾಗಲೇ ‘ಮೈತ್ರಿಕೂಟವಿದ್ದರೆ ಒಳ್ಳೆಯದ್ದು. ಹೋದರೆ ಇನ್ನು ಒಳ್ಳೆಯದು’ ಎನ್ನುವ ಸ್ಥಿತಿಗೆ ತಲುಪಿವೆ. ಬಿಜೆಪಿಯನ್ನು ಬಗ್ಗುಬಡಿಯಬೇಕು ಎನ್ನುವ ಏಕಮಾತ್ರ ಉದ್ದೇಶದಿಂದ ಸಿದ್ಧಾಂತ, ಮನಸ್ತಾಪ, ಭಿನ್ನಾಭಿಪ್ರಾಯವೆಲ್ಲ ವನ್ನು ಬದಿಗೊತ್ತಿ ಇಂಡಿಯ ಎನ್ನುವ ಹೆಸರಲ್ಲಿ ಒಂದಾದ ದಿನವೇ, ಈ ಮೈತ್ರಿಕೂಟದ ಅಸ್ತಿತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ೩೬ಕ್ಕೂ ಹೆಚ್ಚು ಪಕ್ಷಗಳು ಒಂದಾಗಿ ಮೋದಿ ನಾಯಕತ್ವದ ಎನ್‌ಡಿಎ ಸೋಲಿನ ರುಚಿ ತೋರಿಸಬೇಕು ಎನ್ನುವ ಉದ್ದೇಶ ಹೊಂದಿರುವ ಇಂಡಿಯ ಕೂಟದ ನಾಯಕನ್ಯಾರು ಎನ್ನುವ ಪ್ರಶ್ನೆ ಶುರುವಾದಾಗಲೆಲ್ಲ ಮೈತ್ರಿಯ ಅಸ್ತಿತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಹಾಗೇ ನೋಡಿದರೆ, ಮೈತ್ರಿಕೂಟ ಘೋಷಣೆಯಾದ ದಿನವೇ, ಮೈತ್ರಿಪಕ್ಷದಲ್ಲಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಎದ್ದಿದ್ದವು. ಪ್ರಮುಖವಾಗಿ ಟಿಕೆಟ್ ಹಂಚಿಕೆ ಹಾಗೂ ನಾಯಕತ್ವದಲ್ಲಿಯೇ ಭಿನ್ನಮತ ಎದುರಾಗಲಿದೆ ಎನ್ನುವ ಮಾತುಗಳನ್ನು ಬಹುತೇಕರು ಹೇಳಿದ್ದರು. ಏಕೆಂದರೆ, ಮೈತ್ರಿಕೂಟದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದರೂ, ಬೆರಳೆಣಿಕೆಯ ರಾಜ್ಯಗಳನ್ನು ಬಿಟ್ಟು ಇನ್ನುಳಿದ ರಾಜ್ಯಗಳಲ್ಲಿ ಹಿಡಿತ ಉಳಿಸಿಕೊಂಡಿಲ್ಲ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್
ಎದುರಿಸಿದ ೨೦೧೪ ಹಾಗೂ ೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿಕೂಟ ವನ್ನು ಮುಂದುವರೆಸಿಕೊಂಡು ಹೋಗಲು, ಅದರಲ್ಲಿಯೂ ರಾಹುಲ್ ಗಾಂಧಿ ನಾಯಕತ್ವಕ್ಕೆ ಬಹುತೇಕ ಮೈತ್ರಿಪಕ್ಷಗಳು ಒಪ್ಪುವುದಿಲ್ಲ ಎನ್ನುವುದು ಸ್ಪಷ್ಟ.

