ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ದೊಡ್ಡ ಮಗು ರಚ್ಚೆ ಹಿಡಿದು ಹಟ ಶುರುಮಾಡಿದರೆ ಸುತ್ತಮುತ್ತ ಇರುವವರಿಗೆ ಬಹಳ ಕಿರಿಕಿರಿಯಾಗುತ್ತದೆ. ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುತ್ತಿರುವ ದಿಲ್ಲಿಯ ಪ್ರಭಾವಿ ಗುಂಪು ಇಂದು ತನ್ನ ಹೊಟ್ಟೆಯಲ್ಲಿ ಯಾವ ಪರಿ ಬಿಸಿಗಾಳಿ ಹಾಗೂ ತಲೆಯಲ್ಲಿ ಯಾವ ಪರಿಭ್ರಮೆ ತುಂಬಿಕೊಂಡು ಕುಳಿತಿದೆಯೆಂದರೆ, ಅದಕ್ಕೀಗ ಯದ್ವಾತದ್ವಾ ಅಜೀರ್ಣವಾಗಿದೆ. ಗಂಭೀರವಾಗಿ ಹೇಳಬೇಕೆಂದರೆ ಆ ವರಿಷ್ಠ ಗುಂಪಿಗೆ ವಾಸ್ತವವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಅದು ನೀಡಿದ ಕಾರಣವನ್ನೇ ನೋಡಿ. ಅದೊಂದು ಫ್ಯಾಂಟಸಿಯಂಥ
ಕಾರಣವೆಂದೇ ಪರಿಗಣಿಸಿದರೂ ಎಂಥಾ ಭ್ರಮೆಯಲ್ಲಿ ಈ ಪಕ್ಷದ ನಾಯಕರು ತೇಲಾಡುತ್ತಿದ್ದಾರೆಂಬುದು ಅರ್ಥ ವಾಗುತ್ತದೆ.
ವೈಫಲ್ಯವನ್ನು ಮುಚ್ಚಿಹಾಕಿಕೊಳ್ಳಲು ಹೊಸ ಹೊಸ ಸಿಲ್ಲಿ ವಿಧಾನಗಳನ್ನು ಕಾಂಗ್ರೆಸ್ ಹುಡುಕುತ್ತಿದೆ. ನೀವೂ ಕೇಳಿರುತ್ತೀರಿ, ಹರಿಯಾಣದ ವಿಧಾನಸಭೆ ಚುನಾವಣೆಯಲ್ಲಿ ತಾನು ಸೋತಿದ್ದಕ್ಕೆ ಕಾಂಗ್ರೆಸ್ ನೀಡಿದ ಕಾರಣವೇನು ಗೊತ್ತಲ್ಲವೇ? ಚುನಾವಣಾ ಆಯೋಗದಲ್ಲಿ ಕೆಲಸ ಮಾಡುವ ಸಾವಿರಾರು ನೌಕರರು ಅದ್ಹೇಗೋ ಇವಿಎಂಗಳಲ್ಲಿರುವ ಹೈವೋಲ್ಟೇಜ್ ಬ್ಯಾಟರಿಗಳನ್ನು ತಿರುಚಿ ಕಮಲದ ಪರವಾಗಿ ಮತದಾನವಾಗುವಂತೆ ಮಾಡಿಬಿಟ್ಟಿದ್ದಾರಂತೆ!
ಅನುಮಾನ ಬರಬಾರದು ಎಂದು ಬಿಜೆಪಿಗೆ ಗೆಲ್ಲಲು ಎಷ್ಟು ಬೇಕೋ ಅಷ್ಟೇ ಹೆಚ್ಚುವರಿ ಮತಗಳು ಚಲಾವಣೆ
ಯಾಗುವಂತೆ ನೋಡಿಕೊಂಡಿದ್ದಾರಂತೆ. ಅಂದರೆ, ಕಡಿಮೆ ವೋಲ್ಟೇಜ್ನ ಬ್ಯಾಟರಿಗಳು ಬಹುಶಃ ಪ್ರಾಮಾಣಿಕವಾಗಿ ಕೆಲಸ ಮಾಡಿವೆ ಅಥವಾ ಉಲ್ಟಾಪಲ್ಟಾ ಆಗಿರಬಹುದು; ಹೈವೋಲ್ಟೇಜ್ ಬ್ಯಾಟರಿಗಳು ಸರಿಯಾಗಿ ಕೆಲಸ ಮಾಡಿ, ಕಡಿಮೆ ವೋಲ್ಟೇಜ್ ಬ್ಯಾಟರಿಗಳು ಬಿಜೆಪಿ ಪರವಾಗಿ ಕೆಲಸ ಮಾಡಿರಬಹುದು.
