Saturday, 14th December 2024

ಬೇಕಿರುವುದು ಮತಾಂತರ ಗದ್ದಲವಷ್ಟೇ !

Suvarna Soudha

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ವಿಧೇಯಕದ ವಿಷಯದಲ್ಲಿ ಕಾಂಗ್ರೆಸ್-ಬಿಜೆಪಿ ಎರಡರ ಉದ್ದೇಶವೂ ಒಂದೇ. ವಿರೋಧಿಸಿ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವುದು ಕಾಂಗ್ರೆಸ್ ಲೆಕ್ಕಾಚಾರ. ವಿರೋಧದ ನಡುವೆಯೂ ವಿಧೇಯಕ ಮಂಡಿಸಿದ್ದೇವೆಂದು ಹೇಳುವುದು ಬಿಜೆಪಿ ಲೆಕ್ಕಾಚಾರ.

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾದ ದಿನದಿಂದಲೂ, ಬಹುತೇಕರ ನಿರೀಕ್ಷೆಯಿರುವುದು ಒಂದೇ ವಿಧೇಯಕದ ಮೇಲೆ. ಆ ವಿಷಯದಲ್ಲಿ ಪರ-ವಿರೋಧ ಚರ್ಚೆಗಳು ಎಷ್ಟೇ ಇದ್ದರೂ, ವಿಧೇಯಕ ಮಂಡಿಸಿದರೆ ಅಧಿವೇಶನ ಮುಗಿಯಿತು ಎನ್ನುವ ಮಾತುಗಳಿವೆ. ಅದು ಮಹತ್ವದ ಮತಾಂತರ ನಿಷೇಧ ವಿಧೇಯಕ.

ಹೌದು, ಮತಾಂತರ ನಿಷೇಧಕ್ಕೆ ನಿಮ್ಮ ಒಪ್ಪಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ವಿಧೇಯಕವನ್ನು ಒಪ್ಪಬೇಕೋ ಬಿಡಬೇಕೋ ಎನ್ನುವುದು ಎರಡನೇ ಮಾತು. ಆದರೆ ಬಿಜೆಪಿ- ಕಾಂಗ್ರೆಸ್ ನಾಯಕರು ಕಳೆದೊಂದು ತಿಂಗಳಲ್ಲಿ ವಾಕ್ಸಮರಕ್ಕೆ ಬೇಸ್ ಮಾಡಿಕೊಂಡ ವಿಷಯವಂತೂ ಇದೇ. ವಿಧೇಯಕವನ್ನು ಮಂಗಳವಾರ ಮಂಡಿಸಲು ಸರಕಾರ ಯೋಚಿಸಿದೆ. ಆದರೆ ಇದು ಅನುಮೋದನೆ ಪಡೆಯಲಿದೆಯೇ ಅಥವಾ ಚರ್ಚೆ, ಗದ್ದಲ, ಗಲಾಟೆ ಸೀಮಿತವಾಗುವುದೇ ಎನ್ನುವ ಪ್ರಶ್ನೆಯಂತೂ ಇದ್ದೇ ಇದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಕ್ಕೂ ಬೇಕಿರುವುದು ಮತಾಂತರ ನಿಷೇಧದ ಬಗ್ಗೆ ಚರ್ಚೆಯೇ ಹೊರತು, ಕಾಯಿದೆಯಲ್ಲ.

ಮತಾಂತರ ನಿಷೇಧ ಕಾಯಿದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಬೇಕು ಎನ್ನುವ ಮಾತು ಕೇಳಿಬಂದಿದ್ದು ಸಹ ಕಳೆದ ಅಧಿವೇಶನದಲ್ಲಿ. ಸ್ವತಃ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ತಾಯಿಯನ್ನೇ ಮತಾಂತರ ಗೊಳಿಸಲಾಗಿದೆ ಎಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ಆ ಹಂತದಲ್ಲಿ ಬಲವಂತದ ಮತಾಂತರ ವನ್ನು ಸರ್ವಪಕ್ಷಗಳೂ ಖಂಡಿಸಿದವು.