ಹಾಗೆಂದು, ಮೈತ್ರಿಕೂಟದ ನಾಯಕತ್ವವನ್ನು ಬಿಟ್ಟುಕೊಟ್ಟರೆ ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಮರೆಯಬೇಕಾದ ಸನ್ನಿವೇಶ. ಈ ಬಗ್ಗೆ ರಾಜಕೀಯ ವಿಶ್ಲೇಷಕರು ಹೇಳಿದಾಗಲೆಲ್ಲ, ಬಹುತೇಕ ನಾಯಕರು ‘ಅಧಿಕಾರಕ್ಕಿಂತ, ಉದ್ದೇಶ ಮುಖ್ಯ’ ಎನ್ನುವ ಮಾರುದ್ದದ ಭಾಷಣವನ್ನು ಮಾಡಿದ್ದರು. ಇದೀಗ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ನಿರೀಕ್ಷೆಯಂತೆ ಇಂಡಿಯ ಕೂಟದ ನಾಯಕತ್ವವನ್ನು ರಾಹುಲ್ ಗಾಂಧಿಗೆ ನೀಡಲು ಬಹುತೇಕರು ವಿರೋಧಿಸಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲು ಒಪ್ಪಿದ್ದರು. ಆದರೆ ಪ್ರಧಾನ ಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ನಿತೀಶ್ ಕುಮಾರ್ ಇದ್ದಕ್ಕೆ ವಿರೋಧಿಸಿದ್ದರಿಂದ ಸದ್ಯಕ್ಕೆ ಇದರ ಸಹವಾಸವೇ ಬೇಡ ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಸೇರಿದಂತೆ ಬಹುತೇಕ ಮೈತ್ರಿಪಕ್ಷಗಳು ತೀರ್ಮಾನಿಸಿದಂತಿದೆ.

ನಾಯಕತ್ವದ ವಿಷಯದಲ್ಲಿ ಹೆಚ್ಚು ಚರ್ಚೆ ಬೇಡ ಎನ್ನುವ ತೀರ್ಮಾನದಿಂದ ಬಹುತೇಕ ಸಮಸ್ಯೆ ಇತ್ಯರ್ಥವಾಯಿತು ಎನ್ನುವ ಲೆಕ್ಕಾಚಾರದಲ್ಲಿದ್ದ ಇಂಡಿಯ ಕೂಟಕ್ಕೆ ಇದೀಗ ಟಿಕೆಟ್ ಹಂಚಿಕೆ ಬಹುದೊಡ್ಡ ತಲೆಬಿಸಿಯಾಗಿದೆ. ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ಗೆ ಎಷ್ಟು ಸೀಟು ಬಿಟ್ಟುಡಬೇಕು ಎನ್ನುವುದು ಮೈತ್ರಿ ಪಕ್ಷಗಳ ಬಹುದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಇಂಡಿಯ ಕೂಟದಲ್ಲಿರುವ ಹಲವು ಪಕ್ಷಗಳು ಸ್ಥಳೀಯವಾಗಿ ಉತ್ತಮ ಹಿಡಿತ ಹೊಂದಿವೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ, ಕೇರಳದಲ್ಲಿ ಕಮ್ಯೂನಿಸ್ಟ್, ತಮಿಳುನಾಡಿನಲ್ಲಿ ಡಿಎಂಕೆ
ಪಕ್ಷ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೂ, ಸಾಂಪ್ರದಾಯಿಕ ಕ್ಷೇತ್ರಗಳನ್ನು ಗೆದ್ದುಕೊಂಡು ಬರುವ ವಿಶ್ವಾಸವಿದೆ.

