ಸಂಗತ
ವಿಜಯ್ ದರಡಾ
ಕಲೆಯ ಸಾಧ್ಯತೆಗಳಿಗೆ ಮಿತಿಯೇ ಇಲ್ಲ. ಮೊದಲ ವಿಮಾನ ಆಕಾಶದಲ್ಲಿ ಹಾರುವುದಕ್ಕಿಂತ ೪೦೦ ವರ್ಷಗಳ ಮೊದಲೇ ಖ್ಯಾತ ಚಿತ್ರಕಾರ ಲಿಯನಾರ್ಡೋ ಡಾ ವಿಂಚಿ ವಿಮಾನಗಳ ಚಿತ್ರ ಬರೆದಿದ್ದ. ಹೊಟ್ಟೆಯೊಳಗೆ ಭ್ರೂಣ ಹೀಗಿರುತ್ತದೆ ಎಂದು ವೈದ್ಯರು ಹೇಳುವುದಕ್ಕಿಂತ ೪೪೦ ವರ್ಷಗಳ ಹಿಂದೆಯೇ ಅವನು ಭ್ರೂಣದ ಕರಾರುವಾಕ್ಕಾದ ಚಿತ್ರ ಬರೆದಿದ್ದ.
ಪ್ರತಿ ಬಾರಿ ನಾನು ಆಫೀಸಿನ ಕೋಣೆಗೆ ಕಾಲಿಟ್ಟಾಗಲೂ ಕಣ್ಣು ತತ್‌ಕ್ಷಣ ಹೋಗುವುದು ಅಲ್ಲೇ ಗೋಡೆಯ ಮೇಲಿರುವ ಖ್ಯಾತ ಚಿತ್ರಕಾರ ಸೈಯದ್ ಹೈದರ್ ರಾಜಾ ಅವರ ಅದ್ಭುತವಾದ ಪೇಂಟಿಂಗ್ ಕಡೆಗೆ. ಅದರ ಮೇಲೊಂದು ಬೆಲೆ ಕಟ್ಟಲಾಗದ ವಾಕ್ಯ
ಬರೆದಿದೆ… ‘ಬಿಂದು- ಅಪ್ಪಟ ಶೂನ್ಯದ ಅನಂತ ಸಾಧ್ಯತೆಗಳು. ಆ ಪೇಂಟಿಂಗ್ ನೋಡಿದಾಗಲೆಲ್ಲ ನನಗೆ ರಾಜಾ ಸಾಬ್ ನೆನಪಾಗುತ್ತಾರೆ. ಅದರ ಜೊತೆಗೆ, ನನ್ನೊಳಗಿರುವ ಚಿತ್ರ ಕಲಾವಿದ ಕೂಡ ಒಮ್ಮೆ ಅಲ್ಲೇ ಕನಲುತ್ತಾನೆ.
ಕ್ಯಾನ್ವಾಸ್ ಮೇಲೆ ಕುಂಚದಿಂದ ಬಣ್ಣಗಳ ಜೊತೆ ಆಟವಾಡುವುದು ಹಾಗೂ ಭಾವನೆಗಳನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವುದು ಯಾವಾಗಲೂ ನನ್ನನ್ನು ಶಾಂತಗೊಳಿಸುವ ಎರಡು ಹವ್ಯಾಸಗಳು. ಅರೆ, ಇವನೇಕೆ ಇದ್ದಕ್ಕಿದ್ದಂತೆ ಈ ವಾರ ಚಿತ್ರಕಲೆ ಮತ್ತು ಕವಿತೆಯ ಬಗ್ಗೆ ಮಾತನಾಡಲು ತೊಡಗಿದ್ದಾನೆ ಎಂದು ಆಶ್ಚರ್ಯವಾಗುತ್ತಿದೆಯೇ? ಏಪ್ರಿಲ್ ೧೫ರಂದು ‘ವಿಶ್ವ ಕಲೆ ದಿನ ಆಚರಿಸಲಾಯಿತು. ಕಲೆಯಿಲ್ಲದೆ ನಮ್ಮ ಜೀವನ ಪರಿಪೂರ್ಣವಾಗಲು ಸಾಧ್ಯವಿಲ್ಲ.