ಮೂರ್ಖತನ ಕಾಲಿನ ಮೇಲೆ ನಿಂತಿದೆಯೋ ಅಥವಾ ತಲೆಯ ಮೇಲೆ ನಿಂತಿದೆಯೋ ಎಂಬುದು ಯಾರಿಗೆ ಬೇಕು ಬಿಡಿ! ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆ ಎಂಥಾ ವಿಲಕ್ಷಣ ಮತ್ತು ನೀರಸ ಚಿಂತನೆಯ ರಸಪಾಕದಂತಿದೆ ಯಲ್ಲವೇ? ಬಹುಶಃ ಮುಂದಿನ ಸಲ ಸೋತಾಗ ಅವರು ಸೋಲಾರ್ ಪ್ಯಾನಲ್ ಗಳನ್ನೋ ಅಥವಾ ನೀರಾವರಿ ಪಂಪ್ಸೆಟ್ಗಳನ್ನೋ ದೂರಬಹುದು. ಅಥವಾ ಮೂಲಭೂತವಾದಿ ಕೃತಕ ಬುದ್ಧಿಮತ್ತೆಯ ರೋಬೋಟ್ಗಳು ಯಾವುದೋ ದೂರದ ದ್ವೀಪದಿಂದ ರಹಸ್ಯ ಸ್ಯಾಟಲೈಟ್ ಸಿಗ್ನಲ್ಗಳನ್ನು ಕಳುಹಿಸಿ ಷಡ್ಯಂತ್ರ ನಡೆಸುವುದರ ಬಗ್ಗೆ ಇರುವ ಪುಸ್ತಕವನ್ನು ಕಾಂಗ್ರೆಸ್ನ ಯಾರಾದರೂ ನಾಯಕರು ಓದಿದ್ದರೆ ಮುಂದಿನ ಸಲ ಆ ಆರೋಪವನ್ನೇ ಮಾಡಬಹುದು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಕಾಂಗ್ರೆಸ್ ಪಕ್ಷದಲ್ಲಿ ರುವ ಒಂದಷ್ಟು ಪ್ರಜ್ಞಾವಂತ ನಾಯಕರು ಹೇಗೆ ಇಂಥ ಮೂರ್ಖತನದ ವಾದಗಳನ್ನು ಸಹಿಸಿಕೊಳ್ಳುತ್ತಾರೆ? ಒಂದಂತೂ ನಿಜ, ಪ್ರಬುದ್ಧ ಕಾಂಗ್ರೆಸ್ ನಾಯಕರು ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಮನೆಯಲ್ಲಿ ಕುಳಿತಿದ್ದಾರೆ.
ಸರಿ, ಹರಿಯಾಣದಲ್ಲಿ ಇವಿಎಂ ಬ್ಯಾಟರಿಗಳು ಬಿಜೆಪಿ ಪರವಾಗಿ ಕೆಲಸ ಮಾಡಿವೆ ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಧೂಳೀಪಟವಾಗಿರುವುದಕ್ಕೆ ಯಾವ ಇವಿಎಂ ಬ್ಯಾಟರಿಗಳನ್ನು
ದೂರಬೇಕು? ಅಲ್ಲಿ ನ್ಯಾಷನಲ್ ಕಾನರೆನ್ಸ್ ಪಕ್ಷ ಕಾಂಗ್ರೆಸ್ಸನ್ನು ತರಗೆಲೆಯಂತೆ ಗುಡಿಸಿಹಾಕಿದೆ.
ತಾನು ಸ್ಪರ್ಧಿಸಿದ್ದ 39 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಬರೀ ಆರು. ‘ಇಂಡಿಯಾ’ ಮೈತ್ರಿಯನ್ನು ಉಳಿಸಿದ್ದೇ ನ್ಯಾಷನಲ್ ಕಾನರೆನ್ಸ್. ಅದು ತಾನು ಸ್ಪರ್ಧಿಸಿದ್ದ 50 ಕ್ಷೇತ್ರಗಳ ಪೈಕಿ 42 ಕ್ಷೇತ್ರಗಳನ್ನು ಗೆದ್ದಿದೆ. ಕಣಿವೆ ರಾಜ್ಯದಲ್ಲಿ ಕಾಂಗ್ರೆಸ್ನ ಮತಗಳಿಕೆ ಪ್ರಮಾಣ ಶೇ.12ಕ್ಕೆ ಕುಸಿದಿದೆ. ಇದು ಕಳೆದ ಬೇಸಗೆಯಲ್ಲಿ ನಡೆದ ಲೋಕಸಭೆ ಚುನಾವಣೆ ಯಲ್ಲಿ ಪಡೆದ ಮತಗಳ ಪ್ರಮಾಣಕ್ಕಿಂತ ತೀರಾ ಕಡಿಮೆ. ಏಕೆ ಹೀಗಾಯ್ತು? ದುಷ್ಟ ಬ್ಯಾಟರಿಗಳು ಕಾರಣವೋ ಅಥವಾ ತಿರುಗಿನಿಂತ ಮತದಾರರೋ? ಕುತೂಹಲ ಇಲ್ಲಿಗೇ ಮುಗಿಯುವುದಿಲ್ಲ.