ಕೆ.ಜೆ.ಜಾರ್ಜ್ ಅವರು ಸಹ ಬಲವಂತದ ಮತಾಂತರ ಮಾಡಿದ ಚರ್ಚ್‌ನ ವಿರುದ್ಧ ಕ್ರಮ ಕೈಗೊಳ್ಳಿ (ಆ ಚರ್ಚ್ ಮೇಲೆ, ಉಳಿದವುಗಳ ಮೇಲಲ್ಲ) ಎನ್ನುವ ಮಾತನ್ನು ಹೇಳಿದರು. ಇದಾದ ಬಳಿಕವೇ, ಮತಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು.

ಇದಾದ ಒಂದೆರಡು ದಿನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಿ ಎನ್ನುವ ಸಲಹೆ ನೀಡಿದರು. ಇದಾದ ಬಳಿಕ ಅವರ ಟ್ವೀಟ್‌ಗೆ ಅನುಮೋದನೆ ನೀಡುವ ರೀತಿಯಲ್ಲಿ, ಹಲವು ಬಿಜೆಪಿಯ ನಾಯಕರು ಹೇಳಿಕೆ ನೀಡಲು ಆರಂಭಿಸಿ, ಕೊನೆಗೆ ಸಿಎಂ ಬೊಮ್ಮಾಯಿ ಅವರು ಮತಾಂತರ ನಿಷೇಧ ಕಾಯಿದೆ ಜಾರಿ ಮಾಡುವುದಾಗಿ ಹೇಳಿದರು. ಇದಾಗುತ್ತಿದ್ದಂತೆ ಶುರುವಾದ ಪರ-ವಿರೋಧ ಚರ್ಚೆಗಳು ಇಲ್ಲಿಯ ತನಕ ಬಂದು ನಿಂತಿದೆ. ಆದರೆ ಈ ಕಾಯಿದೆಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಿದರೆ, ಬಿಜೆಪಿಗೆ ಈ ವಿಧೇಯಕ ಜಾರಿಯಾಗುವುದಕ್ಕಿಂತ ಹೆಚ್ಚಾಗಿ ‘ನಮ್ಮ ಸರಕಾರ ವಿಧೇಯಕ ಮಂಡಿಸಿತ್ತು’ ಎಂದು ಹೇಳಿಕೊಳ್ಳಬೇಕಿದೆ ಹಾಗೂ ಕಾಂಗ್ರೆಸ್‌ನವರಿಗೆ ನಾವು ವಿಧೇಯಕ ವಿರೋಧಿಸಿದೆವು ಎಂದು ಹೇಳಿಕೊಳ್ಳಬೇಕಾಗಿದೆ.

ಹಾಗೇ ನೋಡಿದರೆ ಬಿಜೆಪಿ ಸರಕಾರ ಸಿದ್ಧತೆ ನಡೆಸಿ ಕೊಂಡಿರುವ ಈ ಮತಾಂತರ ನಿಷೇಧ ವಿಧೇ ಯಕದಲ್ಲಿ ಹೊಸದಾಗಿ ಏನೂ ಇಲ್ಲ. ಮತಾಂತರದ ಬಗ್ಗೆ ಸುದ್ದಿಯಾದಾಗಲೆಲ್ಲ, ಈ ರೀತಿಯ ವಿಧೇಯಕ ಮಂಡನೆ ಮಾಡಲಾಗುವುದು ಎನ್ನುವ ಭರವಸೆಯನ್ನು ನೀಡಲಾಗುತ್ತಿತ್ತು. ಬಿಜೆಪಿ ಸರಕಾರ ಅಧಿಕಾರದಲ್ಲಿರುವ ಕೆಲ ರಾಜ್ಯಗಳಲ್ಲಿ ಈಗಾಗಲೇ ಇದು ಜಾರಿಯಾಗಿದೆ. ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಗುಜರಾತ್, ಒಡಿಶಾ, ಹಿಮಾಚಲಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ಉತ್ತರಾಖಂಡ್‌ನಲ್ಲಿ ಈಗಾಗಲೇ ಕಾಯಿದೆ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ವಿಧೇಯಕ ಮಂಡಿಸುವುದು ಬಿಜೆಪಿಯ ಯೋಚನೆ. ಆದರೆ ಈ ಎಲ್ಲ ರಾಜ್ಯ ಗಳಲ್ಲಿರುವ ಕಾಯಿದೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮತಾಂತರಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿರುವ ಅಂಶಗಳನ್ನೇ ಆಚೀಚೆ ಮಾಡಿ, ಮಂಡಿಸಲಾಗಿದೆ.