ಹಾಗೇ ನೋಡಿದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಸ್ಪಽಸಿ ೪೭ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದ್ದರೆ, ತಮಿಳುನಾಡು ಒಂದರಲ್ಲಿಯೇ ೨೪ ಕ್ಷೇತ್ರವನ್ನು ಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ೨೩ ಕ್ಷೇತ್ರವನ್ನು ತೃಣಮೂಲ ಕಾಂಗ್ರೆಸ್, ಬಿಹಾರದಲ್ಲಿ ೧೬ ಸ್ಥಾನವನ್ನು ಜೆಡಿಯು ಗೆದ್ದುಕೊಂಡಿದೆ. ಹೀಗಿರು ವಾಗ ಗೆಲ್ಲುವ ಕ್ಷೇತ್ರಗಳನ್ನು ಮೈತ್ರಿ ಕಾರಣಕ್ಕೆ ಕಾಂಗ್ರೆಸ್‌ಗೆ ಬಿಟ್ಟುಕೊಡುವ ಅವಶ್ಯಕತೆ ಏನಿದೆ ಎನ್ನುವುದು ಬಹುತೇಕ ಪ್ರಾದೇಶಿಕ ಪಕ್ಷಗಳ ಪ್ರಶ್ನೆಯಾಗಿದೆ. ಅದರಲ್ಲಿಯೂ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನೆಲಕಚ್ಚಿರುವ ರೀತಿಯನ್ನು ಗಮನಿಸಿದರೆ ಕಾಂಗ್ರೆಸ್‌ಗೆ ಟಿಕೆಟ್  ಕೊಟ್ಟರೆ ಇರುವ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಆತಂಕ ಹಲವರಲ್ಲಿದೆ. ಆದ್ದರಿಂದ ಉತ್ತಮ ಸಂಘಟನೆ ಹೊಂದಿರುವ ಬಹುತೇಕ ಪ್ರಾದೇಶಿಕ ಪಕ್ಷಗಳು, ತಮ್ಮ ತಮ್ಮ ರಾಜ್ಯದಲ್ಲಿ ಒಂದರಿಂದ ಐದು ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಒಪ್ಪಿವೆ.

ಈ ಒಪ್ಪಿಗೆಯೂ ಒಲ್ಲದ ಮನಸ್ಸಿನಿಂದಲೇ ಆಗಿದೆ ಎನ್ನುವುದು ಬೇರೆ ಮಾತು. ವರ್ಷದಿಂದ ವರ್ಷಕ್ಕೆ ಶೇಕಡವಾರು ಮತಗಳಿಕೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ನೇರವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಂತೆ ಎನ್ನುವುದು ಹಲವು ನಾಯಕರ ಅಭಿಪ್ರಾಯವಾಗಿದೆ. ಈ ವಾದವನ್ನು ಕಾಂಗ್ರೆಸ್ ಒಪ್ಪುವ ಸ್ಥಿತಿಯಲ್ಲಿಲ್ಲವಾ ದರೂ ಮೈತ್ರಿಯಿಂದ ಹೊರಬಂದು ಸ್ವಾತಂತ್ರ್ಯವಾಗಿ ಸ್ಪರ್ಧಿಸುವ ಶಕ್ತಿಯನ್ನೇ ಹಲವು ರಾಜ್ಯದಲ್ಲಿ ಕಾಂಗ್ರೆಸ್
ಕಳೆದುಕೊಂಡಿದೆ! ಹಾಗೇ ನೋಡಿದರೆ ೨೮ ರಾಜ್ಯ ಹಾಗೂ ಎಂಟು ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವನ್ನು ಹೊಂದಿರುವ ರಾಜ್ಯಗಳು ಕೆಲವೇ ಕೆಲವು. ಅದರಲ್ಲಿಯೂ ಸೀಟು ಹಂಚಿಕೆಯಲ್ಲಿ ಅಗ್ರಸ್ಥಾನ ಅಥವಾ ಸ್ವಾತಂತ್ರ್ಯ ತೀರ್ಮಾನ ಕೈಗೊಳ್ಳಬಹುದಾದ ರಾಜ್ಯಗಳ ಪಟ್ಟಿ ಆರನ್ನು
ದಾಟುವುದಿಲ್ಲ ಎನ್ನುವುದು ಸ್ಪಷ್ಟ.