ಸೋತ ತಕ್ಷಣ ಕಾಂಗ್ರೆಸ್ ಪಕ್ಷದ ಬಗ್ಗೆ ಅದರ ಮೈತ್ರಿಪಕ್ಷಗಳಿಂದಲೇ ಬಂದ ಪ್ರತಿಕ್ರಿಯೆಗಳನ್ನೂ ಕೇಳಬೇಕು. ಅವರೆಲ್ಲ ಮಾರುವೇಷದ ಪ್ರತಿಕ್ರಿಯೆಗಳನ್ನೇ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ನ ಪ್ರತಿಕ್ರಿಯೆ ಕರುಣಾಜನಕವಾಗಿದೆ; ‘ಕಾಂಗ್ರೆಸ್ನ ದುರಹಂಕಾರವೇ ಅದರ ಸೋಲಿಗೆ ಕಾರಣ. ಅದು ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡುತ್ತದೆ. ಹೀಗಾಗಿ ಈ ದುರಂತ ನಿರೀಕ್ಷಿತವಾಗಿತ್ತು’. ಇದ್ದುದರಲ್ಲೇ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜ
ಯ್ ರಾವತ್ ನೀಡಿದ ಪ್ರತಿಕ್ರಿಯೆ ಸರಿಯಾಗಿದೆ. ‘ಕಾಂಗ್ರೆಸ್ ತನ್ನ ಮೈತ್ರಿಪಕ್ಷಗಳನ್ನು ಸರಿಯಾಗಿ ನಡೆಸಿಕೊಂಡಿದ್ದರೆ
ಗೆಲ್ಲಬಹುದಿತ್ತು. ಹರಿಯಾಣದಲ್ಲಿ ಬಿಜೆಪಿ ಬಹಳ ಚೆನ್ನಾಗಿ ಚುನಾವಣೆ ನಡೆಸಿತು. ಹೀಗಾಗಿ ಗೆದ್ದಿತು’ ಎಂದು ಅವರು
ಹೇಳಿದ್ದಾರೆ. -ಲಿತಾಂಶ ಬಂದ ತಕ್ಷಣ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಆರು ಸ್ವತಂತ್ರ ಶಾಸಕರ ಬೆಂಬಲ ಪಡೆದು ಕಾಂಗ್ರೆಸ್ನ ಬೆಂಬಲ ಲೆಕ್ಕಕ್ಕಿಲ್ಲದಂತೆ ಮಾಡಿಬಿಟ್ಟಿದ್ದಾರೆ.
ಬಹುಮತಕ್ಕೆ ಕೊರತೆಯಿದ್ದ ಶಾಸಕರ ಬಲವನ್ನು ಅವರು ತಮ್ಮದೇ ‘ಇಂಡಿಯಾ’ ಕೂಟದ ಮೈತ್ರಿಪಕ್ಷವಾದ ಕಾಂಗ್ರೆಸ್ ನಿಂದ ತುಂಬಿಕೊಳ್ಳುವ ಬದಲು ಸ್ವತಂತ್ರ ಶಾಸಕರಿಂದ ಪಡೆದುಕೊಂಡು, ‘ಕಾಂಗ್ರೆಸ್ ಪಕ್ಷ ತನ್ನ
ಹೀನಾಯ ಪ್ರದರ್ಶನಕ್ಕೆ ಕಾರಣ ಹುಡುಕಿಕೊಳ್ಳಬೇಕು’ ಎಂದು ಬಹಿರಂಗವಾಗಿಯೇ ಹೇಳಿ ಗಾಯದ ಮೇಲೆ ಉಪ್ಪು
ಸುರಿದಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರತಿಕ್ರಿಯೆ ನೀಡಿ, ‘ಕಾಂಗ್ರೆಸ್ ಪಕ್ಷ ಮೊದಲು ಉಪ್ಪರಿಗೆ ಯಿಂದ ಕೆಳಗಿಳಿದು ವಾಸ್ತವವನ್ನು ನೋಡಬೇಕು. ಎತ್ತರದಲ್ಲಿ ಕುಳಿತುಕೊಳ್ಳುವ ಸ್ಥಿತಿಯಲ್ಲೇನೂ ಕಾಂಗ್ರೆಸ್ ಇಲ್ಲ’ ಎಂದು ಹೇಳಿದೆ. ಅಖಿಲೇಶ್ ಯಾದವ್ ಏನೂ ಹೇಳಿಲ್ಲ, ಆದರೆ ಕಾಂಗ್ರೆಸ್ನ ಮುಖಕ್ಕೆ ತಪರಾಕಿ ಬಾರಿಸುವಂಥ ಕೆಲಸವೊಂದನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ವಿಧಾನಸಭೆ ಉಪ ಚುನಾವಣೆಗೆ ಅವರು ಕಾಂಗ್ರೆಸ್ ಬಳಿ ಮಾತು ಕೂಡ ಆಡುವ ಗೋಜಿಗೆ ಹೋಗದೆ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ. ಕಾಂಗ್ರೆಸ್ಗೆ ತುಂಬಾ ನಂಬಿಕಸ್ಥ ಮೈತ್ರಿಪಕ್ಷವಾಗಿರುವ ಬಿಹಾರದ ಆರ್ಜೆಡಿ ಕೂಡ ಮೈತ್ರಿಪಕ್ಷಗಳಿಗೆ ಅವಕಾಶ ನೀಡುವ ಕುರಿತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದೆ. ಈ ಆತ್ಮಾವಲೋಕನ ಎಂಬುದು ಈಗ ತುಂಬಾ ಚಾಲ್ತಿ ಯಲ್ಲಿರುವ ಪದ.
ಇವೆಲ್ಲದಕ್ಕೂ ಕಾಂಗ್ರೆಸ್ ನೀಡಿದ ಪ್ರತಿಕ್ರಿಯೆಯೇನು? ಅದು ಹರಿಯಾಣದ ತನ್ನ ದೊಡ್ಡ ನಾಯಕ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದಲ್ಲಿ ಒಂದು ದಂಡು ನಾಯಕರನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿತು. ಅವರು ಜೋಲುಮುಖ ಹಾಗೂ ಉದ್ದುದ್ದ ಕತೆಯೊಂದಿಗೆ ಅಲ್ಲಿಗೆ ಹೋಗಿ ಇವಿಎಂಗಳ ಬಗ್ಗೆ ದೂರು ನೀಡಿದರು. ಮಜಾ ಏನು ಅಂದರೆ, ಕಾಂಗ್ರೆಸ್ ಪಕ್ಷದ ಒಂದೇ ಒಂದು ಮೈತ್ರಿಪಕ್ಷವೂ ಈ ಇವಿಎಂ ಬ್ಯಾಟರಿಯ ಕತೆಯನ್ನು ನಂಬಿಲ್ಲ. ಏಕೆಂದರೆ ಅವುಗಳಿಗೆ ತಲೆ ಸರಿಯಿದೆ!
ವಾಸ್ತವವಾಗಿ, ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಯಾವ ರಾಜಕೀಯ ಪಕ್ಷಕ್ಕೂ ಕಾಂಗ್ರೆಸ್ನ ಡಿಎನ್ಎಯಲ್ಲೇ ತುಂಬಿಕೊಂಡಿರುವ ದುರಹಂಕಾರವನ್ನು ಕಂಡರೆ ಆಗುವುದಿಲ್ಲ. ಆದರೂ ರಾಜಕೀಯ ಕಾರಣಗಳಿಗಾಗಿ ಅವು ಕಾಂಗ್ರೆಸ್ ಜತೆ ಸಂಸಾರ ನಡೆಸುತ್ತಿವೆ. ಆದರೆ ಚುನಾವಣೆಯಲ್ಲಿ ಸೆಣಸುವ ಕಾಂಗ್ರೆಸ್ನ ಶಕ್ತಿ ಕ್ಷೀಣಿಸುತ್ತಿದೆ ಎಂದು ಅವುಗಳಿಗೀಗ ಅನ್ನಿಸುತ್ತಿದೆ. ಹೀಗಾಗಿ ನಿಧಾನವಾಗಿ ಮೂಲೆಗುಂಪು ಮಾಡಲು ಆರಂಭಿಸಿವೆ. ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕಾಶ್ಮೀರದಿಂದ ಕಾಂಗ್ರೆಸ್ಗೆ ಬಂದಿರುವ ಸಂದೇಶ ಸರಳವಾಗಿದೆ: ‘ನಿಮ್ಮ ಯೋಗ್ಯತೆ ಎಷ್ಟಿದೆಯೋ ಅಷ್ಟಕ್ಕೆ ಅಂಟಿಕೊಂಡಿರಿ.
