Friday, 22nd November 2024

M J Akbar Column: ಅಭದ್ರತೆಯ ಕಾಲದಲ್ಲಿ ವಿಮಾನಗಳ ಎತ್ತರದ ಹೋರಾಟ

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್‌

ವಿಮಾನದಲ್ಲಿ ಪ್ರಯಾಣಿಕರಿಗೆ ಕೊಡುವ ನ್ಯಾಪ್ಕಿನ್‌ಗಳು ನಿಮಗೆ ಗೊತ್ತಲ್ಲ? ವಿಸ್ತಾರ ಏರ್‌ಲೈನ್ಸ್‌ನವರು ಸರಿಯಾದ ನ್ಯಾಪ್ಕಿನ್ ಕಂಡುಕೊಳ್ಳುವ ಹೊತ್ತಿಗೆ ಆ ಏರ್‌ಲೈನ್ಸೇ ಬಾಗಿಲು ಬಂದ್ ಮಾಡುವ ಹಂತಕ್ಕೆ ಹೋಗಿ ತಲುಪಿದೆ. ಇದು ದುರದೃಷ್ಟಕರ ಸಂಗತಿ. ಇತ್ತೀಚೆಗೆ ದೆಹಲಿಯಿಂದ ಬೆಂಗಳೂರಿಗೆ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ.

ಅಲ್ಲಿ ಕೊಟ್ಟ ಟೇಬಲ್ ನ್ಯಾಪ್ಕಿನ್ ಈ ಹಿಂದೆ ಕೊಡುತ್ತಿದ್ದ ದಪ್ಪದಾದ ಹತ್ತಿಯ ನ್ಯಾಪ್ಕಿನ್‌ಗಿಂತ ಸಾಕಷ್ಟು ತೆಳುವಾ ಗಿತ್ತು. ನಿಜ ಹೇಳಬೇಕೆಂದರೆ ಅವರು ಕೊಡುತ್ತಿದ್ದ ಹಳೆಯ ನ್ಯಾಪ್ಕಿನ್ ಈ ಕಾಲದ್ದಾಗಿರಲಿಲ್ಲ. ಅದು ಆಧುನಿಕ ವಿಮಾನಗಳಿಗೆ ಹೊಂದದ, ವಿಕ್ಟೋರಿಯನ್ ಕಾಲದ ದೀರ್ಘ ಪ್ರಯಾಣಕ್ಕೆ ಸೂಕ್ತವಾದ ನ್ಯಾಪ್ಕಿನ್ ಆಗಿತ್ತು. ಹೊಸ ನ್ಯಾಪ್ಕಿನ್‌ನಲ್ಲಿ ಅವರು ಬದಲಾವಣೆ ಮಾಡದ ಒಂದೇ ಒಂದು ಸಂಗತಿಯೆಂದರೆ, ಅಂಗಿಯ ಗುಂಡಿಗೆ ನೇತುಹಾಕಿ ಕೊಳ್ಳಲು ಅನುಕೂಲವಾಗುವಂತೆ ಮಾಡಿಟ್ಟ ತೂತಿನ ಕೊಕ್ಕೆ. ಅಂಗಿಗೆ ಕಲೆ ಮಾಡಿಕೊಳ್ಳದೆ ಊಟ-ತಿಂಡಿ ಮಾಡಬೇಕು ಅಂದರೆ ಅದು ಇರಬೇಕು. ಪ್ರಯಾಣಿಕರಿಗೆ ಈ ನ್ಯಾಪ್ಕಿನ್‌ನ ಬದಲಾವಣೆ ಬಹಳ ಸಣ್ಣದು ಅನ್ನಿಸಿ ದರೂ, ಏರ್‌ಲೈನ್ಸ್‌ಗೆ ಅದು ಲಾಂಡ್ರಿ ಬಿಲ್‌ನಲ್ಲಿ ಸಾಕಷ್ಟು ಹಣ ಉಳಿಸಿರುತ್ತದೆ. ಅಂದರೆ, ಈ ಸಲ ವಿಸ್ತಾರ ಮ್ಯಾನೇಜ್‌ ಮೆಂಟ್‌ಗೆ ಲಾಂಡ್ರಿ ಗುತ್ತಿಗೆದಾರನಿಂದ ದೀಪಾವಳಿಯ ಗಿಫ್ಟ್ ಬರುವುದಿಲ್ಲ.‌