ಕಲೆಯಿಲ್ಲದ ಜಗತ್ತನ್ನೂ, ಬದುಕನ್ನೂ ಮನುಷ್ಯ ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಲೆ ಬೇರೆ ಬೇರೆ ರೂಪದಲ್ಲಿ ನೆಲೆ ಕಂಡುಕೊಂಡಿರುತ್ತದೆ. ಕೆಲವರಿಗೆ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ, ಇನ್ನು ಕೆಲವರಿಗೆ ಅದನ್ನು ವ್ಯಕ್ತಪಡಿಸಲು ಬರುವುದಿಲ್ಲ! ರಾಜಸ್ಥಾನದ ಹಳ್ಳಿಗಳಲ್ಲಿ ಹಸುವಿನ ಸಗಣಿಯಿಂದ ಚಿತ್ರಿಸುವ ‘ಮಾಂಡನಾ ಕಲೆಯಿಂದ ಹಿಡಿದು
ದೀಪಾವಳಿ ಮೊದಲಾದ ಹಬ್ಬ ಹರಿದಿನಗಳಲ್ಲಿ ಹೆಂಗಳೆಯರು ಬಿಡಿಸುವ ರಂಗೋಲಿಯವರೆಗೆ ಎಲ್ಲವೂ ಕಲೆಯ ಅಭಿವ್ಯಕ್ತಿಯೇ ಆಗಿವೆ. ಸ್ವತಃ ನನಗೂ ಆ ಅನುಭವವಿದೆ.
ನಾನು ಚಿತ್ರ ಬರೆಯುವಾಗ ಅಥವಾ ಖಾಲಿ ಹಾಳೆಯ ಮೇಲೆ ಕವಿತೆ ಬರೆಯಲು ಕುಳಿತಾಗ ನನ್ನೊಳಗಿನ ಸೃಜನಶೀಲತೆ ಅಪ್ರಯತ್ನ ಪೂರ್ವಕವಾಗಿ ಹೊರಗೆ ಹರಿಯತೊಡಗುತ್ತದೆ. ಜಗತ್ತಿನ ಅನೇಕ ಪ್ರತಿಭಾವಂತ ಕಲಾವಿದರ ಜೊತೆ ವೈಯಕ್ತಿಕವಾಗಿ ಒಡನಾಡಿದ ಭಾಗ್ಯ ಕೂಡ ನನ್ನದು. ಕವಿ ಸುರೇಶ್ ಭಟ್ ಅವರ ಕವಿತೆಗಳನ್ನು ಓದುವಾಗ ನಾನು ಪ್ರತಿ ಬಾರಿಯೂ ಅಚ್ಚರಿಗೆ ಒಳಗಾಗುತ್ತೇನೆ. ಕಲೆಯ ಪ್ರಭಾವವೇ ಹಾಗೆ. ಅದು ಎಲ್ಲಾ ಎಲ್ಲೆಗಳನ್ನೂ ಮೀರಿ ಸಾಗುತ್ತದೆ. ಮಕ್ಬೂಲ್ ಫಿದಾ ಹುಸೇನ್ ರಚಿಸಿದ ಸುಪ್ರಸಿದ್ಧ ಪಾಂಡುರಂಗನ ಚಿತ್ರವನ್ನು ನೋಡಿದರೆ ಅದರಲ್ಲಿ ಎಷ್ಟು ಆಳವಾದ ಭಾವನೆಗಳು ತುಂಬಿವೆಯೆಂಬುದು ನಿಮಗೆ ಗೋಚರಿಸು ತ್ತದೆ.