ನಾವೇ ದೊಡ್ಡವರು ಎಂದು ಮೆರೆಯಲು ಹೋಗಬೇಡಿ. ಮೊಣ ಕೈಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ’. ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಸೀಟುಗಳ ಪಾಲು ಕೇಳಬೇಕೆಂಬ ಕಾಂಗ್ರೆಸ್ನ ಯೋಚನೆಯನ್ನು ಹರಿಯಾಣದ ಸೋಲು ಪಂಕ್ಚರ್ ಮಾಡಿದೆ. ಹರಿಯಾಣದಲ್ಲಿರುವ 90 ಸೀಟುಗಳ ಪೈಕಿ ಕೇವಲ 10 ಸೀಟು ಕೇಳಿದ್ದ ಆಮ್ ಆದ್ಮಿ ಪಕ್ಷ ಈಗಾಗಲೇ ತಾನು ದೆಹಲಿ ಚುನಾವಣೆ ಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ.
ಅಂದರೆ ಮೂರನೇ ಸ್ಥಾನ ಯಾರಿಗೆ ಎಂಬುದು ಈಗಲೇ ಪಕ್ಕಾ ಆಯಿತು. ಚುನಾವಣಾಪೂರ್ವ ಸಮೀಕ್ಷೆ ಮತ್ತು ಮತದಾನೋತ್ತರ ಸಮೀಕ್ಷೆಗಳಂತೂ ಕಾಂಗ್ರೆಸ್ಗೆ ಮೇಲಿಂದ ಮೇಲೆ ಹೊಟ್ಟೆ ಉರಿಯುವಂತೆ ಮಾಡುತ್ತಿವೆ. ರಾಜಕೀಯ ಪಕ್ಷಗಳಿಗೆ ಈ ಸಮೀಕ್ಷೆಗಳನ್ನು ತಡೆಯುವುದಂತೂ ಸಾಧ್ಯವಿಲ್ಲ. ಏಕೆಂದರೆ ಕೈತುಂಬಾ ದುಡ್ಡಿರುವ ಶ್ರೀಮಂತ ಮಾಧ್ಯಮ ಸಂಸ್ಥೆಗಳೇ ಅವುಗಳಿಗೆ ಹಣ ಹಾಕುತ್ತವೆ. ಆದರೆ ಸಮೀಕ್ಷೆಯೆಂಬ ಸೂಕ್ಷ್ಮ ಕಸರತ್ತಿನ ಜತೆಗೆ ನಾಜೂಕಾಗಿ ವ್ಯವಹರಿಸಲು ದಾರಿಗಳಂತೂ ಇವೆ. ಈ ವರ್ಷದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಕ್ಕೂ,
ಸಮೀಕ್ಷೆಗಳು ನುಡಿದಿದ್ದ ಭವಿಷ್ಯಕ್ಕೂ ಒಂದಷ್ಟು ಅಂತರವಿತ್ತು. ಆದರೆ, ಫಲಿತಾಂಶ ಬಂದಾಗ ಬಿಜೆಪಿಯ ಯಾರೂ ಚುನಾವಣಾ ಆಯೋಗವನ್ನು ದೂಷಿಸಲು ಹೋಗಲಿಲ್ಲ.
ಕಾಂಗ್ರೆಸ್ನ ಸಮಸ್ಯೆಯೇನೆಂದರೆ, ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸದ, ಚುನಾವಣೆಯ ನಾಡಿಮಿಡಿತ ಅರಿಯುವ ಶಕ್ತಿಯಿಲ್ಲದ ಕೆಲ ಅತಿ ಬುದ್ಧಿವಂತರ ಹಿಡಿತದಲ್ಲಿ ಆ ಪಕ್ಷ ಇರುವಂತಿದೆ. ಅವರು ಏನೇನೋ ಕಟ್ಟುಕತೆ ಗಳನ್ನು ರಾಹುಲ್ ಗಾಂಧಿಯ ತಲೆಗೆ ತುಂಬಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುತ್ತಿದ್ದಾರೆ. ರಾಹುಲ್ ಇಂಥ ಕತೆಗಳನ್ನು ನಂಬುವುದನ್ನು ನಿಲ್ಲಿಸಬೇಕು. ಸದ್ಯಕ್ಕಂತೂ ಮುಖ ಉಳಿಸಿಕೊಳ್ಳಬೇಕು ಅಂದರೆ ತಲೆಯ ಮೇಲೆ ವೇಲ್ ಧರಿಸುವುದು ಒಳ್ಳೆಯ ಮಾರ್ಗ!