ಅದು ಹಾಗಿರಲಿ. ಏರ್ ಇಂಡಿಯಾದಲ್ಲಿ ವಿಸ್ತಾರ ಏರ್‌ಲೈನ್ಸ್ ವಿಲೀನಗೊಳ್ಳುತ್ತಿದೆ. ಅದರೊಂದಿಗೇ ನಮ್ಮ ಮನಸ್ಸಿ ನಲ್ಲಿ ಏಳುವ ಪ್ರಶ್ನೆ: ಸಾಮಾನ್ಯವಾಗಿ ಎಲ್ಲಾ ವಿಲೀನದಲ್ಲೂ ಆಗುವಂತೆ ಇಲ್ಲೂ ಕೆಟ್ಟ ಸಂಗತಿಯಲ್ಲಿ ಒಳ್ಳೆಯ ಸಂಗತಿ ನಾಶವಾಗುತ್ತದೆಯೇ? ಏರ್ ಇಂಡಿಯಾದ ಕಳಪೆ ಸೇವೆಯಲ್ಲಿ ವಿಸ್ತಾರದ ಅದ್ಭುತ ಸೇವೆ
ಕಳೆದುಹೋಗುತ್ತದೆಯೇ? ೧೯೫೩ರಲ್ಲಿ ಜೆಆರ್‌ಡಿ ಟಾಟಾ ಏರ್ ಇಂಡಿಯಾವನ್ನು ಆರಂಭಿಸಿದರು. ಸರಕಾರದ ಕಣ್ಣು ಬೀಳುವವರೆಗೂ ಅದರ ಸೇವೆ ಅದ್ಭುತವಾಗಿತ್ತು. ಒಂದು ದಿನ ಕೇಂದ್ರ ಸರಕಾರಕ್ಕೆ ತನ್ನ ಅಧಿಕಾರಿಗಳು ಆರೋಗ್ಯ ಸಚಿವಾಲಯದಿಂದ ಕಲ್ಯಾಣ ಸಚಿವಾಲಯಕ್ಕೆ ಕಡತಗಳನ್ನು ವರ್ಗಾಯಿಸಿದಷ್ಟೇ ಸುಲಭವಾಗಿ ಏರ್‌ಲೈನ್ಸನ್ನು
ಕೂಡ ಲೀಲಾಜಾಲವಾಗಿ ನಡೆಸಬಲ್ಲರು ಎಂಬ ಕೆಟ್ಟ ಯೋಚನೆ ಬಂತು. ಹೀಗಾಗಿ ಟಾಟಾದವರ ಏರ್ ಇಂಡಿಯಾ ಕಂಪನಿ ರಾಷ್ಟ್ರೀಕರಣವಾಯಿತು. ಬಳಿಕ 2022ರಲ್ಲಿ ಟಾಟಾ ಕುಟುಂಬದವರು ಏರ್ ಇಂಡಿಯಾವನ್ನು ಮತ್ತೆ ಕೊಂಡುಕೊಂಡರು. ಅಷ್ಟೊತ್ತಿಗೆ ಈ ಗುಣಮಟ್ಟದ ಏರ್‌ಲೈನ್ಸ್ ರಾಜಕಾರಣಿಗಳ ಕೈಲಿ ಸಿಲುಕಿ ನಜ್ಜುಗುಜ್ಜಾಗಿತ್ತು. ಟಾಟಾ ಕಂಪನಿ ಮೂರು ವರ್ಷ ಪ್ರಯತ್ನಿಸಿದರೂ ಸುಧಾರಣೆ ತರಲು ಸಾಧ್ಯವಾಗಿಲ್ಲ.

ಇವತ್ತು ಏರ್ ಇಂಡಿಯಾದ ಅನೇಕ ವಿಮಾನಗಳು ಅಕ್ಷರಶಃ ಗಬ್ಬು ನಾರುತ್ತವೆ. ಸೇವೆಯಂತೂ ಕಳಪೆಯ ಮಾನ ದಂಡದಲ್ಲಿ ಇನ್ನೊಂದು ಕೈ ಮೇಲೇ ಇದೆ. ಏರ್ ಇಂಡಿಯಾ ವಿಮಾನದ ಸಿಬ್ಬಂದಿ ನಿಮಗೇನೋ ಉಪಕಾರ ಮಾಡು ತ್ತಿದ್ದೇವೆ ಎಂಬಂತೆ ಅಪ್ಪಟ ಸರಕಾರಿ ನೌಕರರ ರೀತಿಯಲ್ಲಿ ವರ್ತಿಸುತ್ತಾರೆ. ಬಹುಶಃ ಅವರೆಲ್ಲರೂ ಮಾರ್ಕ್ಸ್‌ವಾದಿ ಗಳಿರಬೇಕು. ಹೀಗಾಗಿ ನೀವು ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರೆ ಶತ್ರುಗಳಂತೆ ನೋಡುತ್ತಾರೆ. ಇತ್ತೀಚೆಗೆ ಸಿಂಗಾ ಪುರಕ್ಕೆ ನಮ್ಮ ಜತೆಗೆ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆ ಈ ತಾರತಮ್ಯವನ್ನು ವಿರೋಧಿಸಿ ದೂರು ನೀಡಿದ್ದರು.

