ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿಗೊಳಿಸುವ ಕೆಲವು ಕಾಯಿದೆಗಳು ಕೇವಲ ಬಿಲ್ ಆಗಿರುವುದಿಲ್ಲ. ಆ ವಿಧೇಯಕ
ಮಂಡನೆಗೂ ಮೊದಲು, ನಂತರ ಹಾಗೂ ಮಂಡನೆಯ ಸಮಯದಲ್ಲಿ ವಾದ – ವಿವಾದ, ಆರೋಪ – ಪ್ರತ್ಯಾರೋಪಗಳು ಶುರುವಾಗುತ್ತವೆ. ಈ ರೀತಿ ಜನಮಾನಸದಲ್ಲಿ ಚರ್ಚೆಯಾಗಬೇಕಾದರೆ, ಆ ಕಾಯಿದೆ ಕಾನೂನು ಮೀರಿ, ಜನರ ಭಾವನೆಗಳಿಗೆ ನಾಟುವ ಅಂಶಗಳಿದ್ದಾಗ ಮಾತ್ರ, ಈ ಪ್ರಮಾಣದಲ್ಲಿ ಚರ್ಚೆಯಾಗುವುದು.
ರಾಜ್ಯದಲ್ಲಿ ಮಂಡನೆಯಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ಇರಬಹುದು, ಗೋಹತ್ಯೆ ನಿಷೇಧ ಕಾಯಿದೆ ಇರಬಹುದು ಅಥವಾ ಕೇಂದ್ರ ಸರಕಾರ ಈ ಹಿಂದೆ ಜಾರಿಗೊಳಿಸಿದ್ದ ಜಿಎಸ್‌ಟಿ, ನೋಟ್ ಬ್ಯಾನ್, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಕೃಷಿ ಕಾಯಿದೆಗಳ ತಿದ್ದುಪಡಿ ಸೇರಿದಂತೆ ಹಲವು ತೀರ್ಮಾನಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಬಿಜೆಪಿ ನಾಯಕರು ಈ ಕಾನೂನುಗಳಿಂದ ಜನರಿಗೆ ಅನುಕೂಲವಾಗಲಿದೆ ಎಂದು ಬಿಂಬಿಸಿದರೆ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸರಕಾರ ನಡೆಯನ್ನು ಖಂಡಿಸಿದ್ದವು. ಕರ್ನಾಟಕದ ವಿಷಯದಲ್ಲಿ ನೋಡುವುದಾದರೆ, ರಾಜ್ಯ ಸರಕಾರ ಮಂಡಿಸಿದ ಗೋಹತ್ಯೆ ನಿಷೇಧ ಹಾಗೂ ಮಂಡಿಸಲು ಸಜ್ಜಾಗುತ್ತಿರುವ ಲವ್ ಜಿಹಾದಿ ನಿಷೇಧ ಕಾಯಿದೆ ಇದೀಗ ಬಹುಚರ್ಚಿತ ವಿಷಯವಾಗಿದೆ. ಈ ಎರಡು ಕಾನೂನುಗಳಲ್ಲಿ ಕೇವಲ ಸರಕಾರ ಮತ್ತು ಜನ ಎನ್ನುವುದಕ್ಕಿಂತ ನೇರವಾಗಿ ಎರಡು ಪ್ರಬಲ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡು ಮಾಡಿರುವ ಕಾಯಿದೆ.
ಹಿಂದುಗಳ ಮತ ಓಲೈಕೆ ಈ ಎರಡು ಕಾಯಿದೆ ಜಾರಿ ಗೊಳಿಸಿದೆ ಎನ್ನುವ ಮಾತುಗಳನ್ನು ಅನೇಕರೂ ಹೇಳಿದರೂ, ಕಾಂಗ್ರೆಸ್ ಇದನ್ನು ವಿರೋಧಿಸುತ್ತಿರುವುದು ಮುಸ್ಲಿಂ ಮತಗಳನ್ನು ಆಕರ್ಷಣೆ ಮಾಡುವುದಕ್ಕೆ ಅಲ್ಲದೇ ಬೇರೇನು ಇಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ರಾಜ್ಯದಲ್ಲಿ ಹಲವು ಮಹತ್ವದ ಕಾಯಿದೆಯನ್ನು ಜಾರಿಗೊಳಿಸಿದೆ.