ನಾವು ಕಣ್ಣಿನಲ್ಲಿ ನೋಡಿರದ ಸಂಗತಿಯನ್ನು ನಮ್ಮ ಅನುಭವಕ್ಕೆ ದಕ್ಕಿಸಿಕೊಡುವ ಅನುಪಮವಾದ ಅಸೀಮ ಶಕ್ತಿ ಕಲೆಗಿದೆ. ಹೇಗೆ ನೀವು ಸೊನ್ನೆಯ ಹಿಂದೆ ಪ್ರತಿ ಬಾರಿ ಒಂದು ಸಂಖ್ಯೆಯನ್ನು ಸೇರಿಸಿದಾಗಲೂ ಆ ಸಂಖ್ಯೆಯ ಮೌಲ್ಯ ಭಾರೀ ಪ್ರಮಾಣದಲ್ಲಿ ಏರುತ್ತಾ ಹೋಗುತ್ತದೆಯೋ ಹಾಗೆಯೇ ಕಲೆಯ ಸಾಧ್ಯತೆಗಳಿಗೂ ಕೂಡ ಮಿತಿಯಿಲ್ಲ. ‘ಬಿಂದು ಚಿತ್ರದಲ್ಲಿ ರಾಜಾ ಸಾಬ್ ಇದನ್ನು ತೋರಿಸಿಕೊಟ್ಟಿ ದ್ದಾರೆ. ಅದರಲ್ಲಿ ಅಪ್ಪಟ ಶೂನ್ಯದ ಅನಂತ ಸಾಧ್ಯತೆಗಳನ್ನು ಅವರು ಹೇಳಿದ್ದಾರೆ.
ರಾಜಾ ರವಿ ವರ್ಮಾ ಅವರು ದೇವರು ಹಾಗೂ ದೇವತೆಗಳ ಚಿತ್ರಗಳನ್ನು ತಮ್ಮ ಕಲ್ಪನೆಯಿಂದಲೇ ರಚಿಸಿದ್ದಾರೆ. ಹಿಂದೂ ದೇವಾನುದೇವತೆಗಳ ಚಿತ್ರಗಳನ್ನು ಹಾಗೆ ಕಲಾವಿದನೊಬ್ಬ ರಚಿಸಿದ್ದು ಅದೇ ಮೊದಲು. ಇಂದಿಗೂ ನಾವು ರವಿವರ್ಮನ
ಕಲ್ಪನೆಯ ಚಿತ್ರಗಳಲ್ಲೇ ದೇವರನ್ನು ಕಲ್ಪಿಸಿಕೊಳ್ಳುತ್ತಿದ್ದೇವೆ. ಜಗತ್ತಿನಾದ್ಯಂತ ಅವರು ರಚಿಸಿದ ದೇವರ ಚಿತ್ರಕ್ಕೆ ಪೂಜೆ
ಸಲ್ಲುತ್ತಿದೆ.
ಕೋವಿಡ್ ಸಮಯದಲ್ಲಿ ಕಲೆಯ ಮಹತ್ವ ನನಗೆ ಇನ್ನೂ ಚೆನ್ನಾಗಿ ಅರ್ಥವಾಯಿತು. ಬಹುತೇಕ ಎಲ್ಲರೂ ಆಗ ಮನೆಯೊಳಗೇ ಬಂಧಿಯಾಗಿದ್ದಂತೆ ನಾನು ಕೂಡ ನಾಲ್ಕು ಗೋಡೆಯೊಳಗೆ ಸೇರಿಕೊಂಡಿದ್ದೆ. ಸಾಂಕ್ರಾಮಿಕ ರೋಗದ ಭಯ ನಮ್ಮನ್ನೆಲ್ಲ ಮುತ್ತಿಕೊಂಡಿತ್ತು. ಒಂಟಿತನ ನಮ್ಮ ಮೇಲೆ ದುಷ್ಪರಿಣಾಮ ಬೀರುತ್ತಿತ್ತು. ಅದರಿಂದ ಪಾರಾಗಲು ನಾನು ಚಿತ್ರಕಲೆ ಹಾಗೂ ಕವಿತೆಯ ಮೊರೆ ಹೋಗಿದ್ದೆ. ಕೋವಿಡ್ ಅವಽಯುದ್ದಕ್ಕೂ ನನ್ನನ್ನು ಕಾಪಾಡಿದ್ದು ಇವೇ ಚಿತ್ರಗಳು ಹಾಗೂ ಕವಿತೆಗಳು. ಸಾಮಾನ್ಯ ದಿನಗಳಲ್ಲೂ ಕೂಡ ನಾನೆಷ್ಟೇ ಬ್ಯುಸಿಯಿದ್ದರೂ ಕಲಾ ಜಗತ್ತಿನೊಂದಿಗೆ ನನ್ನ ಅನುಸಂಧಾನ ಇದ್ದೇ ಇರುತ್ತದೆ.