ಆದರೆ ಅದನ್ನು ಖಾಸಗಿಯಾಗಿರಿಸಿದ್ದರು. ಬಳಿಕ ಇನ್ನೊಬ್ಬ ಫಸ್ಟ್ ಕ್ಲಾಸ್ ಪ್ರಯಾಣಿಕ ಏರ್ ಇಂಡಿಯಾದ ಕಳಪೆ ಆಹಾರ, ಮುರಿದ ಸೀಟುಗಳು ಹಾಗೂ ಕಡುಕೆಟ್ಟ ಸೇವೆಯ ಬಗ್ಗೆ ದೂರು ನೀಡಿದ ಸಂಗತಿ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಯಿತು. ದಿನಪತ್ರಿಕೆಗಳು ಅದರ ವರದಿ ಪ್ರಕಟಿಸಿದವು. ಏರ್ ಇಂಡಿಯಾ ದವರು ಆತನಿಗೆ ಐದು ಲಕ್ಷ ರುಪಾಯಿ ಟಿಕೆಟ್ ಹಣ ರೀಫಂಡ್ ಮಾಡಿದರು. ಆದರೆ ಸಿಬ್ಬಂದಿಯ ವಿರುದ್ಧ ಏನಾದರೂ ಕ್ರಮ ಕೈಗೊಂಡರೇ? ಎಲ್ಲೂ ಪರಿಶೀಲನೆ ಮಾಡುವ ಗೊಡವೆಗೆ ಹೋಗದೆ ನಾನೇ ಉತ್ತರ ಹೇಳುತ್ತೇನೆ- ‘ಇಲ್ಲ’. ಹಾಗಂತ ವಿಸ್ತಾರದ ಬಗ್ಗೆ ದೂರುಗಳೇ ಇಲ್ಲವೆಂದಲ್ಲ.

ಜಗತ್ತಿನಲ್ಲಿ ದೂರುಗಳು ಇಲ್ಲದ್ದು ಏನೂ ಇಲ್ಲ. ಆದರೆ ವಿಸ್ತಾರ ವಿಮಾನದ ಸಿಬ್ಬಂದಿ ಫ್ರೆಂಡ್ಲಿಯಾಗಿದ್ದಾರೆ. ಅವರಿಗಿ ರುವ ಸಾಕಷ್ಟು ಕಷ್ಟಗಳ ನಡುವೆಯೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಾರೆ (ವಿಮಾನದಲ್ಲಿ ಕೆಲಸ ಮಾಡುವುದು ಗ್ಲಾಮರಸ್ ಎಂದುಕೊಳ್ಳಬೇಡಿ, ಅದರಷ್ಟು ಕಷ್ಟದ ನೌಕರಿ ಬೇರೆ ಇಲ್ಲ). ಒಂದು ಹಂತದಲ್ಲಿ ವಿಸ್ತಾರದ ಸಮಯಪಾಲನೆಯ ದಾಖಲೆ ಇಂಡಿಗೋವನ್ನೂ ಸರಿಗಟ್ಟಿತ್ತು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೇಳಿದ ಸಮಯಕ್ಕೆ ಸರಿಯಾಗಿ ಪ್ರಯಾಣಿಕರನ್ನು ಕರೆದೊಯ್ದು ತಲುಪಿಸುವಲ್ಲಿ ಇಂಡಿಗೋ ಮುಂಚೂಣಿಯಲ್ಲಿದೆ.

ಇಂಡಿಗೋ ಮಾಲೀಕ ರಾಹುಲ್ ಭಾಟಿಯಾಗೆ ಏರ್‌ಲೈನ್ಸನ್ನು ನಡೆಸುವುದು ಹೇಗೆಂಬುದು ಚೆನ್ನಾಗಿ ಗೊತ್ತು. ಅದಕ್ಕಿಂತ ಹೆಚ್ಚಾಗಿ ಆತ ಬಹಳ ಅದೃಷ್ಟವಂತ. ಏಕೆಂದರೆ ಉದ್ಯಮದಲ್ಲಿ ಯಶಸ್ಸು ಸಿಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ಶತ್ರುಗಳು ಸೃಷ್ಟಿಯಾಗುತ್ತಿದ್ದ ಕಾಲದಲ್ಲಿ ಆತ ಬದುಕುತ್ತಿಲ್ಲ. ಮೇಲಾಗಿ, ರಾಷ್ಟ್ರೀಕರಣದ ಕಬಂಧ ಬಾಹುಗಳ ಭಯ ಭಾಟಿಯಾಗೆ ಇಲ್ಲ. ಜನರಿಗೆ ಒಳ್ಳೆಯದನ್ನು ಮಾಡಲು ತಮ್ಮಿಂದ ಮಾತ್ರ ಸಾಧ್ಯ ಎಂದು
ಸರಕಾರಗಳು ನಂಬುತ್ತಿದ್ದ ಕಾಲದಲ್ಲಿ ಏರ್ ಇಂಡಿಯಾ ಯಶಸ್ವಿ ಖಾಸಗಿ ಕಂಪನಿಯಾಗಿತ್ತು ಎಂಬುದೇ ಅದು ಮಾಡಿದ ದೊಡ್ಡ ತಪ್ಪಾಗಿತ್ತು. ಜನರಿಗೆ ಒಳ್ಳೆಯದನ್ನು ಮಾಡುವ ಶಕ್ತಿ ಸರಕಾರಕ್ಕಿರುವುದು ನಿಜ, ಆದರೆ ಆ ಶಕ್ತಿ ಸರಕಾರಕ್ಕೆ ಮಾತ್ರವಷ್ಟೇ ಇಲ್ಲ.