ಪ್ರಮುಖವಾಗಿ ಕೃಷಿ ಸಮುದಾಯದ ಭಾರಿ ವಿರೋಧದ ನಡುವೆ ಎಪಿಎಂಸಿ ತಿದ್ದುಪಡಿ ಕಾಯಿದೆ, ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗೊಳಿಸಿದ ಸರಕಾರ, ಇದೀಗ ಲವ್ ಜಿಹಾದಿ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಸ್ಪಷ್ಟ ಬಹುಮತವಿರುವ ಕಾರಣ, ಬಹುತೇಕ ವಿವಾದಾತ್ಮಕ ಹಾಗೂ ರಾಜಕೀಯವಾಗಿ ಸಹಾಯವಾಗುವಂತ ಹಲವು ಕಾಯಿದೆಗಳನ್ನು ಮಂಡಿಸಿತ್ತು.
ಇದೀಗ ರಾಜ್ಯ ಸರಕಾರವೂ ಇದೇ ರೀತಿಯ ‘ಲಿಸ್ಟ್’ನಲ್ಲಿರುವ ಎಲ್ಲ ಕಾಯಿದೆಗಳನ್ನು ಜಾರಿಗೊಳಿಸುತ್ತಿದೆ. ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್‌ಗಿಂತ ಹೆಚ್ಚಿನ ಸಂಖ್ಯಾಬಲ ಬಿಜೆಪಿ ಇರುವುದರಿಂದ, ಈ ರೀತಿಯ ವಿವಾದಾತ್ಮಕ ಕಾಯಿದೆಗಳನ್ನು ಪಾಸ್ ಮಾಡಿಸಿಕೊಳ್ಳುವುದು ದೊಡ್ಡ ವಿಷಯವಲ್ಲ. ಇನ್ನು ಪರಿಷತ್‌ನಲ್ಲಿ ತಡೆಯೊಡ್ಡಿದರೂ, ಸುಗ್ರೀವಾಜ್ಞೆ ಮೂಲಕ ಕಾಯಿದೆ ಗಳನ್ನು ಜಾರಿಗೊಳಿಸುವುದನ್ನು ಬಿಜೆಪಿ ಸರಕಾರ ಮೈಗೂಡಿಸಿಕೊಂಡಿದೆ.
ಆದರೀಗ ಲವ್ ಜಿಹಾದಿ ಕಾಯಿದೆ ವಿಚಾರದಲ್ಲಿ, ನ್ಯಾಯಾಲಯವೂ ವ್ಯತಿರಿಕ್ತ ತೀರ್ಪು ಕೊಡುವ ಸಾಧ್ಯತೆ ಇರುವುದರಿಂದ ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಹಿಂದೆ ಸರಕಾರ ಜಾರಿಗೊಳಿಸಿದ ಕೃಷಿ ತಿದ್ದುಪಡಿ ಕಾಯಿದೆ ಗಳಿಗಿಂತ, ಲವ್ ಜಿಹಾದಿ ನಿಷೇಧ ಕಾಯಿದೆ ಹಾಗೂ ಗೋಹತ್ಯೆ ನಿಷೇಧ ಕಾಯಿದೆ ಮುಸ್ಲಿಂ ಸಮುದಾಯದ ಅಸಮಾಧಾನಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕಾಗಿಯೇ ಕಾಂಗ್ರೆಸ್ ಸಹ ಈ ಎರಡು ಕಾಯಿದೆಗಳಿಗೆ ಭಾರಿ ವಿರೋಧವನ್ನು ವ್ಯಕ್ತಪಡಿಸಿದೆ.
