Friday, 8th November 2024

ಭಾಷಾಪ್ರೀತೆಗೆ ಪ್ರಿಯತಮನನ್ನೇ ಬಿಟ್ಟ ಹುಡುಗಿ !

ನೂರೆಂಟು ವಿಶ್ವ

vbhat@me.com

ಕೆಲ ವರ್ಷಗಳ ಹಿಂದೆ , ನಮ್ಮ ಪತ್ರಿಕೆಯಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಮೈಸೂರಿನ ಹುಡುಗ, ಬೆಂಗಳೂರಿನ ಹುಡುಗಿ ಯನ್ನು ಪ್ರೀತಿಸಿದ್ದಾಳೆ. ಎಂಟು ತಿಂಗಳು ಇಬ್ಬರೂ ಹಲವು ಪ್ರೇಮ ಪತ್ರಗಳನ್ನು ಬರೆದುಕೊಂಡಿದ್ದಾರೆ. ದಿನವೂ ತಾಸುಗಟ್ಟಲೇ ಚಾಟ್ ಮಾಡಿದ್ದಾರೆ. ಇಬ್ಬರೂ ಸದ್ಯದಲ್ಲಿಯೇ ಮದುವೆಯಾ ಗುವುದೆಂದು ತೀರ್ಮಾನಿಸಿದ್ದಾರೆ. ಇಬ್ಬರ ಮದುವೆಗೆ ಎರಡೂ ಕಡೆಯವರು ಒಪ್ಪಿದ್ದಾರೆ.

ಅದೊಂದು ಸಹಜ ಪ್ರೇಮ ಪ್ರಕರಣ. ಮದುವೆಗೆ ಇನ್ನು ಎರಡು ತಿಂಗಳು ಇರುವಾಗ ಅದೇನಾಯಿತೋ ಗೊತ್ತಿಲ್ಲ, ಇಬ್ಬರೂ ಪರಸ್ಪರ ಬೇರೆಯಾಗಿದ್ದಾರೆ. ಇಬ್ಬರ ತಂದೆ-ತಾಯಂದಿರು ಹುಡುಗ-ಹುಡುಗಿಯನ್ನು ಕುಳ್ಳಿರಿಸಿ ಬುದ್ಧಿ ಹೇಳಿದ್ದಾರೆ. ಆದರೆ ಪ್ರಯೋಜನವಾಗಿಲ್ಲ. ಅಂತಿಮವಾಗಿ, ಇಬ್ಬರೂ ದೂರ ವಾಗಲು, ಪರಸ್ಪರರನ್ನು ಮರೆಯಲು ನಿರ್ಧರಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ವಿಲಕ್ಷಣ ಪ್ರಸಂಗ, ಇಬ್ಬರ ಮನೆ ಮಂದಿ ತಮ್ಮ ಬಂಧು-ಬಾಂಧ ವರಿಗೆ, ಆಪ್ತೇಷ್ಟರಿಗೆ ಈ ಪ್ರಸಂಗ ಹೇಳಿದರೆ, ಅವರಿಗೆ ನಂಬಲು ಆಗುತ್ತಿಲ್ಲ.

ಎಲ್ಲರಿಂದ ‘ಹೀಗೂ ಉಂಟೇ?’ ಎಂಬ ಉದ್ಗಾರ. ಅವರಿಬ್ಬರ ಪ್ರೀತಿ ಬ್ರೇಕ್ ಆಗಲು ಮುಖ್ಯ ಕಾರಣ, ಭಾಷೆ. ಅಂದರೆ ಅವಳದೇ ಬೇರೆ ಭಾಷೆ ಹಾಗೂ ಇವನದೇ ಬೇರೆ ಭಾಷೆ ಎಂದಲ್ಲ. ಇಬ್ಬರದೂ ಒಂದೇ ಭಾಷೆ. ಇಬ್ಬರದೂ ಮನೆ ಮಾತು ಕನ್ನಡವೇ. ಇಬ್ಬರೂ ಕನ್ನಡ-ಇಂಗ್ಲಿಷ್ ಮೀಡಿಯಮ್‌ದಲ್ಲಿ ಓದಿದವರು. ಆದರೂ ಸಮಸ್ಯೆನಾ? ಹೌದು, ಹುಡುಗಿ ವಿಪರೀತ ಎನ್ನುವಷ್ಟು ಭಾಷಾ ಮಡಿವಂತೆ. ಅವಳಿಗೆ ಭಾಷಾ ಶುದ್ಧತೆಯಲ್ಲಿ ಅಪರಿಮಿತ ವಿಶ್ವಾಸ. ಆಡುವ, ಬರೆಯುವ ಭಾಷೆ ಕರಾರುವಕ್ಕಾಗಿ ಇರಬೇಕು ಎಂದು ನಂಬಿದವಳು.

