ವೀಕೆಂಡ್ ವಿತ್ ಮೋಹನ್
camohanbn@gmail.com
ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸಿಗರಿಗೆ, ಶ್ರೀರಾಮನಲ್ಲಿ ಗಾಂಧೀಜಿಗೆ ಇದ್ದಂಥ ಭಕ್ತಿಯಿಲ್ಲ. ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತೇವೆ ಎನ್ನುವವರು, ರಾಮನ ವಿಷಯದಲ್ಲಿ ಮಹಾತ್ಮರಿಗಿದ್ದ ಆದರ್ಶಗಳನ್ನು ಅನುಸರಿಸುವುದಿಲ್ಲ.
‘ರಘುಪತಿ ರಾಘವ ರಾಜಾರಾಂ, ಪತಿತಪಾವನ ಸೀತಾರಾಂ’ ಮಹಾತ್ಮ ಗಾಂಧಿಯವರು ನಿರಂತರವಾಗಿ ಹೇಳುತ್ತಿದ್ದ ಮಾತುಗಳಿವು. ಗಾಂಧಿಯವರ ಜೀವನ ದಲ್ಲಿ ಪ್ರಭು ಶ್ರೀರಾಮ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ್ದ. ಗಾಂಧೀಜಿ ಬಾಲ್ಯದಿಂದಲೂ ಶ್ರೀರಾಮನನ್ನು ಆರಾಧಿಸುತ್ತಿದ್ದರು. ಮಗುವಾಗಿದ್ದಾಗ ಅವರ ಆರೈಕೆ ಮಾಡುತ್ತಿದ್ದವರು, ಅವರಿಗೆ ಭಯ ಅಥವಾ ದುಃಖವಾದಾಗಲೆಲ್ಲಾ ರಾಮನಾಮ ಜಪವನ್ನು ಪುನರಾವರ್ತಿಸಲು ಕಲಿಸಿದ್ದರು. ‘ರಾಮನಾಮವು ದಿನದ ೨೪ ಗಂಟೆಯೂ ನನ್ನ ತುಟಿಗಳಲ್ಲಿ ಇಲ್ಲದಿದ್ದರೂ ನನ್ನ ಹೃದಯದಲ್ಲಿದೆ ಎಂದು ಹೇಳುತ್ತೇನೆ’ ಎಂದಿದ್ದರು ಮಹಾತ್ಮ ಗಾಂಧಿ.
ಮಹಾಭಾರತ ಮತ್ತು ವಾಲ್ಮೀಕಿಯ ರಾಮಾಯಣದಲ್ಲಿ ಸಿಗದ ವಿಷಯಗಳು, ತುಳಸೀದಾಸರ ರಾಮಾಯಣದಲ್ಲಿವೆಯೆಂದು ಹೇಳುತ್ತಿದ್ದ ಗಾಂಧೀಜಿ, ‘ಸತ್ಯವು ದೇವರ ಅತ್ಯುನ್ನತ ಗುಣವೆಂದು ನನ್ನ ಹೃದಯವು ಬಹಳ ಹಿಂದೆಯೇ ಅರಿತುಕೊಂಡಿದ್ದರೂ, ನಾನು ಆ ಸತ್ಯವನ್ನು ಶ್ರೀರಾಮನ ಹೆಸರಿನಿಂದ ಗುರುತಿಸುತ್ತೇನೆ; ನನ್ನ ಬದುಕಿನ ಕರಾಳ ಗಳಿಗೆಗಳಲ್ಲಿ ರಾಮ ಎಂಬ ಆ ಒಂದು ಹೆಸರು ನನ್ನನ್ನು ಉಳಿಸಿದೆ, ಇಂದೂ ಉಳಿಸುತ್ತಿದೆ. ಬಾಲ್ಯದಲ್ಲಿನ ರಾಮನಾಮದ ಸಹವಾಸವೇ ಇದಕ್ಕೆ ಕಾರಣವಿರಬಹುದು ಅಥವಾ ತುಳಸೀದಾಸರ ರಾಮಾಯಣ ನನ್ನ ಮೇಲೆ ಮೂಡಿಸಿದ ಮೋಹವಿರಬಹುದು’ ಎಂದಿದ್ದರು.