ಗೋಹತ್ಯೆ ನಿಷೇಧ ಕಾಯಿದೆಯಿಂದ ರಾಜ್ಯದಲ್ಲಿ ಗೋವುಗಳನ್ನು ಕಡಿಯುವುದಕ್ಕೆ ಅವಕಾಶವಿಲ್ಲ. ಆದರೆ ಮುಸ್ಲಿಂ ಸಮುದಾ ಯದ ನಿತ್ಯ ಆಹಾರ ಪದ್ಧತಿಯಾಗಿರುವುದರಿಂದ, ಹಿಂದೂಗಳನ್ನು ಮೆಚ್ಚಿಸುವುದಕ್ಕೆ, ಮುಸ್ಲಿಮರ ಪದ್ಧತಿಯನ್ನು ಕೊನೆಗಾಣಿ ಸಲು ಸರಕಾರ ಮುಂದಾಗಿದೆ ಎನ್ನುವ ಅಂಬೋಣ ಕಾಂಗ್ರೆಸ್‌ನದ್ದಾಗಿದೆ. ಆದರೆ ದಶಕಗಳ ಕಾಲ ಕುಟುಂಬ ಸದಸ್ಯರ ರೀತಿ ಯಲ್ಲಿಯೇ ಇರುವ ಗೋವು ಅಥವಾ ದನವನ್ನು ವಯಸ್ಸಾದ ಕೂಡಲೇ, ಕಡಿದು ಆಹಾರ ಮಾಡಿಕೊಳ್ಳಲು ಕೊಡುವುದು ಎಷ್ಟು ಸರಿ? ಗೋ ಮಾತೆಯಾಗಿ ಪೂಜಿಸುವ ಹಸುವನ್ನು ಸಾಯಿಸುವುದಕ್ಕೆ ಕೊಡುವುದು ಅಥವಾ ಕಡಿಯುವುದು ತಪ್ಪು.
ಆದ್ದರಿಂದ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಲಾಗಿದ್ದು, ರೈತರ ಕೈಯಲ್ಲಿ ಹಸುಗಳನ್ನು ಸಾಕಲು ಸಾಧ್ಯವಾಗದಿದ್ದರೆ, ಅವುಗಳನ್ನು ಸರಕಾರಿ ಗೋಶಾಲೆಗೆ ನೀಡಲು ಅವಕಾಶ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಈ ವಾದವನ್ನು ಯಾರೂ ಒಪ್ಪಿಲ್ಲ ಎಂದಲ್ಲ. ರಾಜ್ಯದ ಬಹುಸಂಖ್ಯಾತರಿಗೆ ಗೋಹತ್ಯೆ ನಿಷೇಧ ಜಾರಿಗೊಳಿಸಿದ್ದು
ಖುಷಿ ತಂದಿದೆ. ಆದರೆ ಗೋಹತ್ಯೆಯನ್ನು ನಿಷೇಧ ಮಾಡಿ, ಮಾಂಸ ಮಾರಾಟಕ್ಕೆ ಅವಕಾಶ ನೀಡಿದ್ದು ದ್ವಂದ್ವಕ್ಕೆ ಸಿಲುಕಿಸಿ
ದಂತಾಗಿದೆ.
ಈ ವಿವಾದಾತ್ಮಕ ಕಾಯಿದೆ ಮುಗಿಯುವ ಮೊದಲೇ, ಇದೀಗ ಲವ್ ಜಿಹಾದಿ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ. ಈ ಕಾಯಿದೆ ಜಾರಿಯಾಗಬೇಕು ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿಯೂ ನಿರ್ಣಯವಾಗಿದೆ. ಆದರೆ ನಿಜಕ್ಕೂ ಈ ಕಾಯಿದೆ ಜಾರಿ ಸುಲಭವೇ ಎನ್ನುವ ಪ್ರಶ್ನೆಗೆ ಕಾನೂನು ತಜ್ಞರ ಬಳಿ ಉತ್ತರವಿಲ್ಲ.