ಒಂದು ತಪ್ಪು ಪದ ಪ್ರಯೋಗ, ತಪ್ಪು ವಾಕ್ಯರಚನೆಯನ್ನೂ ಸಹಿಸುವವಳಲ್ಲ. ಅಲ್ಲಿಯೇ ಸರಿಪಡಿಸುವ ಖಯಾಲಿ. ಹುಡುಗ ಬರೆದ ಪ್ರೇಮ ಪತ್ರದಲ್ಲಿ ಹತ್ತಾರು ಭಾಷಾ ದೋಷಗಳನ್ನು ಗುರುತು ಮಾಡಿ ವಾಪಸ್ ಅವರಿಗೆ ಕಳಿಸುತ್ತಿದ್ದಳು. ಪ್ರತಿ ತಪ್ಪಿಗೂ ಅಡಿ ಟಿಪ್ಪಣಿ, ಷರಾ ಬೇರೆ. ಚಾಟ್ ಮಾಡುವಾಗಲೂ, ಹುಡುಗನ ಪ್ರತಿ ವಾಕ್ಯದಲ್ಲೂ ತಪ್ಪುಗಳನ್ನು ಹುಡುಕಿ ಹುಡುಕಿ ಅವನಿಗೆ ಕಳಿಸುತ್ತಿದ್ದಳು. ಇಬ್ಬರ ನಡುವೆ ನಡೆಯುತ್ತಿದ್ದುದು ಪ್ರೇಮ ಸಲ್ಲಾಪಕ್ಕಿಂತ ಹೆಚ್ಚಾಗಿ ಭಾಷಾ ಯೋಗದ ತಪ್ಪು- ಸರಿಯೇ.

ಆರಂಭದಲ್ಲಿ ಇದು ಚೆನ್ನಾಗಿಯೇ ಇತ್ತು. ಆನಂತರ ಆಕೆ ಹೆಜ್ಜೆ ಹೆಜ್ಜೆಗೆ, ವಾಕ್ಯದಿಂದ ವಾಕ್ಯಕ್ಕೆ ತಪ್ಪುಗಳನ್ನೇ ಹುಡುಕಲಾ ರಂಭಿಸಿದಾಗ, ಅವನಿಗೆ ವಿಪರೀತ ಕಿರಿಕಿರಿಯಾಗಲಾರಂಭಿಸಿತು. ಈ ಬಗ್ಗೆ ಆತ ಅವಳ ಮುಂದೆ ತನ್ನ ಅಸಹನೆ, ನೋವನ್ನು ತೋಡಿಕೊಂಡ. ತನಗಾಗುತ್ತಿರುವ ಮುಜುಗರವನ್ನು ಹೇಳಿದ. ಭಾಷಾ ಪ್ರೇಮದ ಬದಲು, ಪ್ರೇಮದ ಭಾಷೆಯಲ್ಲಿ ಮಾತಾಡು ವಂತೆ ಪರಿಪರಿಯಾಗಿ ಕೇಳಿಕೊಂಡ. ‘ಪ್ರತಿ ಚಾಟ್‌ನ ವಾಕ್ಯದಲ್ಲಿನ ಭಾವನೆಯನ್ನ ಗ್ರಹಿಸು, ಭಾಷೆಯ ಮಡಿತನ ಅಲ್ಲ’ ಎಂಬುದನ್ನು ಸಾರಿಸಾರಿ ಹೇಳಿದ. ಆ ವಾಕ್ಯದಲ್ಲಿರುವ ತಪ್ಪುಗಳನ್ನೂ ಆಕೆ ಪಟ್ಟಿ ಮಾಡಿ ಕಳುಹಿಸಲಾರಂಭಿಸಿದಳು. ಈ ಪದ ಸರಿ ಅಲ್ಲ, ಈ ಪ್ರಯೋಗ ತಪ್ಪು, ಈ ಪದ ಬಳಕೆ ಸಮಂಜಸ ಅಲ್ಲ, ವ್ಯಾಕರಣ ಸರಿ ಇಲ್ಲ, ಈ ಪದವನ್ನು ಹೀಗೆ ಬಳಸಿದರೆ ಈ ಅರ್ಥ ಬರುತ್ತದೆ ಎಂದೆಲ್ಲ ಅವಳು ವಾದಿಸುತ್ತಿದ್ದಳು.

ಇಬ್ಬರ ನಡುವೆ ಈ ವಿಷಯಕ್ಕೆ ಜಗಳವಾಗಲಾರಂಭಿಸಿತು. ಆ ಜಗಳದಲ್ಲೂ ಆಕೆ ‘ಭಾಷಾ ಶುದ್ಧತೆ’ ಎತ್ತಿ ಹಿಡಿಯುತ್ತಿದ್ದಳು. ಇದು ಹುಡುಗನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಾನು ವರಿಸಲಿರುವ ಹುಡುಗಿ ತನ್ನನ್ನು ಇಷ್ಟಪಡುತ್ತಾಳೋ ಅಥವಾ ತನ್ನ ಭಾಷೆಯನ್ನೋ, ವ್ಯಾಕರಣ ಜ್ಞಾನವನ್ನೋ ಎಂಬ ಅನುಮಾನ ಅವನನ್ನು ಕಾಡಲಾರಂಭಿಸಿತು. ಅಲ್ಲದೇ, ತಾನು
ಪ್ರೀತಿಸಿ, ಮದುವೆಯಾಗಲಿರುವವಳು ‘ಲಿಂಗೋಲೀಲಾ’ ಬುದು ಅವನಿಗೆ ಖಾತ್ರಿಯಾಯಿತು.

ಮದುವೆಯಾದ ನಂತರ, ಇಡೀ ಮನೆ ಬಾಷಾಕ್ಲಾಸ್ ಆದರೆ ನನ್ನ ಗತಿಯೇನು ಎಂದು ಅವನಿಗೆ ಅನಿಸಲಾರಂಭಿಸಿತು. ಆತ
ಅವಳ ಈ ಸ್ವಭಾವ, ಪ್ರವೃತ್ತಿಗೆ ಮುಖಕ್ಕೆ ಹೊಡೆದಂತೆ ವಿರೋಧ ವ್ಯಕ್ತಪಡಿಸಿದ. ಆಕೆ ಅಲ್ಲೂ ಅವನ ಭಾಷಾ ಪ್ರಮಾದ
ಹುಡುಕುತ್ತಿದ್ದಳು. ಒಂದು ದಿನ ಆತ Will arrive, I will call you ಎಂಬ ವಾಟ್ಸಪ್ ಸಂದೇಶ ಕಳುಹಿಸಿದ್ದ. ಅದಕ್ಕೆ ಆಕೆ ಆ
ವಾಕ್ಯ ತಪ್ಪು, When I arrive, I will call you ಎಂಬುದು ಸರಿ ಎಂದು ಬರೆದಳು. ಆತನಿಗೆ ಪಿತ್ತ ನೆತ್ತಿಗೇರಿತು.