ಎಲ್ಲಾ ಚುನಾವಣೆಗಳಲ್ಲೂ ನಮ್ಮ ರಾಜಕೀಯ ಪಕ್ಷಗಳಿಗೆ ಒಂದು ಸಂದೇಶ ಸ್ಪಷ್ಟವಾಗಿ ಸಿಗುತ್ತಿದೆ. ಯಾವುದೇ ರಾಜಕೀಯ ಪಕ್ಷವು ಮತದಾನಕ್ಕೂ ಮೊದಲೇ ಫಲಿತಾಂಶವನ್ನು ಘೋಷಿಸುವ ದುಸ್ಸಾಹಸ ಮಾಡಿದರೆ ಆ ಪಕ್ಷಕ್ಕೆ ಫಲಿತಾಂಶದಲ್ಲಿ ಅಚ್ಚರಿ ಕಾದಿದೆಯೆಂದೇ ಅರ್ಥ.
ಯಾವ ಚುನಾವಣೆಯೂ ಒಂದರಂತೆ ಇನ್ನೊಂದು ಇರುವುದಿಲ್ಲ. ಹೀಗಾಗಿ ಹರಿಯಾಣದಲ್ಲಿ ಗೆದ್ದಾಕ್ಷಣ ಜಾರ್ಖಂಡ್ ನಲ್ಲೂ ಗೆಲ್ಲುತ್ತೇವೆ ಎಂದು ಬಿಜೆಪಿ ಕೂಡ ಭಾವಿಸುವುದು ತಪ್ಪು. ಪ್ರತಿಯೊಂದು ರಾಜ್ಯವೂ ವಿಭಿನ್ನ. ಪ್ರತಿಯೊಬ್ಬ ಮತದಾರನೂ ತನ್ನದೇ ಆದ ಲೆಕ್ಕಾಚಾರ ಹೊಂದಿರುತ್ತಾನೆ. ಹರಿಯಾಣದಲ್ಲಿ ಬಿಜೆಪಿಗೆ ಏಕೆ ಶೇ.೩೯ರಷ್ಟು ಮತಗಳು ಸಿಕ್ಕವು ಅಥವಾ ಏಕೆ 2014ರ ಚುನಾವಣೆಗಿಂತ ಶೇಕಡಾವಾರು ಮತಗಳಿಕೆ ಜಾಸ್ತಿಯಾಯಿತು ಎಂಬುದಕ್ಕೆ ತಾರ್ಕಿಕ ಕಾರಣಗಳಿವೆ. ಸಾಮಾನ್ಯ ವಾಗಿ ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ವಿರೋಧ ಪಕ್ಷಗಳು ಕೀಳಂದಾಜು ಮಾಡಿ ಮೋಸಹೋಗುತ್ತವೆ. ಆದರೆ, ಅವರು ಅಭಿವೃದ್ಧಿಯ ಭರವಸೆ ನೀಡಿದರೆ ಜನರು ನಂಬುತ್ತಾರೆ. ಹರಿಯಾಣದಲ್ಲಿ ಬಿಜೆಪಿ ವಿರುದ್ಧ ಸಣ್ಣದೊಂದು ಆಡಳಿತವಿರೋಧಿ ಅಲೆಯಿದ್ದುದು ನಿಜವೇ ಆಗಿದ್ದರೂ, ಕಾಂಗ್ರೆಸ್ನ ಎಡವಟ್ಟು ನಿರ್ಧಾರದಿಂದಾಗಿ ಆ ಅಲೆಯೂ ಅಳಿಸಿ ಹೋಯಿತು.
ಕಾಂಗ್ರೆಸ್ ಪಕ್ಷ ಜಾಟ್ -ಜಾಟವ್ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು ತಾನು ಅದ್ಭುತ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿತ್ತು. ಅಡಿಗೆರೆಯಲ್ಲಿ ಬರೆದಿಡಬೇಕಾದ ಸೂತ್ರವೇನೆಂದರೆ, ನೀವು ಜಾತಿ ಫಾರ್ಮುಲಾ ಮೇಲೆ ಅವಲಂಬಿತರಾಗಿದ್ದರೆ ಜಾತಿ ಸಮೀಕರಣಕ್ಕೆ ಗೌರವವನ್ನೂ ನೀಡಬೇಕಾಗುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಆ ದುರ್ಬಲ ವರ್ಗಗಳ ಹಿತಾಸಕ್ತಿಯನ್ನೇ ಕಡೆಗಣಿಸಿ, ಅವುಗಳ ಮೇಲೆ ಸವಾರಿ ಮಾಡಲು ಹೋಗಿತ್ತು.