ಗೋಹತ್ಯೆ ನಿಷೇಧ ಕಾಯಿದೆ ಜಾರಿ ಅವಧಿಯಲ್ಲಿ, ಬಿಜೆಪಿಗರು, ಸಂವಿಧಾನದಲ್ಲಿ ಗೋವುಗಳ ರಕ್ಷಣೆಗೆ ಸಂಬಂಧಿಸಿದಂತೆ ಇರುವ ವಿಷಯವನ್ನು ಮುಂದಿಟ್ಟು ಅನೇಕ ಬಾಯಿ ಮುಚ್ಚಿಸಿದರು. ಆದರೆ ಲವ್ ಜಿಹಾದಿ ನಿಷೇಧ ಕಾಯಿದೆಗೆ ಸಂಬಂಧಿಸಿದಂತೆ ಈ ರೀತಿ ‘ಚೆಕ್‌ಮೆಟ್’ ಮಾಡುವುದಕ್ಕೆ ಬಿಜೆಪಿ ಬಳಿ ಸದ್ಯಕ್ಕೆ ಯಾವ ಕಾರಣಗಳೂ ಇಲ್ಲ. ಈ ಕಾಯಿದೆ ವಿಷಯದಲ್ಲಿ, ಬಿಜೆಪಿಯ ನಡೆಯನ್ನು ಪ್ರಶ್ನಿಸುವುದಕ್ಕೆ ಕಾಂಗ್ರೆಸ್ ಬಳಿ ಹಲವು ಅಸ್ತ್ರಗಳಿವೆ.
ಅಷ್ಟಕ್ಕೂ ಲವ್ ಜಿಹಾದಿ ಎಂದರೇನು ಎನ್ನುವುದನ್ನು ಮೊದಲು ನೋಡಬೇಕಿದೆ. ಹಾಗೇ ನೋಡಿದರೆ, ಲವ್ ಜಿಹಾದಿ ಎನ್ನುವ ಹೆಸರು ಶುರುವಾಗಿದ್ದು, ಕೆಲ ವರ್ಷಗಳ ಹಿಂದೆ. ಮುಸ್ಲಿಂ ಸಮುದಾಯದ ಯುವಕರು ಹಿಂದೂ ಯುವತಿಯರನ್ನು ಪ್ರೀತಿಯ ಜಾಲಕ್ಕೆ ಸಿಲುಕಿಸಿ, ಬಳಿಕ ವಿವಾಹದ ನೆಪದಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪದೊಂದಿಗೆ ಶುರುವಾಯಿತು. ಕೆಲವೇ ವರ್ಷಗಳಲ್ಲಿ ದೇಶದೆಲ್ಲೆಡೆ ಈ ಬಗ್ಗೆ ಹಲವು ದೂರುಗಳು ಕೇಳಿಬರಲು ಶುರುವಾದವು. ಅದರಲ್ಲಿಯೂ ಉತ್ತರ ಪ್ರದೇಶ, ಬಿಹಾರ ರಾಜ್ಯದಲ್ಲಿ ಈ ಪಿಡುಗು ಹೆಚ್ಚಾಗುತ್ತಲೇ ಸಾಗಿತ್ತು.
ಕರ್ನಾಟಕದ ವಿಷಯದಲ್ಲಿ ನೋಡುವುದಾದರೆ, ಕರಾವಳಿ ಭಾಗದಲ್ಲಿ ಲವ್ ಜಿಹಾದಿ ಮಾತು ಆಗಿಂದಾಗೆ ಕೇಳಿಬರುತ್ತದೆ. ಈ ರೀತಿ ಪ್ರೀತಿಯ ಹೆಸರಲ್ಲಿ ಮತಾಂತರ ಮಾಡುವುದಷ್ಟೇ ಅಲ್ಲದೇ, ಬಳಿಕ ಯುವತಿಯರಿಗೆ ಹಲವು ರೀತಿಯ ಕಿರುಕುಳ, ಮಾನವ ಸಾಗಾಣಿಕೆಯಂಥ ಪ್ರಕರಣಗಳು ಹೆಚ್ಚಾಗುತ್ತಾ ಸಾಗಿತ್ತು. ಈ ಎಲ್ಲವನ್ನು ತಡೆಗಟ್ಟುವ ಉದ್ದೇಶದಿಂದ ಉತ್ತರ ಪ್ರದೇಶ ಸರಕಾರ ಕೆಲ ತಿಂಗಳ ಹಿಂದೆ, ‘ಲವ್ ಜಿಹಾದಿ ನಿಷೇಧ ಕಾಯಿದೆ’ಯನ್ನು ಜಾರಿಗೊಳಿಸಿತ್ತು.