I didn’t meet anybody ಎಂದು ಬರೆದರೆ, I didn’t meet anybody ದು ಬರೆಯುತ್ತಿದ್ದಳು. I promise I will call you tomorrow ಎಂದು ಆತ ಬರೆದರೆ, I promise I will call you tomorrow ಎಂದು ತಿದ್ದುತ್ತಿದ್ದಳು. ಆತನಿಗೆ ಅವಳ ಜತೆ ವ್ಯವಹರಿಸುವ, ಒಡನಾಡುವ ಆತ್ಮವಿಶ್ವಾಸವೇ ಹೊರಟುಹೋಯಿತು.

ಹಾಗೆಂದು ಆಕೆ ಅವನನ್ನು ಹಂಗಿಸುತ್ತಿರಲಿಲ್ಲ. ಆತನಿಗೆ ಸರಿಯಾದ ಭಾಷೆ ಗೊತ್ತಿಲ್ಲವೆಂದು ಅಣಕಿಸುತ್ತಿರಲಿಲ್ಲ. ಶುದ್ಧಿಯ ಉತ್ಕೃಷ್ಟತೆಯ ಗೀಳು ಅವಳನ್ನು ಆಳುತ್ತಿತ್ತು. ಬೇರೆ ಯಾರಾದರೂ ಅವಳ ಭಾಷೆಯಲ್ಲಿನ ತಪ್ಪುಗಳನ್ನು ಹುಡುಕಿದರೂ, ಮುಕ್ತವಾಗಿ ಸ್ವೀಕರಿಸುತ್ತಿದ್ದಳು. ಆದರೆ ವಾದ ಮಾಡದೇ, ಪ್ರಶ್ನಿಸದೇ ಸುಲಭಕ್ಕೆ ಒಪ್ಪಿಕೊಳ್ಳುತ್ತಿರಲಿಲ್ಲ. ಇದು ಅವಳಿಗೆ ವ್ಯಸನವಾಗುವಷ್ಟು ವಿಪರೀತವಾಗಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಅವಳು ಯಾವುದೋ ಕಾಯಿಲೆಯಿಂದ ನರಳುತ್ತಿರ ಬೇಕು ಎಂದು ಆತ ಅನುಮಾನಪಡಲಾರಂಭಿಸಿದ.

ಅವಳ ಅತಿಯಾದ ಭಾಷಾ ಪರಿಶುದ್ಧತೆ ಅವನಿಗೆ ಹಿಂಸೆಯಾಗುತ್ತಿತ್ತು. ಇದನ್ನು ಅವಳ ಹತ್ತಿರ ಚರ್ಚಿಸಿದ. ಪ್ರಯೋಜನ ಆಗಲಿಲ್ಲ. ಹಿರಿಯರಿಂದ ಬುದ್ಧಿಮಾತು ಹೇಳಿಸಿದ. ಅದೂ ಪ್ರಯೋಜನ ಆಗಲಿಲ್ಲ. ಹಾಗಂತ ಅವಳು ಲಕ್ಷಣವಂತೆ, ಬುದ್ಧಿವಂತೆ.
ಅವಳ ಬಗ್ಗೆ ಅವನಿಗೆ ಅಗಾಧ ಪ್ರೀತಿಯಿತ್ತು. ಆದರೆ ಆತನಿಗೆ ಅವಳ ಭಾಷಾಪ್ರೇಮ ಕೀಳರಿಮೆಯಾಗಿ ಕಾಡಲಾರಂಭಿಸಿತು.
ಇದು ಅವಳನ್ನೇ ತಿರಸ್ಕರಿಸುವಂತೆ, ದ್ವೇಷಿಸುವಂತೆ ಮಾಡಿತು.

ಕೊನೆಗೆ ಅವರು ಪ್ರತ್ಯೇಕವಾದರು. ಈ ಸುದ್ದಿಯನ್ನು ನನಗೆ ಓದಿ ವಿಷಾದವಾಯಿತು, ಆದರೆ ಆಶ್ಚರ್ಯವಾಗಲಿಲ್ಲ. ಒಂದು ಪ್ರೇಮ ಪ್ರಕರಣ ಈ ರೀತಿ ಕೊನೆಗಾಣಬಾರದಿತ್ತು ಎಂದು ಬೇಸರವಾಯಿತು. ಆದರೆ ಸೋಜಿಗವೆನಿಸಲಿಲ್ಲ. ಭಾಷೆಯ ಬಗ್ಗೆ ಮಿಲಿಟರಿ ಅಽಕಾರಿಗಳಂತೆ, ಶತ ಕರ್ಮಠರಂತೆ ವರ್ತಿಸುವವರನ್ನು ನಾನು ನೋಡಿದ್ದೇನೆ. ಈ ರೀತಿಯ ‘ಲಿಂಗೋಲೀಲಾ’ ಹಾಗೂ ‘ಲಿಂಗೋಲಾಚಾರ್ಯ’ರ ಕೈಯಲ್ಲಿ ನಾನೂ ನರಳಿದ್ದೇನೆ. ‘ಷ’ ಕಾರ, ‘ಸ’ಕಾರ ಸರಿಯಾಗಿ ಉಚ್ಚರಿಸದವರಿಗೆ ಛಡಿಯೇಟು ಕೊಟ್ಟವರನ್ನು ನೋಡಿದ್ದೇನೆ.