ಕೋವಿಡ್ ಶುರುವಾಗುವುದಕ್ಕೆ ಮೂರು ತಿಂಗಳ ಮೊದಲು ನಾನೊಂದು ಚಿತ್ರಕಲೆಯ ವರ್ಕ್‌ಶಾಪ್ ಆಯೋಜಿಸಿದ್ದೆ. ಅದಕ್ಕೆ ದೇಶದ ಎಲ್ಲೆಡೆಯಿಂದ ಪ್ರಸಿದ್ಧ ಕಲಾವಿದರು ಬಂದಿದ್ದರು. ತಡೋಬಾ ರಾಷ್ಟ್ರೀಯ ಉದ್ಯಾನದ ಮುಕ್ತವಾದ ಪ್ರಶಾಂತ ಮತ್ತು ಹಚ್ಚ ಹಸುರಿನ ವಾತಾವರಣದ ನಡುವೆ ಆ ವರ್ಕ್‌ಶಾಪ್ ನಡೆದಿತ್ತು. ನಾವೆಲ್ಲರೂ ಅಲ್ಲಿ ಪ್ರಕೃತಿಯ ವರ್ಣವೈಭವವನ್ನು ನಮ್ಮದೇ ಆದ ಬಣ್ಣಗಳಲ್ಲಿ ಸೆರೆಹಿಡಿದಿದ್ದೆವು. ಬದುಕಿನಲ್ಲಿ ಕಲೆ ಎಷ್ಟು ಮುಖ್ಯ ಎಂಬುದನ್ನು ಹೇಳುವುದಕ್ಕಾಗಿ ನಾನು ಈ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ!
ಇನ್ನೊಂದು ವಿಶಿಷ್ಟವಾದ ಸಂಗತಿ ಏನೆಂದರೆ, ಕಲೆ ಯಾವ ರೂಪದಲ್ಲಾದರೂ ಇರಲಿ, ಅದು ಪ್ರೀತಿಯೊಂದಿಗೆ ನೇರವಾದ ಸಂಪರ್ಕ ಹೊಂದಿರುತ್ತದೆ. ಪ್ರೀತಿಯ ಭಾವನೆಗಳು ಇಲ್ಲದೆ ಬಣ್ಣದಿಂದ ಅದ್ಭುತಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಒಬ್ಬ ಕಲಾವಿದನಿಗೆ ಪರಿಶುದ್ಧತೆ, ಸರಳತೆ, ದೂರದೃಷ್ಟಿತ್ವ, ಪ್ರಾಮಾಣಿಕತೆ ಹಾಗೂ ಕ್ಷಮಾಶೀಲತೆಯ ಗುಣಗಳು ತುಂಬಾ ಮುಖ್ಯ. ಇವುಗಳಿಲ್ಲದೆ ನಿಜವಾದ ಕಲೆ ಹೊರಹೊಮ್ಮುವುದಿಲ್ಲ. ಹೇಗೆ ನಾವು ದೇವಸ್ಥಾನದೊಳಗೆ ಅಥವಾ ಮನೆಯ ಪೂಜಾ ಮಂದಿರ ದೊಳಗೆ ಪ್ರವೇಶಿಸುವಾಗ ನಮ್ಮೊಳಗೊಂದು ಪರಿಶುದ್ಧತೆ ಮತ್ತು ವಿನೀತ ಭಾವ ಬೇಕಾಗುತ್ತದೆಯೋ ಹಾಗೆಯೇ ಕಲೆಯನ್ನು ವ್ಯಕ್ತಪಡಿಸಲು ಕೂಡ ಈ ಭಾವನೆಗಳು ಅತ್ಯಗತ್ಯ. ಇಷ್ಟಕ್ಕೂ ಕಲೆ ಕೂಡ ಒಂದು ರೀತಿಯಲ್ಲಿ ಪೂಜೆಯೇ.
ಕಲೋಪಾಸನೆ ಎಂಬ ಪದವೇ ಇದೆಯಲ್ಲ. ಕಲೆಯೆಂಬುದು ಪೂಜೆ ಹಾಗೂ ಧ್ಯಾನ. ಒಬ್ಬ ಕಲಾವಿದ ನಿಮಗೆ ತನ್ನ ಪೇಂಟಿಂಗ್ ತೋರಿಸುತ್ತಿದ್ದರೆ ಆಗ ಅವನ ಕಣ್ಣುಗಳಲ್ಲಿನ ಭಾವನೆಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಪೂಜೆಗೆ ಸರಿಸಮನಾದ ಪರಿಶುದ್ಧ ಭಕ್ತಿ ಅದರಲ್ಲಿ ಕಾಣಿಸುತ್ತದೆ. ಕಲೆಯ ವ್ಯಾಪ್ತಿ ತುಂಬಾ ದೊಡ್ಡದು. ಬಹುಶಃ ಈ ವಿಶ್ವದಷ್ಟೇ ದೊಡ್ಡದು! ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಅದ್ಭುತ ಪ್ರಗತಿ ಆಗಿರುವುದರ ಹೊರತಾಗಿಯೂ ನಾವು ಈ ಸೃಷ್ಟಿಯನ್ನು ಒಂದು ಮರಳಿನ ಕಣದಷ್ಟು ಕೂಡ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ.
ಕಲೆಯ ವಿಷಯದಲ್ಲೂ ಇದು ಅಷ್ಟೇ ನಿಜ. ಉದಾಹರಣೆಗೆ ಚಿತ್ರಕಲೆಯನ್ನೇ ತೆಗೆದುಕೊಳ್ಳಿ. ಜಗತ್ತಿನಲ್ಲಿ ಅಸಂಖ್ಯಾತ ಚಿತ್ರ ಕಲಾವಿದರು ಇದ್ದಾರೆ. ಆದರೂ ಕೂಡ ಪ್ರತಿಯೊಬ್ಬರೂ ಒಂದೇ ವಿಷಯವನ್ನು ಕಲೆಯ ಮೂಲಕ ವ್ಯಕ್ತಪಡಿಸಲು ಹೋದರೆ ಪ್ರತ್ಯೇಕ ಮತ್ತು ವಿಭಿನ್ನವಾದ ಕಲಾಕೃತಿಯನ್ನೇ ರಚಿಸುತ್ತಾರೆ. ಏಕೆಂದರೆ ಪ್ರತಿಯೊಬ್ಬರೂ ನಿರ್ದಿಷ್ಟ ಸಂಗತಿ ಅಥವಾ ವಿಷಯದ ಬಗ್ಗೆ ತಮ್ಮದೇ ಆದ ಕಲ್ಪನೆ ಮತ್ತು ದೃಷ್ಟಿಕೋನ ಹೊಂದಿರುತ್ತಾರೆ.