ಇದರಲ್ಲಿ ವಿವಾಹವಾಗುವುದಕ್ಕಾಗಿಯೇ ಮತಾಂತರ ಮಾಡಿದರೆ, ಅಂತವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ, ೧೦ ವರ್ಷದವರೆಗೆ ಶಿಕ್ಷೆ ವಿಧಿಸುವ ಕಾನೂನನ್ನು ರೂಪಿಸಿತ್ತು. ಹಿಂದೂ ಧರ್ಮದ ಯುವತಿಯರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎನ್ನುವುದಾದರೂ, ಇದನ್ನು ಪ್ರಶ್ನಿಸಿ ಅನೇಕರು ಕೋರ್ಟ್ ಮೊರೆ ಹೋಗಿದ್ದರು. ಉತ್ತರ ಪ್ರದೇಶ ಸರಕಾರ ಜಾರಿಗೊಳಿಸಿದ ಕಾಯಿದೆಯನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ, ಪ್ರಮುಖವಾಗಿ ಅಂತರ ಧರ್ಮೀಯ, ಅಂತರ್ಜಾತಿ ವಿವಾಹ ಕಾನೂನು ಬಾಹಿರ ಎನ್ನುವ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಿಲ್ಲ.
18 ವರ್ಷದ ಯುವತಿಗೆ ಹಾಗೂ 21 ವರ್ಷದ ಯುವಕನಿಗೆ ಆಗಿದ್ದರೆ, ಇಷ್ಟಪಟ್ಟು ಯಾರೊಂದಿಗೆ ಬೇಕಾದರೂ ವಿವಾಹವಾಗ ಬಹುದು ಎನ್ನುವುದು ಸಂವಿಧಾನ ದಲ್ಲಿ ಸ್ಪಷ್ಟವಾಗಿದೆ. ಅದರಲ್ಲಿ ಎಲ್ಲಿಯೂ ಮುಸ್ಲಿಂ ಯುವಕರನ್ನು ಹಿಂದೂ ಯುವತಿ ವಿವಾಹವಾಗಬಾರದು ಎನ್ನುವ ಮಾತಿಲ್ಲ. ಆದ್ದರಿಂದ ಇಷ್ಟಪಟ್ಟವರನ್ನು ವಿವಾಹ ಅಥವಾ ಜೀವಿಸುವ ಸ್ವಾತಂತ್ರ್ಯ ಸಂವಿಧಾನ ದಲ್ಲಿ ನೀಡಲಾಗಿದ್ದು, ಇದು ಮೂಲಭೂತ ಸ್ವಾತಂತ್ರ್ಯ ಎನ್ನುವ ಬಗ್ಗೆ ಸ್ಪಷ್ಟ ಮಾತಿದೆ.
ಆದ್ದರಿಂದ ಉತ್ತರ ಪ್ರದೇಶ ಸರಕಾರ ಜಾರಿಗೊಳಿಸಿರುವ ಕಾಯಿದೆ ಸರಿಯಲ್ಲ ಎನ್ನುವ ಅಸಮಾಧಾನವನ್ನು ಅಲಹಾಬಾದ್ ಹೈಕೋರ್ಟ್ ಹೊರಹಾಕಿತ್ತು. ಯೋಗಿ ಆದಿತ್ಯನಾಥ್ ಅವರ ಸರಕಾರ ಜಾರಿಗೆ ತಂದಿರುವ ಲವ್ ಜಿಹಾದಿ ಕಾಯಿದೆಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶ ನೀಡಲಾಗಿದ್ದು, ಒಂದು ವೇಳೆ ತಪ್ಪಿತಸ್ಥನೆಂದು ಸಾಬೀತಾದರೆ ಗರಿಷ್ಠ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ಈ ಕಾಯಿದೆ ಕೇವಲ ಅಲ್ಲಿ ಮಾತ್ರವಲ್ಲದೇ, ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಪ್ರಮುಖವಾಗಿ ಅರುಣಾಚಲ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕಾಯಿದೆ ಜಾರಿಯಲ್ಲಿದ್ದು, ಆ ರಾಜ್ಯಗಳಲ್ಲಿ ಮತಾಂತರಕ್ಕೆ ಬಲವಂತ ಮಾಡುವವರಿಗೆ 5 