ನಾನು ‘ಏಶಿಯನ್ ಕಾಲೇಜ್ ಆಫ್ ಜರ್ನಲಿಸಂ’ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುವಾಗ ನನಗೊಬ್ಬ ಬಾಸ್ ಇದ್ದರು. ಅವರು ಆ ಕಾಲೇಜಿನ ಡೀನ್ ಆಗಿದ್ದರು. ಅವರ ಹೆಸರು ಜ್ಯೋತಿ ಸನ್ಯಾಲ (ಬಂಗಾಳಿ ಮತ್ತು ಗಂಡಸು). ಈ ಮನುಷ್ಯ ‘ದಿ ಸ್ಟೇಟ್ಸ ಮನ್’ ಪತ್ರಿಕೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿದವರು. ಒಂದು ಸಣ್ಣ ಪುಟ್ಟ ತಪ್ಪನ್ನು ಕೂಡ ಸಹಿಸದವರು. ಅವರನ್ನು ಕಂಡರೆ ಯಾರಿಗೂ ಆಗುತ್ತಿರಲಿಲ್ಲ. ಅಲ್ಪ ವಿರಾಮ, ಪೂರ್ಣ ವಿರಾಮ ಚಿಹ್ನೆ ಸರಿಯಾದ ಜಾಗದಲ್ಲಿ ಇಡದಿದ್ದರೆ ರೇಗುತ್ತಿದ್ದರು.

ಆ ಪತ್ರಿಕಾಲಯದಲ್ಲಿ ಅವರನ್ನು ಆಧುನಿಕ ಶೇಕ್ಸಪಿಯರ್ ಎಂದು ಎಲ್ಲರೂ ಗೇಲಿ ಮಾಡುತ್ತಿದ್ದರು. ಜ್ಯೋತಿ ಅದಕ್ಕೆಲ್ಲ ತಲೆ
ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಭಾಷಾ ಶುದ್ಧಿಗಿಂತ ಬೇರೆ ಶುದ್ಧಿ ಇದೆಯೆಂಬುದನ್ನು ಅವರು ಒಪ್ಪುತ್ತಿರಲಿಲ್ಲ. ಭಾಷೆಯ ವಿಷಯದಲ್ಲಿ ಮಹಾ ಜಿಗುಟ. ಯಾರಾದರೂ ಮಾತಾಡುವಾಗ ತಪ್ಪು ವ್ಯಾಕರಣ ಪ್ರಯೋಗ ಮಾಡಿದರೆ, ಅದನ್ನು ಅಲ್ಲಿಯೇ ತಿದ್ದುತ್ತಿದ್ದರು. ಇದರಿಂದ ಬೇರೆಯವರಿಗೆ ಮುಜುಗರವಾಗಬಹುದು, ಕಿರಿಕಿರಿ ಯಾಗಬಹುದು ಎಂಬುದನ್ನು ಸಹ ಲೆಕ್ಕಿಸುತ್ತಿರ ಲಿಲ್ಲ. ಭಾಷೆಯ ವಿಷಯದಲ್ಲಿ ಅವರು ಯಾವುದೇ ರಾಜಿಗೂ ಸಿದ್ಧರಿರಲಿಲ್ಲ.

ಒಮ್ಮೆ ಏಶಿಯನ್ ಕಾಲೇಜಿಗೆ ಕರ್ನಾಟಕ ಹೈ ಕೋರ್ಟಿನ ನ್ಯಾಯಮೂರ್ತಿಗಳನ್ನು ಅತಿಥಿ ಉಪನ್ಯಾಸಕ್ಕೆ ಆಹ್ವಾನಿಸಲಾಗಿತ್ತು. ನ್ಯಾಯಮೂರ್ತಿಗಳು ಪಾಠ ಮುಗಿಸಿ ಬಂದು ಜ್ಯೋತಿ ಸನ್ಯಾಲ್ ಅವರ ಜತೆಗೆ ಲೋಕಾಭಿರಾಮ ಮಾತನಾಡುತ್ತಿದ್ದರು.
ನ್ಯಾಯಮೂರ್ತಿಗಳು ತಮ್ಮ ಮಾತಿನ ಮಧ್ಯೆ I didn’t meet anybody ಎಂದು ಹೇಳಿದರು. ಅದಾದ ಬಳಿಕ ಮತ್ತೊಂದು ಸಂದರ್ಭದಲ್ಲಿ one of mybook ಎಂದು ಹೇಳಿದರು. ಜ್ಯೋತಿ ಸನ್ಯಾಲ್ ಅವರಿಗೆ ಏನನಿಸಿತೋ ಏನೋ, ‘ಜಸ್ಟೀಸ್, ನೀವೇ ಈ ಥರ ಕ್ಷುಲ್ಲಕ ಪ್ರಮಾದ ಮಾಡಿದರೆ ಹೇಗೆ ? one of my friend ಎಂದು ಹೇಳಬಾರದು, ಅದು ತಪ್ಪು. one of my friends ಎಂದು ಹೇಳಬೇಕು. ಹಲವು ಸ್ನೇಹಿತರ ಪೈಕಿ ಒಬ್ಬರು ಎಂದರ್ಥ.