ಏರ್‌ಲೈನ್ಸ್ ವಿಷಯದಲ್ಲಿ ರಾಜಕೀಯ ವರ್ಗದವರು ತೋರಿದ ಅತಿಯಾದ ಆಸಕ್ತಿ ಹಾಗೂ ಉತ್ಸಾಹವೇ ಏರ್ ಇಂಡಿಯಾವನ್ನು ಹಾಳುಗೆಡವಿತು. ಖಾಸಗಿ ಕ್ಷೇತ್ರದಲ್ಲಿ ಆಗಾಗ ಸರಕಾರ ಇಣುಕಿ ನೋಡಿ, ಏನಾದರೂ ಎಡವ ಟ್ಟಾಗುತ್ತಿದ್ದರೆ ನಿಯಂತ್ರಣ ಕ್ರಮಗಳ ಮೂಲಕ ಸರಿಪಡಿಸುವುದು ಇವತ್ತಿಗೂ ಅಗತ್ಯವೇ ಇದೆ. ದೇಶದ
ಸುರಕ್ಷತೆಯ ದೃಷ್ಟಿಯಿಂದ ಇದು ಬಹಳ ಮುಖ್ಯ. ಇದಕ್ಕೆ ಇತ್ತೀಚಿನ ಒಂದು ಉದಾಹರಣೆಯೆಂದರೆ ವಿಸ್ತಾರ ಏರ್‌ಲೈನ್ಸ್ ವಿಷಯದಲ್ಲಿ ಉಂಟಾದ ಭದ್ರತಾ ವೈಫಲ್ಯ.

ಅಲ್ಲಿ ಒಬ್ಬ ಮಹಿಳೆಯ ಹೆಸರಿನಲ್ಲಿ ಬುಕ್ ಮಾಡಿದ ಟಿಕೆಟ್‌ನಲ್ಲಿ ಇನ್ನೊಬ್ಬರು ಪ್ರಯಾಣಿಸಿದ್ದರು. ಅದು ಟಿಕೆಟ್ ಬುಕ್ ಮಾಡಿದ ಮಹಿಳೆಗೆ ತಿಳಿದು, ಆಕೆ ವಿಸ್ತಾರ ಏರ್‌ಲೈನ್ಸ್‌ಗೆ ಇ-ಮೇಲ್‌ನಲ್ಲಿ ದೂರು ನೀಡಿದಳು. ಆದರೆ ಅದಕ್ಕೆ ಉತ್ತರ ಬಂದಿದ್ದು ಎಷ್ಟೋ ದಿನಗಳ ಬಳಿಕ. ಅದರಲ್ಲೂ ‘ನಮ್ಮಿಂದ ಏನೂ ತಪ್ಪಾಗಿಲ್ಲ’ ಎಂಬ ಸ್ಪಷ್ಟನೆಯೇ ಇತ್ತು. ದಾಖಲೆಗಳೊಂದಿಗೆ ಇನ್ನಷ್ಟು ಇ-ಮೇಲ್ ವಿನಿಮಯದ ಬಳಿಕ ಏರ್‌ಲೈನ್ಸ್ ಮೌನಕ್ಕೆ ಜಾರಿತು. ಹಾಗಿದ್ದರೆ ಭದ್ರತೆಯ ಕತೆಯೇನು? ಆ ಮಹಿಳೆಯ ಜಾಗದಲ್ಲಿ ಪ್ರಯಾಣಿಸಿದವರು ಯಾರು? ವಿಸ್ತಾರದ ಕಂಪ್ಯೂಟರ್‌ಗಳು ಈ ಪ್ರಯಾ ಣವನ್ನು ದಾಖಲಿಸಿದ್ದರೆ ಸತ್ಯಾಂಶ ಹೊರಗೆ ಬರಲೇಬೇಕು. ನಾನೂ ಈ ಬಗ್ಗೆ ವಿಚಾರಿಸಲು ಯತ್ನಿಸಿದೆ. ಇನ್ನಷ್ಟು ಮೌನವೇ ಉತ್ತರವಾಗಿತ್ತು.