ಅದಕ್ಕಿಂತ ಹೆಚ್ಚಾಗಿ, ಕಲಾವಿದನೊಬ್ಬನ ಕಲ್ಪನೆಯಲ್ಲಿ ಮೂಡಿಬಂದ ಹೊಚ್ಚ ಹೊಸ ಪರಿಕಲ್ಪನೆಗಳು ಶತಮಾನಗಳ ಬಳಿಕ ನಿಜವಾದ ಉದಾಹರಣೆಗಳೂ ಇವೆ. ವಿಶ್ವ ಕಲಾ ದಿನವನ್ನು ಜಗತ್ಪ್ರಸಿದ್ಧ ಕಲಾವಿದ ಲಿಯನಾರ್ಡೋ ಡಾ ವಿಂಚಿಯ ಹುಟ್ಟುಹಬ್ಬದ ಸ್ಮರಣಾರ್ಥ ಆಚರಿಸುತ್ತಾರೆ. ಡಾ ವಿಂಚಿ ಅಸಾಮಾನ್ಯ ಕಲಾವಿದ. ಅತ್ಯಂತ ಪ್ರಸಿದ್ಧವಾದ ‘ಮೋನಾ ಲಿಸಾ ಕಲಾಕೃತಿಯಿಂದಾಗಿ ಅವರ ಹೆಸರು ಚಿರಸ್ಥಾಯಿ. ಇಂದಿಗೂ ಆ ಕಲಾಕೃತಿ ತನ್ನ ನಿಷ್ಕಲ್ಮಶ ನೈಜ ನಗೆಯಿಂದಾಗಿ ನೋಡುಗರನ್ನು ಸೆಳೆಯುತ್ತಿದೆ.
ಅಂತಹದ್ದೊಂದು ಮುಖಭಾವವನ್ನು ಇವತ್ತಿಗೂ ಯಾವೊಬ್ಬ ಕಲಾವಿದ ಕೂಡ ಸೃಷ್ಟಿಸಲು ಸಾಧ್ಯವಾಗಿಲ್ಲ. ‘ಮೋನಾ ಲಿಸಾ
ಒರಿಜಿನಲ್ ಕಲಾಕೃತಿ ೫೦೦ ವರ್ಷ ಹಳೆಯದು. ಪ್ಯಾರಿಸ್ ನಲ್ಲಿರುವ ಲೋವ್ರೆ ಮ್ಯೂಸಿಯಂನಲ್ಲಿ ಅದರ ಮೂಲ ಕಲಾಕೃತಿ ಇದೆ. ಅದನ್ನು ನೋಡುವ ಅವಕಾಶ ನನಗೆ ಲಭಿಸಿತ್ತು. ವಿಶಿಷ್ಟವಾದ ಗಾಜಿನ ಹಿಂದೆ ಅದನ್ನು ಸಂರಕ್ಷಿಸಿಟ್ಟಿದ್ದಾರೆ. ಆ ಗಾಜು ಒಡೆಯುವುದೂ ಇಲ್ಲ, ಬೆಳಕನ್ನು ಪ್ರತಿ-ಲಿಸುವುದೂ ಇಲ್ಲ. ಮೋನಾ ಲಿಸಾ ಕಲಾಕೃತಿ ನೋಡುತ್ತಿದ್ದಾಗ ನನಗೆ ಲಿಯನಾರ್ಡೋ ಡಾ ವಿಂಚಿಯ ಇನ್ನೊಂದು ಅದ್ಭುತವಾದ ಸೃಷ್ಟಿಯ ಬಗ್ಗೆ ನೆನಪಾಯಿತು. ಅದು ತುಂಬಾ ಜನರಿಗೆ ಗೊತ್ತಿಲ್ಲ. ವಿಲ್ಬರ್ ರೈಟ್ ಮತ್ತು ಓರ್ವಿಲ್ಲೆ ರೈಟ್ ಸಹೋದರರು ೧೯೦೩ರಲ್ಲಿ ಈ ಭೂಮಿಯ ಮೇಲೆ ಮೊಟ್ಟಮೊದಲ ಪ್ರಾಯೋಗಿಕ ವಿಮಾನವನ್ನು ಹಾರಿಸುವುದಕ್ಕಿಂತ ೪೦೦ ವರ್ಷಗಳ ಮೊದಲೇ ಲಿಯನಾರ್ಡೋ ಡಾ ವಿಂಚಿ ತಮ್ಮ ಕುಂಚದಲ್ಲಿ ಹಾರುವ ಯಂತ್ರವನ್ನು ಚಿತ್ರಿಸಿದ್ದರು.