ಟ್ಞಛಿಟ್ಛ ಎಂಬ ಪ್ರಯೋಗ ಮಾಡಿದಾಗ ಮುಂದಿನ ಪದ ಬಹುವಚನದಲ್ಲಿರಬೇಕು’ ಎಂದು ಸಣ್ಣ ಲೆಕ್ಚರ್ ಕೊಟ್ಟರು. ಜಡ್ಜ್ ಸಾಹೇಬರು ಏನೆಂದುಕೊಳ್ಳಬಹುದು ಎಂಬುದನ್ನೂ ಜ್ಯೋತಿ ಲೆಕ್ಕಿಸಲಿಲ್ಲ. ನ್ಯಾಯಮೂರ್ತಿಗಳ ಮುಖ ಹಳ್ಳಹುಳ್ಳಗಾಗಿತ್ತು. ಪ್ರಾಯಶಃ ಅವರಿಗೆ ಯಾರೂ ಆ ರೀತಿ ಪಾಠ ಮಾಡಿರಲಿಕ್ಕಿಲ್ಲ. ಬೇರೆಯವರಾಗಿದ್ದರೆ ನ್ಯಾಯಮೂರ್ತಿಗಳ ಜತೆ ಯಾಕೆ ವಾದ-ವಿವಾದ ಎಂದು ಯೋಚಿಸುತ್ತಿದ್ದರು.

ನ್ಯಾಯಮೂರ್ತಿಗಳ ಭಾಷೆ ಬಗ್ಗೆ ಯಾಕೆ ತೀರ್ಪು ಕೊಡಬೇಕೆಂದು ಸುಮ್ಮನಾಗುತ್ತಿದ್ದರು. ಒಂದು ವೇಳೆ ನ್ಯಾಯಮೂರ್ತಿ ಬದಲು ಮುಖ್ಯಮಂತ್ರಿ ಅಥವಾ ರಾಷ್ಟ್ರಪತಿ ಆ ತಪ್ಪು ಮಾಡಿದ್ದರೂ ಜ್ಯೋತಿ ತಪ್ಪನ್ನು ತಿದ್ದದೇ ಬಿಡುತ್ತಿರಲಿಲ್ಲ. ತನ್ನ ಈ ಸ್ವಭಾವದ ಬಗ್ಗೆ ಬೇರೆಯವರು ಏನು ತಿಳಿಯುತ್ತಾರೋ, ತನ್ನ ಪಾಠದಿಂದ ಇತರರಿಗೆ ಮುಜುಗರವಾಗಬಹುದು ಎಂಬುದನ್ನೂ ಅವರನ್ನು ಪರಿಗಣಿಸುತ್ತಿರಲಿಲ್ಲ.

ಭಾಷಾ ಶುದ್ಧಿ ಮುಂದೆ ಬೇರೆಲ್ಲವೂ ಅವರಿಗೆ ಗೌಣವಾಗಿತ್ತು. ಯಾರಾದರೂ ವಾದಕ್ಕಿಳಿದರೆ, ಜಗಳಕ್ಕೆ ನಿಂತರೆ ಅವರು ಅದಕ್ಕೂ ಸಿದ್ಧ. ಭಾಷೆಗಾಗಿ ಅಷ್ಟೂ ಮಾಡದಿದ್ದರೆ ಹೇಗೆ? ಒಮ್ಮೆ ಗಣ್ಯರೊಬ್ಬರು ಜ್ಯೋತಿ ಸನ್ಯಾಲ್ ಅವರನ್ನು ಕಾರ್ಯಕ್ರಮ ವೊಂದಕ್ಕೆ ಆಹ್ವಾನಿಸಿದರು. ಆಮಂತ್ರಣ ಪತ್ರ ನೀಡಿದರು. ಜ್ಯೋತಿ ಅದನ್ನು ಮೇಲಿನಿಂದ ಕೆಳಕ್ಕೆ ಎರಡು ಸಲ ಓದಿ, ಅವರ ಮುಂದೆಯೇ ಎಡಿಟ್ ಮಾಡಲಾರಂಭಿಸಿದರು.

ಕನಿಷ್ಠ ಅದರಲ್ಲಿ ಆರೇಳು ತಪ್ಪುಗಳಿದ್ದವು. ‘ನೋಡಿ, ಇಷ್ಟು ತಪ್ಪುಗಳಿರುವ ಆಮಂತ್ರಣ ಪತ್ರ ನೀಡಿದರೆ, ನಿಮ್ಮ ಬಗ್ಗೆ ಎಂಥ
ಭಾವನೆ ಮೂಡಬಹುದು? ಭಾಷೆ ಅಂದರೆ ನೀರು, ಗಾಳಿ, ಪರಿಸರದಷ್ಟೇ ಪವಿತ್ರ. ಪರಿಸರವನ್ನು ಕಾಪಾಡಿದಂತೆ ಭಾಷೆಯನ್ನೂ ಕಾಪಾಡಬೇಕು. ಮಾಲಿನ್ಯ ಕೇವಲ ಪರಿಸರಕ್ಕಷ್ಟೇ ಅಲ್ಲ, ಭಾಷೆಗೂ ಅನ್ವಯವಾಗುತ್ತದೆ’ ಎಂದು ಅವರ ಮುಖಕ್ಕೆ ಹೊಡೆಯು ವಂತೆ ಹೇಳಿದ್ದರು.