ರಿಂದ 50 ಸಾವಿರ ರು. ದಂಡ ಹಾಗೂ 1 ರಿಂದ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಇದಿಷ್ಟೇ ಅಲ್ಲದೇ, ಒಂದು ವೇಳೆ ವಿವಾಹ ಕಾರಣಕ್ಕಾಗಿಯೇ ಮತಾಂತರ ಮಾಡುವುದಾದರೆ, ಎರಡು ತಿಂಗಳ ಮುನ್ನ ಜಿ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಬೇಕು. ಒಂದು ವೇಳೆ ಅನುಮತಿ ಸಿಕ್ಕರೆ ವಿವಾಹದೊಂದಿಗೆ ಮತಾಂತರ ಆಗಬಹುದು. ಈ ನಿಯಮ ಉಲ್ಲಂಘಿಸಿದರೆ 6 ತಿಂಗಳಿಂದ 3 ವರ್ಷ ಸಜೆ ಹಾಗೂ 10000 ದಂಡ ವಿಧಿಸಲಾಗುತ್ತದೆ. ಈ ಎಲ್ಲವನ್ನು ಗಮನದಲ್ಲಿರಿಸಿ ಕೊಂಡು ಕರ್ನಾಟಕದಲ್ಲಿಯೂ ಬಿಜೆಪಿ ಸರಕಾರ ಈ ಮಹತ್ವಾಕಾಂಕ್ಷೆ ಕಾಯಿದೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿ ಕೊಂಡಿತ್ತು.
ಬೆಳಗಾವಿ ಕಾರ್ಯಕಾರಣಿಯಲ್ಲಿಯೇ ಈ ಸಂಬಂಧ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಉತ್ತರ ಪ್ರದೇಶ ಸರಕಾರದ
ನಡೆಯನ್ನು ಹೈಕೋರ್ಟ್ ಪ್ರಶ್ನಿಸಿದ್ದರಿಂದ, ರಾಜ್ಯದಲ್ಲಿ ಜಾರಿಗೊಳಿಸಿ ಮುಜುಗರ ಅನುಭವಿಸುವುದು ಬೇಡ ಎನ್ನುವ ನಿರ್ಣಯ ಕೈಗೊಂಡಿತ್ತು. ಆದರೀಗ ಪಕ್ಷದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಸ್ಪಷ್ಟ ಬಹುಮತವಿರುವಾಗಲೇ, ಈ ಕಾಯಿದೆಯನ್ನು ಜಾರಿಗೊಳಿಸಬೇಕು. ರಾಜಕೀಯವಾಗಿ ನೋಡುವುದಾದರೂ, ಲವ್ ಜಿಹಾದಿ ನಿಷೇಧ ಕಾಯಿದೆಯಿಂದ ಮುಂದಿನ ಚುನಾವಣೆ ಯಲ್ಲಿ ಪಕ್ಷಕ್ಕೆ ಹಿಂದೂ ಧರ್ಮದ ಮತಗಳು Polarise ಆಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದೆ.
ಆದರೆ ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಿದಷ್ಟು ಸುಲಭವಾಗಿ ಅಂತರ ಧರ್ಮೀಯ ನಿಷೇಧ ಕಾಯಿದೆಯನ್ನು
ಮಂಡಿಸುವುದು ಸುಲಭವಲ್ಲ ಎನ್ನುವ ಮಾತನ್ನು ಕಾನೂನು ತಜ್ಞರು ಹೇಳಿದ್ದಾರೆ. ಉತ್ತರ ಪ್ರದೇಶ ಮಾದರಿಯ ಯಥಾವತ್ ಕಾಯಿದೆಯನ್ನು ಮಂಡಿಸಿದರೆ, ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುವುದು ಖಚಿತ ಎನ್ನುವುದು ಖಾತ್ರಿಯಾಗುತ್ತಿದ್ದಂತೆ, ಇದೀಗ ಲವ್ ಜಿಹಾದಿ ನಿಷೇಧ ಕಾಯಿದೆಯನ್ನು ‘ರೂಪಾಂತರ’ಗೊಳಿಸಿ ಜಂಟಿ ಅಧಿವೇಶನದಲ್ಲಿ ಮಂಡಿಸುತ್ತಾರೆ.