ಅಮೆರಿಕಕ್ಕೆ ಭೇಟಿ ನೀಡಿದಾಗ ರಾಹುಲ್ ಗಾಂಧಿ ತಮ್ಮ ಪ್ರಸಿದ್ಧ ಭಾಷಣದಲ್ಲಿ ಕಾಂಗ್ರೆಸ್ ಪಕ್ಷ ಮೀಸಲಾತಿಯನ್ನು
ಕೊನೆಗೊಳಿಸಲು ಬಯಸುತ್ತದೆ ಎಂದು ಹೇಳಿದಾಗಲೇ ಸಮಸ್ಯೆ ಶುರುವಾಗಿತ್ತು. ನಂತರ ಅವರು ಅದನ್ನು ಅಲ್ಲಗಳೆದರೂ ಪ್ರಯೋಜನ ವಾಗಲಿಲ್ಲ. ತಮಗೆ ಸಂವಿಧಾನದತ್ತವಾಗಿ ಲಭಿಸಿದ ಸೌಕರ್ಯ ಅಪಾಯದಲ್ಲಿದೆ ಎಂಬ ಭೀತಿ ದಮನಿತ ಜಾತಿಗಳಲ್ಲಿ ಮನೆಮಾಡಿತು. ಜಾಟ್ ನಾಯಕರ ಪರವಾಗಿ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ ಭೂಪಿಂದರ್ ಹೂಡಾ ಪರವಾಗಿ ಪ್ರಚಾರ ಮಾಡಲು ಹರಿಯಾಣದ ಸ್ಥಳೀಯ ಕಾಂಗ್ರೆಸ್ ನಾಯಕಿ ಸೆಲ್ಜಾ ಕುಮಾರಿ ಹಿಂದೇಟು ಹಾಕಿದಾಗ ಅವರ ಭೀತಿ ಇನ್ನಷ್ಟು ಹೆಚ್ಚಾಯಿತು. ಕೊನೆಯ ಕ್ಷಣದಲ್ಲಿ ಅವರ ಮನವೊಲಿಕೆ ಮಾಡಿ
ಕರೆದುಕೊಂಡು ಬಂದರೂ ಅವರ ಪ್ರಚಾರ ನಾಮ್-ಕೆ-ವಾಸ್ತೆ ಎಂಬಂತಿತ್ತು. ಸೇತುವೆಯನ್ನು ಎತ್ತಿ ನಿಲ್ಲಿಸಲು ಎರಡು ಕಂಬಗಳು ಬೇಕಾಗುತ್ತವೆ. ಹೀಗಾಗಿ ಜಾಟ್-ಜಾಟವ್ ಸಮೀಕರಣ ಫೇಲಾಯಿತು.
ಕಾಂಗ್ರೆಸ್ನ 90 ಅಭ್ಯರ್ಥಿಗಳ ಪಟ್ಟಿಯಲ್ಲಿ ಹೂಡಾ ನಿಷ್ಠರೇ 72 ಇದ್ದರು. ಇದೇ ಎಲ್ಲವನ್ನೂ ಹೇಳುತ್ತದೆ. ಕೆಲ ವರದಿಗಳ ಪ್ರಕಾರ, ಇವರಲ್ಲಿ 15 ಅಭ್ಯರ್ಥಿಗಳು ಪಕ್ಕಾ ಗೆಲ್ಲಬಹುದಾಗಿದ್ದ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ಹೊಡೆತ ನೀಡಿದೆ. ಸ್ವತಃ ಸೆಲ್ಜಾ ಕುಮಾರಿಯೇ ಆತ್ಮಾವಲೋಕನಕ್ಕೆ ಕರೆ ನೀಡಿದ್ದಾರೆ. ಅವರ ಮಾತಿನ ಅರ್ಥ ಸ್ಪಷ್ಟವಾಗಿದೆ: ‘ಹೂಡಾರನ್ನು ವಜಾಗೊಳಿಸಿ’. 77 ವರ್ಷದ ಹೂಡಾ ಬಹುಶಃ ತಮ್ಮ ಕೊನೆಯ ಚುನಾವಣೆಯನ್ನು ಸೆಣಸಿದ್ದಾರೆ.