ಜ್ಯೋತಿ ಸನ್ಯಾಲ್ ಪ್ರಧಾನಿಯಾಗಿದ್ದರೆ, ‘ಸ್ವಚ್ಛ್ ಭಾರತ ಬದಲು ಸ್ವಚ್ಛ್ ಭಾಷಾ’ ಯೋಜನೆ ಘೋಷಿಸುತ್ತಿದ್ದರೇನೋ ? ಅವರು ಒಬ್ಬ ವ್ಯಕ್ತಿಯನ್ನು ಅಳೆಯುತ್ತಿದ್ದುದೇ ಅವರು ಉಪಯೋಗಿಸುವ ಭಾಷೆಯಿಂದಾಗಿತ್ತು. ಯಾರಾದರೂ ಕೆಟ್ಟ ಇಂಗ್ಲಿಷ್ ಬಳಸಿ ದರೆ, ಅವರ ವ್ಯಕ್ತಿತ್ವವೂ ಕೆಟ್ಟದ್ದು ಎಂದೇ ಅವರು ಭಾವಿಸುತ್ತಿದ್ದರು. ನನಗೆ ಅವರ ಈ ಭಾಷಾ ಪ್ರೇಮ ಬಹಳ ಇಷ್ಟವಾಗುತ್ತಿತ್ತು. ಆದರೆ ಕೆಟ್ಟ ಭಾಷೆ ಪ್ರಯೋಗಿಸುವವರು ಕೆಟ್ಟವರು ಎಂಬುದನ್ನು ನಾನು ಒಪ್ಪುತ್ತಿರಲಿಲ್ಲ. ಈ ವಿಷಯದ ಬಗ್ಗೆ ನನಗೆ ಅವರಿಗೆ ಆಗಾಗ ವಾದವಾಗುತ್ತಿತ್ತು. ಆದರೆ ಆ ಮನುಷ್ಯ ಈ ಜನ್ಮದಲ್ಲಿ ಬದಲಾಗುವುದಿಲ್ಲ ಎಂಬುದು ಖಾತ್ರಿಯಾದ ನಂತರ ನಾನು ಕೈಚೆಲ್ಲಿದೆ.

ಅವರನ್ನು ಬದಲು ಮಾಡಲು ಮಾಡುವುದಿರಲಿ, ನಿಧಾನವಾಗಿ ನಾನೂ ಅವರಂತೆ ಯೋಚಿಸಲಾರಂಭಿಸಿದ್ದೆ. ಪತ್ರಿಕೆಯಲ್ಲಿ ಸಣ್ಣ ಪುಟ್ಟ ತಪ್ಪುಗಳಾದರೂ, ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅಂದಿನ ಪತ್ರಿಕೆಯದ ದೋಷಗಳ ಪಟ್ಟಿಯನ್ನು ‘ಕನ್ನಡಪ್ರಭ’ದ ಅಂದಿನ ಸಂಪಾದಕರಾದ ವೈಎನ್ಕೆ ಅವರಿಗೆ ಕೊಡುತ್ತಿz. ಅದು ಚಟವಾಗಿ ಪರಿಣಮಿಸಿತು.

ಪ್ರೂ- ರೀಡರ್‌ಗಳಿಗೆ ಒಂದು ಬರಹದ ಲಾಲಿತ್ಯ ಸವಿ ಯಲು ಆಗುವುದೇ ಇಲ್ಲ. ಅವರ ಕಣ್ಣುಗಳು ಬರೀ ಕರಡು ದೋಷಗಳನ್ನೇ ಹುಡುಕುತ್ತಿರುತ್ತವೆ. ನಾನೂ ಅದೇ ರೀತಿ ಎಡಿಟ್ ಮಾಡುತ್ತಾ, ಪ್ರೂಫ್ ರೀಡ್ ಮಾಡುತ್ತಾ ಓದಲಾರಂಭಿಸಿದೆ. ಬರಹದ ಸೊಗಡಿನ ಅನುಭವವನ್ನು ಸವಿಯುವುದಕ್ಕಿಂತ ಭಾಷಾ ಶುದ್ಧಿ ಹಿಂದೆ ಮನಸ್ಸು ಓಡುತ್ತಿತ್ತು. ನಾನೂ ಜ್ಯೋತಿ ಸನ್ಯಾಲ್ ಆಗುತ್ತಿದ್ದೇನೆ ಎಂದು ಅನೇಕ ಸಲ ನನಗೆ ಅನಿಸಿದ್ದುಂಟು.

ದಾರಿಯಲ್ಲಿ ಹೋಗುವಾಗ, ಬರುವಾಗ ಫಲಕಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನು ಕಂಡರೂ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ.
ಜ್ಯೋತಿ ನನ್ನನ್ನು ಆವರಿಸಿಕೊಂಡಿದ್ದರು. ನಾನು ಇದೇ ಸ್ಫೂರ್ತಿಯಿಂದ – ಸರಿಗಮ’ಪದ : ಪದ ಬಳಕೆಗೊಂದು ಹದ
– ಎಂಬ ಪುಸ್ತಕವನ್ನು ಬರೆದೆ. ಅಷ್ಟಕ್ಕೂ ಆ ಪುಸ್ತಕದ ಹಿಂದಿನ ಮನಸ್ಸು ಮತ್ತು ಪ್ರೇರಣೆ ಜ್ಯೋತಿ ಸನ್ಯಾಲ್ ಅವರೇ ಆಗಿದ್ದರು. ಜ್ಯೋತಿ ಅಂದು ಹೊತ್ತಿ ಸಿದ ಕಿಡಿ ಇಂದಿಗೂ ನನ್ನಲ್ಲಿ ಅದು ದೀಪವಾಗಿ ಉರಿಯುತ್ತಿದೆ.