ಬಹುಶಃ ವಿಮಾನಯಾನದ ದೇವತೆಗಳಿಗೆ ನಾನು ಈ ವಿಷಯದ ಬಗ್ಗೆ ಅಂಕಣ ಬರೆಯುತ್ತೇನೆ ಎಂಬ ಸುದ್ದಿ ಸಿಕ್ಕಿರ
ಬೇಕು. ದೇವರಿಗೆ ಎಲ್ಲದರ ಬಗ್ಗೆಯೂ ಜ್ಞಾನವಿರುತ್ತದೆ. ಹೀಗಾಗಿ ಸೆಪ್ಟೆಂಬರ್ ೨೫ರ ೧೨:೫೮ಕ್ಕೆ ನನಗೆ ಕಂಪ್ಯೂಟರ್ ಜನರೇಟೆಡ್ ಸಂದೇಶವೊಂದು ಮೊಬೈಲಿಗೆ ಬಂದಿತು. CP-AKASAA ಎಂಬ ಐಡಿಯಿಂದ ಅದು ಬಂದಿತ್ತು. “Hi m j, your flight QP 1628 to GOX will be boarding from gate 02. The boarding gate will close 25 mins prior to departure. We look forward to welcoming you on board and enjoy the Akasa experience.” ೧೭:೦೫ಕ್ಕೆ ಎರಡನೇ ಸಂದೇಶ ಬಂತು. ‘ಹಾಯ್ ಎಂ ಜೆ, ನಿಮ್ಮ ಅಕಾಸ ಏರ್ ವಿಮಾನ ಕ್ಯುಪಿ೧೬೨೮ರ ಚೆಕ್ಡ್ ಇನ್ ಬ್ಯಾಗೇಜ್ ಬೆಲ್ಟ್ ನಂ.೨ರಲ್ಲಿ ಬರಲಿದೆ. ನಮ್ಮೊಂದಿಗೆ ಪ್ರಯಾಣಿಸಿ ದ್ದಕ್ಕಾಗಿ ಧನ್ಯವಾದಗಳು. ಪುನಃ ಬನ್ನಿ’.

ಮೊದಲನೆಯದಾಗಿ, ಡಿಯರ್ ಅಕಾಸ ಕಂಪ್ಯೂಟರ್, ದಯವಿಟ್ಟು ನನ್ನನ್ನು ‘ಎಂ ಜೆ’ ಎಂದು ಕರೆಯುವುದನ್ನು ನಿಲ್ಲಿಸು. ಅದೂ ಇಂಗ್ಲಿಷ್‌ನ ಸ್ಮಾಲ್ ಲೆಟರ್‌ನಲ್ಲಿ, ಮಧ್ಯದಲ್ಲಿ ಅನಗತ್ಯವಾಗಿ ಸ್ಪೇಸ್ ಕೊಟ್ಟು! ಹೀಗೆ ನನ್ನ ಇನಿಷಿಯಲ್ ಬಳಸಿ ಕರೆಯುವ ಸದರವಿರುವುದು ನನ್ನ ಸ್ನೇಹಿತರಿಗೆ ಮಾತ್ರ. ಏರೋಪ್ಲೇನ್ ಜತೆಗೆ ಗೆಳೆತನ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ, ಏನಾದರೂ ಸುಧಾರಣೆ ಮಾಡಿಕೊಳ್ಳುವ ಸಾಧ್ಯತೆಯಿದ್ದರೆ ಆಗ ಪ್ರಯಾಣಿಕರಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಸರಿಯಾದ ಪದಗಳನ್ನು ಬಳಕೆ ಮಾಡಿ. ಉದಾಹರಣೆಗೆ, mins ಎಂದು ಅರ್ಥಹೀನ ವಾಗಿ ಬರೆಯುವುದರ ಬದಲು minutes ಎಂದೇ ಬರೆಯಿರಿ. ಇದು ಹೇಗಾದರೂ ಹಾಳಾಗಿ ಹೋಗಲಿ, ಈಗ ಮುಖ್ಯ ವಿಷಯಕ್ಕೆ ಬರೋಣ.