ರಾಮನ ವಿಷಯದಲ್ಲಿ ಗಾಂಽಜಿಗೆ ಸ್ಪಷ್ಟತೆಯಿತ್ತು. ಬಾಲ್ಯದಿಂದಲೂ ರಾಮನಾಮವನ್ನು ಜಪಿಸುತ್ತಾ ಬಂದಿದ್ದ ಗಾಂಧಿಯವರ ಹೆಸರಿನಲ್ಲಿ ರಾಜಕೀಯ ಮಾಡುವ
ಕಾಂಗ್ರೆಸ್ ಪಕ್ಷ, ೨೦೦೭ರಲ್ಲಿ ಪ್ರಭು ಶ್ರೀರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸಿ, ‘ಆತನೊಬ್ಬ ಕಾಲ್ಪನಿಕ ವ್ಯಕ್ತಿ’ ಎಂದು ಕಪಿಲ್ ಸಿಬಲ್ ಮೂಲಕ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಜಾತ್ಯತೀತತೆಯ ಹೆಸರಿನಲ್ಲಿ ಅಂದಿನ ಕಾಲದ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದ್ದ ನೆಹರುರಿಗೆ ರಾಮನ ವಿಷಯದಲ್ಲಿ ಭಕ್ತಿ ಇರಲಿಲ್ಲ. ಕಾಂಗ್ರೆಸ್‌ನೊಳಗೆ ನೆಹರುರನ್ನು ಅನುಸರಿಸುವವರು ರಾಮನ ಅಸ್ತಿತ್ವವನ್ನು ಪ್ರಶ್ನಿಸುತ್ತಾರೆ. ನಂತರ ಅಧಿಕಾರ ವಹಿಸಿಕೊಂಡ ನೆಹರು ಕುಟುಂಬಸ್ಥರು ಅದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.
ಹಲವು ನಾಯಕರು ರಾಮನನ್ನು ಪ್ರಶ್ನಿಸದಿದ್ದರೂ, ನೆಹರು ಕುಟುಂಬದ ಸಿದ್ಧಾಂತಕ್ಕೆ ಕಟ್ಟುಬಿದ್ದು ಅಯೋಧ್ಯೆಯ ರಾಮಮಂದಿರದ ಕುರಿತಾದ ತೀರ್ಪನ್ನು ವಿರೋಧಿಸಿದ್ದರು. ನೆಹರುರ ಅಪ್ಪಟ ಅನುಯಾಯಿಯಾದ ಕಪಿಲ್ ಸಿಬಲ್, ಅಲ್ಪಸಂಖ್ಯಾತರ ಓಲೈಕೆಗೆಂದು ಹಿಂದೂವಿರೋಧಿ ಧೋರಣೆಗಳ ಪರವಾಗಿ ಸದಾ ನ್ಯಾಯಾಲಯದಲ್ಲಿ ನಿಲ್ಲುತ್ತಾರೆ. ಗಾಂಧೀಜಿ ತಮ್ಮ ಪೂರ್ವಜರ ಮನೆಯ ಪಕ್ಕದಲ್ಲಿದ್ದ ರಾಮಮಂದಿರಕ್ಕೆ ಪ್ರತಿದಿನ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ, ಬಾಲ್ಯದಲ್ಲಿ ರಾಮನ ಸ್ಮರಣೆಯು ತಮ್ಮನ್ನು ಹೇಗೆ ಪುನರುಜ್ಜೀವನಗೊಳಿಸುತ್ತಿತ್ತು ಎಂಬುದನ್ನು ಹೇಳಿದ್ದಾರೆ.