ಕಾಂಗ್ರೆಸ್‌ಗೆ ಪೂರಕ ವಾತಾವರಣವಿರುವ ಕರ್ನಾಟಕ, ರಾಜಸ್ಥಾನ, ಆಂಧ್ರಪದೇಶ, ತೆಲಂಗಾಣದಲ್ಲಿ ಕಾಂಗ್ರೆಸ್ ಸೀಟುಗಳನ್ನು ಕಿತ್ತುಕೊಳ್ಳುವ ಬಲಿಷ್ಠ ಮೈತ್ರಿ ಪಕ್ಷಗಳಿಲ್ಲ. ಆದರೆ ಇನ್ನುಳಿದಂತೆ ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಪ್ರಾದೇಶಿಕ ಪಕ್ಷವೇ ಬಲಿಷ್ಠವಾಗಿವೆ. ಆದ್ದರಿಂದ ಕಾಂಗ್ರೆಸ್ ಕೇಳಿದಷ್ಟು ಸೀಟು ಕೊಡುವುದಕ್ಕಿಂತ, ಅವರು ಕೊಟ್ಟಷ್ಟು ಸೀಟನ್ನು ಪಡೆಯುವ ಅನಿವಾರ್ಯತೆಗೆ ಕಾಂಗ್ರೆಸ್ ಸಿಲಿಕಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಕೊಂಚ ಪೂರಕ ವಾತಾವರಣವಿದೆ. ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸಹಜವಾಗಿಯೇ ಈ ಎರಡೂ ರಾಜ್ಯಗಳಲ್ಲಿ ಅತಿಹೆಚ್ಚು ಕ್ಷೇತ್ರಗಳನ್ನು
ಪಡೆಯಲು ಯೋಜಿಸುತ್ತಿದೆ.

ಇನ್ನುಳಿದಂತೆ ಮಹಾರಾಷ್ಟ್ರಲ್ಲಿ ಶಿವಸೇನೆ ಹಾಗೂ ಎನ್‌ಸಿಪಿ ಯಾರಿಗೆ ಸೇರಿದ್ದು ಎನ್ನುವ ಪ್ರಶ್ನೆಯಿರುವುದರಿಂದ ಕೊಂಚ ಹೆಚ್ಚುಕಮ್ಮಿಯಾದರೂ ಕಾಂಗ್ರೆಸ್ ಆಟವಾಡಬಹುದು. ಆದರೆ ತಮಿಳುನಾಡು ಹಾಗೂ ಕೇರಳದಲ್ಲಿ ಡಿಎಂಕೆ ಹಾಗೂ ಕಮ್ಯೂನಿಸ್ಟ್ ಪಕ್ಷ ಗಟ್ಟಿಯಾಗಿರುವುದರಿಂದ ಗೆಲ್ಲುವ ಸೀಟನ್ನು ಕಾಂಗ್ರೆಸ್
ಬಿಟ್ಟುಕೊಡಲು ಸ್ಥಳೀಯ ನಾಯಕರು ವಿರೋಧಿಸುವ ಸಾಧ್ಯತೆಯಿದೆ. ಒಂದು ವೇಳೆ ಬಿಟ್ಟುಕೊಟ್ಟರೂ ಆ ಸಂಖ್ಯೆ ಐದನ್ನು ದಾಟುವುದಿಲ್ಲ ಎನ್ನುವುದು ಸ್ಪಷ್ಟ.
ತಮಿಳುನಾಡು, ಕೇರಳದ ಪರಿಸ್ಥಿತಿಯೇ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ, ಜಮ್ಮು ಕಾಶ್ಮೀರ, ಪಂಜಾಬ್‌ನಲ್ಲಿಯೂ ಇದೆ. ಈ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವ ಪರಿಸ್ಥಿತಿಯಿಲ್ಲದಿದ್ದರೂ, ಸ್ಪರ್ಧಿಸುವ ಅನಿವಾರ್ಯತೆಯಿದೆ.