ಅಚ್ಚರಿಯ ಸಂಗತಿ ಏನೆಂದರೆ, ಬೆಂಗಳೂರಿನಿಂದ ಗೋವಾಕ್ಕೆ ತೆರಳಿದ ಆ ವಿಮಾನದಲ್ಲಿ ನಾನು ಇರಲೇ ಇಲ್ಲ. ಟಿಕೆಟ್ ಬುಕ್ ಮಾಡಿ, ಸಾಕಷ್ಟು ದಿನಗಳ ಹಿಂದೆಯೇ ಅದನ್ನು ರದ್ದು ಮಾಡಿದ್ದೆ. ಏನೋ ತಾಂತ್ರಿಕ ಸಮಸ್ಯೆಯಾಗಿ ನಾನು ಟಿಕೆಟ್ ರದ್ದುಪಡಿಸಿದ್ದನ್ನು ಏರ್‌ಲೈನ್ಸ್‌ನ ಕಂಪ್ಯೂಟರ್‌ಗಳು ದಾಖಲು ಮಾಡಿಕೊಂಡಿರಲಿಲ್ಲ ಎಂದು ಭಾವಿಸೋಣ. ಬಹುಶಃ ಟಿಕೆಟ್ ಬುಕ್ ಮಾಡಿದ ಕಂಪನಿಯವರು ಸರಿಯಾಗಿ ಫಾಲೋಅಪ್ ಮಾಡಿ ಲ್ಲದೆ
ಇರಬಹುದು. ಆದರೆ ವಿಷಯ ಅದಲ್ಲ. ಹೇಗೆ ನನ್ನ ಹೆಸರಿನ ಒಬ್ಬ ಪ್ರಯಾಣಿಕ ಈ ವಿಮಾನದಲ್ಲಿ ಗೋವಾಕ್ಕೆ ಹೋಗಿ ತಲುಪಿದ? ಅದೂ ಚೆಕ್ಡ್-ಇನ್ ಬ್ಯಾಗೇಜ್‌ನೊಂದಿಗೆ? ನಿಜವಾಗಿ ಯೂ ಆ ಸೀಟಿನಲ್ಲಿ ಯಾರು ಕುಳಿತು ಪ್ರಯಾಣಿಸಿರಬಹುದು? ನನ್ನ ಹೆಸರಿನದೇ ಇನ್ನೊಬ್ಬ ವ್ಯಕ್ತಿ ಇದ್ದಾನೆ ಎಂದುಕೊಂಡರೆ, ಅವನ ಮೊಬೈಲ್ ನಂಬರ್ ಆದರೂ ಬೇರೆಯಿರಬೇಕಲ್ಲವೇ? ಬಹು ಹಂತದ ಭದ್ರತಾ ತಪಾಸಣೆ ಹಾಗೂ ಚೆಕ್-ಇನ್ ವ್ಯವಸ್ಥೆಯ
ಹಣೆಬರಹ ಏನಾಯಿತು? ಸುಳ್ಳು ಹೆಸರಿನಲ್ಲಿ ಹೇಗೆ ಒಬ್ಬ ಪ್ರಯಾಣಿಕ ಯಾರಿಂದಲೂ ತಡೆಯಲ್ಪಡದೆ ವಿಮಾನವನ್ನು ಹತ್ತಿ, ದಾರಿ ಪೂರ್ತಿ ಪ್ರಯಾಣಿಸಿ, ಇಳಿದೂ ಹೋಗಲು ಸಾಧ್ಯ? ಡಿಯರ್ ವಿಸ್ತಾರ ಮತ್ತು ಅಕಾಸ ಮ್ಯಾನೇಜ್‌ಮೆಂಟ್, ಇದರ ಬಗ್ಗೆ ತನಿಖೆ ನಡೆಯಬೇಕಲ್ಲವೇ? ಅಥವಾ ನೀವು ಕೂಡ ರಾಷ್ಟ್ರೀಕರಣದ ದೇವಾನುದೇವತೆಗಳಿಗೆ ಆಹ್ವಾನ ನೀಡುತ್ತಿದ್ದೀರಾ? ತನ್ಮೂಲಕ ಇನ್ನೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೀರಾ? ನೀವು ಹಾಗೇನಾದರೂ ಮಾಡುತ್ತಿದ್ದರೆ ಈ ಸಲ ಅದು ಅಭದ್ರತೆಯ ಕಾಲದಲ್ಲಿ ಪ್ರಬಲವಾದ ಕಾರಣದಿಂದ
ಕೂಡಿದ ನಡೆಯೇ ಆಗುತ್ತದೆ ಎಂಬುದನ್ನು ಮರೆಯಬೇಡಿ.

ಹೃಷಿಕೇಶದಲ್ಲಿ ಕಂಡ ಭಾರತ

ಬೆಂಗಳೂರಿನಲ್ಲಿ ನಾನು ಭಾಗವಹಿಸಿದ ಕಾರ್ಯಕ್ರಮ ಪುಸ್ತಕ ಬಿಡುಗಡೆಯಾಗಿತ್ತು. ರೊಮೇನಿಯಾದ ರಾಯಭಾರಿ ಡೇನಿಯೇಲಾ ಮೇರಿಯಾನಾ ಸೆಜೊನೊವ್ ಟೇನ್ ಬರೆದ ‘ಟ್ವೆ ಲೈಟ್ಸ್ ಕ್ರೋನಿಕಲ್ಸ್’ ಎಂಬ ಪುಸ್ತಕ. ಆಕೆ ನಿಗೂಢ ಭಾರತದಲ್ಲಿ ತನ್ನನ್ನೇ ತಾನು ಹುಡುಕಿಕೊಳ್ಳಲು ಸಣ್ಣ ವಯಸ್ಸಿನಲ್ಲಿ ಕೈಗೊಂಡ ಪ್ರವಾಸದ ಕುರಿತ ಪುಸ್ತಕವದು. ಇನ್ನೂ ಸಾಕಷ್ಟು ಜನರು ಇಂಥ ಹುಡುಕಾಟ ನಡೆಸಿದ್ದಾರೆ. ಬೇಕಾದಷ್ಟು ವಿದೇಶಿಗರು ಭಾರತದ ನಿಗೂಢ ಲೋಕದಲ್ಲಿ ಸುತ್ತಾಡಿದ್ದಾರೆ. ಆದರೆ ಅವರಲ್ಲಿ ಡೇನಿಯೇಲಾರಂತೆ ಸುಂದರವಾಗಿ ಬರೆಯುವ ಕಲೆಯುಳ್ಳವರು ಬಹಳ ಕಡಿಮೆ. ಹೃಷಿಕೇಶದ ಗಂಗಾ ನದಿಯ ದಡದಲ್ಲಿ ಆಕೆ ಒಬ್ಬ ಯೋಗಿಯನ್ನು ಭೇಟಿಯಾಗುತ್ತಾಳೆ. ಆ ಯೋಗಿ ಸಣ್ಣದೊಂದು ಮಣ್ಣಿನ ಗುಡಿಸಿಲಿನಲ್ಲಿ ವಾಸಿಸುತ್ತಿದ್ದ. ಅದರೊಳಗೆ ಗಾಳಿ ಬೆಳಕು ಬರುತ್ತಿರಲಿಲ್ಲ. ಆತನ ಹೆಸರನ್ನು ಡೇನಿಯೇಲಾ ಬರೆದಿಲ್ಲ.