‘ಅಲ್ಲಿ ವಾಸವಾಗಿದ್ದ ನನ್ನ ರಾಮನು, ಅನೇಕ ಭಯ ಮತ್ತು ಪಾಪಗಳಿಂದ ನನ್ನನ್ನು ರಕ್ಷಿಸಿದನು. ಅದು ನನಗೆಂದಿಗೂ ಮೂಢನಂಬಿಕೆಯಾಗಿರಲಿಲ್ಲ. ದೇವಸ್ಥಾನ ದಲ್ಲಿ ದುಷ್ಕೃತ್ಯಗಳು ನಡೆದಿರಬಹುದು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅವು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಎನ್ನುವ ಮೂಲಕ ರಾಮನಾಮದ ಮಹತ್ವ ವನ್ನು ಗಾಂಧೀಜಿ ಸಾರಿದ್ದರು. ತಮ್ಮ ವಿಷಯದಲ್ಲಿ ಏನಾಗಿತ್ತೋ, ಲಕ್ಷಾಂತರ ಹಿಂದೂಗಳ ವಿಷಯದಲ್ಲೂ ಅದೇ ನಿಜವಾಗಿತ್ತೆಂಬುದನ್ನು ಮಹಾತ್ಮ ಗಾಂಽ ಹೇಳುತ್ತಾರೆ.
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಆದರೆ ಮಹಾತ್ಮ ಗಾಂಧಿಯವರ ಹೆಸರನ್ನಿಟ್ಟುಕೊಂಡು ರಾಜಕೀಯ ಮಾಡುವವರು ಇದುವರೆಗೂ ಒಮ್ಮೆಯೂ ಅಯೋಧ್ಯೆಗೆ ಭೇಟಿ ನೀಡಿಲ್ಲ. ತಾವು ಭೇಟಿ ನೀಡಿದರೆ ಮುಸಲ್ಮಾನರಿಗೆ ನೋವಾಗುತ್ತದೆಯೆಂಬ ‘ಓಲೈಕೆ ರಾಜಕೀಯ’ ಅವರಿಗೆ ಮುಖ್ಯವಾಗಿದೆ. ಗಾಂಽಜಿಗೆ ಬಾಲ್ಯದಿಂದಲೂ ಪ್ರತಿನಿತ್ಯ ರಾಮಮಂದಿರದ ನೆನಪಾಗುತ್ತಿತ್ತು. ಆದರೆ ಅವರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಮ ಮತ್ತು ಕೃಷ್ಣ ನೆನಪಾಗುತ್ತಾರೆ. ರಾಮನಾಮವನ್ನು ಹಿಂದೂಗಳು ಮಾತ್ರವಲ್ಲದೆ ಇತರ ಧರ್ಮ ದವರೂ ಜಪಿಸಿದರೆ ತಪ್ಪಿಲ್ಲವೆಂದು ಗಾಂಧಿಯವರು ಹೇಳುತ್ತಾರೆ.
‘ದೇವನೊಬ್ಬ ನಾಮ ಹಲವು’ ಎಂಬ ಸ್ಪಷ್ಟತೆ ಅವರಿಗಿತ್ತು. ‘ಇತರೆ ಧರ್ಮದವರು ದೇವರನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಬಹುದು. ಆದರೆ ಜಗತ್ತಿಗೆ
ಒಬ್ಬನೇ ದೇವರು. ದಶರಥನ ಮಗ ಮತ್ತು ಸೀತಾಮಾತೆಗೆ ಭಗವಂತನಾಗಿದ್ದ ರಾಮ ನನ್ನ ಪಾಲಿಗೆ ಹೃದಯದಲ್ಲಿ ಕೆತ್ತಲಾದ ಹೆಸರಾಗಿದೆ. ರಾಮನು ದೈಹಿಕ, ಮಾನಸಿಕ ಮತ್ತು ನೈತಿಕ ದುಃಖಗಳನ್ನು ತೆಗೆದುಹಾಕುವ ಸರ್ವಶಕ್ತ ಭಗವಂತನಾಗಿದ್ದಾನೆ. ಭಾರತವು ೭ ಲಕ್ಷ ಹಳ್ಳಿಗಳಲ್ಲಿ ವಾಸಿಸುತ್ತಿದೆ (ಆಂದಿನ ಕಾಲಘಟ್ಟ ದಲ್ಲಿ). ಚಿಕ್ಕ ಹಳ್ಳಿಗಳಲ್ಲಿ ಕೆಲವೊಮ್ಮೆ ಜನಸಂಖ್ಯೆಯು ಕೆಲವು ನೂರುಗಳನ್ನು ಮೀರುವುದಿಲ್ಲ. ಅಂಥ ಹಳ್ಳಿಗೆ ಹೋಗಿ ನೆಲೆಸಲು ನಾನು ಬಯಸುತ್ತೇನೆ. ಅದು ನಿಜವಾದ ಭಾರತ. ಈ ಜನರ ಬಳಿ ನೀವು ಹೆಚ್ಚು ವೈದ್ಯರು ಮತ್ತು ಆಸ್ಪತ್ರೆಯ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ; ಸರಳ, ನೈಸರ್ಗಿಕ
ಪರಿಹಾರಗಳು ಮತ್ತು ರಾಮನಾಮ ಅವರ ಏಕೈಕ ಭರವಸೆ’ ಎಂದಿದ್ದರು ಮಹಾತ್ಮ ಗಾಂಧಿ.