ಯಾರಾದರೂ ಭಾಷೆಯನ್ನು ವಿರೂಪಗೊಳಿಸಿದರೆ, ಕೆಡಿಸಿದರೆ, ತಪ್ಪು ತಪ್ಪಾಗಿ ಬಳಸಿದರೆ, ಅಸಮರ್ಪಕ ಪ್ರಯೋಗ ಮಾಡಿದರೆ ಆ ದೀಪ ಸುಡಬಹುದೇನೋ ಎಂದೆನಿಸುತ್ತದೆ. ಈಗಲೂ ನನ್ನನ್ನು ಈ ಜ್ಯೋತಿ ಆರದಂತೆ ಜಾಗೃತವಾಗಿಟ್ಟಿದೆ
ಎಂದೆನಿಸುತ್ತದೆ. ಈ ಭಾಷಾ ವ್ಯಸನವೆಂಬುದು ವಾಸಿಯಾಗದ ಕಾಯಿಲೆಯಿದ್ದಂತೆ. ಅದು ನೀಡುವ ನೋವಿನ ಆನಂದವೇ ಆನಂದ. ನನಗೆ ಬೆಂಗಳೂರು ಹುಡುಗಿ ಪ್ರೀತಿಯ ಬದಲು ಭಾಷಾ ಪ್ರೀತಿ ಯನ್ನು ಎತ್ತಿ ಹಿಡಿದು, ಮದುವೆಯನ್ನು ಧಿಕ್ಕರಿಸಿದ್ದು ಅಮರ ಪ್ರೇಮದ ಪರಾಕಾಷ್ಠೆಯಂತೆ ಕಾಣುತ್ತದೆ. ಅದು ಭಾಷೆ ಎಂಬ ಕರುಳಬಳ್ಳಿ ನಮ್ಮೊಳಗೇ ಮಲ್ಲಿಗೆಯಾಗುವ ಪರಿ !

ನನಗೆ ಈ ಸಂದರ್ಭದಲ್ಲಿ ನೆನಪಾಗುವುದು ಮತ್ತೊಬ್ಬ ಭಾಷಾ ವ್ಯಸನಿ ರಿಚರ್ಡ್ ಲೆಡರರ್. ಆತ ಜ್ಯೋತಿ ಸನ್ಯಾಲನ ಅಪ್ಪ. ಜ್ಯೋತಿ ಅಲ್ಪಸ್ವಲ್ಪ ವಿನಾಯಿತಿಯನ್ನು ಕೊಡಬಹುದು. ಆದರೆ ಈ ಲೆಡರರ್ ಹಾಗಲ್ಲ, ಭಾಷೆಯ ವಿಷಯದಲ್ಲಿ ಉಗ್ರ ಪ್ರತಾಪಿ. ಯಾರಾದರೂ ತಪ್ಪು ಭಾಷಾ ಪ್ರಯೋಗ ಮಾಡಿದರೆ ಅವರ ಜತೆಗೆ ಜಗಳಕ್ಕೆ ನಿಲ್ಲುತ್ತಿದ್ದ. ಒಮ್ಮೆ ಟ್ರಾಫಿಕ್ ಸಿಗ್ನಲ್‌ನಲ್ಲಿ
ನಿಂತಿದ್ದ ಪೊಲೀಸನೊಬ್ಬ ಲೆಡರರ್‌ಗೆ ಟ್ರಾಫಿಕ್ ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಿದ. ಹಾಗೆ ದಂಡ ವಿಽಸುವಾಗ ರಶೀದಿ
ಯಲ್ಲಿ ಯಾವ ಕಾರಣಕ್ಕೆ ದಂಡ ವಿಽಸಲಾಗಿದೆ ಎಂಬುದನ್ನು ವಿವರಿಸಿದ್ದ.

ಆದರೆ ಆ ವಾಕ್ಯಗಳಲ್ಲಿ ಹತ್ತಾರು ತಪ್ಪುಗಳಿದ್ದವು. ಲೆಡರರ್ ಕೋಪಕ್ಕೆ ಅಷ್ಟೇ ಸಾಕಾಯ್ತು. ‘ನಾನು ಟ್ರಾಫಿಕ್ ನಿಯಮ ಉಲ್ಲಂಸಿದೆ ಎಂದು ನನಗೆ ದಂಡ ವಿಽಸಿದಿರಿ. ಅದರಿಂದ ಸಾರ್ವಜನಿಕರಿಗೆ ಏನೂ ತೊಂದರೆ ಆಗಲಿಲ್ಲ. ಆದರೂ ನನ್ನ ತಪ್ಪಿದೆ ಎಂದು ನಾನು ದಂಡ ಕಟ್ಟಲು ಸಿದ್ಧನಿದ್ದೇನೆ. ಆದರೆ ನೀವು ಬರೆದ ವಾಕ್ಯಗಳಲ್ಲಿ ಹತ್ತಾರು ತಪ್ಪುಗಳಿವೆ. ಈ ಪ್ರಮಾದಕ್ಕೆ ನಾನೂ ನಿಮ್ಮ ಮೇಲೆ ಏಕೆ ದಂಡವನ್ನು ವಿಧಿಸಬಾರದು? ಟ್ರಾಫಿಕ್ ನಿಯಮ ಉಲ್ಲಂಘನೆಯಂತೆ ಭಾಷಾ ನಿಯಮ ಉಲ್ಲಂಘನೆಗೂ ದಂಡ ವಿಧಿಸಬಹುದಲ್ಲ? ಆದ್ದರಿಂದ ನೀವು ನನಗೆ ದಂಡ ಕೊಡಲೇಬೇಕು.’ ಎಂದು ಆ ಪೊಲೀಸನ ಜತೆ ವಾದಕ್ಕಿಳಿದ. ಅಷ್ಟೇ ಅಲ್ಲ, ಆತನಿಂದ ಹಣವನ್ನೂ ಪೀಕಿದ.