ಏಕೆಂದರೆ ಹೆಸರಿಗೆ ಮಹತ್ವವಿಲ್ಲ. ಆತ ತನ್ನ ಗುಡಿಸಿಲಿನ ಎದುರಿಗಿರುವ ಸಣ್ಣದೊಂದು ಜಾಗದಲ್ಲಿ ತನಗೆ ಬೇಕಿರುವ ತರಕಾರಿ, ಹಣ್ಣುಗಳನ್ನು ತಾನೇ ಬೆಳೆದುಕೊಂಡು, ಅದನ್ನೇ ತಿಂದು ಜೀವಿಸುತ್ತಿದ್ದ. ರಾಷ್ಟ್ರೀಯ ನಿಯತಕಾಲಿಕೆ ಯೊಂದರ ಮುಖಪುಟದಲ್ಲಿ ಮುದ್ರಿಸಲು ನಿಮ್ಮದೊಂದು ಫೋಟೋ ಬೇಕು, ಈ ಬೈಕ್ ಮೇಲೆ ಕುಳಿತು ಪೋಸು ಕೊಡಿ ಎಂದು ಹೇಳಿದ್ದರೆ ಬಹುಶಃ ಅವನು ನಕ್ಕುಬಿಡುತ್ತಿದ್ದ ಅನ್ನಿಸುತ್ತದೆ. ಕೇಸರಿ ವಸ ಧರಿಸಿದ ಸಣಕಲು ಮನುಷ್ಯ. ಅವನ ಕುಟೀರದ ಗೋಡೆಗಳ ಮೇಲೆ ಈಶ್ವರ ಮತ್ತು ದುರ್ಗಾದೇವಿಯ ಚಿತ್ರಗಳು ಮಾತ್ರವಲ್ಲದೆ ಏಸುಕ್ರಿಸ್ತನ ಚಿತ್ರವೂ ಇತ್ತು. ಅವನು ಡೇನಿಯೇಲಾಗೆ ಭಾರತೀಯ ನಾಗರಿಕತೆಯ ಆಳದಲ್ಲಿರುವ ಸಹಿಷ್ಣುತೆಯ ಬಗ್ಗೆ ಮನಮುಟ್ಟುವಂತೆ ಬೋಧನೆ ಮಾಡಿದ್ದ.

ಭಾರತೀಯ ತತ್ವಶಾಸ್ತ್ರದಲ್ಲಿ ಹೇಗೆ ಎಲ್ಲಾ ಜೀವ ಜಂತುಗಳೂ ಸಮಾನ ಎಂಬುದನ್ನು ತಿಳಿಸಿಕೊಟ್ಟಿದ್ದ. ‘ದೇವರನ್ನು
ನಾವು ಯಾವ ಹೆಸರಿನಿಂದ ಕರೆದರೂ ಅವನು ಒಬ್ಬನೇ ಇರುವುದು. ಹೆಸರು ಏನೇ ಇದ್ದರೂ, ನೋಡಲು ಹೇಗೇ ಇದ್ದರೂ, ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ. ಬುದ್ಧ, ಮಹಾವೀರ, ಏಸುಕ್ರಿಸ್ತ, ಮೊಹಮ್ಮದ್, ವಿಷ್ಣು, ಶಿವ ಎಲ್ಲರೂ ಒಂದೇ ಅನುಪಮ ಶಕ್ತಿಯ ಬೇರೆ ಬೇರೆ ಅವತಾರಗಳು. ಮನುಕುಲವನ್ನು ರಕ್ಷಿಸಲು ಹಾಗೂ ನಮ್ಮನ್ನೆಲ್ಲ ಮುಕ್ತಿಯ ದಾರಿಯಲ್ಲಿ ಕರೆದುಕೊಂಡು ಹೋಗಲೆಂದು ಈ ಅವತಾರಗಳು ಜನ್ಮ ತಾಳಿವೆ’ ಎಂದು ಅವನು ಡೇನಿಯೇಲಾಗೆ ಹೇಳಿದ್ದಾನಂತೆ.