ಕರೋನ ಎರಗಿದ ಸಂದರ್ಭದಲ್ಲಿ ದೇಶದ ಮೂಲೆಮೂಲೆಗಳ ಜನರ ಮನಸ್ಸಿನಲ್ಲಿ ಆತ್ಮವಿಶ್ವಾಸ ತುಂಬಲು ಪ್ರಧಾನಿ ನರೇಂದ್ರ ಮೋದಿಯವರು ತಟ್ಟೆ ಬಾರಿಸಲು ಹೇಳಿದ್ದನ್ನು ಅಣಕಿಸುವವರು, ಆರೋಗ್ಯ ಸಮಸ್ಯೆಗಳು ಬಂದಾಗ ರಾಮನಾಮಕ್ಕಿರುವ ಜಪದ ಮಹತ್ವವನ್ನು ಮಹಾತ್ಮ ಗಾಂಧಿಯವರು ಸಾರಿ ಹೇಳಿದ್ದನ್ನು
ಮರೆಯಬಾರದು. ಕರೋನ ಎರಡನೇ ಅಲೆಯ ಸಂದರ್ಭ ದಲ್ಲಿ, ಸಂಜೆಯ ವೇಳೆ ದೀಪ ಹಚ್ಚಲು ಪ್ರಧಾನಿಯವರು ಕರೆ ಕೊಟ್ಟಾಗಲೂ ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ, ರಾಮನಾಮ ಜಪದಿಂದ ಮನಸ್ಸಿನ ಮೇಲಾಗುವ ಧನಾತ್ಮಕ ಪರಿಣಾಮಗಳಿಂದ ರೋಗಗಳೇ ವಾಸಿಯಾಗುತ್ತವೆ ಎಂಬುದನ್ನು ಮಹಾತ್ಮ ಗಾಂಧಿಯವರು ಸ್ವತಃ ನಂಬಿದ್ದರು.
ಸೋಮನಾಥ ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರಿಗೆ ಆಹ್ವಾನ ನೀಡಲಾಗಿತ್ತು. ಆಗ ಪ್ರಧಾನಿ ಯಾಗಿದ್ದ ನೆಹರು ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು, ಮಂದಿರದ ಉದ್ಘಾಟನೆಗೆ ಹೋಗಬಾರದೆಂದು ಹೇಳಿದ್ದರು. ಆದರೆ ನೆಹರುರ ಮಾತನ್ನು ಪರಿಗಣಿಸದ ಬಾಬು ರಾಜೇಂದ್ರ ಪ್ರಸಾದರು, ಮಂದಿರದ ಉದ್ಘಾಟನೆಗೆ ಹೋಗಿದ್ದರು. ದಾಳಿಕೋರ ಮೊಹಮ್ಮದ್ ಘಜ್ನಿ ನಾಶಪಡಿಸಿದ ಸೋಮನಾಥ ದೇವಾಲಯವನ್ನು ಮರುನಿರ್ಮಿಸಲು ಸರ್ದಾರ್ ವಲ್ಲಭಭಾಯಿ ಪಟೇಲರು ಮುಂದಾದಾಗಲೂ ನೆಹರು ವಿರೋಧಿಸಿದ್ದರು.