ಹರಿಯಾಣವು ರೈತ ಹೋರಾಟದ ಕೇಂದ್ರಬಿಂದುವೇ ಆಗಿತ್ತು. ಆದರೂ ಬಿಜೆಪಿ ಆ ಸಿಟ್ಟನ್ನು ಮಟ್ಟಹಾಕಿ ಗೆದ್ದಿತು. ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಜನರಿಗೆ ವಿಶ್ವಾಸ ಮೂಡುವಂತೆ ಜಾರಿಗೊಳಿಸಿದ್ದೇ ಇದಕ್ಕೆ ಕಾರಣ. ಒಂದೇ ಜಾತಿಯವರು ಪ್ರಬಲವಾಗಿರುವ ಪಕ್ಷಪಾತಿ ಸರಕಾರ ಅಸ್ತಿತ್ವಕ್ಕೆ ಬರಬಹುದು ಎಂಬ ಭಯ ನಗರ ಪ್ರದೇಶ ಗಳ ಮತದಾರರಲ್ಲಿತ್ತು. ಆದರೆ, ಚುನಾವಣಾ ವಿಶ್ಲೇಷಕರು ಹಾಗೂ ಪಂಡಿತರ ಪ್ರಕಾರ ಬಿಜೆಪಿ ಖಂಡಿತ ಸೋಲುತ್ತದೆ ಎಂಬಂತಿದ್ದ ಕೆಲ ಕ್ಷೇತ್ರಗಳಲ್ಲೂ ಪಕ್ಷ ಗೆದ್ದುಬಿಟ್ಟಿತು. ಉದಾಹರಣೆಗೆ ಗುರುಗ್ರಾಮದ ನಾಲ್ಕು ಸೀಟುಗಳು. ಅಂಬಾಲಾ ನಗರದಲ್ಲಿ ಹಿರಿಯ ನಾಯಕ ಅನಿಲ್ ವಿಜ್ ಪ್ರಚಾರದ ಮಧ್ಯದಲ್ಲಿ ಸಾವರಿಸಿಕೊಂಡು ಎದ್ದುನಿಂತು ತಮ್ಮ ಸೀಟು ಉಳಿಸಿಕೊಂಡರು.
ಅಂತಿಮವಾಗಿ, ಅಳಿದುಳಿದ ಆಂತರಿಕ ಭಿನ್ನಮತವನ್ನು ಬಿಜೆಪಿ ನಾಯಕರು ‘ಪರಿಹಾರಾರ್ಥ ಅವಕಾಶ’ ಸೂತ್ರದ ಮೂಲಕ ನಿವಾರಿಸಿಕೊಂಡರು. ಹರಿಯಾಣದಲ್ಲಿ ಬಿಜೆಪಿ ಸೋತರೆ ಏನು ಅಪಾಯವಿದೆ ಎಂಬುದನ್ನು ಪಕ್ಷದ ಎಲ್ಲಾ ಬಣಗಳೂ ಅರ್ಥ ಮಾಡಿಕೊಂಡು, ತಮ್ಮತಮ್ಮಲ್ಲಿನ ಭಿನ್ನಮತ ಬದಿಗೊತ್ತಿ, ಪಕ್ಷದ ಗೆಲುವಿಗಾಗಿ ಕೆಲಸ ಮಾಡಿದವು. ಅದು ಫಲ ಕೊಟ್ಟಿತು.
ಈ ಚುನಾವಣೆಯಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ್ದು ಜಮ್ಮು ಮತ್ತು ಕಾಶ್ಮೀರ. ಅಲ್ಲಿ ಸಂವಿಧಾನದ ೩೭೦ನೇ ವಿಧಿಯ ರದ್ದತಿ ಬಳಿಕ ಮೊದಲ ಪ್ರಜಾಸತ್ತಾತ್ಮಕ ಸರಕಾರದ ರಚನೆಗಾಗಿ ಚುನಾವಣೆ ನಡೆದಿದೆ. ‘ಡಾಕ್ಟರ್ ಡೆಮಾಕ್ರಸಿ’ ಬಳಿ ಎಲ್ಲಾ ರೋಗಗಳಿಗೂ ಔಷಧವಿದೆ. ರೋಗಿಗೆ ತಾಳ್ಮೆಯಿರಬೇಕಷ್ಟೆ. ಫಲಿತಾಂಶದ ಬಳಿಕ ಒಮರ್ ಅಬ್ದುಲ್ಲಾ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಗೆ ಹಾರ ಹಾಕಿ, ‘ದೆಹಲಿಯ ಸಹಕಾರದಿಂದ ಚೆನ್ನಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿ ಒಳ್ಳೆಯ ಶುರುವಾತು ಮಾಡಿದ್ದಾರೆ. ಭಾರತ ಕೆಲಸ ಮಾಡುವುದೇ ಹೀಗೆ.
(ಲೇಖಕರು ಹಿರಿಯ ಪತ್ರಕರ್ತರು)
ಇದನ್ನೂ ಓದಿ: M J Akbar Column: ಅಭದ್ರತೆಯ ಕಾಲದಲ್ಲಿ ವಿಮಾನಗಳ ಎತ್ತರದ ಹೋರಾಟ