ಯಾರೇ ತಪ್ಪು ಭಾಷಾ ಪ್ರಯೋಗ ಮಾಡಲಿ ಲೆಡರರ್ ಜಗಳ ಕಾಯಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಲೆಡರರ್ ಇದ್ದರೆ
ಎಲ್ಲರೂ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದರು. ಇಲ್ಲದಿದ್ದರೆ ಅದನ್ನೇ ದೊಡ್ಡದಾಗಿ ಮಾಡಿ ಪತ್ರಿಕೆಗಳ ಓದುಗರ
ಪತ್ರ ವಿಭಾಗಕ್ಕೆ ಬರೆದು ಮರ್ಯಾದೆ ಹರಾಜು ಹಾಕುತ್ತಿದ್ದ. ಲೆಡರರ್ ಉಪಸ್ಥಿತಿ ಇದೆ ಎಂದು ಗೊತ್ತಾದರೆ ಎಲ್ಲರೂ
ಭಾಷೆಯ ಮೇಲೆ ನಿಗಾ ಇಟ್ಟು ಮಾತನಾಡುತ್ತಿದ್ದರು. ಎಲ್ಲಿ ತಮ್ಮ ಬಾಯಿಂದ ತಪ್ಪು ಬಂದುಬಿಡಬಹುದೋ ಎಂದು ಎಚ್ಚರ
ವಹಿಸುತ್ತಿದ್ದರು. ಪತ್ರಕರ್ತರಿಗೂ ಸಹ ಲೆಡರರ್ ಬಗ್ಗೆ ಭಯ ಇತ್ತು.

ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳಲ್ಲಿ ಭಾಷಾ ಪ್ರಮಾದಗಳಿದ್ದರೆ, ಅದನ್ನು ಎತ್ತಿ ತೋರಿಸಲು ಆತ ಪತ್ರಿಕಾ ಕಚೇರಿಗೇ ಹೋಗುತ್ತಿದ್ದ. ಸಂಪಾದಕರ ಕೊಠಡಿಗೆ ನುಗ್ಗಿ ಪತ್ರಿಕೆಯಲ್ಲಾದ ಪ್ರಮಾದಗಳ ಬಗ್ಗೆ ವಾದ ಮಾಡುತ್ತಿದ್ದ. ಲೆಡರರ್ ಬಂದನೆಂದರೆ ಏನೋ ಪ್ರಮಾದವಾಗಿದೆ ಹಾಗೂ ಜಗಳ ಕಾದಿದೆ ಎಂದೇ ಸುದ್ದಿಮನೆಯಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಭಾಷಾ ವಿಷಯದಲ್ಲಿ ಆತ ಅಷ್ಟು ಕಠೋರ.

ಯಾವುದೇ ರಾಜಿಗೂ ಆತ ಸಿದ್ಧನಿರಲಿಲ್ಲ. ಈ ಲೆಡರರ್ ನಮ್ಮ ಜ್ಯೋತಿ ಸನ್ಯಾಲ್ ಮೇಲೆ ಕೈ ಎಳೆದಿದ್ದರೂ ಎಳೆದಿರಬಹುದು. ಯಾಕೆಂದರೆ ಅವರಿಬ್ಬರಿಗೂ ಭಾಷೆಯ ವಿಷಯದಲ್ಲಿ ಅಷ್ಟೇ ಸಾಮ್ಯವಿತ್ತು. ಇಂತಹ ಹುಚ್ಚು ಹತ್ತಿಸಿಕೊಂಡವರು ಮಾತ್ರ ಭಾಷೆಯ ಪಾವಿತ್ರ್ಯ ಹಾಗೂ ಶುದ್ಧಿ ಬಗ್ಗೆ ಸದಾ ಜಾಗೃತಿ ಹಾಗೂ ಅರಿವನ್ನುಂಟು ಮಾಡಬಲ್ಲರು.

ಕೆಲವರಿಗೆ ಇದು ಅತಿ ಎನಿಸಬಹುದು. ಆ ರೀತಿ ಅತಿ ಇಲ್ಲದಿದ್ದರೆ ಉಳಿದವರಿಗೆ ಅವರ ‘ವ್ಯಸನ’ದ ಮಹತ್ವ ಅರಿವಾಗುವುದಿಲ್ಲ.
ಕೆಲವರು ಸಮಯ ಪಾಲನೆ ಬಗ್ಗೆ ಇಂಥದೇ ಕಟ್ಟುನಿಟ್ಟಿನ ಆಚರಣೆ ಮೈಗೂಡಿಸಿಕೊಂಡಿರುತ್ತಾರೆ. ಒಂದು ನಿಮಿಷ ತಡವಾದರೂ ಮೈಮೇಲೆ ಭೂತ ಬಂದವರ ಹಾಗೆ ವರ್ತಿಸುತ್ತಾರೆ. ಯಮನಷ್ಟೇ ಕಠಿಣವಾಗಿ ನಡೆದುಕೊಳ್ಳುತ್ತಾರೆ.

ನಅವರಲ್ಲಿ ಇರುವುದು ಸಮಯ ಪಾಲನೆಯ ವ್ಯಸನ.