ಅಸಲಿಗೆ ಸಂವಿಧಾನದಲ್ಲಿ ಬಲವಂತರ ಮತಾಂತರಕ್ಕೆ ಅವಕಾಶವಿಲ್ಲ. ಆದರೆ ಸ್ವಇಚ್ಛೆಯಿಂದ ಮತಾಂತರಗೊಂಡರೆ ಅದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಯಾರೇ ಮತಾಂತರಗೊಂಡರೂ ಅದಕ್ಕೆ ಸ್ಥಳೀಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ಮಾಡಿ, ಆ ಸಮಿತಿಯ ಮುಂದೆ ಮತಾಂತರಗೊಂಡ ವ್ಯಕ್ತಿ ಯನ್ನು ಹಾಜರುಪಡಿಸಿ, ಆತ ಸ್ವಇಚ್ಛೆಯಿಂದ ಮತಾಂತರಗೊಂಡಿದ್ದಾನೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ. ಇನ್ನು ಆಮಿಷ, ಒತ್ತಡಕ್ಕೆ ಸಿಲುಕಿಸಿ ಮತಾಂತರ ಮಾಡುವಂತಿಲ್ಲ ಎನ್ನುವ ಅಂಶವನ್ನು ಸೇರಿಸಲಾಗಿದೆ.

ಆದರೆ ಇಲ್ಲಿಯವರೆಗೆ ಬಹುತೇಕ ಪ್ರಕರಣದಲ್ಲಿ ‘ಮತಾಂತರವಾಗುವುದಕ್ಕೆ ನಾನು ದುಡ್ಡು ಪಡೆದಿದ್ದೇನೆ’ ಎಂದು ಹೇಳಿರುವ ಉದಾಹರಣೆಗಳಿಲ್ಲ. ಇನ್ನು ಮತಾಂತರ ಮಾಡುವ ವ್ಯಕ್ತಿಗಳಿಗೆ ಯಾವ ರೀತಿಯ ಶಿಕ್ಷೆ, ದಂಡ ಎನ್ನುವ ಬಗ್ಗೆ ಬಿಜೆಪಿ ವಲಯದಲ್ಲಿಯೇ ಸ್ಪಷ್ಟನೆಯಿಲ್ಲ. ಆದ್ದರಿಂದ ಯಾವ ರೀತಿಯಲ್ಲಿ ಇದು ವರ್ಕ್ ಔಟ್ ಆಗುವುದು ಎನ್ನುವುದು ಯಕ್ಷಪ್ರಶ್ನೆ. ಇನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ತಾನು ಯಾವ ಧರ್ಮದಲ್ಲಿ ಇರಬೇಕು ಎನ್ನುವುದನ್ನು ನಿರ್ಧರಿಸುವುದು ಆತನ ಅಧಿಕಾರ ಎನ್ನುವ ವಾದವನ್ನು ಕಾಂಗ್ರೆಸ್ ಹೇಳುತ್ತಿದೆ. ಈ ವಾದ ಒಪ್ಪ ಬಹುದು.

ಆದರೆ ಹಣದ ಆಮಿಷ ಒಡ್ಡಿ ಮತಾಂತರ ಮಾಡುವವರ ವಿರುದ್ಧ ಕ್ರಮವಹಿಸುವುದರಲ್ಲಿ ತಪ್ಪೇನಿದೆ ಎನ್ನುವ ಮಾತಿಗೆ ಕಾಂಗ್ರೆಸ್ ಬಳಿಯೂ ಉತ್ತರವಿಲ್ಲ. ಈ ಪ್ರಶ್ನೆಗೆ ಉತ್ತರ ಹುಡುಕುವ ಗೋಜಿಗೂ ಕಾಂಗ್ರೆಸ್ ನಾಯಕರು ಹೋಗಿಲ್ಲ. ಏಕೆಂದರೆ, ಒಂದು ವೇಳೆ ಪರೋಕ್ಷವಾದರೂ ಈ ವಿಧೇಯಕಕ್ಕೆ ಅವಕಾಶ ನೀಡಿದರೆ ಅಥವಾ ವಿಧೇಯಕಕ್ಕೆ ಒಪ್ಪಿಗೆ ನೀಡುವಾಗ ಸದನದಲ್ಲಿದ್ದರೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವುದು ಖಚಿತ. ಆದ್ದರಿಂದ
ಯಾವುದೇ ಕಾರಣಕ್ಕೂ ಈ ವಿಧೇಯಕ ಮಂಡಿಸಲು ಬಿಡದ ಅಥವಾ ಮಂಡಿಸುವ ಸಮಯದಲ್ಲಿ ಇಲ್ಲದೇ ಮತಬ್ಯಾಂಕ್ ಉಳಿಸಿಕೊಳ್ಳಲು ಚಿಂತನೆ ನಡೆಸಿದೆ.

ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ, ಈ ವಿಧೇಯಕವನ್ನು ಪಾಸ್ ಮಾಡಿಕೊಳ್ಳುವುದು ದೊಡ್ಡ ವಿಷಯವಲ್ಲ. ಕಾಂಗ್ರೆಸ್ ಬಾವಿಗಿಳಿದು ಪ್ರತಿಭಟನೆ ನಡೆಸಿದರೆ ಅಥವಾ ಸದನದಿಂದ ಹೊರನಡೆದರೂ, ತಮ್ಮ ಸ್ವಂತ ಬಲದ ಮೇಲೆ ಈ ವಿಧೇಯಕಕ್ಕೆ ಅನುಮೋದನೆ ಪಡೆಯಬಹುದು. ಆದರೆ ಅಚ್ಚರಿ ಯೆಂದರೆ ಬಿಜೆಪಿಯ ಮೂಲಗಳ ಪ್ರಕಾರ, ಈ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುತ್ತಾರೆಯೇ ಹೊರತು, ಅನುಮೋದನೆ ಪಡೆಯುವುದಿಲ್ಲ ಎನ್ನಲಾಗಿದೆ.
ಏಕೆಂದರೆ, ಈಗಾಗಲೇ ಬಿಟ್ ಕಾಯಿನ್ ಹಗರಣ, ಶೇ.40 ಕಮಿಷನ್ ಆರೋಪ, ಉಪಚುನಾವಣೆ, ಮೇಲ್ಮನೆ ಚುನಾವಣೆಯ ಹಿನ್ನಡೆಯಿಂದ ಕೊಂಚ ಕಳೆ ಕಳೆದುಕೊಂಡಿರುವ ಬಿಜೆಪಿ ನಾಯಕರಿಗೆ, ‘ಮತಾಂತರ ನಿಷೇಧ’ ಹೊಸ ಉತ್ಸಾಹ ನೀಡುವ ಅಸ್ತ್ರವಾಗಿದೆ.

ಆದ್ದರಿಂದ ಮತಗಳ ಕ್ರೋಡೀಕರಣಕ್ಕೆ ಹಾಗೂ ಹಿಂದುತ್ವ ಮತಗಳ polarise ಗೆ ಇದೊಂದು ಅದ್ಭುತ ಅವಕಾಶ. ಜತೆಗೆ ಈ ಹಂತದಲ್ಲಿ ಕಾಂಗ್ರೆಸ್ ನಾಯಕರು ಈ ವಿಧೇಯಕವನ್ನು ವಿರೋಧಿಸಿ, ಮಾತನಾಡುವಾಗ ಆಗಬಹುದಾದ ಕೆಲ ‘ಎಡ’ವಟ್ಟುಗಳನ್ನು ಬಳಸಿ, ಹಿಂದೂ ವಿರೋಧಿ ಕಾಂಗ್ರೆಸ್ ಎನ್ನುವ ಹಣೆ ಪಟ್ಟಿ ಕಟ್ಟು ವುದು ಬಿಜೆಪಿ ಪ್ಲ್ಯಾನ್ ಆಗಿದೆ. ಕೇವಲ ಮಂಡಿಸಿ ಅದನ್ನು ಅನುಮೋದನೆ ಪಡೆಯದೇ ಬಾಕಿಯಿರುವ ನೂರಾರು ಬಿಲ್‌ಗಳು ಸಂಸತ್ ಎದುರೂ ಇವೆ. ರಾಜ್ಯ ದಲ್ಲಿಯೂ ಇದೆ. ಅದೇ ರೀತಿ ಈ ವಿಧೇಯಕವನ್ನೂ ಮಂಡಿಸಿ, ಬಳಿಕ ಚೆಂಡನ್ನು ಕಾಂಗ್ರೆಸ್ ಅಂಗಳಕ್ಕೆ ಬಿಟ್ಟು ಸುಮ್ಮನಾಗುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ.