ಹೀಗೆ ಮರುನಿರ್ಮಾಣಕ್ಕೆ ಮುಂದಾದರೆ ಮುಸಲ್ಮಾನರಿಗೆ ನೋವಾಗುತ್ತದೆಯೆಂಬ ‘ಓಲೈಕೆಯ ರಾಜಕಾರಣ’ ನೆಹರುರಲ್ಲಿ ಕಾಣುತ್ತಿತ್ತು. ಆದರೆ ಪಟೇಲರ ಬಲವಾದ ಶ್ರದ್ಧೆಯು ಸೋಮನಾಥ ದೇವಾಲಯದ ಮರುನಿರ್ಮಾಣಕ್ಕೆ ಕಾರಣವಾಯಿತು. ಹೀಗೆ ಅಂದು ಈ ದೇಗುಲದ ಮರುನಿರ್ಮಾಣವನ್ನು ನೆಹರು ವಿರೋಧಿ ಸಿದ್ದ ರೀತಿಯಲ್ಲಿಯೇ ಅವರ ಕುಟುಂಬಸ್ಥರು ಅಯೋಧ್ಯೆಯಲ್ಲಿನ ರಾಮನ ಮಂದಿರದ ನಿರ್ಮಾಣವನ್ನು ವಿರೋಧಿಸುತ್ತಾ ಬಂದರು. ಈ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷಕ್ಕೂ ಆಹ್ವಾನ ನೀಡಲಾಗಿದ್ದು, ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯವರು ಈ ಕಾರ್ಯಕ್ರಮಕ್ಕೆ ಬರುತ್ತೇವೆಂದು ಹೇಳಿಲ್ಲ.
ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸಿಗರಿಗೆ, ಗಾಂಧಿಯವರಿಗೆ ಶ್ರೀರಾಮನಲ್ಲಿದ್ದಂಥ ಭಕ್ತಿ ಇಲ್ಲವೇ ಇಲ್ಲ. ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತೇವೆ ಎನ್ನುವವರು, ರಾಮನ ವಿಷಯದಲ್ಲಿ ಮಹಾತ್ಮರಿಗಿದ್ದ ಆದರ್ಶಗಳನ್ನು ಅನುಸರಿಸುವುದಿಲ್ಲ. ಗಾಂಧಿಯವರು ಭಗವದ್ಗೀತೆಗೆ ಕೊಟ್ಟಷ್ಟು ಪ್ರಾಮುಖ್ಯವನ್ನು ಕಾಂಗ್ರೆಸಿಗರು ಅದಕ್ಕೆ ಕೊಡುವುದಿಲ್ಲ. ಮಕ್ಕಳಿಗೆ ಶಾಲೆಯಲ್ಲಿ ಭಗವದ್ಗೀತೆ ಹೇಳಿಕೊಡಲು ಹೊರಟರೆ ‘ಇದು ಕೋಮುವಾದ’ ಎನ್ನುತ್ತಾ ವಿರೋಧಿ ಸುವವರು ಕಾಂಗ್ರೆಸಿಗರು. ಗೋವುಗಳನ್ನು ಪ್ರೀತಿಸುತ್ತಿದ್ದ ಗಾಂಧೀಜಿ, ಭಾರತದಲ್ಲಿ ಗೋಹತ್ಯೆಯಾಗುವುದನ್ನು ವಿರೋಧಿಸಿದ್ದರು. ಗಾಂಧಿ ಯವರ ಆದರ್ಶಗಳನ್ನು ಪಾಲಿಸಲೆಂದು ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೆ ತಂದರೆ, ಅದರಲ್ಲೂ ಕೋಮುವಾದವನ್ನು ಹುಡುಕಿ ವಿರೋಧಿಸು ತ್ತಾರೆ ಕಾಂಗ್ರೆಸಿಗರು.