ಪ್ರಮುಖವಾಗಿ ಪರಸ್ಪರ ಪ್ರೀತಿಸಿ ಮದುವೆಯಾದರೆ ಈ ಕಾಯಿದೆಯಲ್ಲಿ ಯಾವುದೇ ಕ್ರಮ ತಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಧರ್ಮ ಮುಚ್ಚಿಟ್ಟು ಮದುವೆ ಆಗುವುದು, ಒತ್ತಾಯಪೂರ್ವಕ ಮತಾಂತರಕ್ಕೆ ತಡೆ, ಆಮಿಷದ ಮತಾಂತರಕ್ಕೆ ತಡೆಯೊಡ್ಡಲು ನಿರ್ಧರಿಸಲಾಗಿದೆ. ಸರಕಾರ ಈ ಕಾನೂನು ರೂಪಿಸಲು ನೀಡುವ ಕಾರಣಗಳು ಏನೇ ಇರಲಿ, ಕಾಂಗ್ರೆಸ್ ಮಾತ್ರ ಭಾರಿ ವಿರೋಧ ವ್ಯಕ್ತಪಡಿಸಿದೆ.
ಉತ್ತರ ಪ್ರದೇಶ ಸೇರಿದಂತೆ ದೇಶದ ಯಾವ ಯಾವ ರಾಜ್ಯಗಳಲ್ಲಿ ಈ ಕಾನೂನು ಜಾರಿಯಾಗಿದೆಯೋ ಅಲ್ಲೆಲ್ಲ ಈ ಕಾಯಿದೆ ಯನ್ನು ಬಲವಾಗಿ ಖಂಡಿಸುತ್ತಿದೆ. ಹಿಂದೂ ಮತಗಳನ್ನು Polarise ಮಾಡಲು ಬಿಜೆಪಿ ಆಡಳಿತ ಪಕ್ಷವಿರುವ ರಾಜ್ಯದಲ್ಲಿ ಈ ಕಾಯಿದೆ ಜಾರಿಯಾದರೆ, ಮುಸ್ಲಿಂ ಮತಗಳನ್ನು ಭದ್ರವಾಗಿರಿಸಿಕೊಳ್ಳಲು ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ. ಈ ಕಾಯಿದೆ ಯನ್ನು ವಿರೋಧಿಸುವಾಗ, ಪ್ರಮುಖವಾಗಿ ಸಂವಿಧಾನದ ಆಶಯದ ಬಗ್ಗೆ ಕೈ ನಾಯಕರು ಮಾತನಾಡುತ್ತಿದ್ದಾರೆ.
ಹಾಗೇ ನೋಡಿದರೆ, ಸಂವಿಧಾನದಲ್ಲಿ ಅಂತರ ಧರ್ಮೀಯ ವಿವಾಹದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಆದರೆ ಇಷ್ಟ ಪಡುವವ ರೊಂದಿಗೆ ಜೀವನ ನಡೆಸುವ ಸಾತಂತ್ರ್ಯವನ್ನು ಸರಕಾರ ನೀಡಿದೆ. ಲವ್ ಜಿಹಾದಿ ಅಥವಾ ಅಂತರ ಧರ್ಮೀಯ ವಿವಾಹ ನಿಷೇಧ ಕಾಯಿದೆ ಜಾರಿಯಾದರೆ, ಈಗಾಗಲೇ ಲಕ್ಷಾಂತರ ಹಿಂದು ಯುವಕರು, ಮುಸ್ಲಿಂ ಯುವತಿಯರನ್ನು, ಮುಸ್ಲಿಂ ಯುವಕರು, ಹಿಂದು ಯುವಕ ವಿವಾಹವಾಗಿ ಜೀವನ ಸಾಗಿಸುತ್ತಿದ್ದಾರೆ. ಅವರ ವಿವಾಹವೆಲ್ಲ ಕಾನೂನು ಬಾಹಿರ ಎಂದು ಹೇಳಲು ಸಾಧ್ಯವೇ? ಬಲವಂತದ ಮದುವೆ ಅಥವಾ ಮತಾಂತರವೆಂದು ಸಾಬೀತುಪಡಿಸುವುದಕ್ಕೆ ಇರುವ ಮಾನದಂಡಗಳೇನು? ಎನ್ನುವ ಬಗ್ಗೆ ಸರಕಾರ ಸ್ಪಷ್ಟ ಮಾಹಿತಿ ನೀಡಬೇಕಿದೆ.