ಕಾಂಗ್ರೆಸ್ ಸಹ ವಿಧೇಯಕ ವಿರೋಧಿಸುವುದಕ್ಕಿಂತ ಇದರ ನೆಪದಲ್ಲಿ ‘ತಾವು ಅಲ್ಪಸಂಖ್ಯಾತ ಹಾಗೂ ಜಾತ್ಯತೀತ ಪರ’ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸುವ ಉತ್ಸಾಹದಲ್ಲಿದೆ. ಇದರೊಂದಿಗೆ ರಾಜ್ಯದ 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಲ್ಪಸಂಖ್ಯಾತ ಮತಗಳ ಓಲೈಕೆಗೆ ಸಜ್ಜಾಗಿದೆ.
ಒಟ್ಟಾರೆ ವಿಧೇಯಕದ ಹಿಂದೆ ಎರಡೂ ರಾಷ್ಟ್ರೀಯ ಪಕ್ಷಗಳ ಅಜೆಂಡಾವೂ ಒಂದೇ. ಎರಡೂ ಪಕ್ಷದವರಿಗೂ ಮತಾಂತರ ನಿಷೇಧ ಕಾಯಿದೆಗೆ ಸಂಬಂಧಿಸಿ ಚರ್ಚೆಯಾಗಬೇಕು. ಸಾರ್ವಜನಿಕ ವಲಯದಲ್ಲಿ ಸದ್ದಾಗಬೇಕು. ಸದನದಲ್ಲಿ ತಂತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದ್ದೇವೆ ಎನ್ನುವ ಸಂದೇಶ ರವಾನೆ ಯಾಗಬೇಕು ಅಷ್ಟೇ. ಆದ್ದರಿಂದ ಯಾವ ವಿಧೇಯಕಗಳಿಗೆ ಚರ್ಚಿಸಲು ಅವಕಾಶ ಸಿಗುವುದೋ ಬಿಡುವುದೋ ಮತಾಂತರ ನಿಷೇಧ ವಿಧೇಯಕದ ಮೇಲಂತೂ ಚರ್ಚೆಗೆ ಅವಕಾಶ ಸಿಗಲಿದೆ.

ಬೆಳಗಾವಿ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ, ಅಗತ್ಯವಿದ್ದರೆ ಜನವರಿ-ಫೆಬ್ರವರಿಯಲ್ಲಿ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಅನುಮೋದನೆ ಪಡೆದು ಕೊಳ್ಳುವ ಲೆಕ್ಕಾಚಾರವೂ ನಡೆದಿದೆ. ಒಟ್ಟಾರೆ ಇಬ್ಬರಿಗೂ ಈ ವಿಷಯ ತಾರ್ತಿಕವಾಗಿ ಅಂತ್ಯ ಕಾಣುವುದು ಬೇಡವಾಗಿದೆ. ಕೇಂದ್ರದಲ್ಲಿ ಈ ಹಿಂದೆ 1954, 1960 ಹಾಗೂ 1979ರಲ್ಲಿ ವಿಧೇಯಕ ಮಂಡಿಸಿ, ಪಾಸ್ ಮಾಡಿಕೊಳ್ಳಲು ಸಾಧ್ಯವಾಗದೇ ಹಾಗೆಯೇ ಉಳಿದಿರುವಂತೆ ರಾಜ್ಯದಲ್ಲಾಗುವುದು ಬೇಡ. ಬದಲಿಗೆ, ಬಿಜೆಪಿ ನಾಯಕರಿಗೆ ನಿಜಕ್ಕೂ ಈ ಕಾಯಿದೆಯನ್ನು ಜಾರಿಗೊಳಿಸಲೇ ಬೇಕು ಎನ್ನುವುದಿದ್ದರೆ ಅದನ್ನು ಸಮರ್ಥವಾಗಿ ಮಂಡಿಸಬೇಕಿದೆ.