ಹೀಗೆ ಮಹಾತ್ಮ ಗಾಂಧಿಯವರ ಹೆಸರನ್ನು ಕೇವಲ ತಮ್ಮ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುವಲ್ಲಿ ಸೀಮಿತರಾಗಿರುವವರು, ಅವರ ಆದರ್ಶಗಳನ್ನು ಮಾತ್ರ ಅಳವಡಿಸಿಕೊಂಡಿಲ್ಲ. ಗಾಂಧಿಯವರ ಹೆಸರನ್ನಿಟ್ಟುಕೊಂಡು, ಅವರು ಜೀವನದಲ್ಲಿ ಪಾಲಿಸುತ್ತಿದ್ದಂಥ ತತ್ವಗಳ ವಿರುದ್ಧವಾಗಿ ನಡೆದುಕೊಂಡಿದ್ದು ಅವರ ಸಂಸ್ಕೃತಿ.
ಮಹಾತ್ಮ ಗಾಂಧಿಯವರು ತಮ್ಮ ರಾಮನಾಮ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: ‘ಹಿಂದೂ ಧರ್ಮವು ಅಮೂಲ್ಯವಾದ ರತ್ನಗಳಿಂದ ತುಂಬಿರುವ ಮಿತಿಯಿಲ್ಲದ
ಸಾಗರದಂತೆ. ನೀವು ಅದರಲ್ಲಿ ಧುಮುಕಿ ಆಳಕ್ಕಿಳಿದರೆ ಹೆಚ್ಚು ಸಂಪತ್ತನ್ನು ಕಂಡುಕೊಳ್ಳುತ್ತೀರಿ.
ಹಿಂದೂ ಧರ್ಮದಲ್ಲಿ ದೇವರನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಸಾವಿರಾರು ಜನರು ರಾಮ ಮತ್ತು ಕೃಷ್ಣರನ್ನು ಐತಿಹಾಸಿಕ ವ್ಯಕ್ತಿಗಳೆಂದು ನಿಸ್ಸಂದೇಹವಾಗಿ ನೋಡುತ್ತಾರೆ; ದಶರಥನ ಮಗನಾದ ರಾಮನ ರೂಪದಲ್ಲಿ ದೇವರು ಭೂಮಿಗೆ ಪ್ರತ್ಯಕ್ಷವಾಗಿ ಬಂದಿದ್ದಾನೆ, ಅವನನ್ನು ಆರಾಽಸುವ
ಮೂಲಕ ಮೋಕ್ಷವನ್ನು ಪಡೆಯಬಹುದು ಎಂದು ಅಕ್ಷರಶಃ ನಂಬುತ್ತಾರೆ. ರಾಮ ಮತ್ತು ಕೃಷ್ಣರ ವಿಷಯದಲ್ಲಿ ಇತಿಹಾಸ, ಕಲ್ಪನೆ ಮತ್ತು ಸತ್ಯ ಇವು ಬೆರೆತಿವೆ. ಅವನ್ನು ಬೇರ್ಪಡಿಸುವುದು ಅಸಾಧ್ಯ. ದೇವರಿಗೆ ಹೇಳಲಾದ ಎಲ್ಲಾ ಹೆಸರುಗಳು ಮತ್ತು ರೂಪಗಳನ್ನು ನಾನು ಸರ್ವವ್ಯಾಪಿಯಾದ ರಾಮನನ್ನು ಪೂಜಿಸುವ ಸಂಕೇತಗಳಾಗಿ ಸ್ವೀಕರಿಸಿದ್ದೇನೆ.