ಒಂದು ಯಂತ್ರ ಗಾಳಿಯಲ್ಲಿ ಹಾರಾಡಬಹುದು ಎಂಬುದನ್ನು ಆ ಸಮಯದಲ್ಲಿ ಜನರು ಊಹೆ ಕೂಡ ಮಾಡುವುದಕ್ಕೆ ಸಾಧ್ಯ ವಿರಲಿಲ್ಲ. ಅಂತಹ ಸಮಯದಲ್ಲಿ ಡಾ ವಿಂಚಿ ವಿಮಾನದ ಸಾಧ್ಯತೆಯನ್ನು ಚಿತ್ರಿಸಿದ್ದರು. ಅದು ಸಾಧ್ಯವಾಗಿದ್ದು ಕಲಾವಿದ ನೊಬ್ಬನ ಕಲ್ಪನಾವಿಲಾಸದ ಶಕ್ತಿಗೆ ಸಾಕ್ಷಿ. ಕಲಾವಿದ ತನ್ನ ಕ್ಯಾನ್ವಾಸ್ ಮೇಲೆ ಕಲ್ಪನೆಯಿಂದ ಚಿತ್ರಿಸಿದ ಹಾರುವ ಯಂತ್ರ ನಾಲ್ಕು ಶತಮಾನಗಳ ನಂತರ ವಾಸ್ತವವಾಯಿತು. ಅದೇ ಲಿಯನಾರ್ಡೋ ಡಾ ವಿಂಚಿ ೧೫೧೧ರಲ್ಲೇ ಗರ್ಭದೊಳಗಿರುವ ಮಗುವಿನ ಚಿತ್ರ ಬರೆದಿದ್ದರು. ಆ ಚಿತ್ರ ಬರೆದ ೪೪೦ ವರ್ಷಗಳ ನಂತರ ವಿಜ್ಞಾನಿಗಳು ಹೆಣ್ಣಿನ ಹೊಟ್ಟೆಯೊಳಗೆ ಭ್ರೂಣ ಹೇಗೆ ಬೆಳೆಯುತ್ತದೆ ಎಂಬುದನ್ನು ಮೊಟ್ಟಮೊದಲ ಬಾರಿ ಜಗತ್ತಿಗೆ ಹೇಳಿದರು.
ವಿಜ್ಞಾನಿಗಳು ಏನು ಹೇಳಿದರೋ ಅದನ್ನೇ ನಾಲ್ಕೂವರೆ ಶತಮಾನಗಳ ಹಿಂದೆ ಡಾ ವಿಂಚಿ ತಮ್ಮ ಚಿತ್ರದಲ್ಲಿ ತೋರಿಸಿದ್ದರು ಎಂಬುದು ಸಾಕಷ್ಟು ಜನರನ್ನು ಅಚ್ಚರಿಗೆ ತಳ್ಳಿತ್ತು. ಅದೇ ಸಮಯದಲ್ಲಿ, ಅಂದರೆ ಸುಮಾರು ಕ್ರಿ.ಶ.೧೫೦೦ ವೇಳೆಯಲ್ಲಿ, ಒಟ್ಟೋ ಮನ್ ಸಾಮ್ರಾಜ್ಯಕ್ಕಾಗಿ ಡಾ ವಿಂಚಿ ಸೇತುವೆಯ ವಿನ್ಯಾಸವನ್ನು ಮಾಡಿಕೊಟ್ಟಿದ್ದರು. ಗಟ್ಟಿಮುಟ್ಟಾದ ಸೇತುವೆಯೊಂದು
ಹೇಗಿರಬೇಕು ಎಂಬುದನ್ನು ಕೂಲಂಕಷವಾಗಿ ಚಿತ್ರದ ಮೂಲಕ ವಿನ್ಯಾಸಗೊಳಿಸಿ ಕೊಟ್ಟಿದ್ದರು. ಆದರೆ ಅಂತಹ ಸೇತುವೆ ನಿರ್ಮಿಸಲು ಆ ಕಾಲದಲ್ಲಿ ಸಾಧ್ಯವಾಗಲಿಲ್ಲ.