ಸರಕಾರಗಳು ರಾಜಕೀಯ, ಸಾಮಾಜಿಕ ವಿಷಯಗಳನ್ನು ಮುಂದಿಟ್ಟುಕೊಂಡು ಅಗತ್ಯವಿರುವ ಕಾನೂನು ರೂಪಿಸುತ್ತವೆ. ಅದು ಸರಿ – ತಪ್ಪು ಎನ್ನುವುದಕ್ಕೆ ಆಗುವುದಿಲ್ಲ. ಆದರೆ ಈ ಬಾರಿ ಲವ್ ಜಿಹಾದಿ ನಿಷೇಧ ವಿಧೇಯಕವನ್ನು ಮಂಡಿಸಿದ್ದೇ ಆದರೆ, ಈ ವಿಧೇಯಕದ ಮೇಲೆ ಸೂಕ್ತ ಚರ್ಚೆಗೆ ಅವಕಾಶ ನೀಡಬೇಕು. ಅದನ್ನು ಬಿಟ್ಟು ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯಿದೆಯನ್ನು ಮಂಡಿಸಿ, 20 ನಿಮಿಷ ಕಳೆಯುವುದರಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧೇಯಕವನ್ನು ಅನುಮೋದನೆ ಪಡೆಯುವುದು ಸರಿಯಲ್ಲ.
ಈ ರೀತಿಯ ಸೂಕ್ಷ್ಮ ವಿಷಯ ಗಳ ಮೇಲೆ ಕಾಯಿದೆ, ಕಾನೂನು ಕಟ್ಟಲೆ ತರುವ ಮೊದಲು ಶಾಸಕಾಂಗದಲ್ಲಿ ಚರ್ಚೆಯಾಗಬೇಕು. ಇಂದು ಪ್ರತಿಷ್ಠೆಗೆ ಬಿದ್ದು ಕಾನೂನು ಜಾರಿಗೊಳಿಸಿ, ಬಳಿಕ ಪೇಚಿಗೆ ಸಿಲುಕುವ ಕೆಲಸವನ್ನು ಸರಕಾರಗಳು ಮಾಡಬಾರದು. ಆದ್ದರಿಂದ ಕರ್ನಾಟಕ ಸರಕಾರ ಪ್ರೀತಿಯ ಜಾಲಕ್ಕೆ ಸಿಲುಕಿ ಜೀವನವನ್ನು ಅಪಾಯಕ್ಕೆ ಒಡ್ಡುವ ಯುವತಿಯರನ್ನು ರಕ್ಷಿಸಲು ಮುಂದಾಗಿರುವುದು ಎಷ್ಟು ಸರಿಯೋ, ಆ ಕಾಯಿದೆಯ ಬಗ್ಗೆ ಪ್ರತಿಪಕ್ಷಗಳು ವ್ಯಕ್ತಪಡಿಸುತ್ತಿರುವ ಅನುಮಾನಗಳೂ ಅಷ್ಟೇ ಸರಿಯಾಗಿದೆ.
ಆದ್ದರಿಂದ ಒಂದು ವೇಳೆ ಜಂಟಿ ಅಧಿವೇಶನದಲ್ಲಿ ಈ ವಿಧೇಯಕವನ್ನು ತಂದರೆ ಅದಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯ ಚರ್ಚೆಯಾಗದೇ ಪಾಸ್ ಆಗಬಾರದು.