ಯಾರ ಹೃದಯದಲ್ಲಿ ರಾಮನ ಹೆಸರನ್ನು ಕೆತ್ತಲಾಗುತ್ತದೆಯೋ ಅವರು ದೈಹಿಕ, ಮಾನಸಿಕ ಮತ್ತು ನೈತಿಕ ದುಃಖಗಳಿಂದ ದೂರವಿರುತ್ತಾರೆ’. ಶ್ರೀರಾಮನ ವಿಷಯದಲ್ಲಿ ಇತಿಹಾಸ ಮತ್ತು ಸತ್ಯವನ್ನು ಬೇರ್ಪಡಿಸಲಾಗುವುದಿಲ್ಲ ಎಂಬುದನ್ನು ಮಹಾತ್ಮ ಗಾಂಧಿಯವರು ಒಪ್ಪಿಕೊಂಡಿದ್ದರು. ರಾಮನಾಮವು ಜಗತ್ತಿನ
ಸರ್ವಧರ್ಮದವರಿಗೂ ಒಂದು ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಅವರು ಪದೇ ಪದೆ ಹೇಳಿದ್ದಾರೆ. ಆದರೆ, ಅವರ ಆದರ್ಶಗಳನ್ನು ಪಾಲಿಸುತ್ತೇವೆ ಎಂದು ಹೇಳಿಕೊಳ್ಳುವವರು, ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ನಿಧಾನವಾಗಲೆಂದೇ ನ್ಯಾಯಾಲಯದಲ್ಲಿ ಹಲವು ದಾವೆಗಳನ್ನು ಹೂಡಿ ತಡಮಾಡಿದ್ದರು.
ಶ್ರೀರಾಮಚಂದ್ರ ಎಂದಿಗೂ ಯುದ್ಧದ ಸಂಕೇತವಾಗಿರಲಿಲ್ಲ, ಆತ ಧರ್ಮದ ಸಂಕೇತವಾಗಿದ್ದ. ಧರ್ಮದ ವಿಚಾರದಲ್ಲಿ ಎಲ್ಲಿಯೂ ರಾಜಿಮಾಡಿಕೊಳ್ಳದ ವ್ಯಕ್ತಿತ್ವ ಶ್ರೀರಾಮನದ್ದಾಗಿತ್ತು. ಅಧರ್ಮವನ್ನು ನಾಶಗೊಳಿಸಲು ಶ್ರೀರಾಮ ತನ್ನ ಬಿಲ್ಲನ್ನು ಬಳಸಿದ್ದನೇ ಹೊರತು, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲಿಕ್ಕೆಂದು ಅಲ್ಲ. ಸೀತಾಮಾತೆಯನ್ನು ರಾಕ್ಷಸ ರಾವಣನಿಂದ ರಕ್ಷಿಸುವ ಸಲುವಾಗಿ ಲಂಕೆಗೆ ಲಗ್ಗೆಯಿಟ್ಟು ಯುದ್ಧಮಾಡಿದ್ದ ಶ್ರೀರಾಮನು, ರಾವಣನ ಸಂಹಾರದ ನಂತರ
ವಿಭೀಷಣನಿಗೆ ಲಂಕೆಯನ್ನು ಬಿಟ್ಟುಕೊಟ್ಟಿದ್ದ. ಕೊನೆಯದಾಗಿ ಮಹಾತ್ಮ ಗಾಂಧಿಯವರು ಹೇಳಿದ್ದು ಇದು: ‘ಒಂದೆಡೆ ಬಾಯಿಯಲ್ಲಿ ರಾಮನಾಮವನ್ನು
ಪುನರಾವರ್ತಿಸುವುದು, ಮತ್ತೊಂದೆಡೆ ನಿಜವಾದ ಆಚರಣೆಯಲ್ಲಿ ರಾವಣನ ಮಾರ್ಗವನ್ನು ಅನುಸರಿಸುವುದು ನಿಷ್ಪ್ರಯೋಜಕತ್ವಕ್ಕಿಂತಲೂ ಕೆಟ್ಟದಾಗಿದೆ.
ಇದು ಬರಿಯ ಬೂಟಾಟಿಕೆ. ಒಬ್ಬರು ತನ್ನನ್ನು ಅಥವಾ ಜಗತ್ತನ್ನು ಮೋಸಗೊಳಿಸಬಹುದು, ಆದರೆ ಸರ್ವಶಕ್ತನಾದ ರಾಮನನ್ನು ಮೋಸಗೊಳಿಸಲು ಸಾಧ್ಯವಿಲ್ಲ’.