ಪವಿತ್ರ ಗಂಗೆಯ ದಡದಲ್ಲಿ ಜನ್ಮ ತಳೆದ ನಿಜವಾದ ಭಾರತ ಇದು. ನಾವೆಲ್ಲರೂ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ತತ್ವಜ್ಞಾನ ವನ್ನೇ ಆ ಯೋಗಿ ಹೇಳಿದ್ದಾನೆ. ಏಕೆಂದರೆ ನಮ್ಮ ತಾಯ್ನಾಡಿನ ಅಂತಿಮ ಸತ್ಯ ಇದೇ ಆಗಿದೆ.

ಪ್ರಸಿದ್ಧ ಮೊದಲ ಪದಗಳು
ಲಾಸ್ಟ್ ವರ್ಡ್‌ಗಳು ಓದಲು ಮಜವಾಗಿರುತ್ತವೆ. ಏನನ್ನಾದರೂ ಬರೆದು ಮುಗಿಸಿದ ಮೇಲೆ ಕೆಲವರಿಗೆ ‘ಕೊನೆಯ ಮಾತು’ ಬರೆಯುವ ಅಭ್ಯಾಸವಿರುತ್ತದೆ. ಅದು ಸಾಮಾನ್ಯವಾಗಿ ಹರಿತ, ನಿಗೂಢ ಅಥವಾ ಆಸಕ್ತಿ ದಾಯಕವಾಗಿರುತ್ತದೆ. ಪ್ರಪಂಚದಲ್ಲಿ ಆಗಿಹೋದ ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಇಂಥ ಸಾಕಷ್ಟು
ಲಾಸ್ಟ್ ವರ್ಡ್‌ಗಳು ಚಾಲ್ತಿಯಲ್ಲಿವೆ. ನಾನು ಹಾಗೆ ಹೇಳಿಲ್ಲ ಅಥವಾ ಬರೆದಿಲ್ಲ ಎಂದು ಹೇಳಲು ಈಗ ಅವರ‍್ಯಾರೂ ಇಲ್ಲ. ಹೀಗಾಗಿ ಅವುಗಳ ನೈಜತೆಯ ಬಗ್ಗೆ ತೀರಾ ತಲೆಕೆಡಿಸಿಕೊಳ್ಳದೆ, ಓದಿ ಖುಷಿಪಡುವುದಕ್ಕೆ ಅಡ್ಡಿಯಿಲ್ಲ. ಆಸ್ಕರ್ ವೈಲ್ಡ್, ‘ನಾನು ಹಾಗೂ ನನ್ನ ವಾಲ್‌ಪೇಪರ್ ಸಾಯಲು ಪೈಪೋಟಿಗೆ ಬಿದ್ದು ಸೆಣಸಾಡುತ್ತಿದ್ದೇವೆ. ನಮ್ಮಿಬ್ಬರಲ್ಲಿ ಒಬ್ಬರು ಹೋಗಲೇಬೇಕು’ ಎಂದು ನಿಜವಾಗಿಯೂ ಹೇಳಿದ್ದನೇ? ಗೊತ್ತಿಲ್ಲ. ಹೇಳಿದ್ದರೂ ಸರಿ, ಹೇಳಿರಲಿಲ್ಲ ಅಂದರೂ ಸರಿ, ಅವನ ಹೆಸರಿನ ಕೋಟ್ ಈಗಾಗಲೇ ಅಕ್ಷರಗಳಲ್ಲಿದೆ ಮತ್ತು ವಾಲ್‌ಪೇಪರ್ ಗೆದ್ದಿದೆ.

ಇದಕ್ಕಿಂತ ಮಜವಾದ ‘ಮೊದಲ ಮಾತು’ ಆಲ್ಬರ್ಟ್ ಐನ್‌ಸ್ಟೀನ್ ಹೆಸರಿನಲ್ಲಿದೆ. ಅವನು ಹುಟ್ಟಿ ಎರಡು ವರ್ಷಗಳವರೆಗೆ ಒಂದೂ ಮಾತು ಆಡಿರಲಿಲ್ಲವಂತೆ. ಅವನಿಗೆ ಎರಡು ವರ್ಷವಾದಾಗ ತಂಗಿ ಹುಟ್ಟಿದಳಂತೆ. ಮನೆಯವರು ಅವಳನ್ನು ತೋರಿಸಿ ‘ನಿನ್ನ ಜತೆ ಆಟವಾಡಲು ಯಾರು ಬಂದಿದ್ದಾರೆ ನೋಡು’ ಎಂದರಂತೆ. ಆಗ ಐನ್‌ಸ್ಟೀನ್ ಮೊದಲ ಮಾತು ಆಡಿದನಂತೆ: ‘ಆದರೆ ಇದರ ಗಾಲಿಗಳು ಎಲ್ಲಿವೆ?’. ಸುಳ್ಳೋ, ನಿಜವೋ ಗೊತ್ತಿಲ್ಲ. ಆದರೆ ಇದೂ ಅಕ್ಷರಗಳಲ್ಲಿ ದಾಖಲಾಗಿದೆ.

(ಲೇಖಕರು ಹಿರಿಯ ಪತ್ರಕರ್ತರು)