ಒಂದು ವೇಳೆ ಈ ಚುನಾವಣೆಯಲ್ಲಿ ಮೈತ್ರಿಪಕ್ಷಗಳಿಗೆ ಸೀಟು ಬಿಟ್ಟುಕೊಟ್ಟರೆ ಈ ರಾಜ್ಯಗಳಲ್ಲಿ ಅಳಿದು ಉಳಿದಿರುವ ಸಂಘಟನೆಯೂ ಸಂಪೂರ್ಣ ನೆಲಕಚ್ಚಿ
ಹೋಗಲಿದೆ. ಆದರೆ ‘ಇಂತಿಷ್ಟೇ ಸೀಟು ಕೊಡಬೇಕು’ ಎಂದು ಅಧಿಕಾರಯುತವಾಗಿ ಕೇಳುವ ಸ್ಥಾನದಲ್ಲಿ ಕಾಂಗ್ರೆಸ್ ಮಾನಸಿಕವಾಗಿ ಉಳಿದಿಲ್ಲವಾದ್ದರಿಂದ ಇಂಡಿಯ ಮೈತ್ರಿಕೂಟದ ಸಭೆಯಲ್ಲಿ ಯಾವ ರೀತಿಯಲ್ಲಿ ನಾಯಕರನ್ನು ‘ಒಪ್ಪಿಸುತ್ತಾರೆ’ ಎನ್ನುವುದೇ ಈಗಿರುವ ಬಹುದೊಡ್ಡ ಪ್ರಶ್ನೆ. ಈ ಎಲ್ಲದರ ನಡುವೆ ಕಾಂಗ್ರೆಸ್‌ಗಿರುವ ಬಹುದೊಡ್ಡ ಆತಂಕವೆಂದರೆ ಇಂಡಿಯ ಮೈತ್ರಿಕೂಟದಲ್ಲಿರುವ ಕೆಲವು ಪಕ್ಷಗಳು, ತಮ್ಮ ಮಾತು ನಡೆಯದಿದ್ದರೆ ಬಿಜೆಪಿಯ ಎನ್ ಡಿಎಗೆ ಹಾರುವ ಮಾತುಗಳನ್ನು ಗಾಳಿಯಲ್ಲಿ ತೇಲಿಬಿಡುತ್ತಿವೆ.

ಅದರಲ್ಲಿಯೂ, ಬಿಜೆಪಿಯೊಂದಿಗೆ ದಶಕಗಳ ಕಾಲ ‘ಆತ್ಮೀಯ’ವಾಗಿದ್ದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ, ಮತ್ತೆ ಬಿಜೆಪಿಯತ್ತ ವಾಲಲು ವೇದಿಕೆಗೆ ಸಿದ್ಧಪಡಿಸಿಕೊಳ್ಳುತ್ತಿದೆ. ಇದರ ಭಾಗವಾಗಿ ಪ್ರಮುಖವಾಗಿ ಯಾರ ಕಾರಣಕ್ಕೆ ಬಿಜೆಪಿಯೊಂದಿಗಿನ ಮೈತ್ರಿಯನ್ನು ಜೆಡಿಯು ಕಡೆದುಕೊಂಡಿತ್ತೋ, ಅವರಿಗೆಲ್ಲ ಈಗಾಗಲೇ ಗೇಟ್ ಪಾಸ್ ನೀಡಲಾಗಿದೆ. ಒಂದು ವೇಳೆ ಕಾಂಗ್ರೆಸ್ ತಾನು ಹೇಳಿದಂತೆ ಕೇಳದಿದ್ದರೆ ಮತ್ತೆ ಹಳೇ ಸಖ್ಯವನ್ನು ಅರಸಿ ಹೋದರು ಅಚ್ಚರಿಪಡ ಬೇಕಿಲ್ಲ. ಈ ಎಲ್ಲ ಗೊಂದಲ-ಗೋಜಲುಗಳ ನಡುವೆ ಕಾಂಗ್ರೆಸ್‌ಗೆ ಆಶಾದೀಪವಾಗಿರುವ ಏಕೈಕ ರಾಜ್ಯವೆಂದರೆ ಕರ್ನಾಟಕ. ಇಲ್ಲಿರುವ ೨೮ ಕ್ಷೇತ್ರಗಳಲ್ಲಿ ಯಾರಿಗೂ ಸೀಟು ಬಿಟ್ಟುಕೊಡಬೇಕು ಎನ್ನುವ ಅಗತ್ಯವಿಲ್ಲ.