ಆದರೆ ಇಂದು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೆಚ್ಚುಕಮ್ಮಿ ಅದೇ ಮಾದರಿಯ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಅಂದರೆ ಡಾ ವಿಂಚಿ ಬರೆದ ಸೇತುವೆಯ ವಿನ್ಯಾಸ ಇವತ್ತಿನ ಆಧುನಿಕ ವಿಜ್ಞಾನಿಗಳ ಚಿಂತನೆಗೆ ಸಮನಾಗಿತ್ತು. ಇದು ಕಲೆಗಿರುವ
ಕಲ್ಪನಾಶಕ್ತಿಯ ವಿಸ್ತಾರ. ಈಗ ಆಧುನಿಕ ಯುಗದಲ್ಲಿ ನಾವು ಮಕ್ಕಳಿಗೆ ಕಲೆಯ ಮಹತ್ವವನ್ನು ಸರಿಯಾಗಿ ತಿಳಿಸುತ್ತಿಲ್ಲ ಎಂಬುದು ನನ್ನ ಕಳವಳ. ಮಕ್ಕಳೆಲ್ಲ ಕಂಪ್ಯೂಟರ್ ಮತ್ತು ಮೊಬೈಲ್ ಮುಂದೆ ಕುಳಿತಿರುತ್ತಾರೆ. ನಿಜ, ಆಧುನಿಕ ಗ್ಯಾಜೆಟ್‌ಗಳಿಗೆ ಅವುಗಳದೇ ಆದ ಪ್ರಯೋಜನಗಳಿವೆ. ಆದರೆ ಅವು ಕಲೆಯ ನೈಸರ್ಗಿಕ ಅಭಿರುಚಿಯ ಜಾಗವನ್ನು ತುಂಬುವುದಕ್ಕೆ ಸಾಧ್ಯವಿಲ್ಲ. ಈಗಂತೂ ಕೃತಕ ಬುದ್ಧಿಮತ್ತೆ ಎಲ್ಲೆಡೆ ವಿಜೃಂಭಿಸುತ್ತಿದೆ.
ಹೀಗಾಗಿ ಮುಂದಿನ ತಲೆಮಾರಿನವರು ತಮ್ಮ ಬದುಕಿನಲ್ಲಿ ಕಲೆಗೆ ಏನಾದರೂ ಮಹತ್ವ ನೀಡುತ್ತಾರೋ ಇಲ್ಲವೋ ಎಂಬುದೇ ಅನುಮಾನ. ಈ ಕಳವಳ ಆಧಾರರಹಿತವಲ್ಲ. ಹೀಗಾಗಿ ನಮ್ಮ ಮಕ್ಕಳು ಕಲೆಯೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿರು ವಂತೆ ಏನಾದರೂ ಮಾಡುವ ಬಗ್ಗೆ ನಾವು ದಾರಿ ಹುಡುಕಬೇಕಿದೆ. ಬಾಲ್ಯದಲ್ಲೇ ಕಲೆಯ ಬೀಜವನ್ನು ಮಕ್ಕಳಲ್ಲಿ ಬಿತ್ತಬೇಕು.
ನೀವೆಲ್ಲರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೀರಿ ಎಂದು ಭಾವಿಸುತ್ತೇನೆ.
(ಲೇಖಕರು ಹಿರಿಯ ಪತ್ರಕರ್ತರು ಮತ್ತು ರಾಜ್ಯಸಭಾ
ಸದಸ್ಯರು)