ಏಳು ತಿಂಗಳ ಹಿಂದಷ್ಟೇ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ  ಅಭೂತಪೂರ್ವ ಜಯಗಳಿಸಿರುವ ಕಾರಣಕ್ಕೆ ಈ ಬಾರಿ ೨೮ ಕ್ಷೇತ್ರಗಳಲ್ಲಿ ಕನಿಷ್ಠ ೧೫ನ್ನು ಗೆಲ್ಲಬೇಕು ಎನ್ನುವ ಟಾರ್ಗೆಟ್ ಅನ್ನು ರಾಜ್ಯ ನಾಯಕರಿಗೆ ಪಕ್ಷದ ವರಿಷ್ಠರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ
ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ನಾಯಕತ್ವದಲ್ಲಿ ೧೫ ಕ್ಷೇತ್ರವನ್ನು ಗೆಲ್ಲದಿದ್ದರೂ, ಪ್ರತಿಷ್ಠೆ ಉಳಿಸಿಕೊಳ್ಳುವಷ್ಟು ಸೀಟುಗಳನ್ನು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಈ ನಡುವೆ ಬಿಜೆಪಿಯ ಅಶ್ವಮೇಧವನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ತಾನೇ ರಚಿಸಿದ ‘ಇಂಡಿಯ’ವೇ ಕಾಂಗ್ರೆಸ್‌ಗೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ಆಸಕ್ತಿ ತೋರುತ್ತಿದ್ದ ಪಕ್ಷಗಳೆಲ್ಲ ಈಗ ತಾನು ಹೇಳಿದಂತೆ ಕಾಂಗ್ರೆಸ್ ಕೇಳಬೇಕು ಎನ್ನುವ ಮನಸ್ಥಿತಿಯಲ್ಲಿವೆ. ಕಾಂಗ್ರೆಸ್
ಕೊಟ್ಟಷ್ಟು ಸೀಟುಗಳನ್ನು ಪಡೆದು, ಕಾಂಗ್ರೆಸ್‌ನೊಂದಿಗೆ ಇದ್ದರೆ ಸಾಕೆಂಬ ಭಾವನೆ ಹೋಗಿ ಇದೀಗ ಮೈತ್ರಿಗೆ ಕಾಂಗ್ರೆಸ್ ನಾಯಕರೇ ಆಸಕ್ತಿ ತೋರುವ ಸ್ಥಿತಿ ನಿರ್ಮಾಣವಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ‘ಶಕ್ತಿ’ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ೨೦೨೪ ಲೋಕಸಭಾ ಚುನಾವಣೆ ‘ಮಾಡು ಇಲ್ಲವೇ ಮಡಿ’ ಎನ್ನುವಂತಾಗಿದೆ. ಬಿಜೆಪಿ ಯನ್ನು ಕಡೆವಲು ಸಿದ್ಧಪಡಿಸಿದ ‘ಇಂಡಿಯ’ ಎನ್ನುವ ಅಸ ಬಿಜೆಪಿ ಬದಲಿಗೆ ಕಾಂಗ್ರೆಸ್‌ಗೆ ತಿರುಗು ಬಾಣವಾಗುತ್ತಿರುವುದು ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣ ವಾಗಿದೆ. ಚುನಾವಣೆಗೆ ಬಾಕಿಯಿರುವ ನಾಲ್ಕೈದು ತಿಂಗಳಲ್ಲಿ ಏನೆಲ್ಲ ಆಗಲಿದೆ? ಎಷ್ಟು ಪಕ್ಷಗಳು ಕೊನೆಯವರೆಗೆ ಮೈತ್ರಿಕೂಟದಲ್ಲಿಯೇ ಮುಂದುವರಿ ಯಲಿವೆ ಎನ್ನುವುದನ್ನು ಕಾಲವೇ ತೀರ್ಮಾನಿಸಲಿದೆ.